Author: ಮನೋರಮಾ. ಬಿ.ಎನ್
ಅವರ ಭೌತಿಕ ಅಸ್ತಿತ್ವ ಇನ್ನಿಲ್ಲ ಎನ್ನುವುದನ್ನು ಅರಗಿಸಿಕೊಳ್ಳುವುದು ಕಷ್ಟವಾಗಿತ್ತು. ಅನಾರೋಗ್ಯ ಇಷ್ಟೊಂದು ಬೇಗ ಆಪೋಷನ ತೆಗೆದುಕೊಳ್ಳಬಹುದು ಎಂಬ ಕಲ್ಪನೆಯೂ ಇರಲಿಲ್ಲ. ಕಳೆದ ವಾರವಷ್ಟೇ ಪೋನಾಯಿಸಿ ಕ್ಷೇಮ ಸಮಾಚಾರಕ್ಕಾಗಿ ವಿಚಾರಿಸಿದವಳಿಗೆ ಒಂದರ್ಥದಲ್ಲಿ ‘ಶಾಕ್’ ಹೊಡೆದಿತ್ತು. ಇಂದಿಗೂ ಹಿರಿಯ ‘ಕೊರ್ಗಿ’ ಅಸ್ತಂಗತವಾದ ಕೊರಗು ಹಾಗೆಯೇ ಇದೆ.
ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯರು- ದ್ವಿವೇದಿ, ಕಲಾವಿದ, ಉಭಯ ಭಾಷಾ ಸಿದ್ಧಾಂತಿ, ಯಕ್ಷಗಾನ ಅರ್ಥವಾದಿ, ಪ್ರಸಂಗಕರ್ತ, ಸಾಹಿತಿ, ವಿಮರ್ಶಕ, ಶಿಕ್ಷಕ, ವೇದ ವ್ಯಾಖ್ಯಾನಕಾರ, ಪಂಡಿತ, ವಿದ್ವಾಂಸ.. ಎಂಬುದಕ್ಕಷ್ಟೇ ಅವರು ಸೀಮಿತವಾಗಿರಲಿಲ್ಲ. ಈ ಮೇಲಿನ ಬ್ರಾಂಡ್, ಕ್ಲೀಷೆಗಳಿಂದಾಚೆಗೆ ನೋಡಿದರೂ ಅವರದ್ದು ವ್ಯವಸ್ಥಿತ ಪಾಂಡಿತ್ಯ, ಅದಕ್ಕೊದಗುವಂತೆ ಸತ್ಯ-ನ್ಯಾಯದ ವಿಷಯಕ್ಕೆ ಬಂದರೆ ರಾಜಿ ಮಾಡಿಕೊಳ್ಳದ ಖಚಿತ ಅಭಿವ್ಯಕ್ತಿ. ವೃತ್ತಿಯಲ್ಲಿಯೂ ಅಷ್ಟೇ. ಜೀವನಕ್ಕೆ ತತ್ವಾರ ಎಂದಾಗಲೂ ಆತ್ಮಸಾಕ್ಷಿ ಪರಿಶುದ್ಧವಾಗಿಟ್ಟು ನಿವೃತ್ತಿ ಪಡೆದವರು. ಬಹುಷಃ ಆ ಗುಣ ವಿದ್ವಾಂಸರೆಂಬ ಹಮ್ಮು ಇಲ್ಲದೆ, ಬದುಕನ್ನು ಬಂದಂತೆ ಸ್ವೀಕರಿಸಿ, ಎಲ್ಲಿಯೂ ನಿಲ್ಲದೆ ನಡೆಯುತ್ತಾ, ಹೋರಾಟದಲ್ಲೇ ಬದುಕು ಕಟ್ಟಿಕೊಂಡ ಅವರ ತಂದೆಯ ಶಿಸ್ತಿನ ಬಳುವಳಿಯಾಗಿ ಬಂದಿರಬೇಕು. ತೀಕ್ಷ್ಣ ಕಣ್ಣುಗಳಂತೆಯೇ ತೀಕ್ಷ್ಣ ಪ್ರತಿಭೆ. ‘ತಂದೆಗೆ ತಕ್ಕ ಮಗ’. ಬದುಕಬಂಧನದಲ್ಲಿ ತಾವರೆ ಎಲೆಯ ಮೇಲಿನ ಹನಿಯ ವ್ಯಕ್ತಿತ್ವ. ಇಲ್ಲದಿದ್ದರೆ ಉಸಿರ ಮೇಲಣ ಆಸೆಯೇ ಇಲ್ಲದಂತೆ ಶಸ್ತ್ರಚಿಕಿತ್ಸೆಯ ತಾಪತ್ರಯವೇ ಬೇಡವೆಂದು ಹಾಗೆಯೇ ಹೋಗಿಬಿಡುವುದೆಂದರೆ !!! ಪರಮಾರ್ಥದತ್ತ ದಿಟ್ಟಿಯಿಟ್ಟಿದ್ದರೇನೋ!
ಕೆಲವೇ ಅಕ್ಷರಗಳಲ್ಲಿ ಹಿರಿಯ ಸಾರವನ್ನೇ ಕುಡಿಸುವ ಮೇಧಾವಿ ಎಂದರೆ ಬಹುಷಃ ಎಂದಿನ ಮಾತಾದೀತು. ದಿವಾಕರ ಹೆಗಡೆಯವರು ಅಂದೊಮ್ಮೆ ಹೇಳಿದ ಮಾತು ನನಗಿನ್ನೂ ನೆನಪಿದೆ‘ಅವರ ಬರೆಹ ಒಂದು ಫಜಲ್ ಇದ್ದ ಹಾಗೆ. ಮೇಲ್ನೋಟಕ್ಕೆ ಒಂದು ವಿಷಯವೆಂದು ಕಂಡರೂ ಅದರೊಳಗೆ ನುಸುಳಿಕೊಳ್ಳುವ ಅರ್ಥಗರ್ಭಿತ ಪಂಚ್. ಅಷ್ಟು ಸುಲಭಕ್ಕೆ ಅರ್ಥವಾಗುವುದಿಲ್ಲ. ಹಾಗೆಂದು ಅರ್ಥೈಸಿಕೊಳ್ಳಲು ಕಷ್ಟ ಎನ್ನುವ ಹಾಗೂ ಇಲ್ಲ. ’. ಕೃತಿ ಮಾತ್ರವಲ್ಲ, ಮಾತು ಅಷ್ಟೇ ! ಬಹುಷಃ ಅದಕ್ಕೆ ಪೂರಕವೆಂಬಂತೆ ಅವರ ಪುಸ್ತಕಗಳ ಪೈಕಿ ನನಗೆ ಸರಿಯಾಗಿ ಓದಲು ದೊರಕಿದ್ದು ‘ಅಕ್ಷರ ಯಕ್ಷಗಾನ’ವೊಂದೇ. ಬಿಡಿಬಿಡಿಯಾದ ಬರಹಗಳಲ್ಲಿಯೂ ಅವರು ನೀಡುವ ಸಾಂದ್ರತೆ, ಚಿಂತನೆ, ವಿಮರ್ಶೆ ಅಸಾಧಾರಣ. ವೇದ, ನ್ಯಾಯ, ವೇದಾಂತ, ವ್ಯಾಕರಣ, ಛಂದಸ್ಸು, ಅಲಂಕಾರ, ಶಾಸ್ತ್ರ, ಪುರಾಣ, ಸಂಸ್ಕೃತಿಯ ವ್ಯಾಖ್ಯಾನದಲ್ಲಿ ಅವರ ವಿದ್ವತ್ತು ನಮಗೆ ಬಾನಂಗಣದ ನಕ್ಷತ್ರ ಎನ್ನಲೂ ಅಡ್ಡಿಯಿಲ್ಲ.
ನಿಂತಲ್ಲೇ ಛಂದೋಬದ್ಧ ಕವಿತೆ ರಚಿಸಬಲ್ಲ, ನಿದ್ರೆಯೊಳಗೂ ಯಾರೇನೇ ಕೇಳಿದರೂ ಖಚಿತವಾಗಿ ಉತ್ತರಿಸಬಲ್ಲ ಅವರಿಗೆ ‘ಪಾಠ ಮಾಡುವುದು’ ಬಹಳ ಇಷ್ಟದ ಕೆಲಸ. ಗುರುವಾಗಿ ಅವರ ಗಟ್ಟಿತನ, ವ್ಯವಸ್ಥಿತ ಮಾರ್ಗದರ್ಶನ, ಪಂಡಿತವಲಯದೊಳಗಿದ್ದೂ ಸಾಮಾನ್ಯರೊಂದಿಗೆ ಸಾಮಾನ್ಯರಾಗಿಯೇ ಬೆರೆಯುತ್ತಿದ್ದ, ಹೊಸ ಚಿಂತನೆಗಳಿಗೆ-ಅರ್ಥಕ್ಕೆ ಮುಕ್ತವಾಗಿ ತೆರೆದುಕೊಳ್ಳುತ್ತಿದ್ದ ಅವರ ‘ಗುರುತ್ವ’ಕ್ಕೆ ಈಗಿನ ಖ್ಯಾತನಾಮರಾದ ಅನೇಕ ಯಕ್ಷಗಾನ ಕಲಾವಿದರನ್ನೂ ಒಳಗೊಂಡಂತೆ ಎಷ್ಟು ಮಂದಿ ಅವರ ಶಿಷ್ಯರಾಗಿದ್ದಾರೋ..ಅವರಿಗೇ ಗೊತ್ತು. ಅವರ ಪೈಕಿ ನನಗೂ ಒಂದಷ್ಟು ಕಲಿಯಲು ಅವಕಾಶ ಸಿಕ್ಕಿದೆ ಎಂಬುದೇ ನನ್ನ ಹೆಮ್ಮೆ.
೪ ತಿಂಗಳ ಹಿಂದಿನ ಮಾತು. ನೂಪುರ ಭ್ರಮರಿಯ ಹೆಸರಿನಲ್ಲಿ ಟ್ರಸ್ಟ್ಗೆ ಸೂಕ್ತ ನಾಮನಿರ್ದೇಶನ ಮಾಡಲು ಅವರನ್ನು ಕೇಳೋಣವೆಂದಿದ್ದೆ. ಅದಾಗಲೇ ‘ಮಂದ್ರ’ದ ನಾಟಕಾವೃತ್ತಿಯಲ್ಲಿ ಜೊತೆಯಾದ ಅವರ ತಮ್ಮ ಶಂಕರನಾರಾಯಣರಲ್ಲಿ ಮಾತನಾಡುತ್ತಾ ಪ್ರಸ್ತಾಪ ಇಟ್ಟು ಆ ಕುರಿತು ಮನಸೋಯಿಚ್ಛೆ ಹರಟಿದ್ದೆ. ‘ನಿಮ್ಮ ಅಣ್ಣನಿಗೆ ಪೋನಾಯಿಸಿ ಹೆಸರು ಸೂಚಿಸಿ ಎಂದು ಕೇಳಲೂ ಭಯ. ಬಯ್ಯುತ್ತಾರೆ ಎಂದಲ್ಲ. ಒಮ್ಮೆ ಪ್ರಶ್ನೆ ಹಾಕಿತೆಂದರೆ ನಾವು ಬಿಟ್ಟರೂ ಅದಕ್ಕೆ ಸೂಕ್ತ ಪರಿಹಾರ, ಉತ್ತರ ದೊರೆಯುವವರೆಗೂ ಅವರು ಬಿಡುವವರಲ್ಲ. ತಲೆಗೆ ತುಂಬಾ ಹಚ್ಚಿಕೊಂಡು ಚಿಂತಿಸುತ್ತಾರೆ. ’.
ಹೌದು. ಸದಾ ಮಾಹಿತಿ ವಿನಿಮಯಕ್ಕೆ ಒದಗುವ ಅವರಲ್ಲಿ ಯಾರು ಏನೇ ಕೇಳಿದರೂ ಅದು ತನಗೆ ಸಂಬಂಧಿಸಿದ ವಿಷಯವೆನ್ನುವರ ಮಟ್ಟಿಗಿನ ಕಾಳಜಿ. ತಿಳಿದುದನ್ನು ಹಂಚಬೇಕೆಂಬ ಹಪಹಪಿಕೆ. ವಿಪರ್ಯಾಸವೆಂದರೆ ಅವರ ಆರೋಗ್ಯದ ಬಗೆಗೇ ಕಾಳಜಿ ಕಡಿಮೆ ! ಬಹುಷಃ ವೇದಾಂತ, ಕರ್ಮ ಸಿದ್ಧಾಂತದ ಒಳಸುಳುಹುಗಳು ಅವರಿಗೆ ಸಿದ್ಧಿಸಿರುವ ಸಾಧಕರು ಹೀಗೆಯೇ ಇರುತ್ತಾರೇನೋ!!
‘ಮುದ್ರಾರ್ಣವ’ಕ್ಕೆ ನುಡಿಗನ್ನಡಿ ಬರೆಯುವ ಹಂತದಲ್ಲಿ ಉಜಿರೆ ಅಶೋಕ ಭಟ್ಟರು ಅವರ ಬಳಿ ಕರೆತಂದು ಕರಡು ಪ್ರತಿಯನ್ನು ಕೊಟ್ಟಾಗ ಅವರ ನಿಶ್ಚಿತ, ನೇರ ನುಡಿಯ ಬಗ್ಗೆ ಮೊದಲೇ ತಿಳಿದಿದ್ದ ನನಗೆ ಸ್ವಲ್ಪ ಹೆದರಿಕೆಯಾಗಿದ್ದೇನೋ ಹೌದು. ಆದರೆ ಕೇವಲ ಮುನ್ನುಡಿ ಬರೆಯುವುದು ಮಾತ್ರವಲ್ಲದೆ ಅದು ಪ್ರಕಟವಾಗುವವರೆಗೂ ಅದರಲ್ಲಿನ ತಪ್ಪು-ಒಪ್ಪುಗಳು, ಸಂಸ್ಕೃತ-ಕನ್ನಡದ ಅಪಭ್ರಂಶಗಳ ಸಮಸ್ಯೆಗಳು, ವಾಕ್ಯ-ವ್ಯಾಖ್ಯಾನ, ಅಧ್ಯಾಯಗಳಿಗೆ ಇಡುವ ಹೆಸರು, ಅನುಕ್ರಮಣಿಕೆ..ಹೀಗೆ ಪ್ರತೀ ಹಂತದಲ್ಲೂ ಅವರಿಂದ ನಾನು ಹೇಳಿಸಿಕೊಂಡಾಗ ನಾನು ಕಂಡದ್ದು ಎಂದೆಂದಿಗೂ ಪ್ರದರ್ಶನಕ್ಕಿಡದ ಅವರ ಮುಕ್ತ ನಡವಳಿಕೆ. ಅಷ್ಟೇ ಏಕೆ..ನೃತ್ಯ, ನಾಟ್ಯ ಎಂದೆಲ್ಲಾ ಚರ್ವಿತ ಚರ್ವಣದ ಶೀರ್ಷಿಕೆ ಹಾಕುವ ಅಪಾಯದ ನಡುವೆ ಮುದ್ರಾರ್ಣವ, ನೃತ್ಯ ಮಾರ್ಗ ಮುಕುರ ಎಂಬ ಇಡೀ ವಿಷಯದ ಸಾರವನ್ನೊಳಗೊಂಡ ಶೀರ್ಷಿಕೆಯನ್ನಿತ್ತು ಚೆಂದಗೊಳಿಸಿದವರೂ ಅವರೇ! ಅಷ್ಟೇ ಏಕೆ, ಮೊದಲಿನಿಂದಲೂ ಭರತನಾಟ್ಯಕ್ಕೆ ಸಂಬಂಧಿಸಿದ ಕನ್ನಡ ಪುಸ್ತಕಗಳಲ್ಲಿ ಹಸ್ತ-ಮುದ್ರೆಯ ಬಗೆಗೆ ಇದ್ದ ಎಲ್ಲಾ ಸಂಸ್ಕೃತ ವಾಕ್ಯಗಳ ಲೋಪವನ್ನು ಮುದ್ರಾರ್ಣವದಲ್ಲಿ ಪುನರಾವೃತ್ತಿ ಆಗದಂತೆ ತಿದ್ದಿ ಸರಿಮಾಡಿ ಉಪಕರಿಸಿದವರೂ ಅವರೇ! ನೃತ್ಯ ಮಾರ್ಗ ಮುಕುರಕ್ಕೆ ಸಮನಾಗಿ ೧೦ ಬಗೆಯ ಶೀರ್ಷಿಕೆಗಳನ್ನಿತ್ತು, ಇಂಚಿಂಚೂ ಓದಿ ಒಂದೊಂದು ಅಕ್ಷರಕ್ಕೆ ಪ್ರತಿಕ್ರಿಯಿಸಿದವರೂ ಅವರೇ! ಬಹುಷಃ ಈ ನಿಟ್ಟಿನಲ್ಲಿ ರವಷ್ಟಾದರೂ ಸಂಸ್ಕೃತ-ಕನ್ನಡದ ಪ್ರಜ್ಞೆ ನನಗೊದಗಿದ್ದರೆ ಅದು ಅವರಿಂದಲೇ ಸೈ!
ಸಾಮಾನ್ಯವಾಗಿ ಅವರನ್ನು ‘ನಿಷ್ಠುರವಾದಿ’ ಎಂದು ಬಯ್ದುಕೊಂಡವರೇ ಹೆಚ್ಚು. ಆದರೆ ಕೊರ್ಗಿ ಅವರು ಬಯ್ಯುವುದನ್ನು ಕೇಳುವುದೂ ಒಂದು ಚೆಂದವೇ ಎಂಬುದು ಬಹಳ ಮಂದಿಗೆ ಗೊತ್ತಿಲ್ಲ. ಅವರ ಬಳಿ ಪ್ರಶ್ನೋತ್ತರದ ಮಾತುಗಳು ಬಂದಾಗಲೆಲ್ಲ್ಲಾ ಅವರಿಂದ ಎಷ್ಟು ಸಲ ಬಯ್ಯಿಸಿಕೊಂಡಿದ್ದೇನೋ..ಬಹುಷಃ ಅವರು ಪುನಾ ಫೀನಿಕ್ಸ್ನಂತೆ ಎದ್ದು ಬರುವುದಾದರೆ ಮೇಲಿನ ಪ್ಯಾರಗಳಲ್ಲಿ ಅವರ ಬಗ್ಗೆ ಹೊಗಳಿದ್ದೇನೆ ಎಂದೇ ತರಾಟೆಗೆ ತೆಗೆದುಕೊಂಡಾರು ! ಕೃತ್ರಿಮದ ಸೋಂಕಿರದ ವಿದ್ವತ್, ನಿಷ್ಠುರ ನ್ಯಾಯವನ್ನು ಬಯಸುತ್ತದೆ ಎಂಬುದು ಬಹಳ ಮಂದಿಗೆ ತಿಳಿದೇ ಇರುವುದಿಲ್ಲ ಎಂಬುದೂ ವಿಪರ್ಯಾಸ!!
ನಾನು ಅವರನ್ನು ಬಹಳ ಸಮೀಪವರ್ತಿಯಾಗಿ ಕಂಡವಳಲ್ಲ. ಬಹಳ ಹೊತ್ತು ಮುಖಾಮುಖಿಯಾಗಿ ಮಾತನಾಡಿದವಳೂ ಅಲ್ಲ. ಆದರೆ ಅವರಿದ್ದಷ್ಟು ದಿನವು ಅವರೇನೆಂದು ಕಂಡುಕೊಳ್ಳುವಲ್ಲಿ ಒಂದಷ್ಟು ಅವಕಾಶ ಸಿಕ್ಕಿದೆ. ರಾಷ್ಟ್ರೋತ್ಥಾನ ಆವರಣದ ಯಕ್ಷಗಾನ ತಾಳಮದ್ದಳೆಯಲ್ಲಿ ನೋಡಿದ ನೆನಪು, ನನ್ನನ್ನು ಮಾತಿಗೆಳೆದು ಹಿರಿಯಣ್ಣನಂತೆ ಮಾತಾಡಿಸಿದ ಆಪ್ಯಾಯಮಾನತೆ ಇನ್ನೂ ಮಾಸಿಲ್ಲ. ಮುದ್ರಾರ್ಣವಕ್ಕೆ ವರುಷವೆರಡರ ಹಿಂದೆ ‘ನುಡಿಗನ್ನಡಿ’ ಬರೆದವರಿಗೆ ‘ನುಡಿನಮನ’ವನ್ನೂ, ಅಧ್ಯಾಯಗಳಿಗೆ ‘ಅಂಜಲಿ’ಯೆಂದು ಹೆಸರಿತ್ತವರಿಗೆ ‘ಅಂಜಲಿ’ ಅರ್ಪಿಸಬೇಕಾಗಿ ಬಂದದ್ದು ನಿಜಕ್ಕೂ ನನ್ನ ದೌರ್ಭಾಗ್ಯ.
ಅವರ ತಮ್ಮ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ಹೇಳುವಂತೆ ‘ಹೃದಯ ಸಂಬಂಧೀ ತೊಂದರೆಗಳಿಂದ ಬಳಲುತ್ತಿದ್ದ ಅಣ್ಣ ಕಳೆದ ಹತ್ತು ವರ್ಷಗಳಿಂದ ಬದುಕಿದ್ದು ಔಷಧ ಬಲದಿಂದ ಅಲ್ಲ, ಮನೋಬಲದಿಂದ. ’ ಅನಾರೋಗ್ಯ ಇದ್ದರೂ ರಾತ್ರಿ ಒಬ್ಬರೇ ದೂರದೂರಿಗೆ ಸಂಚಾರ ಮಾಡುತ್ತಿದ್ದ ಉಪಾಧ್ಯಾಯರು ಅದೇಕೋ ೩ ತಿಂಗಳ ಹಿಂದೆ ಕಾರ್ಯಕ್ರಮವೊಂದಕ್ಕೆ ಹೋದವರು ಜಡಿಮಳೆಗೆ ನೆನೆದದ್ದೇ ನೆವವಾಯಿತು. ತರುವಾಯ ಶ್ವಾಸಕೋಶದಲ್ಲಿ ನೀರು ತುಂಬಿ ಸೋಂಕಾಗಿದೆ ಎಂದು ಹಿಡಿಹಿಡಿ ಆಂಟಿ ಬಯಾಟಿಕ್ ಔಷಧ ತಿಂದು ಕಷ್ಟ ಪಡುವಾಗಲೂ ಸುಮ್ಮನಿರಲಿಲ್ಲ. ಯಕ್ಷಗಾನ ಪ್ರಸಂಗ, ದೇವತಾವಿಧಿ, ಪ್ರಯಾಣ, ಉಪನ್ಯಾಸದ ಬಗ್ಗೆ ಯೋಚಿಸಿಕೊಂಡೇ ಎಲ್ಲರನ್ನು ಸುಮ್ಮಗಾಗಿಸಿ ಹಠ ಕಟ್ಟಿ ತೆರಳುವವರು. ಅವರ ಉಸಿರು ಇನ್ನೂ ಒಂದಷ್ಟು ಘಳಿಗೆಗಳಿದ್ದು, ತ್ರಾಣವಿದ್ದರೆ ಅವರು ಬರುತ್ತೇನೆಂದ ಕಟೀಲಿನ ತಾಳಮದ್ದಳೆ ಸಪ್ತಾಹದ ಕೌಶಿಕ ಚರಿತ್ರೆಯಲ್ಲಿ ಯಾರೇನೆ ಹೇಳಿದರೂ ವಿಶ್ವಾಸದಿಂದ ತೆರಳಿ ವಿಶ್ವಾಮಿತ್ರನಾಗಿರುತ್ತಿದ್ದರು.
ಬಹುಷಃ ಇಷ್ಟು ವರುಷ ತಮ್ಮ ಅನಾರೋಗ್ಯದ ನಡುವೆಯೂ ಇದ್ದು ಅಸ್ತಿತ್ವವನ್ನು ಕಾಣಿಸಿದ್ದಾರೆಂದರೆ ಅದು ನಮಗಿತ್ತ ‘ಬೋನಸ್ಸಾ’?
ಅವರ ಪೌರೋಹಿತ್ಯದ ‘ದೀಪ ನಮಸ್ಕಾರ’ವನ್ನು ನೋಡುವ ಭಾಗ್ಯ ಬರಲೇ ಇಲ್ಲ. ‘ಪ್ರಜ್ಞಾ ದೀಪ್ತಿ’ಯಲ್ಲೀಗ ದೀಪವಿಲ್ಲ. ಬೀರಿದ ಬೆಳಕು ಮಾತ್ರ ಇದೆ; ಅದೂ ನಮ್ಮ ನಮ್ಮ ಪ್ರಜ್ಞೆ.ಗೆ ಬಂದಷ್ಟು ಮಾತ್ರ.
********************
ಜನನ : ೧೯೫೨ರ ಜುಲೈ.
ಮೂಲಮನೆ: ಕುಂದಾಪುರ ತಾಲೂಕಿನ ಕೊರ್ಗಿ.
ನಿಧನ : ಸೆಪ್ಟೆಂಬರ್ ೧೨, ೨೦೧೧
ತಂದೆ: ಸಂಸ್ಕೃತ ಪಂಡಿತ ಸೂರ್ಯ ನಾರಾಯಣ ಉಪಾಧ್ಯಾಯ
ತಾಯಿ : ಕಲ್ಯಾಣಿ
ಸಹೋದರ : ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಸೀತಾರಾಮ ಉಪಾಧ್ಯಾಯ
ಪತ್ನಿ : ಕಮಲಾಕ್ಷಿ
ಪುತ್ರಿಯರು : ಲಲಿತಾ, ಪಯಸ್ವಿನಿ, ಮಂಗಳಮನಸ್ವಿನಿ
ವಾಸಸ್ಥಳ : ಪ್ರಜ್ಞಾದೀಪ್ತಿ, ಕಟೀಲು.
ವೃತ್ತಿ : ೧೯೭೫ರಿಂದ ಕಟೀಲು ಪ್ರೌಢಶಾಲೆಯಲ್ಲಿ ಕನ್ನಡ, ಸಂಸ್ಕೃತ ಶಿಕ್ಷಕರಾಗಿ ಶಿಕ್ಷಕರಾಗಿ ವೃತ್ತಿ ಜೀವನ. ನಂತರ ಸ್ವಯಂನಿವೃತ್ತಿ. ಪೌರೋಹಿತ್ಯ, ಯಕ್ಷಗಾನ ತಾಳಮದ್ದಳೆ ಮತ್ತು ವಿಚಾರಸಂಕಿರಣಗಳಲ್ಲಿ ತೊಡಗಿಸಿಕೊಳ್ಳುವಿಕೆ, ಸ್ವಂತ ಪ್ರಕಾಶನ ಸಂಸ್ಥೆ ‘ಪ್ರಜ್ಞಾದೀಪ್ತಿ’ಯಿಂದ ಹಲವು ಕೃತಿ ಪ್ರಕಟಣೆ.
ರಚಿತ ಕೃತಿಗಳು : ಶ್ರೀ ರಾಮಪಟ್ಟಾಭಿಷೇಕಂ ಮತ್ತು ವಾತಾಪೇ ಜೀರ್ಣೋಭವವೆಂಬ ಸಂಸ್ಕೃತ ಯಕ್ಷಗಾನಗಳು, ಶ್ರೀ ಲಕ್ಷ್ಮೀನಾರಾಯಣ ಹೃದಯ, ಅಷ್ಟದ್ರವ್ಯ ಗಣಪತಿ ಹವನ ವಿಧಿ, ಪಂಚದುರ್ಗಾದೀಪ ನಮಸ್ಕಾರ ವಿಧಿಃ, ಪಂಚಪ್ರಪಂಚ, ಮೂರರ ಮಹಿಮೆ, ಬ್ರಹ್ಮಕಲಶ ವಿಧಿಃ, ಅಕ್ಷರ ಯಕ್ಷಗಾನ..ಇತ್ಯಾದಿ ಮತ್ತು ಮಂತ್ರಗಳ ಒಂಭತ್ತು ಧ್ವನಿಸುರುಳಿಗಳು.
ಸಂಕ್ಷಿಪ್ತ ಪರಿಚಯ : ೧೦ನೇ ವರ್ಷದಲ್ಲಿ ಯಕ್ಷಗಾನ ವೇಷಧಾರಿಯಾಗಿ ರಂಗಸ್ಥಳವೇರಿ ೧೪ನೇ ವಯಸ್ಸಿಗೇ ತಾಳಮದ್ದಲೆ ಅರ್ಥಧಾರಿಯಾಗಿ ಬೆಳೆದವರು. ತೆಂಕು- ಬಡಗಿನ ಯಕ್ಷಗಾನ ನಾಟ್ಯದಲ್ಲಿ ಪಳಗಿದ್ದರು. ಶೇಣಿ, ಸಾಮಗ, ಪೆರ್ಲರಂತಹ ಹಿರಿಯರಿಗೆ ಸಮಾನವಾಗಿ ಸಾವಿರಾರು ತಾಳಮದ್ದಲೆ ಕೂಟಗಳಲ್ಲಿ ಅರ್ಥದಾರಿಯಾಗಿ ಮೆರೆದು, ಕಟೀಲಿನಲ್ಲಿ ಭ್ರಾಮರೀ ಯಕ್ಷಗಾನ ಮಂಡಳಿಯ ಸ್ಥಾಪಕರಾಗಿ, ಪ್ರೌಢ ಶಾಲೆಯ ಮಕ್ಕಳ ಯಕ್ಷಗಾನ ತಂಡವನ್ನು ರಾಜ್ಯಾದ್ಯಂತ ತಿರುಗಾಡಿಸಿದ್ದರು. ವಾಲಿವಧೆಯ ರಾಮ, ವಾಮನ ಚರಿತ್ರೆಯ ಶುಕ್ರಾಚಾರ್ಯ, ಕರ್ಮಬಂಧದ ಕೃಷ್ಣ, ಸುಭದ್ರಾ ಕಲ್ಯಾಣದ ಅರ್ಜುನ ಸನ್ಯಾಸಿ ಮುಂತಾದ ಪಾತ್ರಗಳಲ್ಲಿ ಅವರಿಗೇ ಅವರೇ ಮಾದರಿ. ಪುರೋಹಿತರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದ ಉಪಾಧ್ಯಾಯರು ಅನೇಕ ದೇಗುಲಗಳ ಬ್ರಹ್ಮಕಲಶ ಮುಂತಾದ ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು. ಆಕಾಶವಾಣಿ, ದೂರದರ್ಶನಗಳಲ್ಲಿ ಅವರ ಅನೇಕ ಉಪನ್ಯಾಸ, ಚಿಂತನ ಕಾರ್ಯಕ್ರಮಗಳು ಬಿತ್ತರಗೊಂಡಿವೆ.
ಪ್ರಶಸ್ತಿ-ಸಮ್ಮಾನಗಳು: ಉಡುಪಿ ಪೇಜಾವರ ಮಠದ ಶ್ರೀರಾಮ ವಿಠಲ ಪ್ರಶಸ್ತಿ, ಯಕ್ಷಲಹರಿ ಇತ್ಯಾದಿ.
***************
ಉಪಾಧ್ಯಾಯರು ಓದಿದ್ದು ಬರೀ ೨ನೇ ಕ್ಲಾಸು !!!
ದ್ವಿವೇದಿ, ವಿದ್ವಾಂಸ, ಪಂಡಿತ ಎಂದಾಗಿ ನಾಮವಿಶೇಷಣಗಳಿಗೆಲ್ಲಾ ಭಾಜನರಾದ ಉಪಾಧ್ಯಾಯರ ಶಾಲಾ ಶಿಕ್ಷಣ ಕೇವಲ ೨ನೇ ತರಗತಿ ಎಂದರೆ ನಂಬುತ್ತೀರಾ?ಶೃಂಗೇರಿ, ಉಡುಪಿಯಲ್ಲಿ ವೇದಾಧ್ಯಯನ ನಡೆಸಿ ೧೯೭೫ರಲ್ಲಿ ನವೀನ ನ್ಯಾಯ ವಿದ್ವತ್ ಬಳಿಕ ಕನ್ನಡ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದು ಶಿಕ್ಷಕರಾದ ಉಪಾಧ್ಯಾಯರು ೨ನೇ ತರಗತಿಯನ್ನೂ ಪಾಸಾದವರಲ್ಲ ಎಂಬುದು ಅಚ್ಚರಿಯಾದರೂ ಸತ್ಯ. ಅದೊಂದು ಸ್ವಾರಸ್ಯಕರ ವಿಚಾರ. ಅವರ ತಂದೆ ಸೂರ್ಯನಾರಾಯಣ ಪಂಡಿತರದ್ದು ಶಿಸ್ತಿನ ಜೀವನ. ವೇದಾದಿ ಕ್ರಮಗಳ ಪ್ರಕಾರವೇ ಬದುಕು. ಈಜು ಮತ್ತು ಆಗಿನ ಕಾಲಕ್ಕೆ ‘ಪ್ರೆಸ್ಟೀಜ್’ ಆಗಿದ್ದ ಸೈಕಲ್ ಕಲಿಕೆ ಕಡ್ಡಾಯ. ಹಾಗಾಗಿ ೪-೫ ವರ್ಷಕ್ಕೆಲ್ಲಾ ಮಕ್ಕಳನ್ನು ಹೊಳೆಪಕ್ಕಕ್ಕೆ ಕಳಿಸುತ್ತಿದ್ದರು. ಅದೂ ಒಬ್ಬಂಟಿಯಾಗಿ. ಎಷ್ಟು ಶಿಸ್ತೆಂದರೆ ಬೆಳಗ್ಗೆ ೪ಗಂಟೆಗೆಲ್ಲಾ ಮಕ್ಕಳು ಎದ್ದು ‘ಕರಾಗ್ರೇ ವಸತೇ’ ಯಿಂದ ಮೊದಲ್ಗೊಂಡು ಎಲ್ಲಾ ಬಗೆಯ ಸ್ತ್ರೋತ್ರ, ಶ್ಲೋಕ, ಸಂವತ್ಸರ-ನಕ್ಷತ್ರ-ಮಾಸಾದಿ ವಿಶೇಷಗಳನ್ನು ಹೇಳಬೇಕು. ಪಂಚಾಂಗಶ್ರವಣ ಮಾಡಿಸಬೇಕು. ಪುನಾ ಸಂಜೆ ಯಥಾಪ್ರಕಾರ. ಇವೆಲ್ಲವೂ ಪಂಡಿತರು ಎಲ್ಲೇ ಕೆಲಸ ಮಾಡುತ್ತಿದ್ದರೂ ಅವರ ಕಿವಿಗೆ ಬೀಳುವಂತೆ ಕಂಠೋಕ್ತವಾಗಿ ಬರಬೇಕು. ಒಂದು ಅಲ್ಪಪ್ರಾಣ, ಮಹಾಪ್ರಾಣ ವ್ಯತ್ಯಾಸವಾದರೂ ವಿನಾಯ್ತಿ ಇರಲಿಲ್ಲ. ಒಂದೆರಡು ಸಲ ಸರಿ ಮಾಡಿಕೊಳ್ಳಲು ಅವಕಾಶ. ಇಲ್ಲವೇ ಮಕ್ಕಳಿಂದಲೇ ತರಿಸಿಕೊಂಡ ಹುಣಸೆ ಬರಲು, ಬೆತ್ತದ ರುಚಿ ಸರಿಯಾಗಿಯೇ ತೊಡೆಗೆ ಬೀಳುತ್ತಿತ್ತು. ಮನೆಪಾಠದಲ್ಲಾದ ವ್ಯತ್ಯಾಸಗಳಿಗೇ ಹೊಡೆತ ಎಂದಾದಮೇಲೆ ಮಕ್ಕಳಿಗೆ ಬೇರೆ ಕುಬುದ್ಧಿಯಾದರೂ ಎಲ್ಲಿಂದ ಹೊಳೆಯಲು ಸಾಧ್ಯ?
ಹೀಗೆ.. ೩ ವರ್ಷ ಪ್ರಾಯದಿಂದಲೇ ಮಕ್ಕಳಿಗೆ ಪಾಠ ಶುರು. ಉಪನಯನ ಆಗದ ಹೊರತು ವೇದಾಭ್ಯಾಸ ಕೂಡದು ಎಂಬ ನಿಯಮಕ್ಕಾಗಿ ವೇದಮಂತ್ರದ ಪಾಠವಾಗಲಿಲ್ಲ ಅಷ್ಟೇ. ಅದನ್ನೊಂದು ಬಿಟ್ಟು, ಉಪಾಧ್ಯಾಯರ ಉಪನಯನದ ಹೊತ್ತಿಗೆ (ಹಳೆಯ ಕ್ರಮದಲ್ಲಿ ಏಳೂವರೆ ವರ್ಷಕ್ಕೆ ಉಪನಯನ)ಎಲ್ಲಾ ಬಗೆಯ ಪೌರೋಹಿತ್ಯದ ಮಂತ್ರಪಾಠವೂ ಆಗಿತ್ತು!! ಹೀಗಿರಲಾಗಿ ಪಂಡಿತರ ಕುಟುಂಬ ಈಗಿನ ಲಿಂಗನಮಕ್ಕಿ ಅಣೆಕಟ್ಟು ಪ್ರದೇಶದಲ್ಲಿ ಅದರ ಕೆಲಸಕಾರ್ಯಕ್ಕೆ ನಿಯಮಿಸಲಾದ ತಲಕಳಲೆ ಎಂಬ ಗ್ರಾಮ(earth dam) ದಲ್ಲಿ ವಾಸವಾಗಿತ್ತು. ೧೯೬೦ರ ಕಾಲ. ಆಗೆಲ್ಲಾ ಪೌರೋಹಿತ್ಯವೆಂದರೆ ಒಂದರ್ಥದಲ್ಲಿ ಊರೂರು ತಿರುಗುವ ಊಂಛವೃತ್ತಿಯೇ ಸರಿ. ಅಲೆಮಾರಿ ಬದುಕು. ಅಣೆಕಟ್ಟು ಕೆಲಸಗಳು ಆಗತಾನೆ ಪ್ರಾರಂಭವಾಗಿದ್ದವು. ಊರಿನವರೆಲ್ಲಾ ಸೇರಿ ಮಾಡಿದ ರಾಮದೇವಸ್ಥಾನಕ್ಕೆ ತಂದೆ ಸೂರ್ಯನಾರಾಯಣ ಪಂಡಿತರ ಪೌರೋಹಿತ್ಯ. ಜೊತೆಗೊಂದು ‘ಜೀವನೋಪಾಯಕ್ಕೆ ಇರಲಿ’ ಎಂದು ಊರವರೆಲ್ಲಾ ಸೇರಿ ಡ್ಯಾಮ್ಗೆ ಸಂಬಂಧಿಸಿದ ಕಚ್ಚಾವಸ್ತುಗಳ ಕುರಿತಂತೆ ಮೇಲ್ವಿಚಾರಣೆ ನೋಡಿಕೊಳ್ಳುವ ಮೇಸ್ತ್ರಿಯಂತಹ ಕೆಲಸವನ್ನೂ ವಹಿಸಿದ್ದರು.. ಅಂತೂ ೫೦ ವರ್ಷ ಪ್ರಾಯಕ್ಕೆ ಪಂಡಿತರು ಸರ್ಕಾರಿ ಉದ್ಯೋಗಿಯೆನಿಸಿದ್ದರು.
ಆ ಊರಿನಲ್ಲೋಂದು ಶಾಲೆಯೂ ಇತ್ತೆನ್ನಿ. ಎಲ್ಲರ ಒತ್ತಾಯದ ಮೇರೆಗೆ ಮಗನನ್ನು ‘ಆ ವಿದ್ಯಾಭ್ಯಾಸವೂ ಇರಲಿ’ ಎಂದು ಶಾಲೆಗೆ ಸೇರಿಸಿದ್ದಾಯಿತು. ಅದೂ ನೇರ ೨ನೇ ಕ್ಲಾಸಿಗೆ. ಬಾಲಕ ವೆಂಕಟೇಶ್ವರನಿಗೆ ಶಾಲೆಗೆ ಹೋಗುವ ಉಮೇದು. ಬಿಳಿ ಅಂಗಿ, ಖಾಕಿ ಚಡ್ಡಿಯ ಸಮವಸ್ತ್ರದಲ್ಲಿ ಪಾಟಿಚೀಲ ಹಿಡದು ಶಾಲೆಗೆ ಒಂದಷ್ಟು ಸಮಯ ತೆರಳಿಯೂ ಆಯಿತು. ೨ ತಿಂಗಳು ಕಳೆದಿರಬೇಕು. ಎಂದಿನಂತೆ ಶಾಲೆಯಿಂದ ಬಂದ ವೆಂಕಟೇಶ್ವರ ಅಲ್ಲಿನ ಆಗುಹೋಗುಗಳನ್ನು ಭರ್ಜರಿಯಾಗಿಯೇ ವಿವರಿಸಿ ಸಂಜೆಯ ದಿನಚರಿಗೆ ಕೂತ.,ಕ್ರಮಪ್ರಕಾರ ಮಾಸಗಳನ್ನು ಹೇಳಲು ಶುರುವಿಟ್ಟಾಯಿತು. ಚೈತ್ರ, ವೈಶಾಖ,ಜ್ಯೇಷ್ಠ,…ಎಂದೆಲ್ಲಾ ಸಾಗಿ …ಪುಷ್ಯ…ಆಶ್ಲೇಷ…ಬಿತ್ತು ನೋಡಿ ಬರಲಿನ ಬರೆ. ಪಾಪ..ಮಾಣಿ ಮಾಡಿದ ತಪ್ಪು ಇಷ್ಟೇ..ಮಾಸದ ಮುಂದುವರಿಕೆಯಲ್ಲಿ ನಕ್ಷತ್ರಗಳ ಸಾಲು ಆಯಾಚಿತವಾಗಿ ಬಾಯಿಗೆ ಬಂದೇಬಿಟ್ಟದ್ದು. ‘ಶಾಲೆಗೆ ಹೋಗಿ ಕಲಿಯುವುದು ಇದೇಯಾ? ಹೀಗಾಗುವುದಾದರೆ ನಿನಗೆ ಶಾಲೆಯೇ ಬೇಡ..’ಎಂದಿದ್ದರು ತಂದೆ.
ಅಲ್ಲಿಗೆ ಮಗ ವೆಂಕಟೇಶ್ವರನ ೨ನೇ ಕ್ಲಾಸು ಅಧ್ಯಾಯ ಮುಗಿಯಿತು!
***********************
ಉಪಾಧ್ಯಾಯರು ಮಂತ್ರ ಕಲಿತದ್ದು !!!
ವೆಂಕಟೇಶ್ವರ ಉಪಾಧ್ಯಾಯರದ್ದು ಹೂವಿನ ಮೇಲಿನ ನಡಿಗೆಯ ಜೀವನವೇನೂ ಅಲ್ಲ. ಶೃಂಗೇರಿಯಲ್ಲಿ ಓದುವಾಗಲೂ ಊಟ ತಿಂಡಿಗಾಗಿ ಬೆಳಿಗ್ಗೆ ಮನೆಯೊಂದರಲ್ಲಿ ಪೂಜೆ ಮಾಡಿ ಬದುಕು ಸವೆಸಬೇಕಾಗಿತ್ತು. ಹೀಗಿರುವ ಉಪಾಧ್ಯಾಯರ ಮೊದಲ ಮಂತ್ರಪಾಠಗಳು ಅಪ್ಪನ ಮಾರ್ಗದರ್ಶನದಲ್ಲೇ ಆದದ್ದಷ್ಟೇ. ಒಂದು ದಿನ ಪುರುಷಸೂಕ್ತ, ಶ್ರೀಸೂಕ್ತ ಇತ್ಯಾದಿ ಸೂಕ್ತಗಳ ಪಠಣದಲ್ಲಿ ಏನೋ ಒಂದು ವಾಕ್ಯದಲ್ಲಿ ಬಾಲಕನಿಗೆ ತಪ್ಪು ಘಟಿಸಿಹೋಯಿತು. ತಂದೆ ಸೂರ್ಯನಾರಾಯಣರಿಗೆ ಕೋಪ ಎಲ್ಲಿಂದ ಬಂತೋ ಗೊತ್ತಿಲ್ಲ. ‘..ತಪ್ಪು ನುಡಿತೀಯಾ..’ ಬಂದವರೇ ಮಗನ ಕಾಲುಗಳನ್ನು ಹಿಡಿದೆತ್ತಿ ತಿರುಗಿಸಿ ವೆಂಕಟೇಶ್ವರನನ್ನು ಅಕ್ಷರಶಃ ನೆಲಕ್ಕೆ ಬಡಿದರು!!!
ಪಾಪ.. ರಕ್ತ ಸುರಿದು ಆಘಾತವಾದಾಗ ಪುನಃ ಬಂದು ಅಪ್ಪನೇ ಉಪಚರಿಸಿದರೆನ್ನಿ. ಆದರೆ ವೆಂಕಟೇಶ್ವರ ಹೆದರಿ ಸಂಜೆ ಹೊತ್ತಿಗೆ ಯಾವುದೋ ಮನೆಯ ಸೌದೆಮೆಳೆಯೊಳಗೆ ಹೋಗಿ ಕುಳಿತು ಅಲ್ಲಿಯೇ ನಿದ್ರೆ ಮಾಡಿದ್ದ !!! ಹುಡುಕಿ ಹುಡುಕಿ ಸುಸ್ತಾದ ತಂದೆ ಕೊನೆಗೆ ಕಂಡುಹಿಡಿದು ಮನೆಗೆ ಕರೆತಂದ ಮೇಲೂ ವೆಂಕಟೇಶ್ವರನಿಗೆ ಬೆತ್ತಪೂಜೆ ಸರಿಯಾಗಿಯೇ ನಡೆದಿತ್ತು!!
ಸಂಸ್ಕೃತ ಸೂಕ್ತಿಯಂತೆ ೧೬ ವರ್ಷಕ್ಕೆ ಕಾಲಿಟ್ಟ ಮಕ್ಕಳು ಸ್ನೇಹಿತರಂತೆ. ಕ್ರಮವತ್ತಾಗಿ ನಿಯಮ ಪಾಲಿಸಿದ್ದರು ತಂದೆ. ಮಕ್ಕಳು ೧೬ವರ್ಷ ಕ್ಕೆ ಕಾಲಿಟ್ಟಿದ್ದೇ ತಡ ಮನೆಗೆಲಸ, ಯೋಚನೆ, ಯೋಜನೆ, ಮಂಥನ, ಪೌರೋಹಿತ್ಯ, ವಿಮರ್ಶೆಗಳಿಗೆ ಮಕ್ಕಳನ್ನು ಪಾಲುದಾರರಾಗಿಸಿ ವಿಶ್ವಾಸಕ್ಕೆ ತೆಗೆದುಕೊಂಡಾಗಿತ್ತು !!
ಆದ್ದರಿಂದಲೇ ಏನೋ ಅಪ್ಪನ ಕರಾರುವಾಕ್, ಖಚಿತ ಮನಸ್ಸು ಮಗನಲ್ಲಿ ಬಹಳ ಪ್ರಭಾವ ಬೀರಿದೆ.