ಅಂಕಣಗಳು

Subscribe


 

ನೃತ್ಯ : ಅಂದು, ಇಂದು, ಮುಂದು

Posted On: Monday, February 15th, 2010
1 Star2 Stars3 Stars4 Stars5 Stars (No Ratings Yet)
Loading...

Author: ನಾಟ್ಯಾಚಾರ್ಯ ಕೆ. ಮುರಲೀಧರ ರಾವ್, ಹಿರಿಯ ನೃತ್ಯಗುರುಗಳು, ಮಂಗಳೂರು

ಅಭಿನಯಕ್ಕೆ ಪುರುಷ ಸಹಜವಾಗಿರುವ ಲಾಸ್ಯಪದ್ಧತಿ ಮೇಲಾಗಿದ್ದರೂ, ಪುರುಷರು ತಮ್ಮ ಅಭಿನಯದಲ್ಲಿ ತಾಂಡವಾಂಶ ಹಾಗೂ ಸಾತ್ವಿಕ ಭಾವಗಳನ್ನು ನಿವೇದಿಸಬಹುದು. ಈ ಸಂದರ್ಭಗಳಲ್ಲಿ ಏಕಾಹಾರ್ಯ ಮುಖ್ಯವಾದದ್ದು. ನೃತ್ಯನಾಟಕಗಳಲ್ಲಿ ಪುರುಷಪಾತ್ರಾಭಿನಯಕ್ಕೆ ಒತ್ತು ಇರುತ್ತದೆ. ಲಾಸ್ಯದ ಬದಲು ತಾಂಡವಾಂಶಗಳೇ ಸಾಹಿತ್ಯದಲ್ಲಿರುವಾಗ ಪುರುಷನು ಲಾಸ್ಯವನ್ನೇ ತಾಂಡವವನ್ನಾಗಿ ಪರಿವರ್ತಿಸುವ ಕಾರ್ಯ ಸುಲಭವಲ್ಲ. ಭಾವಗಳಲ್ಲಿಯೂ ಆತ ನಾಯಕಸಾಮಾನ್ಯ ಗುಣಗಳನ್ನು ತರಬೇಕಾಗಬಹುದು. ಹಾಗಂತ ಬರಿಯ ಸ್ತ್ರೀಯರಿಗಾಗಿ ಮಾತ್ರವೇ ಭರತನಾಟ್ಯ ಮೀಸಲಾಗಿದ್ದುದಲ್ಲ. ಆದರೆ ಭರತನಾಟ್ಯ ಪುರುಷವೇಷಧಾರಿಗಳಲ್ಲಿ ತಾವು ಮಾಡಬೇಕಾದ ಅಂಶಗಳಲ್ಲಿ ಶಿವನಿಗೆ ಸಂಬಧಿಸಿದ ನಾಟ್ಯವೈಭವವನ್ನು ಹೆಚ್ಚಾಗಿ ಕಾಣಿಸುತ್ತಾರೆ ಅಥವಾ ದೇವರನಾಮಗಳಲ್ಲಿ ಬರುವ ಸನ್ನಿವೇಶಗಳ ಮೊರೆಹೋಗಬಹುದು. ಆದರೆ ಭರತನಾಟ್ಯ ‘ಮಾರ್ಗ’ ಪದ್ಧತಿಯಲ್ಲಿ ವ್ಯತ್ಯಾಸ ಮಾಡಬಹುದೇ ಹಾಗೂ ಭರತನಾಟ್ಯದ ಲಾಸ್ಯ ಪದ್ಧತಿಯನ್ನು ಬದಲಾಯಿಸಬಹುದೇ-ಎಂಬ ಜಿಜ್ಞಾಸೆಯಿದೆ.

ಎಲ್ಲರಿಗೂ ತಿಳಿದಿರುವಂತೆ ಒಂದು ಜೀವನಕ್ರಮ ತನ್ನದೇ ಆದ ಜಗತ್ತಿನಲ್ಲಿ ಬೆಳೆದು ಬಂದಿರಬೇಕು. ಅದರ ಚೈತನ್ಯವೆಲ್ಲಾ ನಮ್ಮ ಸಂಸ್ಕೃತಿಗೆ ಹಾಗೂ ಚರಿತ್ರೆಗೇ ಸೇರಿದ್ದು. ಆದರೆ ಇಂದು, ನಾಟ್ಯದ ಬಗ್ಗೆ ಹಲವಾರು ಬದಲಾವಣೆಗಳೂ ಕಣ್ಣಿಗೆ ಕಾಣಿಸುತ್ತಿವೆ. ಸಾಂಸ್ಕೃತಿಕ ಬದಲಾವಣೆ ಬಂದದ್ದು ಪಾಶ್ಚಿಮಾತ್ಯರಿಂದ. ಇಂದು ಕಣ್ಣಿಗೆ ಕಾಣಿಸುವುದು ಅಥವಾ ಮನಸ್ಸಿಗೆ ತೋಚುವ ವಿಧಾನವೆಲ್ಲಾ ನಮ್ಮ ಪಶ್ಚಿಮ ದಿಕ್ಕಿನ ಕಡೆಯಿಂದ ಬಂದುದು. ನಮ್ಮ ಈಗಿನ ನೃತ್ಯಶೈಲಿಗಳು ಆ ಪರಕೀಯರಿಂದ ಬಂದ ವಿಧಾನಗಳಿಗೆ ಅನುಸಾರವಾಗಿ ನಿಂತಿದೆ. ಅದನ್ನು ನಾವು ಸಮಕಾಲೀನವೆನ್ನುತ್ತೇವೆ. ಹಾಗೆ ನೋಡಿದರೆ ಪಾಶ್ಚಿಮಾತ್ಯರು ನಮ್ಮ ರಂಗಕ್ರಿಯೆಯನ್ನೂ ಮನಸಾರೆ ಮೆಚ್ಚಿದವರೇ ಆಗಿದ್ದರು.

ಇವರಲ್ಲದೆ ಇನ್ನೊಂದು ಗುಂಪು ಇದಿರು ಇದ್ದುದನ್ನೆಲ್ಲಾ ಬೇರೊಂದು ವಿಧವಾಗಿ ನೋಡುತ್ತಿರುವರು. ಅವರಿಗೆ ನಮ್ಮ ಕಲೆಯನ್ನು ಅರ್ಥೈಸುವಿಕೆ ಕಷ್ಟ ಹಾಗೂ ಆ ಚಲನೆಯ ಉದ್ದೇಶಕ್ರಮಗಳೆಲ್ಲವೂ ಅಪರಿಚಿತವಾದುದು. ಅವರೇ ತಮ್ಮ ದೇಶಕ್ಕೆ ಅನುಸಾರವಾಗಿ ನೃತ್ಯದ ಚಲನೆಗೆ ಹೊಸರೂಪ ಕೊಟ್ಟದ್ದು; ಮುಂದಕ್ಕೆ ಅದೇ ಕ್ರಮ ಭಾರತಕ್ಕೂ ಬಂದು ಸೇರಿದೆ. ತಮ್ಮ ಅನಿಸಿಕೆಗೆ ಭಾರತೀಯ ಕ್ರಮದ ಅಚ್ಚು ಹಾಕಿಸಿ ನಮಗೆ ಅದನ್ನೇ ಉಣಬಡಿಸಿರುವರು. ಪಶ್ಚಿಮಾತ್ಯ ಕಲೆಯು ನಮ್ಮ ಕಲೆಯನ್ನು ರೂಪಿಸುವುದು ಎಂದಿಗೂ ಸಲ್ಲದು. ನಾವು ಭಾರತೀಯರು. ಅವರ ಕ್ರಮ-ನಿಬಂಧನೆಗಳೆಲ್ಲಾ ಅವರಿಗೇ ಒಪ್ಪತಕ್ಕದ್ದು. ನಾವು ಕುರುಡರಂತೆ ಅವರ ಕೈ ಹಿಡಿದು ತಿರುಗಬಹುದೇ?

ಇಷ್ಟೆಲ್ಲಾ ಹೇಳಿದರೂ ಅಲ್ಲಿ ಏನೋ ಒಂದು ವಿಧದ ಅಡಚಣೆ ಕಾಣಿಸುತ್ತದೆ. ಈ ಹೆಚ್ಚು-ಕಡಿಮೆಯನ್ನು ನಾವು ಒಪ್ಪಿಕೊಂಡರೂ, ನಮ್ಮ ಈಗಿನ ಯುವಜನಾಂಗವು ಸಂಸ್ಕೃತಿಯಿಂದ ಬಹಳದೂರದಲ್ಲಿ ನಿಂತಂತೆ ಭಾಸವಾಗುತ್ತದೆ. ಭರತನಾಟ್ಯಕ್ಕೆ ಅವರ ದೃಷ್ಟಿಯಲ್ಲಿ ಸ್ಥಾನ ಕಡಿಮೆ. ಆ ನಾಟ್ಯ ಅಪ್ರಸ್ತುತ; ಅದು ಸತ್ತಿರುವ ಕಲೆ; ಪುರಾತನ ಪಳೆಯುಳಿಕೆ; ಅವಶೇಷ ; ನಾವು ಹಿಂದಿನಕಾಲದ ಪಳೆಯುಳಿಕೆಗೆ ಸೇರಿದವರಲ್ಲ; ಅಲಂಕಾರಭೂಷಣ ಅಥವಾ ಉಪಯೋಗಿಸದ ಹಳೆಯ ವಸ್ತುವಿನಂತೆ ಮಾತ್ರ ಕಾಣಿಸುತ್ತಿದೆ. ಆದರೂ ಅದರ ವಿಷಯವಾಗಿ ಸ್ವಲ್ಪ ತಿಳಿದುಕೊಂಡಿರಬೇಕೆಂಬ ಮನಸ್ಥಿತಿಯಿದೆ.

ಭಾರತೀಯ ಸಾಂಸ್ಕೃತಿಕ ಕಲೆ ಸಮಕಾಲೀನವಾದದ್ದು. ನೃತ್ಯವು ನಮ್ಮ ವಾಸ್ತವ ಹಾಗೂ ಹೃದಯಾಂತರಾಳದಲ್ಲಿ ನೆಲೆಸಿರುವ ಒಂದು ಗುಣ. ನಮ್ಮ ನರ್ತನಸೇವೆಯಲ್ಲಿ ಕಾಣಿಸುವ ಉಲ್ಲಾಸಪೂರ್ಣ ಅಥವಾ ಪ್ರಯತ್ನವೆಲ್ಲಾ ‘ಸಮಕಾಲೀನ’ವಾದದ್ದೇ ಹೌದು. ಇಂತಹ ಔದಾರ್ಯಪೂರ್ಣ ಸಾಂಸ್ಕೃತಿಕ ಕಾರ್ಯಾಚರಣೆಯಲ್ಲಿ ಎದ್ದು ಕಾಣಿಸುವಂತ ಗುಣವಿದ್ದರೆ ಅದನ್ನೇ ಕಲೆಯೆಂದು ಸ್ವೀಕರಿಸಬಹುದು. ನಮ್ಮ ನೆಲೆಗಟ್ಟಿನಲ್ಲಿ ಭದ್ರವಾಗಿ ನಿಂತ ಭರತನಾಟ್ಯ ; ಈಗ ತಾನೇ ತನ್ನನ್ನು ಬದಲಾಯಿಸಿಕೊಂಡು ಹೊಸದೆನಿಸಿದ ‘ಸತ್ಯ ಮತ್ತು ಸೌಂದರ್ಯ’ದೆಡೆಗೆ ಕಾಲು ಹಾಕಬೇಕಾಗಿದೆ.

Leave a Reply

*

code