Author: ಮನೋರಮಾ. ಬಿ.ಎನ್
ಲಕ್ಷಣ: ಎಲ್ಲ ಬೆರಳುಗಳ ತುದಿಯನ್ನು ಕೂಡಿಸುವುದು. ಮುಕುಳ ಎಂದರೆ ಮೊಗ್ಗು ಎಂದರ್ಥ. ಹಸ್ತ ಮುಕ್ತಾವಳಿಯಲ್ಲಿ ಇದೇ ಹಸ್ತವನ್ನು ಬಹುಮಟ್ಟಿಗೆ ಹೋಲುವ ಘೋರ್ಣಿಕ ಎಂಬ ಹಸ್ತವಿದೆ. ಅಲ್ಲಿ ವಿವರಿಸಲಾದ ಮುಕುಲವು ಕೂಡಾ ಇದೇ ಲಕ್ಷಣಗಳನ್ನು ಹೊಂದಿದ್ದು ಮೇಲ್ಮುಖಕ್ಕೆ ಚಾಚಬೇಕೆಂದಿದೆ. ಮಾರುತಿಯು ಸೂರ್ಯನನ್ನು ಬಿಂಬಾಫಲವೆಂದು ತಿಳಿದು ಹಿಡಿಯಲೆತ್ನಿಸಿದಾಗ ಉಂಟಾದ ಹಸ್ತ. ಸಂಕೀರ್ಣ ವರ್ಣ, ಕಪಿಲ ಅಂದರೆ ತಿಳಿ ಬೂದು ಬಣ್ಣ, ಋಷಿ : ವಿಷಖಿಲ, ಅಧಿದೇವತೆ : ಚಂದ್ರ.
ಶಾಸ್ತ್ರೀಯ ಮುದ್ರೆಗಳ ಪೈಕಿ ಸತ್ಯ ಮುದ್ರಾ ಎಂಬ ಮುದ್ರೆಯು ಎಲ್ಲ ಬೆರಳುಗಳ ತುದಿಯನ್ನು ಒಂದಕ್ಕೊಂದು ಸೇರಿಸಬೇಕೆನ್ನುವುದು ಮುಕುಳ ಹಸ್ತಕ್ಕೆ ಸಮೀಪವೆಂಬಂತಿದೆ. ಪೂಜಾ ಮುದ್ರೆಗಳ ಪೈಕಿ ಮುಕುಳ ಮುದ್ರೆ ಎಂಬ ಎಂಬ ಮುದ್ರೆಯಿದ್ದು ಇಲ್ಲಿ ಮುಕುಳ ಹಸ್ತವನ್ನು ಎದೆಯಲ್ಲಿರಿಸಿಕೊಳ್ಳುವುದರಿಂದ ನೋವು ನಿವಾರಣೆ, ವಿದ್ಯುದಯಸ್ಕಾಂತ ಶಕ್ತಿಗಳ ಸೃಷ್ಟಿಯಾಗುತ್ತದೆನ್ನಲಾಗಿದೆ. ಸಮನ್ವಯ ಮುದ್ರೆಯೆಂಬುದು ಮುಕುಳಹಸ್ತವೇ ಆಗಿದ್ದು ; ಮಂತ್ರಸಂಕಲ್ಪ, ಶಕ್ತಿಸಂಚಯನಕ್ಕೆ, ಹೊಂದಾಣಿಕೆ, ಎಲ್ಲಾತತ್ವಗಳಸಮತೋಲನೆಗೆ ಪೂರಕ.
ಗಾಯತ್ರೀ ನ್ಯಾಸ ಮುದ್ರೆಗಳ ಪೈಕಿ‘ತತ್’ ಉಚ್ಛಾರಕ್ಕೆ ಸುಮುಖ ಮುದ್ರೆ ಅಂದರೆ ಎರಡೂ ಕೈಗಳಲ್ಲಿ ಮುಕುಳ ಹಸ್ತವನ್ನು ಪರಸ್ಪರ ಮುಟ್ಟುವಂತೆ ಸ್ಪರ್ಶಿಸಬೇಕೆನ್ನುತ್ತದೆ ಶಾಸ್ತ್ರ; ಮತ್ತು‘ಮ’ ಅಕ್ಷರೋಚ್ಛಾರಣೆಗೆ ಉನ್ಮುಖೋನ್ಮುಖ ಮುದ್ರೆ ಅಂದರೆ ಮುಕುಲ ಹಸ್ತಗಳ ತುದಿಗಳನ್ನು ಪರಸ್ಪರ (ಬಲ ಕೈ ಮೇಲೆ)ಮೇಲೆ ಕೆಳಗೆ ಸೇರಿಸಬೇಕೆಂದಿದೆ. ರೋಗನಿವಾರಕ ಯೋಗ ಮುದ್ರೆಗಳ ಪೈಕಿ ಒಂದಾದ ಸಮಾನ ಮುದ್ರೆ ಅಥವಾ ಸೂಕರೀಮುದ್ರೆಯು ಎರಡುಮುಕುಳಹಸ್ತಗಳನ್ನು ಹಿಡಿದುಕೊಳ್ಳುವುದೇ ಆಗಿದ್ದು; ಪಂಚತತ್ವಗಳ ಸಂತುಲನೆಗೆ, ರೋಗನಿರೋಧಕಶಕ್ತಿಗೆ, ನೋವು ಶಮನಕ್ಕೆ ಅನುಕೂಲ.
ವಿನಿಯೋಗ : ಕಮಲದ ಮೊಗ್ಗು, ಊಟ ಮಾಡುವುದು, ಪಂಚಬಾಣ (ಮನ್ಮಥ), ಮುದ್ರಾಧಾರಣೆ, ನಾಭಿ, ಬಾಳೆಹೂವು.
ಇತರೇ ವಿನಿಯೋಗ : ದೇವಾತಾರ್ಚನೆ, ವಿಟ ಚುಂಬನ, ನಿಂದೆ, ಹಣವನ್ನು ಎಣಿಸುವುದು, ಬಾಯನ್ನು ಮುಚ್ಚುವುದು, ದೈನ್ಯೋಕ್ತಿ, ಐದು ಎಂಬ ಸಂಖ್ಯೆ, ಜಪ, ಜೀವಾತ್ಮ, ಹಂದಿ ಮತ್ತು ಕುದುರೆಗಳ ಮುಖ, ವ್ಯರ್ಥವೆಂಬ ಸೂಚನೆ, ಬಲಿದಾನ, ಅವಸರ, ದಾನಮಾಡುವುದು, ಪ್ರಾರ್ಥನೆ, ಜೀವನ, ‘ತಾನು’, ‘ಆತ್ಮ’ ಎಂಬ ಭಾವ, ನೆಚ್ಚಿನವರ ಮಾತುಗಳು, ಮಕ್ಕಳನ್ನು ಮುದ್ದಿಸುವುದು, ಛತ್ರಿಯನ್ನು ಮಡಚುವುದು, ಹಣ್ಣುಗಳ ಸ್ವೀಕಾರ, ಕಪಿಲ ವರ್ಣ, ಮಿಶ್ರ ಜಾತಿ, ಕುಚಾದಿ ಸ್ಥಳಗಳಲ್ಲಿ ಶಬ್ದವಾಗುವಂತೆ ನಖಲೇಖನ ಮಾಡುವುದು, ‘ಇಷ್ಟು ಮಾತ’’ ಎಂಬ ಭಾವ, ಬ್ರಹ್ಮ ರಂಧ್ರ, ಸೌಜನ್ಯ, ಧನಿಷ್ಟಾ ನಕ್ಷತ್ರ, ಹಕ್ಕಿ ಗುಟುಕು ಕೊಡುವುದು, ಮುಚ್ಚಿಕೊಂಡ ಹೂ, ಭಾಷಣ, ಮುಚ್ಚಿರುವ ತಾವರೆ, ಮಂತ್ರ ಪುನರುಚ್ಛಾರ, ಬ್ರಹ್ಮರಂಧ್ರ, ಸ್ನೇಹ ಭಾವ, ದೀರ್ಘಾವಲೋಕನ, ಸಿಹಿರುಚಿ, ಗಿಳಿಗಳು ತಮ್ಮ ಮರಿಗಳಿಗೆ ಉಣಿಸುವುದು ಇತ್ಯಾದಿ.
ಮುಖಸಂಕೋಚ, ಉಡುಗೊರೆಗಳನ್ನು ಮಾಡುವುದು, ಬಲಿಗ್ರಹಣ, ಅರಳಿದ ಕುಮುದ ಪುಷ್ಪ ಮತ್ತು ತಾವರೆ, ಕೆಂಪು ಕುಮುದ ಪುಷ್ಪ, ಅರಳಿದ ಹೂವುಗಳು, ಭೋಜನ, ಮುತ್ತನ್ನೀಯುವುದು, ಚಿನ್ನವನ್ನು ಎಣಿಸುವುದು, ಪ್ರಭಾವ, ವಚನ, ಪಕ್ಷಿ, ಜಡತ್ವದ ಮನುಷ್ಯ, ರೋಗ, ಕಾರ್ತಿಕ ಮಾಸ, ಇಲಿ, ಲಗ್ನ ಮುಹೂರ್ತ, ನಕ್ಷತ್ರ, ರಾಶಿ ಗ್ರಹಮಂಡಲ, ಅರ್ಧ ದಿನ, ಕ್ಷಣ, ರಕ್ತ, ಮೃದುತ್ವ, ಲಾವಣ್ಯ, ವಿಕ್ರಮ, ಗೊತ್ತಿಲ್ಲದ ವಿಷಯ, ಬೆಲೆ, ನಿರ್ಮಾಣ, ಹುಣ್ಣಿಮೆಯ ರಾತ್ರಿ, ಅಮಾವಾಸ್ಯೆ, ವಿಷ್ಕಂಭ ಯೋಗ, ಯೋಗಪ್ರಕಾರಗಳು, ಸಾರ್ವತ್ರಿಕತೆ, ವಾರದ ಒಂದು ದಿನ, ತಿಂಗಳಿನ ನಿರ್ದಿಷ್ಟ ದಿನ, ಪಕ್ಷಾಂತ್ಯ, ಸಂಕ್ರಾಂತಿ, ಜೋಳ, ಕರಿಮೆಣಸು, ಆಮ್ಲ ದ್ರವ್ಯ, ಕಟು ದ್ರವ್ಯ, ಕೆಂಪು-ಹಳದಿ ಬಟ್ಟೆ, ಜನೋತ್ಸವ, ‘ನಾನು,ನಾನು’ ಎನ್ನುವುದು, ಪ್ರೇಮ, ಮಗ, ಇಷ್ಟಪಟ್ಟ ವಸ್ತು, ಭ್ರಮೆ, ಕಪ್ಪು ದುಂಬಿಗಳಲ್ಲಿ ಹೊಂದಾಣಿಕೆಯಿಲ್ಲದಿರುವುದು, ಮದುವೆ, ಪ್ರತಿಕ್ರಿಯೆ, ಕಿವಿ, ಆಲಿಸು, ಪ್ರಾಣವಾಯು, ಮಾತು, ಅಭಿವೃದ್ಧಿ, ನೀರು, ನೀರಿನ ಹಸಿವು, ವರಾಹಾವತಾರ, ನದೀಮುಖಜ ಪ್ರದೇಶ, ನೀರಿನ ಕವಲು, ಸಾಗರ, ದಹನ, ವಿಮೋಚನೆ, ಪ್ರಾಪ್ತಿ, ಘಟನೆ, ಪರಿಣಾಮ ಇತ್ಯಾದಿಗಳ ಸಂವಹನಕ್ಕೆ ಸೂಕ್ತವೆನಿಸುವುದು.
ಸಂಕರ ಹಸ್ತ ವಿಭಾಗದಲ್ಲಿ ಮುಕುಳ ಹಸ್ತವನ್ನು ವಕ್ಷಸ್ಥಳದಲ್ಲಿ ವಿರಳೀಭೂತವಾಗಿ ಅಥವಾ ಸಡಿಲವಾಗಿ ನಿಲ್ಲಿಸಿದರೆ ವಾರ್ಧಕ್ಯವೆಂದೂ, ಮೊದಲು ಮುಕುಳಹಸ್ತ ಹಿಡಿದು ಬಿಟ್ಟು ನಂತರ ಮೃಗಶೀರ್ಷವನ್ನು ಹಿಡಿದರೆ ವೃದ್ಧಸ್ತ್ರೀ, ಕೃಪೆ, ಶಾಂತಿ ಎಂಬ ಅರ್ಥವೂ ಬರುತ್ತದೆ.
ಮುಕುಳ ಹಸ್ತವನ್ನು ಮುಖದ ಎದುರಿನಲ್ಲಿ ಕೆಳಭಾಗದಲ್ಲಿ ಆಡಿಸಿದಲ್ಲಿ ಜನರ ಸಲ್ಲಾಪ, ವಕ್ಷಸ್ಥಳದಲ್ಲಿ ಹಿಡಿದಲ್ಲಿ ಸಂತೋಷ, ಅರ್ಧ ಮುಕುಳವನ್ನು ಮೇಲ್ಭಾಗದಲ್ಲಿ ಹಿಡಿದರೆ ಶಿಶಿರ ಋತು ಎಂದು ಅರ್ಥವಾಗುವುದು. ಮುಕುಳವನ್ನು ‘ಲವಕಾಲ’ ಎಂಬ ಸಮಯ ಸೂಚನೆಗೂ, ರಾತ್ರಿ ಎನ್ನಲು ಅಡ್ಡಲಾಗಿಯೂ, ಒಂದು ಗಳಿಗೆಯಷ್ಟು ಕಾಲವೆನ್ನಲು ಅರ್ಧ ಮುಕುಳವನ್ನು ಅಡ್ಡಲಾಗಿಯೂ ಹಿಡಿಯುತ್ತಾರೆ. ಮುಕುಳ ಹಸ್ತವನ್ನು ಅಭಿಮುಖವಾಗಿ ಮಾಡಿದರೆ ಭೇದೋಪಾಯವೆಂದೂ, ಬಿಡಿ-ಬಿಡಿಯಾಗಿ ಹಿಡಿದರೆ ಮಂತ್ರಾಲೋಚನಶಕ್ತಿ ಎಂದೂ, ಎರಡೂ ಕೈಗಳಲ್ಲ್ ಮುಕುಳ ಹಸ್ತ ಹಿಡಿದು, ಒಮ್ಮೆ ಮೇಲಕ್ಕೆತ್ತಿ, ಮತ್ತೊಮ್ಮೆ ತೊಡೆಗಳಿಗೆ ಬೀಳುವಂತೆ ಮಾಡಿದರೆ ಒತ್ತಾಯಪೂರ್ವಕವಾಗಿ ತೆಗೆದುಕೊಳ್ಳುವುದು ಅಥವಾ ಹಠ ಎಂದು ಅರ್ಥೈಸಬಹುದು.
ನವಗ್ರಹ ಹಸ್ತಗಳಲ್ಲೊಂದಾದ ಬುಧ(ಸೌಮ್ಯ)ಹಸ್ತಕ್ಕೆ ಭರತಸಾರದ ಪ್ರಕಾರ ಕ್ರಮವಾಗಿ ಎಡ ಮತ್ತು ಬಲ ಕೈಯ್ಯಲ್ಲಿ ಹಿಡಿದ ಮುಕುಲ ಮತ್ತು ಸಂದಂಶಹಸ್ತಗಳನ್ನು ಎಡ ಮತ್ತು ಬಲಭುಜದ ಮೇಲಿಡಬೇಕು. ಶ್ವಶ್ರೂ ಹಸ್ತ (ಅತ್ತೆ), ಶ್ವಶುರ (ಮಾವ)ಹಸ್ತ,ನನಾಂದೃ ಹಸ್ತ (ಗಂಡನ ಸಹೋದರಿ; ನಾದಿನಿ),ಜಾಮಾತೃ ಹಸ್ತ (ಅಳಿಯ), ಸೂರ್ಯಚಲನೆ ಹಸ್ತಗಳಾದ. ಸೂರ್ಯೋದಯ ಹಸ್ತ , ಮಧ್ಯಾಹ್ನ ಹಸ್ತ, ಸೂರ್ಯಾಸ್ತಮಾನ ಹಸ್ತಗಳಿಗೆ ಅಭಿನಯದರ್ಪಣವು ಮುಕುಳವನ್ನು ನಿರ್ದೇಶಿಸಿದೆ. ಪುಷ್ಪ ಹಸ್ತಗಳಿಗೆ ಮುಕುಲವನ್ನು ಪರ್ಯಾಯಹಸ್ತವಾಗಿಯೂ, ಜೀವನಾವಸ್ಥೆ ಹಸ್ತಗಳಲ್ಲಿ ವಾರ್ಧಕ್ಯಕ್ಕೆ ಎದೆಯ ಬಳಿ ಮುಕುಳ ಹಸ್ತಗಳ ಬೆರಳುಗಳನ್ನು ನಿಧಾನವಾಗಿ ಅಗಲಿಸುವುದನ್ನು ಹೇಳಿದೆ. ರಸ-ರುಚಿ ಹಸ್ತಗಳಲ್ಲಿಲವಣ ( ಉಪ್ಪು) ಉದ್ವೇಷ್ಟಿತ ಮಾಡುತ್ತಿರುವ ಮುಕುಳ, ಚತುರೋಪಾಯ ಹಸ್ತಗಳಲ್ಲಿ ದಾನ : ಮುಕುಲವನ್ನು ಕೆಳಮುಖವಾಗಿಯೂ, ಶಕ್ತಿ ಸಂಚಯ ಸೂಚಕ ಹಸ್ತಗಳಲ್ಲಿ ಮಂತ್ರಶಕ್ತಿ :ಮುಕುಲ ಹಸ್ತದ ಬೆರಳುಗಳು ಸ್ವಲ್ಪ ಅಂತರವನ್ನಿಟ್ಟು ಪ್ರಸಾರಿಸುವುದು. ಸಾಗರ ಹಸ್ತಗಳಲ್ಲಿ ಲವಣ (ಉಪ್ಪು) ಸಾಗರಕ್ಕೆ ಮುಕುಳ ಹಸ್ತಗಳನ್ನು ಮೇಲಕ್ಕೆ ಮತ್ತು ಕೆಳಕ್ಕೆ ಎತ್ತಿ ಕೆಳಗಿಳಿಸುವ ವಿನಿಯೋಗವಿದೆ. ಲೋಕ ಪಾಲಕರ ಹಸ್ತಗಳಲ್ಲಿ ಮಾಂಧಾತಚಕ್ರವರ್ತಿಗೆ : ಮುಕುಳ ಮತ್ತು ಸೂಚೀ ಹಸ್ತಗಳನ್ನು; ರಘು ಚಕ್ರವರ್ತಿಗೆ ಮುಕುಳ ಮತ್ತು ಸೂಚೀ ಹಸ್ತಗಳನ್ನು ಹೇಳಿದೆ. ವೃಕ್ಷಹಗಳಲ್ಲಿ ಕದಳೀಗೆ ಚಲಿಸುತ್ತಿರುವ ಮುಕುಳ ಮತ್ತು ಪ್ರಾಣಿ ಹಸ್ತಗಳಲ್ಲಿ ಸುಗ್ರೀವಾದಿ ವಾನರರಿಗೆ ಮುಕುಳ ಹಸ್ತ ಅಲ್ಲಾಡಿಸುವುದು ಮತ್ತು ವಿಷಯುಕ್ತವಾದ ಸರ್ಪಕ್ಕೆ ಮುಕುಳ ಹಸ್ತವನ್ನು ಬಲಕೈಯ್ಯಲ್ಲೂ, ಎಡಕೈಯ್ಯಲ್ಲಿ ಚತುರವನ್ನೂ ಹಿಡಿದು ಅಲ್ಲಾಡಿಸಬೇಕೆನ್ನುತ್ತದೆ ಭರತಾರ್ನವ, ಭರತಸಾರಾದಿ ಶಾಸ್ತ್ರಗ್ರಂಥಗಳು.
ಮುಕುಳಹಸ್ತದಿಂದ ಕಿರು ಬೆರಳನ್ನು ಬಗ್ಗಿಸುವುದು ಪ್ರದೀಪ ಮುಕುಳಹಸ್ತವೆನಿಸಿಕೊಳ್ಳುತ್ತದೆ. ವಿನಿಯೋಗ : ಕೊಕ್ಕರೆ.
ಮುಕುಳ ಹಸ್ತದ ತೋರುಬೆರಳನ್ನು ನಿಡಿದಾಗಿರಿಸುವುದು ಖಂಡ-ಮುಕುಳ ಹಸ್ತ. ವಿನಿಯೋಗ : ಇಲಿ.
ನೃತ್ತ ಹಸ್ತಗಳ ಪೈಕಿ ಒಂದಾದ ನಿಷಧ ಹಸ್ತಕ್ಕೆ ಮುಕುಲ ಹಸ್ತವನ್ನು ಕಪಿತ್ಥಹಸ್ತದಿಂದ ಸುತ್ತಿ ಹಿಡಿದುಕೊಳ್ಳುವ ಲಕ್ಷಣವೂ ಕಂಡುಬಂದಿದೆ. ಮುಕುಳದ ಹೆಬ್ಬೆರಳು ಮತ್ತು ಮುಷ್ಟಿ ಹಸ್ತದ ತೋರುಬೆರಳನ್ನು ಜೋಡಿಸುವುದು ಅರ್ಧ-ಮುಕುಳಹಸ್ತ. ಭರತಾರ್ಣವದಲ್ಲಿನ ಉಲ್ಲೇಖದ ಪ್ರಕಾರ ಮುಕುಲ ಮುದ್ರೆಗಳನ್ನು ಹಿಡಿದು ಎರಡೂ ಕಿರುಬೆರಳುಗಳನ್ನು ಬೇರ್ಪಡಿಸಿ ಪರಸ್ಪರ ಚಾಲಿಸುವುದು ಮತ್ತು ಜೋಡಿಸುವುದು. ವಿನಿಯೋಗ : ಬೆಕ್ಕು, ಒಳ್ಳೆಯ ನಡತೆ, ಲಿಕುಚ ಹಣ್ಣು, ಸ್ತನ, ಸರಿಯಾದ ರೀತಿ, ಜಿಪುಣತನ, ತಾವರೆಯ ಮೊಗ್ಗು ಮತ್ತು ದಂಟು. ಇದರ ಬಳಕೆ ಕಡಿಮೆ. ನಾನಾರ್ಥ ಹಸ್ತ ವಿಭಾಗದಲ್ಲಿ ಈ ೨ ಅರ್ಧ ಮುಕುಳವನ್ನು ಅನ್ಯೋನ್ಯಾಭಿಮುಖವಾಗಿಟ್ಟು ಕೆಳಭಾಗದಲ್ಲಿ ಆಡಿಸಿದರೆ ಕುಳಿತುಕೊಳ್ಳುವ ಅರ್ಥದಲ್ಲಿಯೂ, ಊರ್ಧ್ವ ಭಾಗದಲ್ಲಿ ಆಡಿಸಿದರೆ ‘ಹಾಗೇ ಆಗಲಿ’’ ಎಂಬರ್ಥದಲ್ಲಿಯೂ, ವಕ್ಷಸ್ಥಳದಲ್ಲಿ ಆಡಿಸಿದರೆ ಮನಸ್ಸು ಎಂಬ ಅರ್ಥದಲ್ಲಿಯೂ ವಿನಿಯೋಗಿಸಬಹುದು. ಈ ಹಸ್ತವನ್ನು ಅಭಿಮುಖವಾಗಿ, ಮೇಲೆ, ಮತ್ತು ಎದೆಯಮಟ್ಟಕ್ಕೆ ಹಿಡಿದು ಅಲುಗಾಡಿಸಿದರೆ ವ್ಯಕ್ತಿಯು ‘ತಾನು’ ಎಂದು ಹೇಳುವುದರ ಸೂಚಕವಾಗಿ ಮತ್ತು ಪ್ರಭುತ್ವ ಸಾಧಿಸುವುದು ಮತ್ತು ಇದಕ್ಕೆ ಪೂರಕವಾಗುವ ಸಂದರ್ಭಗಳನ್ನು ಸಂವಹಿಸುತ್ತದೆ. ಸಮಯಸೂಚಿಹಗಳಾದ ಘಟಿಕ ಅಥವಾ ನದಿಕ- ೨೪ ಮಿನಿಟ್ : ಅರ್ಧಮುಕುಲವನ್ನೂ ; ಮುಹೂರ್ತ -೪೮ ಮಿನಿಟ್ ( ೧೨ ಕ್ಷಣ= ೧ ಮುಹೂರ್ತ)ಕ್ಕೂಮುಕುಲಹಸ್ತಗಳನ್ನು ಹೇಳಲಾಗಿದೆ. ಋತುಹಸ್ತಗಳ ಪೈಕಿ ಶಿಶಿರಕ್ಕೆ ಅರ್ಧಮುಕುಳ ಹಸ್ತವನ್ನು ಎದುರಿಗೆ ಹಿಡಿಯಬೇಕು.
ಒಡಿಸಿಯಲ್ಲಿಮುಕುಳ ಹಸ್ತಕ್ಕೆ ಭಯಹಸ್ತವೆಂಬ ಹೆಸರೂ ಇದೆ. ಕಥಕಳಿಯಲ್ಲಿ ಸೂಚೀ ಮತ್ತು ಮುಕುಳಹಸ್ತಗಳನ್ನುಉರಿಯುತ್ತಿರುವ ದೀಪ ಎನ್ನಲು ಬಳಸುತ್ತಾರೆ.
ಯಕ್ಷಗಾದಲ್ಲಿ ಮುಕುಳ ಹಸ್ತಕ್ಕೆ ಪಂಚಮುದ್ರೆ ಎಂಬ ಹೆಸರಿದ್ದು, ಬಣ್ಣಗಾರಿಕೆಯಲ್ಲಿ ಕಣ್ಣಿನ ಪಾರ್ಶ್ವಕ್ಕೆ ಹಚ್ಚುವ ಪಂಚಮುದ್ರೆಯನ್ನು ಈ ಹಸ್ತದ ನೆರವಿನಿಂದ ಬಳಸುತ್ತಿದ್ದರು.
ನಿತ್ಯಜೀವದಲ್ಲಿ ಈ ಹಸ್ತವನ್ನು ಇಕ್ಕಟ್ಟು ಎಂಬ ಭಾವಸೂಚಕಕ್ಕೂ, ಒಟ್ಟಾಗು ಎನ್ನಲು, ಹುಡಿ ಚೆಲ್ಲಲು, ಊಟ ಮಾಡುವಲ್ಲಿ, ಮುತ್ತು ಕೊಡುವಲ್ಲಿ ಇತ್ಯಾದಿಗಳ ಸಂವಹನಕ್ಕೆ ಬಳಸಲಾಗುತ್ತದೆ.