Author: ವಿವಿಧ ಲೇಖಕರು
ಭ್ರಮರಿಯ ಸಂಚಿಕೆ ೩ರಲ್ಲಿ ಬೆಂಗಳೂರಿನ ಪ್ರೊ.ಎಸ್.ರತ್ನಮ್ಮನವರು ರಂಗಭ್ರಮರಿ ಅಂಕಣದಲ್ಲಿ ವಿಶದಪಡಿಸಿದ ಪೌರಾಣಿಕ ಸಾಕ್ಷ್ಯಾಧಾರಗಳ ವಿನೂತನ ರೀತಿಯ ನಿರೂಪಣೆ ನೃತ್ಯಕಲೆಯಲ್ಲಿ ಹಸ್ತಮುದ್ರೆಗಳ ಬಗೆಗಿನ ಆಳವಾದ ಪರಿಜ್ಞಾನವನ್ನು ಮನವರಿಕೆ ಮಾಡಿತ್ತು. ಭಾರತಯುದ್ಧರಂಗದಲ್ಲಿ ಭಗವಾನ್ ಶ್ರೀಕೃಷ್ಣನ ಮುದ್ರಾಪ್ರವೀಣತ್ವವನ್ನು ಇಂದಿನ ರಿಮೋಟ್‌ನ ಹಾಗೆ ಬಳಸಿದ ವಿಧಾನ ಹಾಗೂ ದುರ್ಗಾದೇವಿಗೆ ಕರಣಗಳನ್ನು ಹೊಂದಿಸಿದ ಕೌಶಲ್ಯತೆಯ ಉದಾಹರಣೆಗಳನ್ನು ಮೆದುಕಡಲೆಯ ಜಗಿತದಂತೆ ಜನಸಾಮಾನ್ಯರಿಗೆ ಮುಟ್ಟಿಸಿದ್ದಾರೆ. ನೃತ್ಯಮುದ್ರೆಯ ಈ ವಿವರಣೆ ಜನಸಾಮಾನ್ಯರಿಗೂ ಆಸಕ್ತಿಯಿಂದ ಓದಿಸಿಕೊಂಡು ಹೋಗುವಂತೆ ಮಾಡುತ್ತದೆ. ಹಾಗೆಯೇ ಕಲಾಕೌಶಲ್ಯತೆಗೆ ಯಾವುದೇ ಜಾತಿ ಮತಧರ್ಮಗಳ ಬಳಿಯದೆ ಕಲಾದೇವಿ ಸರ್ವಧರ್ಮೀಯರನ್ನೂ ಸ್ವೀಕರಿಸಿ ಪರಸ್ಪರ ಸಹೋದರತ್ವ ಬೆಳೆಸಿಕೊಳ್ಳುವ ಅಪೂರ್ವ ತತ್ತ್ವದ ಪ್ರತಿಪಾದನೆಗೂ ಲೇಖನ ವೇದಿಕೆಯಾಗಿ ಮನಸೂರೆಗೊಳಿಸುತ್ತದೆ. ಈ ರೀತಿಯ ಸುಲಭ ಶೈಲಿಯ ಕಿರುಲೇಖನಗಳನ್ನು ಬಳಸಿಕೊಳ್ಳುವುದರಿಂದ ಇಂದಿನ ದೃಷ್ಟಿಕೋನಕ್ಕೆ ಹೊಂದಿಕೊಳ್ಳಲು ಸಾಧ್ಯ. ವಂದನೆಗಳು.
-ಕೀರಿಕ್ಕಾಡು ವನಮಾಲಾ ಕೇಶವ ಭಟ್ಟ, ಕಾಸರಗೋಡು
ತಾವು ವಿದ್ಯಾಮಾನ್ಯರು. ಕಲೆಯನ್ನೇ ಪುಷ್ಟೀಕರಿಸಿ, ಮುದ್ರೆಗಳ ಹಾವಭಾವದೊಂದಿಗೆ ಮುಖ್ಯತಃ ಭರತನಾಟ್ಯವನ್ನೇ ಮೇಳೈಸಿದ ‘ನೂಪುರ ಭ್ರಮರಿ’ ಪುಟ್ಟದಾದರೂ ಅರ್ಥಗರ್ಭಿತವಾಗಿ ಅರ್ಪಿಸಿದ್ದೀರಿ. ಕಳೆದ ಸಂಚಿಕೆಯಲ್ಲಿ ಪ್ರಕಟವಾದ‘ಪುಣ್ಯಕೋಟಿ’ಯ ಪುಣ್ಯಚರಿತ್ರೆ ಚಿಕ್ಕಂದಿನ ನೆನಪುಗಳನ್ನು ಮೆಲುಕು ಹಾಕಿಸಿ ಮುಂದಡಿಯಿಟ್ಟಿದೆ. ಅಂದಹಾಗೆ ನಮ್ಮ ಮನೆಗೆ ಯಾರಾದರೂ ಅತಿಥಿಅಭ್ಯಾಗತರು ಬಂದವರು ‘ನೂಪುರ ಭ್ರಮರಿ’ಯನ್ನು ಮತ್ತೊಮ್ಮೆ, ಇನ್ನೊಮ್ಮೆ ಮಗದೊಮ್ಮೆ ಓದಲಾಶಿಸುತ್ತಾರೆ ಎಂಬುದೇ ಈ ಪತ್ರಿಕೆಯ ಗರಿಮೆಗೆ ಸಾಕ್ಷಿ.
– ಮಾಸ್ಟರ್ ವಿಠಲ್, ಹಿರಿಯ ನಾಟ್ಯಗುರು, ಮಂಗಳೂರು.