Author: ಮನೋರಮಾ. ಬಿ.ಎನ್
ಲಕ್ಷಣ: ಎಡ ಮುಂಗೈ ಮೇಲೆ ಬಲ ಅಂಗೈ ಇಟ್ಟು, ನಾಲ್ಕು ಬೆರಳುಗಳನ್ನು ನೇರವಾಗಿ ಜೋಡಿಸಿ ಹಿಡಿದು ಹೆಬ್ಬೆರಳನ್ನು ನೀಡಿ ಚಾಲಿಸುವುದು ಮತ್ಸ್ಯ ಹಸ್ತವೆನಿಸಿಕೊಳ್ಳುತ್ತದೆ. ಇಲ್ಲಿ ಪತಾಕ ಹಸ್ತಗಳನ್ನು ಬಳಸಿದರೂ ಆಗುತ್ತದೆ. ಮತ್ಸ್ಯಹಸ್ತಗಳನ್ನು ಬಳಸಿ ಮಾಡುವ ಮತ್ಸ್ಯಕರಣವೂ ದೇಶೀಕರಣಗಳ ಪೈಕಿ ಪ್ರಧಾನವೆನಿಸಿದೆ. ಗಾಯತ್ರಿನ್ಯಾಸಮುದ್ರೆಗಳ ಪೈಕಿ ‘ಯೋ’ ಅಕ್ಷರ ಸೂಚನೆಗೆ ಮತ್ಸ್ಯಮುದ್ರೆಯೆಂಬ ಹೆಸರಿದ್ದು; ಇಲ್ಲಿ ಬಲಗೈಯನ್ನು ಎಡಗೈ ಮೇಲೆ ಮಾಡುವುದು ಕ್ರಮ. ಮತ್ಸ್ಯಮುದ್ರೆ ಚಂಚಲ ಮನದ ಹತೋಟಿಗೆ, ಸಾಧನಾ ಮಾರ್ಗಕ್ಕೆ ಸೂಕ್ತ. ಆದರೆ ಬಲಗೈ ಅಂಗೈಯನ್ನು ಎಡಗೈ ಮೇಲ್ಭಾಗದಿಂದ ಬೆರಳುಗಳಿಗೆ ಪರಸ್ಪರ ಬೆಸೆದು ಹೆಬ್ಬೆರಳುಗಳನ್ನು ಪಕ್ಕಕ್ಕೆ ನಿಡಿದಾಗಿರಿಸುವ ಲಕ್ಷಣವನ್ನು ಕೆಲವು ಗ್ರಂಥಗಳು ಸೂಚಿಸಲಾಗಿದೆ. ಮತ್ಸ್ಯಮುದ್ರೆಯಂತೆಯೇ ಹಿಡಿದು ಕಿರು ಬೆರಳುಗಳನ್ನೂ ಹೊರಕ್ಕೆ ಚಾಚುವ ಕ್ರಮಕ್ಕೆ ಪೂಜಾಮುದ್ರೆಗಳ ಪೈಕಿ ಪದ್ಮಕೋಶ ಮುದ್ರೆಯೆಂಬ ಹೆಸರಿದೆ.
ವಿನಿಯೋಗ : ಮೀನು, ದಶಾವತಾರದಲ್ಲಿ ಮತ್ಸ್ಯರೂಪ.
ಇತರೇ ವಿನಿಯೋಗ : ಮಕರ, ಮೊಸಳೆ, ಸಿಂಹ, ಹುಲಿ, ಚಿರತೆ, ಮೊದಲಾದ ಮಾಂಸ ತಿನ್ನುವ ಪ್ರಾಣಿಗಳು, ಪ್ರವಾಹ, ಯುದ್ಧ ಸನ್ನಾಹ, ಸೈನಿಕರು ನೆರೆದಿರುವುದು, ಟಗರು ನೆಗೆತ, ಪ್ರಾಣಿಗಳ ನೆಗೆತ.
ದಶಾವತಾರ ಹಸ್ತಗಳಲ್ಲಿ ಮತ್ಸ್ಯಹಸ್ತಕ್ಕೆ ಮೊದಲಪಂಕ್ತಿಯಿದೆ. ಮತ್ಸ್ಯ ಹಸ್ತವನ್ನು ಭುಜದಿಂದ ಮುಂದಕ್ಕೆ ಚಾಚುವಂತೆ ಹಿಡಿದು, ಅನಂತರ ಭುಜದ ಬಳಿ ತ್ರಿಪತಾಕ ಹಸ್ತಗಳನ್ನು ಹಿಡಿದರೆ ಮತ್ಸ್ಯಾವತಾರ ಹಸ್ತವೆಂದು ಅಭಿನಯದರ್ಪಣ ಹೇಳುತ್ತದೆ.
ನಿತ್ಯಜೀವನದಲ್ಲಿ ಮತ್ಸ್ಯಹಸ್ತವನ್ನು ‘ಒಂದರ ಮೇಲೊಂದು’ ಎಂದು ಹೇಳಲು, ‘ಇಕ್ಕಟ್ಟು’ ಎನ್ನಲು ಬಳಸುತ್ತಾರೆ.
ಮತ್ಸ್ಯಹಸ್ತವನ್ನು ನಾಟ್ಯಶಾಸ್ತ್ರದಲ್ಲಿ ಮಕರ ಹಸ್ತ ಎಂದೂ ಹೇಳುತ್ತಾರೆ. ಮಕರ ಎಂದರೆ ಮೊಸಳೆ ಎಂಬರ್ಥ. ಆದರೆ ಬಲಗೈ ಪತಾಕ ಹಸ್ತದ ಮುಂಗೈಯನ್ನು ಎಡಮುಂಗೈ ಪತಾಕಕ್ಕೆ ಅಂದರೆ ಹಿಮ್ಮುಖವಾಗಿ ಪರಸ್ಪರ ಒಂದರ ಮೇಲೊಂದು ಜೋಡಿಸುವ ಲಕ್ಷಣವನ್ನು ಕೆಲಗ್ರಂಥಗಳು ಹೇಳಿವೆ. ಮತ್ಸ್ಯಹಸ್ತದಂತೆಯೇ ಅರ್ಧಚಂದ್ರ ಹಸ್ತಗಳ ಉಪಯೋಗ, ಹೆಬ್ಬೆರಳ ಚಲನೆಯನ್ನೂ ಮಾಡಬಹುದು. ಇಲ್ಲವೇ ಇನ್ನೊಂದು ಮೂಲದ ಪ್ರಕಾರ ಕಪೋತ ಹಸ್ತದಲ್ಲಿನ ಹೆಬ್ಬೆರಳು ಚಲಿಸುವಂತೆಯೂ ಲಕ್ಷಣವಿದೆ. ಮಕರ ಹಸ್ತದಲ್ಲಿ ಎರಡು ಹೆಬ್ಬೆರಳುಗಳು ಉನ್ಮುಖದಲ್ಲಿರಬೇಕು. ಭರತಾರ್ಣವದಲ್ಲಿ ಸರ್ಪಶೀರ್ಷವನ್ನು ಹಿಡಿಯಬಹುದು ಎಂದಿದ್ದು ಮತ್ಸ್ಯಾವತಾರ ಹಸ್ತಕ್ರಮಕ್ಕೆ ಇದನ್ನು ಸೂಚಿಸಲಾಗಿದೆ. ಈ ಮಕರಹಸ್ತವು ಹಸ್ತ ಮುಕ್ತಾವಳಿಯಲ್ಲಿ, ಭರತಾರ್ಣವದಲ್ಲಿ ಪ್ರಧಾನವಾಗಿ ಉಲ್ಲೇಖಿಸಲ್ಪಟ್ಟಿದೆ. ಆದ್ದರಿಂದ ದೇಶೀ ಕ್ರಮದ ಬಳಕೆಯಲ್ಲಿ ಮಕರಹಸ್ತಕ್ಕೂ ಮತ್ಸ್ಯಹಸ್ತಕ್ಕೂ ಕೊಂಚ ಮಟ್ಟಿಗೆ ವ್ಯತ್ಯಾಸವನ್ನು ಕಂಡುಕೊಳ್ಳಬಹುದು. ಮತ್ಸ್ಯಮುದ್ರೆಯೆಂಬ ಪೂಜಾಮುದ್ರೆಯಲ್ಲಿಯೂ ಮಕರಹಸ್ತದ ಬಳಕೆಯಿದೆ.
ವಿನಿಯೋಗ : ಸಿಂಹ, ಮೊಸಳೆ, ಹುಲಿ, ಜಿಂಕೆಯ ಮುಖ, ನದಿ ಅಥವಾ ಸಾಗರ ಉಕ್ಕಿ ಹರಿಯುವುದು, ವೇದಿಕೆ, ಸಮೃದ್ಧತೆ, ಒಗ್ಗಟ್ಟು, ದುಷ್ಟಶಕ್ತಿ, ಕೊಲೆಗಡುಕ, ಕ್ರೂರ, ಉಭಯವಾಸಿಗಳು, ರಾಹುಪೀಡೆ.