Author: ಮನೋರಮಾ. ಬಿ.ಎನ್
ಜನನ : ಅಕ್ಟೋಬರ್ ೬, ೧೯೩೮
ಮರಣ : ಫೆಬ್ರವರಿ ೩, ೨೦೦೯
ಕೆರೆಮನೆ ಶಿವರಾಮ ಹೆಗಡೆ ಹಾಗು ಮುಕಾಂಬೆ ದಂಪತಿಯ ಪುತ್ರ
ಪತ್ನಿ ಗೌರಿ, ಮಗ ಶಿವಾನಂದ ಹೆಗಡೆ, ಸೊಸೆ ರಾಜೇಶ್ವರಿ, ಮಗಳು ಶಾರದಾ, ಮೊಮ್ಮಕ್ಕಳು ಶ್ರೀಧರ, ಶಶಿಧರ, ಪ್ರಸನ್ನ
ದೇಶ ವಿದೇಶಗಳಲ್ಲಿ ೫೦೦೦ಕ್ಕೂ ಮಿಕ್ಕಿ ಯಕ್ಷ ಪ್ರದರ್ಶನ
ಪುರುಷ, ಸ್ತ್ರೀ ವೇಷ ಸೇರಿ ೧೭೫ ಪಾತ್ರಗಳ ನಿರ್ವಹಣೆ
ಖ್ಯಾತ ನೃತ್ಯ ಕಲಾವಿದೆ ಮಾಯಾರಾವ್ ಅವರಲ್ಲಿ ಕೊರಿಯೋಗ್ರಫಿಯ ತಂತ್ರಗಳ ಕಲಿಕೆ
ಅರ್ಧ ಚಂದ್ರಾಕೃತಿಯ ರಂಗಮಂಚವನ್ನು ಪರಿಚಯಿಸಿ ಅದರ ಮೇಲೆ ಸಧಬಿರುಚಿಯ ಪ್ರಸಂಗಗಳನ್ನು ಪ್ರದರ್ಶನ.
ಗುಣವಂತೆಯಲ್ಲಿ ತಂದೆ ಶಿವರಾಮ ಹೆಗಡೆ ಹೆಸರಿನಲ್ಲಿ ರಂಗಮದಿರ ಮತ್ತು ಯಕ್ಷ ಶಿಕ್ಷಣ ನೀಡುವ ಶ್ರೀಮಯ ಕಲಾಕೇಂದ್ರ ಸ್ಥಾಪನೆ
***************
ಬೆಳ್ಳಂಬೆಳಗ್ಗೆ ಮೊಬೈಲ್ ಮೆಸೇಜ್ ಕಿರುಗುಟ್ಟಿತ್ತು.
‘ಯಕ್ಷ ರಂಗದ ಅಭಿಜಾತ ಕಲಾವಿದ ಶ್ರೀ ಶಂಭು ಹೆಗಡೆ ಇಡಗುಂಜಿಯ ರಂಗಸ್ಥಳದಲ್ಲಿ ‘ಕುಶ-ಲವ’ದ ರಾಮನ ಪಾತ್ರ ನಿರ್ವಹಿಸುತ್ತಿದಾಗಲೇ ನಿಧನ’
ಒಮ್ಮೆಗೇ ಗರ ಬಡಿದಂತಾಯಿತು. ಪ್ರಖರ ಬೆಳಕೊಂದು ಆರಿಹೋಗಿತ್ತು.
ಎರಡು ದಿನಗಳ ಹಿಂದೆಯಷ್ಟೇ ಸುಳ್ಯದಲ್ಲಿ ಯಕ್ಷಗಾನ ಅಕಾಡೆಮಿಯ ಪ್ರಥಮ ಪ್ರಯತ್ನವಾದ ಯಕ್ಷ ಶಿಕ್ಷಣ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಕ್ಷಣಗಳು ಹಸಿರಾಗಿರುವಾಗಲೇ ಹೀಗೊಂದು ಸುದ್ದಿ!
ಶಾಕ್ ಹೊಡೆದಂತಾಗಿತ್ತು. ಅಂದಿನ ಕಾರ್ಯಕ್ರಮದ ಚಹಾ ವಿರಾಮದ ನಡುವೆ ಅವರು ಪಕ್ಕದಲ್ಲೇ ಸರಿದು ಹೋದದ್ದು ಮತ್ತೆ ನೆನಪಾಯಿತು.
****
ಇಂದು ಯಕ್ಷಗಾನಕ್ಕೆ ಪ್ರತ್ಯೇಕ ಅಕಾಡೆಮಿ ರಚನೆ ಆಗಿದ್ದರೆ ಅದರ ಹಿಂದೆ ಶಂಭು ಹೆಗಡೆಯವರ ಸಾತ್ವಿಕ ಹೋರಾಟದ ಪಾಲು ಇದೆ. ಯಕ್ಷಗಾನಕ್ಕೊಂದು ಅಕಾಡೆಮಿ ಬೇಕು, ಅದರ ಸ್ವರೂಪ ಹೇಗಿರಬೇಕು ಎಂಬುದರ ಬಗ್ಗೆ ಎರಡು ದಶಕಗಳ ಹಿಂದೆಯೇ ಸಮರ್ಥವಾಗಿ ಪ್ರತಿಪಾದಿಸಿದ ಧೀಮಂತ ಮೂರ್ತಿ ಅವರು.
ಯಕ್ಷಗಾನ ಅಕಾಡೆಮಿ ಸ್ಥಾಪನೆಯಾಗಿ ಅದರ ವತಿಯಿಂದ ಹಮ್ಮಿಕೊಂಡ ಮೊದಲ ಕಾರ್ಯಕ್ರಮವೇ ಅವರು ಪಾಲ್ಗೊಂಡ ಕೊನೆಯ ಸಭಾ ಕಾರ್ಯಕ್ರಮವಾಗಿರಬೇಕಾದರೆ ಅಕಾಡೆಮಿ ಕುರಿತಾಗಿ ಅವರಿಟ್ಟುಕೊಂಡಿದ್ದ ಕನಸು ಮತ್ತು ಅವರ ಸಾರ್ಥಕ ಬದುಕಿಗೆ ಬೇರೆ ಸಾಕ್ಷಿ ಬೇಕಿಲ್ಲ ! ಏನು ಸಾಧಿಸಬೇಕೆಂದುಕೊಂಡಿದ್ದರೋ ಅವೆಲ್ಲವನ್ನೂ ಸಾಧಿಸಿ ಹೊರಟಿದ್ದಾರೆ. ಧನ್ಯವಾಗಿದೆ ಬದುಕು.
‘ಕಲಾವಿದನಿಗೆ ಬೇಕಾದ್ದು ಏನು. ವೇಷದಲ್ಲೇ ಕೊನೆಯುಸಿರೆಳೆಯುವುದು. ಅದೇ ಭಾಗ್ಯ’- ಅವರಂದಂತೆಯೇ ಭಗವಂತ ಕರುಣಿಸಿದ್ದಾನೆ. ಎಲ್ಲಾ ಅಸಾಮಾನ್ಯ ಕಲಾವಿದರ ಅಪೇಕ್ಷೆಯೇ ಅದು! ಅವರ ಸೇವೆ ಈ ಕ್ಷೇತ್ರಕ್ಕೆ ಇನ್ನಷ್ಟು ಬೇಕಿತ್ತಾದರೂ, ರಂಗಸ್ಥಳದಲ್ಲಿ ಅಭಿನಯಿಸುವಾಗಲೇ ಹೃದಯಾಘಾತಕ್ಕೆ ಒಳಗಾಗಿ ಅದೂ ತಮ್ಮ ಇಷ್ಟದೇವರ ಸನ್ನಿಧಿಯಲ್ಲೇ ಮೋಕ್ಷ ಕಾಣಬೇಕಾದರೆ ಅವರಿನ್ನೆಂತಹ ಪುಣ್ಯಶಾಲಿಯಾಗಿರಬೇಕು?
ಯಕ್ಷ ಗಾರುಡಿಗನ ‘ಪರ್ವ’ ಮುಗಿದಿದೆ. ಬಣ್ಣ ಹಚ್ಚಿದಾಗಲೇ ಸಾವು ಅವರನ್ನು ತಟ್ಟಿ ಬದುಕನ್ನು ಸಾರ್ಥಕಗೊಳಿಸಿದೆ.
ತೆಂಕುತಿಟ್ಟಿನ ಅಗ್ರಮಾನ್ಯ ಕಲಾವಿದ ಕುರಿಯ ವಿಠಲ ಶಾಸ್ತ್ರಿಗಳು ‘ಬ್ರಹ್ಮ ಕಪಾಲ’ದ ಶಿವನಾಗಿಯೇ ಭೌತಿಕ ದೇಹ ತ್ಯಜಿಸಿದ್ದು ಮತ್ತೊಮ್ಮೆ ನೆನಪಾಯಿತು.
ಯಕ್ಷಗಾನ ಕಲಾವಿದರಿಗೆ ಘನತೆ, ಗೌರವ ಸಂಪಾದಿಸಿಕೊಟ್ಟು, ಕೊನೆಯ ಉಸಿರಿನವರೆಗೂ ರಂಗಸ್ಥಳದ ಚಕ್ರವರ್ತಿಯಂತೆ ಮೆರೆದು, ತೊಟ್ಟ ವೇಷದಲ್ಲೇ ಬದುಕಿನ ಪಾತ್ರ ಮುಗಿಸಿ ಸರಿದ ಅಮರವೆನಿಸುವ ಮುಕ್ತಿ ಸಂಧಾನ..!
ಅರ್ಹ ವಿದಾಯ. ಧೀರೋದಾತ್ತ ಮರಣ.
ಒಬ್ಬ ಕಲಾವಿದನಿಗೆ ಇದಕ್ಕಿಂತ ಒಳ್ಳೆಯ ಮೋಕ್ಷ ಸಿಗಲಾರದು!
****
ಸುಳ್ಯದಲ್ಲಿ ರಾಜ್ಯ ಯಕ್ಷಗಾನ ಅಕಾಡೆಮಿ ಆಯೋಜಿಸಿದ ಕಾರ್ಯಾಗಾರದ ಸಮಾರೋಪ ಸಮಾರಂಭದ ಪ್ರಯುಕ್ತ ಸಭಿಕರನ್ನು ಉದ್ದೇಶಿಸಿ ಮಾಡಿದ ಅವರ ನುಡಿಗಳೇ ಅವರ ಕೊನೆಯ ಭಾಷಣ..ವಸ್ತುವಿನ ಆಯ್ಕೆ, ವಿಭಜನೆ, ಬೆಳೆಸಬಲ್ಲ ಕ್ರಮ, ಅದರ ಭಾವ, ಅನನ್ಯ ಭಾಷೆ, ಜೊತೆಗೊಂದಿಷ್ಟು ರಂಜನೆ..,ಹೀಗೆ ಅವರ ಭಾಷಣ ಅಭಿಮಾನಾಸ್ಪದ… ಯಾರನ್ನೂ ಮೆಚ್ಚಿಸಲು ಹೋಗದೇ, ಅನವಶ್ಯವಾಗಿ ಚುಚ್ಚದೆ. ಅವರ ದುರ್ಲಭವೆಸುವ ಅವರ ಮಾತಿನ ತುಣುಕುಗಳು.ಇದೋ ಅದರ ಮೆಲುಕು…
*ಯಾವುದೇ ನೃತ್ಯ ಪದ್ಧತಿ ನಾಟ್ಯಶಾಸ್ತ್ರಕ್ಕೆ ಅಧೀನ ಆಗಿದೆ ಎಂದಾಕ್ಷಣ ಅದನ್ನು ಶಾಸ್ತ್ರೀಯ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಎಲ್ಲಾ ಪರಿಕರಗಳು ಶಾಸ್ತ್ರದ ವಿಧಾನಗಳಿಗೆ ಹೊಂದಿಕೆಯಾದರೆ ಮಾತ್ರ ಅದು ಶಾಸ್ತ್ರಸ್ಥವೆನಿ ಸಿಕೊಳ್ಳುತ್ತದೆ.
* ಶಾಸ್ತ್ರದ ಶಾಸ್ತ್ರಸ್ಥ ದೋಷವನ್ನು ಪ್ರಶ್ನಿಸಿದಾಗ ‘ಅದು ಸಂಪ್ರದಾಯ’ ಎನ್ನುವ ಪಲಾಯನವಾದವೇ ಎಲ್ಲಾ ಅನಭಿವೃದ್ಧಿಗೆ ಕಾರಣ.
* ಯಾವುದೇ ತಿಟ್ಟು ಅಥವಾ ಪರಂಪರೆಗಳು ಸಾಂಧರ್ಭಿಕವಾಗಿ ಕಾಲಸ್ಥ, ದೇಶಸ್ಥವಾಗಿ ರ್ಮಾಣಗೊಂಡಾಗಲೇ ಅದಕ್ಕೆ ಪ್ರಸ್ತುತತೆ ಹೆಚ್ಚುತ್ತದೆ. ಪ್ರತಿಯೊಂದು ಶೈಲಿಯೂ ಇರುವುದು ತಪಲ್ಲ. ಆದರೆ ಅದು ಆಗಾಗ ಬದಲಾವಣೆಗೊಳ್ಳುವಷ್ಟು ಸುಲಭೀಕೃತ ಆಗಬಾರದು.
*ಯಾವುದೇ ರಂಗಭೂಮಿಯ ಸೈದ್ಧಾಂತಿಕ ದೋಷ ಚರ್ಚಿಸುವಾಗ ಆಪ್ತಸಂವಾದವಷ್ಟೇ ದೋಷಗಳನ್ನು ತಿದ್ದಿಕೊಳ್ಳಲು ಸಹಾಯ ಮಾಡುತ್ತದೆ. ವೇದಿಕೆಯಲ್ಲ್ಲಿ ಚರ್ಚಿಸಹೊರಟರೆ ವ್ಯಕ್ತಿಯ ಹಿನ್ನಲೆ, ಸಂದರ್ಭ, ಗುಣದೋಷಗಳೇ ಚರ್ಚೆಯನ್ನು, ಜನರ ಮನಸ್ಸನ್ನು ಆಕ್ರಮಿಸಿಕೊಳ್ಳುತ್ತದೆ.
* ಪಾತ್ರವೊಂದು ರಂಗಭೂಮಿಗೆ ಬಂದಾಗ ಅದಕ್ಕೆ ಸೌಂದರ್ಯ, ಅನುಕೂಲ, ಸಮರ್ಪಕತೆ ಇರಬೇಕು. ಕೇರಳದವರ ಕಥಕ್ಕಳಿಗೆ ಪ್ರಪಂಚದಾದ್ಯಂತ ವೀಕ್ಷಕರಿದ್ದಾರೆ. ಅವರ ಎಲ್ಲಾ ಮನೋಧರ್ಮ, ಸಂಯೋಜನೆಗಳು, ಕೆಲಸ, ಬಣ್ಣಗಾರಿಕೆ ರಜ, ಸತ್ವ, ತಮ ಎಂಬ ಮೂರು ಗುಣಗಳನ್ನಾಧರಿಸಿ ಬೆಳೆದಿದೆ. ಹೀಗೆ, ಉಳಿದ ಶಾಸ್ತ್ರೀಯ ಕಲೆಗಳು ಕೂಡಾ ! ಆದರೆ ಇವುಗಳಿಗೆಲ್ಲಾ ಇರುವಂತೆ ಯಕ್ಷಗಾನಕ್ಕೆ ಸಮಗ್ರ ಪಠ್ಯ ಇಲ್ಲ. ಏಕರೂಪತೆಯಿಲ್ಲ.
* ತರ್ಕಶುದ್ಧಿ ಕಂಡುಬರುವುದಿಲ್ಲ. ಹಾಗಾಗಿ ಮೊದಲಿನಿಂದಲೂ ವ್ಯಕ್ತಿ, ಮನೆಗೆ ಸೀಮಿತವಾಗಿ, ಅವರವರದ್ದೇ ಶೈಲಿಗಳಾಗಿ ಬೆಳೆದುಕೊಂಡು ನಿಂತಿದೆ. ಆದ್ದರಿಂದ ಯಕ್ಷಗಾನವನ್ನು ಯಾವುದೇ ಹೊರನಾಡಿನಲ್ಲಿ ಪ್ರದರ್ಶಿಸಿದರೂ ಬರುವ ವೀಕ್ಷಕರಲ್ಲಿ ಬಹುಪಾಲು ಕನ್ನಡಿಗರೋ, ಕರಾವಳಿಗರೋ ಆಗಿರುತ್ತಾರೆ. ಪರಕೀಯ ಪ್ರದೇಶದಲ್ಲಿ ಜನರನ್ನು ನಾವು ಆಕರ್ಷಿಸಿದ್ದು ಕಡಿಮೆ. ವಸ್ತುವಿನಲ್ಲಿ ಸ್ಪಷ್ಟತೆ, ತತ್ವಬದ್ಧತೆಯಿಲ್ಲದಿರುವುದೇ ಇದಕ್ಕೆ ಕಾರಣ. ಅಂತರಾಷ್ಟ್ರೀಯ ಮಟ್ಟದಲ್ಲಿ ಯಕ್ಷಗಾನವನ್ನು ಬೆಳೆಸುವಲ್ಲಿ ಇಂತಹ ಸೀಮಿತ ಮನೋಧರ್ಮದಿಂದ ಏನೂ ಪ್ರಯೋಜಬವಿಲ್ಲ.
* ಕಲೆ ವ್ಯವಸಾಯಮುಖಿಯಾಗಿರಬೇಕೇ? ತತ್ವಮುಖಿಯಾಗಿರಬೇಕೆ? ಈ ಆಯ್ಕೆಯ ಪ್ರಶ್ನೆಯಲ್ಲಿ ಯಕ್ಷಗಾನವು ಆರಿಸಿಕೊಂಡದ್ದು ಮೊದಲನೆಯದನ್ನು. ಹೀಗೆ ವೃತ್ತಿಮುಖಿಯಾಗಿರುವುದರಿಂದಲೇ ಅದರ ಅದೇಷ್ಟೋ ಕಲಾತ್ಮಕ ದೃಷ್ಠಿಗಳು ನಾಶವಾಗಿವೆ. ಜನಸೇರುವುದು, ಜನಾವಲಂಬನೆ ರಂಗಭೂಮಿಯ ತಾತ್ವಿಕ ಯಶಸ್ಸಿಗೆ ಕಾರಣವಾಗುವುದಿಲ್ಲ. ಜೊತೆಗೆ ಯಕ್ಷಗಾನದ ಅಭಿವೃದ್ಧಿ ಕೇವಲ ಆರಾಧನೆಯಿಂದ ಸಾಧ್ಯವಿಲ್ಲ. ಸಮರ್ಥ ಅಧ್ಯಯನವಿದ್ದರೆ ಮಾತ್ರ ಬೆಳೆಸಲು ಸಾಧ್ಯ. ರಂಗಭೂಮಿಯ ಉನ್ನತಿಗೆ ವಿಶಾಲತೆ, ಉದಾರತೆ ಬೇಕೇ ವಿನಃ ಆರಾಧನೆಯಿಂದ ಆಗುವುದು ಕಷ್ಟ.
* ಕಲಾವಿದನ ನೈಸರ್ಗಿಕ ಅಭಿವ್ಯಕ್ತಿಗೆ ಒಪ್ಪುವ ಮತ್ತು ನೃತ್ಯದ ಸೊಗಸು ಹೆಚ್ಚುವಂತಹ ವೇಷ ಒಪ್ಪುವಂತಿದ್ದರೆ ಒಳ್ಳೆಯದು. ಆದರೆ ಪರಂಪರೆ, ಸಂಪ್ರದಾಯವೆಂದು ವೇಷಭೂಷಣಗಳನ್ನು ಹೇರಿಕೊಳ್ಳುವುದು ಸಮಂಜಸವಲ್ಲ. ವೇಷಭೂಷಣವನ್ನು ಮನುಷ್ಯ ತೊಡಬೇಕೇ ವಿನಃ ವೇಷಭೂಷಣ ಮನುಷ್ಯನನ್ನು ತೊಡುವುದಲ್ಲ.
* ರಾಷ್ಟ್ರೀಯ ಸಾಂವಿಧಾನಿಕ ನೆಲೆಗಟ್ಟಿನಲ್ಲಿ ಪ್ರತ್ಯೇಕತೆಯನ್ನು ಕಾಣಿಸಿಕೊಳ್ಳಬೇಕು. ಕಲೆಗೆ ಇದು ಮುಖ್ಯ ಮತ್ತು ಅವಶ್ಯಕ.
* ಕಲಾವಿದರ ಆಶೋತ್ತರ, ಉದ್ದಾರಕ್ಕೇ ಅಕಾಡೆಮಿಗಳು ಇರುವುದು ಎಂಬುದು ತಪ್ಪು ಮನೋಭಾವ. ಅದಿರುವುದು ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ. ಸರ್ಕಾರದ ಮಿತಿಯಲ್ಲಿ, ಚೌಕಟ್ಟಿನಲ್ಲಿ ಅಕಾಡೆಮಿಗಳು ಕೆಲಸ ಮಾಡುತ್ತವೆಯೇ ಹೊರತು, ಅದೇ ಎಲ್ಲವನ್ನೂ ಮಾಡಬೇಕು ಅಂದರೆ ಹೇಗೆ? ಅಷ್ಟಕ್ಕೂ ಅಕಾಡೆಮಿಗಳಿಗಿಂತ ಜನರು ಒಪ್ಪಿಕೊಂಡು ಮಾಡಿದ್ದೇ ಹೆಚ್ಚು. ಸರ್ಕಾರ ಒಪ್ಪಿದರೂ, ಇಲ್ಲದಿದ್ದರೂ ಜನರು ಒಪ್ಪಿ ಸ್ವೀಕರಿಸಿದರೆ ಅದಕ್ಕಿಂತ ಒಳ್ಳೆಯ ಮಾನ್ಯತೆ ಮತ್ತಾವುದಿದೆ?
* ಪರಕೀಯರ ಮುಂದೆ ಕರ್ನಾಟಕದ ಮರ್ಯಾದೆ ಉಳಿಸೋ ರಂಗಪ್ರಕಾರವೆಂಬುದಿದ್ದರೆ ಅದು ಯಕ್ಷಗಾನವೇ ಸರಿ! ಯಕ್ಷಗಾನ ಸ್ವತಂತ್ರ ರಂಗಭೂಮಿಯೆಂಬುದರಲ್ಲಿ ಅನುಮಾನವಿಲ್ಲ. ಜೊತೆಗೆ, ತಾತ್ವಿಕ, ಸಾಮೂಹಿಕ, ಸಾಮಾಜಿಕ ಸವಾಲುಗಳು ಇದೆ. ಈ ವರೆಗೆ ಯಾವುದೇ ಸರ್ಟಿಫಿಕೇಟು ಅಥವಾ ಪರೀಕ್ಷೆ ಇಲ್ಲದೇ ಹೋದದ್ದರಿಂದ ಕಲೆ ಬೆಳೀಲಿಲ್ಲ, ಉಳೀಲಿಲ್ಲ ಅಂದರೆ ತಪ್ಪು. ಕಲಾವಿದರ ವಿವೇಚನೆ, ಸತ್ ಸಂಕಲ್ಪ, ಸಮೂಹದ ಆಲೋಚನೆಯಿಂದ ಕಲೆ ಬೆಳೆದಿದೆ. ಮತ್ತು ಮುಂದೆಯೂ ಬೆಳೆಸಬಹುದು.
****
ಹಳ್ಳಿಯಲ್ಲಿಯೇ ಹುಟ್ಟಿ, ಹಳ್ಳಿಯಲ್ಲಿಯೇ ಬೆಳೆದು, ಹಳ್ಳಿಗನಾಗಿಯೇ ಬದುಕಿ, ಕೆರೆಮನೆಯೆಂಬ ಪುಟ್ಟ ಹಳ್ಳಿಯನ್ನು ಜಗದ್ವಿಖ್ಯಾತ ಮಾಡಿದ ಯಕ್ಷ ರಂಗ ಕಂಡ ಸರ್ವೋತ್ಕೃಷ್ಟ ಕಲಾವಿದ ಕೆರೆಮನೆ ಶಂಭು ಹೆಗಡೆ. ಕಲೆಯ ಅಭ್ಯುದಯಕ್ಕೆ ದುಡಿದು, ಜಾಗತಿಕವಾಗಿ ಯಕ್ಷಗಾನವನ್ನು ಪರಿಚಯಿಸದ ಯಕ್ಷ ಲೋಕದ ಸವ್ಯಸಾಚಿ.
ಅವರೊಬ್ಬ ನಟ, ಸಂಘಟಕ ಮಾತ್ರವಲ್ಲ ; ಕಲಾವ್ರತಿ, ಕಲಾ ತತ್ವದ ಪರಿಜ್ಞಾನ, ರಂಗ ಸಾಮರ್ಥ್ಯ, ಸೈದ್ಧಾಂತಿಕ, ಬದ್ಧತೆ, ಪ್ರಯೋಗಶೀಲತೆ, ವಿಮರ್ಷಕ ದೃಷ್ಠಿಕೋನಗಳನ್ನು ಹೊಂದಿದ್ದ ಅಪಾರ ಜೀವನ ಪ್ರೀತಿ ಮತ್ತು ಮಮತೆಯ ಸೆಲೆ. ಕಾರ್ಯಶೀಲ ಚಿಂತಕ. ನೃತ್ಯ , ಮಾತು, ಚಲನೆ, ಅಭಿವ್ಯಕ್ತಿ ಎಲ್ಲದರಲ್ಲೂ ಅವರೊಂದು ಪ್ರತಿಮೆ.
ಪರಂಪರೆಯೊಂದಿಗೆ ಹಲವು ಹೊಸ ಸ್ಪರ್ಶಗಳನ್ನಿತ್ತ, ಯಕ್ಷಗಾನದ ಪರಂಪರೆಯ ಚೌಕಟ್ಟಿನಲ್ಲಿ ಹೊಸ ಪ್ರಯೋಗ ಮಾಡಿ ರಂಗದಲ್ಲಿ ಅನೇಕ ಸುಧಾರಣೆ, ಸೀಮೋಲ್ಲಂಘನ ಮಾಡಿದವರು ಶಂಭು ಹೆಗಡೆ. ಕುರಿಯ ವಿಠಲ ಶಾಸ್ತ್ರಿಗಳಂತೆಯೇ ಯಕ್ಷಗಾನಕ್ಕೆ ನಾಟ್ಯದ ಸಮರ್ಥ ಹೊಂದಾಣಿಕೆ ನೀಡಿದವರು. ‘ನೃತ್ಯ ಬೇಡ’ ಅಂದುಕೊಂಡ ಪಾತ್ರಗಳಿಗೂ ಸಮಯೋಚಿತ ನೃತ್ಯ ಮಾರ್ಗದರ್ಶಿಸಿ ರಂಗ ಸೂಕ್ಷ್ಮಗಳನ್ನು ಅಳವಡಿಸಿದವರು. ತಮ್ಮ ಪರಿಸರ, ಪರಂಪರೆಯಿಂದಷ್ಟೇ ಕಲಿತು ಜೋತು ಬೀಳದೆ, ಅವಲಂಬಿತರಾಗದೆ ಕಲಿತದ್ದನ್ನು ರಂಗವಿಜ್ಞಾನದ ಬೆಳಕಿನಲ್ಲಿ ಸಂಯೋಜನೆ ಮಾಡಿದವರು ಅವg, ಅರ್ಧ ಚಂದ್ರಾಕೃತಿಯ ರಂಗಮಂಚದ ಕಲ್ಪನೆ ಮತ್ತು ಆಯೋಜನೆ ಯಕ್ಷ ಪ್ರದರ್ಶನಕ್ಕೆ ಇಟ್ಟ ಕಳಶ.
ವೃತ್ತಿ ಮೇಳದ ಕಲಾವಿದರಾಗಿ ನಂತರ, ತಂದೆ ೧೯೭೪ ರಲ್ಲಿ ಸ್ಥಾಪಿಸಿದ ಮೇಳವನ್ನು ಪುನಃಸ್ಸಂಘಟನೆ ಮಾಡುವಲ್ಲಿ ಅವರ ಶ್ರಮ ನಿಜಕ್ಕೂ ಇತಿಹಾಸ. ಸ್ಥಾಪಿಸಿದ್ದ ಮೇಳವನ್ನು ಸಂಘಟಿಸಿ ನಿರ್ಮಿಸಿ, ಅಪಾರ ಪ್ರೇಕ್ಷಕವರ್ಗವನ್ನು ಸಂಪಾದಿಸಿಕೊಳ್ಳುತ್ತಾ, ದೇಶ-ಹೊರದೇಶಗಳಲ್ಲೂ ಶುದ್ಧ ಯಕ್ಷಗಾನದ ಪರಿಚಯವನ್ನೀಯುವುದು ಅಷ್ಟು ಸುಲಭದ ಮಾತಲ್ಲ. ಹಾಗಾಗಿಯೇ ಅವರ ಇಡಗುಂಜಿ ಮೇಳ ಯಕ್ಷಗಾನದ ಒಂದು ಚಳುವಳಿ ಇದ್ದಂತೆ.
ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಅದೆಷ್ಟೋ ಪ್ರತಿಭಾನ್ವಿತ, ತೆರೆಮರೆಯ ಕಲಾವಿದರಿಗೆ ಪ್ರೋತ್ಸಾಹ ಕೊಟ್ಟು ಬೆಳಕಿಗೆ ತಂದಿದ್ದರು. ವಾದ-ಭಿನ್ನಾಭಿಪ್ರಾಯ ಹೊಂದಿದವರೊಂದಿಗೂ ಸ್ನೇಹಪರರಾಗಿ ಇದ್ದವರು. ಯಕ್ಷಗಾನದ ತಿಟ್ಟುಗಳ ನಡುವಿನ ಕಂಡೂ ಕಾಣದ ವಾದ-ಜಗಳಗಳಿಗೆ ತಮ್ಮದೇ ನಿಟ್ಟಿನಲ್ಲಿ ಉತ್ತರವನಿತ್ತು ಸೌಹಾರ್ದ ಬೆಸೆದವರು. ಇವರ ಪ್ರಸಂಗ ಪಾತ್ರ ಮತ್ತು ಇಡಗುಂಜಿ ಮೇಳದ ಇತಿಹಾಸದ ಬಗ್ಗೆ ಸಂಶೋಧನಾ ಪ್ರಬಂಧಗಳೂ ರಚಿತವಾಗಿವೆ.
‘ಕಲಾವಿದನಾದವನಿಗೆ ಎಂಥಹ ಜೀವನ ಇರಬೇಕು’ ಎಂದು ಸಾಧಿಸಿ ತೋರಿಸಿದ , ಕಲೆಯ ಎಲ್ಲಾ ವಿಭಾಗಗಳ ಕುರಿತೂ ಚಿಂತನೆ ನಡೆಸಿದ ಸಮತೋಲನ ನಡೆ-ನುಡಿ-ಅಭಿವ್ಯಕ್ತಿಯ ಸಚ್ಚಾರಿತ್ರ್ಯದ ಜೀವ ಅದು. ಅವರಿಗಿದ್ದ ಚಟವೆಂದರೆ ಅದೊಂದೇ- ‘ಕಲೆ’.
ಅವರು ಕರುಣಾರಸದ ಸಿದ್ಧಿ ಪುರುಷ. ಉತ್ಕೃಷ್ಟ ಮಟ್ಟದ ವಿಸ್ತಾರವಾದ ಹರಹುವುಳ್ಳ ಅವರ ಚಿಂತನೆ ಪಾತ್ರಗಳಲ್ಲಿ ಸ್ಪಷ್ಟವಾಗುತ್ತಿತ್ತು. ಅನುಕರಿಸಲೇಬೇಕೆನ್ನುವ ಪಾತ್ರಗಳು ಅವು. ಆದರೆ ಅದಷ್ಟು ಸುಲಭವಲ್ಲ. ಸುಭದ್ರಾ ಕಲ್ಯಾಣದ ಕೃಷ್ಣ, ಚತುರ ರಾಜಕಾರಣಿ ಸಂಧಾನ ಕೃಷ್ಣ, ರಾಮ ನಿರ್ಯಾಣದ ರಾಮ, ಸತ್ಯ ಹರಿಶ್ಚಂದ್ರ, ಕರ್ಣಪರ್ವದ ಕರ್ಣ, ಗಧಾಪರ್ವದ ಕೌರವ, ಬಾಹುಕ, ಸಾಲ್ವ, ಅರ್ಜುನ, ಕಾರ್ತವೀರ್ಯ, ಕೀಚಕ, ಮಾಗಧ…ಹೀಗೆ ಪ್ರತೀ ಪಾತ್ರಕ್ಕೂ ತಮ್ಮದೇ ಛಾಪು ಒತ್ತಿ ಎಷ್ಟೋ ಬಾರಿ ವೇಷ ಹಾಕಿ, ಗೆಜ್ಜೆ ಕಟ್ಟಿದವರು ಈ ಬಾರಿ ಮಾತ್ರ ಗೆಜ್ಜೆ ಕಳಚದೇ ಸ್ಥಬ್ದವಾಗಿದ್ದಾರೆ.
ರಥಸಪ್ತಮಿಯಂದು ನಡೆಯುವ ಇಡಗುಂಜಿ ತೇರಿನಲ್ಲಿ ಕೆರೆಮನೆ ಮೇಳದ ಆಟ ಕಳೆದ ೫ ದಶಕದಿಂದ ಅವಿಚ್ಚಿನ್ನವಾಗಿ ನಡೆದು ಬರುತ್ತಿದೆ. ಈ ಸಂದರ್ಭದಲ್ಲಿ ಶಂಭು ಹೆಗಡೆಯವರು ತಪ್ಪದೇ ಪಾತ್ರ ವಹಿಸುತ್ತಾರೆ. ಹಾಗೆ ನೋಡಿದರೆ, ಶಂಭು ಹೆಗಡೆ ಅವರ ಯಕ್ಷ ಬದುಕಿನ ರಂಗಪ್ರವೇಶವಾದದ್ದು ಇಡಗುಂಜಿಯಲ್ಲೇ! ಮೊದಲು ಯಕ್ಷ ಹೆಜ್ಜೆ ಇಟ್ಟು ಬಂದಲ್ಲೇ ಕೊನೆಯ ಹೆಜ್ಜೆ ಹಾಕಿದ್ದಾರೆ.
ಅವರು ಸಾವನ್ನು ಬರಮಾಡಿಕೊಂಡ ರೀತಿಗೆ ಯಕ್ಷಲೋಕವೇ ಅಚ್ಚರಿಪಟ್ಟಿದೆ.
****
ಅಂದು ರಥಸಪ್ತಮಿ, ದಿನ ಕಳೆದರೆ ಭೀಷ್ಮಾಷ್ಟಮಿ. ಶುಭ ಮುಹೂರ್ತದಲ್ಲಿ ಇಡಗುಂಜಿಯ ಉತ್ಸವ ಬೇರೆ ! ಕಾಕತಾಳೀಯವೋ ಅಥವಾ ಸಾವಿನ ಮುನ್ಸೂಚನೆ ಇತ್ತೋ, ಗೊತ್ತಿಲ್ಲ; ಆದರೆ ಅಂದಿನ ‘ಕುಶ-ಲವ’ ಪ್ರಸಂಗವನ್ನು ದಾಖಲೆಗಾಗಿ ವೀಡಿಯೋ ರೆಕಾರ್ಡಿಂಗ್ ಮಾಡಲು ಹೇಳಿದ್ದರು. ಈ ಕುರಿತು ಭಾಗವತ ನೆಲ್ಲೂರು ನಾರಾಯಣ ಭಾಗವತ ಅವರಲ್ಲಿ ‘ತಮಗೆ ವಯಸ್ಸಾಗಿದೆ, ಇನ್ನೆಷ್ಟು ದಿನ ಕುಣಿತವೋ’ ಎಂದು ಹೇಳಿಕೊಂಡಿದ್ದರೂ ಕೂಡಾ ! ದಾಖಲೆ ಉಳಿಯಿತು. ಹೆಗಡೆ ಅವರಿಂದಿಲ್ಲ.
ಪ್ರಸಂಗದಲ್ಲಿ ಕುಶ-ಲವರೊಂದಿಗಿನ ಪದ್ಯದ ಅರ್ಥಗಾರಿಕೆಗೂ ಅವರ ಮಾತು ಸೂಚ್ಯವಾಗಿತ್ತು. ‘ನಾನು ಬರುವಾಗಲೂ ವೀರನೇ, ಹೋಗುವಾಗಲೂ ವೀರನೇ’ ಎಂದು ಮಾರುತ್ತರ ಕೊಟ್ಟಿದ್ದಾರೆ. ಕೊನೆಗೆ ‘ಏಳಿ ಪೋಗುವ ನಾವು ಮುನಿಪರಿದ್ದೆಡೆಗೆ’ ಎಂದು ಹೇಳುತ್ತಲೇ ಭಾಗವತರಿಗೆ ಬೇಗ ಮುಗಿಸಲು ಸೂಚನೆ ಕೊಟ್ಟು ‘ನಾನು ಬರ್ತೆ’ ಎನ್ನುತ್ತಲೇ ರಂಗದಿಂದ ಚೌಕಿಗೆ ಸರಿದಿದ್ದಾರೆ. ಎಷ್ಟೇ ಆಯಾಸವಿದ್ದರೂ ರಂಗಕ್ಕೆ ಬಂದಾಗ ತಮ್ಮನ್ನೇ ಮರೆತು ನಾಟ್ಯ, ಅರ್ಥಗಾರಿಕೆ, ರಂಗ ಚಲನೆಯಲ್ಲಿ ಮಗ್ನವಾಗಿ ಹೋಗುತ್ತಿದ್ದ ಶಂಭು ಹೆಗಡೆ ತಮ್ಮ ವಿದಾಯವನ್ನು ಸೂಚಿಸುತ್ತಲೇ ನೇಪಥ್ಯಕ್ಕೆ ಸರಿದಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ‘ರಾಮ ನಿರ್ಯಾಣ’ ಪ್ರಸಂಗದಲ್ಲಿ ಕಾಲಪುರುಷನಾಗಿ ಅಭಿನಯಿಸಿದ್ದ ಕುಂಬ್ಳೆ ಸುಂದರ ರಾವ್ ಅವರು ‘ನಿನ್ನ ಕೆಲಸ ಆಯಿತು, ವೇಷ ಕಳಚುವ ಸಮಯ ಬಂದಿದೆ, ನಿನ್ನ ಅವತಾರದ ಉದ್ದೇಶ ಈಡೇರಿದೆ, ಇನ್ನೂ ಯಾಕೆ ಇಲ್ಲಿದ್ದೀ? ಮರಳಿ ಬಾ’ ಎಂದು ಹೇಳಿಕೆ ಕೊಡಿಸಿದ್ದರು. ಅಂದು ಶಂಭು ಹೆಗಡೆ ಅವರದ್ದು ರಾಮನ ಪಾತ್ರ ! ಕಾಲಪುರುಷನ ಪಾತ್ರವಾಡಿದ ಮಾತಿನ ಧ್ವನಿಯನ್ನು ಅಷ್ಟು ಚೆನ್ನಾಗಿ ಅರ್ಥೈಸಿಕೊಂಡು ಕಾಲನ ಕರೆಗೆ ಓಗೊಟ್ಟರೇ?
ಸೀತಾ ವಿಯೋಗ(ಕುಶ-ಲವ ಪ್ರಸಂಗ) ದ ‘ರಾಮ’ನಲ್ಲಿ ಅವರಿಗೆ ಒಲವು ಹೆಚ್ಚು. ಕೊನೆಗೆ ಅದೇ ರಾಮನ ಪಾತ್ರದಲ್ಲೇ ವಿಯೋಗ ! ‘ರಾಮಾವತಾರ’ ಅಲ್ಲಿಗೆ ಮುಗಿದಿದೆ ! ಶೂನ್ಯ ಸೃಷ್ಠಿ.
‘ಓ’ ಎಂದಿದ್ದಾರೆ ಕಾಲ ಪುರುಷನ ಮಾತಿಗೆ. ‘ಏಳಿ ಪೋಗುವ ನಾವ’ ಎನ್ನುತ್ತಲೇ ರಂಗದಿಂದ ನಿರ್ಗಮಿಸಿದ್ದಾರೆ.
ಬಣ್ಣ ಹಚ್ಚಿಕೊಂಡೇ ಬಣ್ಣದ ಬದುಕಿಗೆ ವಿದಾಯ !
ಪರಂಧಾಮಕ್ಕೆ ಸಾಗುವ ಹಾದಿಗೆ ರಾಮನ ಪಾತ್ರಕ್ಕೆ ಬಣ್ಣ ಹಚ್ಚಿಕೊಂಡದ್ದು ಕೂಡಾ ಹಾಗೆಯೇ ಇತ್ತು ! ಅವರು ಹಚ್ಚಿದ ಸೂರ್ಯವಂಶದ ತಿಲಕ ಹಣೆಯಲಿತ್ತು !
July 26th, 2010 at 5:09 pm
He is one of the best actor in Yakshagana. I have seen his programmes from the beginning when the entire family of keremane were with Saligrama Mela. I could not believe that he is no more