ಅಂಕಣಗಳು

Subscribe


 

ಅಭಿನಂದನೆಗೆ ಅನ್ವರ್ಥಪ್ರಾಯವಾದ ‘ದೇಶೀಕರಣ’ ಅಧ್ಯಯನ

Posted On: Monday, April 15th, 2013
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಅಲ್ಲಿ ಆಡಂಬರದ ಅಣಕಿರಲಿಲ್ಲ; ಪ್ರಚಾರಗಳ ಪೋಷಾಕಿರಲಿಲ್ಲ; ಆಯೋಜಕರ ಅಬ್ಬರಗಳಿರಲಿಲ್ಲ; ಗಡಿಬಿಡಿ-ಗೊಂದಲಗಳ ಮುಖವೈವರ್ಣ್ಯಗಳಿರಲಿಲ್ಲ. ಔಪಚಾರಿಕತೆ ಎದೆಬಿಗಿಯಲಿಲ್ಲ. ಅನೌಪಚಾರಿಕತೆಯ ಆದರ ಹದ ತಪ್ಪಲಿಲ್ಲ. ವೇಳಾಪಟ್ಟಿಯ ಒದ್ದಾಟಗಳಿರಲಿಲ್ಲ; ಬಿಂಕ-ಬಿಗುಮಾನಗಳ ಬೂಟಾಟಿಕೆಯಲ್ಲಿ ಸಭಾಂಗಣ ತೊಪ್ಪೆಯಾಗುವ ಅವಕಾಶಕ್ಕೂ ಒಂದಿಂಚೂ ಇರಲಿಲ್ಲ; ಯಾವುದಕ್ಕೆ ಎಷ್ಟು ಒತ್ತು ಕೊಡಬೇಕು ಎಂಬ ಸಮಯ-ಸರಂಜಾಮುಗಳ ಹೊಂದಾಣಿಕೆಯ ಕಟ್ಟುನಿಟ್ಟು ಶಾಸನವಿಲ್ಲದೆಯೇ ಕ್ರಮವತ್ತಾಗಿ, ಕ್ಲಪ್ತವಾಗಿ ಆರಂಭ ಕಂಡು ಸಮಾಪನಗೊಂಡಿತ್ತು. ಬುದ್ಧಿ-ಭಾವದ ಬೆಸುಗೆ ಎಷ್ಟೊಂದು ಪರಿಣಾಮಕಾರಿಯಾಗಿತ್ತೆಂದರೆ ಕ್ಷಣಕ್ಷಣಕ್ಕೂ ಹೃದಯದ ಮಾತೇ ಧ್ವನಿಯಾಗಿ ಮಿಡಿಯುತ್ತಿತ್ತು. ಮನಸ್ಸಿನಲ್ಲಿ ಪಡಿಮೂಡಿದ ಕಾರ್ಯಕ್ರಮದ ಚಿತ್ರಕ್ಕಿಂತಲೂ ಸರಾಗವಾಗಿ ಕ್ಷಣಕ್ಷಣಗಳು ಧನ್ಯತೆಯ ಮೂಸೆಯೊಳಗೆ ಸರಿದುಹೋಗುತ್ತಿತ್ತು. ಸಲಿಲದಂತೆ ಸುಲಲಿತವಾಗಿ ಹರಿದ ಸಮಾರಂಭದುದ್ದಕ್ಕೂ ಮಾನ್ಯತೆಯೆಂಬುದು ಹೃದಯಸಂವಾದಿಯಾಗಿ ಸಿಹಿಯೂಟದ ಬುತ್ತಿಯುಣಿಸುತ್ತಿತ್ತು. ಕಲಾವಿದೆಯ ಅರ್ಥಪೂರ್ಣ ಜೀವಮಾನಸಾಧನೆಯೆಂದರೆ ಹೀಗಿರಬೇಕು ಎಂಬುದಕ್ಕೆ ಆ ಕ್ಷಣಗಳು ಕಡೆದ ಶಿಲ್ಪದಂತಿತ್ತು. ಭೂಷಣಕೆ ಭೂಷಣವು ಇದು ಭೂಷಣ… ಎಂಬ ಕವಿವಾಣಿ ಆಪ್ತವಾಗಿತ್ತು. ಒಟ್ಟಿನಲ್ಲಿ ಸಾತ್ವಿಕ ಅಧ್ಯಯನವೊಂದು ಹದವಾದ ಪಾಕದಲ್ಲಿ ಬೆಂದು ಸೊಗಸಾದ ಅಡುಗೆಯಾಗಿತ್ತು.

ಇದು ಯತಾರ್ಥವಷ್ಟೇ ಅಲ್ಲ; ಇದಕ್ಕಿಂತಲೂ ಹೆಚ್ಚಾದ ಪ್ರಶಂಸೆಗೆ ಪಾತ್ರವಾಗುವುದಕ್ಕೆ ಅರ್ಹವಾಗಿರುವುದು ಸುಂದರೀ ಸಂತಾನಂ ಅವರ ದೇಶೀ ಕರಣ ಪುಸ್ತಕ ಅನಾವರಣದ ಸಮಾರಂಭ. ಹೇಳಹೊರಟರೆ ಪದಗಳಿಗೆ ನಿಲುಕದಷ್ಟು ಸರಳ, ಅರ್ಥಗರ್ಭಿತ, ಸುಂದರ, ಹೃದಯಸ್ಪರ್ಶಿ ಕಾರ್ಯಕ್ರಮವದು. ಡಾ. ಪದ್ಮಾ ಅವರ ಕರಣಗಳ ಕುರಿತ ಗ್ರಂಥದ ತರುವಾಯ ಭಾರತೀಯ ನೃತ್ಯ ಇತಿಹಾಸದಲ್ಲೇ ಮೌಲಿಕವಾದ ಎರಡನೇ ಕೃತಿ ಎಂಬ ಅಭಿದಾನಕ್ಕೆ ಸೇರಿಹೋದ ಪುಸ್ತಕವನ್ನು ನೆರೆದವರೆಲ್ಲರೂ ಆತ್ಮೀಯವಾಗಿ, ಹೆಮ್ಮೆಯಿಂದ ಹಿಡಿದು ನಿಂತಿದ್ದನ್ನು ನೆನೆದರೆ ಇಂದಿಗೂ ಕಣ್ಣಾಲಿಗಳಲ್ಲಿ ಮಿಂಚು ಬೆಳಗುತ್ತದೆ.Neo Desi karanas by Sundari Santhanam

ಭಾರತೀಯ ವಿದ್ಯಾಭವನದ ಆ ವೇದಿಕೆ ನಿಜಕ್ಕೂ ಹೆಸರಿಗೆ ಅನ್ವರ್ಥವೆಂಬಂತೆ ಭೂಷಿತವಾದ ದಿನವದು. ಡಾ. ಪದ್ಮಾ ಸುಬ್ರಹ್ಮಣ್ಯಂ ಅಂದು ( ಮಾರ್ಚ್ ೧೬, ೨೦೧೩) ದೇಶೀ ಕರಣದ ಪುಸ್ತಕದಂತೆಯೇ ಇದ್ದ ಕಪಾಟನ್ನು ತೆಗೆದು ಪುಸ್ತಕದ ಪ್ರಥಮಪ್ರತಿಯನ್ನು ಶತಾವಧಾನಿ ಡಾ. ಆರ್. ಗಣೇಶರ ಕೈಗಿತ್ತರು. ಪುಸ್ತಕದ ಬೇರೆ ಬೇರೆ ಹಂತಗಳಲ್ಲಿ ಕಾಣ್ಕೆ ನೀಡಿದವರಿಗೆ ಪುಸ್ತಕವನ್ನು ಕೈಯ್ಯಾರೆ ಇತ್ತು ಆಶೀರ್ವದಿಸಿದರು. ಸ್ಮೃತಿಯಲ್ಲಡಗಿದ್ದ ಅದೆಷ್ಟೋ ಅಪ್ಯಾಯಮಾನ ಘಳಿಗೆಗಳು ಅನುರಣನಗೊಂಡವು. ಒಟ್ಟಿನಲ್ಲಿ ಸುಂದರೀ ಸಂತಾನಂ ಅವರ ಸಾರ್ಥಕ ಅಧ್ಯಯನವು ತೆರೆಕಂಡ ಬಗೆಯೆಲ್ಲವೂ ವಿನೂತನವಾಗಿತ್ತು; ವಿಚಾರಪೂರ್ಣವಾಗಿತ್ತು; ವಿವೇಕಪ್ರದವೆನಿಸಿತ್ತು.

ಪುಸ್ತಕ ಅನಾವರಣಕ್ಕಿಂತಲೂ ಮುಂಚೆ ಡಾ. ಕರುಣಾ ವಿಜಯೇಂದ್ರ ಅವರು ನೀಡಿದ ಪುಸ್ತಕ ರೂಪುಗೊಳ್ಳುವಿಕೆಯ ಹಿನ್ನೆಲೆಯ ಕುರಿತ ಉಪೋದ್ಘಾತ ಮತ್ತು ಅಧ್ಯಯನದ ಸವಾಲು-ಅವಕಾಶಗಳ ಬಗ್ಗೆ ಉಪನ್ಯಾಸ ಮಾಹಿತಿಪೂರ್ಣವಾಗಿದ್ದಷ್ಟೇ ಅಲ್ಲದೆ; ದೇಶೀ ನೃತ್ಯಗಳ ಚಲನವಲನಗಳ ಸೊಬಗನ್ನು ದರ್ಶಿಸಲು ಅನುಕೂಲವಾದವು. ಇದು ದಕ್ಷಿಣ ಭಾರತದ ಅದರಲ್ಲೂ ಕರ್ನಾಟಕದ ಹೆಮ್ಮೆಯ ಶಿಲ್ಪಸೌಂದರ್ಯದ ಹಿಂದಿನ ತಾತ್ತ್ವಿಕ ಮತ್ತು ಐತಿಹಾಸಿಕ ಸಾಕ್ಷ್ಯಗಳ ಹಿಂದಿನ ಭವ್ಯ ಪರಂಪರೆ ಮತ್ತು ಸಂಶೋಧನೆಯ ಅವಶ್ಯಕತೆಯನ್ನು ಅರಿಯಲು ಅಣಿಮಾಡಿಸಿದಂತಿತ್ತು. ನಂತರದಲ್ಲಿ ಸುಂದರೀ ಸಂತಾನಂ ಅವರ ಮಗಳು, ಶಿಷ್ಯೆ ಹರಿಣಿಯವರ ಸಾರಥ್ಯದಲ್ಲಿ ದೇಸೀ ಕರಣದ ಪ್ರಾತ್ಯಕ್ಷಿಕೆಯು ಪ್ರಾಯೋಗಿಕ ಪ್ರಸ್ತುತಿಯ ಮೂಲಕ ನೃತ್ಯಸೌಂದರ್ಯವನ್ನು ಸಾಕ್ಷೀಕರಿಸಿದ್ದವು. ನಯನ, ದೀಕ್ಷಾ, ನಮಿತಾ ಅವರ ಭಾವ-ಭಂಗಿಗಳ ಮೂಲಕ ಮಾರ್ಗೀ ಮತ್ತು ದೇಸೀ ಕರಣಗಳ ವ್ಯತ್ಯಾಸ-ಸಾಮ್ಯಗಳನ್ನು ಗುರುತಿಸುವ ಹಂತದಲ್ಲಿ ನಡೆದ ಎರಡು ಮಾದರಿಯ ಪ್ರಾತ್ಯಕ್ಷಿಕೆ ಒಂದು ನೃತ್ಯಪ್ರದರ್ಶನದಂತೆಯೇ ಭಾಸವಾದದ್ದು ಕಲೆ ಮತ್ತು ಕಲಾವಿದರ ವಿದ್ವತ್ತಿನ ಹೆಮ್ಮೆಯೇ ಸೈ. ಇದರೊಂದಿಗೆ ದೇಸೀ ಕರಣಗಳ ಮನೋಜ್ಞ ಸಂಯೋಜನೆಯನ್ನು ಶಿಲ್ಪದ ಐತಿಹಾಸಿಕ ನೆರಳಿನಲ್ಲಿ ಬೆಳಗಿಸಿದ ನೃತ್ಯಭಾಗವೂ ಮುದ ನೀಡಿತ್ತು. ಅಧ್ಯಯನದ ಒಟ್ಟಂದಕ್ಕಾಗಿ ದುಡಿದವರ ಹೆಸರನ್ನು ಬಳಸಿಕೊಂಡ ಡಾ. ಆರ್. ಗಣೇಶ್ ಅವರ ಸಾಹಿತ್ಯವು ಜೊತೆಯಾದದ್ದು ಇಲ್ಲಿನ ಆನಂದ ಅನುರಣನದಲ್ಲಿನ ಮತ್ತೊಂದು ವಿಶೇಷ.

Harini Santanam

ದಿವಂಗತ ಸುಂದರೀ ಅವರ ಅಧ್ಯಯನ ಕೌಶಲ್ಯದ ಅಲರಿನಲ್ಲಿ ಅರಳಿದ ದೇಸೀಕರಣ ಗ್ರಂಥವು ನಿಜಕ್ಕೂ ದಕ್ಷಿಣದ ದೇಶೀ ನೃತ್ಯಚಲನೆಗಳ ಚೆಲುವನ್ನು ಕಣ್ತುಂಬಿಕೊಂಡ ಗ್ರಂಥ. ಡಾ. ಪದ್ಮಾ ಸುಬ್ರಹ್ಮಣ್ಯಂ ಅವರ ಮುನ್ನುಡಿ, ಡಾ. ಆರ್. ಗಣೇಶರು ದೇಶೀ ಕರಣಗಳಿಗಿತ್ತ ಶ್ಲೋಕ-ನಾಮಧೇ(ಧ್ಯೇ)ಯಗಳ ಸಂಪತ್ತು ಇದರ ಮೌಲ್ಯಾತೀತ ಸೌಂದರ್ಯದರ್ಶಕಗಳು. ವಿಷದವಾದ ಅಧ್ಯಯನ, ಅಚ್ಚುಕಟ್ಟಾದ ಸುಂದರವಾದ ವಿನ್ಯಾಸ, ಚಿತ್ರಗಳು, ಆಕರ್ಷಕ ಮತ್ತು ಸುಸ್ಪಷ್ಟ ಛಾಯಾಚಿತ್ರ, ಸರಳವೆನಿಸುವ ಭಾಷೆ, ಉತ್ತಮ ಗುಣಮಟ್ಟದ ಮುದ್ರಣ…ಒಟ್ಟಿನಲ್ಲಿ ಎತ್ತೆಡೆಯಿಂದ ಪರಿಕಿಸಿದರೂ ಲೋಪಕ್ಕೆಣೆಯಿಲ್ಲದೆ ನಿರೂಪಿತಗೊಂಡ ಉತ್ತಮ ಅಧ್ಯಯನಸಾಮಗ್ರಿ. ಸಾವಿರ ರೂ ಮುಖಬೆಲೆಯ ಈ ಪುಸ್ತಕ ಕಲಾವಿದರಾದಿಯಾಗಿ ಪ್ರತಿಯೋರ್ವ ಕಲಾಸಕ್ತ ರಸಿಕನ ಮನೆಯಲ್ಲಿರಬೇಕಾದ, ಮನದಲ್ಲಿರಬೇಕಾದ ಸಂಗ್ರಹಯೋಗ್ಯ ಕೃತಿ. ಈ ಹಿನ್ನೆಲೆಯಲ್ಲಿ ಅವರ ಮಗಳು ಹರಿಣಿ ಸಂತಾನಂ ಮತ್ತು ಬಳಗದ ಶ್ರಮ ನಿಜಕ್ಕೂ ಅಭಿನಂದನೀಯ.

ಹೆಚ್ಚಿನ ವಿವರ ಮತ್ತು ಪುಸ್ತಕಗಳಿಗಾಗಿ ನೂಪುರ ಭ್ರಮರಿ ಪತ್ರಿಕೆಯ ಸಂಪಾದಕರನ್ನು ೯೯೬೪೧೪೦೯೨೭ ನ್ನು ಸಂಪರ್ಕಿಸಬಹುದು.

Leave a Reply

*

code