ಅಂಕಣಗಳು

Subscribe


 

ನಾಟ್ಯಾಚಾರ್ಯ ಮುರಳೀಧರರಾವ್ : ಅಂತಿಮ ನಮನ

Posted On: Wednesday, May 10th, 2017
1 Star2 Stars3 Stars4 Stars5 Stars (No Ratings Yet)
Loading...

Author: ಡಾ. ಮನೋರಮಾ ಬಿ.ಎನ್

2008ರಲ್ಲಿ ಮಾಡಿದ ಸಂದರ್ಶನ.. ಮಾಸ್ಟರನ್ನು ನೆನೆಯುತ್ತಾ…ಮತ್ತೊಮ್ಮೆ ಓದಿಗಾಗಿ 

Rajyotsava Prashasti

Rajyotsava Prashasti

ಪಂದನಲ್ಲೂರು ಭರತನಾಟ್ಯ ಶೈಲಿಯ ಹಿರಿಯ ಗುರು. ೧೯೨೪ ರಲ್ಲಿ ಕಾಸರಗೋಡಿನಲ್ಲಿ ಜನಿಸಿದ ಇವರು, ೧೯೫೮ರಲ್ಲಿ ಕಥಕ್ಕಳಿ ನೃತ್ಯ ಕಲಿತರಾದರೂ ಕ್ರಮೇಣ ಅವರ ಆಸಕ್ತಿ ಚಾಚಿಕೊಂಡದ್ದು ಭರತನಾಟ್ಯದೆಡೆಗೆ. ಪಂದನಲ್ಲೂರು ಚೊಕ್ಕಲಿಂಗಮ್, ಎಂ.ಆರ್. ರಾಜರತ್ನಂ ಪಿಳ್ಳೈ ಅವರಲ್ಲಿ ಅಧ್ಯಯನ. ಹಾಗಾಗಿ ಅವರು ಜ್ಞಾನವೃದ್ಧರೂ ಹೌದು, ವಯೋವೃದ್ಧರೂ ಹೌದು. ಕಲೆಯನ್ನೇ ವರಿಸಿದ ರಾಯರ ವಿದ್ವತ್ತು, ನಿರಂತರ ಶ್ರದ್ಧೆಯ ಫಲವಾಗಿ ರೂಪುಗೊಂಡ ಗ್ರಂಥ ನೃತ್ಯಲೋಕ. ಪ್ರಸ್ತುತ ತಮ್ಮ ಜೀವನದ ಇಳಿಸಂಜೆಯಲ್ಲೂ ಹಲವು ಶಿಷ್ಯರಿಗೆ ಮಾರ್ಗದರ್ಶನವನ್ನೀಯುತ್ತಾ ಮಂಗಳೂರಿನಲ್ಲಿ ನೆಲೆಸಿರುವ ಇವರು ದರ್ಶನ ಭ್ರಮರಿಯ ಅತಿಥಿ…

ಬಿಂಬ ಭ್ರಮರಿ/Photo page

ನೂಪುರ ಭ್ರಮರಿಯ ಸಂಭ್ರಮಾಚರಣೆಯಲ್ಲಿ ನೃತ್ಯ ಮಾರ್ಗ ಮುಕುರದ ಮೊದಲ ಪ್ರತಿಯನ್ನು ಡಾ ಪ್ರಧಾನ ಗುರುದತ್ ಅವರು ನೀಡುತ್ತಿರುವುದು. ಡಾ. ಜಿ ಬಿ. ಹರೀಶ್ ಜೊತೆಗಿದ್ದಾರೆ

ನೂಪುರ ಭ್ರಮರಿಯ ಸಂಭ್ರಮಾಚರಣೆಯಲ್ಲಿ ನೃತ್ಯ ಮಾರ್ಗ ಮುಕುರದ ಮೊದಲ ಪ್ರತಿಯನ್ನು ಡಾ ಪ್ರಧಾನ ಗುರುದತ್ ಅವರು ನೀಡುತ್ತಿರುವುದು. ಡಾ. ಜಿ ಬಿ. ಹರೀಶ್ ಜೊತೆಗಿದ್ದಾರೆ

SPV_0099

ಮುರಳೀಧರ್ ಮಾಸ್ಟ್ರಿಗೆ ನೂಪುರ ಭ್ರಮರಿ ವತಿಯಿಂದ ಆತ್ಮೀಯ ಸನ್ಮಾನ. ಡಾ ಪ್ರಧಾನ ಗುರುದತ್ , ಡಾ. ಶಂಕರ್ ಮತ್ತು ದಿವಾಕರ ಹೆಗಡೆಯವರು ಚಿತ್ರದಲ್ಲಿದ್ದಾರೆ.

 

೧. ಭರತನಾಟ್ಯವನ್ನು ಪ್ರೇಕ್ಷಕರು ನೋಡುವ ದೃಷ್ಟಿಯಲ್ಲಿ ಏನು ಬದಲಾವಣೆ ಕಂಡಿದ್ದೀರಾ? ಅಂತಹ ಬದಲಾವಣೆಗಳಿಗೆ ಕಾರಣಗಳೇನಿರಬಹುದು?

ಈಗಿನ ದಿನಗಳಲ್ಲಿ ಪ್ರತಿಯೊಬ್ಬರೂ ಭರತನಾಟ್ಯ ಮಾಡುವವರೇ! ಇದರಿಂದಾಗಿ ಯಾವುದು ಶುದ್ಧ ನಾಟ್ಯ ಮತ್ತು ಯಾವುದು ಅಲ್ಲ ಎಂದೇ ತಿಳಿಯದ ಸ್ಥಿತಿ. ಜೊತೆಗೆ ಜನರ ಮನಸ್ಥಿತಿಯೂ ಬದಲಾಗುತ್ತ ಸಾಗಿದೆ. ಆದರೂ ಪ್ರೇಕ್ಷಕರು ಪ್ರಬುದ್ಧರು ಎಂಬುದನ್ನು ಮರೆಯಕೂಡದು. ಮುಖ್ಯವಾದದ್ದನ್ನಷ್ಟೇ ಅವರು ತೆಗೆದುಕೊಳ್ಳುತ್ತಾರೆ. ಆದರೆ ಒಮ್ಮೊಮ್ಮೆ ಕೇವಲ ಕಲಾವಿದರ ಸೌಂದರ್ಯ, ಸೌಷ್ಟವಗಳನ್ನು ನೋಡಿ ಭರತನಾಟ್ಯದ ಸೌಂದರ್ಯವನ್ನು ಅಳೆಯುವವರೂ, ತೀರ್ಪು ಕೊಡುವವರೂ ಇದ್ದಾರೆ. ಉದಾ: ಬಹುಪಾಲು ರಂಗಪ್ರವೇಶಗಳ ಯಶಸ್ಸು ಇವುಗಳ ಮೇಲೆಯೇ ನಿರ್ಣಯವಾಗುತ್ತಿರುವುದು. ಹಾಗಾಗಿ ನೃತ್ಯ ಕೇವಲ ಚಪ್ಪಾಳೆಗಳಿಗೆ ಸೀಮಿತಗೊಳ್ಳುವುದೂ ಇದೆ. ಒಳ್ಳೆಯ ನೃತ್ಯಕ್ಕೂ ಚಪ್ಪಾಳೆ, ಕೆಟ್ಟದಾಗಿ ಮಾಡಿದರೂ ಚಪ್ಪಾಳೆ. ಒಟ್ಟಿನಲ್ಲಿ ಬೆಳವಣಿಗೆಗಳು ಎತ್ತ ಸಾಗುತ್ತಿದೆ ಎನ್ನುವುದೇ ನಿರ್ದಿಷ್ಟವಾಗುತ್ತಿಲ್ಲ.

ಒಂದು ಆತ್ಮೀಯ ಕ್ಷಣ

ಒಂದು ಆತ್ಮೀಯ ಕ್ಷಣ

೨.ಇದರ ಹಿಂದೆ ಇಂದಿನ ಕಲಾವಿದರ ಪಾತ್ರವೇನಾದರೂ ಇದೆಯೇ?

ಇಂದಿನ ಎಷ್ಟೋ ಕಲಾವಿದರಲ್ಲಿ ನೈಪುಣ್ಯತೆಯಿಲ್ಲ…ಸ್ವಂತಿಕೆ, ಸೃಜನಶೀಲತೆಗಳಿಲ್ಲ. ಅವರು ಮಾಡುತ್ತಿರುವುದು ಕೇವಲ ಅನುಕರಣೆಯನ್ನಷ್ಟೇ! ಗುರುಗಳು ಹೇಳಿಕೊಟ್ಟದ್ದನ್ನು ಗಿಣಿಪಾಠ ಒಪ್ಪಿಸುವವರೇ ಹೆಚ್ಚು. ಇದು ಒಳ್ಳೆಯ ಲಕ್ಷಣವಲ್ಲ. ಯಾವುದೇ ಕಲಾವಿದ ಸ್ವಂತಿಕೆ, ಸೃಜನಶೀಲತೆಯಿಲ್ಲದೆ ತನ್ನ ಕಲೆಯಲ್ಲಿ ಶಾಶ್ವತವಾಗಿ ಮುಂದುವರಿಯಲಾರನು.

ಇಂದಿನವರು ಕೀರ್ತನೆ ತಂದು ವರ್ಣದ ತರಹ ಮಾಡಿದರೆ ಸೃಜನಶೀಲತೆಯೆಂದುಕೊಳ್ಳುತ್ತಾರೆ. ಇದು ಎಷ್ಟರ ಮಟ್ಟಿಗೆ ಶಾಸ್ತ್ರಸಮ್ಮತ?

ಜೊತೆಗೆ ಭರತನಾಟ್ಯಕ್ಕೆ ಇಂದು ಎಲ್ಲರೂ ಸಾಹಿತ್ಯ ಬರೆಯುವವರೇ! ಹಿಂದಿನ ವಾಗ್ಗೇಯಕಾರರ ಅಕ್ಷರಗಳಲ್ಲೇ ಸಂಗೀತವೂ ಸೇರಿಕೊಳ್ಳುತ್ತಿತ್ತು. ಅವರಲ್ಲಿ ವಾಕ್+ಗೇಯತೆ ಶಕ್ತಿ ಇತ್ತು. ಆದರೆ ಇಂದಿನವರ ಸಾಹಿತ್ಯಕ್ಕೆ ಬಲವಂತವಾಗಿ ಸಂಗೀತ ಅಳವಡಿಸಬೇಕಷ್ಟೇ! ಹಾಗಾಗಿ ಮನಸ್ಸು ಪಕ್ವಗೊಳ್ಳಬೇಕಿದೆ. ಆಗಲೇ ಕಲಾವಿದೆಯಲ್ಲಿ ಹೊಸತನದ ಅಭಿವ್ಯಕ್ತಿಗೆ ಒಂದು ಅರ್ಥ ಬರುತ್ತದೆ.

೩. ಭರತನಾಟ್ಯದ ಪ್ರಾಚೀನತೆಯ, ಹುಟ್ಟು, ಆಕರದ ಕುರಿತಾಗಿನ ಜಿಜ್ಞಾಸೆಗಳ ಬಗ್ಗೆ ನಿಮ್ಮ ಅಭಿಪ್ರಾಯ?

ಭರತನಾಟ್ಯಕ್ಕೆ ೩೦೦೦ ವರ್ಷದಷ್ಟು ಹಿಂದಿನ ಇತಿಹಾಸವಿದೆಯೆನ್ನುವುದು ಸುಳ್ಳು. ಒಟ್ಟಾರೆ ಎಲ್ಲಾ ಶಾಸ್ತ್ರೀಯ ನೃತ್ಯಕ್ಕೆ ಅಷ್ಟು ಹಿರಿಯದಾದ ಇತಿಹಾಸವಿರಬಹುದಷ್ಟೇ! ಆದರೆ ಭರತನಾಟ್ಯದ ವೈಭವವನ್ನು ವೈಭವೀಕರಿಸುತ್ತಾರೆ. ಭರತನಾಟ್ಯ ಕೇವಲ ೩೦೦ ವರ್ಷಗಳಷ್ಟೇ ಹಿಂದಿನದು. ಅದಕ್ಕೆ ಮೊದಲಿದ್ದ ಹೆಸರು ದಾಸೀ ಆಟ್ಟಂ ಎಂದು.. ಈ ನೃತ್ಯಪ್ರಕಾರಕ್ಕಿದ್ದ ಕಳಂಕ ತೊಡೆಯಲು ಹಿರಿಯರು ಹೆಸರಿಸಿದ ಪದ ಭರತನಾಟ್ಯ.

ಭರತನಾಟ್ಯದ ಮೂಲ ಪ್ರವರ್ತಕನೆನಿಸಿಕೊಂಡ ಭರತಮುನಿ ಭರತನಾಟ್ಯವೆಂದುಕೊಂಡಿರುವ ಯಾವುದನ್ನೂ ಬರೆದವನಲ್ಲ. ಅವನು ಬರೆದದ್ದು ನಾಟಕ ಪ್ರಧಾನವಾದ ಸಂಗತಿಗಳನ್ನು. ಭಾರತದ ಎಲ್ಲಾ ಬಗೆಯ ನೃತ್ಯಕ್ಕೂ ಅದೇ ಮೂಲ. ನಂತರ ಆಯಾಯ ನೃತ್ಯಶೈಲಿಗಳಿಗನುಗುಣವಾಗಿ ಅದರದ್ದೇ ಆದ ಪ್ರಧಾನ ಗ್ರಂಥಗಳು ಬರೆಯಲ್ಪಟ್ಟವು. ಅದು ಭರತನಾಟ್ಯಕ್ಕಿಂತ ತೀರಾ ವಿಭಿನ್ನ. ಆದರೆ ಭರತನಾಟ್ಯ ಹೆಚ್ಚಾಗಿ ಅವಲಂಬಿಸುವುದು ಭರತನ ನಾಟ್ಯಶಾಸ್ತ್ರಕ್ಕಿಂತಲೂ ಹೆಚ್ಚಾಗಿ ನಂದಿಕೇಶ್ವರನ ಅಭಿನಯ ದರ್ಪಣವನ್ನು. ಅದೇ ಯಕ್ಷಗಾನವಾದರೆ ಅದಕ್ಕೆ ನಾಟ್ಯಶಾಸ್ತ್ರ ಆಕರ.

ಭರತನಾಟ್ಯದ ಹುಟ್ಟೂ ಕೂಡಾ ಕರ್ನಾಟಕದ್ದಲ್ಲ. ಅದು ತಮಿಳ್ನಾಡಿನಿಂದ ಬಂದದ್ದು. ಆದರೆ ನಮ್ಮದೆಂಬಂತೆ ಸ್ವೀಕರಿಸಿದ್ದೇವೆ. ತಮಿಳ್ನಾಡಿನಿಂದ ಆಮದಾಗಿದೆ ಎನ್ನುವ ಭರತನಾಟ್ಯಕ್ಕೆ ಇಂದಿಗೂ ಬಳಸುವ ಮುಖ್ಯ ಕೃತಿಗಳೇ ಸಾಕ್ಷಿ ಮತ್ತು ಅನಾದಿ ಕಾಲದ ಗುರುಕುಲ ಪದ್ಧತಿ ಅಲ್ಲಿ ಇಂದಿಗೂ ಉಳಿದಿದೆ.

ತಮ್ಮ ಕೊನೆಯ ದಿನಗಳಲ್ಲಿ ಮುರಳೀಧರ್ ಸರ್ ; ಸಂಪಾದಕಿ ಡಾ. ಮನೋರಮಾ ಅವರೊಂದಿಗೆ

ತಮ್ಮ ಕೊನೆಯ ದಿನಗಳಲ್ಲಿ ಮುರಳೀಧರ್ ಸರ್ ; ಸಂಪಾದಕಿ ಡಾ. ಮನೋರಮಾ ಅವರೊಂದಿಗೆ

೪.ಹಾಗಾದರೆ ಕರ್ನಾಟಕದ ಮೂಲಕಲೆ ಯಾವುದು ಎಂಬುದು ನಿಮ್ಮ ಅನಿಸಿಕೆ?

ದೀರ್ಘವಾಗಿ ವಿವೇಚಿಸಿದರೆ ಕರ್ನಾಟಕದ ದೇಸೀ ಕಲೆ, ಇಲ್ಲಿನ ಜನಪದ-ಜಾನಪದ-ಶಾಸ್ತ್ರೀಯತೆಯನ್ನು, ಸಾಹಿತ್ಯ, ನಡೆ-ನಾಟ್ಯ, ಕೃತಿಯನ್ನು ಮೈಗೂಡಿಸಿಕೊಂಡ ಕಲೆ ಯಕ್ಷಗಾನ.

ಯಕ್ಷಗಾನದ ಮೂಲ ಸ್ವರೂಪ ಸ್ವಲ್ಪ ಮಟ್ಟಿಗಾದರೂ ಉಳಿದಿದೆ ಮತ್ತು ಅದರ ಉಳಿಯುವಿಕೆಯ ದಿಸೆಯಲ್ಲೂ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಆದರೆ ಭರತನಾಟ್ಯ ಕಾಲಾಂತರಗಳಲ್ಲಿ ಸಾಕಷ್ಟು ಬದಲಾವಣೆಗೊಳಪಟ್ಟರೂ ಕರ್ನಾಟಕದಲ್ಲಿ ಮೂಲ ಸಂಸ್ಕಾರವನ್ನು ಕಳೆದುಕೊಳ್ಳುತ್ತಲೇ ಸಾಗುತ್ತಿದೆ.

ಅಷ್ಟಕ್ಕೂ ಭರತನಾಟ್ಯವನ್ನೂ ಸೇರಿಸಿದಂತೆ, ಯಕ್ಷಗಾನದ ಆಡು ಮಾತಿನ ವ್ಯಾಕರಣವನ್ನೇ ಬದಲಾಯಿಸಬೇಕಾಗಿದೆ. ಉದಾ: ಲಾಗ ಹೊಡೆಯುವುದು ಎನ್ನುವುದು. ಅದರ ನಿಜವಾದ ಶಬ್ದಾರ್ಥ ‘ಭ್ರಮರಿ ಎಂದು. ಅದರ ಅರ್ಥ ತಿರುಗು. ಆದರೆ ಅದನ್ನೇ ಲಾಗ ಎಂದಾಗ ಹಾರು ಎಂದಾಗುತ್ತದೆ. ಇದರಿಂದ ಧ್ವನಿ, ಅರ್ಥ ವ್ಯತ್ಯಾಸವಾಗುತ್ತದೆ.

murali

೫.ಭರತನಾಟ್ಯವನ್ನು ಕಲಿಯಲು ಹುಡುಗರೂ ಬಹಳಷ್ಟು ಆಸಕ್ತಿ ತೋರುತ್ತಿದ್ದಾರೆ. ಅವರ ಕಲಿಕಾ ಪ್ರಕ್ರಿಯೆ ಹೇಗಿದ್ದರೆ ಚೆನ್ನ?

ಭರತನಾಟ್ಯವೆಂಬುದು ಮೂಲತಃ ದಾಸೀ‌ಆಟ್ಟಂ ಎಂದು ಕರೆಸಿಕೊಳ್ಳುವ ನೃತ್ಯಶೈಲಿ. ಆ ದಾಸೀ‌ಆಟ್ಟಂ ಪ್ರೇಮ, ಸ್ತ್ರೀ ಸಹಜ ಭಾವನೆಗಳ ಸಮ್ಮಿಲನದ ಸುಂದರ ರೂಪ. ಹಾಗಾಗಿ ಅದನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸುವುದು ಹುಡುಗಿಯರಿಂದಷ್ಟೇ ಸಾಧ್ಯ.

ಹಾಗೆಂದ ಮಾತ್ರಕ್ಕೆ ಹುಡುಗರಿಗೆ ಭರತನಾಟ್ಯ ಶೋಭಿಸುವುದಿಲ್ಲವೆಂದು ಅರ್ಥವಲ್ಲ. ನೃತ್ಯದಲ್ಲಿ ತಾಂಡವ ಅಂಶ ಹೇರಳವಾಗಿದ್ದರೆ ಮಾತ್ರ ಹುಡುಗರಿಗೆ ಚೆನ್ನ. ಜೊತೆಗೆ ಭರತನಾಟ್ಯದಲ್ಲಿ ಕಂಡುಬರುವ ವರ್ಣ, ಪದ, ಜಾವಳಿ ಮುಂತಾದ ನೃತ್ಯ ಪ್ರಕಾರಗಳಲ್ಲೂ ನಾಯಕೀ ಭಾವಕ್ಕೆ, ಅವಳ ವಿರಹ-ಪ್ರೇಮಕ್ಕೆ ಹೆಚ್ಚು ಅವಕಾಶಗಳಿರುತ್ತವೆಯೇ ವಿನಃ ನಾಯಕನು ನಾಯಕಿಯನ್ನು ಹುಡುಕಿಕೊಂಡು ಹೋಗುವಂತಹ ಸಂದರ್ಭಗಳು ತೀರಾ ವಿರಳ. ಹಾಗಾಗಿ ಅಂತಹ ಸಂದರ್ಭಗಳನ್ನು ಹುಡುಗರು ವೇದಿಕೆಯಲ್ಲಿ ವ್ಯಕ್ತಪಡಿಸಹೊರಟರೆ ಆಭಾಸವೆನಿಸಿಕೊಳ್ಳುತ್ತದೆ.

Leave a Reply

*

code