ಅಂಕಣಗಳು

Subscribe


 

ನೂಪುರ ಭ್ರಮರಿ- ಸಾಂಪ್ರದಾಯಿಕ ಕಲೆ ಮತ್ತು ಕಲಾವಿದರ ರಾಯಭಾರಿ

Posted On: Thursday, October 15th, 2009
1 Star2 Stars3 Stars4 Stars5 Stars (No Ratings Yet)
Loading...

Author: -ಕುದ್ಕಾಡಿ ವಿಶ್ವನಾಥ ರೈ, ಚಂದ್ರಶೇಖರ ದಾಮ್ಲೆ, ನವೀನ್

ವಿಮರ್ಶಕ ಬೆಂಗಳೂರಿನ ಜಿ. ಬಿ. ಹರೀಶ್, ಸಂಪಾಜೆಯ ಕೊಂದಲಕಾಡು ನಾರಾಯಣ ಭಟ್, ರಾಯಚೂರಿನ ಸುರೇಶ್ ಜಾಲಹಳ್ಳಿ, ಸಾಗರದ ಹಿರಿಯ ವಿದ್ವಾಂಸ ಮೋಹನ. ಗ. ಹೆಗಡೆ ಮುಂತಾದ ಸಹೃದಯ ಮಿತ್ರರು ಪತ್ರಬರೆದು ಅಭಿನಂದಿಸಿದ್ದಾರೆ.

ಅಂತರ್-ರಾಷ್ಟ್ರೀಯ ನೆಲೆಯಲ್ಲಿ ಕಲಾವಿದರನ್ನೂ, ಓದುಗರನ್ನೂ ಬಹುವೇಗವಾಗಿ ತಲುಪುತ್ತಿರುವ ನೂಪುರ ಭ್ರಮರಿಯ ಪ್ರಯತ್ನಗಳಿಗೆ ಶುಭಾಶಯ. ಒಂದರ್ಥದಲ್ಲಿ ನೀವು ಭಾರತೀಯ ಸಾಂಪ್ರದಾಯಿಕ ಕಲೆ ಮತ್ತು ಕಲಾವಿದರ ರಾಯಭಾರಿಯೇ ಹೌದು. ಕಲಾಸಕ್ತರನ್ನು ಮುಟ್ಟುವಲ್ಲಿ  ಮತ್ತು ಅವರ ಹೃದಯಗಳಿಗೆ ಸೇತು ಬೆಸೆಯುವ ನಿಮ್ಮ ಆಶಯ ಮತ್ತು ಪ್ರಯತ್ನಗಳಿಗೆ ಹೆಮ್ಮೆ ಪಡುತ್ತೇನೆ. ನಿಮ್ಮ ಈ ಪಥದಲ್ಲಿ ಯಶಸ್ಸು ಸಿಗಲಿ.

-ಡಾ. ಚಂದ್ರಶೇಖರ ದಾಮ್ಲೆ, ಸುಳ್ಯ.

ಚಿತ್ರ-ವ್ಯಂಗ್ಯಚಿತ್ರ ಕಲಾವಿದನಾದ ನಾನು ನರ್ತನ ಜಗತ್ತಿಗೊಂದು ಪುಟ್ಟ ಪರಿಭ್ರಮಣ ಮಾಡಿ ನಿಮ್ಮ ಪ್ರಯತ್ನಕ್ಕೆ ಬೆರಗಾದೆ. ಶುಭ ತರಲಿ ಪಯಣ.

– ಜಿ.ಎಂ.ಬೊಮ್ನಳ್ಳಿ, ವ್ಯಂಗ್ಯಚಿತ್ರಕಾರು, ಉತ್ತರಕನ್ನಡ.

ನಾಟ್ಯದ ಬಗ್ಗೆ ಉತ್ತಮ ಮಾಹಿತಿ ಕೋಡುವ ನಿಮ್ಮ ಪ್ರಯತ್ನ ಅಭಿನಂದನೆಗೆ ಅರ್ಹವಾದುದು. ಪ್ರಚಲಿತವಾಗಿರುವ ಎಲ್ಲಾ ನಾಟ್ಯ ಪ್ರಕಾರಗಳ ಬಗ್ಗೆ ಮಾಹಿತಿ ನೀಡಿದರೆ ಮತ್ತಷ್ಟು ಒಳ್ಳೆಯದು. ಯಶಸ್ಸು ನಿಮ್ಮದಾಗಲಿ.

–    ನವೀನ್, ಬೆಂಗಳೂರು.
(ನಿಮ್ಮ ಸಲಹೆ ಸೂಕ್ತವಾದುದು. ಆದರೆ ನಾಟ್ಯಪ್ರಕಾರಗಳಿಗೆ ಸಂಬಂಧಿಸಿದ ಪರಿಣತರು ಮುಂದೆ ಬಂದು ಈ ನಿಟ್ಟಿನಲ್ಲಿ ಪ್ರಯತ್ನಿಸಿದರೆ ಒಳ್ಳೆಯದು. ಆದರೆ ಬಹಳ ಸಂದರ್ಭದಲ್ಲಿ ಲೇಖಕರ ಕೆಲವು ನಿರೀಕ್ಷೆಗಳನ್ನು ಮುಟ್ಟಲು ಸಾಧ್ಯವಾಗುವುದಿಲ್ಲ. ಓದುಗರ ಸೌಜನ್ಯ ಮತ್ತು ಮಿತ್ರರ ಬೆಂಬಲದಿಂದ ನಡೆಯುವ ಪತ್ರಿಕೆಗೆ ಸದ್ಯಕ್ಕೆ ಅಂಕಣಕಾರರಿಗೆ, ಲೇಖಕರಿಗೆ ಸಂಭಾವನೆ ಕೊಡುವಷ್ಟು ಶಕ್ತಿ ಇಲ್ಲ. ಜೊತೆಗೆ ನಕಲು ಮಾಡಲು ಮನಸ್ಸಿಲ್ಲ. ಆದರೂ ಗುಣಮಟ್ಟದ ಪ್ರಯತ್ನಗಳನ್ನು ಜಾರಿಯಲ್ಲಿಟ್ಟಿರುತ್ತೇವೆ. ನಿಮ್ಮ ಆಶಯಕ್ಕೆ ಸಾಕಷ್ಟು ಮನ್ನಣೆ ಸಿಗುವಂತೆ ನೋಡಿಕೊಳ್ಳುತ್ತೇವೆ.
-ನೂಪುರ ಬಳಗ. )

ಕಳೆದ ಸಂಚಿಕೆಯ ಮಂಜೀರದಲ್ಲಿ ಸಂಪಾದಕರು ಪ್ರೀತಿಯಿಂದ ಬರೆದ ಕಹಿಗುಳಿಗೆಗಳು ಕಲೆಯ ಸಾಧನೆ, ಆರಾಧನೆ, ಬೋಧನೆಯ ನಿಟ್ಟಿನಲ್ಲಿ ಆರೋಗ್ಯದಾಯಕವಾದವುಗಳು. ಚಿಂತನೆಗೆ ಗ್ರಾಸವಾಗಿದೆ.
ಅನುಶ್ರೀ ಬಂದಾಡಿಯವರು ರಂಗಭ್ರಮರಿಯಲ್ಲಿ ನೃತ್ಯಸ್ಪರ್ಧೆಗಳಲ್ಲಿ ಭಾಗವಹಿಸುವ ಪುಟ್ಟ ಮಕ್ಕಳ ಪ್ರದರ್ಶನದ ನ್ಯೂನತೆ, ಗುರುಗಳು, ಹೆತ್ತವರು, ಮಾಧ್ಯಮಗಳು ವಹಿಸಬೇಕಾದ ಕರ್ತವ್ಯಗಳನ್ನು ಸೂಚಿಸಿರುವುದು ವೈಯಕ್ತಿಕ ಅಭಿಪ್ರಾಯವಾದರೂ ಇಲ್ಲಿಯೂ ಹಲವು ಅಂಶಗಳು ಗಮನೀಯವಾಗಿವೆ.
ಅಷ್ಟನಾಯಕಿಯರ ಚಿತ್ತವೃತ್ತಿಗಳನ್ನು ಮಂಟಪ ಪ್ರಭಾಕರ ಉಪಾಧ್ಯರು ಪ್ರದರ್ಶಿಸುವ ಸಾಧನೆ, ಯಕ್ಷಗಾನ ಅಭಿನಯ ಕ್ಷೇತ್ರದ ಒಂದು ಹೊಸ ಆಯಾಮ. ಅವರೊಬ್ಬ ಅಪೂರ್ವ ಕಲಾವಿದರು.
ಧರ್ಮಸ್ಥಳದ ಸಿದ್ಧವನದಲ್ಲಿ ಒಂದು ವಾರ ಜರುಗಿದ ಯಕ್ಷಗಾನ ಪುನಶ್ಚೇತನಾ ಶಿಬಿgದ ಲೇಖನ ತೆಂಕು+ಬಡಗು ತಿಟ್ಟುಗಳ ವೃತ್ತಿಪರ ಕಲಾವಿದರು ಕಲಿಯಬೇಕಾದುದು ತುಂಬಾ ಇದೆ ಎಂಬ ಪ್ರಜ್ಞೆ ಮೂಡಿಸಿದೆ. ಇನ್ನಷ್ಟು ಯಕ್ಷಗಾನ ತಿಟ್ಟುಗಳನ್ನು ಸೇರಿಸಿ ಇಂತಹ ಪುನಶ್ಚೇತನಾ ಶಿಬಿರಗಳು ಆಗುವುದು ಅಗತ್ಯ. ಅದರಿಂದ ಯಾವುದೇ ತಿಟ್ಟು ಕೆಡಲಾರದು.ಇದು ನನ್ನ ಕಲಾಬದುಕಿನ ವಿನೀತ ನಂಬಿಕೆ.
ಚಿಟ್ಟಾಣಿಯವರ ಬಗ್ಗೆ ಇನ್ನಷ್ಟು ಮುಂದಿನ ಸಂಚಿಕೆಯಲ್ಲಿ ಓದಲು ಕುತೂಹಲಿಗಳಾಗುತ್ತೇವೆ.
ಹಸ್ತಮುದ್ರಿಕೆಗಳ ವಿಸ್ತಾರವಾದ ವಿನಿಯೋಗದ ‘ಹಸ್ತಮಯೂರಿ’ಗೆ ಎಲ್ಲಾ ನೃತ್ಯವಿದ್ಯಾರ್ಥಿ ಪರಿವಾರದ ಪರವಾಗಿ ಅಭಿನಂದನೆ ಹೇಳುತ್ತೇನೆ. ಇದು ನಾಟ್ಯಸಂಪ್ರದಾಯದ ವಾರಸುದಾರರೆಂಬುವರು ಗಮನಿಸಬೇಕಾದ ಅಂಶ. ಹೊಸ ಮಾರ್ಗ.
‘ಶಿಕ್ಷಣದಲ್ಲಿ ಯಕ್ಷಗಾನ ಪಾಠಪಟ್ಟಿ’ ತಿಂಗಳ ಚರ್ಚೆ ಕ್ರೀಡಾ ಮನೋಭಾವನೆಯಿಂದ ಸಾಗಲಿ ಎಂಬುದು ನಮ್ಮ ಆಶಯ. ‘ ಮಣ್ಣ್‌ತ ಪುಚ್ಚೆ ಆವಡ್ ಮಯನೊತ ಪುಚ್ಚೆ ಆವಡ್ ಎಲಿಪತ್ತೊಡು’ ಅಂತ ತುಳುವಿನ ಗಾದೆ ಇದೆ.
ಯಕ್ಷಗಾನ ನಾಟ್ಯ ಮತ್ತು ತಾಳವಾದ್ಯಗಳ ಕಲಾಪರೀಕ್ಷೆಗಳನ್ನು ಪ್ರೌಢ ಶಿಕ್ಷಣ ಪರೀಕ್ಷ ಮಂಡಳಿಯ ಪರೀಕ್ಷೆಗಳ ವಿಷಯವಾಗಿ ಪರಿಗಣಿಸುವಂತೆ ಮಾರ್ಗಸೂಚಿ ಕೈಪಿಡಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರನ್ನು ಕೇಳಲಾಗಿದೆ. ಜೊತೆಗೆ ಶಿವರಾಮ ಕಾರಂತರ ಬಾಲವನದಲ್ಲಿ ಯಕ್ಷಗಾನ ಸಂಶೋಧನಾ ತರಬೇತಿ ಕೇಂದ್ರವಾಗುವಂತೆ, ಯಕ್ಷಗಾನ ಅಕಾಡೆಮಿಯು ಬೆಂಗಳೂರಿನಿಂದ ಕರಾವಳಿಗೆ ಬರುವಂತೆ ಪ್ರಯತ್ನ ಸಾಗಬೇಕು. ಭಾರತದ ಶಾಸ್ತ್ರೀಯ ನಾಟ್ಯವಾಗಿ ಯಕ್ಷಗಾನ ಮಾನ್ಯತೆ ಪಡೆಯುವ ಅರ್ಹತೆ ಹೊಂದಿದೆ. ನಮ್ಮ ರಾಜಕೀಯ ಮುಂದಾಳುಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಯಕ್ಷಗಾನ ನಾಟ್ಯಪ್ರಕಾರಕ್ಕೆ ಗೌರವ ತಂದುಕೊಡಲಿ ಎಂಬುದು ನಮ್ಮ ಹಾರೈಕೆ.

-ಕುದ್ಕಾಡಿ ವಿಶ್ವನಾಥ ರೈ
ನಿರ್ದೇಶಕ, ವಿಶ್ವಕಲಾ ನಿಕೇತನ, ಪುತ್ತೂರು.

Leave a Reply

*

code