Author: ಪವನ ರಾಮಚಂದ್ರ, ಮೈಸೂರು.
ಮೈಸೂರನ್ನು ಅನ್ವರ್ಥವಾಗಿ ಹೊಂದಿದ ಅನೇಕ ವಿಶೇಷತೆಗಳಿವೆ. ಅವುಗಳಲ್ಲಿ ಮೈಸೂರು ಶೈಲಿಯ ಭರತನಾಟ್ಯವೂ ಒಂದು. ಸುಕುಮಾರಪ್ರಧಾನವಾಗಿ ಹಾವ-ಭಾವಗಳ ಅಭಿನಯಕ್ಕೆ ಹೆಸರಾದ ಈ ಶೈಲಿಯಲ್ಲಿ ಜಗತ್ತಿನಾದ್ಯಂತ ಖ್ಯಾತರಾದವರು ದಿವಂಗತ ಪದ್ಮಭೂಷಣ ಡಾ|| ಕೆ. ವೆಂಕಟಲಕ್ಷಮ್ಮನವರು. ಇವರ ನೇರ ಶಿಷ್ಯರೂ, ಗುರುವಿನಿಂದ ಬಂದ ವಿದ್ಯೆಯನ್ನು ಚಾಚೂ ತಪ್ಪದೆ ರೂಢಿಸಿಕೊಂಡು ಪಾಠಮಾಡುವ ಮೂಲಕ ಅನೇಕ ಶಿಷ್ಯರನ್ನು ನಾಡಿಗೆ ನೀಡಿದವರು ‘ಕರ್ನಾಟಕ ಕಲಾಶ್ರೀ’ ಶ್ರೀಮತಿ ಕೃಷ್ಣವೇಣಿಯವರು.
ನೃತ್ಯದ ಜೊತೆಗೆ ಸಂಗೀತದಲ್ಲೂ ಪಾಂಡಿತ್ಯವನ್ನು ಹೊಂದಿದ್ದಷ್ಟೇ ಅಲ್ಲದೆ ‘ಗರುಡಗಮನ ಶ್ರೀಕೃಷ್ಣ’ ಎಂಬ ಅಂಕಿತ ನಾಮದಿಂದ ಹಲವಾರು ಭಕ್ತಿಗೀತೆಗಳನ್ನು ರಚಿಸಿದ ಪರಮ ಭಕ್ತೆ. ಇಂತಹ ಆದರ್ಶಪ್ರಾಯ ಜೀವನವನ್ನು ಹಲವು ವರ್ಷಗಳ ಕಾಲ ಹತ್ತಿರದಿಂದ ನೋಡುವ ಭಾಗ್ಯ ಅವರ ಶಿಷ್ಯನಾಗಿ ನನಗೆ ದೊರಕಿದ್ದು ನನ್ನ ಭಾಗ್ಯ. ಎಂತಹ ಸಂದರ್ಭದಲ್ಲೂ ಶಿಷ್ಯರಲ್ಲೆಂದೂ ಭೇದವೆಣಿಸದೆ ಪಾಠವನ್ನು ಕಲಿಸುತ್ತಿದ್ದ ಅಪರೂಪದ ಗುರುಗಳಲ್ಲಿ ಇವರೂ ಒಬ್ಬರು ಎಂದು ಸ್ಪಷ್ಟವಾಗಿ ಹೇಳಬಲ್ಲೆ. ತಮ್ಮ ಪತಿ ಹಾಗೂ ಕುಟುಂಬದ ಪ್ರೋತ್ಸಾಹದಿಂದ ಭರತನಾಟ್ಯ ಕ್ಷೇತ್ರದಲ್ಲಿ ಸುಮಾರು ೫೮ ವರ್ಷಕ್ಕೂ ಮಿಗಿಲಾಗಿ ನಿರಂತರ ಪಾಠವನ್ನು ನಡೆಸಿ ಅನೇಕ ಶಿಷ್ಯರನ್ನು ತರಬೇತುಗೊಳಿಸುವ ಮೂಲಕ ಕಲಾಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗೆ ಅವರಿಗೆ ಸಂದ ಗೌರವಾದರಗಳು ಕಡಿಮೆಯೆಂದೇ ಹೇಳಬೇಕು. ಆದರೆ ಅದನ್ನೆಲ್ಲ ಎಂದೂ ನಿರೀಕ್ಷಿಸದ ನಿಸ್ಪೃಹ ಮನಸ್ಸಿನ ಮೇರು ವ್ಯಕ್ತಿತ್ವದವರು ನನ್ನ ಗುರುಗಳು. ಇಂತಹ ಸದ್ಗುಣ ಸಂಪನ್ನರಾದ ಇವರು ಇಹಲೋಕಹ ವ್ಯವಹಾರಗಳೆಲ್ಲವನ್ನೂ ಅಂತ್ಯಗೊಳಿಸಿ ಹರಿಸ್ಮರಣೆ ಮಾಡುತ್ತಾ ತಮ್ಮ ಇಷ್ಟದೇವನಾದ ಶ್ರೀಕೃಷ್ಣನಲ್ಲಿ ಲೀನವಾದರು. ತನ್ಮೂಲಕ ಶುದ್ಧವಾದ ಮೈಸೂರು ಶೈಲಿಯ ಒಂದು ಕೊಂಡಿ ಕಳಚಿದ್ದು ಮಾತ್ರ ಕಲಾಪ್ರಪಂಚಕ್ಕೆ ತುಂಬಲಾರದ ನಷ್ಟ. ಅವರು ತೋರಿಸಿಕೊಟ್ಟ ಆದರ್ಶಪ್ರಾಯ ಜೀವನದ ದಾರಿಯಲ್ಲಿ ನಾವು ಸಾಗುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ.