ಅಂಕಣಗಳು

Subscribe


 

ಚೆಂಡೆ ಮದ್ದಳೆಗಳ ಹಿರಿಯಾಳು : ಚಿಪ್ಪಾರು ಕೃಷ್ಣಯ್ಯ ಬಲ್ಲಾಳ

Posted On: Wednesday, June 3rd, 2009
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ತ್ತೀಚೆಗೆ ತಾನೇ ಯಕ್ಷರಂಗದ ದಿಗ್ಗಜ ಶಂಭು ಹೆಗಡೆ ರಂಗದಿಂದ ಗೆಜ್ಜೆ ಕಟ್ಟಿಕೊಂಡೇ ವಿದಾಯ ಹೇಳಿದ ಘಟನೆ ಇನ್ನೂ ಮಾಸಿಲ್ಲ. ಅದಾಗಲೇ ಹಿಮ್ಮೇಳದ ಕಲಾವಿದರ ಪೈಕಿ ಅದ್ವಿತೀಯರೆನಿಸಿಕೊಂಡಿದ್ದ ಮತ್ತೊಬ್ಬ ಚೇತನ ಅವರ ಹಾದಿಯನ್ನೇ ಹಿಡಿದಿದ್ದಾರೆ. ಅಂತೂ ವರುಷಾರ್ಧಕ್ಕೆ ರಂಗದ ಜೊತೆ ಅವಿನಾಭವ ಸಂಬಂಧ ಹೊಂದಿದ ಈರ್ವರು ಯಕ್ಷಗಾರುಡಿಗರನ್ನು ಕಳೆದುಕೊಂಡಂತಾಗಿದೆ. ಅವರೇ ಚೆಂಡೆ ಮದ್ದಳೆ ಮಾಂತ್ರಿಕರಾಗಿ, ಯಕ್ಷಗಾನ ಪ್ರತಿಭೆಗಳನ್ನೂ ರೂಪಿಸಿದ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು. chipparu krishnnaih ballal
ಏಪ್ರಿಲ್ ೨೭, ೨೦೦೯. ಸೋಮವಾರ ಬೆಂಗಳೂರಿನ ಕೋರಮಂಗಲದಲ್ಲಿ ಯಡನೀರು ಮೇಳವು ಯಕ್ಷಗಾನ ಆಟವನ್ನು ಆಯೋಜಿಸಿತ್ತು. ಪ್ರಸಂಗ ಜಾಂಬವತಿ ಕಲ್ಯಾಣ. ಚೌಕಿ ಪೂಜೆಯಾಗುತ್ತಿದ್ದಂತೆ ಹೃದಯಾಘಾತದಿಂದ ಕುಸಿದರು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದರು. ಕಲೆಯನ್ನೇ ಬದುಕ ಗುರಿಯಾಗಿಸಿದ ಕಲಾವಿದನಿಗೆ ಇದಕ್ಕಿಂತ ಅರ್ಹ ವಿದಾಯ ಮತ್ತೊಂದಿಲ್ಲ..
ಹಾಗೆ ನೋಡಿದರೆ ಚಿಪ್ಪಾರರಿಗೆ ಬೆಳಗ್ಗೆಯೂ ಒಮ್ಮೆ ಹೃದಯಾಘಾತವಾಗಿತ್ತು. ಆದರೆ, ಅವರನ್ನು ಪರಿಶೀಲಿಸಿದ ವೈದ್ಯರು ಯಾವುದೇ ಅಪಾಯವಿಲ್ಲ ಎಂದಿದ್ದರು. ಆದರೂ ತಮ್ಮ ಅನಾರೋಗ್ಯದಲ್ಲೇ ಕಲಾಕಾಯಕ ಮಾಡಲು ಬಂದರೆಂದರೆ ಇಹಲೋಕ ಯಾತ್ರೆಗೆ ಹೆಜ್ಜೆ ಇಟ್ಟದ್ದು ದೈವ ಪ್ರೇರಣೆಯಿಂದಲೇ ಇರಬೇಕು.
ಧರ್ಮಸ್ಥಳ ಮೇಳದ ಆಟವನ್ನು ನೋಡುತ್ತಾ ಬೆಳೆದವರಿಗೆ ಚೆಂಡೆ ಎಂದರೆ ಮೊದಲು ಕಣ್ಣೆದುರಿಗೆ ಬರುವವರೇ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು. ಇವರು ಪೀಠಿಕೆಗೆ ನಿಂತರೆಂದರೆ ಆ ಉರುಳಿಕೆಗಳನ್ನು ಕೇಳುವುದೇ ಕಿವಿಗಳಿಗೆ ಹಬ್ಬ ! ಚೆಂಡೆ ಮದ್ದಲೆಗಳ ಮೇಲೆ ಅಸಾಧಾರಣ ಪ್ರಭುತ್ವ ಹೊಂದಿದ್ದ ಬಲ್ಲಾಳರು ತೆಂಕು ತಿಟ್ಟಿನ ಎಲ್ಲ ಪ್ರಖ್ಯಾತ ಭಾಗವತರುಗಳಿಗೆ ಸಾಥ್ ನೀಡಿದವರು. ಹೆಸರಾಂತ ಕಲಾವಿದರಿಂದ ತೊಡಗಿ ಇತ್ತೀಚಿನ ಯುವ ಕಲಾವಿದರನ್ನು ಕುಣಿಸಿದ ಇವರ ಕೈ ಕಸುವು; ಕಲೆಯ ಬಗೆಗಿದ್ದ ಅವಿರತ ಶ್ರದ್ಧೆ, ಪ್ರೀತಿಗೆ ಸಾಕ್ಷಿ. ಜೋಡಾಟದಲ್ಲಂತೂ ಇವರದ್ದು ಎತ್ತಿದ ಕೈ.
ಚಿಪ್ಪಾರರ ಚೆಂಡೆ ವಾದನಕ್ಕೆ ಎಂತಹ ಅರಸಿಕನೂ ಶಹಬ್ಭಾಸ್ ಎನ್ನಬೇಕು ! ೮೦ರ ಇಳಿವಯಸ್ಸಿನಲ್ಲೂ ಚಿಪ್ಪಾರರದ್ದು ೨೦ರ ಯುವಕರೂ ನಾಚುವ ಶ್ರಮ. ಅವರು ಚೆಂಡೆ ಹಿಡಿದು ರಂಗಸ್ಥಳಕ್ಕೆ ಪ್ರವೇಶಿಸಿದರೆಂದರೆ ಪ್ರೇಕ್ಷಕರು ತನ್ಮಯ. ೧೯೫೮ರಲ್ಲಿ ರಷ್ಯಾ ಅಧ್ಯಕ್ಷರ ಭಾರತ ಪ್ರವಾಸ ವೇಳೆ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿತ್ತು. ಚಿಪ್ಪಾರರ ಚೆಂಡೆ ವಾದನ. ರಷ್ಯಾ ಅಧ್ಯಕ್ಷರು ಚೆಂಡೆ ವಾದನ ಕೇಳುವುದರಲ್ಲೇ ಮೈಮರೆತಿದ್ದರು !
ದಾಮೋದರ ಮಂಡೆಚ್ಚರ ಪದ್ಯಗಳಿಗೆ ಮೃದಂಗದ ಪೆಟ್ಟುಗಳನ್ನು ಚೆಂಡೆ ಮದ್ದಳೆಗಳಿಗೆ ಅಳವಡಿಸಿದ ಕೀರ್ತಿ ಇವರದ್ದು. ಅವರದ್ದು ಗಳಸ್ಯ ಕಂಠಸ್ಯ ಸ್ನೇಹ. ಕಡತೋಕ-ಬಲ್ಲಾಳರ ಜೋಡಿಯಂತೂ ಯಕ್ಷರಂಗ ಕಂಡ ಅವಿಸ್ಮರಣೀಯ ಸಾಂಗತ್ಯ. ಇಂದಿನ ದಿನಗಳಲ್ಲಿ ಹಲವು ಕಲಾವಿದರು ತಮ್ಮೊಳಗೆ ಮಾತನಾಡಿಕೊಂಡೋ, ಸನ್ನೆ ಮಾಡಿಕೊಂಡೇ, ನಗುತ್ತಲೋ ಇರುವಾಗ ಚಿಪ್ಪಾರರು ‘ಗಜ ಮುಖದವಗೆ’ಯಿಂದ ತೊಡಗಿ ಕೊನೆಗೆ ಮಂಗಳದವರೆಗೆ ನಿರಂತರವಾಗಿ ಸದಾ ಸ್ಥಿತಪ್ರಜ್ಞರಾಗಿ ಚೆಂಡೆ, ಮದ್ದಲೆ ವಾದನ ಮಾಡಿದ ದಿನಗಳು ಅದೆಷ್ಟೋ ! ಅವರ ವರ್ತನೆಯಂತೆಯೇ ಚೆಂಡೆ-ಮದ್ದಳೆಗಳ ಜೊತೆಗಿನ ನಿಲುವೂ ಕೂಡಾ ಆಹ್ಲಾದಮಯ. ದೂರದರ್ಶನದಲ್ಲಿ ಪ್ರಪ್ರಥಮ ಪ್ರದರ್ಶನ ನೀಡಿದ ಕೀರ್ತಿ ಚಿಪ್ಪಾರರದ್ದು.

on-26-4-2009-last-performance of Chipparu Krishnnaih Ballal

on-26-4-2009-last-performance of Chipparu Krishnnaih Ballal

ತಮಗೆ ಮಾತ್ರವಲ್ಲ ತಮ್ಮ ಪುಟ್ಟ-ಪುಟ್ಟ ಊರಿಗೂ ಜಗದಗಲದ ಮಾನ್ಯತೆ, ಸಾಕಷ್ಟು ಹೆಸರು ತಂದುಕೊಡುವ‌ ಕಲಾವಿದರ ಪೈಕಿ ಯಕ್ಷಗಾನ ಕಲಾವಿದರದ್ದು ಅಗ್ರಪಂಕ್ತಿ. ಹಾಗಾಗಿಯೇ ಎಷ್ಟೋ ಬಾರಿ ಅವರ ಹೆಸರಿಗಿಂತ ಊರಿನ ಹೆಸರನ್ನೇ ಕರೆದು ಗುರುತಿಸುತ್ತಾರೆ. ಅಂತೆಯೇ ಕೃಷ್ಣ್ಯಯ್ಯ ಬಲಾಳರೂ ಕೂಡ ! ಚಿಪ್ಪಾರು ಎಂಬ ಊರಿನ ಹೆಸರಿಗೆ ಯಕ್ಷಗಾನ ಸಾರಸ್ವತ-ಸಾಂಸ್ಕೃತಿಕ ಲೋಕದಲ್ಲಿ ಶಾಶ್ವತ ಹೆಸರನ್ನು, ಸ್ಥಾನವನ್ನು ಕೊಟ್ಟು ಹೋಗಿದ್ದಾರೆ.

 

 

  • ಜನನ : ೧೯೨೮ ರ ಎಪ್ರಿಲ್ ೨ ಕಾಸರಗೋಡು ಜಿಲ್ಲೆಯ ಬಾಯಾರು ಸಮೀಪದ ಚಿಪ್ಪಾರು
    ವಿಟ್ಲ ರಾಜಮನೆತನದಲ್ಲಿ ಜನಿಸಿದರೂ ಕಡು ಬಡತನದ ಜೀವನ.
  • ತಂದೆ : ಮರಿಮಯ್ಯ ಬಲ್ಲಾಳ್, ಮದ್ದಳೆ ವಾದಕರು.
  • ಶೈಕ್ಷಣಿಕ ವಿದ್ಯಾಭ್ಯಾಸ : ೬ನೇ ತರಗತಿ
  • ಗುರುಗಳು : ತಾಳ್ತಜೆ ಕೇಶವ ಭಟ್, ಮಾಂಬಾಡಿ ನಾರಾಯಣ ಭಾಗವತರು, ಕುದ್ರಕೋಡ್ಲು ರಾಮಭಟ್, ನಿಡ್ಲೆ ನರಸಿಂಹ ಭಟ್, ವಿದ್ವಾನ್ ಬಾಬು ರೈ, ಕುರಿಯ ವಿಠಲ ಶಾಸ್ತ್ರಿಗಳು
  • ಆರಂಭಿಕ ಕಲಾ ಸೇವೆ : ಮೂಲ್ಕಿ ಮೇಳ
    ಧರ್ಮಸ್ಥಳ ಮೇಳದಲ್ಲಿ ನಿರಂತರವಾಗಿ ೫೦ ವರ್ಷಗಳ ಕಾಲ ಸೇವೆ.
  • ಕುಟುಂಬ : ಪತ್ನಿ ಮತ್ತು ಮೂವರು ಪುತ್ರರು. ಪುತ್ರ ಮರಿಮಯ್ಯ ಬಲ್ಲಾಳರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ಕಲಾವಿದರು.
  • ಪ್ರಶಸ್ತಿಗಳು: ಕರ್ನಾಟಕ ಜನಪದ ಪ್ರಶಸ್ತಿ, ಕೇರಳ ಅಕಾಡೆಮಿ ಪ್ರಶಸ್ತಿ, ಶೇಣಿ ಪ್ರಶಸ್ತಿ

Leave a Reply

*

code