Author: ರಾಕೇಶ್ ಕುಮಾರ್ ಕಮ್ಮಜೆ, ಪತ್ರಿಕೋದ್ಯಮ ಉಪನ್ಯಾಸಕರು, ವಿವೇಕಾನಂದ ಕಾಲೇಜು, ಪುತ್ತೂರು, ದ.ಕ
ಹಳೆಯ ಕಲಾವಿದರ ಕತೆಗಳನ್ನು ಕೆದಕುತ್ತಾ ಹೋದಂತೆ ಹೊಸ ಹೊಸ ಸಂಗತಿಗಳು ಅನಾವರಣಗೊಳ್ಳುತ್ತಲೇ ಇರುತ್ತವೆ. ಹಾಗಾಗಿ ಹಿಂದಿನ ಕಲಾವಿದರ ಕಥೆ ಬರಿದಾಗುವುದೇ ಇಲ್ಲ. ಈ ಹಿಂದೆ ಇದೇ ಅಂಕಣದಲ್ಲಿ ಮುಳಿಯಾಲ ಕೇಶವ ಭಟ್ ಅನ್ನುವ ವಿಶಿಷ್ಟ ವೇಷಧಾರಿಯೊಬ್ಬರ ಬಗೆಗೆ ಬರೆದದ್ದು ನಿಮ್ಮ ಮನಸಿನ ರಂಗಸ್ಥಳದಿಂದ ಮಾಸಿರಲಿಕ್ಕಿಲ್ಲ. ಯಾಕೋ ನನಗೆ ಸಾಕೆನಿಸಲಿಲ್ಲ. ಅವರ ಮತ್ತು ಅವರ ಕುರಿತಾದ ರೋಚಕ ಕಥೆಗಳ ಬಗೆಗೆ ಇನ್ನೂ ತಿಳಿದುಕೊಳ್ಳಬೇಕೆನಿಸಿತು. ಹಾಗೆ ಅವರ ಬಗೆಗೆ ಮಾಹಿತಿ ಸಂಗ್ರಹಿಸಬೇಕೆಂಬ ನಿಟ್ಟಿನಲ್ಲಿ ಹುಡುಕುತ್ತಾ ಹುಡುಕುತ್ತಾ ಹೋಗಿ ನಿಂತದ್ದು ಕರ್ನಾಟಕ-ಕೇರಳದ ಗಡಿಭಾಗ ಜತ್ತಿ ಎಂಬಲ್ಲಿ ವಾಸವಾಗಿರುವ ಅವರ ಹಿರಿಯ ಮಗಳು ಶ್ರೀಮತಿ ಲಕ್ಷ್ಮಿ ಅಮ್ಮನವರ ಮುಂದೆ! ಯಾವಾಗ ತನ್ನ ಅಪ್ಪನ ವಿಷಯ ಪ್ರಸ್ತಾಪವಾಯಿತೋ ಎಪ್ಪತ್ತರ ಅವರಲ್ಲಿ ಇನ್ನಿಲ್ಲದ ಉತ್ಸಾಹ ಕಾಣತೊಡಗಿತು. ಅವರು ಕಥೆ ಹೇಳುತ್ತಾ ಹೋದರು, ನಾನು ಕೇಳುತ್ತಾ ನಿಂತೆ! ಕಥೆ ಮುಗಿಯಲಿಲ್ಲ, ಆದರೆ ದಿನಮಣಿ ಮುಳುಗಿದ!!
ಅದೇನೇ ಇರಲಿ, ಅವರು ಹೇಳಿದ ಅನೇಕ ಸಂಗತಿಗಳಲ್ಲಿ ಅತ್ಯಂತ ಹೆಚ್ಚು ಅಚ್ಚರಿ ಮೂಡಿಸಿದ ಸಂಗತಿಗಳೆರಡನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಈ ಹಿಂದಿನ ಬಾರಿ ಕೇಶವ ಭಟ್ಟರ ಬಗೆಗೆ ಹೇಳುವಾಗ ಅವರ ಭೀಮ, ರಕ್ತಬೀಜ ಮೊದಲಾದ ಪಾತ್ರಗಳ ಬಗೆಗೆ ಹೇಳಿದ್ದೆ. ಆದರೆ ಇನ್ನೊಂದು ಉಲ್ಲೇಖಿಸಲೇಬೇಕಾದ ಅವರ ಪಾತ್ರ ಮಹಿಷಾಸುರ. ಅವರಿಗೆ ಭೀಮ, ರಕ್ತಬೀಜರು ಎಷ್ಟು ಹೆಸರು ತಂದುಕೊಟ್ಟಿದ್ದರೋ ಅದಕ್ಕೆ ಸರಿಮಿಗಿಲಾಗಿ ಅವರ ಮಹಿಷಾಸುರನೂ ಹೆಸರು ಮಾಡಿದ್ದ. ಮಹಿಷಾಸುರನ ಬಗೆಗೆ ಹೇಳುವಾಗ ಒಂದು ಪ್ರಮುಖ ಘಟನೆಯನ್ನು ಹೇಳಲೇಬೇಕು. ನಂಬಿದರೆ ನಂಬಬಹುದು, ಬಿಟ್ಟರೆ ಬಿಡಬಹುದು.
ಭಟ್ಟರ ಮಹಿಷನ ಪ್ರವೇಶವಾಗುವಾಗ, ಆ ಮಹಿಷ ಹೂಂಕರಿಸುವಾಗ, ಮಹಿಷನ ಕಣ್ಣುಗಳು ತಿರುಗುವಾಗ ಸುತ್ತಲಿನ ಮಂದಿ ಅಕ್ಷರಶಃ ಹೆದರಿಹೋಗುತ್ತಿದ್ದರು. ಮಕ್ಕಳು ಹೆದರಿದರೆ ದೊಡ್ಡ ಸಂಗತಿಯಲ್ಲ, ದೊಡ್ಡವರೇ ಹೆದರುತ್ತಿದ್ದರೆಂದರೆ ಅದೆಂಥಾ ಮಹಿಷನಿರಬೇಕು ನೀವೇ ಯೋಚಿಸಿ. ಒಮ್ಮೆ ಬಂಟ್ವಾಳ ತಾಲೂಕಿನ ಮಿತ್ತನಡ್ಕ ಎಂಬಲ್ಲಿ ದೇವಿಮಹಾತ್ಮೆ, ಭಟ್ಟರ ಮಹಿಷಾಸುರ. ದೇವಿಮಹಾತ್ಮೆಯನ್ನು ನೀವು ನೋಡಿದ್ದೀರಾದರೆ ಮಹಿಷನ ಪ್ರವೇಶದ ಬಗೆಗೆ ನಿಮಗೆ ಗೊತ್ತಿರುತ್ತದೆ. ತಾಯಿ ಮಾಲಿನಿ ‘ಮಗನೇ ಮಹಿಷಾ…’ ಎಂದು ಕರೆದಾಗ ಮಹಿಷಾಸುರ ಪ್ರೇಕ್ಷಕರ ಹಿಂದಿನಿಂದ ದೊಂದಿಗಳೊಂದಿಗೆ ವೇದಿಕೆಗೆ ಬರುವುದು. ಆ ದಿನವೂ ಮಾಲಿನಿ ಕರೆದಾಯಿತು. ಇತ್ತ ಭಟ್ಟರ ಮಹಿಷ ವೇದಿಕೆಯತ್ತ ಹೊರಟ. ಅಲ್ಲಿ ಪ್ರೇಕ್ಷಕರ ಸಾಲಿನ ಬದಿಯಲ್ಲಿ ಒಬ್ಬಾಕೆ ಗರ್ಭಿಣಿ ಹೆಂಗಸೂ ಇದ್ದಳು. ಯಾವಾಗ ಭಟ್ಟರ ಭಯಾನಕ ಮಹಿಷ ತನ್ನ ಬಳಿ ಬಂದನೋ ಆ ಭೀಕರ ರೂಪಿಯನ್ನೂ, ಭಯಾನಕ ಸನ್ನಿವೇಷವನ್ನೂ ನೋಡಿ ಆಕೆ ಪತರಗುಟ್ಟಿಹೋದಳು. ಆ ಭಯ ಎಷ್ಟರಮಟ್ಟಿಗೆ ಉಳಿದುಹೋಯಿತೆಂದರೆ ಆಕೆಗೆ ವಿಪರೀತ ಜ್ವರ ಬಂತು. ಆಮೇಲೆ ಗರ್ಭವೇ ಅಳಿದುಹೋಯಿತೆಂಬ ಸುದ್ದಿಯೂ ಕೇಳಿಬಂತಂತೆ!
ಕೇಶವ ಭಟ್ಟರ ಬಗೆಗಿನ ಇನ್ನೊಂದು ಕುತೂಹಲಕಾರಿ ಸಂಗತಿಯನ್ನೂ ಈ ಹಿಂದೆ ನಿಮಗೆ ಹೇಳಿದ್ದೆ. ಅದೇ, ಅವರು ಪ್ರಸಿದ್ಧ ಮಂತ್ರವಾದಿಗಳೂ ಆಗಿದ್ದರೆಂಬ ಸಂಗತಿ. ಆ ಬಗೆಗೂ ಒಂದು ರೋಚಕ ಘಟನೆಯಿದೆ.
ಬಂಟ್ವಾಳ ತಾಲೂಕಿನ ವಿಟ್ಲದಿಂದ ಅಳಿಕೆಗೆ ಹೋಗುವ ಮಾರ್ಗಮಧ್ಯೆ ಪಡಿಬಾಗಿಲು ಎಂಬ ಪ್ರದೇಶ ಸಿಗುತ್ತದೆ. ಒಮ್ಮೆ ಅಲ್ಲಿ ಲಾರಿಯೊಂದು ನಿಂತುಹೋಯಿತು. ಏನೇನೇ ಪ್ರಯತ್ನ ಮಾಡಿದರೂ ಸ್ಟಾರ್ಟ್ ಆಗುತ್ತಿತ್ತೇ ವಿನಃ ಮುಂದೆ ಹೋಗುತ್ತಿರಲಿಲ್ಲ. ಕೊನೆಗೆ ಲಾರಿಯ ಮಂದಿ ಕೇಶವ ಭಟ್ಟರನ್ನು ಕರೆದುಕೊಂಡುಹೋಗಿ ತೋರಿಸಿದಾಗ ಭಟ್ಟರ ಮಂತ್ರವಾದಿ ಮನಸ್ಸಿಗೆ ಅಲ್ಲಿ ರಣಗಳ ಕಾಟವಿರುವುದು ಕಂಡುಬಂತು. ಕೂಡಲೇ ಭಟ್ಟರು ಒಂದು ಕೋಲು ಹಿಡಿದು, ಜಪಿಸಿ ದಬದಬನೆ ಲಾರಿಗೆ ಬಾರಿಸಿದರು. ಲಾರಿ ಹೊರಟಿತು!! ಹೌದು, ಭಟ್ಟರ ಮಂತ್ರವಾದ ಶಕ್ತಿ ಅಂತಿತ್ತು. ಅವರು ಮೇಳದೊಂದಿಗೆ ತಿರುಗಾಟಕ್ಕೆ ಹೋದಲ್ಲೂ ಗಂಟೆಗಟ್ಟಳೆ ಜಪಿಸುವುದನ್ನು ಮಾತ್ರ ಬಿಡುತ್ತಿರಲಿಲ್ಲ.
ಈಗ ಹೇಳಿ ನಿಮಗೂ ವಿಸ್ಮಯ ಅನಿಸುತ್ತಿಲ್ಲವಾ?