ಅಂಕಣಗಳು

Subscribe


 

ನಾಟ್ಯಾವತರಣ ರೂಪಣದ ಶ್ಲಾಘ್ಯ ಪ್ರಯತ್ನ

Posted On: Sunday, December 29th, 2013
1 Star2 Stars3 Stars4 Stars5 Stars (No Ratings Yet)
Loading...

Author: - ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಮತ್ತು ಮನೂ ‘ಬನ’

ನಾಟ್ಯ ಎಂಬ ಶಬ್ದ ಮತ್ತು ಕಲೆಯನ್ನುಕೇಳರಿಯದ ಮಂದಿ ವಿರಳ. ಆದರೆ ಭರತಮುನಿಯಿಂದ ಪ್ರಣೀತವಾದ ನಾಟ್ಯಶಾಸ್ತ್ರ ನಿರ್ಮಾಣದ ಹಿಂದಿರುವ ಆ ಮಹರ್ಷಿಯ ಶ್ರದ್ಧೆ, ತಪಸ್ಸು ಹಾಗೂ ಚಿಂತನೆ ಏನು ಎಂಬುದು ಬಹುತೇಕ ಅಪರಿಚಿತವೇ. ಒಂದು ಶಾಸ್ತ್ರ ರೂಪೊಡೆಯಬೇಕಿದ್ದರೆ ಎಷ್ಟೆಲ್ಲಾ ತೊಡಕು, ಜಿಜ್ಞಾಸೆ, ಚಿಂತನ-ಮಂಥನ ನಡೆಯಬೇಕಲ್ಲ ಎಂಬುದೇ ವಿಸ್ಮಯದ ಸಂಗತಿ.

ಶಾಸ್ತ್ರನಿರ್ಮಿತಿಯ ಪ್ರಯಾಸ ಕಥನವನ್ನು ಸ್ವಯಂ ಭರತಮುನಿಯೇ ದಾಖಲಿಸಿದ್ದು ಕುತೂಹಲದ ವಿಷಯ. ಇಂಥ ಕುತೂಹಲ ಸೋಪಾನಗಳನ್ನೇ ಗುರುತಿಸಿ ಆಯ್ದು, ಅದನ್ನೇ ನಾಟ್ಯವಸ್ತುವಾಗಿ ಪ್ರಯೋಗಿಸುವ ಅಪೂರ್ವ ಪ್ರಯತ್ನವು ಕೀರ್ತಿಶೇಷ ಸುಂದರೀ ಸಂತಾನಂ ಅವರ ಪ್ರತಿಭಾಫಲವಾಗಿದ್ದು; ಇತ್ತೀಚೆಗೆ ಅವರ ಶಿಷ್ಯೆಯಂದಿರಾದ ದೀಕ್ಷಾ ಶಾಸ್ತ್ರಿ, ನಮಿತಾ ರಾವ್ ಅವರ ಯುಗಳ ನೃತ್ಯದ ಮೂಲಕ ಅನಾವರಣಗೊಂಡಿತು.

ಸುಂದರೀ ಸಂತಾನಂ ಅವರ ಮಗಳು, ಶಿಷ್ಯೆ ಹರಿಣಿಯವರ ಏಕವ್ಯಕ್ತಿ ನರ್ತನದಲ್ಲಿ 2007ರಲ್ಲಿ ಪ್ರಥಮ ಬಾರಿಗೆ ಪ್ರದರ್ಶಿತಗೊಂಡ ಈ ನಾಟ್ಯಾವತರಣದ ಪರಿಕಲ್ಪನೆ, ಭರ್ಜರಿ ಆರು ವರ್ಷಗಳ ತರುವಾಯ ಸುಧಾರಿತ ಆವೃತ್ತಿಯ ರೂಪದಲ್ಲಿ ಡಿಸೆಂಬರ್ 21ರಂದು ಬೆಂಗಳೂರಿನ ಬಿಟಿಎಂ ಕಲ್ಚರಲ್ ಅಕಾಡೆಮಿಯ ಆಯೋಜನೆಯಲ್ಲಿ ರಮಣ ಮಹರ್ಷಿ ಅಂಧ ವಿದ್ಯಾರ್ಥಿಗಳ ಶಾಲಾಸಭಾಂಗಣದಲ್ಲಿ ಮೂಡಿಬಂತು.

ನಾಟ್ಯಶಾಸ್ತ್ರದ ಕುರಿತ ಭಕ್ತಿ ಮತ್ತು ಅಧ್ಯಯನನಿಷ್ಠೆಯನ್ನು ಪುನರ್ನವೀಕರಿಸಿಕೊಳ್ಳುವುದಕ್ಕೆ ಸಾಕ್ಷಿಯಾದ ಈ ಸಂಗತಿಯು ವಿದ್ವನ್ಮಿತ್ರರಾದ ಶತಾವಧಾನಿ ಡಾ.ಆರ್.ಗಣೇಶರ ಅಭಿನಂದನೆಯ ಮುಹೂರ್ತಕ್ಕೆ ಅನುರೂಪವಾಗಿ ಮೂಡಿಬಂದದ್ದು ಮತ್ತೊಂದು ವಿಶೇಷ. ಬಿಟಿಎಂ ಕಲ್ಚರಲ್ ಅಕಾಡೆಮಿಯ ಸಂಘಟಕಶ್ರೇಷ್ಠ ಅನಂತರಾಂ ಅವರ ಆಸಕ್ತಿ-ಪ್ರಯತ್ನಗಳ ದ್ಯೋತಕವಾಗಿದ್ದ ಈ ಕಾರ್ಯಕ್ರಮದಲ್ಲಿ, ಗಣೇಶ್ ಅವರ ಕಾವ್ಯಕುಸುಮಗಳನ್ನು ಆಸ್ವಾದನೆಗೆ ಅನುಕೂಲಿಸುವಂತೆ ಅವರೆದುರಿಗೇ ಸಾಭಿನಯವಾಗಿ ಅರ್ಪಿಸುವ ಈ ಉಪಕ್ರಮಕ್ಕೆ ಹರಿಣಿ ಮತ್ತು ಡಾ.ಶೋಭಾ ಶಶಿಕುಮಾರ್ ಅವರೂ ಕೈಜೋಡಿಸಿದ್ದರು.

ನಾಟ್ಯಾವತರಣದ ಪರಿಕಲ್ಪನೆಯೇ ಪೂರ್ಣಶಃ ಶಾಸ್ತ್ರಗಂಧಿ. ದೇಶೀ ಎನ್ನಬಹುದಾದ ಹಂತದಿಂದ ಮಾರ್ಗದ ಸ್ತರಕ್ಕೆ ವಿಸ್ತರಿಸಿಕೊಳ್ಳುವ ಕಲೆಯ ಅಭಿಯಾನದಲ್ಲಿ, ಶಾಸ್ತ್ರ ಸೂತ್ರ್ರಗಳ ರಚನೆಯಲ್ಲಿ ಇರಬೇಕಾದ ಲೋಕಸಂಗ್ರಹದ ಕಥನವೇ ಇದರ ವಸ್ತು. ಅನುಭವಗಳ ಪ್ರಬುದ್ಧತೆಯಿಂದ ಶಾಸ್ತ್ರವೂ ಹೇಗೆ ಪರಿಷ್ಕೃತವಾಗುತ್ತಾ ಹೋಗುತ್ತದೆ ಎಂಬುದನ್ನು ಹೇಳುವ ಕಥನರೂಪಕ್ಕೆ ಹೊಂದಿಕೊಳ್ಳುವಂತೆ ಮಾರ್ಗ ಕರಣಗಳ ಜೊತೆಜೊತೆಗೆ ಕೆಲವೊಂದು ದೇಸೀ ಕರಣಗಳನ್ನು ಹೊಸೆದದ್ದು ಒಟ್ಟು ಸಂದರ್ಭವನ್ನು ಯೋಚಿಸುವುದಾದರೆ ಅನ್ವರ್ಥಪ್ರಾಯವಾದ ಆದರ್ಶ ನರ್ತನ ಸಾಂಗತ್ಯ. ಇದು ಸುಂದರೀ ಅವರ ಅಧ್ಯಯನಸಾರವನ್ನು ಮತ್ತೊಮ್ಮೆ ಆಘ್ರಾಣಿಸಲು ಅನುಕೂಲ ಮಾಡಿಕೊಟ್ಟದ್ದಷ್ಟೇ ಅಲ್ಲ; ಮಾರ್ಗ-ದೇಶಿಯ ಸಹಜ ಸಾಮರಸ್ಯವನ್ನು ಪ್ರತಿಷ್ಠಾಪಿಸುವಲ್ಲಿ ಹೊಸ ಕಾಣ್ಕೆಯನ್ನೂ ಇತ್ತಿತು. ಭರತಮುನಿ ಕರಣ-ಅಂಗಾಹಾರಾದಿಗಳನ್ನು ಲಕ್ಷಣೀಕರಿಸುವ ಮುನ್ನವೇ ‘ಅಮೃತಮಥನ’ವನ್ನು ಪ್ರಯೋಗಿಸು ತ್ತಾನಾದ್ದರಿಂದ, ಇಲ್ಲಿ ಪ್ರಯೋಗದಲ್ಲೂ ದೇಶೀಕರಣಗಳನ್ನು ಕಲಾವಿದೆಯರು ಕೆತ್ತಿದ್ದು ಅಧ್ಯಯನೀಯ.

ನಾಂದೀಪದ್ಯದೊಂದಿಗೆ ಆರಂಭಗೊಳ್ಳುವ ನರ್ತನಕ್ರಮವು ನಾಟ್ಯಶಾಸ್ತ್ರೋತ್ಪತ್ತಿ, ಸಮವಕಾರದ ಉಪದ್ವಾಪ್ಯಗಳು ಮತ್ತು ಡಿಮ ರೂಪಕವನ್ನು ಕರಣಾದಿಗಳ ಅಗತ್ಯ ನರ್ತನಾಹಾರಗಳ ಹಿನ್ನೆಲೆಯಲ್ಲಿ ಸ್ಥಾಪಿಸುವುದು, ಪೂರ್ವರಂಗ-ಜರ್ಜರಪೂಜೆಗಳ ಹದವಾದ ಅಭಿವ್ಯಕ್ತಿ, ವಿದ್ಯುದ್ಬ್ರಾಂತ ಅಂಗಾಹಾರದ ಬೆರಗುಗಳನ್ನು ಒಳಗೊಳ್ಳುತ್ತಾ ಹೋಗುತ್ತದೆ. ಆರ್ಭಟೀ-ಭಾರತೀ-ಸಾತ್ತ್ವತೀ-ಕೈಶಿಕೀ ಎಂಬ ಚತುರ್ವೃತ್ತಿಗಳ ಜನನದ ಆಯಕ್ಕೆ ಒದಗುವ ಮಧುಕೈಟಭ ಸಂಹಾರದ ಕಥಾನಕ, ಭರತಪುತ್ರರಿಗೆ ಮುನಿಗಳ ಶಾಪ, ಪಾರ್ವತಿಯಿಂದ ಉಷೆಗೆ ನಾಟ್ಯ ಹರಿದು ಭೂಮಿಗೆ ಅವತರಣಗೊಂಡ ಕಥಾಹಂದರ ಭರತನೃತ್ಯದ ಜತಿ-ಸಾಹಿತ್ಯ-ಸ್ವರಗಳ ನೇಯ್ಗೆಯ ಜರಿಯಂಚಿನ ಸೆರಗಿನಲ್ಲಿ ನಯನಾಭಿರಾಮವಾಗುತ್ತದೆ.

ಕೇವಲ ರಂಜನೆಗಾಗಿ ಹುಟ್ಟಿದ ‘ಕ್ರೀಡನೀಯಕ’ವು ರಾಕ್ಷಸರ ವ್ಯಕ್ತಿಗತ ಆಕ್ರೋಶದಿಂದ ಕ್ರಮೇಣ ತಿದ್ದುಪಡಿಗೆ ಒಳಗಾಗುತ್ತಾ ಹೋಗಿ ವಿಭಾವಾನುಭಾವ ರಸಾಭಿನಯ ಇತ್ಯಾದಿ ಮೂಲತತ್ತ್ವಗಳನ್ನು ಆವಿಷ್ಕರಿಸಿಕೊಳ್ಳುತ್ತಾ ಪ್ರೇಕ್ಷಕನಿಗಿರಬೇಕಾದ ಸಂಸ್ಕಾರದ ತನಕ ನಿರ್ದೆಶಿಸುತ್ತಾ ಹೋಗುತ್ತದೆ. ಇದು ನಾಟ್ಯಶಾಸ್ತ್ರದ ಅಧ್ಯಾಯಾಂತರಗಳ ವಸ್ತುಶಿಲ್ಪವನ್ನು ರೇಖಿಸುವ ಒತ್ತಡದಿಂದಾಗಿ ಹುಟ್ಟುವ ಅಮೃತಮಥನ, ತ್ರಿಪುರ ಸಂಹಾರದಂತಹ ಕಥಾಲತೆಯ ಮೂಲಕ ಮತ್ತಷ್ಟು ಸ್ಪಷ್ಟ. ರಸಭಾವಗಳ ನೀರುಗೊಬ್ಬರವನ್ನು ತೃಪ್ತವಾಗಿ ಹೀರಲಗದ ಚಡಪಡಿಕೆ ಯಾವ ಮಟ್ಟದಲ್ಲಿ ಕಲಾವಿದ ಮತ್ತು ಪ್ರೇಕ್ಷಕನಲ್ಲಿರುತ್ತದೆ ಎಂಬುದಕ್ಕೆ ನಾಟ್ಯಾವತರಣ ಎಲ್ಲಾ ನಿಟ್ಟಿನಲ್ಲಿಯೂ ನಿದರ್ಶನ.

ಇಡೀ ಪ್ರಯೋಗದ ಚೋದನಕ್ಕಿಂತ ಶೋಧನ ಮತ್ತು ರೂಪಣ ಪ್ರಧಾನವಾದುದ್ದರಿಂದ ಫಲಿತವೂ ನಿಬದ್ಧ. ನಿರೂಪಣೆಯ ಒಡಕಿನ ಖಂಡಗಳಲ್ಲಿ ಅರಳಿಕೊಳ್ಳಬೇಕಾಗಿದ್ದ ಆಸ್ವಾದನೆ ಪೂರ್ಣ ಸತ್ತ್ವದ ಸ್ಥಾಯಿಯನ್ನು ತಲುಪಲು ವಿದ್ವದ್ರಸಿಕರಿಗೆ ಕೊಂಚ ಹಿನ್ನೆಡೆಯೇ ಆದರೂ ಪ್ರಥಮತಃ ನೋಡುವವರಿಗೆ ಹೊಸ ಆಲೋಚನೆಗಳ ಬುತ್ತಿಯನ್ನುಂಡ ತೃಪ್ತಿ ದೊರಕುತ್ತದೆ. ಆದರೆ ಇಂತಹ ಕ್ಲಿಷ್ಟ, ಸಂಕೀರ್ಣವೂ ಆದ ವಸ್ತುವನ್ನು ಆಯ್ದುಕೊಳ್ಳುವುದೇ ಸಾಹಸೋದ್ಯಮ ಎಂಬುದನ್ನು ಮರೆಯುವಂತಿಲ್ಲ. ಆರು ಭಾಗಗಳಲ್ಲಿ ಹರಡಿಕೊಂಡಿರುವ ನಾಟ್ಯಾವತರಣದ ಪ್ರಯೋಗ ಭೂಮಿಕೆಯನ್ನು ಖಂಡವಾಗಿ ನೋಡುತ್ತಲೇ ಇಡಿಯಾಗಿ ಕಟ್ಟಿಕೊಡುತ್ತಾ ನಾಟ್ಯಶಾಸ್ತ್ರವನ್ನೂ, ಅದರ ಅಂದವನ್ನೂ ಪರಿಚಯಿಸುವುದು ಕಷ್ಟತಮವೇ ಸರಿ. ಈ ನಿಟ್ಟಿನಲ್ಲಿ ಭರತನಿಗೂ, ಗುರುವಿಗೂ ನ್ಯಾಯ ಸಲ್ಲಿಸುವಲ್ಲಿ ಕಲಾವಿದೆಯರ ಪರಿಶ್ರಮ ಅಭಿನಂದನೀಯ.

ವಿಶೇಷತಃ ದೇಶೀಕರಣಗಳ ಸೋದ್ದೇಶಪ್ರಾಯೋಗಿಕ ಪ್ರದರ್ಶನದ ನಾಟ್ಯೇತಿಹಾಸದ ರೂಪಣದ ನಂತರ ರಂಗವನ್ನು ತುಂಬಿದ್ದು ಡಾ.ಶೋಭಾ ಶಶಿಕುಮಾರ್ ಅವರ ಭಾವನಿರ್ಭರವಾದಸಾತ್ತ್ವಿಕದ ಸೀಮಾಸ್ಪರ್ಶದ ಕಲಕುವ ಕಾಡುವ ಕಮನೀಯ ಭರತನೃತ್ಯ. ಇಡೀ ಕಾರ್ಯಕ್ರಮ ಶತಾವಧಾನಿ ಡಾ.ಆರ್.ಗಣೇಶರ ಕೃತಿಗಳ ಹಂದರದ್ದಾದ್ದರಿಂದ ಶೋಭಾ ಮೊದಲಾಗಿ ಪ್ರಸ್ತುತಪಡಿಸಿದ್ದು ಕೃಷ್ಣಭಿತ್ತಿಯನ್ನು. ಗಣೇಶರ ಇಷ್ಟವ್ಯಕ್ತಿಗಳಲ್ಲಿ ಪ್ರಥಮವಂದ್ಯ ಶ್ರೀಕೃಷ್ಣ. ಕೃಷ್ಣನ ಒಟ್ಟು ವ್ಯಥೆ-ಕಥೆಯನ್ನು ಸೆರೆಹಿಡಿದ ವೃತ್ತಾಶ್ರಿತವಾದ ಸಾಹಿತ್ಯವು ನೃತ್ಯಾಶ್ರಿತವಾಗಬೇಕಾದ ಅನಿವಾರ್ಯತೆಯಿಂದ, ವಿತಾಲಗಣದ ಸಾಹಿತ್ಯ ತಾಲದ ತೋಲನಕ್ಕೆ ತೊಡಗಿಸಿಕೊಳ್ಳುವುದರಲ್ಲಿ ಏಗುತ್ತಿತ್ತು. ಆದರೂ ನಾಟ್ಯನಿರ್ವಹಣೆಗೆ ತೊಡಕೆನಿಸದಿರುವುದೇ ಸ್ವಾರಸ್ಯಾಂಶ.

ಗಮನಾರ್ಹ ಸಂಗತಿ ಎಂದರೆ ಡಾ.ಶೋಭಾ ಅವರ ನಾಟ್ಯಕಥನವು ಗಾನಕಥನದ ಹಂಗೇ ಇಲ್ಲದೆ ಕೃಷ್ಣಚರಿತ್ರದ ಮುಖ್ಯಸೋಪಾನದ ಚಿತ್ರಣವನ್ನು ಕಟ್ಟಿಕೊಡುವಷ್ಟು ಸಂವಾಹ್ಯವಾಗಿತ್ತು. ಕೃಷ್ಣನ ಬಾಲ್ಯದಿಂದ ತೊಡಗಿ ಪ್ರಾಣೊತ್ಕ್ರಮಣದ ತನಕದ ಕಥಾಪ್ರಸಕ್ತಿಗಳು ಸಾಹಿತ್ಯದಲ್ಲಿ ಒಂದೋ ಎರಡೋ ಶಬ್ದಮಾತ್ರಗಳಲ್ಲಿ ತಮ್ಮನ್ನು ತೋರಿಸಿಕೊಳ್ಳುತ್ತಿದ್ದು, ಯಾವುದೂ ಒಂದು ವಾಕ್ಯದಷ್ಟೂ ಹಿಗ್ಗುವಿಕೆಯಿಲ್ಲದೆ, ಕೇವಲ ತರ್ಜನೀಸೂಚಕಗಳಾಗಿದ್ದವು. ಇದರಿಂದಾಗಿ ನಾಟ್ಯವಿಸ್ತಾರಕ್ಕೂ ಸಾಹಿತ್ಯಗಾನವಿಸ್ತಾರಕ್ಕೂ ಸೌಹಾರ್ದ ಸಾಂಗತ್ಯದ ಹಿತದ ಹೊದಿಕೆಯ ಅಂತರ ಕಾಣುತ್ತಿತ್ತು. ಅದನ್ನುಳಿದು ಶೋಭಾ, ಕಥಾವೃತ್ತವನ್ನು ಕಟ್ಟಿಕೊಟ್ಟ ಪರಿ ಶೋಭಾವಹವೇ ಸರಿ. ಮುಖ್ಯವಾಗಿ ಒಂದೊಂದು ಪಾತ್ರದಲ್ಲೂ ಆಯಾ ಪಾತ್ರದ ಶೀಲ-ಸ್ವಭಾವ-ಸ್ವರೂಪವನ್ನು ಖಚಿತವಾಗಿ ಉಚಿತವಾಗಿ ಶಿಲ್ಪಿಸುವಲ್ಲಿ ಅವರು ತೊರಿದ ಸೂಕ್ಷ್ಮತೆ ‘ಅಧ್ಯಯನೀಯ’ ಎನಿಸುವಷ್ಟು ಉನ್ನತಿಕೆಯದೂ, ಆಸ್ವಾದನೀಯ ಎನಿಸುವಷ್ಟು ಪನ್ನತಿಕೆಯದೂ ಆಗಿತ್ತು. ಬಹುಷಃ ಶೋಭಾ ಅವರ ಛಾಪು ಇರುವುದು ಇಲ್ಲೇ.

Deevatige -'Natyavatarana' 2nd half article photo of Dr.Shobha 1 (2)

ನಾಟ್ಯ ಕಲಿತವರಿಗೂ, ಕಲಿಯದವರಿಗೂ ಏಕಕಾಲದಲ್ಲಿ ಅವರು ಸ್ವೀಕಾರ್ಯರಾಗಿಬಿಡುತ್ತಾರೆ. ಇದಕ್ಕೆ ಕಾರಣ ಪಾತ್ರದ ಮೂಲಕ ಘಟನೆಗಳನ್ನು ನಿರೂಪಿಸುವಾಗಿನ ಸಂಯಮ, ನಾಟ್ಯಶಾಸ್ತ್ರನಿರ್ದೇಶನದ ಅಂಗಾವಯವಗಳ ಗರಿಷ್ಠವಾದ ಬಳಕೆ, ಪ್ರಧಾನತಃ ಸಹೃದಯ ಪ್ರೇಕ್ಷಕರಿಗೆ ಹೇಳಬೇಕಾದ್ದನ್ನು ಭಾವಶಬಲತೆಯಿಂದ ಮುಟ್ಟಿಸುವ ನಿಟ್ಟಿನಲ್ಲಿ ಇರಬೇಕಾದ ಪ್ರಾಮಾಣಿಕತೆ, ಪರಿಶ್ರಮ ಕಲಾವಿದೆಯಲ್ಲಿ ತುಂಬಿ ತುಳುಕುವಷ್ಟು ಇದೆ ಎಂಬುದು ಅಂದಿನ ಅವರ ಒಟ್ಟು ಕಾರ್ಯಕ್ರಮದಲ್ಲಿ ಕಂಡುಬಂದ ನಾಟ್ಯರಾಗ.

ಒಂದನೆಯ ಕೃತಿಯಲ್ಲಿ ಕೃಷ್ಣನ ಮಾನವಸಾಮಾನ್ಯದ ಚಿತ್ರವಿದ್ದರೆ, ಎರಡನೆಯ ಕೃತಿಯಲ್ಲಿ ಶ್ರೀಕೃಷ್ಣನ ಭಗವತ್ಸ್ವರೂಪದ ಭೂಮಚಿತ್ರದ ಮೂಲಕ ಕಲಾವಿದೆ ಉಭಯಸ್ತರದಲ್ಲೂ ಕೃಷ್ಣನನ್ನು ಸಾಕ್ಷಾತ್ಕರಿಸಿದರು. ಅನಂತರದ ಎರಡು ಕೃತಿಗಳೂ ಲೌಕಿಕವೂ, ಮಧುರಶೃಂಗಾರರಸನಿಷ್ಠವೂ ಆಗಿತ್ತು. ಒಂದು ಮುಗ್ಧಾ ನಾಯಿಕೆ ‘ರಸಿಕಸಹಾಯ’; ಇನ್ನೊಂದು ಸಾಧಾರಣ ನಾಯಿಕೆಯಾದ ವಾರಾಂಗನೆಯನ್ನು ಸಖಿಯರೊಂದಿಗೆ ತರಾಟೆಗೆ ತೆಗೆದುಕೊಳ್ಳುವ ಸ್ವೀಯಾ ನಾಯಿಕೆ ‘ಅನ್ಯಾಭತ್ಸರೆ’. ಇವೆರಡೂ ನಾಯಿಕೆಯರೂ ಗಣೇಶರ ಸೃಷ್ಟಿಯೇ ಗಿದ್ದದ್ದು ಒಂದು ವಿಶೇಷವಾದರೆ, ಶೋಭಾ ಅವರ ಸೃಷ್ಠಿಶೀಲತೆ ಎದ್ದು ಕಾಣುವುದು ಲೋಕಪ್ರಸಿದ್ಧವಾದ ರಸಾವರಣದ ಕಥಾರೇಖೆಗೆ ಜೋಡಿಸುವ ಸ್ವಂತಕಲ್ಪನೆಯ ಲೋಕಧರ್ಮಿಯ ಜಾನಪದೀಯವಾದ ಹಿನ್ನೆಲೆಯ ದೃಶ್ಯ.

Deevatige -'Natyavatarana' 2nd half article photo of Dr.Shobha 1 (1)

ಎರಡು ಬಗೆಯ ನಾಯಿಕೆಯರ ಹದವಾದ ಸಾಂಗತ್ಯ, ಸ್ನೇಹಿತೆಯರ ಬೆಂಬಲದಲ್ಲಿ ‘ಅನ್ಯಾಭತ್ಸರೆ’ ಅರಳುತ್ತಾಳೆ. ನಾಯಿಕೆಗೆ ತನ್ನ ಪತಿ ಊರ ವಾರಾಂಗನೆಯೋರ್ವಳಲ್ಲ್ಲಿ ಅನುರಕ್ತಳಾಗಿರಬಹುದೆಂಬ ಶಂಕೆ. ಅದಕ್ಕೆ ತಕ್ಕಂತೆ ಅವನ್ನು ಬುಟ್ಟಿಗೆ ಹಾಕಿಕೊಂಡ ಪಣ್ಯಸ್ತ್ರೀ ಗರುಡಬಂಗಾಳಿ ಮಾಡುತ್ತಿದ್ದಾಳೆ. ಮತ್ತೊಬ್ಬನಿಗೆ ತನ್ನ ದೈವ ಒಲಿದರೆ ಎಂಬ ದುಗುಡದ ಭಕ್ತನ ಸ್ಥಿತಿ ಇಲ್ಲಿ ನಾಯಿಕೆಯದು. ರಸನಿರೂಪಣವೇ ಪ್ರಧಾನವಾದ ಇಂತಹ ಕೃತಿಯಲ್ಲಿ ಶೃಂಗಾರಸ್ಥಾಯಿಯಾದ ಮೇಟಿಗಂಬದ ಸುತ್ತ ಸುಳಿಯುವ ಇತರೇತರ ರಸಭಾವಗಳ ವಿಜೃಂಭಣ ಶ್ಲಾಘನೀಯವಾದದ್ದು. ಈ ಕಥಾರೇಖೆಗೆ ಶೋಭಾ ಪ್ರೇಕ್ಷಕರನ್ನು ಮಾನಸಿಕವಾಗಿ ಹದಗೊಳಿಸಲು ಸೀದಾ ಊರಬಾವಿಕಟ್ಟೆಗೆ ಕರೆದುಕೊಂಡು ಹೋಗಿ ಬಟ್ಟೆ ಒಗೆಯುತ್ತಾ ಸ್ನೆಹಿತೆಯರೊಂದಿಗೆ ಕಷ್ಟಸುಖ ಸಮಾಲೋಚಿಸುವ ನಾಯಿಕೆಯನ್ನು ಪರಿಚಯಿಸುತ್ತಾರೆ. ಊರಬಾವಿಕಟ್ಟೆ ಎಂದರೆ ಗಾಳಿಸುದ್ದಿಯ ಅರಗಿನ ಮನೆ. ಊರಮೇಲಿನ ಉಸಾಬರಿಗಳೆಲ್ಲಾ National News ಎನಿಸುವಷ್ಟರಮಟ್ಟಿಗೆ seriouss ಆಗಿ discuss ಆಗುತ್ತದೆ !

ಇಲ್ಲಿ ಆದದ್ದೂ ಅದೇ. ಎಲ್ಲರೂ ಸಮಾನದುಃಖಿಗಳು. ನಾಯಿಕೆಯಂತೆಯೇ ಆಕೆಯ ಸ್ನೇಹಿತೆಯರ ಗಂಡಂದಿರೂ ವೇಶ್ಯೆಯ ಬೆನ್ನುಬಿದ್ದಿದ್ದಾರೆ ಎಂಬ ಅನಿಸಿಕೆ ರೂಪುಪಡೆಯುತ್ತದೆ. ಮನೆಯ ಧಕನಕ ವಸ್ತುಗಳು ಆಕೆಯ ಮನೆಯ ಹಳ್ಳ ಹಿಡಿಯುತ್ತಿರಬಹುದೇ ಎಂಬಲ್ಲಿಗೆ ಕುರುಹುಗಳ ವಿನಿಮಯ. ಹಲುಬುತ್ತಾ, ಕೊರಗುತ್ತಾ ಕೋಪದಿಂದ ಕೈಕೈಹಿಸುಕಿಕೊಳ್ಳುತ್ತಾ ಕುದಿಯುತ್ತಿರುವ ಹೊತ್ತು. ಸಮಯಕ್ಕೆ ಸರಿಯಾಗಿ ‘ಮನೆದೇವರನ್ನು ಬುಟ್ಟಿಗೆ ಹಾಕಿಕೊಂಡವಳ’ ಆಗಮನವಾಗುತ್ತದೆ. ಅಲ್ಲಿಗೆ ಅವರೆಲ್ಲರ ಮಾತಿನ ಪ್ರಹಾರಕ್ಕೆ ಅವಳು ಆಹಾರವಾಗುತ್ತಳೆ. ಹೊೈಕೈ ಮಲೆತು warning ಕೊಟ್ಟಲ್ಲಿಗೆ ಬಿಡುಗಡೆ. ಇಲ್ಲಿ ಲಕ್ಷಿಸಬೇಕಾದದ್ದು ನಿರೂಪಣೀಯ ರಸಾಂಶಕ್ಕೆ ಪೋಷಕವಾದ ಗಟ್ಟಿ ದೃಶ್ಯಾವರಣದ ಕಲ್ಪನೆ. ಈ ವಸ್ತುವಿಗೆ ಇದಕ್ಕಿಂತಲೂ ಒಪ್ಪುವಂತಹದ್ದನ್ನು ರಂಗೌಚಿತ್ಯದ ಮಿತಿಯಲ್ಲಿ ಹೊಂಚುವುದು ದುಃಸ್ಸಾಧ್ಯವೇನೋ ! ಬಾವಿಕಟ್ಟೆಯ ಆಯ್ಕೆಯ ಮೂಲಕ ಸ್ವಚ್ಛಂದವಾಗಿ ಲೋಕಧರ್ಮಿಯನ್ನು ಸಮಯಾರ್ದವಾಗಿ ಬಳಸುವ ಅವಕಾಶವನ್ನು ಬಳಸಿಕೊಂಡು ಭತ್ರ್ಸನಪುಷ್ಪಿಯಾದದ್ದು ಕಲಾವಿದೆಯ ಜಾಣ್ಮೆ.

ಎರಡನೇ ‘ರಸಿಕಸಹಾಯೆ’ ಪ್ರಸಕ್ತಿಯಲ್ಲಿ ಶೃಂಗಾರದ್ದೇ ಆದ ಮೌಗ್ಧ್ಯವು ಮುಂಚೂಣಿಗೆ ಬರುತ್ತದೆ. ನಾಯಕನ ವಿಶ್ವಾಸವನ್ನು ಪರಿಕಿಸಲು ತರಹೇವಾರಿ iಜeಚಿಗಳನ್ನು ಕೊಡುವಂತೆ ಕೇಳಿಕೊಳ್ಳುವ ನಾಯಿಕೆ, ವಿಧೇಯತೆಯಿಂದ ಸಖಿಯ ಮಾತುಗಳನ್ನು ಕೇಳಿದರೂ ಅದೆಲ್ಲಾ ಕುಟಿಲೋಪಾಯಗಳನ್ನು, ರಸಿಕತೆಯ ಆಟಾಟೋಪಗಳನ್ನು ಚಲಾಯಿಸುವ ಚಳುಕಿಲ್ಲದ ಅಬೋಧಮುಗ್ಧೆ ಕೊನೆಗೆ ‘ಬಡವನೇ ಮಡಗಿದಾಂಗ್ಹಿರು’ ಎಂಬಂತೆ ಶುದ್ಧಳೂ ಶುಚಿಯೂ ಉಳಿಯುತ್ತಾಳೆ. ಆದರೆ ಮೊದಲ ಶೃಂಗಾರಕಥಾತಂತ್ರದಲ್ಲಿ ಕಂಡುಬಂದ ಕಚಗುಳಿ, ತೀವ್ರತೆ ಎರಡನೆಯದರಲ್ಲಿ ಕೊಂಚ ಮಸುಳಿಸಿತ್ತು. ಆದರೂ ಸವಾಲೆನಿಸುವ ‘ರಸಿಕಸಹಾಯೆ’ ಯಂತಹ ನಾಯಿಕೆಯ ಪೋಷಣೆಯನ್ನು ಸರಾಗವಾಗಿ ಸಾಕ್ಷೀಕರಿಸಿದ್ದರು. ಕೊನೆಗೆ ಶಿವನ ಕುರಿತಾದ ದುರ್ಗಾರಾಗದ ತಿಲ್ಲಾನ ಮಂಗಳಮಯವಾಗಿತ್ತು.

ತಮ್ಮ ದೇಹಯಷ್ಟಿಯನ್ನು ಪ್ರತಿಯೊಂದು ಶಬ್ದಾರ್ಥ-ಭಾವಾರ್ಥ- ಧ್ವನ್ಯರ್ಥಗಳ ಅಭಿವ್ಯಕ್ತಿಗೆ ಸಮರ್ಥವಾಗಿ ಉಪಯೋಗಿಸುವ ಡಾ.ಶೋಭಾ ಭರತನಶಾಸ್ತ್ರಪಂಚಾಂಗದ ಮೇಲೆ ಬೆವರು ಸುರಿಸಿ ಮಣ್ಣು ಹೊತ್ತು ಮೈಬಗ್ಗಿಸಿದ್ದು ಸ್ಪಷ್ಟವಾಗಿ ಅನುಭವಕ್ಕೆ ಬರುತ್ತಿತ್ತು. ನರನರಗಳಲ್ಲಿ, ಕೀಲುಕೀಲುಗಳಲ್ಲಿ, ಸ್ನಾಯುಸ್ನಾಯುಗಳಲ್ಲಿ ರಸಭಾವಗಳ ತೋರ್ಕೆಗೆ ಕಲಾವಿದೆ ತಮ್ಮನ್ನು ತಪಃಶೀಲೆಯಾಗಿ ಕಟೆದುಕೊಳ್ಳುತ್ತಿದ್ದಾರೋ ಏನೋ ! ನಾಟ್ಯರಂಗದ ನಮ್ರಸಾಧಕಿಗೆ ಹಾರ್ದನಮನ.

ಬೆಳಕು ಮತ್ತು ಧ್ವನಿವರ್ಧಕದ ಸಹಕಾರ ಮತ್ತಷ್ಟು ಇರುತ್ತಿದ್ದರೆ ನರ್ತನ ಮತ್ತಷ್ಟು ಕಳೆಗಟ್ಟುತ್ತಿತ್ತು. ಗಾನಕ್ರಮದಲ್ಲಿ ಒಂದೇ ಕೃತಿಗೆ ಆಗಾಗ್ಗೆ ರಾಗಗಳ ಬದಲಾವಣೆಯು ಭಾವನಿರ್ಮಾಣ ಮಾಡುವಲ್ಲಿ, ನರ್ತನವನ್ನು ಅನುಸರಿಸುವಲ್ಲಿ ತೊಡರುಗಾಲು ಹಾಕುತ್ತದೆಯಾದ್ದರಿಂದ ಈ ಕುರಿತು ಕಲಾವಿದರು ಗಮನ ಹರಿಸಬಹುದು. ಆದಾಗ್ಯೂ ಇವೆರಡೂ ನೃತ್ಯವಿಶೇಷಗಳಿಗೆ ಗಾಯನದಲ್ಲಿ ಕಾಂಚನ ಶ್ರೀರಂಜಿನಿ, ನಟುವಾಂಗದಲ್ಲಿ ಪ್ರಸನ್ನ ಕುಮಾರ್, ಮೃದಂಗದಲ್ಲಿ ಲಿಂಗರಾಜು, ಕೊಳಲಿನಲ್ಲಿ ವೇಣುಗೋಪಾಲ್ ಅವರದ್ದು ಉತ್ತಮ ಮೇಳಪರಿಪಾಕ.

(ಲೇಖಕರು ಕವಿ, ರಂಗಕರ್ಮಿ, ಅವಧಾನ ಪೃಚ್ಛಕರು, ರಾಮಕಥಾ ರೂಪಕ ನಿರ್ದೇಶಕರು)

Leave a Reply

*

code