ಅಂಕಣಗಳು

Subscribe


 

ನೇಪಥ್ಯಕ್ಕೆ ಸರಿದ ನವಯುಗದ ನೃತ್ಯ ಪ್ರವರ್ತಕಿ : ಡಾ.ಮಾಯಾರಾವ್

Posted On: Saturday, November 1st, 2014
1 Star2 Stars3 Stars4 Stars5 Stars (No Ratings Yet)
Loading...

Author: ಲೇಖನ-ಮನೋರಮಾ ಬಿ.ಎನ್

ಡಾ.ಮಾಯಾರಾವ್ – ದಕ್ಷಿಣಭಾರತದಲ್ಲೇ ಮೊದಲ ಬಾರಿಗೆ ಕಥಕ್‍ನೃತ್ಯ ಕಲಿತು, ಉತ್ತರಭಾರತದ ಹೆಸರಾಂತ ಗುರುಗಳ ಶಿಷ್ಯವೃತ್ತಿ ಮಾಡಿ ಭಾರತಾದ್ಯಂತ ಕಥಕ್ ನೃತ್ಯದ ಪರಿಮಳವನ್ನು ಹರಡಿಸಿ, ಜಾಗತಿಕವಾಗಿಯೂ ಭಾರತವನ್ನು ಪ್ರತಿನಿಧಿಸಿ ಭಾರತೀಯ ನೃತ್ಯದ ಪರಂಪರೆಗೆ ಹೊಸದಿಕ್ಕು ತೋರಿದವರು.

maya-rao-1  md8a

 mayarao--621x414ಚಿಕ್ಕವಳಿದ್ದಾಗಿನಿಂದಲೂ ಅದೆಷ್ಟೋ ಸಲ ದೂರದರ್ಶನ, ಹಲವು ನೃತ್ಯೋತ್ಸವಗಳಲ್ಲಿ ಅವರ ಕೊರಿಯೋಗ್ರಫಿಯ ಚಮತ್ಕಾರಗಳನ್ನು ಬೆರಗುಕಣ್ಣುಗಳಿಂದ ಕಂಡಿದ್ದೆ. ಆದರೆ ಮಾಯಾರಾವ್ ಅವರೊಂದಿಗೆ ಮೊದಲು ಮಾತಿನ ಮುಖಾಮುಖಿಯಾದದ್ದು – ಹಸ್ತ ಮುದ್ರೆಗಳ ಅಂತರ್ ಶಿಸ್ತೀಯ ಅಧ್ಯಯನದ ಕೃತಿ ‘ಮುದ್ರಾರ್ಣವ’ಕ್ಕೆ ಮುನ್ನುಡಿ ಬರೆದುಕೊಡಬಹುದೇ ಎಂಬ ಆಶಯ ಹೊತ್ತು ಫೋನಿನಲ್ಲಿ ಮಾತನಾಡಿದಾಗ. ಆದರೆ ವಿನಮ್ರತೆಯಿಂದಲೇ ನಿರಾಕರಿಸಿದ್ದ ಮಾಯಾದೀದಿ ; ಹಸ್ತಮುದ್ರೆಗಳ ಬಹುಶ್ತೀಯ ಅಧ್ಯಯನದಲ್ಲಿ ಅಷ್ಟಾಗಿ ಪ್ರಾವೀಣ್ಯತೆಯಿಲ್ಲ ಎಂಬ ಮಿತಿಯನ್ನು ಹೇಳುತ್ತಲೇ ಕೃತಿಯ ಒಟ್ಟಂದ ಚೆಂದಕೆ ಮೂಡಿಬರಲಿ ಎಂದು ಹರಸಿದ್ದರು. ಅದಾಗಿ 3 ವರುಷಕ್ಕೆ ಅವರ ಹೊಯ್ಸಳವೈಭವದ ಆಹಾರ್ಯ ಸೌಂದರ್ಯವನ್ನು ರವೀಂದ್ರಕಲಾಕ್ಷೇತ್ರದ ಅಂಗಳದಲ್ಲಿ ಕಣ್ತುಂಬಿಕೊಂಡಿದ್ದೆ; ಕಥಕ್ ನೃತ್ಯದ ಸುಗಂಧ ಬೀರುವ ಮೊದಲ ಹೆಜ್ಜೆಗಳಲ್ಲೇ ಅವರ ಕೊರಿಯೋಗ್ರಫಿಯ ಹೊಳಹುಗಳು ನಿಜಕ್ಕೂ ಅನನ್ಯವೆಂದು ಮನಸ್ಸು ಮರುನುಡಿಯಿತ್ತಿತ್ತು. ನೂಪುರ ಭ್ರಮರಿಯ ಅಂಗಣದಲ್ಲಿ ಅಕ್ಷರ ಮೈತಾಳಿತ್ತು. ಅದಾಗಿ ನೃತ್ಯಸಂಶೋಧನ ಸಮ್ಮೇಳನದ ಪ್ರಯುಕ್ತವಾಗಿ ಹೊರತರಲಾದ ನೂಪುರದ ವಿಶೇಷ ಸಂಚಿಕೆಯಲ್ಲಿಯೂ ನೃತ್ಯಸಂಶೋಧನೆಯ ಕುರಿತಾಗಿ ದೀರ್ಘವಾಗಿಯೇ ಮಾತನಾಡಿದ್ದರು.

Maya-Rao  mayarao_1000x800_04

ಮೊದಲ ಮಾತುಕತೆಯ ಬಳಿಕ ನಾಲ್ಕು ವರುಷ ಕಳೆದು ಅವರ ಮನೆಗೆ ಸಂದರ್ಶನದ ಸಲುವಾಗಿ ಕಾಲಿಟ್ಟಿದ್ದೆ. ಅಂದು ಮಾರ್ಚ್ 15, 2013 ಬೆಳಿಗ್ಗೆ 11 ಗಂಟೆ. ಪತ್ರಿಕಾ ಸಂದರ್ಶನದ ನೆವವಿದ್ದರೂ ನನ್ನ ಉಳಿದ ಅಧ್ಯಯನಗಳಿಗೂ ಅವರಿಂದ ಸಲಹೆ ಸೂಚನೆ, ಸಂದರ್ಶನಗಳು ಅಗತ್ಯವಿದ್ದವು.

ತಮ್ಮ ಕೋಣೆಯಿಂದ ಬಂಗಾರ ಬಣ್ಣದ ಅಂಚುಳ್ಳ ನೀಲಿಬಣ್ಣದ ಸೀರೆಯನ್ನುಟ್ಟು ನಿಧಾನಕ್ಕೆ ನಡೆದು ಬಂದ ಮಾಯಾದೀದಿಯ ಕಣ್ಣುಗಳಲ್ಲಿ ಮಿಂಚಿನಂತಹ ಬೆಳಕು. ಚಿಕ್ಕವರಿರಲಿ, ದೊಡ್ಡವರಿರಲಿ ಎಲ್ಲರನ್ನೂ ಅದೇ ರಸಾದ್ರ್ರ ಕಣ್ಣುಗಳಿಂದ ಆದರಿಸುವ ಮುಕ್ತಭಾವ. ಪರಸ್ಪರ, ಪರಿಚಯ, ಉಭಯಕುಶಲೋಪರಿಯ ಬಳಿಕ ‘ಕುಡಿಯಲು ಏನಾಗಬಹುದು?’ ಎಂಬ ವಿಚಾರಣೆಗೆ ಒಂದು ಕಪ್ ತುಂಬಾ ಚಹಾವೂ ಸ್ವಾಗತ ಕೊಟ್ಟಿತ್ತು.

NH-Maya_ART_GU611SD_140809e  Dr.Maya_Rao_Hattangadi

dadad

ಅದಾಗಲೇ ನೂಪುರ ಭ್ರಮರಿಯನ್ನು ಓದಿ, ಮೆಚ್ಚಿದ್ದ ದೀದಿ ಪತ್ರಿಕೆಯ ನೆಲೆ-ಬೆಲೆಗಳೆಲ್ಲವನ್ನೂ ಕೊಂಡಾಡಿ ವಿಚಾರಿಸಿದ್ದರು. ಹೊಸ ತಲೆಮಾರಿನ ಮೇಲೆ ಅವರಿಗಿದ್ದ ವಿಶ್ವಾಸ, ಯುವಜನಾಂಗದ ನೃತ್ಯಾಸಕ್ತ ಮನಸ್ಸುಗಳ ಬಗ್ಗೆ ಇದ್ದ ಒಲವು, ತಲಸ್ಪರ್ಶಿ ಅಧ್ಯಯನಗಳೆಡೆಗೆ ಇದ್ದ ನಲವುಗಳೆಲ್ಲಾ ಹೃದಯ ಹಾಡುವಂತೆ ಮಾಡಿತ್ತು. ನನ್ನ ಅಕ್ಷರದಲ್ಲರಳಿದ ಕೃತಿಗಳನ್ನು ಅವರ ಕೈಗಿತ್ತಾಗ- ‘ಪುಸ್ತಕಗಳನ್ನು ಕೊಂಡು ಓದಬೇಕು. ಎಷ್ಟು ಕ್ರಯ ಆಯಿತು ಹೇಳು’? – ಒಮ್ಮೆ ಅವಾಕ್ಕಾಗಿದ್ದೆ. ಬೆಲೆಗೆ ಕೊಡುವ ಮನಸ್ಸಿಲ್ಲದೆ ಅರ್ಪಣೆಯಾಗಿ ಅವರ ಕೈಗಿತ್ತಿದ್ದೆ.

ನಂತರದಲ್ಲಿ ಅರಳಿದ್ದೇ ಅವರ ಅನುಭವ-ಅನುಭಾವ ಪ್ರಪಂಚ, ಬದುಕು, ಭಾವದ ಅನ್ಯಾದೃಶ್ಯ ಸಂಬಂಧದ ಸೌಂದರ್ಯ. ನಡುನಡುವೆ ‘ದೀದಿ’, ಪ್ರಶ್ನೆಗಳಿಗೆ ಪ್ರತಿಪ್ರಶ್ನೆ ಹಾಕಿ ತಬ್ಬಿಬ್ಬಾಗಿಸಿದ್ದೂ ಸುಳ್ಳಲ್ಲ. ಆದರೆ ಇಂದಿಗೆ ಅವರು ತಮ್ಮ ನೃತ್ಯದ ಹೆಜ್ಜೆ ಗೆಜ್ಜೆಗಳ ನಾದವನ್ನು ಭೌತಿಕವಾಗಿ ನಿಲ್ಲಿಸಿ ರಂಗದಿಂದ ನೇಪಥ್ಯಕ್ಕೆ ಸರಿದ ಹೊತ್ತಿಗೂ ಅವರ ನಗುಬೆರಗಿನ ನಲುಮೆ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಅವರೊಂದಿಗೆ ಆತ್ಮೀಯವಾಗಿ ಕಲೆತು ಮಾತನಾಡಿದ ಎರಡೂವರೆ ಗಂಟೆಗಳ ದೀರ್ಘ ಸಂದರ್ಶನದ ಕೆಲವೊಂದು ತುಣುಕುಗಳು ಇಲ್ಲಿವೆ. ಆ ಮೂಲಕ ಅವರು ನೃತ್ಯಕ್ಷೇತ್ರಕ್ಕೆ ಮಾದರಿಯಾಗಿ ನಿಂತ ಹೆಜ್ಜೆಗೆಜ್ಜೆಗಳ ಉಲಿಯಿದೆ… ಅದನ್ನು ಅವರದ್ದೇ ಮಾತುಗಳಲ್ಲಿ ನಿಮ್ಮೆದುರಿಗಿರಿಸಿದ್ದೇನೆ. ಕೈಗೆತ್ತಿಕೊಂಡು ಕಣ್ತುಂಬಿ ಹೃದಯದ ಕವಾಟದೊಳಗೆ ಬೆಚ್ಚಗಿರಿಸಿಕೊಳ್ಳುತ್ತೀರಲ್ವಾ?- ಸಂ.

ಮಹಾಮಾಯಾ ಮಾಯಾರಾವ್ ಆದೆ…
ನನ್ನ ತಂದೆ ಹಟ್ಟ್ಯಂಗಡಿ ಸಂಜೀವರಾವ್ ಮಂಗಳೂರಿನಿಂದ ಬೆಂಗಳೂರಿಗೆ ಬಂದು ನೆಲೆಸಿದವರು. ತಾಯಿ ಸುಭದ್ರಾಬಾಯಿ ಪುತ್ತೂರಿನವರು. ನಾವು ಮೊದಲಿನಿಂದಲೂ ಇದ್ದದ್ದು ಬೆಂಗಳೂರಿನ ಮಲ್ಲೇಶ್ವರಂನಲ್ಲಿ. ಇಬ್ಬರು ಅಣ್ಣಂದಿರು; ಒಬ್ಬ ತಮ್ಮ, ಇಬ್ಬರು ತಂಗಿಯರ ಚೊಕ್ಕ ಸಂಸಾರ.

ಮೊದ್ಲು ಬ್ರಿಟೀಶರಿಗೆ ಸೇರಿದ್ದ ಕಂಪೆನಿಯೊಂದರಲ್ಲಿ ಇಂಜಿನಿಯರ್ ಆಗಿ ಕೆಲ್ಸ ಮಾಡುತ್ತಿದ್ದ ನನ್ನ ತಂದೆ, ಸ್ವಾತಂತ್ರ್ಯಾನಂತರ ಅದರ ಮಾಲೀಕರಾದರು. ಮೈಸೂರಿನ ಅರಮನೆಯ ಆಗಿನ ದ್ವಾರದ ಗೇಟ್‍ನ್ನು ಕಟ್ಟಿದ್ದು ನನ್ನ ತಂದೆಯವರೇ !!

ನಾನು ಹುಟ್ಟಿದ್ದು ಮೇ 2, 1928. ಸಣ್ಣವಳಿದ್ದಾಗ ನಾನು ಹುಡುಗರಂತೆಯೇ ದಿಟ್ಟೆ. ನನ್ನ ಅಣ್ಣಂದಿರ ನಂತರ ಅಮ್ಮ ಎರಡು ಹೆಣ್ಣುಮಕ್ಕಳನ್ನು ಕಳೆದುಕೊಂಡಿದ್ದಳಾದ್ದರಿಂದ ನಂತರ ಹುಟ್ಟಿದ ನನ್ನ ಮೇಲೆ ಎಲ್ಲರಿಗೂ ಅಕ್ಕರೆ ಹೆಚ್ಚು. ನಾನು ಹುಟ್ಟಿ ಸ್ವಲ್ಪದಿನದ ವರೆಗೂ ಹೆಸರಿಟ್ಟಿರಲಿಲ್ಲ. ‘ಬಬ್ಲಿ’ ಎಂದೇ ಕರೆದು ಮುದ್ದುಗರೆಯುವವರು. ನಂತರ ಗೋವಾಕ್ಕೆ ಹೋಗಿ ನಮ್ಮ ಮನೆದೇವರ ಹೆಸರಿನಲ್ಲಿ ‘ಮಹಾಮಾಯಾ’ ಅಂತ ನಾಮಕರಣ ಮಾಡಿದ್ರು. ಎಸ್‍ಎಸ್‍ಎಲ್‍ಸಿ ಹೊತ್ತಿಗೆ ‘ಮಹಾಮಾಯ’ ಮಾಯವಾಗಿ ‘ಮಾಯಾದೇವಿ’ ಅಂತಷ್ಟೇ ಉಳಿದು ಮುಂದೆ ‘ಮಾಯಾರಾವ್’ ಅಂತಲೇ ಹೆಸರಾಯಿತು !!!

tdhc2b  at moscow master class GITIS

ಆಗಿನ ಕಾಲಕ್ಕೆ ಡ್ಯಾನ್ಸ್ ಅಂದರೆ…
ನನ್ನ ತಂದೆ ಮಕ್ಳ ಓದಿಗೆ ಬಹಳ ಮಹತ್ವ ಕೊಡ್ತಿದ್ರು. ನಾನು ಓದಿದ್ದು ಬೆಂಗಳೂರಿನ ಕ್ವೀನ್ಸ್‍ರೋಡ್ ಹತ್ತಿರದ ಕಮಲಾಬಾಯ್ ಸ್ಕೂಲ್, ಮಲ್ಲೇಶ್ವರಂ ಸ್ಕೂಲ್‍ನಲ್ಲಿ. 1945ರಲ್ಲಿ ಮಹಾರಾಣಿ ಕಾಲೇಜ್‍ಗೆ ಇತಿಹಾಸ, ಅರ್ಥಶಾಸ್ತ್ರ, ಲಾಜಿಕ್ ವಿಷಯದಲ್ಲಿ ಬಿ.ಎ ಮಾಡ್ಕೊಂಡೆ.

ಆಗಿನ ಕಾಲದಲ್ಲಿ ನೃತ್ಯಕಲಾವಿದರಿಗೆ ಅಂತ ಪ್ರತ್ಯೇಕ ಹಾಲ್, ಸಭಾಭವನ, ಸ್ಟೇಜ್‍ಗಳು ಇರ್ತಿರ್ಲಿಲ್ಲ. ಹೆಸರಾಂತ ಕಲಾವಿದರಿಗೂ ಕೆಲವು ಸಿನೆಮಾ ಟಾಕಿಸ್‍ಗಳ ಶೋ ಕ್ಯಾನ್ಸಲ್ ಮಾಡಿ ಡ್ಯಾನ್ಸ್ ಕಾರ್ಯಕ್ರಮಗಳನ್ನು ನಡೆಸಲು ಜಾಗ ಕೊಡ್ತಾ ಇದ್ರು. ಹಾಗೇನೇ ಡ್ಯಾನ್ಸ್ ಕಲಿಯೋದಕ್ಕೂ ಹೆಚ್ಚು ಸಪೋರ್ಟ್ ಇರಲಿಲ್ಲ.

ಆದರೆ ಶಾಲೆಯಲ್ಲಿ ಕಲಿಯುವಾಗಲೇ ಆಕರ್ಷಿಸಿದ್ದು ನೃತ್ಯಗುರು ಉದಯ ಶಂಕರ್ ಅವರ ದೊಡ್ಡ ತಂಡ. ಬೆಂಗಳೂರು ರೈಫಲ್ ವಾಲೆಂಟಿಯರ್ಸ್(ಬಿ.ಆರ್.ವಿ) ಥಿಯೇಟರ್‍ನಲ್ಲಿ ನಡೆಯುತ್ತಿದ್ದ ನೃತ್ಯ ನೋಡಿ ನಾನೂ ಹೆಜ್ಜೆ ಹಾಕಬೇಕು ಎಂಬ ಭಾವ ಬಲಿಯುತ್ತಾ ಹೋಯಿತು. ರಾಮರಾವ್ ಹತ್ರ ಹಿಂದೂಸ್ತಾನಿ ಸಂಗೀತ ಹಾಗೂ ದಿಲ್‍ರುಬಾ ವಾದ್ಯ ನುಡಿಸುವುದನ್ನು ಕಲಿಯುತ್ತಿದ್ದೆ. ಆದ್ರೆ ದೊಡ್ಡ ಕುಟುಂಬದ ಹುಡುಗಿಯೊಬ್ಬಳು ‘ಡ್ಯಾನ್ಸ್ ಕಲೀತೇನೆ’ ಅಂದ್ರೆ ಹಿರಿಯರು ಸುಲಭವಾಗಿ ‘ಅಸ್ತು’ ಅಂತ ಹೇಳುವ ಕಾಲ ಅದಾಗಿರಲಿಲ್ಲ.

ನಮ್ಮ ತಂದೆ ಸ್ವತಃ ಉದಯ ಶಂಕರ್‍ನೃತ್ಯದ ಅಭಿಮಾನಿ. ಆದರೆ ನಮ್ಮ ಮನೆಯಲ್ಲಿ ನಾನು ಹನ್ನೆರಡು ವರ್ಷದ ವರೆಗೂ ಡ್ಯಾನ್ಸ್ ಕಲಿಯೋಕೆ ಅವಕಾಶವೇ ಕೊಟ್ಟಿರ್ಲಿಲ್ಲ. ತುಂಬಾ ಮಡಿವಂತಿಕೆ. ಯಾರಾದ್ರೂ ಏನಾದ್ರೂ ಹೇಳ್ತಾರೆ ಅನ್ನೋ ಭಯ ಬೇರೆ. ಕೊನೆಗೆ ‘ನಮ್ಮ ಜಾತಿಯವರ ಪ್ರೋಗ್ರಾಮ್ ಬಿಟ್ಟು ಹೊರಗೆಲ್ಲೂ ಪರ್‍ಫಾರ್ಮೆನ್ಸ್ ಕೊಡೋದಿಲ್ಲ’ ಅಂತ ಮಾತು ಕೊಟ್ಟ ಮೇಲೆಯೇ ಡ್ಯಾನ್ಸ್ ಕ್ಲಾಸ್ಗೆ ಅಂತ ಸೇರಿದ್ದು! ಬಹುಷಃ ಸಾರಸ್ವತ ಸಮಾಜದಲ್ಲಿ ಡ್ಯಾನ್ಸ್ ಕಲಿತು ಮುಂದೆ ಬಂದ ಮೊದಲ ಕಲಾವಿದೆಯರಂದ್ರೆ ನಾನು, ನನ್ನ ತಂಗಿಯರಾದ ಉಮಾ, ಚಿತ್ರಾ! ಈಗಿನ ಕಾಲಕ್ಕೆ ಹೋಲಿಸಿದರೆ ನಮ್ಮ ನೃತ್ಯಕಲಿಕೆ ನಿಜಕ್ಕೂ ಒಂದು ಕ್ರಾಂತಿಯೇ ಸರಿ !

ದಕ್ಷಿಣಧ್ರುವದಿಂ ಉತ್ತರಧ್ರುವಕೂ…
ಹೆಸರಾಂತ ನೃತ್ಯ ಕಲಾವಿದ ರಾಂಗೋಪಾಲ್ ಬೆಂಗಳೂರಿನವರಾದ್ರೂ ಇಲ್ಲಿಯೇ ಇದ್ದದ್ದು ಕಡಿಮೆ. ಅವರು ಯಾವಾಗ ಬೆಂಗ್ಳೂರಲ್ಲಿ ಬಂದು ಸ್ಟುಡಿಯೋ ಪ್ರಾರಂಭಿಸಿ, ಗುರುಗಳಾದ ಮುತ್ತುಕುಮಾರನ್ ಪಿಳ್ಳೈ, ಸೋಹನ್‍ಲಾಲ್ ಅವರನ್ನು ನೇಮಿಸಿಕೊಂಡರೋ ಆಗ ಕಥಕ್ ಕಲಿಕೆಗೆ ನಾನು ಸೇರಿಕೊಂಡೆ. ಆಗಿನ ಕಾಲಕ್ಕೆ ಕರ್ನಾಟಕದಲ್ಲಿ ಕಥಕ್‍ಗೆ ಇದ್ದ ಒಂದೇ ಒಂದು ಆಶಾಕಿರಣ- ಸೋಹನ್‍ಲಾಲ್ ! ಅವರು ಆಗಿನ ಕಾಲದ ಹೆಸರಾಂತ ಸಿನಿಮಾ ನೃತ್ಯ ನಿರ್ದೇಶಕರೂ ಕೂಡಾ ಆಗಿದ್ರು.

1942ರ ಹೊತ್ತಿಗೆ ಕಥಕ್ ಜೊತೆ ನನ್ನ ನಂಟು ಇನ್ನೂ ಗಟ್ಟಿಯಾಯ್ತು. ಕಲಾಪ್ರದರ್ಶನಕ್ಕೆ ಯಾವುದೇ ಸಭಾಗಳು ಇರ್ಲಿಲ್ಲವಾದ್ದರಿಂದ ನನ್ನ ಮೊದಲನೇ ನೃತ್ಯಪ್ರದರ್ಶನ ಸಾರಸ್ವತ ಸಮಾಜದ ಟೌನ್‍ಹಾಲ್‍ನಲ್ಲೇ ನಡೀತು. 1946ರ ಹೊತ್ತಿಗೆ ತಂದೆಯವರು ತೀರಿಕೊಂಡರು.

05bgbndmayarao__05_2092566g  md8a

ಸ್ವಾತಂತ್ರ್ಯ ಬಂದ ವರ್ಷ ‘ನಾಟ್ಯ ಸರಸ್ವತಿ’ ಅನ್ನೋ ಹೆಸರಿನಲ್ಲಿ ಕಥಕ್‍ಕ್ಲಾಸ್ ಪ್ರಾರಂಭ ಮಾಡಿದೆ. 1951ರಲ್ಲಿ ಜೈಪುರದ ಮಹಾರಾಣಿ ಗಾಯತ್ರಿ ಸ್ಕೂಲ್‍ನಲ್ಲಿ ಎರಡು ವರ್ಷದ ಮಟ್ಟಿಗೆ ಇಂಗ್ಲಿಷ್‍ಪಾಠದ ಉದ್ಯೋಗ ಸಿಕ್ಕಿತು. ಅಲ್ಲಿ ಕೆಲಸ ಮಾಡುತ್ತಾ ಕಥಕ್‍ಕ್ಲಾಸ್ ಮಾಡುತ್ತಿದ್ದೆ. ಅಣ್ಣ ಮನೋಹರ್ ಒತ್ತಾಸೆಯಿಂದ 1953ರಲ್ಲಿ ಶ್ರೀಲಂಕಾಗೆ ಹೋಗಿ, ಅಲ್ಲಿ ಕಾಂಡ್ಯನ್‍ನೃತ್ಯ ಕಲಿತೆ; ಅಲ್ಲಿಯೂ ನೃತ್ಯಪ್ರದರ್ಶನಗಳನ್ನು ಕೊಟ್ಟೆ. 1954ರಲ್ಲಿ ಕಥಕ್ ಸ್ಕಾಲರ್‍ಶಿಪ್ ಸಿಕ್ಕಿ 250ರೂ ಸ್ಟೈಫಂಡ್‍ನಲ್ಲಿ ದೆಹಲಿಯ ಭಾರತೀಯ ಕಲಾಕೇಂದ್ರಕ್ಕೆ ಶಿಷ್ಯೆಯಾಗಿ ಸೇರಿದೆ. ಕಥಕ್‍ಗೆ ಅಂತಲೇ ಕೇಂದ್ರಸರ್ಕಾರ ಕೊಟ್ಟ ಮೊದಲ ಸ್ಕಾಲರ್‍ಶಿಪ್ ಅದು ! ಇದೇ ಸಮಯದಲ್ಲೇ ನಂಗೆ ಕಥಕ್ ನೃತ್ಯದ ಸುಧಾರಕರಾದ ಮಹಾರಾಜ್ ಕಲ್ಕಾಬಿಂದಾದಿನ್ ಅವರ ಶೈಲಿಯನ್ನೇ ರೂಢಿಸಿಕೊಂಡು ಹೋಗಲು ಅನುಕೂಲ ದೊರೆತದ್ದು ! ಮಹಾರಾಜ್ ಬಿಂದಾದಿನ್ ಅವರ ಅಳಿಯ, ಲಕ್ನೋ ಘರನಾದ ಗುರು ಶಂಭುಮಹಾರಾಜ್ ಗುರುಗಳಾಗಿ ಸಿಕ್ಕಿದ್ರು.

ಅಲ್ಲಿಂದ ನನ್ನ ಬದುಕು ನೃತ್ಯಕ್ಕೆಂದೇ ವಿಸ್ತಾರವಾಗಿ ಅರಳಿತು. ಅವರ ಬಳಿ ಕಲಿಯುತ್ತಾ ಹಲವು ನೃತ್ಯಪ್ರದರ್ಶನಗಳನ್ನು ನೀಡಿದೆ. ಗುರುಗಳು ಜ್ಞಾನದ ಸಾಗರ. ಅವರ ನಗು, ಶಿಷ್ಯವಾತ್ಸಲ್ಯ, ಕಲಿಸುವ ರೀತಿ ನನ್ನಲ್ಲಿ ಇಂದಿಗೂ ಹಸಿರು. ಅಲ್ಲೇ 4-5 ವಷರ್Àದ ನಿರಂತರ ಅಭ್ಯಾಸ; ನಂತ್ರ ಕಲಾಕೇಂದ್ರದಲ್ಲೇ ಇದ್ದ ಜೈಪುರ್ ಘರನಾದ ಗುರು ಸುಂದರ್ ಪ್ರಸಾದ್ ಬಳಿ ಶಿಷ್ಯವೃತ್ತಿ ಮಾಡಿದೆ. ಆಗೆಲ್ಲಾ ಈ ಘರನಾ(ನೃತ್ಯಶೈಲಿ)ಗಳ ಅದೆಷ್ಟೋ ಗುರುಗಳ ನಡುವೆ ಹಾರ್ದಿಕ ಮನಸ್ಸು ಇತ್ತು. ನಂತರದ ವರ್ಷಗಳಲ್ಲಿಯೇ ಶೈಲಿಯ ವಿಚಾರದಲ್ಲಿ ರಾಜಕೀಯ, ಜಗಳ ಪ್ರಾರಂಭವಾದದ್ದು.

ರಷ್ಯಾದಲ್ಲಿ 1958ರಲ್ಲಿ ಬ್ಯಾಲೆ ಅಧ್ಯಯನ ಮಾಡಲು ಇಬ್ಬರು ಆಯ್ಕೆಯಾಗಬೇಕಿತ್ತು. ಆದರೆ ಈ ಆಯ್ಕೆಗಾಗಿ ಅಪೇಕ್ಷಿಸಿದ್ದವರು ಬರೋಬ್ಬರಿ 1,800 ಜನ. ಅವರ ಪೈಕಿ ಪ್ರಥಮಸ್ಥಾನ ಗಳಿಸಿ ಆಯ್ಕೆಯಾದೆ. 1960ರ ವೇಳೆಗೆ ಮಾಸ್ಕೋ ಸ್ಟೇಟ್ ಇನ್ಸ್ಟಿಟ್ಯೂಟ್ ಆಫ್ ಥಿಯೇಟರ್ ಆಟ್ರ್ಸ್‍ನಲ್ಲಿ ಕೊರಿಯೋಗ್ರಫಿ ಹಾಗೂ ಸ್ಟೇಜ್ ಕ್ರಾಫ್ಟ್ ಮೇಲಿನ ಹೆಚ್ಚುವರಿ ಕಲಿಕೆಗೆ ಅಂತ ಹೋದೆ. ಅಲ್ಲಿಯೂ ಸಾಕಷ್ಟು ಸಾಧನೆಗೆ ಅವಕಾಶ ಸಿಕ್ಕಿತು. ರಷ್ಯಾದಲ್ಲಿ ಕೊರಿಯಾಗ್ರಫಿಯಲ್ಲಿ ತರಬೇತಿ ಪಡೆಯಲು ಭಾರತ ಸರ್ಕಾರ ನೀಡುವ ಸಾಂಸ್ಕೃತಿಕ ಶಿಷ್ಯವೇತನ ಪಡೆದ ಮೊದಲ ಮಹಿಳೆ ಎಂಬ ಹೆಸರೂ ಬಂತು.

ಗೊತ್ತಿಲ್ಲದ ಊರು. ಗೊತ್ತಿಲ್ಲದ ಜನ. ಗೊತ್ತಿಲ್ಲದ ಭಾಷೆ. ಹಾಗಾಗಿ ಎರಡು ಗಂಟೆ ಅಲ್ಲಿನ ಭಾಷೆಯ ಕಲಿಕೆ, ಎರಡು ಗಂಟೆ ಬ್ಯಾಲೆ ಅಭ್ಯಾಸ. ಹೀಗೆ ಆರು ತಿಂಗಳು ರಷ್ಯನ್ ಭಾಷೆ ಕಲಿತು, ಮೂರು ವರ್ಷ ಕೊರಿಯೋಗ್ರಫಿ ಟ್ರೈನಿಂಗ್ ಮುಗಿಸಿ 1964ಕ್ಕೆ ಭಾರತಕ್ಕೆ ಬಂದೆ. ಆದರೆ ನಂತರದ ವರುಷಗಳಲ್ಲೂ ರಷ್ಯಾದವರು ತಮ್ಮ ದೇಶಕ್ಕೆ ಅನೇಕ ಸಲ ಬರಮಾಡಿಕೊಂಡರು. ಶಾಕುಂತಲ, ರಾಮಾಯಣ ನೃತ್ಯನಾಟಕಗಳನ್ನು ರಷ್ಯನ್ನರಿಗಾಗಿ ನಿರ್ದೇಶಿಸಿದೆ. ಈ ಹಿನ್ನೆಲೆಯಲ್ಲಿ ನಾನು ಕಲಿತ, ಕಲಿಸಿದ, ಪ್ರದರ್ಶನ ಕೊಟ್ಟ, ಅಧ್ಯಯನ ಮಾಡಿದ ಪ್ರತಿಯೊಂದು ವಿಚಾರಗಳೂ ನಂಗೆ ಬಹಳಷ್ಟು ಆಪ್ತ.

ಬಾಳಸಂಗಾತಿಯೊಂದಿಗೆ ಭರವಸೆಯ ಹೆಜ್ಜೆ…
ನನ್ನ ಬಾಳಸಂಗಾತಿ ನಟರಾಜ್ ಕಲೆಯ ಬೇರೆ ಬೇರೆ ಆಯಾಮಗಳಲ್ಲಿ ಕೆಲಸ ಮಾಡಿದವರು. ಒಳ್ಳೆಯ ಸಂಗೀತ ನಿರ್ದೇಶಕ, ಸಂಯೋಜಕರು, ಕಲೆಯ ಬೇರೆ ಬೇರೆ ಆಯಾಮಗಳಲ್ಲಿ ಆಸ್ಥೆಯಿದ್ದವರು. ಅವರದ್ದೇ ಆದ ‘ಸರಸ್ವತಿ ಸಂಗೀತ ತಂಡ’ದಲ್ಲಿ 25 ಜನ ಕಲಾವಿದರಿದ್ದರು. ದೆಹಲಿಯ ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಸಾಂಸ್ಕೃತಿಕ ತಂಡವನ್ನು ಮುನ್ನಡೆಸಿದ ಹಿರಿಮೆ ಅವರದ್ದು.

smtmayarao withpandit

tdhc8d

 ನನ್ನ ಅವರ ಭೇಟಿಯೂ ಸಿನಿಮೀಯವಾಗಿಯೇ ಆಯಿತು. ಕಲಿಸುವ ಹಾದಿಯಲ್ಲಿದ್ದ ಮನಸುಗಳು ಪರಸ್ಪರ ಬೆಸೆದವು. ನಮ್ಮ ಇನ್ಸ್ಟಿಟ್ಯೂಟ್ ಕಟ್ಟಿದ ನಾಲ್ಕು ತಿಂಗಳ ನಂತರ 1964, ಡಿಸೆಂಬರ್ 27ರಲ್ಲಿ ಮದುವೆಯಾದೆವು. 1971ರಲ್ಲಿ ನನ್ನ ಮಗಳು ಮಧು ಹುಟ್ಟಿದಳು.
ಮನಸ್ಸು ಮಾಡಿದ್ದರೆ ಸಾಂಸಾರಿಕವಾಗಿ ನಾವೂ ಎಲ್ಲರಂತೆ ಇರಬಹುದಾಗಿತ್ತು. ಆದರೆ ಕಲೆಗಾಗಿ ನಾನು ದೆಹಲಿ, ಅವರು ಬೆಂಗಳೂರಿನಲ್ಲಿರಬೇಕಾದದ್ದು ಅನಿವಾರ್ಯವಾಗಿತ್ತು. ಒಂದಷ್ಟು ವರುಷದ ನಿರಂತರ ಪ್ರಯಾಣದಲ್ಲೇ ನಮ್ಮ ಸಂಸಾರ ಸಾಗಿತ್ತು.

ಬೆಂಗಳೂರಿನತ್ತ ಹೆಜ್ಜೆ…
ಸಂಗೀತ ನಾಟಕ ಅಕಾಡೆಮಿಯ ಉಪಾಧ್ಯಕ್ಷೆ ಆಗಿದ್ದ ಕಮಲಾದೇವಿ ಚಟ್ಟೋಪಾಧ್ಯಾಯ ಕೊರಿಯಾಗ್ರಫಿ ಶಾಲೆ ತೆರೆಯುವಂತೆ ಬೆನ್ನುತಟ್ಟಿದವರು. ಅದರ ಫಲವೇ ಆಗಸ್ಟ್ 17, 1964ರಲ್ಲಿ ನಾಟ್ಯ ಇನ್ಸ್‍ಟಿಟ್ಯೂಟ್ ಆಫ್ ಕೊರಿಯಾಗ್ರಫಿಯ ಹುಟ್ಟು.

stmdk17 mayarao_1000x800_03

1986ರ ಸಾರ್ಕ್ ಕಾನ್ಫರೆನ್ಸ್ ಹೊತ್ತಿಗೆ ನಾನು ಬೆಂಗಳೂರಿಗೆ ಬರುವ ಹಾಗಾಯಿತು. ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಮ್ಮ ಕೈಗಿತ್ತರು. ರಾಜೀವ್ ಗಾಂಧಿಯವರ ಸಮ್ಮುಖ ಲಾಲ್‍ಭಾಗ್‍ನಲ್ಲಿ ಬಹಳ ದೊಡ್ಡ ಕಾರ್ಯಕ್ರಮವೇ ನಡೆಯಿತು. ಆಗ ಹೆಗಡೆಯವರು ‘ನೀವ್ಯಾಕೆ ಇಲ್ಲೇ ನೆಲೆಸಿ ನಮ್ಮ ರಾಜ್ಯದಲ್ಲೇ ಕಲಾಜಗತ್ತನ್ನು ಬೆಳೆಸಬಹುದಲ್ಲಾ. ಅದಕ್ಕೆ ಬೇಕಾದ ಸಹಕಾರವನ್ನು ಮಾಡಿಕೊಡೋಣ’ ಎಂದು ಭರವಸೆ ನೀಡಿ ಅನುಕೂಲ ಮಾಡಿಕೊಟ್ಟರು.

ಆಗ ನನ್ನೊಂದಿಗೆ ನೆರವಾದವರು ಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಚಿರಂಜೀವಿ ಸಿಂಗ್, ಸಚಿವರಾದ ಜೀವರಾಜ ಆಳ್ವ, ಎಂ.ಪಿ.ಪ್ರಕಾಶ್, ನಿರ್ದೇಶಕರಾದ ವಿಠಲಮೂರ್ತಿ. ಸಂಸ್ಥೆಯ ನಿರ್ಮಾಣಕ್ಕೆ ಜಾಗ ನೀಡಿದವರು ವಿಮಲಾ ರಂಗಾಚಾರ್. ಹೀಗೆ ಎಲ್ಲರ ಪ್ರೋತ್ಸಾಹದಿಂದ ನಮ್ಮ  ಇಡೀ ಸಂಸ್ಥೆ 1987 ಜುಲೈ17ಕ್ಕೆ ದೆಹಲಿಯಿಂದ ಬೆಂಗಳೂರಿಗೆ ಶಿಫ್ಟ್ ಆಯಿತು. 4 ವರುಷಗಳ ಸತತ ಪ್ರಯತ್ನದಿಂದ 1992ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಮಾನ್ಯತೆ ದೊರೆತು ಬಿ.ಎ ತರಗತಿಗಳನ್ನು ಪ್ರಾರಂಭಿಸಿದೆವು. ಇಂದಿಗೂ ನಾಟ್ಯ ಇನ್ಸಿಟಿಟ್ಯೂಟ್ ಆಫ್ ಕಥಕ್ ಅಂಡ್ ಕೊರಿಯೋಗ್ರಫಿ ದೇಶದ ಪ್ರಥಮ ಏಕಮಾತ್ರ ಕೊರಿಯೋಗ್ರಫಿ ಸಂಸ್ಥೆಯೆಂದು ಹೆಸರಾಗಿ ಸಾಕಷ್ಟು ಮಂದಿ ಕಲಾವಿದರಿಗೆ ಕಲೆಯನ್ನು ಧಾರೆಯೆರೆದಿದೆ.

ನೃತ್ಯ ಕಲಿಸುವ ಹಾದಿಯಲ್ಲಿ ಸವಾಲು, ಎಡರುತೊಡರುಗಳು…
ಪ್ರಾರಂಭದಲ್ಲಿ ಸಾಕಷ್ಟು ಸವಾಲುಗಳಿತ್ತು. ಆ ಕಾಲಕ್ಕೆ ಬೆಂಗಳೂರು ಸೌಮ್ಯ, ಪ್ರಶಾಂತವಾಗಿದ್ದ, ಕಲಾಭಿರುಚಿಯಿರುವ ನಗರವಾದರೂ ಕಥಕ್‍ಗೆ ಒತ್ತಾಸೆಯಾಗಿ ನಿಲ್ಲಬಲ್ಲ ಹಿಮ್ಮೇಳದ ಕಲಾವಿದರಿರಲಿಲ್ಲ. ಎಲ್ಲರನ್ನೂ ದೆಹಲಿಯಿಂದ ಕರೆಸಿಕೊಳ್ಳಬೇಕಿತ್ತು. ಆದರೆ ನಿಧಾನವಾಗಿ ಒಬ್ಬೊಬ್ಬರನ್ನೇ ತರಬೇತಿ ಮಾಡಿಸಿ ಈಗ ಸಾಕಷ್ಟು ಸಂಖ್ಯೆಯ ಕಲಾವಿದರು ಕರ್ನಾಟಕದಲ್ಲಿ ಬೆಳೆದಿದ್ದಾರೆ. ಇಂದಿಗೆ ಕಥಕ್ ಮತ್ತು ಕೊರಿಯೋಗ್ರಫಿಯಲ್ಲಿ ಮೂರು ವರ್ಷದ ಬಿ.ಎ. ಪದವಿ ನೀಡುವ ಏಕೈಕ ಸಂಸ್ಥೆಯಾಗಿ ನಮ್ಮ ನಾಟ್ಯ ಇನ್ಸ್ಟಿಟ್ಯೂಟ್.

ಅದರೊಳಗೆ ಫೈನ್‍ಆಟ್ರ್ಸ್ ಕುರಿತ ಅಪರೂಪದ 3000ಕ್ಕೂ ಹೆಚ್ಚು ಕೃತಿಗಳ ಗ್ರಂಥಭಂಡಾರವಿದೆ. ಕೊರಿಯೋಗ್ರಫಿಗೆ ಸಂಬಂಧಿಸಿದ ಆಡಿಯೋ ವಿಡಿಯೋ ಸಿಡಿಗಳಿವೆ. ಡಿಜಿಟಲ್ ತಂತ್ರಜ್ಞಾನ ಉಪಯೋಗಿಸಿ ಕಳೆದ 7 ದಶಕಗಳ ಹಲವು ನೃತ್ಯದ ಛಾಯಾಚಿತ್ರಗಳ ಸಂಗ್ರಹ ಮಾಡಿಟ್ಟಿದ್ದೇವೆ.

SSD578 re7h

0

ಅಗೌರವದ ಮಾತು ಅಂತಲ್ಲ; ಆದ್ರೂನೂ ನಾನು ಕಲಿಸುವ ಕಾಲಕ್ಕೇನೇ ದೆಹಲಿ, ಬೆಂಗಳೂರಿನಲ್ಲೆಲ್ಲಾ ಎಷ್ಟೋ ಫೇಮಸ್ ಗುರುಗಳು ‘ಮಾಯಾರಾವ್ ಏನು ಮಹಾ ಕಲಿಸ್ತಾರೆ? ಅದೇನದು ಕೊರಿಯೋಗ್ರಫಿ’ ಅಂತೆಲ್ಲಾ ಅವ್ರ ಸ್ಟುಡೆಂಟ್ಸ್‍ಗಳನ್ನ ನಮ್ಮ ಡಿಗ್ರಿ ಕೋರ್ಸ್‍ಗೆ ಸೇರೋಕೆ ಬಿಡ್ತಿರ್ಲಿಲ್ಲ. ಒಂದುವೇಳೆ ಸ್ಟುಡೆಂಟ್ಸ್ ಇಷ್ಟಪಟ್ಟು ಬಂದ್ರೂನೂ ಅವರಿಗೆ ಇಲ್ಲಸಲ್ಲದ ಕಿರಿಕಿರಿ ಕೊಡ್ತಾ ಇದ್ದದ್ದೂ ನನ್ನ ಗಮನಕ್ಕೆ ಬಂದಿದೆ. ಹೀಗಾಗಿ ಒಂದಷ್ಟು ಜನ ಕೋರ್ಸ್ ಕಂಪ್ಲೀಟ್ ಮಾಡೋಕ್ ಮುಂಚೆನೇ ಅರ್ಧಕ್ಕೇ ಬಿಟ್ಟುಹೋದದ್ದೂ ಇದೆ. ನಾನು ಭರತನಾಟ್ಯ, ಕೂಚಿಪುಡಿ ಹೀಗೆ ಬೇರೆ ಬೇರೆ ಕ್ಲಾಸಿಕಲ್ ಡ್ಯಾನ್ಸ್ ಕಲಿಯೋರನ್ನ ದಾರಿ ತಪ್ಪಿಸ್ತೇನೆ ಅಂತ ಅವ್ರಿಗೆ ಇದ್ದಿರಬೌದು.

ಆದರೆ ಅದೇ ಅಲರಿಪು, ತಿಲ್ಲಾನವೇ ಮಾಡಿಕೊಂಡು ಕೂರೋದಲ್ಲ; ಬದಲಾಗಿ ಅವುಗಳನ್ನು ಕಣ್ಣಿಗೆ ಆಪ್ತವೆನಿಸುವಂತೆ ಮಾಡಬೇಕು ಎನ್ನುವುದು ನನ್ನ ಯೋಚನೆ. ಹಾಗಂತ ಟ್ರೆಡಿಶನಲ್ ಆಗಿ ಬೆಳೆದಿರೋ ಡ್ಯಾನ್ಸ್‍ಐಟಂಗಳನ್ನ ಬಿಡಬೇಕೂಂತ ಅಲ್ಲ. ಅದ್ರಲ್ಲೇ ಹೊಸದೃಷ್ಟಿಯನ್ನ ಕಂಡುಕೊಳ್ಳಬಹುದಲ್ವಾ? ಸಮಕಾಲೀನವಾಗಿ ಯೋಚಿಸ್ಬಹುದಲ್ವಾ? ಯಕ್ಷಗಾನದಂತಹ ನಮ್ಮ ನಾಡಿನ ಕಲೆಗಳನ್ನು ಬಳಸಿಕೊಳ್ಬೋಹ್ದಲ್ವಾ? ಆಗ ಜನರಿಗೆ ಇನ್ನಷ್ಟು ಎಫ್ಹೆಕ್ಟಿವ್ ಆಗಿ ತಲ್ಪುತ್ತೆ.

ನಾನು ನಮ್ಮ ಸಂಸ್ಥೆಯ ಮೂಲಕ ಮಾಡ್ತಾ ಇದ್ದದ್ದು ಅವರವರ ಡ್ಯಾನ್ಸ್‍ಸ್ಟೈಲ್‍ನೊಳಗೆ ಎಷ್ಟೊಂದು ವಿಸ್ತಾರ ಇದೆ, ಎಷ್ಟೊಂದು ಸೃಜನಶೀಲವಾಗಿ ಮಾಡಬೌಹ್ದು, ಎಲ್ಲೆಲ್ಲಾ ಹೊಸ ಆಯಾಮಗಳಿವೆ ಅಂತ ತಿಳಿಸಿಕೊಡುವ ಕಾಯಕ. ಉದಾಹರಣೆಗೆ ಇಂದಿಗೆ ಕೂಚಿಪುಡಿಯಲ್ಲಿ ಸಾಕಷ್ಟು ಹೆಸರು ಮಾಡಿರೋ ರಾಜಾರೆಡ್ಡಿ ಮೂಲತಃ ಕಥಕ್ ಕಲಾವಿದರು. ಸ್ಕಾಲರ್‍ಶಿಪ್‍ನಲ್ಲಿ ಕೊರಿಯೋಗ್ರಫಿ ಕೋರ್ಸ್ ಮಾಡೋಕೆ ಅಂತ ಬಂದಿದ್ರು. ನಾನೇ ಅವರ ಆಸಕ್ತಿಯನ್ನು ಗಮನಿಸಿ ‘ಅವರ ರಾಜ್ಯದ ಕಲೆ- ಕೂಚಿಪುಡಿಯನ್ನ ಕಲಿತು ಚೆನ್ನಾಗಿ ಬೆಳೆಸಬೇಕು’ ಅಂತ ಹೇಳಿ ಆ ನೃತ್ಯಶೈಲಿಯತ್ತ ಮುಖಮಾಡಲು ಹೇಳಿಕೊಟ್ಟೆ. ಇವತ್ತು ಕೂಚಿಪುಡಿ ಜಗತ್ತಿನಲ್ಲೇ ಅವರು ಹೆಸರಾಂತ ವ್ಯಕ್ತಿಯಾಗಿ ಬೆಳೆದಿದ್ದಾರೆ.

ಹಾಗೆಯೇ ಭರತನಾಟ್ಯದ, ಯಕ್ಷಗಾನದ ಕಲಾವಿದರೂ ಸಾಕಷ್ಟು ಮಂದಿ ಇಲ್ಲಿ ಬಂದು ಕಲಿತು ಭರವಸೆಯ ಕಲಾವಿದರಾಗಿದ್ದಾರೆ. ಯಕ್ಷಗಾನ ಕಲಾವಿದರಾದ ದಿ.ಶಂಭು ಹೆಗಡೆ ಮತ್ತು ಅವರ ತಲೆಮಾರು, ಕಥಕ್‍ನ ಕಲಾದಂಪತಿ ನಿರುಪಮಾ-ರಾಜೇಂದ್ರ, ನಂದಿನಿ ಮೆಹ್ತಾ, ಸೈಯದ್ ಸಲ್ಲಾವುದ್ದೀನ್ ಪಾಷಾ, ಸ್ವಪ್ನಸುಂದರಿ.. ಹೀಗೆ ಹೇಳುತ್ತಾ ಹೊರಟರೆ ಸುಮಾರು 3000ಕ್ಕೂ ಮಿಕ್ಕಿದ ಕಲಾವಿದರಿಗೆ, ಅವರ ಕಲೆಗೆ ಪೋಷಣೆ ಕೊಟ್ಟಿದೆ.

ಕಲೆ ಮತ್ತು ಮಾಧ್ಯಮದ ಸಂಬಂಧದ ಬಗ್ಗೆ ನಿಮ್ಮ ಅಭಿಪ್ರಾಯ ?
ಮೊದಲೆಲ್ಲಾ ಪತ್ರಿಕೆಗಳಲ್ಲಿ ಕಲೆಯ ಕುರಿತು ಚೆನ್ನಾಗಿ ವಿಮರ್ಶೆ ಕಾಲಂ ಬರ್ತಾ ಇತ್ತು. ಆದರೆ ಈಗ ಅದೊಂದೂ ಇಲ್ಲ. ಎಲ್ರನ್ನೂ ಹೊಗಳೋದೇ ಇವತ್ತಿನ ವಿಮರ್ಶೆಯ ಕೆಲಸ ಆಗಿದೆ. ಕಾರ್ಯಕ್ರಮದ ವರದಿಯೇ ವಿಮರ್ಶೆ ಅನ್ನೋ ಮಟ್ಟಿಗಿನ ಅಜ್ಞಾನ ಬೆಳೆದಿದೆ. ಮೊದಲಿನ ಪವಿತ್ರತೆ ಇಲ್ಲ. ಬಿವಿಕೆ ಶಾಸ್ತ್ರಿಯವರಂತಹ ಒಳ್ಳೆಯ ವಿಮರ್ಶಕರು, ಇಂಟ್ರವ್ಯೂ ಮಾಡೋವ್ರು ಎಲ್ಲೋ ಕಾಣದ ಲೋಕಕ್ಕೆ ‘ಹೊರಟುಹೋದರು’. ಅವ್ರೆಲ್ಲಾ ಎಷ್ಟೊಂದು ನಿಷ್ಟಾವಂತರೆಂದರೆ ಬರೋ ಹೋಗೋ ಬಸ್ ಚಾರ್ಚೂ ಕೂಡಾ ತೆಗೆದುಕೊಳ್ತಿರ್ಲಿಲ್ಲ. ಆದ್ರೆ ಈಗ ಕಾರ್ ಮಾಡ್ಕೊಂಡು ಕರ್ಕೊಂಡು ಬಂದು ಸನ್ಮಾನ ಮಾಡಿಯೇ ಬರೆಸಬೇಕಾದ ದುರವಸ್ಥೆ. ಕಲಾವಿದರಾದವರು ಮಾಧ್ಯಮಗಳನ್ನು ಬೇಕಾಬಿಟ್ಟಿ ಸ್ವಾರ್ಥಕ್ಕೆ ಬಳಸಿಕೊಳ್ಳಬಾರದು.

ಕಥಕ್ ಬಗ್ಗೆ ಸಾಕಷ್ಟು ಮಂದಿಗೆ ತಿಳಿದೇ ಇಲ್ಲ ಎನ್ನುವುದು ಬೇಸರ…
ಆಗಿನ ಕಾಲಕ್ಕೆ ನನಗೆ ಕಲಿಯಲು ಭರತನಾಟ್ಯದ ಅವಕಾಶ ಹೇರಳವಾಗಿಯೇ ಇತ್ತು. ಆದರೆ ನನಗೆ ಯಾವುದು ಹೊಂದುತ್ತದೆ ಎಂದು ಅರಿತುಕೊಂಡು ಕಥಕ್‍ನ್ನು ಆಯ್ಕೆ ಮಾಡಿದೆ. ಕಥಕ್‍ನ ಶೀಘ್ರಸ್ಪಂದನೆ ನನಗೆ ಮೊದಲಿನಿಂದಲೂ ತುಂಬಾ ಇಷ್ಟ. ಜೊತೆಗೆ ಹಿಂದೂಸ್ಥಾನಿ ಸಂಗೀತ ಕಲಿತೆದ್ದನಾದ್ದರಿಂದ ಕಥಕ್ ತುಂಬಾ ಹಿಡಿಸಿತು. ಹಿಂದೂಸ್ಥಾನಿ ಸಂಗೀತದಲ್ಲಿ ಕಲಾವಿದನಿಗೆ ಸಂಗೀತ ಅಭಿವ್ಯಕ್ತಿಗೆ ಹೆಚ್ಚು ಅವಕಾಶಗಳಿವೆ. ಅದೇ ರೀತಿ ಕಥಕ್ ಕೂಡಾ. ನಮ್ಮ ಭಾವನೆ, ಕಲ್ಪನೆಗಳನ್ನು ಹೆಣೆಯಲು ಅನುಕೂಲವಿದೆ. ಇದು ಭರತನಾಟ್ಯದಲ್ಲಿ ಇಲ್ಲ ಅಂತಲ್ಲ್.ಅ ಆದರೆ ಅದನ್ನು ಬಳಸಿಕೊಳ್ಳುವವರು ಕಡಿಮೆ.

ಆದರೆ ವಿಪರ್ಯಾಸ ನೋಡಿ, ಕಥಕ್ ಮೇಲೆ ಕೆಲಸ ಆಗಿರೋದು ತುಂಬ ಕಡಿಮೆ, ನಿಜ. ಉತ್ತರಭಾರತದ ಮೇಲೆ ಸಾಕಷ್ಟು ಅತಿಕ್ರಮಣ ಆಗಿರೋವಷ್ಟು ದಕ್ಷಿಣದಲ್ಲಿ ಆಗಿಲ್ಲ. ಅದ್ರಿಂದ ಸಾಕಷ್ಟು ಶಾಸ್ತ್ರದ ಪುಸ್ತಕಗಳು ನಾಶವಾಗಿವೆ. ಇದರಿಂದಾಗಿ ಕಥಕ್ ನಂತಹ ಡ್ಯಾನ್ಸ್ ಫಾಮ್ರ್ಸ್‍ಗಳು ಬೇರೆ ಬೇರೆ ರಾಜರ ಕಾಲದಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ. ಹಾಗೆ ನೋಡಿದ್ರೆ ಕಥಕ್‍ನಲ್ಲಿಯೂ ಎಲ್ಲಾ ಹಸ್ತ-ಮುದ್ರೆಗಳನ್ನ ಬಳಸ್ತಿದ್ರೂ ಅದರ ಹೆಸರು ಹೇಳೋಕೆ ಕಲಾವಿದರಿಗೆ ಗೊತ್ತಾಗ್ತಾ ಇರ್ಲಿಲ್ಲ. ಶಾಸ್ತ್ರ, ಚರಿತ್ರೆ ಇದ್ರೂ ಕಥಕ್ ತುಂಬಾ ವಿಸ್ತಾರವಾಗಿ ಹರಡಿದ್ದರಿಂದ ಅದೊಂಥರಾ ಫ್ರೀಸ್ಟೈಲ್ ಅಂತಾನೇ ಎಲ್ರೂ ಭಾವಿಸೋ ಹಾಗಾಯ್ತು.

ಭರತನಾಟ್ಯದಲ್ಲಿರೋದು ಕಥಕ್‍ನಲ್ಲೂ ಇದೆ. ಆದರೆ ಭರತನಾಟ್ಯಕ್ಕೆ ಸಿಕ್ಕಿರೋ ಅನುಕೂಲ ಕಥಕ್‍ಗೆ ಸಿಕ್ಕಿಲ್ಲ. ಅದನ್ನ ಎಲ್ರೂ ಅರ್ಥ ಮಾಡ್ಕೋಬೇಕು. ಭರತನಾಟ್ಯದಲ್ಲಿ ಕಂಫರ್ಟ್ ಜೋನ್ ಇರುವುದರಿಂದ ಬೇರೆ ಡ್ಯಾನ್ಸ್ ಫಾಮ್ರ್ಸ್‍ಗಳ ವಾಸ್ತವ ಗೊತ್ತಾಗೋದಿಲ್ಲ್ಲ. ಕಥಕ್‍ನ್ನು ಸುಮ್ ಸುಮ್ನೆ ದರ್ಬಾರೀ ಡ್ಯಾನ್ಸ್ ಅಂತೆಲ್ಲಾ ದೂರ್ತಾರೆ. ದೇವದಾಸಿಯರು ಮಾಡುತ್ತಿದ್ದ ‘ಕೂತ್ತು’, ದಾಸೀ ಆಟ್ಟಂ’ಗೆ ಒಳ್ಳೆಯ ಮಾನ್ಯತೆ ದೊರಕಲಿ ಅಂತ ಸ್ವಲ್ಪ ಬದಲಾವಣೆಗಳನ್ನು ಮಾಡಿ ರುಕ್ಮಿಣಿದೇವಿ ಅರುಂಡೇಲ್ ಮತ್ತು ಕೃಷ್ಣ ಅಯ್ಯರ್ ‘ಭರತನಾಟ್ಯ’ ಅಂತ ಕರೆದ್ರು. ಆದ್ರೆ ಭರತನಾಟ್ಯವೆಂದರೆ ನಾಟ್ಯಶಾಸ್ತ್ರಕ್ಕೆ ಹತ್ತಿರ ಅನ್ನೋ ಸುಳ್ಳು ಚೆನ್ನಾಗಿ ಜನರ ಮನಸ್ಸಿನಲ್ಲಿ ಕೂತಿತು ! ಅದೇ ಮುಂದೆ ‘ಸನಾತನ ನೃತ್ಯಪದ್ಧತಿ ಅಂದರೆ ಭರತನಾಟ್ಯ’ ಅನ್ನೋ ಭಾವನೆಯನ್ನ ಬೆಳೆಸಿದೆ. ರುಕ್ಮಿಣಿದೇವಿ ಹೇಳಿದ್ದನ್ನು ನಂಬಿದ ಜನ, ರಾಘವನ್‍ರಂತಹ ವಿದ್ವಾಂಸರು ಹೇಳಿದ ವಾಸ್ತವವನ್ನು ನಂಬ್ಲಿಲ್ಲ. ಭರತನ ನಾಟ್ಯಶಾಸ್ತ್ರವೇ ಬೇರೆ; ಭರತನಾಟ್ಯ ಅನ್ನೋ ಡ್ಯಾನ್ಸ್ ಫಾರ್ಮೇ ಬೇರೆ. ಆದ್ರೆ ಭಾರತದ ಎಲ್ಲಾ ನೃತ್ಯಪದ್ಧತಿಗಳಿಗೆ ನಾಟ್ಯಶಾಸ್ತ್ರವೇ ಮೂಲ ಅನ್ನೋದನ್ನ ಮರೆಯಬಾರದು. ಕಲೆ ಯಾವತ್ತೂ ಕಲಾವಿದರಿಗಿಂತ ದೊಡ್ಡದು.

ಅಷ್ಟೇ ಅಲ್ಲ, ಬಹಳಷ್ಟು ಜನರಿಗೂ, ಆರಂಭಕ್ಕೆ ಕಲಿಯಲು ಬರುವ ಹಲವು ವಿದ್ಯಾರ್ಥಿಗಳಿಗೂ ಕಥಕ್ ಎಂದರೆ ಚಕ್ಕರ್ ಹಾಕುವುದು, ಒಂದಷ್ಟು ರಭಸದ ಕಾಲಿನ ಚಲನೆಗಳು ಎಂದಷ್ಟೇ ತಿಳಿದಿದೆ. ಒಮ್ಮೆ ನಾನು ಮುಂಬೈನಲ್ಲಿ ನೃತ್ಯಪ್ರದರ್ಶನದಲ್ಲಿದ್ದಾಗ ಆಯೋಜಕರು ಮಧ್ಯದಲ್ಲಿ ಎದ್ದು ನಿಂತು ನಿಜವಾದ ಕಥಕ್ ಮಾಡಿ ತೋರಿಸ್ತೀರಾ ಎಂದು ಕೇಳಿದರು. ಭಾವಾಭಿನಯದ ಅಂಗದಲ್ಲಿ ತಲ್ಲೀನವಾಗಿದ್ದ ನನಗೆ ಅವರ ಆಶಯ ಕೇವಲ ‘ಚಕ್ಕರ್’ನ ನೃತ್ತಭಾಗ ಎಂಬುದು ಅರ್ಥವಾಯಿತು.

ತಕ್ಷಣ ಉತ್ತರಿಸಿದೆ- ನನ್ನ ಗುರುಗಳು ಭಾವಾಭಿನಯವೂ ಕಥಕ್‍ನ ಬಹುಮುಖ್ಯ, ಅನಿವಾರ್ಯ ಅಂಗ ಎಂದು ಕಲಿಸಿದ್ದಾರೆ. ಅದು ನಿಮಗೆ ಹಿಡಿಸುವುದಿಲ್ಲ ಎಂದರೆ ನನಗೆ ನಿಮ್ಮ ಸಂಭಾವನೆ ಬೇಡ. ನಾನೀಗಲೇ ಹೊಟುಹೋಗುತ್ತೇನೆ ಎಂದೆ. ತಕ್ಷಣ ಅವರು ಕ್ಷಮೆಯಾಚಿಸಿದರು. ಮಾರನೆಯ ದಿನ ಪತ್ರಿಕೆಗಳಲ್ಲಿ ಅಪರೂಪದ ಸೌಂದರ್ಯ ಮತ್ತು ಅಭಿವ್ಯಕ್ತಿಯ ಕಥಕ್ ಮಾಯಾರಾವ್‍ರಿಂದ ಅಂತ ವರದಿ ಬಂತು !

ನಿಮ್ಮ ಕಾಲಕ್ಕೂ ಈಗಿನ ಕಾಲಕ್ಕೂ ನೃತ್ಯಕಲಿಕೆಯ ವ್ಯತ್ಯಾಸ ಹೇಗಿದೆ?
ನಾವು ಕಲಿಯೋ ಕಾಲಕ್ಕೆ ಬೆರಳೆಣಿಕೆಯಷ್ಟು ಕಲಾವಿದರು ಮಾತ್ರ ಇದ್ರು. ಈಗ ಇಷ್ಟಪಟ್ಟು ಕಲಿಯೋವ್ರ ಸಂಖ್ಯೆ ಜಾಸ್ತಿ ಆಗಿದೆ. ಹಾಗಂತ ಸಮಸ್ಯೆಗಳೇ ಇಲ್ಲ ಅಂತಲ್ಲ. ಬಹಳಷ್ಟು ಸವಾಲುಗಳಿವೆ. ಆದ್ರೆ ಅದು ಡ್ಯಾನ್ಸ್ ಅಂತ ಮಾತ್ರ ಅಲ್ಲ; ಎಲ್ಲ ಫೀಲ್ಡ್‍ನಲ್ಲೂ ಇದೆ. ಇಂದಿಗೆ ಎಷ್ಟೋ ಮಂದಿ ಪ್ರತಿಭೆಯಿದ್ದೂ ಬೇರೆ ಕೋರ್ಸ್‍ಗಳನ್ನು ಆಯ್ಕೆ ಮಾಡಿಕೊಂಡು ಡ್ಯಾನ್ಸ್ ಮರೆಯುತ್ತಾರೆ. ಅದ್ಯಾಕೆ ಅವರು ನೃತ್ಯ ಮತ್ತು ಅದರ ಸಂಬಂಧಿತ ಕ್ಷೇತ್ರಗಳನ್ನು ಆಯ್ಕೆ ಮಾಡಿಕೋಬಾರದು? ಇರಲಿ, ಬದಲಾವಣೆ ಏನಿದ್ದರೂ ಅವರವರ ಮನಸಿನಿಂದ ಬರ್ಬೇಕು.

mayar11  shakuntala consultant choreographer riga ballet stanslevesky theatre

ನಮ್ಮ ಕಾಲಕ್ಕೆ ಅವಕಾಶಗಳ ಕೊರತೆಯಿತ್ತು. ಆದರೆ ಈಗ ಹಾಗಲ್ಲ. ಹೊಸ ತಲೆಮಾರಿನ ಧಾವಂತಗಳು ಬೇರೆಯೇ ಇವೆ ! ಆದರೆ ಅವರಲ್ಲಿ ಪ್ರತಿಭೆಯೂ ಸಾಕಷ್ಟಿದೆ.ಮಕ್ಕಳು ಕಲೀತಾರೆ ಅಂತಾದ್ರೆ ಪೋಷಕರು ಬೇಕಾದ ಹಾಗೆ ಸವಲತ್ತು ಮಾಡಿಕೊಡುತ್ತಾರೆ. ಎಲ್ಲರಿಗೂ ನೃತ್ಯಕಲಿಕೆಗಿಂತ ಪ್ರದರ್ಶನದ ಮೇಲೆಯೆ ಕಣ್ಣು.

ಇಂದು ಎಷ್ಟು ಜನ ಕಲಾವಿದರಿಗೆ ಸಂಗೀತ ಗೊತ್ತಿದೆ ಹೇಳಿ? ಸಂಗೀತವೇ ಗೊತ್ತಿಲ್ಲವೆಂದ ಮೇಲೆ ಮನೋಧರ್ಮದ ಕಲ್ಪನೆಯಾದರೂ ಎಲ್ಲಿಂದ ಬರಬೇಕು? Music makes dance visible. ಬೆಳಗ್ಗೆ ಒಂದು ಡ್ಯಾನ್ಸ್ ಪ್ರೋಗ್ರಾಂ, ರಾತ್ರೆ ಮತ್ತೊಂದು ಡ್ಯಾನ್ಸ್ ಪ್ರೋಗ್ರಾಂ ಅಂತೆಲ್ಲಾ ಓಡಾಡುವಾಗ ಇದನ್ನೆಲ್ಲಾ ಚಿಂತನೆ ಮಾಡಲು ಸಮಯ ಎಲ್ಲಿದೆ? ಆದ್ದರಿಂದಲೇ ನೃತ್ಯಪ್ರದರ್ಶನಗಳ ಗುಣಮಟ್ಟ ಕ್ಷೀಣಿಸ್ತಾ ಇದೆ. ಕಲೆಯನ್ನು ಜೀವನಕ್ಕೆ ಉಪಯೋಗಿಸಿಕೊಳ್ಳುವುದು ಗೊತ್ತು; ಜೀವನವಾಗಿಸಿಕೊಳ್ಳುವುದು ಗೊತ್ತಿಲ್ಲ ಅಂದ್ರೆ ಕಲೆ ನರಳುತ್ತದೆ.

ಅದರಲ್ಲೂ ನೃತ್ಯವನ್ನೇ ತಮ್ಮ ಜೀವನವೃತ್ತಿಯನ್ನಾಗಿ ಮಾಡಿಕೊಳ್ಳುವವರು ತಾವೂ ಬದುಕುವುದರೊಂದಿಗೆ ಕಲೆಯನ್ನು ಬಾಳಿಸಬೇಕು. ಹಾಗಂತ ಯಶಸ್ಸಿಗಾಗಿ ಪ್ರಚಾರವೂ ಅಗತ್ಯ. ಆದರೆ ಅದು ನಮ್ಮ ನೃತ್ಯಕ್ಕೂ, ಜೀವನಕ್ಕೂ ಹೊಂದಿಕೆಯಾಗುವಂತಿರಬೇಕು. ಹೆಸರಿಗಾಗಿ ಏನೇನೋ ಮಾಡುವುದು ಒಳ್ಳೆಯದಲ್ಲ. ಅಡ್ಡದಾರಿ ತುಳಿಯುವುದು ಭೂಷಣವಲ್ಲ. ಅವರವರ ಪ್ರತಿಭೆ, ಗುಣಮಟ್ಟಗಳೇ ಹೇಗೆ ಉಳಿದ ವೃತ್ತಿಗಳಲ್ಲಿದ್ದವರಿಗೆ ವರವಾಗುತ್ತದೆಯೋ ಹಾಗೆಯೇ ಇಲ್ಲಿಯೂ ಕೂಡಾ. Let your art speak for you.

ಕೊರಿಯೋಗ್ರಫಿ = Old wine in new bottle ??? !!…
ಸಾಮಾನ್ಯವಾಗಿ ಕೊರಿಯೋಗ್ರಫಿ ಎಂಬ ಪದ ಸಮೂಹನೃತ್ಯ/ನಾಟಕಕ್ಕೆ ಹೆಚ್ಚಾಗಿ ಬಳಸಲ್ಪಡುತ್ತದೆ ಅಂತ ತಪ್ಪು ತಿಳಿಯುವವರೂ ಇದ್ದಾರೆ. ಕೊರಿಯೋಗ್ರಫಿ ಅಂತ ಹೆಸರು ಕೇಳಿದಾಕ್ಷಣ ಅದು ಭಾರತದ್ದು ಅಲ್ಲ, Wesಣನಿಂದ ಬಂದದ್ದು ಅಂತಂದ್ಕೊಳ್ಳೋರೇ ಹೆಚ್ಚು. ಕಾರಣ ಇದು ಮೂಲತಃ ಗ್ರೀಕ್ ಪದ. Xoro means Dance and Graph means to write. ಆದರೆ ಅದು ಭರತಮುನಿಯ ನಾಟ್ಯಶಾಸ್ತ್ರದಲ್ಲೇ ಹೆಚ್ಚು ವಿಸ್ತಾರವಾಗಿ ಇದು ಬರೆಯಲ್ಪಟ್ಟಿದೆ.

  with balley dancers  prof170a

shambhu maharaj, birju, chitra, maya

ಭರತಮುನಿ ಕೊರಿಯೋಗ್ರಫಿಯ ಎಲ್ಲ ಆಯಾಮಗಳನ್ನೂ ಸ್ಪರ್ಶಿಸಿದ್ದಾನೆ. ಒಟ್ಟಂದದ ರಂಗಾಭಿವ್ಯಕ್ತಿಯೇ ಈ ಕೊರಿಯೋಗ್ರಫಿ. ಅದಕ್ಕೆ ನೃತ್ಯದ ಎಲ್ಲ ವಿಭಾಗಗಳ ಹಿಡಿತ ಇರಬೇಕು. ಚಲನವಲನಗಳ ಮೇಲೆ ಪ್ರಾವೀಣ್ಯತೆ, ಪ್ರತಿಭೆ ಇರಬೇಕು. ಆತ ಎಲ್ಲದಕ್ಕೂ ಜವಾಬ್ದಾರ.

ಮೊದಲು ಈ ಪದವನ್ನು ಅರ್ಥ ಮಾಡಿಕೊಳ್ಳುತ್ತಿದ್ದ ರೀತಿಗೂ ಈಗ ಬಳಕೆಯಾಗುತ್ತಿರುವ ರೀತಿಗೂ ತುಂಬಾ ವ್ಯತ್ಯಾಸ ಇದೆ. ಮನಸ್ಸಿನ ಕಲ್ಪನೆಗಳನ್ನು ನೃತ್ಯಕ್ಕಾಗಿ ವ್ಯಕ್ತವಾಗಿ ಪ್ರದರ್ಶಿಸುವ ಕ್ರಮವೇ ಕೊರಿಯೋಗ್ರಫಿ. ಇದು Dance movement  Arrangement  ಅಲ್ಲ. ಬದಲಾಗಿ ಸಮಗ್ರ ಭಾವಾಭಿವ್ಯಕ್ತಿಯ ಪರಿಕಲ್ಪನೆ.

ಇದು ಸಮೂಹನೃತ್ಯಕ್ಕಷ್ಟೇ ಒಗ್ಗುವ ಮಾತಲ್ಲ; ಏಕಾಹಾರ್ಯವಾದ ವ್ಯಕ್ತಿಗತ(Solo)ನೃತ್ಯಕ್ಕೂ ಬಳಸಬಹುದು. ಹಾಗಂತ ಮತ್ತೊಬ್ಬರ ಕೃತಿ/ಭಾವಾಭಿವ್ಯಕ್ತಿಯನ್ನು ಪುನಾ ಜೋಡಿಸುವುದು, ಹೊಂದಿಸುವುದು ಕೊರಿಯೋಗ್ರಫಿ ಅಲ್ಲ. ಒಂದು ಕೃತಿ/ಚಿಂತನೆಯನ್ನು ರಂಗಾಭಿವ್ಯಕ್ತಿಗೆ ಅನುಕೂಲಕರವಾಗಿ ಹೊಂದುವಂತೆ ಮೂರ್ತರೂಪಕ್ಕೆ ತರುವಲ್ಲಿ ಗಾಯನ, ನರ್ತನ, ನಾಟಕ, ವಾದ್ಯ ಇಂತಹ ಹಲವಾರು ಸಂಗತಿಗಳನ್ನು ಕ್ರಮವತ್ತಾಗಿ ಒಗ್ಗುವಂತೆ ನಿರೂಪಿಸುವುದೇ ಕೊರಿಯೋಗ್ರಫಿ.

ಒಟ್ಟಿನಲ್ಲಿ ಯಾವುದೇ ನೃತ್ಯಪ್ರದರ್ಶನವಾದರೂ ಕೂಡಾ ಸಂಗೀತದ ಸ್ವರಪ್ರಸ್ತಾರದ ರೀತಿ ಇರಬೇಕು. ಆಗ ಪ್ರೇಕ್ಷಕರಿಗೂ ಕುತೂಹಲವಿರುತ್ತದೆ. ರಾಗಗಳನ್ನು ಭಾವಕ್ಕೆ ಸರಿಯಾಗಿ ಹೊಂದಾಣಿಕೆ ಮಾಡುವುದು ಗೊತ್ತಿರಬೇಕು. ಸಂಗೀತದಲ್ಲಿರುವ ಮನೋಧರ್ಮದ ಕಲ್ಪನೆ ಇತ್ತೀಚೆಗೆ ನೃತ್ಯಕ್ಕೆ ಇಲ್ಲವೇ ಇಲ್ಲದಂತಾಗಿದೆ.

ಹೊಸತಿನ ದಾರಿಯಲ್ಲಿ ಹೊರಳುವವರಿಗೆ !!!
ಕೆಲವರು ಹೊಸತು ಅಂತ ಮಾಡ್ತಾರೆ. ಅದರರ್ಥ ಆ ಹೊಸತು ಪರಂಪರೆಯಲ್ಲಿಲ್ಲ ಅಂತಲ್ಲ. ಆದರೆ ಬಹಳಷ್ಟು ಮಂದಿಗೆ ಹೊಸತಿನ ಪರಿಕಲ್ಪನೆಯೇ ಗೊತ್ತಿಲ್ಲ. ಆಧುನಿಕ ನೃತ್ಯಗಳಲ್ಲದೆ ನಮ್ಮ ಶಾಸ್ತ್ರೀಯ ನೃತ್ಯಗಳಿಗೆ ಬ್ಯಾಲೆ ಚಲನೆಗಳನ್ನು ಅನುಕರಣೆ ಮಾಡುವುದಕ್ಕಾಗೋದಿಲ್ಲ ಎನ್ನುವುದು ಮೊದಲನೆಯದಾಗಿ ಕಲಾವಿದರೆಲ್ಲರಿಗೂ ತಿಳಿದಿರಬೇಕು. ಪಾಶ್ಚಾತ್ಯ ಬ್ಯಾಲೆನೃತ್ಯಗಳಿಗೆ ಅದರದ್ದೇ ಆದ ಚಲನೆಯ ವಿಧಾನ ಬೇರೆಯೇ ಇದೆ. ಅಲ್ಲಿಯೂ ನೃತ್ಯವಿಶೇಷಗಳು ಒಳ್ಳೆಯದಿದೆ.

ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕಷ್ಟೇ ವಿನಾ ಸಮಕಾಲೀನವೆಂದ ಮಾತ್ರಕ್ಕೆ ಪಾಶ್ಚಾತ್ಯಕ್ಕೆ ಹೊರಳಿಕೊಂಡೆವು ಎಂದು ತೀರ್ಮಾನಿಸುವುದು ಒಳಿತಲ್ಲ. ಅಷ್ಟಕ್ಕೂ ಎಲ್ಲವನ್ನೂ ಪಾಶ್ಚಾತ್ಯ ಪ್ರಭಾವ ಎಂದು ಶ್ರೇಣೀಕರಿಸಲು ಬರುವುದಿಲ್ಲ. ಅದು ಅವರವರ ವೈಯಕ್ತಿಕ ಹುಡುಕಾಟ. It depends on artiste. ಯಾವ ತರಹದ ಕೊರಿಯೋಗ್ರಫಿ ವರ್ಕ್ ಬೇಕು ಅಂತ ಹೇಳುವುದು ಕಷ್ಟ. ಅದು ವ್ಯಕ್ತಿಯ ಮೇಲೆ ಆಧರಿತವಾಗಿರುತ್ತದೆ. ಒಟ್ಟಿನಲ್ಲಿ ಇಂಟರ್ನೆಟ್ಟಿಗೆ ಹೆಚ್ಚು ಅವಲಂಬಿಸದೆ ಕಲಾವಿದರು ಪಾತ್ರ, ವಸ್ತುವಿಗೆ ಬೇಕಾದ ಅಧ್ಯಯನ, ಗಮನಿಸುವಿಕೆ ಎಲ್ಲಾ ಮಾಡಬೇಕು. ಏನು ಮಾಡಬೇಕೆಂದು ಇಚ್ಛೆಯಿದೆಯೋ ಆ ಹಾದಿಗೊಪ್ಪುವ ರೀತಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಅದು ಕೊರಿಯೋಗ್ರಫಿ.

ಒಳ್ಳೇ ಡ್ಯಾನ್ಸರ್ ಆಗಬೇಕಂದ್ರೆ…?
ಉತ್ತಮ ಕಲಾವಿದೆ ಆಗಬೇಕಂದ್ರೆ ಸನ್ಯಾಸಿ ಆಗ್ಬೇಕು ಅಂತ ನಾನು ಯಾವತ್ತೂ ಹೇಳೋಲ್ಲ. ಕಲಾವಿದರಾಗಲು ಆಸೆಯಿರುವವರಿಗೆ ಶ್ರದ್ಧೆ ಬೇಕು. ಸರಿ ತಪ್ಪಿನ ಸೂಕ್ಷ್ಮ ವ್ಯತ್ಯಾಸಗಳು ಗೊತ್ತಿರಬೇಕು. ನರ್ತಿಸುವುದನ್ನು ಬರೆದಿಟ್ಟುಕೊಳ್ಳುವುದಲ್ಲ, ಕಿವಿತೆರೆದು ಕೇಳಿ ಅರಿತು ಹೃದಯದೊಳಗಿಳಿಸಿಕೊಳ್ಳಬೇಕು. ಹೇಗೆ ನೃತ್ಯಕಲಿಯಲು ಬರುವಾಗ ಚಪ್ಪಲಿಯನ್ನು ಹೊರಗಿಟ್ಟು ಬರುತ್ತೇವೆಯೋ, ಹಾಗೆಯೇ ಸಮಸ್ಯೆ, ದುಃಖ, ಅನಾರೋಗ್ಯ, ಅಹಂಕಾರಗಳೆಲ್ಲವನ್ನೂ ತೊರೆದು ನೃತ್ಯದ ಕಲಿಕೆಯ, ಗ್ರಹಿಕೆಯ ಅಂಗಣಕ್ಕೆ ಬರಬೇಕು. ಆಗ ಮಾತ್ರ ಉತ್ತಮ ಕಲಾವಿದರಾಗಬಹುದು ಮತ್ತು ಸಹೃದಯ ಪ್ರೇಕ್ಷಕರಾಗಬೋಹ್ದು.

shadow dance 1944. first performance with sohanlal pygmalion. sculpture as maya 19yr art and life

ಯಶಸ್ಸು ಅನ್ನೋದು ಯಾವತ್ತಿಗೂ ಣಚಿಞeಟಿ ಜಿoಡಿ gಡಿಚಿಟಿಣeಜ ಅಲ್ಲ. ಕಲಾವಿದರು ಅಂದ್ರೆ ಅದೇ ನಮಗೆ ದೊರೆತಿರುವ ದೊಡ್ಡ ವರ ! ಅದನ್ನು ಅರ್ಥ ಮಾಡಿಕೊಳ್ಳಬೇಕು. ಭಾರತೀಯ ಸಂಸ್ಕೃತಿಯ ಮುಖ್ಯ ಅಂಗವಾಗಿದ್ದೇವೆ ಎಂಬ ಧನ್ಯತೆ ಯಾವತ್ತಿಗೂ ಇರಬೇಕು. ಹೊರದೇಶಗಳಲ್ಲಿ ಡ್ಯಾನ್ಸ್ ಮಾಡಿದ್ರೇನೆ ಅದು ದೊಡ್ಡ ಹೆಮ್ಮೆಯ ಸಂಗತಿಯಲ್ಲ. ಉತ್ತರ ಕರ್ನಾಟಕದ ಯಾವುದೋ ಹಳ್ಳಿಯಲ್ಲಿಯೋ ಅಥವಾ ಭಾರತದ ಇನ್ನಾವುದೋ ಪುಟ್ಟ ಗ್ರಾಮದಲ್ಲಿಯೂ ಮಾಡಿದಾಗ ಅಲ್ಲಿ ದೊರಕುವ ಆನಂದ ವಿದೇಶಗಳ ಪ್ರದರ್ಶನಕ್ಕಿಂತಲೂ ಹೆಚ್ಚಿನದು ಎಂದು ಅರಿಯಬೇಕು.

ಅರಂಗೇಟ್ರಂನ್ನು ನಾನು ನಂಬೋಲ್ಲ…!
ಕೇವಲ ಹೇಳಿದ್ದನ್ನು ಡ್ಯಾನ್ಸ್ ಮಾಡೋದು, ಅರಂಗೇಟ್ರಂ ಮಾಡೋದು/ಮಾಡ್ಸೋದು, ಡ್ಯಾನ್ಸ್ ಕ್ಲಾಸ್ ಮಾಡೋದು ಅಂತ ಯಾವತ್ತಿಗೂ ಆಗ್ಬಾರ್ದು. ಅಕಾಡೆಮಿ ಅಧ್ಯಕ್ಷೆಯಾಗಿದ್ದಾಗಲೇ ರಂಗಪ್ರವೇಶ ಅನ್ನೋ ಸಿಸ್ಟಂನ್ನು ಬ್ಯಾನ್ ಮಾಡ್ಬೇಕು ಅಂತಿದ್ದೆ. ಬಾಲಸರಸ್ವತಿ, ವೆಂಕಟಲಕ್ಷ್ಮಮ್ಮ ಅವರ ಕಾಲದ ತರಹ ಇಂದಿನ ರಂಗಪ್ರವೇಶಗಳಿಲ್ಲ; ಪ್ರೊಫೆಶನಾಲಿಸಂ ಇಲ್ಲ. ಮೊದಲೆಲ್ಲಾ ಕಲಾವಿದರು ಅರಂಗೇಟ್ರಂನ್ನು ಪಂಡಿತರ ಮುಂದೆ ಮಾಡ್ಬೇಕಾಗಿತ್ತು. ತಪ್ಪು ಮಾಡಿದ್ರೆ ಪುನಾ ರಂಗದಲ್ಲೇ ಮಾಡಿಸ್ತಾ ಇದ್ರು. ಆದ್ರೆ ಈಗ ಡ್ಯಾನ್ಸ್ ಮಾಡುವವರ ನೆಂಟ್ರು, ಮನೆಮಂದಿಯೇ ಇರ್ತಾರೆ.

ಡ್ಯಾನ್ಸರ್ಸ್ ಬರೋದಂತೂ ಸಾಕಷ್ಟು ಕಡಿಮೆ ಆಗಿದೆ. ಆಗಷ್ಟೇ ಕಾಲಿಡ್ತಾ ಇರೋ ಕಲಾವಿದೆಯ ಬಗ್ಗೆ ಮಾರುದ್ದ ಹೊಗಳ್ತಾರೆ; ಜೊತೆಗೆ ಊಟ-ತಿಂಡಿ ವ್ಯವಸ್ಥೆಯ ಏರ್ಪಾಡು ಜೋರಾಗಿಯೇ ನಡೆಯುತ್ತೆ. ಕೆಲವರಂತೂ ಡ್ಯಾನ್ಸ್ ನೋಡೋದಕ್ಕಿಂತ ಹೆಚ್ಚಾಗಿ ಊಟಕ್ಕೆ ಮಾತ್ರ ಬರ್ತಾರೆ. ಆದ್ರೆ ಸರ್ಕಾರ-ದೂರದರ್ಶನದ ಕಾರ್ಯಕ್ರಮಗಳಿಗೆ ಅರಂಗೇಟ್ರಂ ಅನ್ನೋದು ಒಂದು ಮಾನದಂಡ ಆಗಿರೋ ಕಾರಣ ಅನಿವಾರ್ಯವಾಗಿ ಈ ತರಹದ ಸಮಾರಂಭಗಳು ನಡೀತಾನೇ ಇವೆ.

ನೃತ್ಯಜಗತ್ತಿನ ಅಕ್ಕ- ‘ಮಾಯಾದೀದಿ’
ತನ್ನ ನೃತ್ಯಜೀವನಯಾತ್ರೆಯಲ್ಲಿ ವಿದ್ಯಾರ್ಥಿಗಳಿಂದ, ಅವರ ತಂದೆ ತಾಯಿಯರಿಂದ ದೊರೆತ ಸಹಕಾರವನ್ನು, ಪ್ರೀತಿಯನ್ನು ನೆನಪಿಸಿಕೊಳ್ಳುತ್ತಿದ್ದ ಮಾಯಾರಾವ್ ಯುವ ಉತ್ಸಾಹಿಗಳ ಶ್ರಮ, ಪ್ರಯತ್ನದಲ್ಲಿ ಮೆಚ್ಚುಗೆ, ನಂಬಿಕೆ ಇಟ್ಟುಕೊಂಡವರು. ಅವರಿಗೆ ಯುವಕಲಾವಿದರಲ್ಲಿದ್ದ ಭರವಸೆ, ಮೆಚ್ಚುಗೆ ಇಂದಿನ ಯಾವುದೇ ಹಿರಿಯ ಕಲಾವಿದರಿಗಿಂತಲೂ ಹೆಚ್ಚಿಗಿತ್ತು ಎಂಬುದನ್ನು ಅವರ ದೃಷ್ಟಿ, ಪ್ರೀತಿ, ಮಾತುಗಳೇ ಹೇಳುತ್ತಿದ್ದವು.

ತಾವು ಕಲಿಯುತ್ತಿದ್ದ ಕಾಲಕ್ಕಿಂತಲೂ ಕಲಿಕೆ, ಪ್ರದರ್ಶನದಲ್ಲಿ ಸಾಕಷ್ಟು ಒಳ್ಳೆಯ ಬೆಳವಣಿಗೆಗಳನ್ನು ದಾಖಲಿಸುವುದನ್ನು ಅವರು ಎಂದಿಗೂ ಮರೆಯುತ್ತಿರಲಿಲ್ಲ. ಅದೆಷ್ಟೋ ಮಂದಿಗೆ ವಿದ್ಯಾದಾನ ಮಾಡಿದ ಅವರ ಕೈಗಳು ಮತ್ತಷ್ಟು ಮಂದಿಗೆ ವಿದ್ಯೆ ನೀಡಲು ಬಯಸುತ್ತಲೇ ಇದ್ದವು. ಅದಕ್ಕಾಗಿ ನಾಟ್ಯ ಇನ್ಸ್ಟಿಟ್ಯೂಟ್ ನ ಮೆಟ್ಟಿಲು-ಅಂಗಣಗಳು ಇಳಿವಯಸ್ಸಿನಲ್ಲೂ ಅವರ ಹೆಜ್ಜೆಗಳನ್ನು ದಾಖಲಿಸುತ್ತಲೇ ಇದ್ದವು.

ಅವರ ಮಾತಿನಂತೆಯೇ ಅವರ ಮನಸ್ಸು. ಇಳಿವಯಸ್ಸಿನಲ್ಲೂ ಕಾಣುತ್ತಿದ್ದ ಯುವಮನಸ್ಸಿನ ಉತ್ಸಾಹವೇ ಇದಕ್ಕೆ ನಿದರ್ಶನ. ಭುಜದ ನೋವಿನಿಂದ ಬಳಲುತ್ತಿದ್ದರೂ ನರ್ತನದಲ್ಲಿ ನೋವು ಮರೆಯುತ್ತಿದ್ದರು. ಮಾಯಾ ರಾವ್ ಅವರ ಹೆಜ್ಜೆಗುರುತು¬ಗಳಿಗೆ ಎಪ್ಪತ್ತು ತುಂಬಿದ್ದರ ನೆನಪಿಗಾಗಿ ಈಗ್ಗೆ ಒಂದು ತಿಂಗಳ ಹಿಂದೆ ಕಥಕ್‍ನ ಶತಮಾನಗಳ ಪರಂಪರೆ ಕಟ್ಟಿಕೊಡುವ ‘ಕಥಕ್‍ಥ್ರೂ ದಿ ಏಜಸ್’ ಎಂಬ ಕಾರ್ಯಕ್ರಮ ನಡೆದಿತ್ತು. ಆಲಯದ ಅಂಗಣದಲ್ಲರಳಿದ ಕಥಕ್‍ಹೆಜ್ಜೆಯ ಗುರುತುಗಳು `ಕೊರಿಯಾ¬ಗ್ರಫಿ’ಯ ಹಂತದ ವರೆಗೆ ಬೆಳೆದು ನಿಂತ ಬಗೆಯನ್ನು ತೋರಿದ ಆ ಕಾರ್ಯಕ್ರಮ ಇಡಿಯ ಕಥಕ್ ಪ್ರಪಂಚದ ಪ್ರಥಮ ಪ್ರಯತ್ನ. ಅಲ್ಲಿ ಗೆಜ್ಜೆ ಕಟ್ಟಿ ಮಾಯಾರಾವ್ ಹೆಜ್ಜೆ ಹಾಕಿದ್ದು ಇಂದಿಗೂ ಹಸಿರಾಗಿಯೇ ಇದೆ…

ಕೊನೆಯುಸಿರೆಳೆಯುವ ಹಿಂದಿನ ದಿನವೂ ಕೂಡಾ ತಮ್ಮ ನೃತ್ಯಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದರು ಮಾಯಾದೀದಿ. ಆದರೆ ಭಾನುವಾರ ಮಧ್ಯರಾತ್ರಿಯ ಹೊತ್ತಿಗೆ ಉಸಿರಾಟದ ತೊಂದರೆಗೆ ಬಳಲಿ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಾದರಾದರೂ ಆ ವೇಳೆಗಾಗಲೇ ಹೃದಯಾಘಾತದಿಂದ ಕೊನೆಯುಸಿರೆಳೆದರು. ಎಷ್ಟೇ ಸಣ್ಣವರಿರಲಿ, ದೊಡ್ಡವರಿರಲಿ, ಅಮ್ಮಂದಿರಿರಲಿ, ಮಕ್ಕಳಿರಲಿ.. ಎಲ್ಲರಿಗೂ ಅಚ್ಚುಮೆಚ್ಚಿನ ‘ಅಕ್ಕ’ನಾಗಿದ್ದ ಕಲಾಕ್ಷೇತ್ರದ ಅತ್ಯಪೂರ್ವ ಕಲಾರತ್ನ ಇಂದಿಗೆ ಭೌತಿಕವಾಗಿ ಮರೆಯಾಗಿದ್ದಾರೆ ಎಂಬುದನ್ನು ಅತ್ಯಂತ ದುಃಖದಿಂದ ಒಪ್ಪಲೇಬೇಕಾಗಿದೆ.

ಮಲ್ಲೇಶ್ವರದಲ್ಲರಳಿದ ಸಂಪಿಗೆ ಹೂವುಗಳ ಪರಿಮಳ ನೃತ್ಯಪಥದಿಂದ ನೇಪಥ್ಯಕ್ಕೆ ಸರಿದಿದೆ…
ಗೆಜ್ಜೆಗಳ ಸುಮಧುರ ದನಿಯೊಂದು ಮರೆಯಾಗಿದೆ.
ಮೌನವಾಗಿ ಹರಿಯುವ ಭಾಷ್ಪಗಳು ಮನಸ್ಸಿನ ಕಣ್ಣನ್ನು ಒದ್ದೆ ಮಾಡುತ್ತಲೇ ಇವೆ.
ಆದರೂ ಮಾಯವಾಗದ ಹೆಜ್ಜೆಗಳ ಮೂಲಕ ಮಾಯಾದೀದಿ ಚಿರವಾಗಿ ನಮ್ಮೊಂದಿಗಿದ್ದಾರೆ. ಅವರು ಅಮರ ಮಾಯಾ…!!!

ವಿಶೇಷ ನೃತ್ಯರೂಪಕಗಳಲ್ಲಿ ಡಾ. ಮಾಯಾರಾವ್…
40ನೇಯ ವಯಸ್ಸಿಗೆ ನೃತ್ಯಪ್ರದರ್ಶನ ನೀಡುವುದನ್ನೇ ನಿಲ್ಲಿಸಿ ಗುರುವಾಗಿ ತಾವು ಕಲಿತದದುದೆಲ್ಲವನ್ನೂ ಧಾರೆಯೆರೆಯುತ್ತ ಬಂದ ಡಾ ಮಾಯಾರಾವ್ ಅವರ ಸಂಶೋಧನಾತ್ಮಕ ಹೊಳಹುಗಳಿಗೆ ಅವರ ಕೊರಿಯೋಗ್ರಫಿ ತಂತ್ರಗಳು ಅತ್ಯುತ್ತಮ ನಿದರ್ಶನ. ಆ ನಿಟ್ಟಿನಲ್ಲಿ ಮಹತ್ತ್ವಪೂರ್ಣವಾದ ಸಾಕ್ಷಿಯೆಂದರೆ ‘ಹೊಯ್ಸಳ ವೈಭವ’. ಹೊಯ್ಸಳರ ಕಾಲದ ಆಹಾರ್ಯ(ವೇಷಭೂಷಣ)ಪರಂಪರೆಯ ಸಾಕ್ಷಾತ್ಕಾರವೆಂಬಂತೆ ಭಾಸವಾದ ಈ ರೂಪಕ 20ನೇ ಶತಮಾನದ ಐತಿಹಾಸಿಕ ನೃತ್ಯನಿರ್ದೇಶನಗಳಲ್ಲೊಂದು.

Dr.Maya_Rao_being_awarded_the_Akademi_Award_by_President_R.Venkataraman

ಇದೊಂದೇ ಅಲ್ಲ, ಮೊಗೆದಷ್ಟು ಬತ್ತದ ಕೊರಿಯೋಗ್ರಫಿ ತಂತ್ರಗಳ ಗುರು ಮಾಯಾರಾವ್. ನಾಟ್ಯಶಾಸ್ತ್ರ ಪೂರ್ವರಂಗ, ರಾಮಾಯಣದರ್ಶನಂ, ಊರುಭಂಗ, ಕೃಷ್ಣಲೀಲಾ, ವಿಜಯನಗರವೈಭವ, ಕಾಮನಬಿಲ್ಲು, ರಾಧಾಬನ್ಸೀಧರ್‍ವಿಲಾಸ್, ಅರ್ಜುನ್‍ಜೋಗಿ, ಭಕ್ತ ಸೂರದಾಸ್, ವೆಂಕಟೇಶ್ವರವಿಲಾಸಂ, ಅಮೀರ್‍ಖುಸ್ರೋ, ಶಕುಂತಲಾ, ಡ್ಯಾನ್ಸಸ್ ಆಫ್ ಇಂಡಿಯಾ, ಸೆವೆನ್ ಏಜಸ್ ಆಫ್ ಮ್ಯಾನ್…ಹೀಗೆ ಹೇಳಹೆಸರಿಲ್ಲದಷ್ಟು ಪ್ರಸಿದ್ಧ ಬ್ಯಾಲೆಗಳು ಮಾಯಾರಾವ್ ಅವರ ಕೈಯ್ಯೊಳಗಿನ ಕುಸುಮಶರಗಳು. ಅಷ್ಟೇ ಅಲ್ಲ, ಸಮಾಜದ ಜಾಗೃತಿಯನ್ನು, ದೇಶಭಕ್ತಿಯನ್ನೂ ಉದ್ದೀಪಿಸುವ ಕಥಕ್ ನೃತ್ಯನಾಟಕಗಳನ್ನದೆಷ್ಟೋ ಸಂಯೋಜಿಸಿದ್ದಾರೆ.

ತಮ್ಮ ನೃತ್ಯಹಾದಿಯ ಪ್ರಥಮಹೆಜ್ಜೆಗಳಲ್ಲೇ ಕುವೆಂಪು, ಕಾರಂತರಂತಹ ಅಸಾಮಾನ್ಯ ಕನ್ನಡದ ಕವಿಗಳಲ್ಲಿ ನೃತ್ಯಕ್ಕೆಂದೇ ಸಾಹಿತ್ಯ ಬರೆಯಿಸಿದ್ದಾರೆ. ಹೀಗೆ ಅನೇಕ ಮಂದಿ ಸಾಹಿತಿಗಳು, ಸಂಗೀತಗಾರರನ್ನೂ, ಕಲಾವಿದರನ್ನೂ, ವಾದ್ಯಗಳನ್ನೂ ಏಕಕಾಲಕ್ಕೆ ನೃತ್ಯದ ಹರಹಿನೊಳಗೆ ತಂದ ಪ್ರಯತ್ನಗಳು ಮಾಯಾರಾವ್ ಅವರಿಗಿಂತ ಮೊದಲು ಮಾಡಿರಲೇ ಇಲ್ಲವೆಂಬಷ್ಟಿದೆ.

ಎಲ್ಲವೂ ಕಾಲ-ದೇಶದ ಪ್ರಜ್ಞೆಗೆ ಅನುಗುಣವಾಗಿ ನೇಯಲ್ಪಟ್ಟ ನೃತ್ಯವಿನ್ಯಾಸಗಳು. ಅದು ಜನಪದೀಯವೋ, ಶಾಸ್ತ್ರೀಯವೋ, ಸಮರಕಲೆಯೋ.. ಯಾವುದೂ ಆಗಿರಬಹುದು. ಶೇಕ್ಸ್‍ಪಿಯರ್, ಬರ್ನಾಡ್ ಶಾ, ಗ್ರೀಕ್ ನಾಟಕಗಳು, ಪಂಪ-ತರಾಸು-ದಾಸ ಸಾಹಿತ್ಯ- ಜಾನಪದ- ವಚನ..ಹೀಗೆ ಸಾಹಿತ್ಯ, ಕಥೆ, ಸ್ಫೂರ್ತಿಗೆ ಆಕರ ಬಗೆಬಗೆಯದಾಗಿರಬಹುದು; ಆದರೆ ಅವೆಲ್ಲವನ್ನೂ ನೃತ್ಯದ ಚೌಕಟ್ಟಿಗೆ ಅದನ್ನು ಒಗ್ಗಿಸಿ ಅಂದವಾಗಿ ಹೆಣೆಯಬಲ್ಲ ಕಸೂತಿಸಾಮಥ್ರ್ಯ, ಅಚ್ಚುಕಟ್ಟುತನ. ಬರ್ನಾಡ್ ಶಾನ ನಾಟಕದ ಸ್ವಮೋಹವುಳ್ಳ ನಾಯಕ ದುರಂತಸಾವಿನ ಅಂತ್ಯ ಕಾಣುವ ಬದಲಿಗೆ ಮಾಯಾರಾವ್ ಅವರ ನೃತ್ಯಪ್ರಸ್ತುತಿಯಲ್ಲಿ ‘ಮೋಕ್ಷಾರ್ಥಿ’ಯಾದದ್ದು ಇದಕ್ಕೊಂದು ಉದಾಹರಣೆ.

ಯಕ್ಷಗಾನದೊಂದಿಗೆ ಮಾಯಾದೀದಿ…
ಬಡಗುತಿಟ್ಟಿನ ಯಕ್ಷಗಾನದ ಪೂರ್ಣ ಪರಿಚಯ, ಅಧ್ಯಯನ, ಪ್ರಯೋಗಕೌಶಲ್ಯ, ಪ್ರದರ್ಶನಾಸಕ್ತಿಯನ್ನು ಹೊಂದಿದ್ದ ನೃತ್ಯಕ್ಷೇತ್ರದ ಪ್ರಥಮ ಮಹಿಳೆ ಮಾಯಾರಾವ್. ಅವರ ಸಂಸ್ಥೆಯ ಮೂಲಕವೂ ಹಲವು ವಿದ್ಯಾರ್ಥಿಗಳು ಯಕ್ಷಗಾನವನ್ನು ಆಧರಿಸಿದ ಪ್ರದರ್ಶನಗಳನ್ನು ಹೊರತಂದಿದ್ದಾರೆ. ಅಂತೆಯೇ ರಾಸ, ಭಾಗವತ ಸಂಪ್ರದಾಯ, ನಾಟ್ಯಶಾಸ್ತ್ರದ ಬೇರೆ ಬೇರೆ ಆಯಾಮದ ಜನಪದ ಪರಂಪರೆಗಳ ಅಧ್ಯಯನವನ್ನು ಮಾಡಿದವರು ಮಾಯಾರಾವ್.

mayarao_1000x800_03  mayarao_1000x800_06

ಯಕ್ಷಗಾನ ಎನ್ನುವುದು ತೀರಾ ಬಡವರಕಲೆಯಾಗಿಯೇ ಇದ್ದ ಕಾಲಕ್ಕೇ ಅದರ ಸೊಗಡನ್ನು ಅರಿತು ರಾಷ್ಟ್ರೀಯ, ಅಂತರ್ರಾಷ್ಟ್ರೀಯ ವೇದಿಕೆಗಳಿಗೆ ಕೊಂಡೊಯ್ದು ಅದರ ಸವಿಸ್ತಾರ ಪರಿಚಯವನ್ನು ಮಾಡಿ ಘನತೆ ತಂದಿದ್ದವರೆಂದರೆ ಅದು ಮಾಯಾರಾವ್. 1968ರಲ್ಲೇ ದೆಹಲಿಯಲ್ಲಿ ಕೆರೆಮನೆ ಮೇಳವನ್ನು ಕರೆಯಿಸಿ ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟದ್ದಷ್ಟೇ ಅಲ್ಲದೆ ಕೆರೆಮನೆ ಶಂಭು ಹೆಗಡೆಯವರನ್ನು ತಮ್ಮ ಸಂಸ್ಥೆಯಲ್ಲಿ ಸೇರಿಸಿಕೊಂಡು ಕೊರಿಯೋಗ್ರಫಿಯ ತಂತ್ರಗಳನ್ನು ಹೇಳಿಕೊಟ್ಟರು. ಕೆರೆಮನೆ ಮೇಳಕ್ಕೆ ಸತತ 3 ವರುಷಗಳ ಕಾಲ ದೆಹಲಿಯಲ್ಲಿ ನೆಲೆ ನಿಲ್ಲಲು ಅವಕಾಶ ಮಾಡಿಕೊಟ್ಟವರು ಮಾಯಾರಾವ್. ಜೊತೆಗೆ ತಮ್ಮ ನೃತ್ಯತಂಡ ಇಟಲಿ, ಜರ್ಮನಿ, ಆಫ್ರಿಕಾದೇಶಕ್ಕೆ ಪ್ರವಾಸ ಹೊರಟಾಗ ಯಕ್ಷಗಾನ ಕಲಾವಿದರನ್ನೂ ಜೊತೆಗೆ ಸೇರಿಸಿಕೊಳ್ಳುತ್ತಿದ್ದರು. ನಂತರ ಯಕ್ಷಗಾನಕ್ಕೆ ಮರಳಿದ ಶಂಭು ಹೆಗಡೆಯವರು ಬಡಗುಟ್ಟಿನ ಯಕ್ಷಗಾನಪ್ರಪಂಚದಲ್ಲೇ ಹಲವು ಬದಲಾವಣೆಗಳ ಶಕಪುರುಷರಾಗಿ ಗುರುತಿಸಿಕೊಂಡದ್ದು ಇತಿಹಾಸ. ಒಟ್ಟಿನಲ್ಲಿ ಕೆರೆಮನೆ ಕುಟುಂಬದ ಕಲಾಮಾತೆಯಾಗಿ, ದಿಗ್ಧರ್ಶಕರಾಗಿ ತಮ್ಮ ಜೀವಿತದ ಕೊನೆಯವರೆಗೂ ಕೆಲಸ ಮಾಡಿದ್ದಾರೆ.

ಒಂದರ್ಥದಲ್ಲಿ ಕೆರೆಮನೆ ಯಕ್ಷಗಾನದ ಕ್ಷಿತಿಜ ವಿಸ್ತರಿಸಿದವರು ಮಾಯಾರಾವ್. ಎಲ್ಲ ಪ್ರಸಿದ್ಧ ಯಕ್ಷಗಾನ ಕಲಾವಿದರ ವಿವರ, ಛಾಯಾಚಿತ್ರಸಂಗ್ರಹ ಹೊಂದಿದ್ದ ಮಾಯಾರಾವ್, ತಾವು ದೆಹಲಿಯಲ್ಲಿದ್ದ ಕಾಲಕ್ಕೇ ಯಕ್ಷಗಾನ ತಂಡವರನ್ನು ಕರೆಸಿ ನೃತ್ಯವಿದ್ಯಾರ್ಥಿಗಳಿಗೆಂದೇ ಪ್ರಾತ್ಯಕ್ಷಿಕೆಗಳನ್ನು, ಪ್ರದರ್ಶನಗಳನ್ನು ನಡೆಸುತ್ತಿದ್ದರು. ನಾಟ್ಯ ಇನ್ಸ್ಟಿಟ್ಯೂಟ್ ಬೆಂಗಳೂರಿಗೆ ಬಂದ ತರುವಾಯವು ಈ ಪರಂಪರೆ ಮುಂದುವರಿಯುತ್ತಲೇ ಬಂದಿದೆ. ಆದ್ದರಿಂದಲೇ ಅವರ ಗರಡಿಯಲ್ಲಿ ಬೆಳೆದ ಎಲ್ಲ ವಿದ್ಯಾರ್ಥಿಗಳಿಗೆ ಯಕ್ಷಗಾನದ ಪರಿಚಯ, ಪ್ರಯೋಗದ ಅರಿವಿದೆ. ಹಲವು ಶಿಷ್ಯರು ಯಕ್ಷಗಾನವನ್ನೇ ಆಧರಿಸಿ ಹಲವು ನೃತ್ಯನಿರ್ದೇಶನಗಳನ್ನು ಮಾಡಿದ್ದು ಇದಕ್ಕೆ ಸಾಕ್ಷಿ. ಕಲೆಯ ವಿಶ್ವಕೋಶದಂತಿದ್ದ ಅವರು ಬೆಳೆಸಿದ್ದು ಕಲಾವಿದರನ್ನೇ ಹೊರತು ಕಥಕ್, ಭರತನಾಟ್ಯ ನರ್ತಕ/ಕಿಯರೆಂದು ಸೀಮಿತವಲಯಕ್ಕೆ ಪರಿಮಿತ ಮಾಡಿಕೊಳ್ಳುವವರನ್ನಲ್ಲ ಎಂಬುದು ಇದರಿಂದಲೇ ತಿಳಿದುಬರುತ್ತದೆ.

ನೃತ್ಯಕಲಾವಿದೆಯಾಗಿ ಯಕ್ಷಗಾನದ ಮೇಲೆ ಅವರಿಟ್ಟಷ್ಟು ವಿಶ್ವಾಸ ಬಹುಷಃ ಈ ಕಲಾಮಾಧ್ಯಮದಲ್ಲೇ ಯಾರಿಗೂ ಇದ್ದಿರಲಾರದು. ಕಥಕ್‍ನ ನಂತರ ನಾನು ಅತಿ ಹೆಚ್ಚು ಪ್ರೀತಿಸುವ ಕಲೆಯೆಂದರೆ ಅದು-ಯಕ್ಷಗಾನ ಎನ್ನುತ್ತಿದ್ದ ಮಾಯಾರಾವ್ ಕರ್ಣಪರ್ವದಂತಹ ಪ್ರಸಂಗಗಳನ್ನು ಕಥಕ್ ಕೊರಿಯೋಗ್ರಫಿಗೆ ಅಳವಡಿಸಿದ್ದರು. ಇತರೆ ನೃತ್ಯಶೈಲಿಗಳಲ್ಲಿ ಯಕ್ಷಗಾನಕ್ಕೆ ಹೊಂದಿಕೆಯಾಗುವಂತಹ ಗುಣಮಟ್ಟದ ವಿಷಯ-ವಿಶೇಷಗಳನ್ನು ಹೊಂದಿಸಿ ಯಕ್ಷಗಾನದ ಒಟ್ಟಂದವನ್ನು ಹೆಚ್ಚು ಮಾಡುವಲ್ಲಿ ಚಿಂತನೆಗಳನ್ನು ನೀಡುತ್ತಿದ್ದ ಡಾ.ಮಾಯಾರಾವ್ ಮಾತ್ರ ಯಕ್ಷಗಾನಕಲೆಯ ವಿರೂಪವನ್ನು ಮಾತ್ರ ಯಾವತ್ತೂ ಸಹಿಸುತ್ತಿರಲಿಲ್ಲ. ಯಕ್ಷಗಾನೀಯವಲ್ಲದ ಸಂದರ್ಭಗಳಲ್ಲಿ ಯಕ್ಷಗಾನದ ವೇಷಭೂಷಣಗಳನ್ನು ತೊಟ್ಟು ಗಣ್ಯರ ಸ್ವಾಗತಕ್ಕೆ, ಕಾರ್ಯಕ್ರಮ ಉದ್ಘಾಟನೆಗೆಂದು ನಿಲ್ಲುವುದು, ಕುಣಿಯುವಂತಹ ಹಾಸ್ಯಾಸ್ಪದ ಸಂದರ್ಭಗಳನ್ನು ಅವರು ತೀವ್ರವಾಗಿ ಪ್ರತಿಭಟಿಸುತ್ತಿದ್ದರು.

– ಬಾಕ್ಸ್ –
ಐತಿಹಾಸಿಕ ನಡೆಗಳು
ಮಾಯಾರಾವ್ ಅವರ ಯೋಚನೆ-ಯೋಜನೆಗಳು ನೃತ್ಯದ ಬದಲಾದ ಕಾಲಘಟ್ಟಕ್ಕೆ ದಿಕ್ಸೂಚಿ ! ಕಥಕ್‍ನ ಭೂಪಟದಲ್ಲಿ ಕರ್ನಾಟಕವನ್ನು ಸೇರ್ಪಡೆಗೊಳಿಸಿ ಶ್ರೀಮಂತಿಕೆ ತಂದವರು ಮಾಯಾ! ಅವರೊಳಗೆ ಪರಂಪರೆಯ ಧ್ವನಿಯಿತ್ತು. ಅಂತೆಯೇ ಸಮಕಾಲೀನತೆಗೆ ತುಡಿಯುವ ಆಧುನಿಕ ಪ್ರಜ್ಞೆಯ ಹೊಸತನವಿತ್ತು. ರಾಷ್ಟ್ರಮಟ್ಟದ ಪ್ರದರ್ಶಕ ಕಲೆಗಳ ಉತ್ಸವವನ್ನು ಸೋಮನಾಥಪುರ(1988), ಪಟ್ಟದಕಲ್ಲು (1989), ಹಳೆಬೀಡು(1990)ಗಳಲ್ಲಿ ನಡೆಸುವ ಮೂಲಕ ಹೊಸಪರಂಪರೆಗೆ ನಾಂದಿಯಾದವರು ಮಾಯಾರಾವ್.

ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಅಧ್ಯಕ್ಷೆಯಾಗಿದ್ದಾಗ ಭರತನಾಟ್ಯಕ್ಕೆ ಮಾತ್ರ ಸೀಮಿತವಾಗಿದ್ದ ನೃತ್ಯಪರೀಕ್ಷೆಗಳನ್ನು ಕಥಕ್‍ಗೂ ವಿಸ್ತರಿಸಿ ಆ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡದ್ದು ಅವರ ವಿಸ್ತಾರವಾದ ನೃತ್ಯಪ್ರೀತಿಗೆ ಸಾಕ್ಷಿ. ಅಂತೆಯೇ ಸ್ವಯಂ ಲೇಖಕಿಯಾಗಿಯೂ ರಾಷ್ಟ್ರ, ಅಂತರ್ರಾಷ್ಟ್ರ ಮಟ್ಟದ ಪ್ರಕಟಣೆಗಳಲ್ಲಿ ಗುರುತಿಸಿಕೊಂಡು ಅಧ್ಯಯನಪ್ರೀತಿಯನ್ನು ಬೆಳೆಸಿದ್ದರು.

ಮಾಯಾರಾವ್ ಅವರಿಂದ ಆರಂಭವಾದ ಕೊರಿಯೋಗ್ರಫಿತಂತ್ರಗಳ ಪದವಿ/ಡಿಪ್ಲೊಮಾ ಕೋರ್ಸ್‍ಗಳು ಭಾರತದ ನೃತ್ಯಕ್ಷೇತ್ರಕ್ಕೇ ಹೊಸತೆನಿಸುವ ಕೊಡುಗೆ. ಅದರ ಸಿಲೆಬಸ್‍ನ್ನು ಅವರೇ ರೂಪಿಸಿರುವುದು ಅವರೊಳಗೆ ಕಲಾವಿದೆಯ ಎತ್ತರಕ್ಕೆ ಸಾಕ್ಷಿ. ಭರತಾದಿ ಲಾಕ್ಷಣಿಕರ-ದಾರ್ಶನಿಕರ ವಿಸ್ತಾರ ಅಧ್ಯಯನದೊಂದಿಗೆ ಗ್ರೀಕ್-ರೋಮನ್-ರಷ್ಯನ್..ಹೀಗೆ ನೃತ್ಯದ ವಿಶ್ವ ಇತಿಹಾಸವೆಲ್ಲವನ್ನೂ ತಂದು ಪಾಶ್ಚಾತ್ಯ ಮತ್ತು ಭಾರತೀಯ ಚಿಂತನೆಗಳನ್ನು ಸಂಲಗ್ನಗೊಳಿಸಿ ನೃತ್ಯದ ಸಮಗ್ರತೆಯನ್ನು ಅರಿಯಲು ಅನುಕೂಲ ಮಾಡಿಕೊಟ್ಟಿದ್ದರು. ಮುಂದೆ ನೃತ್ಯದ ಕೊರಿಯೋಗ್ರಫಿಗೆ ಸಂಬಂಧಿಸಿದಂತೆ ಯುಎಸ್‍ಎಸ್‍ಆರ್ ಸರ್ಕಾರದಿಂದ ಮಾನ್ಯತೆ ಪಡೆದ ಭಾರತದ ಏಕೈಕ ಸ್ನಾತಕೋತ್ತರ ಡಿಪ್ಲೋಮಾ ಮಾಯಾರಾವ್ ಅವರ ನಾಟ್ಯ ಇನ್ಸ್ಟಿಟ್ಯೂಟ್ ಆಫ್ ಕಥಕ್ ಅಂಡ್ ಕೊರಿಯೋಗ್ರಫಿಯದ್ದು ಎಂಬ ಮನ್ನಣೆಯೂ ದೊರೆಯಿತು.

ಇವರ 75ನೇ ಜನ್ಮದಿನಾಚರಣೆಯ ಶುಭಸಂದರ್ಭದಲ್ಲಿ ಆಶಿಶ್ ಮೋಹನ್ ಖೋಕರ್ ಅವರ ಜೀವನಗಾಥೆಯನ್ನು ಅಕ್ಷರೀಕರಿಸಿದ್ದು; EKAH ಪ್ರಕಾಶನವು 2004ರಲ್ಲಿ ಮುದ್ರಣರೂಪಕ್ಕೆ ತಂದಿದೆ. A life time in Choreography  ಎಂಬ ಅವರ ಆತ್ಮಕಥೆಯು ಕನ್ನಡದಲ್ಲಿ ‘ಜೀವಯಾನ ನೃತ್ಯಯಾನ’ ಎಂಬ ಹೆಸರಿನಲ್ಲಿ ಸಿದ್ಧವಾಗಿದೆ. `ಮಾಯಾ ಟು ಮ್ಯಾಟರ್’ ಎಂಬ ಡಿವಿಡಿಯು ಮಾಯಾರ ನೃತ್ಯ, ಕೊರಿಯಾಗ್ರಫಿ ಹಾಗೂ ಅವುಗಳ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ.

– ಬಾಕ್ಸ್ –
ಮೂರು ತಲೆಮಾರುಗಳ ಕೊಂಡಿ
ಮಾಯಾರಾವ್ ಏನೇನಲ್ಲ, ವಿದ್ಯಾರ್ಥಿ, ಶಿಕ್ಷಕಿ, ಗುರು, ಕೊರಿಯೋಗ್ರಾಫರ್, ಲೇಖಕಿ, ಶಿಕ್ಷಣತಜ್ಞೆ, ಉಪನ್ಯಾಸಕಿ, ಸಂಘಟಕಿ, ಶಿಷ್ಯರ ಮೆಚ್ಚಿನ ತಾಯಿ, ಅಕ್ಕ…ಹೀಗೆ ಏಕಕಾಲಕ್ಕೆ ಅನೇಕವಾಗಿ ಬೆಳೆದು ಬಾಳಿದವರು. ಇವರೊಂದಿಗೆ ಕಲೆತು ಬಾಳಿದವರೂ ಅಂತೆಯೇ. ಬಾಲಾಸರಸ್ವತಿ, ಉದಯಶಂಕರ್, ರಾಂಗೋಪಾಲ್, ಕಮಲಾದೇವಿ ಚಟ್ಟೋಪಾಧ್ಯಾಯ, ಗುರು ಮುತ್ತುಕುಮಾರ್ ಪಿಳ್ಳೈ, ರುಕ್ಮಿಣಿದೇವಿ ಅರುಂಡೇಲ್, ಕೃಷ್ಣ ಅಯ್ಯರ್, ನಾರಾಯಣ ಮೆನನ್, ನಿರ್ಮಲಾ ಜೋಷಿ, ಯು.ಎಸ್.ಕೃಷ್ಣರಾವ್, ಚಂದ್ರಭಾಗಾದೇವಿ, ಮೋಹನ್ ಖೋಕರ್, ಮೇಡಂ ಮನೇಕಾ, ಗುರು ಗೋಪಿನಾಥ್, ಬಿವಿಕೆಶಾಸ್ತ್ರಿಗಳಂತಹ ಹಿರಿಯ ಗುರು/ವಿದ್ವಾಂಸರ ನಿಕಟವರ್ತಿ ಮಾಯಾರಾವ್.

prof167a  prof161a

Maya-Rao

ಬಿರ್ಜು ಮಹಾರಾಜ್, ಲೀಲಾರಾಮನಾಥನ್, ಎಂ.ಕೆ.ಸರೋಜಾ, ಸುನಿಲ್ ಕೊಠಾರಿ, ಚಿತ್ರಾ ವೇಣುಗೋಪಾಲ್, ಸಿ.ವಿ.ಚಂದ್ರಶೇಖರ್, ಆಶಿಶ್ ವಿದ್ಯಾರ್ಥಿಯ ತಂದೆ ಗೋವಿಂದ ವಿದ್ಯಾರ್ಥಿ, ಅಮ್ಜದ್ ಅಲಿ ಖಾನ್ ತಂದೆ ಹಫೀಝ್ ಅಲಿ ಖಾನ್, ಸಿಲೋನ್‍ನ ಚಿತ್ರಸೇನ..ಹೀಗೆ ಹಲವು ಕಲಾವಿದರು ಮಾಯಾರಾವ್‍ರ ಸಮಕಾಲೀನರು. ಮಾಯಾರಾವ್ ಅವರ ಮಗಳು ಮಧು ನಟರಾಜ್ ಕೂಡಾ ಸ್ಟೆಂ ಡ್ಯಾನ್ಸ್ ಕಂಪನಿಯ ಮೂಲಕ ಕಥಕ್ ಮತ್ತು ಸಮಕಾಲೀನ ನೃತ್ಯಗಳ ಕಲಾವಿದೆಯಾಗಿ ಬೆಳಕು ಕಂಡಿದ್ದಾರೆ.

ಯಾರೇ ಆಗಿರಲಿ, ಯಾವುದೇ ಆಗಿರಲಿ, ಒಳ್ಳೆಯದು, ಪ್ರತಿಭೆಯಿರುವಂತದ್ದು ಎಂದರೆ ಅವರ ಅಭಿನಂದನೆ, ಪ್ರೋತ್ಸಾಹ ಇದ್ದೇ ಇತ್ತು ಎನ್ನುವುದನ್ನು ಇಂದಿನ ಕಾಲದ ಹಿರಿಯ ನೃತ್ಯಗುರುಗಳೂ ನೆನಪಿಸಿಕೊಳ್ಳುತ್ತಾರೆ. ಎಷ್ಟೋ ಮಂದಿ ಗ್ರಾಮೀಣಪ್ರತಿಭೆಗಳಾಗಿ ಹೋಗುವವರನ್ನು ರಾಷ್ಟ್ರೀಯಮಟ್ಟಕ್ಕೆ ಬೆಳೆಸಿದ ಕೀರ್ತಿ ಅವರದ್ದು. ಅದರಲ್ಲೂ ಅವರೊಂದಿಗೆ ಸಂಸರ್ಗದಲ್ಲಿದ್ದ ಕಿರಿಯ ನೃತ್ಯಕಲಾವಿದರು ಕೂಡಾ ಅನಾರೋಗ್ಯದಿಂದ ಬಳಲುತ್ತಿದ್ದರೆ ತಮ್ಮ ಆರೋಗ್ಯಕ್ಕಿಂತಲೂ ಹೆಚ್ಚಾಗಿ ಕಳವಳಪಟ್ಟುಕೊಳ್ಳುತ್ತಿದ್ದವರು ಮಾಯಾದೀದಿ. ಹಾಗೆಂದು ತಮ್ಮ ನೋವು-ತೊಂದರೆಗಳನ್ನು ನೃತ್ಯದೊಂದಿಗೆ ರಾಜಿ ಮಾಡಕೊಡುತ್ತಿರಲಿಲ್ಲ. ಏನೇ ಆಗಲಿ, Show must Go on ಎನ್ನುವುದೊಂದೇ ಅವರ ಮಂತ್ರ.

ಚತುರ್ವಿಧ ಅಭಿನಯವನ್ನು ಒಗ್ಗೂಡಿಸಿ `ಕೊರಿ¬ಯಾಗ್ರಫಿ’ ಮಾಡುವ ಪರಿಕಲ್ಪನೆಯ ಕುರಿತು ಗಂಟೆಗಟ್ಟಲೆ ಮಾತನಾಡುತ್ತಿದ್ದ ಮಾಯಾರಾವ್, ತಮ್ಮ ವಿದ್ಯಾರ್ಥಿಗಳಿಗೆ ನೃತ್ಯಸಂಯೋಜನೆಯ ಸ್ವಾತಂತ್ರ್ಯವನ್ನೂ ಕೊಡುತ್ತಿದ್ದವರು. ಹಾಗಾಗಿಯೇ ಅವರ ಶಿಷ್ಯರು ಕೇವಲ ಶಿಷ್ಯರಾಗಷ್ಟೇ ಅಲ್ಲ; ಎಷ್ಟೋ ಮಂದಿಗೆ ಗುರುಗಳಾಗಿ, ಪೂರ್ಣಪ್ರಮಾಣದ ಕಲಾವಿದರಾಗಿ ರೂಪುಗೊಂಡಿದ್ದಾರೆ. ಅವರಂತೆಯೆ ಹರಿವ ನದಿಯಾಗಿದ್ದಾರೆ. ಎಲ್ಲೆಲ್ಲಾ ಕಲೆಯ ಸುವಾಸನೆಯಿದೆಯೋ ಅಲ್ಲೆಲ್ಲಾ ಕಲಿಕೆಗೆಂದು ಪ್ರದರ್ಶನಕ್ಕೆಂದು ಪಯಣಿಸಿದ್ದಾರೆ.

ಅಷ್ಟೇ ಅಲ್ಲ, ಮಕ್ಕಳನ್ನು ಮಾಯಾದೀದಿಯ ಸುಪರ್ದಿಗೆ ಒಪ್ಪಿಸಲು ಬರುತ್ತಿದ್ದ ತಾಯಂದಿರು, ಪತ್ನಿಯರನ್ನು ಕರೆತರುತ್ತಿದ್ದ ಗಂಡಂದಿರು, ತಂಗಿಯರ ಜೊತೆಯಾಗುತ್ತಿದ್ದ ಅಣ್ಣ-ತಮ್ಮಂದಿರಿಗೂ ಕೂಡಾ ಮಾಯಾರಾವ್ ಕ್ರಮೇಣ ‘ದೀದಿ’ಯಾಗಿ, ದೀದಿಯ ಶಿಷ್ಯರೂ ಆಗಿ ಬದಲಾದದ್ದೂ ಇದೆ.

– ಬಾಕ್ಸ್ –
ಹೆಜ್ಜೆಯುಲಿಯು ನಲಿಯುತ್ತಾ…
ಸ್ವಾತಂತ್ರ್ಯಾನಂತರದ ಆರಂಭಿಕ ದಶಕಗಳಲ್ಲಿ ಮಾಯಾರಾವ್ ಅವರ ಸಾಧನೆ ಅನನ್ಯ. ಭಾರತ ಮಾತ್ರವಲ್ಲದೆ ಯೂರೋಪ್, ಯುಎಸ್‍ಎ, ಯುಎಸ್‍ಎಸ್‍ಆರ್ ಮುಂತಾಗಿ 28ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ ಮಾಯಾರಾವ್ ಅವರು ಹಲವು ಸಮಿತಿಗಳ ಪ್ರತಿಷ್ಟಿತಸ್ಥಾನವನ್ನು ಅಲಂಕರಿಸಿದ್ದಾರೆ. ನೃತ್ಯಶಿಬಿರಗಳನ್ನು ನಡೆಸಿ ಪಾಠ ಮಾಡಿದ್ದಾರೆ; ಸುಮಾರು 36 ದೇಶಗಳಲ್ಲಿ ನೃತ್ಯಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ನೃತ್ಯದ ಮೂಲಕ ಮನಸ್ಸುಗಳ ನಡುವೆ ಸೇತು ಬೆಸೆದ ಮಾಯಾರಾವ್ ಯಥಾರ್ಥದಲ್ಲಿ ಸಾಂಸ್ಕೃತಿಕ ರಾಯಭಾರಿ.

ಅವುಗಳ ಪೈಕಿ ಕೆಲವನ್ನು ಉಲ್ಲೇಖಿಸುವುದಾದರೆ,
1961, 1963 ಮತ್ತು 1979ರಲ್ಲಿ ರಿಗಾ, ಲಾತ್ವಿಯಾ, ಸ್ಟೇನಿಸ್ಲಾವ್ಸ್ಕಿಯ ರಂಗಮಂದಿರಗಳಲ್ಲಿ, ಸೋವಿಯತ್ ಒಕ್ಕೂಟಗಳಲ್ಲಿ ಕೊರಿಯೋಗ್ರಫಿಗೆ ಸಂಬಂಧಿಸಿ ಅತಿಥಿ ಉಪನ್ಯಾಸಕಿ ಮತ್ತು ಹಲವು ಭಾರತೀಯ ನೃತ್ಯ ಬ್ಯಾಲೆಗಳಿಗೆ ನಿರ್ದೇಶನ
1963ರಲ್ಲಿ ಜರ್ಮನ್ ಡೆಮೋಕ್ರೆಟಿಕ್ ರಿಪಬ್ಲಿಕ್‍ನಿಂದ ಬರ್ಲಿನ್ ಉತ್ಸವಕ್ಕೆ ಆಹ್ವಾನ ಮತ್ತು ಲೀಪ್ಸ್ಜಿಗ್ ಮತ್ತು ಡ್ರೆಸ್ಡನ್‍ನಲ್ಲಿ ಪ್ರದರ್ಶನ-ಉಪನ್ಯಾಸ.
1969-1971ರಲ್ಲಿ ಬೊಲ್ಶೋಯ್ ಥಿಯೇಟರ್ ನಡೆಸಿದ ಅಂತರ್ರಾಷ್ತ್ರೀಯ ಬ್ಯಾಲೆ ಉತ್ಸವದ ನಿರ್ಣಾಯಕಸ್ಥಾನ
1987-1990ರಲ್ಲಿ ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಅಧ್ಯಕ್ಷಪದವಿ
ಯುನೆಸ್ಕೋ ಸಮ್ಮೇಳನ, ಸಾರ್ಕ್ ಸಮ್ಮೇಳನ, ನೃತ್ಯ ವಿಚಾರಸಂಕಿರಣ ಮುಂತಾದ ಹಲವು ಪ್ರತಿಷ್ಟಿತ ವೇದಿಕೆಗಳಲ್ಲಿ ಪ್ರದರ್ಶನ…ಇತ್ಯಾದಿ

– ಬಾಕ್ಸ್ –
ಪ್ರಶಸ್ತಿ ಪುರಸ್ಕಾರಗಳು
ಸಹೃದಯೀ ಕಲಾವಿದರು ಪ್ರಶಸ್ತಿಗಳನ್ನಾಗಲೀ, ಪದವಿ-ಸ್ಥಾನಗಳನ್ನಾಗಲೀ ಬೆಂಬತ್ತುವುದಿಲ್ಲ. ಈ ನಿಟ್ಟಿನಲ್ಲಿ ಮಾಯಾರಾವ್ ಭೀಷ್ಮರೇ ಹೌದು. ಅರ್ಜಿ ಗುರಾಯಿಸಿದವರಲ್ಲ. ಲಾಬಿ ಮಾಡಿದವರಲ್ಲ. ಕೆಲವೊಂದು ಶ್ರೇಷ್ಠವೆನಿಸಿದ ಪ್ರಶಸ್ತಿಗಳನ್ನು ವಾಪಾಸು ಕಳಿಸಿದ್ದೂ ಇದೆ. ಅರ್ಹತೆಗೇ ಅವರದ್ದು ಮೊದಲ ಮಣೆ. ಮನಸ್ಸು ಮಾಡಿದ್ದರೆ ಪದ್ಮಶ್ರೇಣಿಯ ಯಾವುದೇ ಪುರಸ್ಕಾರಗಳೂ ಇವರಿಗೆ ಸುಲಭದಲ್ಲಿ ಒಲಿಯುತ್ತಿತ್ತು.

ಆದರೆ ಅಂತಹ ಶಿಫಾರಸ್ಸುಗಳ ಸುಳಿವು ಸಿಕ್ಕಾಗಲೂ ಕೂಡಾ, ‘ದಯವಿಟ್ಟು ಬೇಡ’ ಎಂದು ಖಂಡಿತವಾಗಿ ಹೇಳಿದ ಸ್ವಾಭಿಮಾನಿ ಅವರು !
ಆದಾಗ್ಯೂ ಅವರನ್ನು ಅರಸಿ ಬಂದ ಪುರಸ್ಕಾರ-ಪದವಿಗಳು ಆಯಾಯ ಪ್ರಶಸ್ತಿ-ಸ್ಥಾನಗಳ ಮೌಲ್ಯವನ್ನು ಮೇಲೆತ್ತರಕ್ಕೇರಿಸಿದೆ.
1962ರಲ್ಲಿ ಫಿನ್ಲ್ಯಾಂಡಿನಲ್ಲಿ ನಡೆದ ಕಲೆ ಮತ್ತು ವಿಶ್ವಶಾಂತಿಯ ಕುರಿತ ಸಮ್ಮೇಳನ ಪುರಸ್ಕಾರ
ಕೇಂದ್ರ ಮಾನವಸಂಪನ್ಮೂಲ ಇಲಾಖೆಯಿಂದ ಹಿರಿಯ ಕಲಾವಿದರಿಗೆ ನೀಡುವ ಫೆಲೋಶಿಪ್
1968ರಲ್ಲಿ ಮೈಸೂರು ರಾಜ್ಯ ಅಕಾಡೆಮಿ (ಈಗಿನ ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ) ಪುರಸ್ಕಾರ
1985ರಲ್ಲಿ ದೆಹಲಿ ಸಾಹಿತ್ಯ ಕಲಾ ಪರಿಷತ್ ಪ್ರಶಸ್ತಿ
1986ರಲ್ಲಿ ರಾಜ್ಯೋತ್ಸವ ಪ್ರಶಸ್ತಿ
1989ರಲ್ಲಿ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪುರಸ್ಕಾರ
ಟಿಎಂಎ ಪೈ ಫೌಂಡೇಶನ್‍ನಿಂದ ಕೊಂಕಣಿ ಪ್ರಶಸ್ತಿ 1993
2000ರಲ್ಲಿ ಶಾಂತಲಾ ಪ್ರಶಸ್ತಿ
2011ರಲ್ಲಿ ಠಾಗೋರ್ ರತ್ನ ಸಂಗೀತ ನಾಟಕ ಅಕಾಡೆಮಿ
2012ರಲ್ಲಿ ಅಟೆಂಡೆನ್ಸ್ ಪ್ರಶಸ್ತಿ ಮತ್ತು ದೂರದರ್ಶನ/ಚಂದನ ಪ್ರಶಸ್ತಿ
ಎಮಿರೇಟ್ಸ್ ಫೆಲೊಷಿಪ್
ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್
ಮುಂಬೈನ ಸುರ್‍ಸಿಂಗಾರ್ ಸಂಸದ್‍ನಿಂದ ‘ನೃತ್ಯವಿಲಾಸ’
ಬೆಂಗಳೂರಿನ ಗಾಯನಸಮಾಜದಿಂದ ‘ನೃತ್ಯ ಕಲಾರತ್ನ’
ಯುಎಸ್‍ಎ ಯ ಕನ್ನಡ ಕೂಟಗಳಿಂದ ಶ್ರೇಷ್ಟ ಗುರು ಪುರಸ್ಕಾರ
ಹೆಲ್ಸಿಂಕಿಯಲ್ಲಿ ನಡೆದ ವಲ್ರ್ಡ್‍ಆರ್ಟ್‍ಫೆಸ್ಟಿವಲ್‍ನಲ್ಲಿ ಕಥಕ್‍ನೃತ್ಯದ ಶ್ರೇಷ್ಠ ಪ್ರದರ್ಶನಕ್ಕೆ ಚಿನ್ನದ ಪದಕ
ಇವುಗಳೊಂದಿಗೆ ಹಲವು ಜೀವಮಾನಸಾಧನೆ ಪ್ರಶಸ್ತಿಗಳು…

ಪತ್ರಿಕಾ ಮಾಧ್ಯಮಗಳ ಕಣ್ಣಲ್ಲಿ…

 “Dancer with Golden Feet” – Maya Rao  – Times of India

“A rare combination of a traditionalist and an uninhabited innovator, Maya Rao is set on a never-ending voyage of choreographic exploration” –  The Hindustan Times

“Maya Rao is an unofficial cultural ambassador of India”-  Times of India

“Maya Rao – Building bridges through dance” – Hindu

“Maya Rao – Grand dame of Kathak”-  Hinduism today, U.S Edition

“What is striking about Maya is her broad mindedness and generosity with which she encourages the students to

compose and grow into full-fledged performers” –The Hindu.

“Maya Rao whose ballets cover a wide sweep of experiences” The Hindustan Times

“Maya Rao- a leading name in the country’s dance firmament”- Articulations

“Maya’s name is synonymous with Kathak and choreography”- Deccan Herald

********************

Leave a Reply

*

code