Author: ಡಾ. ಮನೋರಮಾ ಬಿ.ಎನ್
೧೯೬೩ರ ಕಾಲಘಟ್ಟ. ಮದುವೆಯಾಗಿ ಗುಜರಾತ್‌ಗೆ ಬಂದು ಪುಟ್ಟ ಸಂಸ್ಥೆ ಕಟ್ಟಿಕೊಂಡು ತಮ್ಮ ಅಸ್ತಿತ್ವವನ್ನು ಆ ಊರಲ್ಲಿ ಕಂಡುಕೊಳ್ಳುತ್ತಿದ್ದರಷ್ಟೇ ! ಗುಜರಾತಿ ಭಾಷೆಯನ್ನು ಕಲಿಯುವ ಹಾದಿಯಲ್ಲಿ ಅದೊಂದು ದಿನ ಪತ್ರಿಕೆಯತ್ತ ಹೀಗೆ ಕಣ್ಣಾಡಿಸುತ್ತಿದ್ದ ಆಕೆಯ ಮನಸ್ಸು ಕಲಕಿದ್ದು – ಹೆಣ್ಣುಮಗಳು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ. ಕಾರಣ, ವರದಕ್ಷಿಣೆಯ ಕಾಟ ! ದಿಗಿಲಾಗಿತ್ತು ಆಕೆಗೆ ! ವರದಿಯಾಗಿ ಬಂದ ಪ್ರಕರಣ ಒಂದಾದರೆ, ಬೆಳಕಿಗೆ ಬಾರದ ಪ್ರಕರಣಗಳು ಇನ್ನೆಷ್ಟಿರಬಹುದು ಎಂದು ಆಲೋಚಿಸಿ ಮನಸ್ಸು ಕದಡಿತು. ಸಮಸ್ಯೆಗೆ ಪರಿಹಾರ ?- ಯೋಚಿಸುತ್ತಾ ಕುಳಿತಿದ್ದಾಕೆಗೆ ಅವರ ಕಲಾಹೃದಯವೇ ತನ್ನ ದಾರಿ ತೋರಿತ್ತು !- ತಾನು ಕಲಿತು ರೂಢಿಸಿಕೊಂಡ ನೃತ್ಯವನ್ನು ಕೇವಲ ಸೌಂದರ್ಯಾನುಭೂತಿಗೆಂದೇ ಮೀಸಲಾಗಿರಿಸದೆ ಜಾಗೃತಿಗಾಗಿ ಕೆಲಸ ಮಾಡಬಹುದಲ್ಲವೇ? ದೇವಾಲಯ ಪರಂಪರೆಯೊಳಗೆ ಬೆಳೆದ ಭರತನಾಟ್ಯದ ಕಲಿಕೆಯನ್ನು, ಸಮಕಾಲೀನ ಪರಿಸರಕ್ಕೆ, ಸಮಸ್ಯೆಗೆ ಸಂವಾದಿಯಾಗಿಸಬಹುದಲ್ಲವೇ?
ಯೋಚನೆ ಯೋಜನೆಯಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಆವರೆಗೆ ಸಾಂಪ್ರದಾಯಿಕವಾಗಿ ನರ್ತಿಸುತ್ತಿದ್ದವರು ಇದೀಗ ಭರತನಾಟ್ಯದ ಜತಿಯ ಸೊಲ್ಕಟ್ಟಿನ ಭಾಷೆಯನ್ನೇ ತಮ್ಮ ನೃತ್ಯಪ್ರಯೋಗದ ಭಾಷೆಯನ್ನಾಗಿ ಮಾಡಿಕೊಂಡರು. ಶೃಂಗಾರದ ಬದಲಿಗೆ ಹಿಂಸೆ, ಆತಂಕ, ಕ್ರೌರ್ಯವನ್ನು ಅಭಿನಯಕ್ಕೊಗ್ಗಿಸಿ ರಂಗಕ್ಕೆ ತಂದರು. ವೇಷಭೂಷಣವನ್ನು ಸಾಮಾನ್ಯರಿಗೊಪ್ಪುವಂತೆ ಸರಳಗೊಳಿಸಿದರು. ಆಗ ಮೂಡಿಬಂದದ್ದೇ A Ragged fragment of Eternity ಎಂಬ ಪ್ರಯೋಗ ! ಭಾರತವಷ್ಟೇ ಅಲ್ಲದೆ ವಿದೇಶದಲ್ಲಿಯೂ ಪ್ರದರ್ಶನ ಕಂಡು ಭಾರತದ ಮಹಿಳೆಯರ ಸ್ಥಿತಿಗೆ ಪ್ರೇಕ್ಷಕರ ಮನ ಕರಗುವಂತೆ ಮಾಡಿತು. ಎಷ್ಟರಮಟ್ಟಿಗೆ ಯಶಸ್ವಿಯಾಯಿತೆಂದರೆ ಸರ್ಕಾರವನ್ನು ಗಾಢವಾಗಿ ಪ್ರಭಾವಿಸಿ ವರದಕ್ಷಿಣೆ ವಿರೋಧಿ ಕಾಯ್ದೆ ರೂಪಿಸುವ ಹಂತದ ವರೆಗೂ! ಇದು ಭರತನಾಟ್ಯದಂತಹ ಪಾರಂಪರಿಕ ನೃತ್ಯಮಾಧ್ಯಮವು ಹೇಗೆ ಸಾಮಾಜಿಕ ಜಾಗೃತಿ ತರಬಹುದು ಎಂಬುದಕ್ಕೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕಂಡುಬಂದ ಮೊದಲ ಯಶಸ್ಸಿನ ಹೆಜ್ಜೆ ! ಇದರ ರೂವಾರಿ ಮೃಣಾಲಿನಿ ಸಾರಾಭಾಯ್.
ಈ ಕುರಿತಂತೆ ಲಂಡನ್‌ನಲ್ಲಿ ೧೯೯೫ ಅಕ್ಟೋಬರ್‌ನಲ್ಲಿ ನಡೆದ ವರದಕ್ಷಿಣೆ ಕುರಿತ ನೃತ್ಯಪ್ರಯೋಗದ ಪೂರ್ವತಯಾರಿಯಲ್ಲಿ ಸಂದರ್ಶಕರೊಂದಿಗೆ ಮಾತನಾಡಿದ ಮೃಣಾಲಿನಿ ಹೀಗಂದಿದ್ದರು-
‘the ‘hot’ issue of dowry deaths had not ever been shown on stage and bharathanatyam as a style did not speak of hate, death, destruction – it spoke of love. How could I express it so that everyone could understand? How could it be created? I felt such a strong, intense impulse to create.’
ವಸಾಹತುಶಾಹಿಯ ನೆರಳಲ್ಲಿ ನಲುಗಿಹೋಗಿದ್ದ ಭಾರತದ ನೃತ್ಯವಿಶೇಷಗಳೆಲ್ಲಾ ವೇಶ್ಯೆಯರ, ದೇವದಾಸಿಯರ ಸೊತ್ತು ಎಂಬ ಭಾವನೆ ಮೃಣಾಲಿನಿ ನೃತ್ಯ ಮಾಡುವ ಕಾಲಕ್ಕೆ ಕ್ಷೀಣಿಸುತ್ತಾ ಬಂದಿತ್ತೇನೋ ನಿಜ. ಆದರೆ ನೃತ್ಯವು ಮಡಿವಂತಿಕೆಯ ಹಂಗನ್ನು ಇಂದಿನಷ್ಟು ಕಳಚಿರಲಿಲ್ಲ. ಹಾಗಾಗಿ ನೃತ್ಯವನ್ನು ಕ್ರಾಂತಿಯ ಚಲನೆಯಾಗಿ ಚಿತ್ರಿಸಬೇಕಾದ ಅನಿವಾರ್ಯತೆ ಒಂದೆಡೆಯಾದರೆ; ಇತ್ತ ತಮ್ಮ ಅಸ್ತಿತ್ತ್ವವನ್ನೂ ನೃತ್ಯದೊಂದಿಗೆ ಭಿನ್ನವಾಗಿ ಕಂಡುಕೊಳ್ಳುವ ಅಗತ್ಯ ಅಂದಿನ ಬಹುಪಾಲು ಕಲಾವಿದರಿಗೆ. ಅದು ರುಕ್ಮಿಣೀ ದೇವಿ ಅರುಂಡೇಲ್ ಅವರಿಂದ ಮೊದಲ್ಗೊಂಡು ಮೃಣಾಲಿನಿ, ಚಂದ್ರಲೇಖಾ, ರಾಂಗೋಪಾಲ್ ಹೀಗೆ ಹಲವು ಕಲಾವಿದರ ನಡೆಗಳೆಲ್ಲದರಲ್ಲೂ ಒಂದಲ್ಲ ಒಂದು ಬಗೆಯಿಂದ ಸ್ಪಷ್ಟವಾಗಿ ಕಾಣುತ್ತದೆ. ಒಮ್ಮೆ ತಾವು ಕಥಕಳಿ ಕಲಾವಿದೆಯಾಗಿ ನರ್ತಿಸಿದಾಗ ಇಬ್ಬರು ಮಹಿಳೆಯರು ಹಾಸ್ಯ ಮಾಡಿದ್ದರಂತೆ ! ಅದ್ಭುತ ಕಲೆಯೊಂದನ್ನು ಕೀಳುಗರೆಯುವುದನ್ನು ಕಂಡು ತೀವ್ರ ಖೇದಗೊಂಡ ಮೃಣಾಲಿನಿ ‘ಮನುಷ್ಯ’ ಎಂಬ ನೃತ್ಯರೂಪಕದ ವಿನ್ಯಾಸ ಮಾಡಿದ್ದರು. ಕೆಲವೊಂದು ಬದಲಾವಣೆಗಳ ಸಹಿತ ಕಥಕಳಿಯ ಅಂಶಗಳನ್ನು ಅಳವಡಿಸಿಕೊಂಡು ಬಂದ ಈ ಪ್ರಯೋಗ ೧೯೪೯ರಲ್ಲಿ ರೂಪ ಪಡೆದು ೧೯೮೭ರವರೆಗೂ ಪುನರ್ಸ್ಪರ್ಶ ಪಡೆಯುತ್ತಲೇ ಸಾಗಿತ್ತು. ತಾಯಿಯ ಗರ್ಭದಿಂದ ಹೊರಪ್ರಪಂಚಕ್ಕೆ ಬರುವ ಮಗು ತನ್ನ ಕೈಕಾಲಿನ ಶಕ್ತಿಯನ್ನು ಗಮನಿಸಿ ಅಚ್ಚರಿಪಡುವ ಆರಂಭದಿಂದ, ಆತ ಕಲಿತು ಬೆಳೆದು, ಪ್ರೀತಿಯಲ್ಲಿ ಬಿದ್ದು ಮದುವೆಯಾಗಿ ಕೊನೆಗೆ ಮರಣವನ್ನು ಹೊಂದುವ ಚಿತ್ರಣ ಇದರ ಪ್ರಧಾನ ವಸ್ತು.
ನೃತ್ಯಸುಧಾರಣೆಯ ಹಾದಿಯಲ್ಲಿ ರುಕ್ಮಿಣೀ ಅರುಂಡೇಲ್ ಅವರದ್ದು ಪಾರಂಪರಿಕವಾದ ಸಾಂಸ್ಥಿಕ ಬದಲಾವಣೆಗಳ ಪ್ರಯತ್ನವಾದರೆ; ಮೃಣಾಲಿನಿಯವರದ್ದು ಪೌರಾಣಿಕಕ್ಕೆ ಆಧುನಿಕ ನೋಟದ ಸ್ಪರ್ಶ, ಸಮೂಹ ನೃತ್ಯದ ಮೂಲಕ ಜಾಗೃತಿ ಮತ್ತು ಅಬ್ಸ್ಟ್ರಾಕ್ಟ್ ಕಲ್ಪನೆಗಳತ್ತ ತುಡಿತ. ಮಾತ್ರವಲ್ಲ ‘ನನ್ನ ಎಡಭಾಗದಲ್ಲಿ ಕಥಕಳಿಯೂ, ಬಲಭಾಗದಲ್ಲಿ ಭರತನಾಟ್ಯವೂ, ಪಾದಗಳಲ್ಲಿ ಕಥಕ್ ಇರುತ್ತದೆ’ ಎಂದು ಹೇಳಿದ್ದ ರಾಂಗೋಪಾಲ್‌ರಂತೆಯೇ ಮೃಣಾಲಿನಿ. ಇಂಥದ್ದೇ ನೃತ್ಯಶೈಲಿ ಎಂಬ ವಿನ್ಯಾಸವನ್ನು ಹೇಳಲಾಗದೇ ಇದ್ದರೂ ಕಥಕಳಿ, ಭರತನಾಟ್ಯ, ಜಾನಪದ ನೃತ್ಯ ಇತ್ಯಾದಿಗಳನ್ನು ಬೆರೆಸಿ ಹೊಸ ವಸ್ತುಗಳನ್ನು ಆಧರಿಸಿದ ಹಾದಿ. ಅದರಲ್ಲೂ ಯಾವುದೇ ಜಾಗಕ್ಕೆ ಹೋದರೂ, ಯಾವುದೇ ತಾಂತ್ರಿಕ ಸಲಕರಣೆಗಳಿಲ್ಲದಿದ್ದರೂ ಎಲ್ಲಿಯೂ ಪ್ರದರ್ಶಿಸಬಲ್ಲ, ಎಲ್ಲಿಗೂ ಅನ್ವಯಿಸಬಲ್ಲ, ಹಿರಿಯರು ಕಿರಿಯರೆಂಬ ಭೇಧವಿಲ್ಲದೆ ನಗರ, ಗ್ರಾಮವೆಂಬ ತಾರತಮ್ಯವಿಲ್ಲದೆ ಯಾವುದೇ ಪ್ರೇಕ್ಷಕರಿಗೂ ಹೊಂದಬಲ್ಲ್ಲ ಪ್ರಯೋಗಗಳನ್ನು ಮೃಣಾಲಿನಿ ವಿನ್ಯಾಸ ಮಾಡುವುದಕ್ಕೆ ಮನಮಾಡಿದ್ದರು ! ಇದಕ್ಕೆ ತಕ್ಕಂತೆ ಸ್ತ್ರೀಯರು ಮತ್ತು ಪುರುಷರೀರ್ವರಿಗೂ ಸಮನಾಗಿ ಹೊಂದುವಂತೆ ವೇಷಭೂಷಣಗಳಿರಬೇಕು ಎಂಬ ನೆಲೆಯಲ್ಲಿ ಭರತನಾಟ್ಯ-ಕಥಕಳಿಯ ಭಾರೀ ಭರ್ಜರಿ ಆಹಾರ್ಯಾಭಿನಯಕ್ಕಿಂತ ಮೃಣಾಲಿನಿ ಆಯ್ದುಕೊಂಡದ್ದು ನೃತ್ಯಾಭ್ಯಾಸಕ್ಕೆ ಬಳಸುತ್ತಿದ್ದ ಪ್ರಾಕ್ಟೀಸ್ ಸೀರೆ, ಲಂಗ ದಾವಣಿ ಮುಂತಾದ ಸರಳ ವೇಷ-ಪ್ರಸಾದನ. ಸಾಹಿತ್ಯ ಬಹಳಷ್ಟು ಸಲ ಜನರಿಗೆ ಅರ್ಥವಾಗುವುದಿಲ್ಲ ಎಂದೇ ಅವರು ನಂಬಿದ್ದರಿಂದ ಅಳವಡಿಸಿಕೊಂಡದ್ದು ಅಬ್ಸ್ಟ್ರಾಕ್ಟ್. ಎನಿಸುವಂತಹ ಧ್ವನಿ ವಿಶೇಷಗಳು, ವಾದ್ಯದ ನಾದ, ಸಂಸ್ಕೃತ ಶ್ಲೋಕ ಮತ್ತು ನಿರೂಪಣೆಗಳು, ಆಧುನಿಕ ನಾಟಕಗಳ ಮುಖವಾಡಗಳ ಹಗ್ಗ, ದುಪ್ಪಟ್ಟಾ, ಬಳಸಿ ಕೊಡುವ ಸಾಂಕೇತಿಕ ಮನೋಧರ್ಮ. ಅವರ ಪ್ರಕಾರ ‘ಸಂಗೀತ ತುಂಬ ಶಕ್ತಿಯುತವಾಗಿರಬೇಕು. ಹಾಗಿದ್ದರೆ ಜನರಿಗೆ ಬೇಗ ಅರ್ಥವಾಗುತ್ತೆ. ಸಂಗೀತವೆಂದರೆ ನಮ್ಮ ಬಹಳಷ್ಟು ಪ್ರಯೋಗಗಳಲ್ಲಿ ನೃತ್ಯದ ಸೊಲ್ಕಟ್ಟು. ಚಲನೆಯೊಂದಿಗೆ ಹೊಂದಿಸಲ್ಪಟ್ಟ ತತ್ಕಾರಗಳ ಶಕ್ತಿ ಅಮೋಘ.’ ಹಾಗಾಗಿ ಪರಿಣಾಮಕಾರಿ ಬೆಳಕಿನ ವಿನ್ಯಾಸ, ಸಂಗೀತದ ಬದಲಿಗೆ ಮೌನವನ್ನು ಪರಿಣಾಮಕಾರಿಯಾಗಿ ಬಳಸುವುದು ಮೃಣಾಲಿನಿ ಅವರ ನೃತ್ಯದ ವಿಶೇಷತೆ. ಇದೇ ಮುಂದೆ ಹಲವು ಸಮಕಾಲೀನ ನೃತ್ಯಗಳ ಉದ್ದೀಪನಕ್ಕೆ ಕಾರಣವಾಯಿತು.
ಅಷ್ಟೇ ಅಲ್ಲ, ‘ನೃತ್ಯವೆಂದರೆ ಸುಂದರವಾದ ಚಲನೆಗಳ ಅಂದವಾದ ಭಾವನೆ, ಶೃಂಗಾರ-ಪ್ರೇಮಮಯ ಎಂಬುದು ಎಲ್ಲರ ನಂಬಿಕೆ ಮತ್ತು ಬಹಳಷ್ಟು ಜನರು ಅದೇ ನೆಲೆಯಲ್ಲಿ ಭರತನಾಟ್ಯವನ್ನು ಪ್ರದರ್ಶಿಸುತ್ತಾರೆ. ಆದರೆ ನಾನು ನನ್ನ ಸಂಯೋಜನೆಗಳಲ್ಲಿ ಸಮಾಜದ ಕೆಟ್ಟ, ಭೀಭತ್ಸ, ಭಯ, ಹಿಂಸೆ, ದೌರ್ಜನ್ಯಗಳ ಮುಖಗಳನ್ನು ತಂದಿದ್ದೇನೆ.’ ಎನ್ನುತ್ತಿದ್ದರು ಮೃಣಾಲಿನಿ. ಹಾಗಾಗಿ ‘ಶಕುಂತಲಾ’ದಂತಹ ಪುರಾಣದ ಕತೆಯನ್ನು ೧೯೭೧ರಲ್ಲಿ ರೂಪಿಸುವಾಗಲೂ ಅದನ್ನು ಸ್ತ್ರೀದೌರ್ಜನ್ಯದ ನೆಲೆಯಲ್ಲಿ ಸಮಕಾಲೀನಗೊಳಿಸುವ ಪ್ರಯತ್ನ ಮಾಡಿದ್ದರು ಮೃಣಾಲಿನಿ. ನಾಯಕಿ ಶಾಕುಂತಲೆಯು ನಾಯಕ ದುಷ್ಯಂತನಿಂದ ಪರಿತ್ಯಕ್ತೆಯಾದಾಗ ದುಃಖಾತಿಶಯಕ್ಕೆ ಒಳಗಾಗದೆ ಹೇಗೆ ತನ್ನ ಗೆಳತಿಯರಿಗೆ ಮತ್ತು ಸಾಕುತಂದೆ ಕಣ್ವನಿಗೆ ಬಂದು ತನಗಾದ ಅನ್ಯಾಯದ ವಿರುದ್ಧ ದೂರು ಕೊಡುತ್ತಾಳೆ ಎಂಬುದೇ ಮೃಣಾಲಿನಿ ಅವರ ಹೊಸ ನೋಟ. ಇನ್ನು ೧೯೫೦ ಮತ್ತು ೧೯೮೭ರಲ್ಲಿ ಸಂಯೋಜನೆಗೊಂಡ ಮೇಘದೂತವು ಕಾಳಿದಾಸನ ಕೃತಿಯನ್ನು ಆಧರಿಸಿದ್ದರೂ, ಅದನ್ನು ವಿನ್ಯಾಸ ಮಾಡಿದ್ದು ಪ್ರಕೃತಿಯ ಮತ್ತು ಅದರ ರಕ್ಷಣೆಗೆ ಸಂಬಂಧಿಸಿದಂತೆಯೇ ! ಋಗ್ವೇದದ ಮಂತ್ರಗಳನ್ನೂ ಬಳಸಿ ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯದ ಕುರಿತಾಗಿ ನೃತ್ಯನಿರ್ದೇಶನ ಮಾಡಿದ್ದರು. ರಾಧಾಕೃಷ್ಣರ ಸನ್ನಿವೇಶದ ಒಂದು ನೃತ್ಯಕೃತಿಯಲ್ಲಿ ರಾಧೆ ಕೃಷ್ಣನನ್ನು ಯಮುನೆಯ ತೀರದಲ್ಲಿ ಹುಡುಕುತ್ತ ಬಂದಾಗ ಅಲ್ಲಿ ಮಾಲಿನ್ಯ, ಕೊಳಕು ನೋಡಿ ನಾಶವಾದ ಪ್ರಕೃತಿಯನ್ನು ಗಮನಿಸಿ ಸ್ವತಃ ರಾಧೆ ಕಸಬರಿಕೆ ಹಿಡಿದು ಗುಡಿಸಿ ಸ್ವಚ್ಛ ಮಾಡುವುದೂ ಅವರ ಕಲ್ಪನೆಯ ಅಂಗ ! ೧೯೮೫ರಲ್ಲಿ ವಿನ್ಯಾಸಗೊಂಡ ‘ಗಂಗಾ’ ಗಂಗಾಪೂಜೆ ಮತ್ತು ನಂಬಿಕೆಯ ಹೆಸರಿನಲ್ಲಿ ಪವಿತ್ರನದಿಯ ನಾಶವನ್ನು ಕುರಿತಾಗಿತ್ತು. ಹೀಗೆ ಆವರೆಗೂ ಚಾಲ್ತಿಯಲ್ಲಿಲ್ಲದ ಕ್ರಮದಲ್ಲಿ ನೃತ್ಯಪ್ರಯೋಗವನ್ನು ಮಾಡಿದಾಗೆಲ್ಲಾ ಮೊದಮೊದಲಿಗೆ ಪ್ರೇಕ್ಷಕರಿಗೆ ಅರ್ಥಮಾಡಿಕೊಳ್ಳುವುದು ಕಷ್ಟವಾಯಿತಾದರೂ ನಂತರದಲ್ಲಿ ೨೦೦೦ಕ್ಕೂ ಮಿಗಿಲು ನೃತ್ಯಪ್ರದರ್ಶನಗಳು ನಡೆಯಿತಂತೆ !
೧೯೭೭ರಲ್ಲಿ ರವೀಂದ್ರನಾಥ ಠಾಗೋರರ ‘ಚಾಂಡಲೀಕ’ ಕೃತಿಯನ್ನು ಆಯ್ದುಕೊಳ್ಳುವಾಗ ಮೃಣಾಲಿನಿಯಲ್ಲಿದ್ದಿದ್ದೂ ಇದೇ ಕ್ರಾಂತಿಯ ಭಾವ. ಆನಂದನೆನ್ನುವ ಬೌದ್ಧ ಭಿಕ್ಷುವು ಪ್ರಕೃತಿ ಎಂಬ ಸ್ತ್ರೀಯನ್ನು ಅನ್ಯಾಯದ ವಿರುದ್ಧ ಸಿಡಿದೇಳುವಂತೆ ಪ್ರೇರೇಪಣೆ ನೀಡುವ ಕಥಾವಸ್ತುವಿನ ‘ಚಾಂಡಾಲೀಕ’ ಅತ್ಯದ್ಭುತ ಯಶಸ್ಸು ಕಂಡ ಪ್ರಯೋಗ. ‘ಹರಿಜನ ಗಿರಿಜನರ ದೌರ್ಜನ್ಯವನ್ನು ಕೇಳಿ ಅದನ್ನು ಜನರಿಗೆ ತೋರಿಸಿ ಕ್ರಾಂತಿ ತರಬೇಕು ಎಂದು ಮಾಡಿದೆ. ಹೇಗೆ ನಮ್ಮ ಜನರೇ ನಮ್ಮವರನ್ನು ಕೊಲ್ಲುತ್ತಾರೆ, ಹಿಂಸಿಸುತ್ತಾರೆ ಎಂಬುದನ್ನು ತೋರಿಸುವುದು ನನ್ನ ಮುಖ್ಯ ಉದ್ದೇಶವಾಗಿತ್ತು. ಸಾಮಾಜಿಕವಾಗಿ ಬೇರೂರಿರುವ ಅಸ್ಪೃಶ್ಯತೆಗಿಂತಲೂ ಹೆಚ್ಚಾಗಿ ನಮ್ಮೆಲ್ಲರಲ್ಲೂ ಸುಪ್ತವಾಗಿರುವ ಪ್ರತ್ಯೇಕತಾವಾದ, ಅಸಹನೆಗಳೇ ಅಸ್ಪೃಶ್ಯತೆಯನ್ನು ಅಂತರಂಗಕ್ಕಿಳಿಸುತ್ತವೆ ’ ಎಂದಿದ್ದರು ಮೃಣಾಲಿನಿ.
೧೯೭೯ರಲ್ಲಿ ಕೇರಳದ ಸೈಲೆಂಟ್‌ವ್ಯಾಲಿ ಮಳೆಕಾಡುಗಳ ಮೇಲೆ ಹೈಡ್ರೋಥರ್ಮಲ್ ಯೋಜನೆ ಬಂದು ಎಲ್ಲವನ್ನೂ ನಾಶ ಮಾಡುವ ಸುದ್ದಿ ಬಂದಾಗ ಪರಿಸರದ ಮೇಲೆ ಮೊದಲಬಾರಿಗೆ ಬಂದು ಸಂಚಲನವನ್ನೇ ಉಂಟುಮಾಡಿದ್ದ ನೃತ್ಯ- ‘Aspiration’. ಮರಗಳನ್ನು ಕಡಿಯುವುದಕ್ಕೆ ವಿರೋಧ ವ್ಯಕ್ತಪಡಿಸುವ ‘ಫ್ರೆಂಡ್ಸ್ ಆಫ್ ದ ಟ್ರೀ’ ಎಂಬ ಸಮೂಹವನ್ನು ಅದಾಗಲೇ ಆರಂಭಿಸಿದ್ದ ಮೃಣಾಲಿನಿ ಮತ್ತವರ ಸ್ನೇಹಿತರು; ಕೇರಳದೆಲ್ಲೆಡೆ ಪರಿಸರದ ನಾಶವನ್ನು ಬಿಂಬಿಸುವ ನೃತ್ಯಕಾರ್ಯಕ್ರಮ ವಿನ್ಯಾಸ ಮಾಡಿ ಯಶಸ್ಸು ಗಳಿಸಿದ್ದರು.
ಒಟ್ಟಿನಲ್ಲಿ ಕೊರವಂಜಿ, ಪಲ್ಲಕ್ಕಿ ಸೇವಾಪ್ರಬಂಧ, ವಲ್ಲಿ ಕಲ್ಯಾಣ, ಗೀತಗೋವಿಂದ, ಟ್ಯಾಗೋರರ ‘ಭಾನುಸಿಂಗರ್ ಪದಾವಳಿ’ ಮುಂತಾದ ೫೦ ಪಾರಂಪರಿಕ ಪದ್ಧತಿಯ ನೃತ್ಯನಾಟಕಗಳನ್ನು ಸಂಯೋಜಿಸಿದರೂ; ಮೃಣಾಲಿನಿ ಅವರ ಪ್ರಧಾನ ಆಸಕ್ತಿ ಇದ್ದದ್ದು ನೃತ್ಯಮಾಧ್ಯಮವನ್ನು ಸಾಮಾಜಿಕವಾಗಿ ಒಗ್ಗಿಸುವ ಕಡೆಗೇ ! ೧೯೯೦ರಲ್ಲಿ ಪ್ರಗತಿಯ ಕುರಿತು ‘Germination’ ; ೨೦೦೬ರಲ್ಲಿ ಸಮಕಾಲೀನ, ಜಾನಪದ, ಭರತನಾಟ್ಯದ ವಿವಿಧ ನೃತ್ಯಗಳನ್ನು ಮಿಳಿತಗೊಳಿಸಿದ ‘‘India: Then, Now, Forever’ ಇತ್ಯಾದಿಗಳದ್ದು ಇದೇ ಜಾಡು. ಕ್ರಮೇಣ ಮಕ್ಕಳಿಗೂ ಭರತನಾಟ್ಯಾದಿ ನೃತ್ಯಗಳನ್ನು ಕಲಿಸುವತ್ತ ಗಾಢವಾಗಿ ಚಿಂತಿಸಿ ೧೯೯೫ರಲ್ಲಿ ಕೂಚಿಪುಡಿಯನ್ನು ಬಳಸಿ ಪ್ರಕೃತಿಯ ಬಗೆಗೆ ಅರಿವು ಮೂಡಿಸುವ ‘Rights to the spirit of Nature’, ‘Gifts of Prakriti’ ಎಂಬ ಪ್ರಯೋಗಗಳಲ್ಲೂ ಪರಿಸರ ಜಾಗೃತಿಯ ಆಸಕ್ತಿಯೇ ಪ್ರಧಾನವಾಗಿತ್ತು.
ನೃತ್ಯದ ಮೂಲಕ ಪರಿಸರ, ಮಹಿಳಾವಾದ, ಅಸ್ಪೃಶ್ಯತೆಯಷ್ಟೇ ಅಲ್ಲ; ವೈಜ್ಞಾನಿಕ ವಸ್ತುಗಳ ಪ್ರಯೋಗಗಳನ್ನು ಮಾಡುವುದಕ್ಕೂ ಮೃಣಾಲಿನಿಯವರದ್ದು ಮೇಲ್ಪಂಕ್ತಿ. ವಿಜ್ಞಾನಿ ವಿಕ್ರಂರನ್ನು ಮದುವೆಯಾದರೂ ವಿಜ್ಞಾನದ ವಿಷಯಗಳನ್ನು ನೃತ್ಯದಲ್ಲಿ ತರುವುದು ತುಂಬಾ ಕಷ್ಟವೆಂದೇ ಭಾವಿಸಿದ್ದರು ಮೃಣಾಲಿನಿ ! ಕೊನೆಗೆ ಅದನ್ನೇ ಸವಾಲಾಗಿ ಸ್ವೀಕರಿಸಿ, ಸಾಧಿಸಿ ಕೋನ-ಆಕೃತಿ-ಅಂಕಿಅಂಶಗಳ ಮೇಲೆಯೇ ನೃತ್ಯವಿನ್ಯಾಸ ಮಾಡಿದ್ದರು. ಹೀಗೆ ೨೦೦೪ರಲ್ಲಿ ಬಂದ Dance of Life’ ರಂಗಕೃತಿ ಬ್ರಹ್ಮಗುಪ್ತ, ಚರಕ, ಭಾಸ್ಕರ, ಆರ್ಯಭಟರಿಂದ ಮೊದಲ್ಗೊಂಡು ೨೦ನೇ ಶತಮಾನದವರೆಗಿನ ಪ್ರಮುಖ ಬೆಳವಣಿಗೆಗಳೆನಿಸುವ ಭಾರತೀಯರು ನೀಡಿದ ಶೂನ್ಯದ ಪರಿಕಲ್ಪನೆ, ಬೀಜಗಣಿತ – ರೇಖಾಗಣಿತದ ಜ್ಯಾಮಿತಿ ಕೋನ, ತ್ರಿಕೋನ-ಚೌಕ-ನಕ್ಷತ್ರ-ಷಟ್‌ಕೋನ-ಮೇರುಪ್ರಸ್ಥಾನ ತ್ರಿಕೋನದಂತಹ ವಿಷಯಗಳನ್ನು, ಮಹಾಭಾರತದ ಯುದ್ಧದಲ್ಲಿ ಕುದುರೆಗಳನ್ನು ಒಂದೇ ಬಾಣದಿಂದ ಕೊಲ್ಲುವ ತಂತ್ರಗಳನ್ನಾಧರಿಸಿದ ಭಾಸ್ಕರನ ಗಣಿತಶಾಸ್ತ್ರದ ನಿಯಮ, ಮೊದಲ ಮೂಗಿನ ಶಸ್ತ್ರಚಿಕಿತ್ಸೆ, ಬುದ್ಧ- ಜೈನರ ಕೊಡುಗೆ, ಜಹಾಂಗೀರ್ ಚಕ್ರವರ್ತಿಯ ಪಕ್ಷಿಲೋಕದ ಭೌತಿಕವಿಜ್ಞಾನದ ಸಂಶೋಧನೆ, ಹೋಮಿಬಾಬಾ-ಜಗದೀಶಚಂದ್ರ ಬೋಸ್-ವಿಕ್ರಮ್ ಸಾರಾಭಾಯ್ ಅವರ ವೈಜ್ಞಾನಿಕ ಅನ್ವೇಷಣೆಗಳನ್ನು ಹೊಂದಿತ್ತು.
ಮೃಣಾಲಿನಿಯವರ ಪ್ರಕಾರ ‘ಪ್ರತಿಯೊಬ್ಬ ಮನುಷ್ಯನಿಗೂ ಹುಟ್ಟಿನಿಂದ ಒಂದು ಗಮ್ಯವೆಂಬುದು ಇರುತ್ತದೆ. ಕೆಲವರು ಅದನ್ನು ಸ್ಪಷ್ಟವಾಗಿ ಗುರುತಿಸಿಕೊಳ್ಳುತ್ತಾರೆ. ಕೆಲವರಿಗೆ ಕೊನೆಯವರೆಗೂ ತಿಳಿಯುವುದಿಲ್ಲ. ನನ್ನ ಅರಿವಿಗೆ ಬಂದಂತೆ ನೃತ್ಯವೊಂದೇ ನನ್ನ ಇಡಿಯ ಬದುಕು. ಅದುವೇ ನನ್ನ ಇಡೀ ಪ್ರಜ್ಞೆಯನ್ನೂ ಪೋಷಿಸಿದೆ. ಅದೊಂದೇ ನನ್ನ ಹೃದಯ, ಮನಸ್ಸು, ಬುದ್ಧಿ, ಆತ್ಮ ತಲುಪುವ ದಾರಿ. ಇಲ್ಲಿಯವರೆಗೂ ನನ್ನ ಜ್ಞಾನ ವಿಸ್ತರಿಸುವ, ಅಮೂರ್ತ ಅನುಭೂತಿ ಕೊಡುವ ನೆಲೆ.’
ಮುಂದೆ ಮಗಳು ಮಲ್ಲಿಕಾ ಸಾರಾಭಾಯ್ ಅವರೂ ಅಮ್ಮನ ಹಾದಿಯನ್ನೇ ಹಿಡಿದರು. ಮಗ ಕಾರ್ತಿಕ್ ಸಾರಾಭಾಯ್ ಪರಿಸರ ಶಿಕ್ಷಣ ಕೇಂದ್ರದ ಸಂಸ್ಥಾಪಕರಾದರು. ತಾಯಿಯ ಸಂಸ್ಕಾರವೇ ಮಕ್ಕಳಲ್ಲೂ, ಮೊಮ್ಮಕ್ಕಳಲ್ಲೂ ಮನಮಾಡಿತು. ಇಂದಿಗೆ ತಮ್ಮ ‘ದರ್ಪಣ ಅಕಾಡೆಮಿ’ಯ ವ್ಯಾನ್‌ಗಳಲ್ಲಿ ಕಲಾವಿದರನ್ನು, ಪರಿಕರಗಳನ್ನು ತುಂಬಿಸಿಕೊಂಡು ನಿಗದಿತ ಗ್ರಾಮಕ್ಕೆ ಹೋಗಿ ಅಲ್ಲಿ ಜನರನ್ನು ಒಂದೆಡೆ ಸೇರಿಸಿ ವಾಹನದ ಪಾರ್ಶ್ವಭಾಗವನ್ನು ತೆರೆದು ವೇದಿಕೆಯಂತೆ ಮಾಡಿ ಅದರಲ್ಲಿ ನೃತ್ಯ, ನಾಟಕ ಇತ್ಯಾದಿ ಪ್ರದರ್ಶನಗಳನ್ನು ಮಾಡುವುದು ಇವರ ಕ್ರಮ. ಸಾಮುದಾಯಿಕ ಸಂಸ್ಥೆಗಳು ಮತ್ತು ಹಳ್ಳಿಯ ತರುಣರ ಸಹಾಯ ಪಡೆದು ಅವರಿಂದಲೇ ಆಯಾಯ ಹಳ್ಳಿಗಳಲ್ಲಿ ಗ್ರಾಮದ ಬೇರೆ ಬೇರೆ ಪ್ರದೇಶಗಳಲ್ಲಿ, ಮರದ ಕೆಳಗಿನ ಆವರಣದಲ್ಲಿ ನೃತ್ಯಪ್ರಸ್ತುತಿಗಳನ್ನು ಏರ್ಪಡಿಸುತ್ತಲೇ ಇರುವ ‘ದರ್ಪಣ ಅಕಾಡೆಮಿ’ ಇಂದಿಗೆ ಸುಮಾರು ಹತ್ತು ಸಾವಿರಕ್ಕೂ ಹೆಚ್ಚಿನ ಯಶಸ್ವೀಪ್ರಯೊಗಗಳನ್ನು ಬೇರೆ ಬೇರೆ ವಸ್ತುಗಳನ್ನು ಆಧರಿಸಿ ನಡೆಸಿದೆ. ಆ ಪೈಕಿ ಮೃಣಾಲಿನಿ ನಿರ್ದೇಶನದ ‘ಇಸ್ ಇಟ್ ಎ ಡ್ರೀಮ್?’. – ಸುಮಾರು ೧,೦೦೦ಕ್ಕಿಂತಲೂ ಹೆಚ್ಚಿನ ಪ್ರದರ್ಶನ ಕಂಡ ಕೋಮು ಗಲಭೆ, ಧರ್ಮ ಸಾಮರಸ್ಯ, ಸಹಿಷ್ಣುತೆ, ಯುವಜನಾಂಗದ ಬೇರೆ ಬೇರೆ ಸಮಸ್ಯೆ, ಅತ್ಯಾಚಾರದಂತಹ ಸಾಮಾಜಿಕ ಪಿಡುಗುಗಳನ್ನು ಪ್ರಶ್ನಿಸಿದ ಪ್ರಯೋಗ ಖ್ಯಾತಿವೆತ್ತದ್ದು.
ಮೃಣಾಲಿನಿ ಅವರ ಪುತ್ರಿ ಡಾ. ಮಲ್ಲಿಕಾ ಸಾರಾಭಾಯ್ ವರದಕ್ಷಿಣೆಯ ಕುರಿತ ರೂಪಕವು ತಮ್ಮ ನೃತ್ಯಜೀವನದಲ್ಲಿ ಮಾಡಿದ ಪ್ರಭಾವವನ್ನು ನೆನೆದಿದ್ದಾರೆ. ‘‘My mother was the person who took dance beyond the Shringar ras to communicate important messages. She used dance to highlight the plight of brides being harassed for dowry in Saurashtra way back in 1963. She along with Rukmini Devi Arundale brought respectability to the dance form in India. Then for years I used the arts, in all their forms, born and unborn, traditional and inventive – to reach people with messages as disparate as the need to use smokeless chullahs to avoid hazards akin to constant smoking; the need for family planning; communal violence and its effects; protecting the girl child and much else.’
ತಮ್ಮ ಕೊನೆಯ ದಿನಗಳಲ್ಲಿ ಹಾಸಿಗೆ ಬಿಟ್ಟೇಳಲಾಗದ ಸ್ಥಿತಿಯಲ್ಲಿಯೂ ತಮ್ಮೊಂದಿಗೆ ಇರುತ್ತಿದ್ದ ದಾದಿಯೊಂದಿಗೆ ನೃತ್ಯಕ್ಕೆ ಸಂಬಂಧಿಸಿದಂತೆಯೇ ಮಾತನಾಡುತ್ತಿದ್ದರಂತೆ ಮೃಣಾಲಿನಿ ! ಅವರ ಮಾತಿನಲ್ಲಿಯೇ ಹೇಳುವುದಾದರೆ – ‘ಎಷ್ಟೋ ವರ್ಷಗಳಿಂದ ಜನರು ನನ್ನನ್ನು ಕೇಳುತ್ತಲೇ ಇದ್ದಾರೆ-ನಿಮ್ಮ ಪ್ರಕಾರ ನೃತ್ಯವೆಂದರೆ ಏನು? ಅದು ನನ್ನ ಉಸಿರು, ಬದುಕು ಮತ್ತು ಅದುವೇ ನಾನು ! ಅಂದರೆ ನೃತ್ಯದಿಂದ ಹೊರತುಪಡಿಸಿದ ಜೀವನ ನನ್ನದಲ್ಲ. ನನ್ನ ಆತ್ಮದ ಪ್ರಕಾಶವೇ ನೃತ್ಯ. ಅದುವೇ ನನ್ನ ಮೂಳೆ-ಮಾಂಸಗಳ ಚಲನೆಗೆ ಕಾರಣ. ಅಷ್ಟಕ್ಕೂ ಇಷ್ಟೆಲ್ಲಾ ಅನುಕೂಲ ಇದ್ದಾಗ್ಯೂ ಯಾಕೆ ನಿಮ್ಮನ್ನು ನೀವು ನೃತ್ಯದ ಮೂಳಕ ಕಷ್ಟಪಡಿಸಿಕೊಳ್ಳುತ್ತೀರಿ ಎಂದು ಕೇಳಿದರೆ ಏನನ್ನಲಿ? ನನ್ನ ಬಳಿ ಅವರಿಗೆ ಉತ್ತರವಿಲ್ಲ. ಯಾಕೆಂದರೆ ನೃತ್ಯ ಮಾಡಿದಾಗಲೇ ಅದು ನಾನು ! ನನ್ನನ್ನು ನಾನಾಗಿ ಕಂಡುಕೊಳ್ಳುವುದಕ್ಕಿರುವ ಏಕೈಕ ದಾರಿ ನೃತ್ಯ ! ಈ ಲೋಕದಿಂದ ಬೇರೆಯದೇ ಆದ ಲೋಕವನ್ನು ಅದರೊಳಗೆ ನಾನು ಕಂಡುಕೊಂಡಿದ್ದೇನೆ. ಮೌನ ನನ್ನ ಪ್ರತಿಕ್ರಿಯೆಯಾಯಾದರೆ; ಚಲನೆ ನನ್ನ ಉತ್ತರ. ’ ಒಟ್ಟಿನಲ್ಲಿ ಮಗಳು ಮಲ್ಲಿಕಾ, ಬೆಳಗಿನ ಜಾವ ಅಮ್ಮನ ಕ್ಷೇಮಸಮಾಚಾರಕ್ಕೆಂದು ಆಕೆಯ ಹಾಸಿಗೆಯತ್ತ ತೆರಳಿದರೆ ‘ಪತಾಕ, ತ್ರಿಪತಾಕ’ ಎಂದು ನೃತ್ಯ ಹಸ್ತ ಮುದ್ರೆಗಳನ್ನೇ ಪಠಿಸುತ್ತಾ ಅದರಲ್ಲೇ ಧ್ಯಾನಲೀನರಾಗುತ್ತಿದ್ದರಂತೆ !
ಶ್ರೀಮಂತ ಪ್ರಗತಿಪರ ಕುಟುಂಬದಲ್ಲಿ ಜನನ, ಸಮಾಜದ ಉನ್ನತವರ್ಗಗಳೊಂದಿಗೆ ಸಂಸರ್ಗ, ಅಚ್ಚುಕಟ್ಟಾದ ವಿದೇಶಿ ವಿದ್ಯಾಭ್ಯಾಸ, ಹೆಸರಾಂತ ಪಾರಂಪರಿಕ ನೃತ್ಯಗುರುಗಳಲ್ಲಿ ಕಲಿಕೆ, ಠಾಗೋರ್-ನೆಹರೂರಂತಹ ದೇಶದ ಪ್ರತಿಷ್ಟಿತರೊಂದಿಗೆ ಒಡನಾಟ, ವಿಜ್ಞಾನ ಕ್ಷೇತ್ರದ ಮಿಂಚಿನ ತರುಣ ಪ್ರಬುದ್ಧನೊಂದಿಗೆ ವಿವಾಹವಾದ ಸಾರ್ಥಕತೆ, ಗುಜರಾತಿನ ಪ್ರಸಿದ್ಧ ಬಟ್ಟೆ ಉದ್ಯಮ ಕುಟುಂಬಕ್ಕೆ ಕಾಲಿಟ್ಟ ಸೊಸೆ, ಆಕೆಯ ನೃತ್ಯಪ್ರದರ್ಶನಗಳಿಗೆ ದೇಶವಿದೇಶದ ಮಹಾನ್ ನಾಯಕರು ತಹತಹಿಸಿ ಕಾಯುತ್ತಿದ್ದ ಕ್ಷಣಗಳು, ಭವ್ಯದಿವ್ಯ ಸ್ವಾಗತ-ಅಭಿನಂದನೆ, ದೇಶ-ವಿದೇಶಗಳ ಪ್ರಸಿದ್ಧ ಥಿಯೇಟರ್‌ಗಳಲ್ಲಿ ಅಭಿವ್ಯಕ್ತಿ, ಪ್ರಶಸ್ತಿ-ಪುರಸ್ಕಾರರಗಳ ಮಾರುದ್ದದ ಪಟ್ಟಿ, ನೃತ್ಯಕ್ಷೇತ್ರದ ಕಲಾವಿದರಿಂದ ‘ಅಮ್ಮ’ನೆಂದೇ ಕರೆಸಿಕೊಳ್ಳುತ್ತಿದ್ದ ಭಾಗ್ಯ… ಹೀಗೆ ಉಚ್ಚಸ್ತರದ ಬದುಕನ್ನೇ ಕಂಡ ಮೃಣಾಲಿನಿ ಸಹಜವಾಗಿಯೇ ಬಾಲ್ಯದಿಂದಲೂ ಕಷ್ಟಗಳ ಪಡಿಪಾಟಲಿನಲ್ಲಿ ಬೆಂದವರಲ್ಲ. ಆದರೂ ಸಾಮಾನ್ಯರ ಬದುಕಿನೆಡೆಗೆ ಆಕೆಗಿದ್ದ ಕಳಕಳಿ ಹಾಗೂ ಶಾಸ್ತ್ರೀಯನೃತ್ಯವನ್ನು ವಿಭಿನ್ನ ದಿಶೆಯಲ್ಲಿ ಕಂಡುಕೊಳ್ಳುವ ಅನಿವಾರ್ಯತೆಗಳು ಆಕೆಯನ್ನು ಪಾರಂಪರಿಕ ಕಲಾವಿದರಿಂದ ಪ್ರತ್ಯೇಕ ಹಾದಿಯಲ್ಲಿ ಸಾಗುವಂತೆ ಮಾಡಿದ್ದವು. ಅದರಲ್ಲೂ ಸ್ವಾತಂತ್ರ್ಯೋತ್ತರ ಕಾಲದ ನೃತ್ಯಬದುಕಿನ ವಿಶಿಷ್ಟ ಕಾಲಘಟ್ಟವೊಂದರ ಸಮಸ್ತ ಆಯಾಮಗಳನ್ನೂ ಕಣ್ಣಾರೆ ಕಂಡು, ಅನುಭವಿಸಿ, ತಮ್ಮದೇ ಆದ ನೆಲೆಯಲ್ಲಿ ನೃತ್ಯಬದುಕಿಗೆ ಹೊಸತನದ ಧಾರೆಯೆರೆದ ನೃತ್ಯಚೈತನ್ಯವೊಂದು ೨೧ನೇ ಜನವರಿ, ೨೦೧೬ರಂದು ಮರೆಯಾಗಿದೆ. ‘ಅಮ್ಮ ಶಾಶ್ವತವಾಗಿ ನೃತ್ಯದಲ್ಲಿ ತೊಡಗಿಸಿಕೊಳ್ಳಲು ನಮ್ಮನ್ನೆಲ್ಲ ಅಗಲಿದ್ದಾರೆ’ ಎನ್ನುತ್ತಾರೆ ಪುತ್ರಿ ಮಲ್ಲಿಕಾ.
ಮೃಣಾಲಿನಿ ಅವರ ತಂದೆ ವಕೀಲ ಎಸ್. ಸ್ವಾಮಿನಾಥನ್ ಐಯ್ಯರ್ ೧೯೦೮ರಲ್ಲಿ ಕೇರಳದ ಮಲಬಾರ್ ಪ್ರಾಂತ್ಯದ ನಾಯರ್ ಜಾತಿಯ ಅಮ್ಮು ಎಂಬ ಹುಡುಗಿಯನ್ನು ಪ್ರೀತಿಸಿ ಲಗ್ನವಾದಾಗಲೂ ಬ್ರಾಹ್ಮಣರ ವಲಯದಲ್ಲಿ ಒಂದು ಕೋಲಾಹಲವನ್ನೆಬ್ಬಿಸಿತ್ತಂತೆ ! ದಿಟ್ಟ ಅಮ್ಮು, ಮದುವೆಗೆ ಮೊದಲು ಕೆಲವು ಸವಾಲುಗಳನ್ನು ಸ್ವಾಮಿನಾಥನ್‌ರ ಮುಂದಿಟ್ಟಿದ್ದರು- ಮದುವೆಯ ನಂತರ ಮದ್ರಾಸಿನಂತಹ ದೊಡ್ಡ ನಗರದಲ್ಲಿ ವಾಸಿಸಲು ಅನುವು ಮಾಡಿಕೊಡಬೇಕು, ಇಂಗ್ಲೀಷ್ ಭಾಷೆಯನ್ನು ಕಲಿಸಲು ವ್ಯವಸ್ಥೆ ಮಾಡಬೇಕು, ಮತ್ತು ಜೀವನದಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಮಹತ್ವವಿರಬೇಕು. ಈ ಸವಾಲುಗಳು ಸ್ವಾಮಿನಾಥನ್‌ರಿಗೆ ಇಷ್ಟವಾದವು. ಪ್ರೀತಿಸಿ ಸಾಕಷ್ಟು ಪ್ರತಿರೋಧಗಳ ನಡುವೆ ವಿವಾಹವಾದ ಮದ್ರಾಸ್ ಲಾ ಕಾಲೇಜ್ ಪ್ರಿನ್ಸಿಪಾಲ್ ಸ್ವಾಮಿನಾಥನ್ ಅಯ್ಯರ್ ಹಾಗೂ ಸ್ವಾತಂತ್ರ್ಯ ಹೋರಾಟಗಾರ್ತಿ, ಮಾಜಿ ಸಂಸತ್ ಸದಸ್ಯೆ ಅಮ್ಮು ನಾಯರ್‌ರವರ ನಾಲ್ಕು ಮಕ್ಕಳು ಗೋವಿಂದ, ಲಕ್ಷ್ಮಿ, ಮೃಣಾಲಿನಿ, ಮತ್ತು ಸುಬ್ಬರಾಮ್. ಮೃಣಾಲಿನಿ ಜನಿಸಿದ್ದು ೧೯೧೮ ಮೇ ೧೧ ರಂದು.
ಮೃಣಾಲಿನಿ ಅವರ ಸಹೋದರಿ ಲಕ್ಷ್ಮಿ ಸೆಹಗಲ್, ನೇತಾಜಿ ಸುಭಾಷ್‌ಚಂದ್ರ ಬೋಸ್‌ರ ಆಜಾದ್ ಹಿಂದ್ ಫೌಜ್‌ನ ‘ಝಾನ್ಸಿ ರಾಣಿ ರೆಜಿಮೆಂಟ್’ಗೆ ಮುಖ್ಯಸ್ಥೆಯಾದರೆ; ಸಣ್ಣ ವಯಸ್ಸಿನಲ್ಲಿ ಗಾಂಧೀಜಿಯವರಿಗೆ ತಮ್ಮ ಕೈಯ್ಯಲ್ಲಿದ್ದ ಎರಡು ಚಿನ್ನದ ಬಳೆಗಳನ್ನಿತ್ತುದನ್ನು ನೆನಪಿಸಿಕೊಳ್ಳುತ್ತಾ ‘ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾನು ಸ್ವೈಚ್ಛೆಯಿಂದ ನೀಡಿದ ಎಳವೆಯ ಮೊದಲ ಕೊಡುಗೆ’ ಎಂದು ಗದ್ಗದಿತರಾಗುತ್ತಿದ್ದರು ! ಮತ್ತೀರ್ವರು ಸಹೋದರರು ಕಾನೂನು, ಕಾರ್ಪೋರೇಟ್ ಎಂದು ಬೇರೆಯೇ ವೃತ್ತಿಗಳನ್ನು ಹಿಡಿದವರು.
ಸ್ವತಃ ಮೃಣಾಲಿನಿ ಉತ್ತಮ ಬರೆಹಗಾರ್ತಿ ಕೂಡಾ. ಭರತನಾಟ್ಯ, ತಮ್ಮ ನೃತ್ಯಾನುಭವ, ಪೌರಾಣಿಕ ಕಥಾನಕ, ಸರೋಜಿನಿ ನಾಯ್ಡು-ಮಹಾತ್ಮಾಗಂಧಿ ಅವರ ಪತ್ರಗಳ ಕುರಿತು ಪುಸ್ತಕ/ಲೇಖನಗಳನ್ನು ಬರೆದಿರುವ ಅವರು ತಮ್ಮ ಜೀವನದ ಇಳಿವಯಸ್ಸಿನಲ್ಲಿಯೂ ಅಂಕಣ, ಬ್ಲಾಗ್ ಬರೆಯುತ್ತಿದ್ದರು. ಮೃಣಾಲಿನಿ ಅವರ ಆತ್ಮಕಥನ ‘ದ ವಾಯ್ಸ್ ಆಫ್ ಹಾರ್ಟ್’. ಇನ್ನು ‘ಮೃಣಾಲಿನಿ ಸಾರಾಭಾಯ್- ಹರ್ ಆರ್ಟ್ ಅಂಡ್ ಲೈಫ್’- ಕಲಾವಿದರ ಜೀವನಗಾಥೆ ಮತ್ತು ಕಲಾ ಪ್ರಯತ್ನಗಳ ಕುರಿತಾಗಿ ಬಂದ ಮೊದಲ ಭಾರತೀಯ ಸಿನೆಮಾ ಡಾಕ್ಯುಮೆಂಟರಿಗಳಲ್ಲಿ ಒಂದಾಗಿದೆ.
ಡಿಸೆಂಬರ್, ೨೮, ೧೯೯೮ ರಲ್ಲಿ ದರ್ಪಣ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್‌ನ ‘ಬಂಗಾರದ ಹಬ್ಬ’ವನ್ನು ಆಚರಿಸಲಾಗಿದೆ,. ಆ ಸಮಯದಲ್ಲಿ ’ಮೃಣಾಲಿನಿ ಸಾರಾಭಾಯ್ ಅವಾರ್ಡ್ ಫಾರ್ ಕ್ಲಾಸಿಕಲ್ ಎಕ್ಸಲೆನ್ಸ್ಸ್’ ಎಂಬ ಹೆಸರಿನಲ್ಲಿ ಒಂದು ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ.
ಪ್ರಗತಿಪರರಾಗಿದ್ದರೂ, ಮಡಿವಂತಿಕೆಯ ಕಾರಣದಿಂದ ಆರಂಭದಲ್ಲಿ ಮನೆಯವರಿಂದಲೇ ಮೃಣಾಲಿನಿಯ ನೃತ್ಯಕಲಿಕೆಗೆ ವಿರೋಧವಿತ್ತು. ಅದಕ್ಕೆಂದೇ ಸ್ವಿಟ್ಜರ್‌ಲ್ಯಾಂಡ್‌ಗೆಂದು ಶಿಕ್ಷಣಕ್ಕೆ ಕಳಿಸಿಕೊಟ್ಟಿದ್ದರು ! ಆದರೆ ಅಲ್ಲಿಯೂ ಬಿಡದೆ ಕಾಡಿದ ನೃತ್ಯಪ್ರೀತಿ Dalcroze methodನಲ್ಲಿ ಪಾಶ್ಚಾತ್ಯ ನೃತ್ಯಾಭ್ಯಾಸಕ್ಕೆ ಅವರನ್ನು ಸೆಳೆದಿತ್ತು. ಆಗಂತೂ ಅಮ್ಮು ಮಗಳ ಆಸೆಗೆ ನೀರೆರೆದು ಪೋಷಿಸಲೇಬೇಕಾಯಿತು. ಫಲವಾಗಿ ಭಾರತಕ್ಕೆ ಹಿಂತಿರುಗಿದ ನಂತರ ಶಾಂತಿನಿಕೇತನ ಸೇರಿ ರವೀಂದ್ರನಾಥ್ ಟ್ಯಾಗೋರರ ಕೆಲ ನೃತ್ಯನಾಟಕಗಳಲ್ಲೂ ಪಾಲ್ಗೊಂಡರು ಮೃಣಾಲಿನಿ. ಅಮೋಬಿ ಸಿಂಗರಲ್ಲಿ ಮಣಿಪುರಿಯನ್ನೂ, ಕೇಳು ನಾಯರ್‌ರಲ್ಲಿ ಕಥಕಳಿಯನ್ನು ಅಭ್ಯಸಿಸಿದರು.
ಅವರ ಕಲಿಕೆಯ ತಹತಹಿಕೆ ಅಲ್ಲಿಗೇ ಮುಗಿಯಲಿಲ್ಲ. ಮೀನಾಕ್ಷಿಸುಂದರಂ ಪಿಳ್ಳೈ, ಚೊಕ್ಕಲಿಂಗಂ ಪಿಳ್ಳೈ, ಗೌರೀ ಅಮ್ಮಾಳ್, ಕಾಂಚೀಪುರಂ ಎಲ್ಲಪ್ಪರಂತಹ ಹಿರಿಯ ಪಾರಂಪರಿಕ ಗುರುಗಳಲ್ಲಿ ಭರತನಾಟ್ಯವನ್ನೂ, ಕುಂಜು ಕುರೂಪ್‌ರವರ ಬಳಿ ಕಥಕಳಿ, ವಲ್ಲತ್ತೋಳ್ ನಾರಾಯಣ ಮೆನನ್, ಕಲ್ಯಾಣಿಕುಟ್ಟಿ ಅಮ್ಮರಲ್ಲಿ ಮೋಹಿನಿಯಾಟ್ಟಂನ್ನೂ, ಸಿ.ಆರ್. ಆಚಾರ್ಯುಲು ಅವರಿಂದ ಕೂಚಿಪುಡಿಯನ್ನೂ ಕಲಿತದ್ದಲ್ಲದೆ; ಅಮೆರಿಕದಲ್ಲಿ ಧ್ವನಿ ಸಂಸ್ಕರಣದಲ್ಲಿ ತರಬೇತಿ, ಜಾವಾದಲ್ಲಿ ಪ್ರಿನ್ಸ್ ತೇಜೊ ಕುಸುಮ್ ಅವರಲ್ಲೂ ಮಾರ್ಗದರ್ಶನ ಪಡೆದರು. ’’French Archives Internationales de la Danse ಸಂಸ್ಥೆಯ ಡಿಪ್ಲೊಮ ಸರ್ಟಿಫಿಕೇಟ್ ಗಳಿಸಿದ ಭಾರತದ ಪ್ರಥಮ ಮಹಿಳೆಯೆನಿಸಿಕೊಂಡರು.
‘Ballet Folklorico of Mexico’ ಎಂಬ ನೃತ್ಯ ಸಂಯೋಜನೆಯನ್ನು ನಡೆಸಿಕೊಟ್ಟ ಮೃಣಾಲಿನಿಯವರ ಕೌಶಲ್ಯವನ್ನು ಮೆಚ್ಚಿ, ಮೆಕ್ಸಿಕೋ ಸರ್ಕಾರ ಬಂಗಾರದ ಪದಕವನ್ನು ಪ್ರದಾನಮಾಡಿತು. ಆಗ್ನೇಯ ಏಷ್ಯಾದ ನೃತ್ಯಪ್ರಕಾರಗಳನ್ನು ಅಧ್ಯಯನ ಮಾಡಿ ೧೯೯೭ರಲ್ಲಿ ಬ್ರಿಟನ್ನಿನ ನಾರ್ವಿಚ್‌ನಲ್ಲಿರುವ ಈಸ್ಟ್ ಆಂಗ್ಲಿಸ್ ವಿಶ್ವವಿದ್ಯಾಲಯದ ‘Degree of Doctor of Letters, honoris causa (LittD)’ ಪದವಿ ಗಳಿಸಿದರು.
ಗುಜರಾತ್ ರಾಜ್ಯಕರಕುಶಲ ಕಲೆಗಾರಿಕೆ ಮತ್ತು ಕೈಮಗ್ಗದ ಅಭಿವೃದ್ಧಿನಿಗಮದ ಅಧ್ಯಕ್ಷೆಯಾಗಿ, ಸರ್ವೋದಯ ಇಂಟರ್ನ್ಯಾಷನಲ್ ಟ್ರಸ್ಟ್‌ನಟ್ರಸ್ಟಿಯಾಗಿ, ನ್ಯಾಷನಲ್ ಫೌಂಡೇಶನ್‌ನ ಅಧ್ಯಕ್ಷೆಯಾಗಿ, ೧೯೯೦ರಲ್ಲಿ ಪ್ಯಾರಿಸ್‌ನಲ್ಲಿ Executive Committee of the International Dance Council ಕಾರ್ಯಕಾರಿ ಸಮಿತಿಗೆ ಸದಸ್ಯೆಯಾಗಿ… ಹೀಗೆ ಅನೇಕಾನೇಕ ಸಂಸ್ಥೆಗಳ ಪ್ರಧಾನ ಸ್ಥಾನಗಳಲ್ಲಿದ್ದುಕೊಂಡು ಕರ್ತವ್ಯ ನಿರ್ವಹಿಸಿದ ಮೃಣಾಲಿನಿಗೆ ಸಹಜವಾಗಿಪದ್ಮಶ್ರೀ ಪ್ರಶಸ್ತಿ (೧೯೬೫), ಪಂ.ಓಂಕಾರನಾಥ್ ಠಾಕೂರ್ ಪ್ರಶಸ್ತಿ (೧೯೯೧), ಪದ್ಮಭೂಷಣ ಪ್ರಶಸ್ತಿ (೧೯೯೨), ಸಂಗೀತ್ ನಾಟಕ್ ಅಕಾಡೆಮಿ ಫೆಲೋಶಿಪ್(೧೯೯೪) ಒಲಿದುಬಂದಿದ್ದವು.
ಬೆಂಗಳೂರಿನಲ್ಲಿ ಡ್ಯಾನ್ಸ್ ಸ್ಟುಡಿಯೊ ಹೊಂದಿದ್ದ ರಾಮ್‌ಗೋಪಾಲ್ ಅವರೊಡನೆ ಮೃಣಾಲಿನಿ ನರ್ತಿಸತೊಡಗಿ ಭಾರತದಾದ್ಯಂತ ಕಾರ್ಯಕ್ರಮಗಳನ್ನು ನೀಡತೊಡಗಿದರು. ಆ ದಿನಗಳಲ್ಲೇ ಡಾ. ವಿಕ್ರಂ ಸಾರಾಭಾಯಿ ಅವರೊಂದಿಗಿನ ಪರಿಚಯ ಪ್ರೇಮವಾಗಿ ಕುಡಿಯೊಡೆದದ್ದು ! ರಂಗಭೂಮಿ ಕಲೆಗಳಲ್ಲಿ ಆಸಕ್ತಿ ಹೊಂದಿದ್ದ ವಿಕ್ರಂ ಸಾರಾಭಾಯ್ ಸಹಜವಾಗಿ ಪತ್ನಿಯ ಕಲೆಯನ್ನು ಪೋಷಿಸಿ ಆರಾಧಿಸಿದರು.
೧೯೪೨ರಲ್ಲಿ ಇಬ್ಬರ ವಿವಾಹವಾಯಿತು. ವಿಕ್ರಂ ಅವರಿಗೆ ನೃತ್ಯವನ್ನು ಸಾಂಪ್ರದಾಯಿಕವಾಗಿ ಕಂಡುಕೊಳ್ಳುವುದಕ್ಕಿಂತಲೂ ಹೊಸಹಾದಿಯಲ್ಲಿ ಅನ್ವೇಷಿಸಿ ಸಮಾಜಮುಖಿಯಾಗಿ ಗುರುತಿಸಿಕೊಡುವುದರೆಡೆಗೆ ಹೆಚ್ಚಿನ ಒಲವಿತ್ತು. ದೇವದಾಸಿಯರಿಂದ ನೃತ್ಯಕ್ಕೆ ಅಂಟಿಕೊಂಡಿದ್ದ ಋಣಾತ್ಮಕ ಛಾಯೆಯ ಕಳಂಕ ತೊಲಗಿಸುವ ಪಣವಿತ್ತು. ಹಾಗಾಗಿ ಪತಿಯೊಂದಿಗೆ ಸೇರಿ ೧೯೪೮ರಲ್ಲೇ ‘ದರ್ಪಣ’ ಎನ್ನುವ ಸಂಸ್ಥೆಗೆ ನಾಂದಿ ಹಾಕಿದರು ಮೃಣಾಲಿನಿ.
ಆರಂಭಿಕ ದಿನಗಳಲ್ಲಿ ಅಹಮದಾಬಾದಿನ ಮನೆಮನೆಗೆ ತೆರಳಿ ನೃತ್ಯದ ಕಲಿಕೆಗೆ ಒತ್ತಾಯಿಸಿ ಬೇಡುವುದು ಅನಿವಾರ್ಯವಾಗಿತ್ತಾದರೂ; ನಿಧಾನವಾಗಿ ಈ ಶ್ರಮ ಗುಜರಾತ್‌ನ್ನೂಒಳಗೊಂಡಂತೆ ಉತ್ತರಭಾರತದ ನಕ್ಷೆಯಲ್ಲಿ ಭರತನಾಟ್ಯ, ಕಥಕಳಿಯಂತಹ ದಕ್ಷಿಣ ಭಾರತದ ಕಲೆಗಳು ಗುರುತಿಸಿಕೊಳ್ಳಲು ಅನುಕೂಲವಾಗಿಸಿತು. ಇಂದಿಗೆ ಈ ಸಂಸ್ಥೆಯಲ್ಲಿ ಕಲಿತು ಹೆಸರುಮಾಡಿದ ಶಿಷ್ಯರ ಸಂಖ್ಯೆ ೧೮ ಸಾವಿರಕ್ಕೂ ಮಿಗಿಲು !
‘ಕಲಾವಿದರು ಸ್ವಾಭಿಮಾನಿಗಳೂ ಆಗಿರಬೇಕು’ ಎನ್ನುತ್ತಿದ್ದ ಮೃಣಾಲಿನಿಗೆ ಸೋಲು, ಟೀಕೆ ಟಿಪ್ಪಣಿಗಳು ಸಹಜವೆಂಬಂತೆ ಅಂಟಿಕೊಂಡಿದ್ದವು. ನೆಹರೂರವರಿಗೆ ಆಪ್ತರಾಗಿದ್ದರು, ವಿಕ್ರಂ ಅವರಿಗೆ ಮೃಣಾಲಿನಿಯೊಂದಿಗಿನ ಜೀವನ ದುಸ್ತರವಾಗಿತ್ತು, ಅವರ ಮಕ್ಕಳೂ ಬದುಕನ್ನು ಕ್ಲಿಷ್ಟಕರವಾಗಿಯೇ ಕಂಡು ಡಿವೋರ್ಸಿಗಳಾದರು ಎಂಬಲ್ಲಿಂದ ಮೊದಲ್ಗೊಂಡು ಸಂಘಪರಿವಾರ/ಬಿಜೆಪಿ/ನರೇಂದ್ರಮೋದಿಯವರ ವಿರೋಧ ಕಟ್ಟಿಕೊಂಡು ರಾಜ್ಯದ ಪ್ರಭುತ್ವಕ್ಕೇ ಸವಾಲು ಹಾಕುವವರೆಗೂ ಮೃಣಾಲಿನಿ ಸಾರಾಭಾಯ್ ಅವರು ಹಲವು ವಿವಾದಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಂಡವರೇ!
ಕಲೆಯನ್ನು ಸುಂದರವಾಗಿ ಕಾಣಿಸುವುದಕ್ಕಿಂತ ತಪ್ಪಾದ ಹಾದಿಯಲ್ಲಿ ಬಳಸಿ ಋಣಾತ್ಮಕವಾಗಿ ತೋರಿಸುತ್ತಾರೆ ಎಂಬ ಮಾತುಗಳಿಗಂತೂ ಲೆಕ್ಕವೇ ಇರಲಿಲ್ಲ. ಅದರಲ್ಲೂ ಬ್ರಾಹ್ಮಣ ಸಮುದಾಯದೊಂದಿಗೆ ಎಡಪಂಥೀಯ ನೆಲೆಯ ಕಮ್ಯುನಿಸ್ಟ್ ವಿಚಾರಧಾರೆಗಳನ್ನು ವಿಡಂಬಿಸಿ ೧೯೬೧ರಲ್ಲಿ ಮಾಡಲಾದ ‘ತಾಶಿರ್ ದೇಶ್’ ಎಂಬ ಕಥಕಳಿ ಹಾಗೂ ಬುಡಕಟ್ಟು ಜನಾಂಗದ ನೃತ್ಯವೊಂದನ್ನೂ ಆಧರಿಸಿ ಮಾಡಿದ ಪ್ರಯೋಗವನ್ನು ಸ್ವತಃ ಚೀನಾದಲ್ಲಿಯೂ ಪ್ರೇಕ್ಷಕರೂ ಒಪ್ಪಿರಲಿಲ್ಲ.
ಮೃಣಾಲಿನಿ ಅವರ ನೃತ್ಯದ ಹೊಸತನ, ಕ್ರಾಂತಿಯ ವಿಚಾರವಾಗಿ ಹೆಸರಾಂತ ನೃತ್ಯವಿದ್ವಾಂಸ, ವಿಮರ್ಶಕರಾದ ಪ್ರೊ. ಸುನೀಲ್ ಕೊಠಾರಿ ಹೇಳುವುದು ಹೀಗೆ.-‘ಜೀನಿಯಸ್ ಯಾವತ್ತೂ ಹೀಗೆ ಇರುತ್ತಾರೆ. ಎಂದಿನಂತೆ ನೃತ್ಯಗಳನ್ನು ಮಾಡಿಕೊಂಡು ಇರದೆ, ದೇಶಕ್ಕೆ ಉಪಯುಕ್ತವಾಗುವ ರೀತಿಯಲ್ಲಿ ಏನಾದರೂ ಕೊಡುಗೆ ನೀಡಬೇಕು ಎಂಬ ಮನಸ್ಸಿತ್ತು. ಸಮಕಾಲೀನ ನೆಲೆಗಳ ಕಡೆಗೇ ಅವರ ಆಸಕ್ತಿ ಹೆಚ್ಚು. ಅದೂ ತುಂಬಾ ಸಂವಹನಕಾರಿಯಾದ ರೀತಿಯಲ್ಲಿ !’