ಅಂಕಣಗಳು

Subscribe


 

ಹಳೆ ಕಲಾವಿದರುಗಳೆಂದರೆ ರೋಚಕ ಕಥೆಗಳ ತಾಣ!

Posted On: Tuesday, December 14th, 2010
1 Star2 Stars3 Stars4 Stars5 Stars (No Ratings Yet)
Loading...

Author: ರಾಕೇಶ್ ಕುಮಾರ್ ಕಮ್ಮಜೆ, ಪತ್ರಿಕೋದ್ಯಮ ಉಪನ್ಯಾಸಕರು, ವಿವೇಕಾನಂದ ಕಾಲೇಜು, ಪುತ್ತೂರು, ದ.ಕ

ತಿಟ್ಟು ಲೆಕ್ಕಾಚಾರವನ್ನು ಬದಿಗಿಟ್ಟು, ಒಟ್ಟೂ ಯಕ್ಷಗಾನದ ಗತ ಇತಿಹಾಸವನ್ನು ಕೆದಕಿ, ಯಕ್ಷಲೋಕದ ರಂಗಸ್ಥಳವನ್ನು ಪ್ರವೇಶಿಸಿ ನಿಂತರೆ ಅಸಂಖ್ಯ ಮೇರುಕಲಾವಿದರು ಧೀಂಗಿಣ ಹಾಕುತ್ತಿರುತ್ತಾರೆ. ಒಬ್ಬೊಬ್ಬ ಕಲಾವಿದನೂ ಅಚ್ಚರಿಯ ತಾಣ. ಕಳೆದ ಕೆಲವಾರು ದಿನಗಳಿಂದ ದಶಕಗಳ ಹಿಂದೆಯೇ ಸಂದು ಹೋದ ಕಲಾವಿದರ ರೋಚಕ ಕಥೆಗಳನ್ನು ಕೇಳಿಸಿಕೊಳ್ಳುತ್ತಿದ್ದೇನೆ. ಅವರ ಆಟದ ಆ ಕಥೆಗಳನ್ನು ಹಗಲಿನಲ್ಲಿ ಕೇಳಿ, ರಾತ್ರಿ ಮಲಗಿದಾಗ ಮನಸಿನ ಅಂಗಳದಲ್ಲಿ ಅವರದೇ ಕುಣಿತ, ಅವರದೇ ಎನಿಸುವ ಅರ್ಥಗಾರಿಕೆ! ಫಕ್ಕನೆ ಎಚ್ಚರಾದರೆ ಬರೀ ನಿರಾಸೆ! ಎಂಥೆಂಥ ಕಲಾವಿದರುಗಳನ್ನು ಯಕ್ಷಭೂಮಿಗೆ ಕೊಟ್ಟಿದ್ದಾಳೆ ಸ್ವಾಮೀ ನಮ್ಮ ಕನ್ನಡ ಭುವನೇಶ್ವರಿ!
ನಿಮಗೆ ಮುಳಿಯಾಲ ಕೇಶವ ಭಟ್ ಅನ್ನುವ ಕಲಾವಿದನ ಬಗೆಗೆ ಹೇಳಬೇಕು. (ಮುಳಿಯಾಲ ಅಂದರೆ ದಕ್ಷಿಣ ಕನ್ನಡದ ವಿಟ್ಲಕ್ಕೆ ಸಮೀಪವಿರುವ ಅಡ್ಯನಡ್ಕದ ಒಂದು ಊರು) “ಓ ಅವ್ರಾ, ಗೊತ್ತು ಗೊತ್ತು” ಅಂತ ಯೋಚಿಸದೆ ಹೇಳಿಬಿಟ್ಟೀರಿ ಹುಷಾರು. ಯಾಕೆಂದರೆ ಅವರು ಅಸ್ತಂಗತರಾಗಿಯೇ ಸುಮಾರು ಅರ್ಧ ಶತಮಾನಗಳಾದವೇನೊ. ಹೆಚ್ಚು ಕಮ್ಮಿ ೫೫-೬೦ರ ಇಸವಿಗಾಗಲೇ ಅವರು ಇತಿಹಾಸವಾಗಿದ್ದರು!
ಕೇಶವ ಭಟ್ಟರ ಗದಾಯುದ್ಧದ ಭೀಮನಿಗೆ ಸಾಟಿಯೇ ಇಲ್ಲ, ಅವರ ಭೀಮನನ್ನು ನೋಡಿದರೆ ಮತ್ತೆ ಕೆಲವು ದಿನ ನಿದ್ದೆಯೇ ಸುಳಿಯದು ಅನ್ನುವ ಹಿಂದಿನವರ ಮಾತು ತುಸು ಅತಿಶಯೋಕ್ತಿಯಾಯಿತೇನೋ ಎಂದೆನಿಸಿದರೂ, ಜೊತೆಜೊತೆಗೇ ಆ ಭೀಮನ ಭೀಕರತೆಯೂ, ವ್ಯಾಪಕತೆಯೂ ಅರ್ಥವಾಗತೊಡಗುತ್ತದೆ. ಹಿರಿಯ ಯಕ್ಷಕಲಾಭಿಮಾನಿಗಳಲ್ಲಿ “ನಿಮ್ಮ ಪ್ರಕಾರ ಭೀಮನ ಪಾತ್ರಕ್ಕೆ ಸೈ ಅನಿಸುವ ಕಲಾವಿದ ಯಾರು?” ಅಂತ ಕೇಳಿದರೆ ‘ಮುಳಿಯಾಲ ಕೇಶವ ಭಟ್ ಅಂತ ಹಿಂದೆ ಇದ್ರು’ ಅಂತಲೇ ಶುರುವಿಟ್ಟುಕೊಳ್ಳುತ್ತಾರೆ! ಅಂಥಹ ಭೀಮ, ಭಟ್ಟರದು.
ಹಾಗಂತ ಅವರು ಭೀಮನ ಪಾತ್ರಕ್ಕೆ ಮಾತ್ರ ಸೀಮಿತರು ಅಂತಲ್ಲ. ಬೇರೆ ಬೇರೆ ಪಾತ್ರಗಳಿಗೂ ಅವರು ಹೊಂದಿಕೆಯಾಗುತ್ತಿದ್ದರು. ಆ ಪಾತ್ರಗಳಿಗೆ ಜೀವತುಂಬುತ್ತಿದ್ದರು. ದೇವಿ ಮಹಾತ್ಮೆಯ ಚಂಡ-ಮುಂಡ ಎರಡೂ ಪಾತ್ರಗಳು, ರಕ್ತಬೀಜ, ದೂರ್ವಾಸ, ಇಂದ್ರಜಿತು, ಅರ್ಜುನ ಮೊದಲಾದ ಪಾತ್ರಗಳಲ್ಲೂ ಮಿಂಚಿದವರು. ಭಟ್ಟರ ಎಲ್ಲಾ ಪಾತ್ರಗಳಲ್ಲೂ ಎದ್ದು ಕಾಣುತ್ತಿದ್ದ ಸಮಾನ ಅಂಶವೆಂದರೆ – ಗತ್ತುಗಾರಿಕೆ. ಅವರ ಪಾತ್ರವೈವಿಧ್ಯದಲ್ಲಿ ಗತ್ತೇ ಗಮ್ಮತ್ತು ಎನ್ನುತ್ತಾರೆ ಬಲ್ಲವರು.
ಅಂದಹಾಗೆ ಕೇಶವ ಭಟ್ಟರಲ್ಲಿ ಯಕ್ಷಗಾನಕ್ಕೆ ಹೊರತಾದ ಇನ್ನೊಂದು ವಿಶೇಷ ಕಲೆಯೂ ಅಡಕವಾಗಿತ್ತು. ಹೌದು, ಅವರು ಆ ಕಾಲದ ಪ್ರಸಿದ್ಧ ಮಂತ್ರವಾದಿಯೆಂದೇ ಹೆಸರಾದವರು!
ಹಾಂ, ನಿಮಗೊಂದು ವಿಸ್ಮಯ ಸಂಗತಿಯನ್ನು ಹೇಳಬೇಕು. ಕರ್ನಾಟಕ-ಕೇರಳದ ಗಡಿಪ್ರದೇಶ ಮುಳಿಗದ್ದೆ ನಿಮಗೆ ಗೊತ್ತಿರಬಹುದು. ಅದೆಷ್ಟೋ ದಶಕಗಳಿಂದ ಅಸಂಖ್ಯಾತ ಯಕ್ಷಗಾನ ಪ್ರಸಂಗಗಳಿಗೆ ಸಾಕ್ಷಿಯಾದ ಪ್ರದೇಶ ಅದು. ಅಲ್ಲೇ ಸಮೀಪದಲ್ಲಿ ಭೂತಸ್ಥಾನವೂ ಇದೆ. ಅಲ್ಲಿಗೆ ಬದಿಯಾರು ಅಂತ ಹೆಸರು. ಎಷ್ಟೋ ಮೇಳಗಳು ಮುಳಿಗದ್ದೆಯಲ್ಲಿ ಯಕ್ಷಗಾನವನ್ನು ಸಾಕ್ಷಾತ್ಕರಿಸಿದ್ದರೂ ಆ ಭೂತಸ್ಥಾನದ ಮುಂದೆಯೇ ಆಟ ಆಡುವ ಸಾಹಸವನ್ನು ಯಾರೂ ತೋರಿರಲಿಲ್ಲ. ಅದಕ್ಕೆ ಕಾರಣವೂ ಇತ್ತು. ಭೂತಸ್ಥಾನದ ಮುಂದೆಯೇ ಪ್ರಸಂಗ ಆಡಿದರೆ ಉಪದ್ರವ ಕಾಣಿಸಿಕೊಳ್ಳುತ್ತದೆ ಎಂಬ ಪ್ರತೀತಿ ಪ್ರಚಲಿತವಾಗಿತ್ತು. ಆದರೆ ಅದೊಂದು ಬಾರಿ ಯಾರು ಧೈರ್ಯ ಮಾಡಿದರೋ ಗೊತ್ತಿಲ್ಲ. ದೇವಿ ಮಹಾತ್ಮೆ ಯಕ್ಷಗಾನವನ್ನು ಅಲ್ಲೇ ಆಡುವುದು ಅಂತ ಕಲಾವಿದರುಗಳು ತೀರ್ಮಾನಿಸಿದರು.
ಸರಿ, ಪ್ರಸಂಗ ಶುರುವಾಯಿತು. ಮಧ್ಯರಾತ್ರಿ ಕಳೆಯುವವರೆಗೆ ಎಲ್ಲವೂ ಸರಿಯಾಗಿಯೇ ಇತ್ತು. ಯಾವಾಗ ಚಂಡ ಮುಂಡರ ವಧೆಗಾಗಿ ದೇವಿ ಹೊರಟಳೋ ಪರಿಸ್ಥಿತಿ ಹದಗೆಡತೊಡಗಿತು! ಇದ್ದಕ್ಕಿದ್ದಂತೆ ದೇವಿ ಪಾತ್ರಧಾರಿಗೆ ಒಂದೇ ಸಮನೆ ದರ್ಶನ!
ಇತ್ತ ಚೌಕಿಯಲ್ಲಿ ಕೇಶವ ಭಟ್ಟರ ರಕ್ತಬೀಜ ಗೆಜ್ಜೆ ಕಟ್ಟುತ್ತಿದ್ದ. ಯಾರೋ ಒಳಗೆ ಓಡಿ ದೇವಿಯ ದರ್ಶನದ ಬಗೆಗೆ ಭಟ್ಟರಿಗೆ ತಿಳಿಸಿದರು. ಕೂಡಲೇ ಭಟ್ಟರು ಅಲ್ಲೆಲ್ಲಿಂದಲೋ ಒಂದಷ್ಟು ಭಸ್ಮ ಹಿಡಿದವರೇ ಪ್ರವೇಶ ದ್ವಾರದಲ್ಲಿ ನಿಂತು ಆ ಭಸ್ಮವನ್ನು ದೇವಿ ಪಾತ್ರಧಾರಿಯ ಮೇಲೆ ಎಸೆದರು. ದರ್ಶನ ನಿಂತಿತು, ಮತ್ತೆ ನಡೆದದ್ದು ಯಕ್ಷಗಾನ ಪ್ರದರ್ಶನ ಮಾತ್ರ! ಹೀಗೆ ಕೇಶವ ಭಟ್ಟರ ಮಂತ್ರವಾದಕ್ಕೂ ಆ ಪ್ರಸಂಗ ಸಾಕ್ಷೀ’ಭೂತ’ವಾಯಿತು.
ಮಂತ್ರವಾದಿ ಅನ್ನುವುದನ್ನು ಮರೆತು ಮಾತನಾಡಿದರೂ ಕೇಶವ ಭಟ್ಟರು ನೆನಪಿನಲ್ಲಿ ಇಟ್ಟುಕೊಳ್ಳಲೇಬೇಕಾದ ಕಲಾವಿದ. ಗತಿಸಿಹೋಗಿ ಅರ್ಧ ಶತಮಾನವೇ ಆಗಿಹೋದರೂ, ಇನ್ನೂ ಜನಮಾನಸದಲ್ಲಿ ಅವರ ಹೆಸರು ಉಳಿದಿದೆ ಮತ್ತು ಭೀಮ, ರಕ್ತಬೀಜ… ಅಂದುಕೊಳ್ಳುವಾಗಲೆಲ್ಲಾ ಅವರು ನೆನಪಾಗುತ್ತಾರೆ ಎನ್ನುವುದೇ ಅವರ ಪಾತ್ರಕ್ಕೆ ಸಿಕ್ಕಿರುವ ಬಹುದೊಡ್ಡ ಪ್ರಮಾಣಪತ್ರ! ಅದುವೇ ಕಲಾವಿದನೊಬ್ಬನ ಸಾರ್ಥಕ್ಯ. ಅರಸಲು ಹೊರಟರೆ ಅಡಿಗಡಿಗೂ ಶ್ರೇಷ್ಟರೆನಿಸಿದ ಕಲಾವಿದರು ಕಾಣಸಿಗುತ್ತಾರೆ. ಅವರ ಕಥೆಗಳನ್ನು ಕೇಳುತ್ತಿದ್ದರೆ ಅವರೇ ದೊಡ್ಡ ಪ್ರಸಂಗವೆನಿಸುತ್ತಾರೆ

Leave a Reply

*

code