Author: ಕಾವ್ಯ/ಸಾಹಿತ್ಯ-ಸಂಯೋಜನೆ : ಮನೋರಮಾ ಬಿ.ಎನ್ ಸಂಸ್ಕೃತ ಶ್ಲೋಕಗಳು : ನಾಟ್ಯಶಾಸ್ತ್ರ (ಭರತಮುನಿ)
(ಮುಂದುವರಿದುದು…)
ನಾಲ್ಕನೇ ಅಧ್ಯಾಯ- ತಾಂಡವಲಕ್ಷಣ
ಸಮವಕಾರ
ಕಳೆದ ಸಂಚಿಕೆಗಳಲ್ಲಿ ನಾಟ್ಯೋತ್ಪತ್ತಿಯೆಂಬ ಪ್ರಥಮ ಅಧ್ಯಾಯದ 3 ಭಾಗಗಳನ್ನು ನಿರೂಪಿಸಲಾಗಿತ್ತು. ಪ್ರಸ್ತುತ ನಾಲ್ಕನೇ ಅಧ್ಯಾಯವಾದ ತಾಂಡವಲಕ್ಷಣದಲ್ಲಿ ಬರುವ ಪ್ರಸಕ್ತಿಯಿಂದ ಭರತನು ಮೊದಲು ಮಾಡುವ ನಾಟ್ಯಪ್ರಯೋಗದ ಕಥೆ ಅಮೃತಮಂಥನವನ್ನು ಆರಿಸಲಾಗಿದೆ. ಇದೇ ಕಥೆಯನ್ನು ಭರತನು ಮೊದಲು ಪ್ರದರ್ಶಿಸಿದನಾದರೂ ದಾನವರ ವಿಘ್ನಗಳಿಂದಾಗಿ ಪ್ರಯೋಗ ಅಂದಗೆಡುತ್ತದೆ.
ನಂತರ ಜರ್ಜರದ ಉಪಯೋಗ, ದೇವತೆಗಳ ರಕ್ಷಣೆ ಮತ್ತು ಬ್ರಹ್ಮನು ತಿಳಿಹೇಳಿದ್ದರಿಂದ ವಿಘ್ನನಿವಾರಣೆಗೊಂಡು ಸೂಕ್ತ ರಂಗಮಟಪದ ನಿರ್ಮಾಣವಾದಲ್ಲಿಗೆ ಅಮೃತಮಂಥನದ ಕಥೆಯನ್ನು ಪುನಾ ಪ್ರದರ್ಶಿಸುವ ಸಮಯ ಉದ್ಯುಕ್ತವಾಗುತ್ತದೆ. ಅಂತೆಯೇ ಬ್ರಹ್ಮನ ಆಣತಿಯಂತೆ ಭರತನು ಕೈಲಾಸದ ತಪ್ಪಲಲ್ಲಿ ಶಿವನೆದುರಿಗೆ ಪೂರ್ವರಂಗವಿಧಿಯ ಸಹಿತ ನೃತ್ಯಪ್ರದರ್ಶನವನ್ನು ಏರ್ಪಡಿಸುತ್ತಾನೆ. ಈ ಪೂರ್ವರಂಗವು ಸರಳವಾಗಿದ್ದು ಶುದ್ಧ ಪೂರ್ವರಂಗ ಎಂಬ ಹೆಸರಿಗೆ ಭಾಜನವಾಗುತ್ತದೆ.
ಇದರ ನಂತರದಲ್ಲಿ ಸಮುದ್ರಮಂಥನ ಕಥಾಭಾಗದ ನಾಟ್ಯಕ್ರಮವನ್ನು ಸಮವಕಾರ ಎಂಬ ಹೆಸರಿನಲ್ಲಿ ಕೈಗೆತ್ತಿಕೊಂಡು ಪ್ರಯೋಗಿಸಲಾಗುತ್ತದೆ. ಇಲ್ಲಿ ಕಂಡುಬರುವ ಹಿಮಾಲಯ ಪರ್ವತದ ಮನಮೋಹಕವಾದ ವರ್ಣನೆಯಿಂದ ಹಿಮಾಲಯ ಮತ್ತದರ ಪಕ್ಕದ ಕಾಶ್ಮೀರವು ಭರತನ ಆವಾಸಸ್ಥಾನವಿರಬಹುದೆಂದು ಊಹಿಸಲಾಗುತ್ತದೆ.
ಸಮವಕಾರ ಎಂಬುದು ನಾಟ್ಯಶಾಸ್ತ್ರ ಹೇಳುವ 10 ಬಗೆಯ ರೂಪಕಗಳೆಂಬ ನಾಟ್ಯವಿಧಾನದಲ್ಲಿ ಮೊದಲನೆಯ ಬಗೆಯಾಗಿದ್ದು; ದೇವಾಸುರರ ಕಥೆಯಾಗಿರುವುದು ಇಲ್ಲಿನ ಮುಖ್ಯ ಅಂಶ. ಇದರಲ್ಲಿ ಎಲ್ಲ ಬಗೆಯ ನಾಯಕ, ಪ್ರತಿನಾಯಕ, ಸ್ತ್ರೀಯರ ಗಡಣವೇ ನೆರೆದಿದ್ದು; ಹೆಚ್ಚು ಜನರಿಂದ ಹೆಚ್ಚು ಹೊತ್ತು ಪ್ರದರ್ಶನಗೊಳ್ಳುತ್ತದೆ. ಕಪಟ, ಮತ್ಸರ, ಗಲಾಟೆಗಳು ಸನ್ನಿವೇಶದಲ್ಲಿರುತ್ತವೆಯಾದರೂ ಎಲ್ಲಾ ಬಗೆಯ ರಸಗಳು ಪ್ರತಿಪಾದನೆಯಾಗುತ್ತಿರುತ್ತವೆ. ಧರ್ಮ, ಅರ್ಥ, ಕಾಮಗಳೆಂಬ ಮೂರು ಬಗೆಯ ಜೀವನಸೂಕ್ಷ್ಮಗಳಿರುತ್ತದೆ ಎಂಬುದು ಇದರ ಸಂಕ್ಷಿಪ್ತ ಲಕ್ಷಣ.
(ಖಂಡ) ಬ್ರಹ್ಮ :- ನಾಟ್ಯಾಮೃತವ ಉಣಿಸೆ ಅಮೃತಮಂಥನ ಮಾಡು
ನಟಶೇಖರನ ಇದಿರು ಇದು ಸಮವಕಾರ
ಹಿಮಗಿರಿಯ ಹೊಲದಲ್ಲಿ ರಂಗವಂದನೆ ಮಾಡೆ
ಹೆಸರಾಯಿತದು ಶುದ್ಧಪೂರ್ವರಂಗ
ಹರನ ಸಾಕ್ಷಾತ್ಕಾರ ನುಡಿಬಡಿತ ಝೇಂಕಾರ
ಹಿರಿತನದ ಕಥೆಯಿಹುದು ಸಾಗರದಸಂಗ
(ಸಮವಕಾರ ರೂಪಕವನ್ನು ಲಕ್ಷಣಸಹಿತ ಮಾಡುವಾಗ)
ದೇವಾಸುರರು ಮಲೆತ ಕಪಟ ವಿದ್ರವದ ಕಥೆ
ಧರ್ಮಾರ್ಥಕಾಮಗಳ ಸೂಕ್ಷ್ಮ ಸಂತುಷ್ಟತೆ
(ಆಲಾಪನೆ, ಸ್ವರಪ್ರಸ್ತಾರ, ಪಾಟಾಕ್ಷರಗಳ ಸಂಯೋಜನೆಯನ್ನು ಅನುಕೂಲಕರವಾಗಿ ಮಾಡಬಹುದು.)
(ಮುಂದಿನ ಮಾಲಿಕೆಯಲ್ಲಿ ಡಿಮ/ತಾಂಡವನೃತ್ಯ…ನಿರೀಕ್ಷಿಸಿ)