ಅಂಕಣಗಳು

Subscribe


 

ಮಂಟಪ ಪ್ರಭಾಕರ ಉಪಾಧ್ಯಾಯ

Posted On: Sunday, February 15th, 2009
1 Star2 Stars3 Stars4 Stars5 Stars (1 votes, average: 4.00 out of 5)
Loading...

Author: ಮನೋರಮಾ. ಬಿ.ಎನ್

mantapa prabhakara upadyaya

Mantapa Prabhakara Upadyaya

ಯಕ್ಷಗಾನಕ್ಕೆ ಅನನ್ಯ ಸೇವೆ ಸಲ್ಲಿಸುವುದರೊಂದಿಗೆ, ಹೊಸ ಹುಟ್ಟು, ಹೊಸ ಪ್ರಯೋಗಗಳಿಗೆ ಕಾರಣಕರ್ತರಾದ ಮಂಟಪರು ರಸಿಕರ ಕಣ್ಮಣಿಯಾಗಿ, ಯಕ್ಷಗಾನ ಸ್ತ್ರೀ ವೇಷದ ಆಳ-ಅಗಲ-ವ್ಯಾಪ್ತಿ ವಿಸ್ತಾರವನ್ನು ಮತ್ತಷ್ಟು ಹಿರಿದುಗೊಳಿಸಿದವರು. ರಸಾನುಭೂತಿಗೆ ತಮ್ಮನ್ನು ತಾವು ಹೊಸ ಹೊಸ ರೀತಿಗಳಲ್ಲಿ ದುಡಿಸಿಕೊಳ್ಳುತ್ತಾ, ಸ್ತ್ರೀ ವೇಷದ ವಯಸ್ಸನ್ನೂ ಮೀರಿ ಬೆಳೆಯುತ್ತಲಿದ್ದಾರೆ. ಸ್ವತಃ ಗಂಡಸರೂ ಮಾರು ಹೋಗಿ ಆಕರ್ಷಿತರಾಗುವ ಮಟ್ಟಿಗೆ ಪರಿಣಾಮ ಬೀರುವ ಅವರ ಗಾಢವಾದ ಅಭಿನಯ ಅವರಲ್ಲಡಗಿದ ಕಲೆಗೆ ಸಾಕ್ಷಿ.

ಮೂರನೇ ವರ್ಷದ ಈ ಸಂಭ್ರಮಕ್ಕೆ ನಮ್ಮ ನೂಪುರ ಅವರ ನೂಪುರಗಳ ದನಿಯನ್ನು ದರ್ಶನ-ಸಂದರ್ಶನ ಗಳಲ್ಲಿ ಕಂಡುಕೊಂಡು, ಇದೀಗ ಅವರ ಹೆಜ್ಜೆ-ಗೆಜ್ಜೆಗಳ ಫಲುಕನ್ನು ಕೇಳಿಸುವ ಉತ್ಸಾಹದಲ್ಲಿದೆ. ಇದೋ ಅವರೀಗ ನಮ್ಮ ದರ್ಶನ ಭ್ರಮರಿಯಲ್ಲಿ.

ಏಕವ್ಯಕ್ತಿ ಯಕ್ಷಗಾನದ ಪರಿಕಲ್ಪನೆ ಹುಟ್ಟಿದ್ದಾದರೂ ಹೇಗೆ ?

ಅದೊಂದು ಆಕಸ್ಮಿಕ ಭೇಟಿ ನನ್ನದು ಮತ್ತು ಶತಾವಧಾನಿ ಡಾ | ಆರ್. ಗಣೇಶ್ ಅವರದ್ದು. ಪ್ರಶ್ನೆ ನನ್ನದು. ಉತ್ತರ, ಪರಿಕಲ್ಪನೆ ಅವರದ್ದು.

‘ವಯಸ್ಸಾದ ಮೇಲೆ ಸ್ತ್ರೀ ವೇಷ ಮಾಡುವುದು ಅಷ್ಟೊಂದಾಗಿ ಯಾರಿಗೂ ರುಚಿಸುವುದಿಲ್ಲ. ಮಧ್ಯ ವಯಸ್ಸು ಕಳೆದ ಮೇಲೆ ನೋಡಲೂ ಕಷ್ಟ. ಆ ಮಾತಲ್ಲಿ ನನಗೆ ಅಷ್ಟು ವಿಶ್ವಾಸವಿಲ್ಲದಿದ್ದರೂ, ಸತ್ಯದ ವಿಚಾರವದು. ಆದ್ದರಿಂದ ಐವತ್ತು ವರ್ಷದ ನಂತರವೂ ವೇಷ ಮಾಡಬೇಕು ಅಂದ್ರೆ ಹೇಗೆ’ ಎಂಬ ಪ್ರಶ್ನೆ ನನ್ನದು. ಅಲ್ಲಿಯವರೆವಿಗೂ ಒಂದು ವ್ಯಕ್ತಿಯನ್ನು ಯಕ್ಷಗಾನದಲ್ಲಿ ನಿಲ್ಲಿಸಿಕೊಳ್ಳಲಿಕ್ಕೆ ಆಗುತ್ತದೆ ಎಂಬ ವಿಶ್ವಾಸ ಇರಲಿಲ್ಲ.

‘ತುಡಿತ ಮುಖ್ಯ. ಶಕ್ತಿ ಇದ್ದರೆ ವಯಸ್ಸಾದ್ರೂ ಮಾಡಬಹುದು. ಆದರೆ ಒಂದಷ್ಟು ಮಜಲುಗಳನ್ನು ಏರಬೇಕಾಗುತ್ತದೆ. ಚಿತ್ರ-ನೃತ್ತ-ನೃತ್ಯ- ನಾಟ್ಯ-ಅಭಿನಯ-ಭಾವ-ರಸ. ನೀವು ರಸದ ಮಟ್ಟಕ್ಕೆ ಹೋಗಿ ! ಆಗ ಅಸಾಧ್ಯವಾಗುವುದಿಲ್ಲ. ಆ ಮಟ್ಟಕ್ಕೆ ಏರಿದರೆ ಯಾವ ವಯಸ್ಸಿನಲ್ಲೂ ವೇಷ ಮಾಡಬಹುದು. ರಸಕ್ಕೆ ಏರಿದಾಗ ವ್ಯಕ್ತಿ ಗೌಣವಾಗುತ್ತಾನೆ. ಕಲಾವಿದನಿಗೆ ರಸ ಉತ್ಪನ್ನ ಮಾಡುವ ಶಕ್ತಿ ಇದ್ದರೆ ಆತ ಪಾತ್ರವೇ ಆಗಿಬಿಡುತ್ತಾನೆ. ಅವನೇ ಆ ಪಾತ್ರ ಆದ ಮೇಲೆ ತರ್ಕ ಇಲ್ಲವಲ್ಲ’ ಎಂದಿದ್ದರು!

ಆಗ ಬಂದದ್ದೇ ‘ಭಾಮಿನಿ’ !

ಹೀಗಾಗಿ ಎಪ್ಪತ್ತು ವರ್ಷ ವಯಸ್ಸಾದ ನಂತರವೂ ಭಾಮಿನಿ ಮಾಡಿದರೆ ಅದನ್ನು ರಸದೃಷ್ಟಿಯಿಂದ ಅನುಭವಿಸುವವರಿಗೆ ವಯಸ್ಸು ಕಾಣೋದಿಲ್ಲ. ಎಲ್ಲರನ್ನೂ ಏಕಕಾಲಕ್ಕೇ ಮುಟ್ಟುತ್ತೀವಿ ಅಂತಲ್ಲ. ಆದರೆ ಆ ಮಟ್ಟಕ್ಕೆ ಏರಿದಾಗ ಅದೂ ಸಾಧ್ಯ. ಮೊದಲು ಒಂದಷ್ಟು ಗೊಂದಲಗಳಿತ್ತು. ನಂತರ ಧೈರ್ಯ ಬಂದಿದೆ.

ಭಾಮಿನಿಯ ವೈಶಿಷ್ಟ್ಯ ಏನು ? ಅದು ನಿಮ್ಮನ್ನು ಆವರಿಸಿಕೊಂಡಿದ್ದು ಹೇಗೆ ?

ಭಾಮಿನಿ ಅಷ್ಟನಾಯಕಿಯರ ಚಿತ್ತವೃತ್ತಿ. ಸ್ವಲ್ಪ ಕಷ್ಖವೇ ಹೌದು. ಅದೊಂಥರಾ ಸ್ತ್ರೀ ವೇಷಕ್ಕೆ ವ್ಯಾಕರಣ ಇದ್ದ ಹಾಗೆ ! ಅದನ್ನು ಮಾಡಿದ ನಂತರ ಯಾವುದನ್ನೂ ಮಾಡಬಹುದು ಎಂಬ ವಿಶ್ವಾಸ ಬಂದಿದೆ. ಶೃಂಗಾರ ಮತು ಅದರ ವಿವಿಧ ಅನುಭವಗಳ ಮೇಲೆ ಹೆಣೆದ ಕೃತಿ ಅದು. ಶೃಂಗಾರ ಅಂದರೇನೇ ಪ್ರೇಮ. ಅದು ತೊಂಭತ್ತು ವರ್ಷದ ಮುದುಕ-ಮುದುಕಿಯರಿಗೂ ಇರುತ್ತದೆ. ಭಾವಕ್ಕೆ ವಯಸ್ಸಿನ ಅಂತರವಿಲ್ಲವಲ್ಲ. ಹಾಗಾಗಿ ಭಾಮಿನಿಯಲ್ಲಿ ದೇಹದ ವರ್ಣನೆಯಿಲ್ಲ. ಮನಸ್ಸಿನ ಒಳಗಿನ ಮನೋಧರ್ಮವಿರುತ್ತದೆ. ಹಾಗಾಗಿ ಇವತ್ತಿಗೂ ಭಾಮಿನಿಯೇ ಪ್ರಿಯ. ಉಳಿದೆಲ್ಲ ಪ್ರಸಂಗಗಳೂ ಜಾನಕೀ ಜೀವನ, ಕೃಷ್ಣಾರ್ಪಣ, ಯಕ್ಷದರ್ಪಣ, ಶೂರ್ಪನಖಾ, ಪೂತನಿ ಮುಂತಾದವು ಪಾತ್ರಗಳನ್ನು ಆಧರಿಸಿದ್ದಷ್ಟೇ !

mantapa

Mantapa Prabhakara Upadyaya

ಏಕವ್ಯಕ್ತಿ ಯಕ್ಷಗಾನದ ಮೇಲೆ ಸಾಕಷ್ಟು ಆರೋಪಗಳಿವೆ. ಭರತನಾಟ್ಯದ ಅಂಶಗಳೇ ಜಾಸ್ತಿ ಎಂಬುದು ಒಂದು ವಾದವಾದರೆ ಯಕ್ಷಗಾನದ ಅಂಶಗಳಿಗೆ ಒಳಪಡುವುದೇ ಇಲ್ಲವೆನ್ನುವುದು ಇನ್ನೊಂದು.. ಇದರ ಬಗ್ಗೆ ಏನು ಹೇಳುತ್ತೀರಿ ?

ಏಕವ್ಯಕ್ತಿ ಯಕ್ಷಗಾನ ಪ್ರಯೋಗಕ್ಕೆ ಪ್ರಭಾವ ಯಾವುದೇ ನೃತ್ಯ ಪ್ರಕಾರಗಳದ್ದಲ್ಲ. ಅದೇನಿದ್ದರೂ ನಾಟ್ಯಶಾಸ್ತ್ರದ್ದೇ. ಒಂದು ಮನೋಭಾವ ಇದೆ; ನಾಟ್ಯಶಾಸ್ತ್ರವಿರುವುದೇ ಭರತನಾಟ್ಯಕ್ಕೆ ಅಂತ ! ಗುರು-ಕಲಾವಿದರನ್ನೂ ಕಾಡುತ್ತಿರುವ ಸೀಮಿತ ಮನೋಧರ್ಮವದು. ಹಾಗೆ ನೋಡಿದರೆ ಇಂದಿನ ಭರತನಾಟ್ಯವು ನಾಟ್ಯದ ಅಂಶಗಳನ್ನು ಬಿಟ್ಟು ದೂರ ಸಾಗುತ್ತಲಿದೆ ಎಂದೇ ಹೇಳಬಹುದು.

ಭರತನಾಟ್ಯ ಪ್ರದರ್ಶನ ಎಂಬುದು ಏಕವ್ಯಕ್ತಿಯೇ ಹೌದು. ಆದರೆ ಪ್ರಸಂಗವನ್ನು ಅಭಿನಯಿಸುವಾಗ ಕಲಾವಿದರು ಬೇರೆ ಬೇರೆ ಪಾತ್ರಗಳನ್ನು ಒಬ್ಬರೇ ಅಭಿನಯಿಸುತ್ತಾರೆ. ಆದರೆ ಏಕವ್ಯಕ್ತಿ ಯಕ್ಷಗಾನದಲ್ಲಿ ಹಾಗಲ್ಲ. ಒಂದೇ ವ್ಯಕ್ತಿ, ಒಂದೇ ಪಾತ್ರ. ಆದರೆ ಪ್ರಸಂಗದಲ್ಲಿ ಬರುವ ಉಳಿದೆಲ್ಲಾ ಪಾತ್ರಗಳನ್ನು ಆ ಪಾತ್ರವೇ ಅನುಭವಿಸುತ್ತದೆ. ಶೂರ್ಪನಖಾ ಪ್ರಸಂಗ ಮಾಡಹೊರಟರೆ ಅಲ್ಲಿ ಬರುವ ಸೀತೆ, ರಾಮ, ಲಕ್ಷ್ಮಣನ ಪಾತ್ರವನ್ನು ಆಕೆ ನೋಡಿ, ಅವರ ಎತ್ತರ, ನಡೆ-ನುಡಿ-ಭಾವ-ಭಂಗಿಗಳನ್ನು ತನ್ನ ಭಾವದಿಂದಲೇ ಪ್ರಕಟಿಸಿ ಅವರ ಇರವನ್ನು ಸ್ಪಷ್ಟವಾಗಿ ಕಾಣಿಸಿಕೊಡುತ್ತಾಳೆ. ಪಾತ್ರಕ್ಕೆ ಇನ್ನೊಂದು ಪಾತ್ರದ ಪ್ರತಿಕ್ರಿಯೆ, ವರ್ಣನೆಯಿಂದಲೇ ಉಳಿದೆಲ್ಲಾ ಪಾತ್ರಗಳು ತನ್ನಿಂತಾನೇ ಸೃಷ್ಟಿಯಾಗುತ್ತವೆ. ಏಕವ್ಯಕ್ತಿ ಯಕ್ಷಗಾನದ ಹಿನ್ನಲೆ ಎಲ್ಲವೂ ಯಕ್ಷಗಾನದ್ದೇ. ಆದರೆ ಏಕವ್ಯಕ್ತಿ ಪ್ರದರ್ಶನ ಅಂತ ಅಷ್ಟೇ ! ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದೇವೆ. ಅದು ಆ ಮನೋಧರ್ಮಕ್ಕೆ ಅಗತ್ಯವೂ ಕೂಡಾ.

ಅಷ್ಟಕ್ಕೂ ಯಾವುದು ಯಕ್ಷಗಾನ, ಯಾವುದು ಯಕ್ಷಗಾನ ಅಲ್ಲ ಅಂತ ಹೇಳ್ತೀರಿ? ಸುಮ್ಮನೆ ಕೂತು, ನಿಂತು ಮಾತಾಡುವುದೇ ಯಕ್ಷಗಾನ ಅಂದರೆ ಹೇಗೆ? ವಾಚಿಕ ಕಡಿಮೆಯಿದೆ ಎಂಬ ಆರೋಪವೇ ? ಮಾತು ಬೇಕು ಅನ್ನುವುದೇ ಭ್ರಮೆ. ಹಿನ್ನಲೆ ಪದವೂ ವಾಚಿಕವೇ ತಾನೇ ? ಎಷ್ಟೋ ಬಾರಿ ವಾಚಿಕಾಭಿನಯವೂ ರಸಭಂಗ ಮಾಡುವುದಿದೆ ಎಂದು ಪ್ರೇಕ್ಷಕರೇ ಒಪ್ಪಿಕೊಂಡು ಕಡಿಮೆ ಮಾಡಲು ಸಲಹೆ ಕೊಟ್ಟದಿದೆ. ಹಾಗಂತ ಮಾತು ಬೇಡ ಅಂತಲ್ಲ.

ಏಕವ್ಯಕ್ತಿ ಯಕ್ಷಗಾನದ ನಿರೂಪಣೆಯಲ್ಲಿ ನೀವು ಕಂಡುಕೊಂಡ ಅಂಶಗಳೇನು ?

ಏಕವ್ಯಕ್ತಿಗೆ ನಾಟ್ಯವೇ ಮುಖ್ಯ. ಯಾಕೆಂದರೆ ನನಗೆ ಪ್ರಧಾನವೆನಿಸುವುದು ನಾಟ್ಯವೇ ಹೊರತು ಶೈಲಿ ಅಲ್ಲ. ‘ಸಂಪ್ರದಾಯದಿಂದ ಹೊರಗುಳಿದ ಪ್ರಕಾರ’ ಎಂದು ಆರೋಪಿಸುವವರ ಪಾಲಿಗೆ ನಾನು ಇಂಥದ್ದೇ ಶೈಲಿ ಅಥವಾ ಸಂಪ್ರದಾಯವನ್ನು ಪಾಲಿಸದೇ ಇದ್ದದ್ದು ದೊಡ್ಡದಾಗಿ ಕಾಣಬಹುದು. ಅಷ್ಟಕ್ಕೂ ಯಥಾವತ್ತಾಗಿ ಮಾಡಲಿಕ್ಕೆ ನಾನೇ ಬೇಕೂಂತ ಏನೂ ಇಲ್ಲವಲ್ಲ. ನನಗಿಂತ ಚೆನ್ನಾಗಿ ಮಾಡುವವರು ಇದ್ದಾರೆ. ನಾಟ್ಯ ಅನ್ನುವುದೇ ಶೈಲಿಗಳಿಗಿಂತ ಮೀರಿದ್ದು. ಪವಿತ್ರವಾದದ್ದು, ಪರಿಪೂರ್ಣವಾದದ್ದು. ಅದರ ಮುಂದೆ ಯಾವುದೇ ಇದ್ದರೂ ಎಲ್ಲವೂ ಅದರಲ್ಲಿದೆ. ಮತ್ತು ಕಾಲದಿಂದ ಕಾಲಕ್ಕೆ ಅದರಲ್ಲೇ ಏನೇನೋ ಆಗುತ್ತಲೇ ಇದೆ.

ಯಕ್ಷಗಾನದ ಸ್ತ್ರೀ ವೇಷದ ಬೆಳವಣಿಗೆಯ ದೃಷ್ಟಿಯಿಂದ ಬೆಳೆದದು ಏಕವ್ಯಕ್ತಿ. ಮೊದಮೊದಲಿಗೆ ಇನ್ನೊಂದು ವೇಷ ಜೊತೆಗಿಲ್ಲ ಎಂಬ ಕೊರಗಿತ್ತು. ಆದರೆ ಈಗಿಲ್ಲ. ಮತ್ತು ಎಲ್ಲರೂ ಒಪ್ಪಿಕೊಳ್ಳಲಿ ಅಂತ ಮಾಡಿದ್ದೂ ಅಲ್ಲ. ಪೂರ್ವಾಗ್ರಹವಿಲ್ಲದಿರುವವರು, ಶುದ್ಧ ರಸಿಕನಾದವನು ಒಪ್ಪುತ್ತಾನೆ. ಪೂರ್ವಾಗ್ರಹ ಎನ್ನಲಿಕ್ಕೂ ಆಗುವುದಿಲ್ಲ. ಅದು ಅವರವರ ಜ್ಞಾನ-ಅಜ್ಞಾನದ ವಿಷಯ. ಅದೂ ತಪ್ಪಲ್ಲ. ಆದರೆ ಕಲೆಯ ದೃಷ್ಟಿಯಿಂದ ನೋಡುವವರಿಗೆ ಏಕವ್ಯಕ್ತಿ ಒಂದು ಕೊರತೆಯೇ ಆಗುವುದಿಲ್ಲ.

ಏಕವ್ಯಕ್ತಿಯಲ್ಲಿ ಪದಾಭಿನಯಕ್ಕಿಂತಲೂ ವಾಕ್ಯಾರ್ಥಾಭಿನಯಕ್ಕೇ ಪ್ರಾಮುಖ್ಯತೆ ಜಾಸ್ತಿ. ವಾಕ್ಯಾರ್ಥಾಭಿನಯ ಹೇಳಿಕೊಟ್ಟು ಬರುವುದಲ್ಲ. ‘ಒಬ್ಬ ಹೋದ’ ಎಂಬುದನ್ನು ಸನ್ನೆ ಮಾಡಿ ಒಂದು ಬಾರಿಗೆ ತೋರಿಸಬಹುದು. ಆದರೆ ಪರಿಣಾಮ ಏನಾಗುತ್ತದೆ ? ಹಾಗಾಗಿ ಆತ ಹೋದ ರೀತಿ, ನಂತರ ಏನಾಯಿತು, ಆದ ಪರಿಣಾಮ, ಅದಕ್ಕಿಂತಲೂ ಮುಂಚಿಗೆ ಇದ್ದ ಸ್ಥಿತಿ ಎಲ್ಲವನ್ನೂ ತೋರಿಸಿದಾಗಲಷ್ಟೇ ಆ ವಾಕ್ಯಕ್ಕೂ ಮಹತ್ವ ಬರುತ್ತದೆ.

ಬಣ್ಣ ಹಚ್ಚಲು ಪ್ರಾರಂಭಿಸಿದ್ದು ೨೬-೨೭ನೇ ವರ್ಷ ಪ್ರಾಯದಲ್ಲಿ. ಉಡುಪಿಯಲ್ಲಿ ಕಲಿತದ್ದು. ಅದಾದ ನಂತರ ೩-೪ ವರ್ಷ ಮೇಳದಲ್ಲಿದ್ದೆ. ಆಗೆಲ್ಲ ನಮಗಿದ್ದ ಮನರಂಜನೆಯ ಮಾಧ್ಯಮ ಯಕ್ಷಗಾನವೊಂದೇ! ಯಕ್ಷಗಾನದ ಪದ ಕೇಳಿಕೊಂಡು ದಿಕ್ಕು ಹಿಡಿದು ಹೋಗಿ ಕೂತು ನೋಡುವ ಜಾಯಮಾನ ಆಗಿನದು. ಒಮ್ಮೊಮ್ಮೆ ದಿಕ್ಕು ತಪ್ಪಿ ಇಡೀ ರಾತ್ರಿ ಒದಾಡಿದ ಸಂದರ್ಭಗಳೂ ಇವೆ. ಹೀಗೆ ಆ ಆಸಕ್ತಿಯೇ ನನ್ನನು ಈ ಕ್ಷೇತ್ರಕ್ಕೆ ಎಳೆದು ತಂದದ್ದು. ಅದು ನಮ್ಮಯ ಮಣ್ಣಿನ ಗುಣವೂ ಕೂಡಾ! ಈಗ ಆ ಬಗೆಯ ಮನೋಭಾವ ಎಲ್ಲಿದೆ?

ಏಕವ್ಯಕ್ತಿ ಯಕ್ಷಗಾನವೆಂಬ ಪ್ರಕಾರಕ್ಕೆ ಆಯುಷ್ಯವಿಲ್ಲ ಎನ್ನುತ್ತಾರಲ್ಲಾ..? ನಿಮ್ಮ ಉತ್ತರ.?

ಏಕವ್ಯಕ್ತಿಗೆ ಆಯುಷ್ಯವಿಲ್ಲ ಎನ್ನುವವರಿಗೆ ಹೇಳುವುದಿದೆ; ಅವರಿಗಾದರೂ ಆಯುಷ್ಯವಿದೆಯೇ ? ನಾವೀಗ ಕಾಣುತ್ತಿರುವ ಯಕ್ಷಗಾನ, ನೃತ್ಯ ೨೫ ವರ್ಷಗಳ ಹಿಂದೆ ಈಗಿರುವಂತೆ ಇರಲಿಲ್ಲ ಎಂದಾದ ಮೇಲೆ ಏಕವ್ಯಕ್ತಿಯೂ ಇರಬೇಕು ಎನ್ನುವುದು ಎಷ್ಟು ಸರಿ?

ಹಿಂದಿನವರು ಮಾತ್ರ ಬುದ್ಧಿವಂತರು, ಮುಂದಿನವರು ಪ್ರಯೋಜನ ಇಲ್ಲ ಅನ್ನೋದೆಲ್ಲಾ ಸುಳ್ಳು. ಹಾಗೆ ಯಾರಾದರೂ ಹೇಳಿದರೆ ಅವರಿಗೆ ವಯಸ್ಸಾಗಿದೆ ಅನ್ನಬಹುದಷ್ಟೇ ! ಪೀಳಿಗೆಯಿಂದ ಪೀಳಿಗೆಗೆ ಎಲ್ಲರೂ ಕಲೀಯುತ್ತಲೇ ಇರ್ತಾರೆ. ಅಷ್ಟಕ್ಕೂ ಇದೇ ಮಾಧ್ಯಮ ಮುಂದುವರೀಬೇಕು ಅಂತ ಏನಿದೆ? ನಿಮಗಿದು ಚೆಂದ ಅಂತ ಕಂಡ ಕಾರಣ ಹಾಗೆ ಹೇಳಬಲ್ಲಿರಿ. ಒಂದಲ್ಲ ಒಂದು ದೃಷ್ಟಿಯಲ್ಲಿ ಕಲೆ ಉಳಿದೇ ಉಳಿಯುತ್ತದೆ. ಶೈಲಿ ಬದಲಾವಣೆ ಆಗಬಹುದು. ಆದರೆ ಮನಸಿನ ರುಚಿ ಹಾಗೇ ಇರುತ್ತದೆ. ಅನುಭವಗಳನ್ನು ತೆಗೆದುಕೊಂಡ ದರ್ಶಕ ಮತ್ತೊಂದು ಅನುಭವಗಳನ್ನು ಕೊಡುತ್ತಾನೆ. ಹಾಗಾಗಿ ಬೆಳೀತಿರುವ ಒಬ್ಬ ಹುಡುಗ ಅಥವಾ ಹುಡುಗಿ ನಾಟ್ಯದ ಪಟ್ಟುಗಳನ್ನು ಶ್ರದ್ಧೆಯಿಂದ ಕಲಿತು ಅನುಭವಿಸಿದರೆ ನನಗಿಂತಲೂ ಚೆನ್ನಾಗಿ ಮಾಡಬಹುದು.

ಲೋಕದ ಸಂಗತಿಯೇ ಹಾಗೆ ! ಮಾಡಲಿಕ್ಕಾಗದೇ ಇರೋದೆಲ್ಲಾ ಇಲ್ಲವೇ ಇಲ್ಲ ಅಂತ ಹೇಳುವುದು. ಅದು ಸುಲಭ ಕೂಡಾ ಆದರೆ ಆ ಆರೋಪ ಆಧಾರವಿಲ್ಲದ ಸಂಗತಿ.

ಕೆಲವರಿಗೆ ತೆಂಕು ತಿಟ್ಟೇ ಪ್ರಿಯವಾದದ್ದು. ಕೆಲವರಿಗೆ ಬಡಗು. ಅದು ಅವರವರ ಮನೋಧರ್ಮ. ಅದು ತಪ್ಪಲ್ಲ. ಹಾಗೆ ನೋಡಿದರೆ ತೆಂಕು ತಿಟ್ಟಿಗೂ, ಬಡಗುತಿಟ್ಟಿಗೂ ಕುಣಿಯಬಲ್ಲೆ. ಈ ವರೆಗೆ ೭೬೦ ಪ್ರದರ್ಶನ ನೀಡಿದ್ದೇವೆ. ಹೊಸ ಕಲ್ಪನೆಗಳು ಬರಬಹುದು.

ನಿಮ್ಮ ಪ್ರಯೋಗಗಳಿಗೆ ಸಂಬಂಧಿಸಿದಂತೆ ನಿಮ್ಮನ್ನು ಬಹುವಾಗಿ ತಟ್ಟಿದ ಅಂಶ ಯಾವುದು?

ನಡುಮನೆ ಪ್ರಯೋಗ ನಂಗಿಷ್ಟ. ಸರಳವಾದ ಕ್ರಮ. ಮನೆಯವರೇ ಇರ್ತಾರೆ. ಒತ್ತಾಯಕ್ಕೆ ಕೂತುಕೊಳ್ಳೋದಿಲ್ಲ. ಹೆಚ್ಚಿನ ವ್ಯವಸ್ಥೆ ಬೇಕಿಲ್ಲ. ಖರ್ಚೂ ಹೆಚ್ಚಿಲ್ಲ. ಸಮಯಕ್ಕೆ ಸರಿಯಾಗಿ ಪ್ರಾರಂಭ ಮಾಡ್ತೀವಿ. ಮೊಬೈಲ್, ಕಾಲಿಂಗ್ ಬೆಲ್ ಎಲ್ಲವನ್ನೂ ಆಫ್ ಮಾಡಿಸ್ತೀವಿ. ಒಮ್ಮೊಮ್ಮೆ ಪಕ್ಕದ ಮನೆಯವರಿಗೂ ಗೊತ್ತಾಗಿರುವುದಿಲ್ಲ. ಅದು ಅಷ್ಟಾಗಿ ಪ್ರಚಾರಕ್ಕೆ ಬರೋಲ್ಲ ಅಂದರೆ ಪೇಪರ್‌ನಲ್ಲಿ ಬರೋದಿಲ್ಲ.

ನಡುಮನೆಯಿಂದ ಎಷ್ಟೋ ಜನರ ಹೃದಯ ಗೆದ್ದು ಬರಲಿಕ್ಕಾಗಿದೆ. ಅವರಿಗೂ ಕಲೆಯ ಬಗೆಗೆ, ಕಲಾವಿದನ ಬಗೆಗೆ ಗೌರವ ಬರುತ್ತದೆ. ಇವರ್ಯಾರೋ ಕೈಗೆಟುಕದವರು ಅಂತ ಅಂದುಕೊಳ್ಳೋದಿಲ್ಲ. ಬದಲಾಗಿ ನಮ್ಮವರೇ, ಹತ್ತಿರದವರು ಅನ್ನುವ ಭಾವ ಅವರಲ್ಲೂ. ಕಲೆಯೊಂದು ಮಾಡಬೇಕಾದ್ದು ಇದೇ ಅಲ್ಲವೇ !

ಒಂದು ನಡುಮನೆ ಪ್ರದರ್ಶನದಲ್ಲಿ ಹೀಗಾಯಿತು ; ‘ಯಶೋದೆ ಕೃಷ್ಣನನ್ನು ಆಡಿಸಿಕೊಂಡು ಬಂದು ಒಂದು ಕೋಣೆಯೊಳಗೆ ಕೂಡಿ ಅಗಳಿ ಹಾಕಿ ಹೋಗುವುದನ್ನು ಅಭಿನಯಿಸಿದೆ. ಕಾರ್ಯಕ್ರಮ ಮುಗಿದು ೪-೫ ದಿನಗಳ ತರುವಾಯ ಬಂದ ಮನೆಯವರು ಅಳುತ್ತಲೇ ಹೇಳಿದ್ದೇನು ಗೊತ್ತೇ? ‘ನೀವು ಬಾಗಿಲು ಹಾಕಿ ಬಂದ ನಂತರ ಆ ಕೋಣೆಯನ್ನು ನಾವು ತೆರೆದೇ ಇಲ್ಲ. ಕೃಷ್ಣ ಓಡಿ ಹೋದಾನು’!

ಅದೊಂಥರಾ ಭ್ರಮೆಯಿದ್ದಿರಬಹುದು. ಆದರೆ ಪ್ರಸಂಗವನ್ನು ಅನುಭವಿಸುವಾಗ ಅವರು ಅವರಾಗಿಯೇ ಇರಲಿಲ್ಲ ಎಮ್ಬುದಂತೂ ಸ್ಪಷ್ಟ. ಆ ಅನುಭವ ಭ್ರಮೆಯಂತೂ ಅಲ್ಲ.

ಈ ಯಶಸ್ಸು ವೇದಿಕೆಗಳಲ್ಲಿ ಸಾಧ್ಯವಾಗುವ ಬಗೆ ?

ದೊಡ್ಡ ವೇದಿಕೆ ಅಂದಾಕ್ಷಣ ಅದ್ಭುತಗಳು ಬೇಕಾಗುತ್ತದೆ. ವ್ಯವಸ್ಥೆ, ಸಮಸ್ಯೆಗಳನ್ನು ಎದುರಿಸಿ ನಿಲುವ ಸಂದರ್ಭಗಳನ್ನು ಸೃಷ್ಟಿ ಮಾಡಬೇಕಾಗುತದೆ. ಮೈಕ್, ಲೈಟ್ ಎಲ್ಲ ಬೇಕು. ಅಷ್ಟಕ್ಕೂ ಮೆಗಾ ಪ್ರೋಗ್ರಾಮ್‌ಗಳ ಮೂಲಕ ಏಕವ್ಯಕ್ತಿ ಪ್ರಯೋಗ ಮಾಡಹೊರಟರೆ ಅದರ ಪರಿಣಾಮ ಅಷ್ಟಾಗಿ ಇರಲಿಕ್ಕಿಲ್ಲ. ನನಗಾದರೂ ಭಾವಾನುಭವ ಆದೀತು; ಅದರೆ ಪ್ರೇಕ್ಷಕರಿಗೆ ಆಗುತ್ತೆ ಅನ್ನುವುದು ಅನುಮಾನ. ಮೆಗಾ ಪ್ರೋಗ್ರಾಮ್‌ಗಳಿಗೆ ಅದರದ್ದೇ ಆದ ಸೌಂದರ್ಯವಿದೆ. ದೊಡ್ಡ ದೊಡ್ಡ ವೇದಿಕೆಗಳಿಗೆ ಅಂತಹ ವೇದಿಕೆ, ವ್ಯವಸ್ಥೆ, ಅಬ್ಬರ ಅಗತ್ಯ. ಆದರೆ ದೊಡ್ಡ ವೇದಿಕೆಗಳಿಗೆ ಏಕವ್ಯಕ್ತಿ ಮಾಡಹೊರಟರೆ?

ಯಕ್ಷಗಾನಕ್ಕೆ ಸ್ಥಿತ್ಯಂತರಗಳನ್ನು ಮಾಡಿಸಿಕೊಳ್ಳುವ ಶಕ್ತಿ ಇದೆ. ಆದರೆ ಅದನ್ನು ಕಲಾವಿದರಾದಿಯಾಗಿ ಒಪ್ಪಿಕೊಳ್ಳಲು ಯಾರೂ ತಯಾರಿಲ್ಲದವರಂತೆ ಅಸಡ್ಡೆ ಮಾಡುತ್ತಾರೆ. ಒಂದು ವೇಳೆ ವಿದ್ಯಾರ್ಥಿಗಳಾದಿಯಾಗಿ ಯುವಕರೆಲ್ಲರೂ ಯಕ್ಷಗಾನ ಕಲಿತರೆ ಜಗತ್ತಿನಲ್ಲೇ ನಂ. ೧ ಕಲೆಯಾಗಿ ಬೆಳೆಯಬಲ್ಲ ಶಕ್ತಿ ಯಕ್ಷಗಾನಕ್ಕಿದೆ. ಹಾಗಂತ ಹಳೆಯದೇ ಇಟ್ಟುಕೊಂಡು ಕೂತರೂ ಪ್ರಯೋಜನ ಇಲ್ಲ. ಹೊಸತನ್ನು ಅಗತ್ಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳಬೇಕು

ಆದರೆ ಪ್ರೇಕ್ಷಕರ ಸಂಖ್ಯೆ ವಿರಳವಾಗಿ ಕಲಾವಿದ ಹುರಿದುಂಬಿತನಾಗದೆ, ಪ್ರೋತ್ಸಾಹ ಸಿಗದೇ ಪೇಲವವೆನಿಸಿಕೊಳ್ಳುತಾನೆ ಎನ್ನುವ ಭಾವನೆಯಿದೆಯಲ್ಲಾ..! ಅದಕ್ಕೇನನ್ನುತ್ತೀರಿ?

ಜನ ಮುಖ್ಯವಲ್ಲ. ನೋಡುವ ಹೃದಯ ಮುಖ್ಯ. ಒಬ್ಬನೇ ಕೂತರೂ ನಾನು ಮಾಡಬಲ್ಲೆ. ಆಸ್ವಾದಿಸಲು ಒಂದು ಹೃದಯ ಇದ್ದರಾಯಿತು. ಧ್ಯಾನ ಮತ್ತಷ್ಟು ಹತ್ತಿರವಾಗುತ್ತದೆ.

ಒಂದು ವೇಳೆ ಯಾವುದೋ ಕಾರ್ಯಕ್ರಮಕ್ಕೆ ಜನ ಬರಲಿಲ್ಲ ಅಂದರೆ, ಆ ಕಾರ್ಯಕ್ರಮ, ಪ್ರದರ್ಶನ ನೋಡೋದಕ್ಕೆ ಜನರಿಗೆ ಒಪ್ಪಿಗೆ ಇಲ್ಲ ಅಂತ ಅರ್ಥ. ಜಾಸ್ತಿ ಜನ ಬರಬೇಕೆನ್ನುವ ಆಲೋಚನೆಯೇ ತಪ್ಪು. ಜನಕ್ಕೋಸ್ಕರ ಮಾಡ್ತೀರಿ ಅಂತಾದರೂ ಜನರು ಅದಕ್ಕೆ ಕಚ್ಚಿಕೊಂಡು ನೋಡುವ ಶಕ್ತಿಯನ್ನು ನೀವು ಕೊಟ್ಟಿರಬೇಕು. ಹಾಗಂತ ಜನ ಬೇಕು ಅಂತ ಒದ್ದಾಡುವ ಸಂಘಟಕ, ಕಲಾವಿದರಿಗೆ ಬಸ್ ಸ್ಟ್ಯಾಂಡ್‌ನಲ್ಲೂ ಹೋಗಿ ಮಾಡಬಹುದಲ್ವಾ? ಸಾಕಷ್ಟು ಜನ ಅಲ್ಲಿಯೂ ಇರುತ್ತಾರೆ. ಒಮ್ಮೊಮ್ಮೆ ಹಿಗಾಗುವುದಿದೆ. ಜನ ಬರಲಿ, ಆಮೇಲೆ ಮಾಡೋಣ ಅಂತ ಹತ್ತು ಆಸಕ್ತ ಮಂದಿಯನ್ನೂ ಕಾಯಿಸುತ್ತಾರೆ. ಕೊನೆಗೆ ಜನ ಬಂದರೂ ಅದನ್ನು ನೋಡುವವರಾಗಿಲ್ಲದಿದ್ದರೆ, ಇತ್ತ ಅಭಿರುಚಿಯ ಪ್ರೇಕ್ಷಕರನ್ನು ಕಳೆದುಕೊಂಡಿರುತ್ತಾರೆ.

ಜನ ಬಾರದೇ ಹೋದರೂ ಪ್ರದರ್ಶನ ನೀಡಲಿಕ್ಕೆ ನಾವು ತಯಾರು ಅಂತಾದಾರೆ ಅದರರ್ಥ ಕಲೆ ನಮ್ಮಲ್ಲಿ ಬೇರೂರಿದೆ ಎಂದರ್ಥ.

ಪ್ರದರ್ಶನದಲ್ಲಿ ಪ್ರೇಕ್ಷಕನ ಗ್ರಹಿಕೆಗಳು ಎಷ್ಟರ ಮಟ್ಟಿಗೆ ನಿರ್ಣಾಯಕ ಪಾತ್ರ ವಹಿಸಬಲ್ಲುವು?

ನಾಟ್ಯ ಮಾಡುವವ ಮುಖ್ಯ ಅಲ್ಲ. ಆಸ್ವಾದಿಸುವವ ಮುಖ್ಯ, ಅವನೇ ದೊಡ್ಡವ ಕೂಡಾ ! ಮಾಡುವವನಿಗೆ ತಾನು ಮಾಡುತ್ತೇನೆ ಎಂಬ ಆನಂದವಾದರೂ ಇರುತ್ತದೆ. ಅದರೆ ನೋಡುವವ ಹಾಗಲ್ಲ. ಒಂದಷ್ಟು ಆನಂದ ತೆಗೆದುಕೊಂದು ಹೋಗಬೇಕೆಂದು ಬಂದಿರುತ್ತಾನೆ. ಆದರೆ ಆತನಿಗೆ ಸಿಗಬೇಕೆಂದೇನಿಲ್ಲವಲ್ಲ. ನೋಡುವವನಿಗೂ ತಾನು ನೋಡ್ತಾ ಇದ್ದೇನೆ ಅನ್ನೋದನ್ನು ಮರೆಸುವಷ್ಟರ ಮಟ್ಟಿಗೆ ಕಲಾವಿದ ಬೆಳೆಯಬೇಕು. ಆಗ ಪ್ರೇಕ್ಷಕನಿಗೂ ತೃಪ್ತಿ ಸಿಗುತ್ತದೆ.

ಏಕವ್ಯಕ್ತಿ ಯಕ್ಷಗಾನ ನನ್ನ ವೃತ್ತಿಯಲ್ಲ. ಜೀವನ ನಿರ್ವಹಣೆಗೆ ನನಗೆ ಬೇರೆಯದೇ ಉದ್ಯಮವಿದೆ. ಒಂದು ವೇಳೆ ಏಕವ್ಯಕ್ತಿಯನ್ನೇ ಆಯ್ದುಕೊಂಡರೆ ವೃತ್ತಿಧರ್ಮಕ್ಕೆ ಪೂರಕವಾಗಿ ನಡೆದುಕೊಳ್ಳಬೇಕಾಗುತ್ತದೆ ; ಅದಕ್ಕೆ ತಕ್ಕ ಹಾಗೆ ಎಲ್ಲದರಲ್ಲೂ ಒಂದು ಹೊಂದಾಣಿಕೆ, ಬದ್ಧತೆ, ಕ್ರಮವನ್ನು ಪಾಲಿಸಿಕೊಂಡು ಹೋಗಬೇಕಾಗುತ್ತದೆ .

ನಿಮ್ಮ ಪ್ರಯತ್ನ ನಿಮಗೆ ಕೊಟ್ಟ ಅನುಭವ ಎಂಥದ್ದು ?

ಏಕವ್ಯಕ್ತಿ ಯಕ್ಷಗಾನದಿಂದ ತುಂಬಾ ಜನರ ಹೃದಯ ಮೀಟಿದ್ದೇವೆ ಅನ್ನುವ ವಿಶ್ವಾಸ ನಮ್ಮದು. ಕಲೆಯ ಮಾರ್ದವತೆ ಮುಟ್ಟಿಸಿದ್ದೇವೆ ಅನ್ನುವ ತೃಪ್ತಿಯಿದೆ. ನಾವು ಪ್ರದರ್ಶನ ನೀಡುವಾಗ ನರ್ತಿಸುತ್ತಾರೆ ಅನ್ನುವ ಆಸೆಯಿರುವುದು ಒಂದು ಬಗೆಯಾದರೆ, ಪ್ರದರ್ಶನ ಮುಗಿಸಿ ಹೋಗುವಾಗ ಏನೋ ಹೇಳಲಾರದ ಪ್ರಕ್ರಿಯೆಯಿದೆಯಲ್ಲಾ ಅದು ಇನ್ನೊಂದು ಬಗೆಯ ಅನುಭವ ! ಮತ್ತೂ ಕೆಲವರು ಐದು ನಿಮಿಷ ಅತ್ತು ನಮಸ್ಕಾರ ಮಾಡಿ ಹೋಗುತ್ತಾರೆ. ಅದನ್ನು ನೀವು ಏನಂತೀರಿ ? ಅನುಭವ ಹೇಳೋಕಾಗಲ್ಲ. ಅನುಭವವನ್ನು ಅನುಭವಿಸಬೇಕು.

ಕಲಾವಿದ ಯಾವಾಗ ಪ್ರೇಕ್ಷಕನಿಗೆ ಆನಂದ ಕೊಡಲು ಅರ್ಹನೆನಿಸಿಕೊಳ್ಳುತ್ತಾನೆ ? ಕಲಾವಿದನ ಮಟ್ಟವನ್ನು ಕಂಡುಕೊಳ್ಳುವುದು ಹೇಗೆ?

ವಿದ್ಯೆ ಕಲಿಯಲಿಕ್ಕೆ ಮಾಧ್ಯಮ ಬೇಕು. ಪ್ರದರ್ಶನಕ್ಕೆ ಮಾಧ್ಯಮ ಬಿಡಬೇಕು. ಮಾಧ್ಯಮ ಇಟ್ಟುಕೊಂಡೇ ಪ್ರದರ್ಶನ ಮಾಡಲಿಕ್ಕೆ ಇಳಿಬಾರದು. ಮಾಧ್ಯಮ ಬಿಡುವುದು ಅಂದ್ರೆ ಜಾತಿಯನ್ನೇ ಬಿಟ್ಟುಹೋಗುವುದು ಅಂತಲ್ಲ. ಅದಕ್ಕೂ ಅದರದ್ದೇ ಆದ ಸೌಂದರ್ಯವಿದೆ. ಅದರರ್ಥ, ಕಲಾವಿದ ಮಾಧ್ಯಮ ಬಿಡುವಷ್ಟು ಗಟ್ಟಿಯಾಗಿರಬೇಕು. ಅದರರ್ಥ ಮಾಧ್ಯಮವನ್ನು ಬಿಟ್ಟೇ ಬಿಡಬೇಕು ಅಂತಲೂ ಅಲ್ಲ. ಮಾಧ್ಯಮ ಮೀರುವ ಕಲಾವಿದ ಪ್ರತಿಭಾವಂತನಾಗಿರುತ್ತಾನೆ. ಹಾಗಂತ ಮಾಧ್ಯಮ ಬೇಡ ಅಂತಲ್ಲ. ಪ್ರತಿಭೆ ಇದ್ದರೆ ಕಲಾವಿದ ಹೊಸ ಹೊಳಹುಗಳನ್ನು ಕಾಣಿಸಬಲ್ಲ. ವಿದ್ಯೆ ಮತ್ತು ಜ್ಞಾನ ಎರಡೂ ಒಂದೇ ಅಲ್ಲ.

ಆದರೆ ಬಹಳಷ್ಟು ನೃತ್ಯ ಕಲಾವಿದರು ಗಿಣಿಪಾಠ ಒಪ್ಪಿಸಿ, ಒಂದುವೇಳೆ ರಂಗದಲ್ಲಿ ತಪ್ಪಿಹೋಯಿತು ಅಂತಾದರೆ ಮೂಡ್ ಹಾಳು ಮಾಡಿಕೊಂಡು ಕೂರುತ್ತಾರೆ. ಅದಾಗಬಾರದು. ಮಾಧ್ಯಮ ಮೀರುವುದೇ ಉದ್ದೇಶ ಅಲ್ಲ. ಆದರೆ ಮೀರಿ ಹೋದರೆ ಅಡ್ಡಿಯಿಲ್ಲ. ನಾವೇನು ಹೇಳಲಿಕ್ಕೆ ಹೊರಟಿದ್ದೀರಿ ಎನ್ನುವುದನ್ನು ಸರಳವಾಗಿ ಮಾಡಿ ತೋರಿಸುವುದೇ ಮುಖ್ಯ. ಯಾವುದೇ ಸಂಗೀತ, ಶೈಲಿಯಲ್ಲಿ ನುಡಿಸಿದರೂ ‘ರಿದಂ’ ಅಂದರೆ ಒಂದು ಲಯದ ಆಧಾರದಲ್ಲಿ ಅದಕ್ಕೆ ತಕ್ಕಂತೆ ತಮ್ಮ ತಮ್ಮ ನೆಲೆಯಲ್ಲಿ ನರ್ತಿಸಲು ಬರಬೇಕು. ನಾಟ್ಯವೆಂದರೆ ಅದೇ!

ಮಾಧ್ಯಮವನ್ನು ಹಿಡೀಬೇಕು ಮತ್ತು ಬಿಡಬೇಕು. ಆ ಕೆಲಸ ಏಕವ್ಯಕ್ತಿಯಲ್ಲಿ ಆಗಿದೆ.

ಇಂದಿನ ಕಾಲದಲ್ಲಿ ಒಂದು ಕಲೆಯ ಕಲಾವಿದರು ಮತ್ತೊಂದು ಕಲೆಯ ಕಲಾವಿದರನ್ನು ನಡೆಸಿಕೊಳ್ಳುವ ಪ್ರವೃತ್ತಿ ಹೇಗಿದೆ ಅನ್ನಿಸುತ್ತದೆ?

ಆಶ್ಚರ್ಯವಾಗಬಹುದು; ಬಹಳ ಭರತನಾಟ್ಯ ಕಲಾವಿದರು ‘ಯಕ್ಷಗಾನ ನೋಡ್ಬೇಡಿ’ ಅನ್ನುತ್ತಾರೆ. ಶೈಲಿ ಹಾಳಾಗಿ ಹೋಗುತ್ತದೆ ಎಂಬ ಉವಾಚ ಬೇರೆ ! ಹಾಗೆ ಹಾಳಾಗಿ ಹೋಗುವುದಿದ್ದರೆ ಉಳಿಸಿಕೊಂಡು ಮಾಡುವುದೇನು ? ಹಾಗೆ ನೋಡಿದರೆ, ಯಾವ ನೃತ್ಯ ಚೆಂದ ಇಲ್ಲ., ಹೇಳಿ ನೋಡೋಣ..,ನಮ್ಮ ಊರಲ್ಲಿ ಕೊರಗರು ಕುಣಿದ ಹಾಗೆ ಹೇಳಿ ಅಣಕಿಸುವವರಿಗೆ ಕುಣಿಯಲಿಕ್ಕೆ ಬರುತ್ತದಾ ? ಅದನ್ನು ಚೆಂದ ಇಲ್ಲ ಅಂತ ಹೇಳ್ತೀರಾ?

ಏನಿದ್ದರೂ, ಹೇಳುವವರಿಗೆ ಮಾಡುವ ವೈವಿಧ್ಯ ಗೊತ್ತಿಲ್ಲವೆನ್ನಬೇಕಷ್ಟೇ ! ಸೌಂದರ್ಯ ಯಾರೊಬ್ಬರ ಸ್ವತ್ತೂ ಅಲ್ಲ. ಇವೆಲ್ಲವೂ ಶೈಲಿ ಅಂದುಕೊಳ್ಳುವವರ ಹಣೆಬರಹ. ಶೈಲಿ ಅನ್ನೋದಕ್ಕಿಂತ ಹೆಚ್ಚಾಗಿ ವಿಶಾಲವಾಗಿ ಯೊಚಿಸೋದನ್ನು ಕಲಿಯಬಾರದೇ? ಹಾಗೆ ನೋಡಿದರೆ ನೃತ್ಯ ಕ್ಷೇತ್ರವನ್ನು ಹಾಳು ಮಾಡುವುದರಲ್ಲಿ ಶಾಸ್ತ್ರೀಯ ನೃತ್ಯಪಟುಗಳ ಪಾಲೇ ಹೆಚ್ಚು. ಆದ್ದರಿಂದ ಇಂತಹ ಉದಾಹರಣೆಗಳಲ್ಲಿ ಪ್ರತಿಭೆ ಎನ್ನುವುದಿದ್ದರೂ ಅದು ಪ್ರಶ್ನಾರ್ಹವಾಗಿ ತೋರುತ್ತದೆ.

ಕಲಾವಿದನ ಪ್ರತಿಭೆ, ಆದರ್ಶ, ತೀವ್ರತೆ ಮೇಲೆ ಕಲೆ ಆವರಿಸಿಕೊಳ್ಳುತ್ತದೆ. ಹಾಗೆ ನೋಡಿದರೆ ಒಂದೊಂದು ಸಲ ಗುರುಗಳ ಒತ್ತಡ ಇಲ್ಲದಿದರೇನೇ ಶಿಷ್ಯರು ಇನ್ನೂ ಚೆನ್ನಾಗಿ ಮಾಡಬಲ್ಲರು. ಗುರುಗಳ ಕೈಯಿಂದ ಕಲಿತ ಶಿಷ್ಯರು ತಮ್ಮ ಗುರುಗಳ ಬಗೆಗೆ ಹೇಳಿಕೊಳ್ಳುವಂತಾಗಬೇಕೆ ವಿನಃ ಕಲಿಸಿದ ಗುರು ಅಹಂನಿಂದ ಆಡಿಕೊಳ್ಳುವಂತಾಗಬಾರದು

Mantapa Prabhakara Upadhyaya

 

ನೃತ್ಯ, ನಾಟ್ಯ ಕಲಿಯ ಬಯಸುವ ಎಳೆಯರಿಗೆ ನಿಮ್ಮ ಮಾತೇನು?

ಉತ್ಸಾಹವೇ ಮಕ್ಕಳಿಗೆ ಮುಖ್ಯ. ಅವರೇನಿದ್ದರೂ ಮೊದಲು ಕಲಿಯಬೇಕಷ್ಟೇ ! ಅವರಿಗೆ ತಿಳಿ ಹೇಳುವುದಕ್ಕಿಂತ ಅವರಿಗೆ ಹೇಳಿಕೊಡೋ ಗುರುಗಳಿಗೆ ಮೊದಲು ಹೇಳಬೇಕು. ಕಲೆಯ ಸಾಧ್ಯತೆಯನ್ನು ಮಕ್ಕಳಿಗೆ ಹೇಳಿಕೊಡುವ ಕೆಲಸ ಗುರು, ಪೋಷಕರಿಂದಾಗಬೇಕು. ಆದರೆ ಈಗ ಹಾಗಿಲ್ಲ. ಕ್ಲಾಸ್ ಒಂದಕ್ಕೆ ಇಂತಿಷ್ಟು ರೂಪಾಯಿ ಫೀಸು ಕೊಟ್ಟು, ಒಂದು ಡ್ರೆಸ್ ಹೊಲಿಸಿ ಪ್ರದರ್ಶನ ಕೊಡ್ತೀನಿ ಅನ್ನೊದೇ ಮುಖ್ಯವಾಗುತ್ತಿದೆ.

ವೇದಿಕೆ ಇರುವುದು ರಸಿಕನ ಹೃದಯಕ್ಕೆ ಪೂರಕ ವಾತಾವರಣ ಕಲ್ಪಿಸಿಕೊಡಲು, ನೋಡುವ ವ್ಯವಸ್ಥೆ ಕಟ್ಟಿಕೊಡಲು! ಆದರೆ ವೇದಿಕೆಯೇರುವುದೇ ಮುಖ್ಯವಾಗುವುದು ದುರಂತ.

ಕಲಾವಿದರ ಮನಸ್ಥಿತಿ ಹೇಗಿದ್ದರೆ ಒಳ್ಳೆಯದು ಎಂಬುದು ನಿಮ್ಮ ಅನಿಸಿಕೆ?

ಕಲೆ ಇರುವುದೇ ತಮ್ಮ ಒಳಗನ್ನು ಕರಗಿಸಿಕೊಂಡು ಹದಗೊಳ್ಳುವುದಕ್ಕೆ. ಆದರೆ ಬಹುಪಾಲು ಜನರಿಗೆ ಪ್ರದರ್ಶನದ ಹುಚ್ಚು. ತಾನು ಕಾಣಿಸಿಕೊಳ್ಳಬೇಕೆಂಬುದೇ ಹೆಚ್ಚು. ತಾನು ಕರಗಿಸಿಕೊಳ್ಳಬೇಕೆಂದಿಲ್ಲ. ಕಲೆ ಇರುವುದು ಅಹಂಕಾರ ಕಳಚಿಕೊಳ್ಳಲು. ಬಹಳಷ್ಟು ಮಂದಿ ಅಹಂಕಾರವನ್ನು ಹೆಚ್ಚಿಸಿಕೊಳ್ಳಲು ಕಲೆಯನ್ನು ಅಂಟಿಸಿಕೊಳ್ಳುವವರೇ ಆಗಿದ್ದಾರೆ. ನಾಲ್ಕು ಜನರ ಕಣ್ಣಿಗೆ ಕಾಣಿಸಿಕೊಳ್ಳುವುದೇ ಮುಖ್ಯವಾಗಿದೆ. ಹ್ಯಾಂಡ್ ಬಿಲ್‌ನಲ್ಲಿ ಹೆಸರು ಬರಲಿ, ಮುಖ್ಯ ಪಾತ್ರ ಅಂತ ಬೋರ್ಡ್ ಹಾಕಲಿ, ಪೇಪರ್‌ನಲ್ಲಿ ಹೆಸರು ದೊಡ್ಡದಾಗಿ ಕಾಣಲಿ ಅಂತೆಲ್ಲ ಮೊದಲು ಇರುತ್ತೆ. ಇರಬೇಕಾದ್ದೂ ಕೂಡಾ ! ಆದರೆ ಮೊದಮೊದಲು ಪುಟ್ಟ ಹೆಜ್ಜೆ ಹಾಕಿಕೊಂಡು ಬಂದರೂ ಕ್ರಮೇಣ ಮಟ್ಟವನ್ನು ಏರಿಸಿಕೊಳ್ಳುತ್ತಾ ಹೋಗಬೇಕು. ಅಹಂಕಾರ ಕಳಚಿಕೊಳ್ಳಲಿಕ್ಕೆ ಕಲೆಯನ್ನು ಇಟ್ಟುಕೊಳ್ಳುವವನು ಮಾತ್ರ ಬೆಳೀತಾನೆ. ಕಲೆ ಎನ್ನುವುದನ್ನು ಅಹಂಕಾರ ಹೆಚ್ಚಿಸಿಕೊಳ್ಳಲಿಕ್ಕೆ ಅಂತ ಯಾರು ಇಟ್ಟುಕೊಳ್ಳುತ್ತಾನೋ ಅಲ್ಲಿ ಕಲೆ ಮತ್ತು ಕಲಾವಿದ ಎರಡೂ ಬೆಳೆಯೋದಿಲ್ಲ.

1 Response to ಮಂಟಪ ಪ್ರಭಾಕರ ಉಪಾಧ್ಯಾಯ

  1. Kamalakar Hegde

    A super magazin for kalapriyas!!!

Leave a Reply

*

code