ಅಂಕಣಗಳು

Subscribe


 

ಜನಪದ ಸ್ವಾತಂತ್ರ್ಯ, ಶಾಸ್ತ್ರೀಯ ಶಿಸ್ತಿನ ವಿಶಿಷ್ಟ ನೆಲೆಯುಳ್ಳ ಯಕ್ಷಗಾನಕ್ಕೆ ಸಮಾನರೂಪದ ಸಮನ್ವಯ ಶಿಕ್ಷಣ ಬೇಕು : ಎಂ.ಎಲ್.ಸಾಮಗ

Posted On: Saturday, February 25th, 2012
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಮೂರು ವರ್ಷಗಳ ಹಿಂದೆ ಕರ್ನಾಟಕ ಸರ್ಕಾರ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ಯಕ್ಷಗಾನವನ್ನು ಪ್ರತ್ಯೇಕಿಸಿ ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ ಎಂದು ನಾಮಕರಣ ಮಾಡಿ ಹೊಸ ಅಂಗಸಂಸ್ಥೆಯೊಂದನ್ನು ರಚಿಸಿದಾಗ ಪ್ರಥಮಾಧ್ಯಕ್ಷರಾದವರು ಹಿರಿಯ ಕಲಾವಿದ ಕುಂಬ್ಳೆ ಸುಂದರ ರಾವ್. ಅವರ ತರುವಾಯ ಅಧ್ಯಕ್ಷ ಪದವಿಯ ಯೋಗ ದೊರಕಿದ್ದು ಮಲ್ಪೆ ಲಕ್ಷ್ಮೀನಾರಾಯಣ ಸಾಮಗರಿಗೆ (ಎಂ.ಎಲ್.ಸಾಮಗ ಎಂದೇ ಜನಪ್ರಿಯ)ಮೂರು ತಿಂಗಳ ಹಿಂದೆ( ಸೆಪ್ಟೆಂಬರ್ ೯-೧೦, ೨೦೧೧). ೪೦ ವರ್ಷಗಳಿಂದ ಆಂಗ್ಲಭಾಷಾ ಪ್ರಾಧ್ಯಾಪಕರಾಗಿ, ಉಡುಪಿ ಎಂಜಿ‌ಎಂ ಕಾಲೇಜಿನಲ್ಲಿ ೩ ವರುಷ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ ಪ್ರೊ.ಸಾಮಗರು; ಶಿವರಾಮ ಕಾರಂತ, ಬಿ.ವಿ.ಕಾರಂತ, ಶೇಣಿ, ಕೆರೆಮನೆ, ಚಿಟ್ಟಾಣಿ, ಹೊಸ್ತೋಟ ಮುಂತಾಗಿ ಅಗ್ರಮಾನ್ಯ ಕಲಾವಿದರ ಸಹಚರ್ಯದಲ್ಲಿ ಬೆಳೆದವರು. ದೊಡ್ಡ ಸಾಮಗರೆಂದೇ ಖ್ಯಾತರಾದ ತಂದೆ ಶಂಕರನಾರಾಯಣ ಸಾಮಗರಲ್ಲಿ ಪಳಗಿದ ಎಂ.ಎಲ್.ಸಾಮಗರು; ಇಂಗ್ಲೀಷ್‌ಭಾಷೆಯಲ್ಲಿ ಅರ್ಥಗಾರಿಕೆ, ಇಂಗ್ಲೀಷ್ ಯಕ್ಷಗಾನ, ನಾಟಕ, ನೃತ್ಯರೂಪಕ ಎಂದೆಲ್ಲಾ ಹತ್ತು ಹಲವು ನೆಲೆಯಲ್ಲಿ ಕ್ರಿಯಾಶೀಲರಾಗಿ ದುಡಿದವರು. ಯಕ್ಷಗಾನದ ತೆಂಕು ಮತ್ತು ಬಡಗು- ಉಭಯ ತಿಟ್ಟುಗಳ ಬಯಲಾಟ ಮತ್ತು ತಾಳಮದ್ದಳೆಗಳೆರಡರಲ್ಲೂ ಪ್ರಾವೀಣ್ಯತೆ ಹೊಂದಿರುವ ಸಾಮಗರು ಎರಡೂ ವರ್ಗದ ಕಲಾವಿದ ಮತ್ತು ಅಭಿಮಾನಿ ವರ್ಗಕ್ಕೆ ಸ್ವೀಕಾರಾರ್ಹ ವ್ಯಕ್ತಿ. ಜೊತೆಗೆ ಈಗ ಎರಡೂ ತಿಟ್ಟುಗಳಲ್ಲಿ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಹೋಗಬಲ್ಲ ಸಮರ್ಥ ರೂವಾರಿಯಂತೆ ಗೋಚರಿಸುತ್ತಿದ್ದಾರೆ. ಮುಂದಿನ ಮೂರು ವರ್ಷದ ಅವರ ಕರ್ತವ್ಯದ ಆಯಮಾದೆಡೆಗೆ ನಿರೀಕ್ಷೆಯ ದೃಷ್ಟಿ ಹಾಯಿಸುತ್ತಾ ನೂಪುರ ಭ್ರಮರಿ ಅವರನ್ನು ಒಮ್ಮೆ ಮಾತನಾಡಿಸಿದಾಗ…

Prof.M.L.Samaga


· ಅಧ್ಯಕ್ಷರಾದ ನಂತರ ತಾವು ಕಂಡುಕೊಂಡ, ಎದುರಿಸುತ್ತಿರುವ ತತ್‌ಕ್ಷಣದ ಸವಾಲುಗಳು ಏನು?

ಕುಂಬ್ಳೆ ಸುಂದರ ರಾಯರ ಅವಧಿಯಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳು, ಯೋಜನೆಗಳು ಯಕ್ಷಗಾನ ಕ್ಷೇತ್ರಕ್ಕೆ ಸಂದಿವೆ. ಆದರೆ ಆ ಮೂರು ವರ್ಷಗಳ ಅವಧಿಯಲ್ಲಿ ೩-೪ ರಿಜಿಸ್ಟ್ರಾರ್‌ಗಳು ಆಗಾಗ ವರ್ಗಾವಣೆಯಾಗುತ್ತಾ ಬಂದು ಹೋಗಿದ್ದಾರೆ. ಹೀಗಾಗಿ ಅದೆಷ್ಟೋ ಯೋಜನೆಗಳಿಗೆ ಅನುಮತಿ ಸಿಕ್ಕಿದರೂ ಅದರ ಕುರಿತ ಕೆಲಸಗಳು ಬಾಕಿ ಇದೆ. ದಾಖಲೆಗಳ ವ್ಯವಸ್ಥೆ ಶಿಸ್ತುಬದ್ಧವಾಗಿ ಆದಂತೆ ಇರಲಿಲ್ಲ. ಪ್ರಾರಂಭದಲ್ಲಂತೂ ೩೫-೪೦ ಫೈಲ್ಸ್‌ಗಳ ವಿಲೆವಾರಿ ಮಾಡುವುದಕ್ಕೆ ೩-೪ ತಿಂಗಳು ಸಮಯ ಬೇಕಾಯಿತು. ಅದರಲ್ಲೂ ಕೆಲವು ಯೋಜನೆಗಳ ಸಂಬಂಧ ಸಂಘಸಂಸ್ಥೆಗಳಿಗೆ ಹಣಪಾವತಿ ಆಗಿರಲಿಲ್ಲ. ಅದರಲ್ಲಿ ಹಲವು ಸಂಘಸಂಸ್ಥೆಗಳು ನೀಡಿದ ದಾಖಲೆಗಳು ಸರಿಯಾಗಿ ಪೂರೈಕೆ ಆಗದೆ ಕೊನೆಗೆ ವಿಚಾರಣೆ ಮಾಡಲಾಯಿತು. ಫೈಲಿಂಗ್, ಇಂಡೆಕ್ಸ್ ಮಾಡುವುದರಿಂದ ಹಿಡಿದು ಹಳೆಯ ಕಡತಗಳ ವಿಲೇವಾರಿಯೇ ಮೊದಲಿದ್ದ ಸಮಸ್ಯೆ. ಜೊತೆಗೆ ರಿಜಿಸ್ಟ್ರಾರ್ ಒಬ್ಬರನ್ನು ಬಿಟ್ಟು ಉಳಿದ ಸಿಬ್ಬಂದಿಗಳು ಗುತ್ತಿಗೆ ಆಧಾರದಲ್ಲಿ ಬರುವವರಾದ್ದರಿಂದ ಹಲವು ಕಾರಣಗಳ ಹಿನ್ನಲೆಯಲ್ಲಿ ಅವರ ಹಾಜರಿ ನಿಯಮಿತವಾಗಿ ಇರಲಿಲ್ಲ. ಹಾಗಾಗಿ ಎರಡನೇ ಪಂಥಾಹ್ವಾನವೇ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವ ಸಂಬಂಧವಾಗಿ ಓಡಾಟ. ಮೂರನೇಯದಾಗಿ ಅಕಾಡೆಮಿಯ ದಾಖಲೆ ನಿರ್ವಹಣೆಗೆ ಸರಿಯಾಗಿ ಸ್ಥಳಾವಕಾಶ, ಕಪಾಟು ವ್ಯವಸ್ಥೆ ಇತ್ಯಾದಿ ಸರಿಯಾಗಿ ಇರಲಿಲ್ಲ. ಕಂಪ್ಯೂಟರ್, ಈ ಮೈಲ್ ಮುಂತಾದ ಹೊಸ ಅನಿವಾರ್ಯತೆಗಳಿಗೆ ಅಲ್ಲಿ ಒಗ್ಗಿಕೊಂಡವರೂ ಇದ್ದಂತಿರಲಿಲ್ಲ; ಅವಕಾಶವೂ ಇರಲಿಲ್ಲವೆನ್ನಿ. ಒಟ್ಟಾರೆ ಕಛೇರಿ ವ್ಯವಸ್ಥೆ ಮತ್ತು ಆಡಳಿತದ ಸುಧಾರಣೆಗೆ ತಿಂಗಳುಗಳು ಬೇಕಾದವು. ಉಡುಪಿಯಲ್ಲಿ ವಾಸ್ತವ್ಯವಿದ್ದರೂ ಆಗಾಗ ಓಡಾಡುತ್ತಾ ಈಗ ಮೂರು ತಿಂಗಳುಗಳಲ್ಲಿ ಸಾಕಷ್ಟು ಕರ್ತವ್ಯ ಪೂರೈಸಿದ್ದೇನೆ. ಸದಸ್ಯರ ನೇಮಕಾತಿಯ ನಂತರವಷ್ಟೇ ಮುಂದಿನ ಯೋಜನೆಗಳಿಗೆ ದಿಕ್ಕು ಸಿಕ್ಕೀತು.

· ನಿಮ್ಮ ಅವಧಿಯಲ್ಲಿ ನೀವು ಮಾಡಬೇಕೆಂದಿರುವ ಯೋಜನೆಗಳ ಮುನ್ಸೂಚನೆ ನೀಡುವಿರಾ…?

ಹೊಸ ಯೋಜನೆಗಳು ಅಂತ ಹಾಕಿಕೊಳ್ಳುವ ಮಟ್ಟಿಗೆ ಅಕಾಡೆಮಿ ಅಧ್ಯಕ್ಷ ಸ್ಥಾನವೇನೂ ನನ್ನ ಕನಸಿನದ್ದಾಗಿರಲಿಲ್ಲ. ಅಚಾನಕ್ ಒದಗಿ ಬಂದ ಪದವಿಗೆ ನಾನು ಸಿದ್ಧನಾಗೂ ಇರಲಿಲ್ಲ. ಅಷ್ಟಕ್ಕೂ ಸದಸ್ಯರ ಯೋಚನೆಗಳ ವಿನಾ ಸ್ವತಂತ್ರವಾಗಿ ಯಾವುದನ್ನೂ ನಿರ್ಧರಿಸಲಾಗುವುದಿಲ್ಲವಾದ್ದರಿಂದ ಖಚಿತವಾಗಿ ಹೇಳಲಾಗದು. ಆದರೂ ಈ ಹಿಂದಿನ ವರ್ಷಗಳಲ್ಲಿ ಸಾಕಷ್ಟು ಕಾರ್ಯಕ್ರಮಗಳು ಆಗುತ್ತಲೇ ಇದ್ದ ಕಾರಣ ಮುಂದೆ ಆಗಬೇಕಾದದ್ದೇನು ಎಂಬ ಬಗ್ಗೆ ಒಂದಷ್ಟು ಚಿಂತನೆ ನಡೆಸಿದ್ದೇನೆ.

ಈಗಾಗಲೇ ಕುಂಬ್ಳೆ ಸುಂದರರಾಯರ ಅವಧಿಯಲ್ಲಿ ವೃತ್ತಿಕಲಾವಿದರಿಗೆ ವರುಷಕ್ಕೊಂದಾವರ್ತಿಯೆಂಬಂತೆ ಧರ್ಮಸ್ಥಳ, ಹೊರನಾಡಿನಲ್ಲಿ ಪುನಶ್ಚೇತನ ಶಿಬಿರಗಳು ಯಶಸ್ವಿಯಾಗಿ ಜರುಗಿವೆ. ಕಲಾವಿದರು ಅಪ್ ಡೇಟ್ ಆಗುವುದರೊಂದಿಗೆ ವೃತ್ತಿಶಿಸ್ತು ಮತ್ತು ಹೊಂದಾಣಿಕೆ, ಅರಿವು ಬೆಳೆಸಿಕೊಳ್ಳುವ ದೃಷ್ಟಿಯಿಂದ ಇಂತಹ ಶಿಬಿರಗಳನ್ನು ಮುಂದೆಯೂ ಏರ್ಪಡಿಸುವ ಇರಾದೆಯಿದೆ. ಯಕ್ಷಗಾನ ಸಂಘಸಂಸ್ಥೆಗಳಿಗೆ ಧನಸಹಾಯವನ್ನು ಕೊಡುವುದನ್ನು ಮುಂದುವರಿಸುವುದು, ಹಿಂದೆ ಆದಂತೆ ಕಮ್ಮಟ, ವಿಚಾರಸಂಕಿರಣಗಳ ಏರ್ಪಾಡು, ಯಕ್ಷ ಕಲೋಪಾಸಕರು ಪುಸ್ತಕ ಪ್ರಕಟಣೆಯಾದಂತೆ ಮುಂದಿನ ದಿನಗಳಲ್ಲೂ ಪುಸ್ತಕ ಮತ್ತು ಸಂಶೋಧನಾ ಗ್ರಂಥಗಳ ಪ್ರಕಟಣೆ ಮತ್ತು ಮುಖ್ಯವಾಗಿ ಇವೆಲ್ಲಾ ಕಾರ್ಯಕ್ರಮಗಳ ಹಿನ್ನಲೆಯಲ್ಲಿಲೋಪದೋಷಗಳಾಗಿದ್ದಲ್ಲಿ ಅದನ್ನು ತಿಳಿದು ಲೋಪ ಮುಂದುವರೆಯದಂತೆ ಜಾಗ್ರತೆ ವಹಿಸುವುದು.. ಹೀಗೆ ಹಲವು ತಯಾರಿಗಳೆಡೆಗೆ ಗಮನ ಹರಿದಿದೆ. ಯಕ್ಷಗಾನರಂಗಕ್ಕೆ ಪ್ರತ್ಯೇಕ ವಿಶ್ವಕೋಶ ತಯಾರಿಸುವ ಪ್ರಸ್ತಾಪಗಳಿವೆ.

ರಂಗಪ್ರಯೋಗಕ್ಕೆ ಅನುಕೂಲಕರವಾಗಿ ಕಮ್ಮಟಗಳನ್ನು ಏರ್ಪಡಿಸುವ ಆಲೋಚನೆಗಳಿವೆ. ಉದಾ : ತೆಂಕುತಿಟ್ಟಿನ ಹಿಮ್ಮೇಳ-ಮುಮ್ಮೇಳದ ಸಾಂಗತ್ಯದ ಬಗೆಗಿರುವ ಗೊಂದಲ ನಿವಾರಣೆಯಾಗುವಲ್ಲಿ ಕಮ್ಮಟವೊಂದರ ಅಗತ್ಯವಿದೆ. ಅಂತೆಯೇ ಇಂದಿನ ದಿನಗಳಿಗೆ ಸಂವಾದಿಯೆನಿಸುವ ಪ್ರಯೋಗವಾಗಿ ಮೂಲರೂಪ ಹಾಳು ಮಾಡದೆ ನಾಟಕ, ನೃತ್ಯದೊಂದಿಗೆ ಯಕ್ಷಗಾನವನ್ನಿಟ್ಟು ಇತರೆ ಅಕಾಡೆಮಿಗಳ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಸುವುದು, ಕಲೆಗಳ ಪರಸ್ಪರ ಸಂಬಂಧಗಳನ್ನು ಅರಿಯುವಲ್ಲಿ ಪ್ರಯತ್ನಿಸುವುದು.. ಹೀಗೆ ಅನೌಪಚಾರಿಕವಾಗಿ ಅಧಿಕಾರಿಗಳೊಂದಿಗೆ, ಅಧ್ಯಕ್ಷರುಗಳೊಂದಿಗೆ ಮಾತುಕತೆಗಳಾಗಿವೆ. ಕಾರ್ಯರೂಪಕ್ಕೆ ಬರಬೇಕಷ್ಟೇ.

· ಪ್ರಸ್ತುತ ಯಕ್ಷಗಾನರಂಗವು ನಿಮ್ಮಿಂದ ಅಥವಾ ಅಕಾಡೆಮಿಯಿಂದ ನಿರೀಕ್ಷಿಸುತ್ತಿರುವುದೇನು?

ನಿರೀಕ್ಷೆಯನ್ನು ನಿರ್ಧರಿಸುವುದು ಸುಲಭವೇನಲ್ಲ. ಯಕ್ಷಗಾನ ರಂಗ ಎಂದಾಗ ಅಲ್ಲಿ ಹಲವು ಬಗೆಯ ಹಾದಿಗಳಿವೆ. ಉದಾಹರಣೆಗೆ : ಮೊದಲನೆಯದಾಗಿ ವೃತ್ತಿಕಲಾವಿದರು ಇದ್ದಾರೆ. ಅವರ ನಿರೀಕ್ಷೆ ಮಾಸಾಶನ, ವೈದ್ಯಕೀಯ ನೆರವು ಮುಂತಾಗಿ ಧನಸಹಾಯ, ಸಾಮಾಜಿಕ ಮನ್ನಣೆಯ ನಿರೀಕ್ಷೆಯಲ್ಲಿ ಹಿರಿಯ ಕಲಾವಿದರಿಗೆ ಪ್ರಶಸ್ತಿ ಕೊಡುವುದು. ಅದೇ ಹವ್ಯಾಸಿಗಳಾದರೆ ಅವರ ನಿರೀಕ್ಷೆಗಳು ಹಮ್ಮಿಕೊಳ್ಳುವ ವಿವಿಧ ಬಗೆಯ ಯೋಜನೆ, ವಿಚಾರಸಂಕಿರಣ, ಕಮ್ಮಟ, ವಿಶೇಷ ಕಾರ್ಯಕ್ರಮಗಳಿಗೆ ಧನಸಹಾಯ. ಇನ್ನು ಯಕ್ಷಗಾನವನ್ನು ಅಧ್ಯಯನ, ಶಿಕ್ಷಣದ ವಸ್ತುವಾಗಿ ನೋಡುವ ಸಂಶೋಧಕರು, ವಿದ್ವಾಂಸರ ಅಗತ್ಯ ನಿರೀಕ್ಷೆಯೆಂದರೆ ಫೆಲೋಷಿಪ್, ಪ್ರಾಜೆಕ್ಟ್‌ಗಳಿಗೆ ಸಹಕಾರ ನೀಡುವುದು ಮತ್ತು ಗ್ರಾಂಥಿಕವಾದ ವಿಚಾರಗಳು ಬರುವಂತೆ ನೋಡಿಕೊಳ್ಳುವುದು. ಇದರೊಂದಿಗೆ ಪ್ರಯೋಗಶೀಲರಿಗೆ ಪ್ರೋತ್ಸಾಹ ನೀಡುವುದೂ ಮುಖ್ಯ ಜವಾಬ್ದಾರಿ.

ಅಷ್ಟೇ ಅಲ್ಲ; ನಮ್ಮ ರಾಜ್ಯದಲ್ಲಿ ಯಕ್ಷಗಾನಕ್ಕೆ ತಿಟ್ಟುಗಳನುಸಾರವಾಗಿ ಸಾಕಷ್ಟು ಕಲಿಕಾ ಕೇಂದ್ರಗಳಿವೆ. ಪರಂಪರೆ ವಿಭಿನ್ನವಾಗಿರುವುದರಿಂದ ಕಲಿಕಾ ಕ್ರಮಗಳಲ್ಲಿ ಎಲ್ಲರಿಗೂ ಸರಿಯಾದ ಒಮ್ಮತ ಇಲ್ಲ. ಈ ಗೊಂದಲ ನಿವಾರಣೆಯಾಗಬೇಕಾದ ನಿಟ್ಟಿನಲ್ಲಿ ಯೋಚನೆ ಮಾಡಲಾಗಿದ್ದು ಸಮಾನರೂಪದ ಸಮನ್ವಯ ಶಿಕ್ಷಣ ಕ್ರಮ ಮೂಡಿಬರಬೇಕಾಗಿದೆ.

ಮೊದಲು ಯಕ್ಷಗಾನ ಜಾನಪದ ಅಕಾಡೆಮಿಯೊಂದಿಗೆ ವಿಲೀನವಾಗಿದ್ದಾಗ ವಿಸ್ತಾರವುಳ್ಳ ಈ ಕಲೆಗೆ ಪ್ರತ್ಯೇಕ ಅಕಾಡೆಮಿಯ ಅವಶ್ಯಕತೆಯ ಕೂಗು ಕೇಳಿಬಂದು ಸರ್ಕಾರ ಯಕ್ಷಗಾನ ಅಕಾಡೆಮಿ ಎಂದು ರಚಿಸಿದ್ದೇನೋ ಹೌದು. ಆದರೆ ಉತ್ತರ ಕರ್ನಾಟಕದವರ ಬೇಡಿಕೆಯ ಔಚಿತ್ಯವನ್ನು ಮನಗಂಡು ಈ ಕಲಾಪ್ರಕಾರದೊಳಗೆ ಹೊಂದುವ ಮೂಡಲಪಾಯ-ಪಡುವಲಪಾಯ ಬಯಲಾಟಗಳು, ಶ್ರೀಕೃಷ್ಣ ಪಾರಿಜಾತ, ಘಟ್ಟದಕೋರೆ, ತೊಗಲು ಗೊಂಬೆ..ಹೀಗೆ ಎಲ್ಲವನ್ನೂ ಸೇರಿಸಿ ಯಕ್ಷಗಾನ ಬಯಲಾಟ ಅಕಾಡೆಮಿಯನ್ನಾಗಿಸಲಾಯಿತು. ಹಾಗಾಗಿ ಅವರಿಗೂ ಧನಸಹಾಯ ಆಗಬೇಕು. ಅಲ್ಲಿನ ವಿದ್ವಾಂಸರ ಸಂಶೋಧನೆಗಳು ಕಲಾವಿದರ ಹಂತಕ್ಕೆ ಇನ್ನೂ ಮುಟ್ಟಿಲ್ಲವಾದ್ದರಿಂದ ಎಲ್ಲಾ ಹಂತದಲ್ಲೂ ಅವರ ಸ್ಥಿತಿಯನ್ನು ಮೇಲ್ದರ್ಜೆಗೇರಿಸಲು ಆರ್ಥಿಕ ಸಹಾಯದ ನಿರೀಕ್ಷೆ ಅವರಿಂದ ಹೆಚ್ಚಾಗಿದೆ.

· ಈ ನಿರೀಕ್ಷೆಗಳನ್ನು ಎಷ್ಟರಮಟ್ಟಿಗೆ ಪೂರ್ಣಗೊಳಿಸಲು ಸಾಧ್ಯವಿದೆ?

ನಿರೀಕ್ಷೆ ಒಂದೇ ಅಲ್ಲವಾದ್ದರಿಂದ ಎಲ್ಲವನ್ನೂ ಗಮನಿಸಿ ಎಷ್ಟೆಷ್ಟು ಪ್ರಾಧಾನ್ಯತೆ ಕೊಡಬೇಕು ಎಂದು ಆಲೋಚಿಸಬೇಕು. ಪೂರ್ಣ ಪ್ರಮಾಣದಲ್ಲಿ ಎಲ್ಲವೂ ಒಮ್ಮೆಗೆ ಸಾಧ್ಯವಾಗಲಿಕ್ಕಿಲ್ಲ. ಅದಕ್ಕೆ ಆರ್ಥಿಕ ಮಿತಿಯೂ ಇದೆ. ಕಲೆಯೊಳಗಿನ ಹಾದಿಗಳ ಅನಿವಾರ್ಯತೆ, ತತ್‌ಕ್ಷಣದ ಅಗತ್ಯ ಅರಿತು ಪ್ರೋತ್ಸಾಹಿಸಬೇಕು. ಯಾವ ಕಲಾಪ್ರಕಾರ ದುಸ್ಥಿತಿ ಅಥವಾ ಕ್ಷೀಣದಲ್ಲಿದೆ, ಯಾವುದಕ್ಕೆ ಹೆಚ್ಚು ಪರಿಷ್ಕಾರ ಬೇಕಿದೆ ಎಂಬುದನ್ನು ನೋಡಿಕೊಂಡು ಈ ನಿಟ್ಟಿನಲ್ಲಿ ಸಂಬಂಧಿಸಿದಲ್ಲಿಗೆ ತೆರಳಿ ಸಮಾಲೋಚನೆ ನಡೆಸಿ ಕಾರ್ಯ ಕೈಗೊಳ್ಳಬೇಕು. ಅದರಲ್ಲೂ ವಾರ್ಷಿಕವಾಗಿ ಸರ್ಕಾರದಿಂದ ಅಕಾಡೆಮಿಗೆ ತಲಾ ೨ ಕಂತುಗಳಲ್ಲಿ ಎಂಬಂತೆ ಒದಗುವುದು ಕೇವಲ ೪೦ ಲಕ್ಷ. ರಿಜಿಸ್ಟ್ರಾರ್ ಅವರ ಸಂಬಳವನ್ನೊಂದು ಹೊರತುಪಡಿಸಿದಂತೆ ಉಳಿದೆಲ್ಲಾ ಯೋಜನಾ ವೆಚ್ಚ, ಯೋಜನೇತರ ಖರ್ಚುಗಳನ್ನು ಈ ಮೊತ್ತದ ವ್ಯಾಪ್ತಿಯಲ್ಲಿಯೇ ವಿಭಾಗಿಸಿಕೊಳ್ಳಬೇಕು.

· ಯಕ್ಷಗಾನಕ್ಕೆ ಸಮಾನರೂಪದ ಸಮನ್ವಯ ಶಿಕ್ಷಣದ ಹಂತ ಎಲ್ಲಿವರೆಗೆ ತಲುಪಿದೆ? ಮುಂದಿನ ಹಂತಗಳು ಯಾವ ಮಟ್ಟದಲ್ಲಿವೆ?

ಸಮಾನರೂಪದ ಶಿಕ್ಷಣಕ್ಕೆ ಮೊದಲು ಯಕ್ಷಗಾನಕ್ಕೊಂದು ಪಠ್ಯಪುಸ್ತಕ ನಿರ್ಮಾಣ ಮಾಡುವುದು ಮುಖ್ಯ. ಅದರ ಬಗ್ಗೆಯೂ ಹಲವು ಗೊಂದಲಗಳು ಸಾಕಷ್ಟು ಮಂದಿಯಲ್ಲಿವೆ. ಇದನ್ನು ಶಾಲಾ ಶಿಕ್ಷಣದಲ್ಲಿ ಅಳವಡಿಸುವುದು ಅಷ್ಟೊಂದು ಸುಲಭದ್ದಲ್ಲ. ಆದರೂ ಶಾಲಾಶಿಕ್ಷಣಕ್ಕೆ ಪರ್ಯಾಯವಾಗಿ ಈಗಾಗಲೇ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳೀ ಏರ್ಪಡಿಸುವ ಸಂಗೀತ, ನೃತ್ಯ ಪರೀಕ್ಷೆಗಳ ಮಾದರಿಯಂತೆಯೇ ಯಕ್ಷಗಾನಕ್ಕೂ ಪರೀಕ್ಷಾಹಾದಿ ಕಲ್ಪಿಸುವ ಕಾರ್ಯಗಳು ಸುಮಾರು ಶೇ.೭೦ ಮುಗಿದಿವೆ.ಇದರಿಂದ ಯಕ್ಷಗಾನ ಎಷ್ಟು ಉದ್ಧಾರ ಆಗುತ್ತದೆ ಎಂಬುದು ಜಿಜ್ಞಾಸೆಯೂ ಇದೆ. ಕಲೆಗೆ ಎಷ್ಟು ಲಾಭವಾಯ್ತು ಎಂದು ಸಿನಿಕತನ, ವ್ಯಂಗ್ಯದಿಂದ ಕಾಣುವುದಕ್ಕೆ ಸಾಧ್ಯವಿದೆ. ಕಲೆಯೊಳಗಿನ ಎಷ್ಟೋ ಸಂಗತಿಗಳಿಗೆ ವ್ಯಾಖ್ಯಾನ ಕೊಡುವುದಾದಲ್ಲಿ ಅದಕ್ಕೂ ತೊಡಕುಗಳಿವೆ. ಆದರೆ ಏನೇ ವಾದಗಳಿದ್ದರೂ ಹೀಗೆ ಪರೀಕ್ಷಾಹಾದಿ ಕಲ್ಪಿಸುವುದರಿಂದ ಯಕ್ಷಗಾನವೂ ಉಳಿದೆಲ್ಲಾ ಕಲೆಗಳಂತೆ ಸಾಧಾರಣೀಕರಣವಾಗಿ, ಸಾಮಾಜಿಕ ಪ್ರತಿಷ್ಟೆ – ಪ್ರಮಾಣ ಒದಗಿ ಹಲವಾರು ಒಳ್ಳೆಯ ವಿಷಯ ಸಾಧಿಸಬಹುದು. ಯಕ್ಷಗಾನದ ಶಾಸ್ತ್ರೀಯ ಮನ್ನಣೆ, ರೂಪುರೇಷೆಗೆ ಈ ದಾಖಲೆ ಬಹಳ ಮುಖ್ಯ.

ಇನ್ನೇನು ಪ್ರಾಥಮಿಕ, ಮಾಧ್ಯಮಿಕ ಹಂತದ ಪಠ್ಯ ತಯಾರಿಕೆ ಪೂರ್ಣಗೊಳ್ಳುವ ಹಂತದಲ್ಲಿದೆ. ಪಠ್ಯಪುಸ್ತಕದ ವಿಷಯಗಳ ಕುರಿತಂತೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಸಾಕಷ್ಟು ಪರಿಹರಿಸಿಕೊಳ್ಳುವ ಕಾರ್ಯವೂ ಆಗಿದೆ. ಈ ಪಠ್ಯ ತಯಾರಿಕೆಯ ಮೊದಲ ಹಂತ ೨ ವರ್ಷಗಳ ಹಿಂದೆ ಸುಳ್ಯದಲ್ಲಿ ೨ ದಿನದ ಕಾರ್ಯಾಗಾರರೂಪದಲ್ಲಿ ಕಲಾವಿದರು, ವಿಮರ್ಶಕರು, ಸಂಘಟಕರು, ಶಿಕ್ಷಕರು, ಹವ್ಯಾಸಿಗಳು ಕೂಡುವಿಕೆಯಲ್ಲಿ ಜರುಗಿತ್ತು. ಯಕ್ಷಗಾನದ ಯಾವ್ಯಾವ ಅಂಶಗಳನ್ನು ಯಾವ್ಯಾವ ಹಂತಕ್ಕೆ ವಿಭಾಗಿಸಬೇಕು ಎಂದು ನಿರ್ಧರಿಸಿ ಸರ್ಕಾರದ ಮೂಲಕವಾಗಿ ಶಿಕ್ಷಣ ಮಂಡಳಿಗೆ ಸೂಚನೆಗಳನ್ನಿತ್ತು ಅಧಿಕೃತವಾಗಿ ಪರೀಕ್ಷಾ ಸಮಿತಿ ನಿಯಮಿಸಲ್ಪಟ್ಟಾಗಿದೆ. ಇನ್ನು ಪಠ್ಯಪುಸ್ತಕದ ಕರಡು ಪ್ರತಿ ಪ್ರಿಂಟ್ ಮಾಡಿ ಪುನಾ ತಜ್ಞರಿಗೆ ತೋರಿಸಿ ಪ್ರಕಟಿಸಿ ಪರೀಕ್ಷೆಗಳನ್ನು ಜಾರಿಗೆ ತರಬೇಕಾಗಿದೆ. ವಿದ್ವತ್ತು ಪರೀಕ್ಷೆಗೆ ಬೇಕಾದ ಪಠ್ಯ ಮಾಡಿಸುವುದು ಇನ್ನೂ ಸಮಿತಿಯ ಹಂತಕ್ಕೆ ಬಂದಿಲ್ಲ. ಅದು ನನ್ನ ಅವಧಿಯ ಕರ್ತವ್ಯಗಳಲ್ಲೊಂದು.

· ಯಕ್ಷಗಾನವನ್ನು ಉಳಿದ ಪ್ರದರ್ಶಕ ನೃತ್ಯಕಲೆಗಳ ಸಾಲಿಗೆ ಸಮಾನವಾಗಿ ಶಾಸ್ತ್ರೀಯ ಮನ್ನಣೆಯ ಮುದ್ರೆ ಕೊಡಿಸುವ ಪ್ರಯತ್ನವೇನಾದರೂ ಇದೆಯೇ?

ಯಕ್ಷಗಾನಕ್ಕೆ ಶಾಸ್ತ್ರೀಯ ಮುದ್ರೆ ಕೊಡಬೇಕೇನೋ ಹೌದು. ಆದರೆ ಎಷ್ಟು ಕೊಡಬೇಕು ಎಂಬುದು ಚಿಂತನೆಯ ವಿಷಯ. ಯಕ್ಷಗಾನ ಜನಪದ ಕಲೆ ಎನ್ನುವವರಿರುವಾಗಲೇ ಶಾಸ್ತ್ರೀಯವೂ ಹೌದು ಎಂಬ ವಾದವೂ ಬಲಿಷ್ಟವಾಗ್ತಾ ಇದೆ. ಕಲೆಯ ದೃಷ್ಟಿಯಿಂದ ಈ ವಿಭಾಗೀಕರಣ ಅಗತ್ಯವಲ್ಲ. ಆದರೆ ಸರ್ಕಾರದ ಅನುದಾನ, ಸಹಾಯ ಧನ, ಸಮ್ಮೇಳನ ಸಮಾರಂಭಗಳಲ್ಲಿ ಸ್ಥಾನಮಾನ ಪಡೆಯಲು, ವ್ಯವಸ್ಥೆ-ಭದ್ರತೆಗಾಗಿ ಶಾಸ್ತ್ರೀಯತೆಯೆಂಬ ಚೌಕಟ್ಟನ್ನು ನಿರೀಕ್ಷಿಸಲಾಗುತ್ತದೆ. ಹಾಗೆಂದು ಯಕ್ಷಗಾನವನ್ನು ಶಾಸ್ತ್ರೀಯ ಎನ್ನಲು ಹೊರಟರೂ ತೊಂದರೆಗಳಿವೆ; ಅಂತೆಯೇ ಜನಪದ ಎಂದಾಗ ಪ್ರಯೋಜನಗಳೂ ಇವೆ. ನನ್ನ ಅಭಿಪ್ರಾಯ ಒಂದೇ. ಯಕ್ಷಗಾನದಲ್ಲಿ ಶಾಸ್ತ್ರೀಯ ಶಿಸ್ತು ಇದೆ; ಅಂತೆಯೇ ಜನಪದ ಸ್ವಾತಂತ್ರ್ಯವೂ ಇದೆ. ಈ ಬಗೆಯ ವೈಶಿಷ್ಟ್ಯ ಬೇರಾವುದೇ ಕಲೆಯಲ್ಲೂ ಇಲ್ಲ. ಶಾಸ್ತ್ರೀಯ ಮನ್ನಣೆಯ ಮುದ್ರೆಗಿಂತಲೂ ಆ ನೆಲೆಗಟ್ಟಿನ ಮರ್ಯಾದೆ ಪಡೆದ ಕಲೆಗಳಿಗಿರುವ ಮನ್ನಣೆಯನ್ನು ಯಕ್ಷಗಾನಕ್ಕೆ ಒದಗಿಸಬೇಕು.

Leave a Reply

*

code