ಅಂಕಣಗಳು

Subscribe


 

ನರ್ಮಪ್ರಸಾದಕ

Posted On: Sunday, September 15th, 2013
1 Star2 Stars3 Stars4 Stars5 Stars (No Ratings Yet)
Loading...

Author: ಶತಾವಧಾನಿ ಡಾ. ಆರ್. ಗಣೇಶ್

ಅಷ್ಟನಾಯಿಕೆಯರ ಅವಸ್ಥೆಗಳಿಗೆ ಪ್ರತಿಕ್ರಿಯಾತ್ಮಕವಾಗಿ ಅಷ್ಟನಾಯಕಾವಸ್ಥೆಯನ್ನು ರೂಪಿಸಬಹುದಾಗಿದ್ದರೂ ಯಾವ ಲಾಕ್ಷಣಿಕರೂ ಅಂತಹ ಅಭೂತಪೂರ್ವ ಸಾಹಸಕ್ಕೆ ಕೈಹಾಕಿರಲಿಲ್ಲ. ಆದರೆ ಶತಾವಧಾನಿ ಡಾ. ಆರ್. ಗಣೇಶರು ನಾಯಕರ ಸಾಲಿಗೆ ಹೊಸ ಸಂವಿಧಾನವನ್ನೇ ನೀಡಿದ್ದು ; ನಾಯಕಭಾವಕ್ಕೆ ಲಕ್ಷಣಗಳನ್ನೂ, ಲಕ್ಷ್ಯಗೀತಗಳನ್ನೂ ರಾಗ-ತಾಳಬದ್ಧವಾಗಿ ರಚಿಸಿದ್ದಾರೆ. ಈಮೂಲಕ ಇದುವರೆವಿಗೂ ಲಕ್ಷಣಬದ್ಧವಾಗದ ಆದರೆ ಲಕ್ಷಣೀಕರಿಸಲು ವಿಫುಲಾವಕಾಶವಿರುವ ಅಂಶಗಳನ್ನು ಕ್ರೋಢೀಕರಿಸಲಾಗಿದೆ. ರಾಗ-ತಾಳಗಳನ್ನೂ ಸ್ವತಃ ಶತಾವಧಾನಿ ಗಣೇಶರೇ ಸಂಯೋಜಿಸಿದ್ದು ; ನಾಯಕರ ಕುರಿತಾಗಿ ಕಾಡುತ್ತಿರುವ ಸಾಹಿತ್ಯದ ಕೊರತೆಯನ್ನು ತುಂಬಿಕೊಡುವಲ್ಲಿ ಇದು ನಿಜಕ್ಕೂ ಅಸಾಧಾರಣ ಪ್ರಯತ್ನವೇ ಸರಿ. ಇದು ಸಾಂಸ್ಕೃತಿಕ ಪತ್ರಿಕಾಲೋಕದಲ್ಲಿ ಹಿಂದೆಂದೂ ಇಲ್ಲದಂತೆ ನೂಪುರಭ್ರಮರಿಯ ಪಾಲಿಗೆ ವಿಶೇಷವಾಗಿ ಒದಗಿದ್ದು ನಿಜಕ್ಕೂ ಒಂದು ಹೆಮ್ಮೆ ಮತ್ತು ಅಪೂರ್ವ ಅವಕಾಶ. ಪಾಂಥ, ಭಾಮೀನೀಭೀತ, ಅಭಿಸಾರಕ, ನಿರೀಕ್ಷಕ, ವಿರಹಿಯ ನಂತರ ಇದೀಗ ನರ್ಮ ಪ್ರಸಾದಕ ಮತ್ತು ಕಲಹಾಂತರಿತರ ಸರದಿ. ನಮ್ಮ ಈ ಪ್ರಯತ್ನ ನಿಮ್ಮಿಂದ ಸದ್ವಿನಿಯೋಗವಾಗಲಿ…

ಇಲ್ಲಿ ರತಿ ಸ್ಥಾಯಿಭಾವ. ನಾಯಕನ ಪ್ರಿಯೆ ಇಲ್ಲಿನ ಆಲಂಬನ ವಿಭಾವ. ಆಕೆಯ ಹಿಂದಿನ ಪ್ರೀತಿ-ನಡವಳಿಕೆ, ಇಂದಿನ ಬೇಸರ-ಕ್ರೋಧ, ಸುತ್ತಮುತ್ತಲ ಪ್ರಕೃತಿ, ಉಳಿದವರ ನಡವಳಿಕೆಗಳು ಈತನಿಗೆ ಉದ್ದೀಪನ ವಿಭಾವ. ದೈನ್ಯ, ಚಿಂತನ, ಸ್ಮೃತಿ, ಔತ್ಸುಕ್ಯ, ಹರ್ಷ, ಅವಹಿತ್ಥ, ವಿತರ್ಕ ಈತನ ವ್ಯಭಿಚಾರಿಭಾವಗಳು. ವಿವೇಕದ ವರ್ತನೆ, ವ್ಯಥೆ, ನಿರೀಕ್ಷೆ, ವಿಷಾದ, ಕಣ್ಣೀರು, ನಿಟ್ಟುಸಿರು, ನಿರುತ್ಸಾಹ, ಪ್ರಲಾಪ, ನಿಶ್ಶಕ್ತಿ, ನಿರಾಶೆ, ಮುನಿಸು, ಗೊಂದಲ, ಹಿಂದಿನ ಸ್ಮರಣೆ, ಭ್ರಾಂತಿ, ಸಂತಾಪ ಇತ್ಯಾದಿ ಈತನಲ್ಲಿ ಕಂಡುಬರಬಹುದಾದ ಕ್ರಿಯೆಗಳು. ಇಲ್ಲಿನ ಸಾಹಿತ್ಯವು ಕಂದಪದ್ಯದಿಂದ ಪ್ರಾರಂಭವಾಗಿ ನಾಯಕನ ಲಕ್ಷಣಗಳನ್ನು ವ್ಯಾಖ್ಯಾನಿಸುತ್ತದೆ. ನಂತರದ ಲಕ್ಷ್ಯಗೀತೆಯಲ್ಲಿ ನಾಯಕನಿಗೆ ಸಂಬಂಧಿಸಿದ ಉದ್ದೀಪನ ವಿಭಾವಗಳ ಸೂಕ್ಷ್ಮಗಳಿವೆ.

ಕಾಯುತ್ತಾ ಕಂಗೆಟ್ಟ ನಾಯಿಕೆಯ ಮನಸ್ಸು ಹದಗೆಡುತ್ತಿರುವ ಸಂದರ್ಭದಲ್ಲೇ ಬರುವ ನಾಯಕನನ್ನು ಕಂಡು ಆತನು ಅನ್ಯಾಸಕ್ತನೆಂದು ಆರೋಪಿಸಿಯೋ, ಅನುಮಾನಿಸಿಯೋ ಬೇಸರಿಸಿ ಖಂಡಿಸುವವವಳೇ ಖಂಡಿತಾ ನಾಯಿಕಾ. ಜೊತೆಗೆ ಆತನು ಮತ್ತೋರ್ವ ಸ್ತ್ರೀಯೊಡನೆ ಇರುವನೆಂದು ತಿಳಿದು ತೀವ್ರವಾಗಿ ಆಘಾತಗೊಂಡು, ತನ್ನ ಸ್ವಭಾವಕ್ಕೆ ಸಹಕರಿಸದಂತಿರುವ ನಾಯಕನು ವಂಚಕನೆಂದು ಗ್ರಹಿಸಿ ಖಂಡಿತೆಯು ನಾಯಕನನ್ನು ನೋಟದಿಂದ ತಿವಿಯುತ್ತಾಳೆ. ಮನಸ್ಸು ಕೆಡಿಸಿಕೊಂಡು ಸಂಘರ್ಷಕ್ಕಿಳಿದು ಮಾತಿನಿಂದ ಮೂದಲಿಸುತ್ತಾಳೆ; ತನ್ನ ಪ್ರೇಮಕ್ಕೆ ಇಂಥ ವಿಶ್ವಾಸಘಾತಕನು ಅರ್ಹನಲ್ಲವೆಂದು ಕುದಿದು ನಿಷ್ಠುರವಾಗಿ ವರ್ತಿಸುತ್ತಾಳೆ. ತನ್ನ ಅಳು, ಗರ್ವ, ಅಸಹ್ಯ, ಕ್ರೋಧ, ಅಪ್ರಿಯತೆ, ನಿಡುಸುಯ್ಲು, ಬೇಸರ, ಅಲಕ್ಷ್ಯ, ಗೊಂದಲ, ವ್ಯಥೆ, ಧಿಕ್ಕರಿಸುವಿಕೆಯನ್ನು ಆತನ ಮೇಲೆ ಕಾರುತ್ತಾಳೆ. ದೂಷಣೆ, ಆಕ್ಷೇಪಣೆ, ಬೆದರಿಸುವುದು, ಹೊಡೆಯುವುದು, ಹೆದರಿಸುವುದು, ಮೌನ ಆಕೆಯ ಸ್ವಭಾವದಲ್ಲಿ ಆಗಾಗ್ಗೆ ಇಣುಕುತ್ತಿರುತ್ತದೆ. ಇಂತಹ ಸನ್ನಿವೇಶದಲ್ಲಿ ಆಕೆಯನ್ನು ಅನುನಯದಿ ಒಲಿಸಿಕೊಳ್ಳಲು ಬರುವವನೇ ಈ ನರ್ಮಪ್ರಸಾದಕ.

ಒಂದರ್ಥದಲ್ಲಿ ಖಂಡಿತೆಯ ಪ್ರಕೃತಿ ಸ್ವಭಾವಕ್ಕೆ ಅಭಿಮುಖವಾದ ವ್ಯಕ್ತಿತ್ವ ನರ್ಮಪ್ರಸಾದಕನದ್ದು. ಖಂಡಿತೆಯನ್ನು ಒಲಿಸಿಕೊಳ್ಳಲು ಮಾಡುವ ಆತನ ಪ್ರಯತ್ನ ನಿರಂತರ. ತನ್ನ ಮಾತುಗಳನ್ನು ಸಾವಧಾನದಿಂದ ಆಲಿಸಬೇಕೆಂದು ಬಿನ್ನಹ ಮಾಡಿಕೊಳ್ಳುತ್ತಾನೆ. ಸುಕೋಮಲ ಶ್ಲಾಘನೆಗಳಿಂದ ಶಾಂತಿಯಿಂದಿರಲು ಕೇಳಿಕೊಳ್ಳುತ್ತಾನೆ. ಯಾರ‍್ಯಾರದ್ದೋ ಚಾಡಿ ಮಾತುಗಳನ್ನು ಕೇಳಿ ತನ್ನಂತಹ ವಿಧೇಯನ ಮೇಲೆ ದುರ್ವರ್ತನೆ ಮಾಡುವುದು ತರವೇ ಎಂದು ಪ್ರಶ್ನಿಸುತ್ತಾನೆ. ಕಾರ್ಯಾರ್ಥವಾಗಿ ಹೋದವನನ್ನು ಅಪಾರ್ಥ ಮಾಡಿಕೊಂಡು ದೂರ ಮಾಡುವುದು ಸರಿಯೇ ಎಂದು ರಮಿಸುತ್ತಾನೆ. ತಾನು ತಂದ ಪಾರಿತೋಷಕವನ್ನು ಗಣನೆಗೇ ತೆಗೆದುಕೊಳ್ಳದೆ; ಮಂದಹಾಸವನ್ನು ತೋರದೆ ತಪ್ಪು ತಿಳಿದುಕೊಳ್ಳುವುದು, ಬೇಕೆಂತಲೇ ದೋಷವನ್ನು ಹುಡುಕುವುದು ಸರಿಯಲ್ಲ ಎಂದು ಬೇಸರಿಸಿಕೊಳ್ಳುತ್ತಾನೆ. ನಾಯಿಕೆಗೆ ತಾನು ವಿಶ್ವಾಸಿ, ವಿನೀತನೆಂದು ಪ್ರಕಟಪಡಿಸುತ್ತಾನೆ. ತನ್ನಂತಹ ದೀನನನ್ನು ಪುನಾ ಒಪ್ಪಿ ಅಪ್ಪಬಾರದೇ ಎಂದು ವಿನಂತಿಸುತ್ತಾನೆ. ಒಟ್ಟಿನಲ್ಲಿ ತನ್ನ ಸುಮನೋಹರವಾದ ವರ್ತನೆಗಳಿಂದ ನಾಯಿಕೆಯನ್ನು ಸಮಾಧಾನಿಸುವವನೇ ನರ್ಮಪ್ರಸಾದಕ.

 

ರಾಗ : ಕಾಪಿ ; ತಾಳ : ತ್ರಿಶ್ರಗತಿ ಆದಿತಾಳ

 

ಮುನಿದೊಲ್ಲೆನೆಂಬ ನಲ್ಲೆಯ-

ನನುನಯದಿಂದೊಲಿಸಿಕೊಳ್ಳಲೆನುತುಂ ಸತತಂ |

ಘನಯತ್ನೋದ್ಯತನಪ್ಪೀ

ಮನುಜಂ ನರ್ಮಪ್ರಸಾದಾಖ್ಯಂ ಸಲ್ವಂ ||

 

ಶಾಂತಿ! ಶಾಂತಿ ! ಶುಭವಾಣಿ-ಕಲ್ಯಾಣಿ |

ಕಾಂತಕೃಷ್ಣವೇಣೀಕೃಪಾಣೀ ||ಪ||

 

ಬಿನ್ನಹ ವೆನ್ನದು ಲಾಲಿಸಿ ಬಳಿಕ ಸಂ-

-ಪನ್ನ ವಿಚಾರವನರಿಯುವುದು ||ಅ.ಪ||

 

ಆಗದವರು ಸಾಗದವರು ಚಾಡಿಯಾಡಲು

ಸಾಗಬೇಕೆ? ನೀಗಬೇಕೆ? ಈ ವಿಧೇಯನ !

ಬೇಗ ಬರಲಿಕಾಗದಷ್ಟು ಕಾರ್ಯಭಾರಸಂ-

-ವೇಗವಿರುವನನ್ನು ತ್ಯಾಗ ಮಾಡೆ ಸಾಧುವೇ ? ||೧||

 

ತಂದ ಪಾರಿತೋಷಿಕಕ್ಕೆ ಕುಂದನಿಡುವುದೇ ?

ಮಂದಹಾಸದಂದವನ್ನು ಬಂಧಿಸಿಡುವುದೇ ?

ಎಂದಿಗೂ ವಿನೀತನೆಂದು ಸೇವನಾರ್ಥವೇ

ನಿಂದ ಈ ನಿಸ್ತಂದ್ರನನ್ನು ದೂರ ಮಾಳ್ಪುದೇ ? || ೨ ||

 

ತಪ್ಪು ತಿಳಿಯಲೇಕೇ-ಮರ್ದೀತಿಯ ?

ಕಪ್ಪು ಹುಡುಕಬೇಕೇ- ಧಾವಳ್ಯದೆ?

ಒಪ್ಪಬಾರದೇಕೇ? ಈ ದೀನನ-

ನ್ನಪ್ಪಲಾರೆಯೇಕೇ-ವಿಶ್ವಾಸಿಯ ? || ೩ ||

Leave a Reply

*

code