Author: ಮನೋರಮಾ. ಬಿ.ಎನ್
‘ಭಾರತದ ಕಲೆಗಳು ಅನಾದಿ, ಅದರಲ್ಲಿ ಬದಲಾವಣೆಯೇ ಆಗಿಲ್ಲ, ಪ್ರಶ್ನಾರ್ಹವಲ್ಲದ ಪುರಾತನ ಪರಂಪರೆ ನಮ್ಮದು’ ಎಂದು ನಂಬಿಸುವ, ನಂಬುವ ಎರಡೂ ವರ್ಗವಿದೆ. ಇಂದಿಗೂ ನಮ್ಮಲ್ಲಿ ಪುರಾತನ ನಾಟ್ಯಪದ್ಧತಿಯೇ ಉಳಿದು ಬಂದಿದೆ, ಅದನ್ನು ಯಥಾವತ್ ಅನುವರ್ತಿಸಬೇಕು ಎಂದು ಬಡಾಯಿ ಕೊಚ್ಚಿಕೊಳ್ಳುವ ಕಲಾವಿದರೇ ಹೆಚ್ಚು. ಇದರಿಂದಾಗಿ ಆಗುತ್ತಿರುವ, ಆಗಬಹುದಾದ ಲೋಪ, ತೊಂದರೆಗಳ ಕುರಿತು ಅಷ್ಟಾಗಿ ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗುವುದೇ ಇಲ್ಲ. ಅಪ್ರಬುದ್ಧವಾಗಿ ಪ್ರಾಚೀನತೆಯನ್ನು ಆರೋಪಿಸಿಕೊಂಡು ಬರುತ್ತಿರುವುದು ಅವ್ಯಾಹತವಾಗಿ ಮುಂದುವರೆಯುತ್ತಿರುವುದರಿಂದ ಶಿಕ್ಷಣ, ಅರಿವಿನ ಪ್ರಸಾರಕ್ಕೆ ಸ್ರೋತವಾಗಬೇಕಾದ ಅದೆಷ್ಟೋ ವಿಚಾರಸಂಕಿರಣಗಳು, ಸಮ್ಮೇಳನಗಳು ಪ್ರಾರಂಭದಲ್ಲೇ ಹಾದಿ ತಪ್ಪುತ್ತಿವೆ. ಬದಲಾವಣೆಯ ಸಹಜತೆ ಕಾಲಮನೋಧರ್ಮವೆಂದು ಅರಿಯುವಲ್ಲಿ ಆಗುತ್ತಿರುವ ತೊಡಕು ಅಧ್ಯಯನ, ಅಭ್ಯಾಸ, ಪ್ರದರ್ಶನಗಳಲ್ಲಿ ಕಂದಕಗಳನ್ನೇ ಸೃಷ್ಟಿಸುತ್ತಿವೆ.
ಅಷ್ಟೇ ಅಲ್ಲ, ‘ಬದಲಾವಣೆ ಆಗಿದೆ’ ಎಂದು ಒಪ್ಪುವವರು ಕೂಡಾ ‘ಅದು ತೀರಾ ಇತ್ತೀಚೆಗೆ ಆದದ್ದು,’ ಎಂಬ ನಿಟ್ಟಿನಲ್ಲಿ ಬದಲಾವಣೆಯೆಂಬುದು ಭ್ರಷ್ಟ, ಹಾಳಾದದ್ದು, ಜನಪ್ರಿಯವಾದದ್ದು ಎಂಬರ್ಥದಲ್ಲೇ ವಾದಿಸುತ್ತಾರೆ. ನಿಜ ಹೇಳಬೇಕೆಂದರೆ ಎಷ್ಟೋ ವಿದೇಶಿಗರು ನಮ್ಮನ್ನು ಬೊಟ್ಟುಮಾಡಿ ನಮ್ಮಲ್ಲೂ ಚಲನೆ ನಿರಂತರವಾಗಿ ಕಾಲಕಾಲದಿಂದಲೂ ನಡೆಯುತ್ತಲೇ ಬಂದಿದೆ ಎಂದು ತೋರಿಸುವವರೆಗೂ ಬಹುಪಾಲು ಮಂದಿ ನಮ್ಮವರಿಗೆ ಅದರ ಅರಿವೂ ಇರಲಿಲ್ಲ !
ಇಷ್ಟರಮಟ್ಟಿಗಿನ ಪೀಠಿಕೆಯ ಹಿಂದೆ ಒಂದು ಕಾರಣವಿದೆ. ಅದು ಇತ್ತೀಚಿನ ದಿನಮಾನಗಳಲ್ಲಿ ವ್ಯಾಪಕವಾಗಿ ಪ್ರಚಲಿತವಾಗುತ್ತಿರುವ ಒಂದು ‘ಟ್ರೆಂಡ್’ನ ಸೂಚಿ. ಆ ಮೂಲಕವಾಗಿ ತಾವು ಪ್ರಾಚೀನತೆಯನ್ನು ಗೌರವಿಸುತ್ತೇವೆ ಎಂಬ ಬ್ಯಾನರ್ ಬಗಲಿಗೆ ಹಾಕಿಕೊಳ್ಳುವುದು ಒಂದು ಲಾಭವಾದರೆ; ‘ಅಂತಹುದರ’ ಆಧಾರದಲ್ಲಿ ತಮ್ಮ ಅಧ್ಯಯನ, ಮಾತುಕತೆಗಳು ಹೊರಬಂದರೆ ಅದು ನಿರ್ವಿವಾದವಾಗುತ್ತವೆ, ಘನತೆ ಒದಗುತ್ತದೆಯೆನ್ನುವ ಮಟ್ಟಿಗೆ ಮಂಕುಬೂದಿ ಎರಚುವ ಗಟ್ಟಿತನ. ಅಂತಹ ಮೂಲ ಆಕರ ಬೇರಾವುದೂ ಅಲ್ಲ; ಭರತನ ‘ನಾಟ್ಯಶಾಸ್ತ್ರ’!!!
ಅದೊಂದು ಕಾಲವಿತ್ತು. ನಾಟ್ಯಶಾಸ್ತ್ರದ ಹೆಸರೆತ್ತಿದರೆ ಸಾಕು ‘ಶಾಂತಂ ಪಾಪಂ’ ಎಂದು ಕೆನ್ನೆ ಕೆನ್ನೆಗೆ ಹೊಡೆದುಕೊಳ್ಳುವಷ್ಟರ ಮಟ್ಟಿಗೆ; ನಾಟ್ಯಶಾಸ್ತ್ರದ ಅಂಶಗಳನ್ನು ಪ್ರಾಯೋಗಿಕ ನೆಲೆಗೆ ತರಲು ಹಿಂದೇಟು ಹಾಕುವ ಅಸ್ಪೃಶ್ಯತೆ. ಹೆಚ್ಚೇನೂ ದೂರ ಹೋಗಬೇಕಿಲ್ಲ. ೫೦-೬೦ ದಶಕದ ಹಿಂದಕ್ಕೆ ಒಮ್ಮೆ ಕಣ್ಣೋಟ ಹರಿಸಿದರೂ ಸಾಕು; ನೃತ್ಯಪದ್ಧತಿ ನಡೆದು ಬಂದ ಹಾದಿಗೆ ಸಾಕ್ಷಿಯೆಂಬಂತೆ ಬಹಳ ಸ್ಪಷ್ಟವಾಗಿ ನಾಟ್ಯಶಾಸ್ತ್ರದ ಭಗ್ನ ಅವಶೇಷಗಳು ಕಾಲಿಗೆ ತೊಡರುತ್ತವೆ. ಇಲ್ಲಿನ ಮತ್ತೊಂದು ವಿಶೇಷದ ಸಂಗತಿಯೆಂದರೆ ಇದೇ ಅವಧಿಯಲ್ಲಿಯೇ ಕ್ರಾಂತಿಕಾರಕವಾದ ನಡೆಗಳು ಕಾಣಿಸಿಕೊಂಡು ನಾಟ್ಯಶಾಸ್ತ್ರದ ಅರಿವನ್ನು ಮೈಮನದೊಳಕ್ಕಿಳಿಸಿಕೊಳ್ಳುವ ಸಂಶೋಧನೆಗಳು, ಅನುವಾದಗಳು, ವ್ಯಾಖ್ಯಾನಗಳೂ ನಡೆದವು. ಅಸ್ಪೃಶ್ಯತೆಯ ಸಂಕೋಲೆಯಿಂದ ಸ್ಪೃಶ್ಯವಾಗುವ ಸಂಧಿಕಾಲದೊಳಗೆ ನಡೆದ ಪ್ರಗತಿ, ದೊರಕಿದ ನೋಟ ಇಂದಿನ ಕಾಲಕ್ಕೂ ಆದರ್ಶಪ್ರಾಯವಾಗಿ ನಿಂತಿವೆ.
ಆದರೆ ಪಡೆದುಕೊಂಡದ್ದನ್ನು ಉಳಿಸಿಕೊಳ್ಳುವ ಲವಲೇಶ ಕಳಕಳಿಯೂ ಇಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ಕಳೆದ ೫ ವರುಷಗಳಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಕನ್ನಡಿ ಹಿಡಿಯುತ್ತಿವೆ. ಭರತಖಂಡದ ಕಲೆಗಳಿಗೆ ಭರತನ ಶಾಸ್ತ್ರವೇ ಆಧಾರವಾಗಿದ್ದರೂ ಕಂಡದ್ದು ಮುಟ್ಟಿದಕ್ಕೆಲ್ಲಾ ನಾಟ್ಯಶಾಸ್ತ್ರದ ನಂಟೆಂದರೆ ಏನನ್ನೋಣ ? ಶಾಸ್ತ್ರದ ಅರಿವು ಕೊಂಚಮಟ್ಟಿಗೆ ಧನಾತ್ಮಕವಾಗಿ ಹಬ್ಬುತ್ತಲಿದೆ ಎಂದು ತಿಳಿಯುವಷ್ಟರೊಳಗೆ ಅದನ್ನುಯಾವ ಬಗೆಯಲ್ಲೆಲ್ಲಾ ತಮಗೆ ಅನುಕೂಲಕರವಾಗಿ ಪರಿವರ್ತಿಸಬಹುದು ಎಂಬ ಲಾಭಕೋರತನ. ಅನಾದಿಯೆಂಬುದನ್ನು ತಮ್ಮ ನಖಶಿಖಾದ್ಯಂತವೂ ಅಂಟಿಸಿಕೊಳ್ಳುವ ವ್ಯವಸ್ಥಿತ ಸಂಚು. ಒಟ್ಟಿನಲ್ಲಿ ತಮಗನಿಸಿದ ವ್ಯಾಖ್ಯಾನಗಳನ್ನು ನೀಡುವ, ತಮಗನಿಸಿದ ಅಧ್ಯಯನಗಳಿಗೆಲ್ಲಾ ಶಾಸ್ತ್ರಾಧಾರದ ಲೇಪ ಕೊಡುವ ಹಿತಾಸಕ್ತಿಗಳಿಗೆ ನಾಟ್ಯಶಾಸ್ತ್ರವೇ ಮೊದಲ ಬಲಿ !!
ಹಾಗೆ ನೋಡಿದರೆ ಭರತನ ನಾಟ್ಯಶಾಸ್ತ್ರವನ್ನಾಧರಿಸಿ ತದನಂತರದ ಶತಮಾನಗಳಲ್ಲಿ ಹಲವು ಗ್ರಂಥಕರ್ತರು, ಶಾಸ್ತ್ರಕಾರರು, ವ್ಯಾಖ್ಯಾನಕಾರರು ಗ್ರಂಥಗಳನ್ನು ಬರೆದಿದ್ದಾರೆ. ಹೀಗಾಗಿ ಮಾರ್ಗದೊಳಗೂ ಅನೇಕ ಗುರಿಗಳೆಡೆಗೆ ಹಲವು ಉಪಮಾರ್ಗಗಳು ಕಾಲದೊಂದಿಗೆ ಹೆಜ್ಜೆ ಹಾಕುತ್ತಾ ನಡೆದು ವಿಭಿನ್ನ ಪರಂಪರೆಗಳನ್ನು ಕಾಣುತ್ತಾ ಬಂದಿದೆ. ಆ ಪರಂಪರೆಗಳೊಳಗೂ ಒಳಪರಂಪರೆಗಳು ನಿರ್ಮಿತವಾಗಿ ಕಾಲಕ್ರಮದಲ್ಲಿ ಇಚ್ಛಾನುಸಾರ ನಡೆಗಳನ್ನು ಪಡೆದಿದೆ. ಹೀಗೆ ಭರತಮಾರ್ಗಪದ್ಧತಿಯಿಂದ ಪಕ್ಕಕ್ಕೆ ಹೊರಳಿಕೊಂಡ ಎಲ್ಲಾ ನರ್ತನಪದ್ಧತಿಯೂ ಕಾಲ-ದೇಶ-ಸ್ಥಿತಿಯನ್ನು ಅವಲಂಬಿಸಿ ಆಯುಷ್ಯವನ್ನು ಪಡೆಯುತ್ತವೆ; ಅದರ ಬಾಲ್ಯದಿಂದ ವೃದ್ಧಾಪ್ಯದ ವರೆಗೂ ಕಾಲ-ಜೀವನಸಹಜವಾದ ಸ್ಥಿತ್ಯಂತರಗಳನ್ನು ಅನುಭವಿಸುತ್ತಾ ಬೆಳೆದು ಕೊನೆಗೆ ಸತ್ತ್ವವಾದುದನ್ನಷ್ಟೇ ಉಳಿಸಿ ಮರೆಗೆ ಸರಿಯುತ್ತವೆ. ಸತ್ತ್ವಗಳ ಬುಡ ಗಟ್ಟಿಯಿದ್ದಷ್ಟು ದಿನ ಪರಂಪರೆಯೂ ತನ್ನ ಭೌತಿಕವಲ್ಲದಿದ್ದರೂ, ಸೂಕ್ಷ್ಮ ಶರೀರದಿಂದ ಬದುಕುತ್ತಾ ಪ್ರೇರಣೆ, ಪೋಷಣೆಯನ್ನೀಯುತ್ತವೆ. ನಾಟ್ಯಶಾಸ್ತ್ರದ ಅಡಿಪಾಯ ಇದ್ದಾಗ್ಯೂ ಇಂತಹ ಹಲವು ಪರಂಪರೆಗಳಿಗೆ ನಮ್ರವಾಗಿ ಬದುಕಿದ ಅದೆಷ್ಟೋ ಶಾಸ್ತ್ರೀಯ ಮಾನ್ಯತೆ ಪಡೆದ ಪಾರಂಪರಿಕ ನೃತ್ಯಗಳು ಮತ್ತು ಕಲಾವಿದರು ಇಂತಹ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳಬಾರದೇ? ಎಲ್ಲದಕ್ಕೂ ನಾಟ್ಯಶಾಸ್ತ್ರದ ಅಂಶಗಳನ್ನೇ ಆರೋಪಿಸಿ ಸಾಧಿಸುವ ಬಲವಂತವ್ಯಾಕೆ?
ಆದರೆ ನಾಗಾಲೋಟದ ಕಾಲದೊಂದಿಗೆ ಕಾಲುಹಾಕುವ ಅವಸರಕ್ಕೆ ಬಿದ್ದ ಮನಸ್ಸು ಇದಾವುದರ ಸುಳಿವನ್ನು ಅರಿಯುವ ವ್ಯವಧಾನವನ್ನಾಗಲೀ, ನಮಗೆ ನಾವೇ ಮಾಡಿಕೊಳ್ಳುತ್ತಿರುವ ವಂಚನೆ ಎಂಬ ಪ್ರಜ್ಞೆಯನ್ನಾಗಲೀ ನೀಡದಿರುವುದು ದುರದೃಷ್ಟ. ಅದಕ್ಕೆ ತಕ್ಕಂತೆ ನಾಟ್ಯಶಾಸ್ತ್ರದ ಅಂತಃಸತ್ತ್ವದ ಒಂದಂಶವನ್ನು ಅರಗಿಸಿಕೊಳ್ಳುವುದಕ್ಕೂ ಮುಂಚೆಯೇ ಕಾಲ, ದೇಶ ಔಚಿತ್ಯದ ವ್ಯಾಪ್ತಿಯನ್ನರಿಯದೆ ಶಾಸ್ತ್ರದ ಸೆರಗಿನಡಿಯಲ್ಲಿ ರಾಜಾರೋಷವಾಗಿ ಕಳ್ಳಾಟವಾಡುವ ಈ ಅಪಾಯಕಾರಿ ಬುದ್ಧಿಯೂ ಕಾಣಿಸಿಂಡಿದ್ದು; ನುಂಗಲಾರದ ತುತ್ತೇ ಆಗಿದೆ. ನಾಟ್ಯಶಾಸ್ತ್ರದ ಪ್ರಸ್ತುತತೆಯ ಅರಿವು ಬೆಳೆಯುತ್ತಿದೆ ಎಂಬ ಸಂತಸಕ್ಕಿಂತಲೂ ಆಗಬಹುದಾದ ಅಪಸವ್ಯಗಳತ್ತ ಗಮನಹರಿಸಿದರೆ ನೃತ್ಯ ಮತ್ತೊಮ್ಮೆ ಕತ್ತಲೆಯ ಯುಗವನ್ನು ಪ್ರವೇಶಿಸುವ ಕಾಲ ಒದಗಬಹುದೇ ಎಂದು ಅನಿಸದಿರದು. ಅಷ್ಟೇ ಅಲ್ಲ, ಮುಂದೊಂದು ದಿನ ಶಾಸ್ತ್ರದ ಹೆಸರಿನಲ್ಲಿ ಏನೇನೋ ಅವಾಂತರಗಳಿಗಿಂತ ಏನೂ ಇಲ್ಲದ ಸ್ಥಿತಿಯೇ ಕ್ಷೇಮ ಎಂದುಕೊಳ್ಳುವ ಪ್ರಮೇಯ ಪುನರುಕ್ತವಾದರೆ ತಲೆತಗ್ಗಿಸಿ ಪಶ್ಚಾತ್ತಾಪಪಟ್ಟರೂ ಪ್ರಾಯಶ್ಚಿತ್ತವೇ ಇಲ್ಲದಂತಾದೀತು. ರಸೋತ್ಪತ್ತಿಯ ದಾರಿಗಳೆಡೆಗೆ ದುರ್ಬೀನು ಹಾಕಿ ಹುಡುಕುವ ಸಂದರ್ಭಗಳು ಎದುರಾದೀತು !