Author: ಮನೋರಮಾ. ಬಿ.ಎನ್
೧೨ ನವೆಂಬರ್ ಸ್ಥಳ : ಮಲ್ಲೇಶ್ವರಂ ಸೇವಾಸದನ
ಅಮೃತವರ್ಷಿಣಿ ಅಕಾಡೆಮಿ ಆಯೋಜಿಸಿದ ಕಾರ್ತಿಕ ಉತ್ಸವದ ಅಂಗವಾಗಿ ಮೊದಲದಿನದಂದು ರುಕ್ಮಿಣಿ ವಿಜಯಕುಮಾರ್ ಅವರಿಂದ ಭರತನಾಟ್ಯವನ್ನು ಏರ್ಪಡಿಸಲಾಗಿತ್ತು. ಆರಂಭಿಕವಾಗಿ ಗಣಪತಿ, ಸರಸ್ವತಿಯರನ್ನು ಸ್ತುತಿಸುವ ಸ್ವರಗುಚ್ಛಕ್ಕೆ ನರ್ತಿಸಿದ ರುಕ್ಮಿಣಿ ಸೂರ್ಯಾಂಜಲಿ ನೃತ್ಯದ ಮೂಲಕ ಸೂರ್ಯನನ್ನು ಶ್ಲೋಕದ ಮೂಲಕವಾಗಿ ಸ್ತುತಿಸಲು ಪ್ರಯತ್ನಿಸಿದರು. ನೃತ್ತದ ಭಾರಕ್ಕೆ ಅಂಗಶುದ್ಧಿ, ಮುಖ ಪ್ರಸನ್ನತೆ ಇಂಬನ್ನಿತ್ತಿತಾದರೂ ಶ್ಲೋಕ ಮಾತ್ರಕ್ಕೆ ಸೂರ್ಯನ ವರ್ಣನೆ ತೃಪ್ತವಾಗಬೇಕಾಯಿತು. ನಂತರ ಮೂಡಿಬಂದ ಕೃಷ್ಣನ ಕುರಿತ ಅಭಿನಯಪದದಲ್ಲಿ ಬಗೆಬಗೆಯ ನೃತ್ತವು ಬಿರುಸಿನ ಪ್ರಕ್ರಿಯೆಯನ್ನು ಮತ್ತಷ್ಟು ಪ್ರಬಲಗೊಳಿಸುತ್ತಲೇ ಕೊಂಚ ಮಟ್ಟಿನ ಲೋಕಧರ್ಮಿಯ ನೆರಳಿನಲ್ಲಿ ಬೆಳಕು ಕಂಡ ಕೃಷ್ಣ-ಯಶೋದೆಯ ಸಂವಾದವು ಪ್ರೇಕ್ಷಕರನ್ನು ಪ್ರಸನ್ನಗೊಳಿಸಿತು. ‘ಶಂಕರಾಭರಣಂ’ ಶಿವನ ಕುರಿತ ನೃತ್ಯದ ಆಯ್ಕೆ ರುಕ್ಮಿಣಿ ಅವರ ಶರೀರ ಬದ್ಧತೆ, ದೃಢಕಾಯ, ಗಂಭೀರನಿಲುವಿಗೆ ಸಾಕ್ಷಿಯಾಗಿ ಶಿವನ ರೌದ್ರ ಭಾವ ರುಕ್ಮಿಣಿಯವರ ಅಭಿನಯದಲ್ಲಿ ಭೀಭತ್ಸದ ಸ್ಪರ್ಶವನ್ನೂ ಕೊಟ್ಟು ಆಂಗಿಕಾಭಿನಯದಲ್ಲಿ ಕೊನೆಗೊಂಡಿತು. ಯಾಹಿ ಮಾಧವ ಅಷ್ಟಪದಿಯ ಖಂಡಿತಾನಾಯಿಕೆ ಮತ್ತು ಕೊನೆಯಲ್ಲಿನ ತನಿ ಆವರ್ತನಂ ಹೆಜ್ಜೆವಿನ್ಯಾಸಗಳ ಹೆಚ್ಚಿದ ಭಾರದಿಂದ ಸ್ಥಾಯಿಭಾವಗಳಿಗೆ ಪೋಷಣೆ ದೊರಕದೆ ಭಾವನಿರೂಪಣೆಯಲ್ಲಿ ಮಂಗಳ ಕಂಡಿತು.