ಅಂಕಣಗಳು

Subscribe


 

ಬೆಂಗಳೂರು ಮ್ಯೂಸಿಕ್ ಅಕಾಡೆಮಿಯ ನೃತ್ಯ ಮಹೋತ್ಸವ

Posted On: Saturday, October 15th, 2011
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

(ಸೆಪ್ಟೆಂಬರ್೧- ಸೆಪ್ಟೆಂಬರ್೩) ಸ್ಥಳ : ಚೌಡಯ್ಯ ಸಂಸ್ಮರಣಾ ಭವನ

ಕಳರಿಪಯಟ್ಟು, ಭರತನಾಟ್ಯ, ಕಥಕ್ ಮುಂತಾಗಿ ಹಲವು ನೃತ್ಯಸಾಧ್ಯತೆಗಳನ್ನು ಹದವಾಗಿ ಬೆರೆಸಿ ಸಮಕಾಲೀನವಾಗಿಯೂ ಪುರಾಣ ಮತ್ತು ಶಾಸ್ತ್ರರೂಪ ಉಳಿದುಕೊಳ್ಳುವಂತೆ ಇದ್ದ ನೃತ್ಯ ಸಂಯೋಜನೆಗಳು ಯುವ ಜನತೆಯ ಕೇಂದ್ರಾಕರ್ಷಣೆಯೆನಿಸುತ್ತದೆ. ಅದಕ್ಕೆ ನಿದರ್ಶನವೆಂಬಂತೆ ಇದ್ದದ್ದು ಸೆಪ್ಟೆಂಬರ್ ೨ರಂದು ಪ್ರದರ್ಶಿತಗೊಂಡ ನಿರುಪಮಾ-ರಾಜೇಂದ್ರ ಅವರಕಥಕಿಟಥೋಂ ಸಮೂಹ ಮತ್ತು ಯುಗಳ ಅಭಿವ್ಯಕ್ತಿ. ಅತ್ಯಾಕರ್ಷಕ ರಂಗಸಜ್ಜಿಕೆ, ಬೆಳಕು ಸಂಯೋಜನೆ, ಸುಂದರ-ವೈವಿಧ್ಯಮಯ ಮತ್ತು ಅಷ್ಟೇ ಅಚ್ಚುಕಟ್ಟು ವಸ್ತ್ರಾಭರಣಗಳು, ಕ್ಷಿಪ್ರ ಚಲನೆ, ಸಂಗೀತದ ಸಣ್ಣ ಸಣ್ಣ ನುಡಿತವನ್ನೂ ಗಮನಾರ್ಹವಾಗಿ ದಾಖಲಿಸುವ ಕೊರಿಯೋಗ್ರಫಿ- ಪ್ರಸ್ತುತ ನೃತ್ಯರಂಗದಲ್ಲಿ ಹಬ್ಬುತ್ತಿರುವ ಮತ್ತು ಪ್ರೇಕ್ಷಕನ ಗಮನ ಹಿಡಿದಿಡುವ ಪ್ರಕ್ರಿಯೆಗಳು. ಈ ಕ್ರಿಯೆಗೆ ಮಾದರಿಯೆಂಬಂತೆ ರೂಪ ಪಡೆದು ಮೂರು ದಿನಗಳ ನೃತ್ಯೋತ್ಸವದ ದೊಡ್ಡ ಹೈಲೈಟ್ ಕಥಕಿಟಥೋಂ ಆದದ್ದು ನೆರೆದಿದ್ದ ಪ್ರೇಕ್ಷಕವರ್ಗ ಮತ್ತು ವ್ಯಕ್ತವಾದ ಪ್ರತಿಕ್ರಿಯೆಗೆ ಸಾಕ್ಷಿ.

'Meera-maadhava'

ಹಾಗೆ ನೋಡಿದರೆ ಆರಂಭಿಕ ನೃತ್ಯ ಪ್ರಸ್ತಾವನಾ ನೃತ್ತಹಸ್ತ, ಚಾರಿಗಳ ಬಳಕೆಯೊಂದಿಗೆ ಚಿಕ್ಕದಾಗಿ, ಚೊಕ್ಕದಾಗಿ ಮೂಡಿಬಂದಿತ್ತಾದರೂ ಉಳಿದ ಸಂಯೋಜನೆಗಳೆಡೆಯಲ್ಲಿ ಕೊಂಚ ಪೇಲವವೆನಿಸಿತು. ಆದರೆ ನಂತರದಲ್ಲಿ ಸಂಭೋಗ ಶೃಂಗಾರದ ಎಳೆಯನ್ನಿಟ್ಟುಕೊಂಡು ಶಕುಂತಲೆ-ದುಷ್ಯಂತರ ಪ್ರೇಮದ ಪೌರಾಣಿಕ ಕಥೆಯನ್ನು ದುಂಬಿಯ ಪುರಾಣವೆಂಬಂತೆ ಹೇಳಿಸಿದ ಕಲ್ಪನೆ ಮತ್ತು ಅದರ ನೃತ್ಯ ಪ್ರಸ್ತುತಿಗೆ ಕಥಕ್ ಮತ್ತು ಸಮಕಾಲೀನ ನೃತ್ಯದ ಸ್ಪರ್ಶವನ್ನು ಕೊಟ್ಟು ಕಥೆಗೆ ಹೊಸ ದಿಕ್ಕನ್ನಿತ್ತದ್ದು ನಿಜಕ್ಕೂ ಅಭಿನಂದನಾರ್ಹ. ನಂತರ ನಿರೂಪಿತವಾದ ವಿಪ್ರಲಂಭ ಶೃಂಗಾರಕ್ಕೆ ಮೀರಾ ವಸ್ತುವಾಗಿ, ಕೃಷ್ಣನ ದೈವಿಕ ಸಾನ್ನಿಧ್ಯ ಮೀರಾಳ ಕ್ಷಣ ಕ್ಷಣದ ಪ್ರೀತಿಯನ್ನೂ ಒಳಗೊಳ್ಳುವ ಸಂಯೋಜನೆ ನಿರುಪಮಾ-ರಾಜೇಂದ್ರ ಅವರ ಯುಗಳ ಅಭಿವ್ಯಕ್ತಿಯಲ್ಲಿ ಪರಿಣಾಮಕಾರಿಯಾಗಿ ಮೂಡಿಬಂದಿತು. ವೀರರಸವನ್ನು ಚಿಮ್ಮಿಸಿ ಸಭಿಕರಲ್ಲೂ ಉತ್ಸಾಹದ ಚಿಲುಮೆಯನ್ನು ಹರಿಸಿ ಒಟ್ಟು ನೃತ್ಯ ಪ್ರದರ್ಶನದ ಕೇಂದ್ರಭಾಗವಾಗಿ ಹೊರಹೊಮ್ಮಿದ್ದು ಅರ್ಥಅಭಿಮನ್ಯುವಿನಲ್ಲಿ. ಈ ನೃತ್ಯದಲ್ಲಿ ಬಳಸಲಾದ ನಾಟ್ಯಶಾಸ್ತ್ರಾಧರಿತ ಪಾಟಾಕ್ಷರಗಳು, ಕರಣಗಳು, ಭೂಮಿ-ಆಕಾಶ ಚಾರಿಗಳು ಯುದ್ಧ ಮತ್ತು ಯುದ್ಧ ವೀರನನ್ನು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಿತು. ಈ ಹಿನ್ನಲೆಯಲ್ಲಿ ನೃತ್ಯ ಸಂಯೋಜನೆಯಲ್ಲಿ ಬಳಸಲಾದ ಉಪಮೆಗಳು, ರೂಪಕಾಲಂಕಾರ ಮತ್ತು ಅಭಿಮನ್ಯುವನ್ನು ಎಂದೆಂದಿಗೂ ಜೀವಂತವಾಗಿರಿಸುವ ಚಿಂತನೆ ಅಭಿನಂದನಾರ್ಹ. ಅದರೊಳಗೂ ದುಂಬಿ ಪಾತ್ರದಲ್ಲಿ ಪಾರ್ಶ್ವನಾಥ್ ಮತ್ತು ಅಭಿಮನ್ಯುವಿನ ಪಾತ್ರದ ಸೋಮಶೇಖರ್ ಅವರ ಅಭಿವ್ಯಕ್ತಿಗೆ ಸ್ಪೆಷಲ್ ಮಾರ್ಕ್ಸ್!

ಕೊನೆಯ ಪ್ರಸ್ತುತಿಯಾದ ಕಥಕಿಟಥೋಂ ಅಂತೂ ಮೋಹಕ ಮಾಯಾಜಾಲವನ್ನೇ ಬೀಸಿ, ಪ್ರೇಕ್ಷಕರಲ್ಲಿ ಅನುರಣಿಸುವಂತೆ ಮಾಡಿ ಗ್ಲಾಮರಸ್ ಎನಿಸುವ ಅಂತ್ಯ ನೀಡಿತು. ಸಂಗೀತ ಸಂಯೋಜನೆಯಲ್ಲಿ ಪ್ರವೀಣ್ ಡಿ.ರಾವ್ ಅವರನ್ನು ಒಳಗೊಂಡಂತೆ ಹಿನ್ನೆಲೆ ಮತ್ತು ಮುನ್ನೆಲೆಗಳ ಎಲ್ಲಾ ಕಲಾವಿದರ ಒಟ್ಟು ಶ್ರಮ, ಚೈತನ್ಯ ಶ್ಲಾಘನೀಯ. ಒಟ್ಟಿನಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷದ ಮೌಲ್ಯಗಳಡಿಯಲ್ಲಿ ಬೇರೆ ಬೇರೆ ನೃತ್ಯ ಸಂಯೋಜನೆಗಳು ಒಟ್ಟಂದವನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾದವು.

Leave a Reply

*

code