Author: ರಾಕೇಶ್ ಕುಮಾರ್ ಕಮ್ಮಜೆ, ಪತ್ರಿಕೋದ್ಯಮ ಉಪನ್ಯಾಸಕರು, ವಿವೇಕಾನಂದ ಕಾಲೇಜು, ಪುತ್ತೂರು, ದ.ಕ
ಪ್ರಾಯಃ ಯಕ್ಷಗಾನದ ಅಭಿಮಾನಿಗಳಿಗೆ ಯಕ್ಷಗಾನ ಕೊಡುವಷ್ಟು ಮನರಂಜನೆಯನ್ನು ಇನ್ನಾವ ಮಾಧ್ಯಮವೂ ಕೊಡಲಾರದೇನೋ. ಈಗೀಗ ಸಂಜೆ ಆರರಿಂದ ಒಂಭತ್ತರ ವರೆಗಿನ ಯಕ್ಷಗಾನಗಳು ಹೆಚ್ಚೆಚ್ಚು ಚಾಲ್ತಿಗೆ ಬರುತ್ತಿರುವುದು ಹೌದಾದರೂ ರಾತ್ರಿಯಿಡೀ ಆಡುವ ಯಕ್ಷಗಾನಗಳು ನಶಿಸಿ ಹೋಗುವಂತೇನೂ ಕಾಣುತ್ತಿಲ್ಲ. ಹಾಗಾಗಿಯೇ ಈಗಲೂ ಇಡೀ ರಾತ್ರಿ ನಡೆಯುವ ಯಕ್ಷಗಾನಗಳು ಭರ್ಜರಿ ಪ್ರದರ್ಶನಗಳನ್ನೇ ಕಾಣುತ್ತಿವೆ. ಇಡೀ ರಾತ್ರಿ ನಿದ್ದೆ ಬಿಟ್ಟು ಒಬ್ಬಾತ ವ್ಯಕ್ತಿ ಯಕ್ಷಗಾನ ವೀಕ್ಷಿಸುತ್ತಾನೆಂದರೆ ಅದು ಅವನಿಗೆ ಅದೆಷ್ಟು ಮನರಂಜನೆ ನೀಡಲಿಕ್ಕಿಲ್ಲ ಯೋಚಿಸಿ. ಅದರಲ್ಲೂ ನೀವು ಕೆಲವು ಮಕ್ಕಳನ್ನು ನೋಡಬೇಕು. ತೀರಾ ಮಧ್ಯರಾತ್ರಿಯ ಹೊತ್ತಿಗೆ ಅವರು ನಿದ್ರಿಸುತ್ತಾರಾದರೂ ಅಲ್ಲಿಯವರೆಗೆ ಅವರ ಆಸಕ್ತಿಯನ್ನು ಗಮನಿಸಬೇಕು. ಯಕ್ಷಗಾನ ಪ್ರಪಂಚದಲ್ಲೇ ಮುಳುಗಿಬಿಡುವ ಆ ಮಕ್ಕಳು ತಾವೆಲ್ಲಿದ್ದೇವೆ ಎಂದು ಮರೆಯುವುದೂ ಇದೆ. ಅಂತಹದೇ ಕೆಲವು ಉದಾಹರಣೆಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ.
ಒಮ್ಮೆ ಮೀಯಪದವು ಎಂಬಲ್ಲಿ ಒಂದು ಆಟ. ಪ್ರಸಂಗ, ಕಲಾವಿದರ ಬಗೆಗೆ ನನಗೆ ಗೊತ್ತಿಲ್ಲ. ಆದರೆ ಘಟನೆಯನ್ನಷ್ಟೇ ಉಲ್ಲೇಖಿಸಬಲ್ಲೆ. ಆ ದಿನ ಯಾವುದೋ ಪಾತ್ರ ಮಾಡಿದ್ದ ಒಬ್ಬ ಕಲಾವಿದ ಭಾಗವತಿಕೆಗೆ ಕುಣಿದು ಅರ್ಥ ಶುರುವಿಟ್ಟುಕೊಂಡಿದ್ದರು. ಹೀಗೆ ಅರ್ಥ ಹೇಳುತ್ತಾ ಹೇಳುತ್ತಾ ಯಾವುದೋ ಒಂದು ಸಂದರ್ಭದಲ್ಲಿ ತಾನೆಂದೂ ಆಡಿದ ಮಾತಿಗೆ ತಪ್ಪಿ ನಡೆವವನಲ್ಲ ಎನ್ನುವುದನ್ನು ಸಮರ್ಥಸಿಕೊಳ್ಳುತ್ತಾ ‘ ಆಡಿದ ಮಾತಿಗೆ ತಪ್ಪಿ ನಡೀತೇನೆ ಅಂತಾದ್ರೆ ಅಂತಹ ನಾಲಿಗೆ ನನಗೆ ಬೇಕಾ?’ ಎಂದುಬಿಟ್ಟರು. ತಕ್ಷಣ ಎದುರು ಸಾಲಿನಲ್ಲಿ ಕೂತಿದ್ದ ಒಬ್ಬ ಹುಡುಗ ಕೂತಲ್ಲಿಂದಲೇ ದೊಡ್ಡದಾಗಿ ‘ಬೇಡ ಬೇಡ’ ಎನ್ನಬೇಕೇ? ಸುತ್ತಮುತ್ತಲಿನ ಮಂದಿಯೆಲ್ಲಾ ಬಿದ್ದುಬಿದ್ದು ನಕ್ಕರು. ಕಲಾವಿದರಿಗೂ ಒಮ್ಮೆ ತಬ್ಬಿಬ್ಬಾಯಿತು!
ಕೆಲವು ವರ್ಷಗಳ ಹಿಂದೆ ಮಂಗಳೂರಿನ ಪುರಭವನದಲ್ಲಿ ಗದಾಯುದ್ಧ ಪ್ರಸಂಗ. ಚಿಟ್ಟಾಣಿಯವರದು ಕೌರವ. ಗದಾಯುದ್ಧದ ಆರಂಭದಲ್ಲಿ ಕೌರವ ಭೀಮನ ತಲೆಗೆ ಹೊಡೆದಾಗ ಭೀಮ ಬೀಳುತ್ತಾನೆ. ಆಗ ‘ಮತ್ತಧಿಕ ಸಂತೋಷದಿ…’ಅನ್ನುವ ಹಾಡಿದೆ. ನಂತರ ಅರ್ಥ ಹೇಳುತ್ತಾ ಚಿಟ್ಟಾಣಿಯವರು ‘ಬನ್ನಿ ಬನ್ನಿ ಈ ಭೀಮ ಬಿದ್ದ ಚಂದವನ್ನು ನೋಡುವುದಕ್ಕೆ ಬನ್ನಿ’ ಅಂತ ಸಭಿಕರನ್ನುದ್ದೇಶಿಸಿ ಹೇಳಿದರು. ನಂತರ ಬೇರೆ ಬೇರೆ ಸಂಗತಿಗಳನ್ನು ಪ್ರಸ್ತಾವಿಸಿದರೂ ಪುನಃ ಸಭಿಕರನ್ನುದ್ದೇಶಿಸಿ ‘ಈ ಭೀಮ ಬಿದ್ದ ಸೊಬಗನ್ನು ನೋಡುವುದಕ್ಕೆ ಯಾರು ಬರ್ತೀರಿ, ಯಾರು ಬರ್ತೀರಿ?’ ಎಂದರಲ್ಲದೆ ಸಭೆಯ ಒಂದೊಂದೇ ಬದಿಯನ್ನು ಲಕ್ಷಿಸಿ ‘ನೀವು ಬರ್ತೀರಾ?, ನೀವು ಬರ್ತೀರಾ? ಎನ್ನುತ್ತಾ ಸಾಗಿದರು. ಆ ಸಂದರ್ಭದಲ್ಲಿ ಹುಡುಗನೊಬ್ಬ ಎದ್ದು ನಿಂತು ‘ನಾನು ಬರ್ತೇನೆ’ ಅನ್ನಬೇಕೇ?! ಒಂದು ಕ್ಷಣ ಚಿಟ್ಟಾಣಿ ಮೌನವಾಗಿಬಿಟ್ಟರು! ನಂತರ ಸಾವರಿಸಿಕೊಂಡು ‘ನೀನು ಬೇಡ’ ಬೇರೆಯವರು ಬರಲಿ ಅಂತ ತೇಲಿಸಿದರು.
ಕಲಾವಿದರೇ ಒಮ್ಮೊಮ್ಮೆ ತಬ್ಬಿಬ್ಬಾಗುವಂತಹ ಇಂಥ ರೋಚಕ ಘಟನೆಗಳು ಅನೇಕ ಇವೆ. ಮಕ್ಕಳು ಮೈಮರೆತು ಉತ್ತರಿಸಿ ಸಭಿಕರಲ್ಲಿ ನಗು ತರಿಸಿದ ಪ್ರಸಂಗಗಳು ಇವೆರಡೇ ಅಲ್ಲ. ಮುಂದೊಮ್ಮೆ ಇಂತಹ ಮತ್ತಷ್ಟು ‘ಮಕ್ಕಳ ಪ್ರಸಂಗ’ಗಳನ್ನು ನಿಮಗೆ ಹೇಳುತ್ತೇನೆ. ಸದ್ಯಕ್ಕೆ ಇವೆರಡು ಸಾಕು. ಆದರೆ ಈಗೀಗ ಹೆತ್ತವರು ಮಕ್ಕಳನ್ನು ಹೆಚ್ಚೆಚ್ಚು ಯಕ್ಷಗಾನಕ್ಕೆ ಕರೆದೊಯ್ಯುತ್ತಿಲ್ಲ ಅನ್ನುವುದೇ ಬೇಸರದ ಸಂಗತಿ.