ಅಂಕಣಗಳು

Subscribe


 

ನೃತ್ಯ ಮತ್ತು ದಲಿತರು : ಒಂದು ವಿಶ್ಲೇಷಣೆ

Posted On: Wednesday, June 15th, 2011
1 Star2 Stars3 Stars4 Stars5 Stars (1 votes, average: 2.00 out of 5)
Loading...

Author: ಶ್ವೇತಾ ಪ್ರಿಯದರ್ಶಿನಿ, ನೃತ್ಯ ಕಲಾವಿದೆ, ಬೆಂಗಳೂರು.


ನೃತ್ಯಕಲೆಯ ಶ್ರೀಮಂತಿಕೆ ಶೂನ್ಯದಿಂದ ಹುಟ್ಟುವುದಿಲ್ಲ ಅದಕ್ಕೆ ಯಾವುದಾದರೊಂದು ಹಿನ್ನೆಲೆಯಿರಬೇಕು. ನೃತ್ಯಕಲೆಗೆ ದಲಿತ ಕಲಾವಿದರ ಕೊಡುಗೆ ಪ್ರತ್ಯಕ್ಷವಾಗಿ ಬಹಳ ಕಡಿಮೆ ಎಂದೆನಿಸಿದರೂ ಪರೋಕ್ಷವಾಗಿ ನೃತ್ಯಕಲೆಯಲ್ಲಿ ದಲಿತರ ಪೂರ್ವ ಚರಿತ್ರೆ ಅತ್ಯಂತ ಘನವಾದುದು. ಆದರೆ ಮರೆಗೆ ಸಂದುಹೋಗಿದೆ. ಈ ಜನಾಂಗ ಒಂದು ಕಾಲದಲ್ಲಿ ನೃತ್ಯಕ್ಕೆ ತಮ್ಮ ಜೀವನವನ್ನು ಅರ್ಪಿಸಿಕೊಂಡಿದ್ದು ಕಾಲಕ್ರಮೇಣದ ಬೆಳವಣಿಗೆಯಲ್ಲಿ ನೃತ್ಯ ಕಲೆಯ ಪ್ರಯೋಜನವನ್ನು ಪಡೆದುಕೊಳ್ಳುವಲ್ಲಿ ವಿಫಲರಾಗಿರುವುದಕ್ಕೆ ಕಾರಣವೇನು? ಅಲ್ಲದೇ ಎಷ್ಟರ ಮಟ್ಟಿಗೆ ನೃತ್ಯಕಲೆ ದಲಿತರಿಗೆ ಲಭಿಸಿದೆ, ಇದಕ್ಕೊಂದು ಹಿನ್ನೆಲೆಯಿದೆಯೇ?

ವೇದಗಳ ಕಾಲದಲ್ಲಿ ನಾಟ್ಯಕಲೆಯ ಪ್ರಸ್ತಾವನೆ ನಮಗೆ ಪ್ರಥಮ ಬಾರಿ ಋಗ್ವೇದದಲ್ಲಿ ಕಂಡು ಬರುತ್ತದೆ. ಋಗ್ವೇದದ ಉಲ್ಲೇಖಗಳೇ ನೃತ್ಯಕಲೆಯ ಅತಿ ಪ್ರಾಚೀನವಾದ ಸಾಕ್ಷಿಗಳು. ನಂತರ ಅಥರ್ವ ವೇದದಲ್ಲಿ ವೈದಿಕ ಧರ್ಮ ವಿರೋಧಿಗಳಾದ ವ್ರಾತ್ಯ ಜನರ ಬಗ್ಗೆ ಉಲ್ಲೇಖಿಸಲಾಗಿದೆ. ಈ ವ್ರಾತ್ಯ ಜನರ ಆಚರಣೆಗಳಲ್ಲಿ ಮತೀಯ ದರ್ಶನ ಮತ್ತು ವಾಮಾಚಾರವು ಮುಖ್ಯವಾದುದು. ಅಲ್ಲದೇ ವಾದ್ಯ ಸಂಗೀತದ ಜೊತೆ ನೃತ್ಯ ಮಾಡುತ್ತಿದ್ದರು ಎಂಬುದಾಗಿ ತಿಳಿದು ಬರುತ್ತದೆ. ಸಂಗೀತ ನರ್ತನಗಳು ಅನಾಚಾರವನ್ನು ಪ್ರಚೋದಿಸುವ ಕಲೆಗಳೆಂದು ಅವಹೇಳನಕ್ಕೆ ಗುರಿಯದುದೂ ಹಾಗೂ ಅದರ ಮಗ್ಗುಲಲ್ಲಿ ಅಧ್ಯಯನಕ್ಕೆ ಯೋಗ್ಯವಾದ ವಿದ್ಯೆಗಳೆಂದು ಪ್ರಸಿದ್ಧವಾದುದು ಒಂದೇ ಕಾಲದಲ್ಲಿ. ಹೀಗೆ ಯಜ್ಞವಿರೋಧಿಗಳಾದ ವ್ರಾತ್ಯ ಜನರು ನಾಟ್ಯ ಸಂಗೀತವನ್ನು ಕೆಟ್ಟ ರೀತಿಯಲ್ಲಿ ಪ್ರಯೋಗಿಸುತ್ತಿದ್ದರಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ಇರಲಿಲ್ಲ. ಆದ್ದರಿಂದ ವ್ರಾತ್ಯ ಜನರನ್ನು ಊರಿನಿಂದ ಹೊರಗಿಡಲಾಯಿತು. ಮನುಷ್ಯನ ಗುಣಕರ್ಮಗಳಿಂದ ವಿಭಾಗ ಮಾಡಿ ನಾಲ್ಕು ವರ್ಣಗಳು ಸೃಷ್ಟಿಯಾದವು ಎಂಬ ಭಗವದ್ಗೀತೆಯ ಸಂದೇಶದಂತೆ ಒಂದು ಕಾಲದಲ್ಲಿ ಆರ್ಯರಾಗಿದ್ದ ವ್ರಾತ್ಯರು ಅನಾರ್ಯರಾದರು.

ಅಥರ್ವ ವೇದದ ಕಾಲದಲ್ಲಿ ನರ್ತನವು ದುರ್ದೆಶೆಗಿಳಿದುದರಿಂದ ಬಹುಶಃ ಇಂದ್ರಾದಿ ದೇವತೆಗಳು ಕ್ರಮಬದ್ಧವಾದ ಮಾರ್ಗೀ ಶೈಲಿಯ ನಾಟ್ಯವು ಎಲ್ಲರಿಗೂ ಲಭ್ಯವಾಗಬೇಕು ಎಂಬ ದೃಷ್ಟಿಯಿಂದ ಬ್ರಹ್ಮನಲ್ಲಿ ಮೊರೆಹೋಗಿರಬೇಕು. ಇಲ್ಲಿಯೂ ಒಂದು ಮುಖ್ಯವಾದ ವಿಚಾರವೇನೆಂದರೆ ವೇದಗಳು ಶೂದ್ರ ಜಾತಿಗಳಿಗೆ ನಿಷಿದ್ಧವಾದುದರಿಂದ ಎಲ್ಲಾ ವರ್ಗದವರಿಗೂ ಲಭ್ಯವಾಗಬಹುದಾದ ಒಂದು ಐಯ್ದನೇಯ ವೇದವನ್ನು ರಚಿಸು ಎಂಬುದಾಗಿ ಉಲ್ಲೇಖಿಸಲಾಗಿದೆ. ಆದ್ಯರಂಗಾಚಾರ‍್ಯಾರ ನಾಟ್ಯಶಾಸ್ತ್ರ ಗ್ರಂಥದ ಅಧ್ಯಾಯ ೩೬ ರಲ್ಲಿ ನಾಟ್ಯ ಭೂಲೋಕಕ್ಕೆ ಬಂದದ್ದು ಎಂಬುದರ ಬಗ್ಗೆ ಭರತಮುನಿಯು ಹೇಳುವಂತೆ ನನ್ನ ಮಕ್ಕಳು ಪ್ರಹಸನಗಳಿಂದ ಜನರನ್ನು ಮೂದಲಿಸತೊಡಗಿದರು. ಅಸಭ್ಯ ಶೈಲಿಯ (ನಾಟ್ಯ) ಕೃತಿಯೊಂದರಲ್ಲಿ ಋಷಿಗಳ ಅಪಹಾಸ್ಯ ಮಾಡಿ ಜನ ಸಮೂಹದೆದುರು ಆಡಿದರು. ಅದು ಕೇಳಲು ಅಸಹ್ಯವಾಗಿತ್ತು. ಅದರಲ್ಲಿ ದುರಾಚಾರ, ಗ್ರಾಮ್ಯ, ನಡತೆಗಳ ಅಪ್ರಸ್ತುತವಾದ, ನಿಷ್ಠುರವಾದ ಚಿತ್ರಣವಿದ್ದಿತು. ಹೀಗೆ ಇದನ್ನು ಕೇಳಿದ ಋಷಿಗಳು ಬ್ರಾಹ್ಮಣರ ಸಮಾಜದಲ್ಲಿ ಹುಟ್ಟಿ ಬೆಳೆದು ಬಂದ ನೀವು ಹೋಮ ಹವನಗಳನ್ನು ಮಾಡದೆ ನಿರ್ವ್ರತರಾಗಿ ಶೂದ್ರರ ಆಚಾರಕ್ಕೆ ಇಳಿಯುವಿರಿ ಎಂದು ಶಪಿಸಿದರು. ಹೀಗೆ ಚಿಂತೆಗೀಡಾದ ಭರತಮುನಿಯು ತನ್ನ ಮಕ್ಕಳಿಗೆ ಚಿಂತೆಗೀಡಾಗಬೇಡಿ, ದೈವವು ನಮಗಾಗಿ ಹೀಗೆ ವಿಧಿಸಿತ್ತು, ಅದು ನಡೆದು ಹೋಯಿತು ಎಂಬುದಾಗಿ ಹೇಳಿದುದನ್ನು ಉಲ್ಲೇಖಿಸಲಾಗಿದೆ. ಅಲ್ಲದೇ ಬೃಹದ್ದೇಶಿ ಯಲ್ಲಿ ಭರತ ಶಬ್ದಕ್ಕೆ ಶಬರ ನೆಂಬ ಅರ್ಥವಿರುವುದನ್ನು ತಿಳಿಸಲಾಗಿದೆ (ರಾ.ಸತ್ಯನಾರಾಯಣ). ಕನ್ನಡ ನಿಘಂಟುವಿನಲ್ಲಿ ಶಬರ ಎಂದರೆ ಬೇಡರು ಎಂಬುದಾಗಿ ಅರ್ಥೈಸಲಾಗಿದೆ.

ಈಗಿನ ದಲಿತರೇ ಈ ನೆಲದ ಆದಿಮವಾದ ಮೂಲ ನಿವಾಸಿಗಳು ಹಾಗೂ ನರ್ತನವೇ ಒಂದು ಇವರ ಭಾಗ ಎಂಬ ಸತ್ಯವನ್ನು ಪ್ರತಿಪಾದಿಸುವಂತಹ ಚರ್ಚೆಯನ್ನು ಮಾಡುತ್ತಾ ಹೋದಲ್ಲಿ ದಲಿತರಲ್ಲಿ ನೃತ್ಯದ ಹಿನ್ನಲೆಗೆ ಭಿನ್ನ ಭಿನ್ನ ಆಯಾಮಗಳು ಸೃಷ್ಟಿಯಾಗುತ್ತವೆ. ದಲಿತರಲ್ಲಿ ಸಂಗೀತ ನರ್ತನಗಳು ಯಾಕೆ ಹೆಚ್ಚಿವೆ ಎಂಬುದನ್ನು ಸಮರ್ಥಿಸಿಕೊಳ್ಳಲು ಕೂಡ ಜನಪದ ಕ್ಷೇತ್ರದಲ್ಲಿ ವೇದಗಳ ಕಾಲದಲ್ಲೇ ಆದಂತಹ ಸನ್ನಿವೇಶವು ಇಲ್ಲಿಯೂ ಸಿಗುತ್ತದೆ ಎಂದರೇ ತಪ್ಪಾಗಲಾರದು. ದ್ರಾವಿಡರಿಗೆ ನರ್ತನವೇ ಮುಖ್ಯ ಕ್ರೀಡೆಯಾಗಿತ್ತು. ಒಮ್ಮೆ ಒಂದು ಎತ್ತಿನ ಗಾಡಿಯಲ್ಲಿ ಹಾಡು ಕುಣಿತಗಳನ್ನು ತುಂಬಿಕೊಂಡು ಎಲ್ಲ ವರ್ಗದವರಿಗೂ ಹಂಚಬೇಕೆಂದು ದೇವರುಗಳು ಹೊರಡುತ್ತಾರೆ. ಎತ್ತಿನಗಾಡಿ ದಲಿತರ ಕೇರಿಗೆ ಬಂದ ತಕ್ಷಣ ಅಚ್ಚುಮುರಿದು ನೆಲಕ್ಕುರುಳುತ್ತದೆ. ಆಗ ದಲಿತರು ಹಾಡು ಕುಣಿತಗಳನ್ನು ತಮಗೆ ಬೇಕಾದಷ್ಟು ಬಾಚಿಕೊಂಡರು. ಅದಕ್ಕಾಗಿಯೇ ದಲಿತರಲ್ಲಿ ಕಲಾ ಶ್ರೀಮಂತಿಕೆ ಹೆಚ್ಚು ಎಂಬುದು ಗ್ರಾಮೀಣ ಪ್ರದೇಶದ ನಂಬಿಕೆ. ಹೀಗೆ ಸುಮಾರು ೨ನೇ ಶತಮಾನದಿಂದ ೧೮ನೇ ಶತಮಾನದವರೆಗೂ ಕೂಡ ದಲಿತ ಕಲಾವಿದರು ನೃತ್ಯದಲ್ಲಿ ಭಾಗಿಯಾಗಿರುವುದು, ಆಧಾರಸಹಿತವಾಗಿ ಗ್ರಂಥಗಳಲ್ಲಿ ಲಭ್ಯವಾಗಿದ್ದು ಆದಿಮ ಹಂತದಲ್ಲಿ ನೃತ್ಯಕಲೆಯ ಸೊತ್ತನ್ನು ಎಲ್ಲರಂತೇ ತಾವು ಪಡೆದುಕೊಂಡಿದ್ದರೂ ಈ ಒಂದು ವರ್ಣ ವ್ಯವಸ್ಥೆಯಲ್ಲಿ ದಲಿತ ಕಲಾವಿದರ ಸಂಖ್ಯೆ ಶಿಷ್ಟ ನೃತ್ಯ ಸಂಪ್ರದಾಯಕ್ಕೆ ಕಡಿಮೆಯಾಗಿರುತ್ತದೆ. ದಲಿತರಲ್ಲಿ ಪ್ರತಿಭೆ ಶ್ರೀಮಂತವಾಗಿರುವುದರಿಂದ ಹೊರಜಗತ್ತಿಗೆ ಅದರ ಬೆಳಕನ್ನು ವಿಸ್ತರಿಸುವ ಪ್ರಯತ್ನವನ್ನು ಮಾಡಬೇಕಾಗಿದೆ.

( ಲೇಖಕರು ಬೆಂಗಳೂರಿನಲ್ಲಿ ನೃತ್ಯ ಶಿಕ್ಷಕಿ ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಭರತನಾಟ್ಯಕ್ಕೆ ದಲಿತರ ಕೊಡುಗೆ ಎಂಬ ವಿಷಯದಲ್ಲಿ ಪಿ‌ಎಚ್‌ಡಿ ಅಧ್ಯಯನ ನಿರತೆ.)

Leave a Reply

*

code