Author: ಮನೋರಮಾ. ಬಿ.ಎನ್
ಪ್ರಾಮಾಣಿಕ ಪ್ರೇಮವನ್ನು ನಿತ್ಯ ಜೀವನದಲ್ಲಿ ತೋರಿಸಲಾರದವರು ‘ಆಧ್ಯಾತ್ಮಿಕ ಪ್ರೇಮ’ವನ್ನು ನೃತ್ಯದಲ್ಲಿ ತೋರಿಸುತ್ತಾರೆಯೇ? ಅಂತರಂಗದಲ್ಲಿ ಆಧ್ಯಾತ್ಮವಿದ್ದರೆ ಮಾತ್ರ ಅದು ಕುಣಿತದಲ್ಲೂ ಬಂದೀತು.
…ಕೃಷ್ಣ ರಾಧೆಯರ ಪ್ರೇಮವನ್ನು ಮಧುರಭಾವ ಎಂದು ಕರೆಯುತ್ತಾರೆ. ಈ ಕಲ್ಪನೆಯೆಂಬುದು ಆಧ್ಯಾತ್ಮದಿಂದ ಮೊದಲು ಬಂದಿತೇ? ಆಧ್ಯಾತ್ಮ ಎಂಬುದು ಪ್ರೇಮಕ್ಕೆ ನಮ್ಮ ಜೀವನದಿಂದ ಇದೊಂದು ಉಪಮೆಯಾಗಿ ಹೋಯಿತೇ-ಎಂಬುದು ಕೂಡಾ ಒಂದು ಸಮಸ್ಯೆಯೇ. ಶಿಲ್ಪದಲ್ಲಿ, ನೃತ್ಯದಲ್ಲಿ, ಚಿತ್ರಗಳಲ್ಲಿ ಕೃಷ್ಣ ಮತ್ತು ರಾಧೆಯರ ಸಂಕೇತವನ್ನು ಇರಿಸಿಕೊಂಡು ಆತ್ಮ, ಪರಮಾತ್ಮರ ಪರಸ್ಪರ ಆಕರ್ಷಣೆಯನ್ನು ಚಿತ್ರಿಸುವುದಕ್ಕೆ ನಮ್ಮವರು ಪ್ರಯತ್ನಿಸಿದ್ದಾರೆ. ಶಿಲ್ಪದಲ್ಲಾಗಲೀ, ಕಾವ್ಯದಲ್ಲಾಗಲೀ ಈ ಸಂದರ್ಭಗಳಲ್ಲಿ ಬಳಸುವ ಹಲವು ಮಾತುಗಳು, ವರ್ಣನೆಗಳು, ಉಪಮೆಗಳು, ಬಾಹ್ಯ ಸಾಧನಗಳು. ಅವು ಸಾಕಷ್ಟು ಕಾಮ ಸೂಚಕವಾದುವೇ. ಅಂತರಂಗದಲ್ಲಿ ಹುದುಗಿದ ಪ್ರೇಮದ ಗುಣವನ್ನು ಯಾರು ಬಲ್ಲವರು? ಅದು ಆತ್ಮ, ಪರಮಾತ್ಮರ ಮಿಲನ ಬಯಸುವಂಥಾದ್ದು – ಅದಕ್ಕೆ ಉದಾಹರಣೆಯಾಗಿ ಲೌಕಿಕಾನುಭವದಿಂದ ಹೆಣ್ಣು ಮತ್ತು ಗಂಡು, ಗಂಡ ಹೆಂಡತಿ, ಪ್ರಣಯಿ-ಪ್ರೇಯಸಿಗಳ ಮಿಲನವನ್ನು ಸಾಂಕೇತಿಕವಾಗಿ ಸೂಚಿಸುವಂತೆ ಕಾಣುತ್ತದೆ. ಹಿಂದೊಂದು ಕಾಲದಲ್ಲಿ ಇಂಥ ಸಂಕೇತಗಳು ಅಸಹ್ಯ ಅಥವಾ ಅಶ್ಲೀಲ- ಎನಿಸಿಕೊಂಡಿರಲಾರವು. ಅವು ಆಶ್ಚರ್ಯವನ್ನೂ ಹುಟ್ಟಿಸಲಿಲ್ಲ. ಮುಂದೆ ಅವೇ ವಿವಾರಗಳಿಗೆ ಅರ್ಥ ವಿಶೇಷ ಬರತೊಡಗಿದ್ದರಿಂದ, ಇಂಥ ಚಿತ್ರಗಳಿಗೆ ನೈಸರ್ಗಿಕ ಇಲ್ಲವೇ ಲೌಕಿಕ ಅರ್ಥವೇ ಇದ್ದಿರಲಿಲ್ಲ-ಎಂದು, ನಿಜಭಾವಗಳ ಅರ್ಥವನ್ನು ನಿರಾಕರಿಸುವುದಕ್ಕೆ ಹೊರಟಿರಬೇಕು. ಗಂಡಹೆಂಡಿರ ಅನ್ಯೋನ್ಯವನ್ನು ಮತ್ತು ಅವರ ಪ್ರೇಮವನ್ನು ಭಕ್ತ ಮತ್ತು ಇಷ್ಟದೇವತೆಯ ಪ್ರೇಮಕ್ಕೆ ಹೋಲಿಸಿದ್ದರಿಂದ ಏನೂ ಅಪರಾಧವಾಗದು. ಹಾಗೆ, ನಾವು ಲೌಕಿಕದ ಸಂಬಂಧವನ್ನು ಕಳೆದು ಕೊಂಡವರಾದಲ್ಲಿ ಅತ್ಮ-ಪರಮಾತ್ಮಗಳ ಕಲ್ಪನೆಯೇ ಅಸಾಧ್ಯವಾಗಿಬಿಡುತ್ತದೆ. ಅದು ಸಾಧ್ಯವಾದರೆ ಮಾತ್ರ ಆಧ್ಯಾತ್ಮವೂ ಸಾಧ್ಯ. ಲೌಕಿಕದಲ್ಲಿರುವ ಚೆಲುವು ಸೊಗಸುಗಳನ್ನು ಅತಿಕರಿಸಿ ಕಾಣುವ ದೃಷ್ಟಿಯೇ ಮಧುರಭಾವ ಎನಿಸುತ್ತದೆ ನನಗೆ…
( ‘ಒಂಟಿ ದನಿ’ ಕಾದಂಬರಿ- ಅನಂತಕೃಷ್ಣನ ಪಾತ್ರದ ಮೂಲಕವಾಗಿ )
-ದಿ| ಡಾ. ಕೆ. ಶಿವರಾಮ ಕಾರಂತ.