Author: ಮನೋರಮಾ. ಬಿ.ಎನ್
ಲಕ್ಷಣ: ಕಪೋತಹಸ್ತದ ಎರಡೂ ಕೈಬೆರಳುಗಳನ್ನೂ ಒಂದರ ಸಂದಿನಲ್ಲೊಂದು ಕತ್ತರಿಯಂತೆ ತೂರಿಸಿ ಹಿಡಿದರೆ ಕರ್ಕಟ ಹಸ್ತ. ಅಧಿದೇವತೆ : ವಿಷ್ಣು. ಕರ್ಕಟ ಎಂದರೆ ಏಡಿ ಎಂದರ್ಥ.ಆದ್ದರಿಂದಲೋ ಎಂಬಂತೆ ಬಲಕೈಯಲ್ಲಿ ಕರ್ಕಟಹಸ್ತವನ್ನು ಮೇಲ್ಮುಖವಾಗಿ ಮಾಡಿ, ಎಡಕೈಯನ್ನು ಬಲಕೈ ಬಳಿ ನಿಲ್ಲಿಸುವ ವಿಶೇಷ ಲಕ್ಷಣದ ಲೀನಕರ್ಕಟ ಹಸ್ತವೆಂಬ ಹಸ್ತವಿದ್ದು ಅದರ ವಿನಿಯೋಗ ಏಡಿಯನ್ನು ತೋರಿಸಲಷ್ಟೇ ಬಳಕೆಯಾಗುತ್ತದೆ.
ವಿನಿಯೋಗ : ಗುಂಪನ್ನು ಸೂಚಿಸುವುದು, ಹೊಟ್ಟೆಯನ್ನು ತೋರಿಸುವುದು, ಶಂಖವನ್ನು ಊದುವಿಕೆ, ಮೈಯನ್ನು ಒತ್ತುವುದು, ಮರದ ಕೊಂಬೆಯನ್ನು ಬಗ್ಗಿಸುವುದು.
ಇತರೇ ವಿನಿಯೋಗ : ಜೇನುತಟ್ಟೆ, ಆಕಳಿಕೆ, ಛಳಿಯಿಂದ ನಡುಗುವುದು, ಅತ್ಯಂತ ಬೇಸರ, ದುಃಖ, ಭಾರವನ್ನೆತ್ತುವುದು, ಗುಂಪು, ಹೆಂಗಸರು ಬೈದಾಡುವುದು, ಈಶ್ವರ ನಮಸ್ಕಾರ, ಗ್ರಹ-ನಕ್ಷತ್ರಗಳನ್ನು ನೋಡುವುದು, ತೆಂಗಿನಮರ ಮತ್ತು ಅಡಿಕೆಮರಗಳನ್ನು ಹತ್ತುವುದು, ಗಾಢಾಲಿಂಗನ, ಆಲಸ್ಯದಿಂದ ಮೈಮುರಿಯುವುದು, ದೊಡ್ಡ ಶರೀರ, ‘ಇಷ್ಟೇಸಾಕು, ಇನ್ನು ಮಾಡಬೇಕಿಲ್ಲ’ ಎನ್ನಲು, ಗದ್ದವನ್ನು ಹಿಡಿಯುವಾಗ, ಶಂಖ, ಲತಾಗೃಹ, ಗುಡಿಸಲು, ಮನೆ, ಕಟ್ಟಡ, ಅಂಗಮರ್ದನ, ಕಾಮದಿಂದುಟಾದ ಸಂತಸ-ನೋವು, ಆಕ್ರಂದನ, ಹತ್ತಿರ ಬರುವುದು, ಬೆರಳುಗಳ ನಟಿಕೆ ಮುರಿಯುವುದು, ವೇಗವಾಗಿ ಉಸಿರಾಡುವುದು, ತಲೆದಿಂಬು, ಕಾಮದೇವ, ತಿಳಿ ಹಳದಿ ಬಣ್ಣ, ಕೆಲಸಕ್ಕೆ ಬಾರದ ಮಾತುಗಳು, ವಿಭಿನ್ನ ದಿಕ್ಕುಗಳ ಭಾವ, ಪರ್ವತ, ಶೃಂಗಾರ ಇತ್ಯಾದಿ ಸೂಚಿಸಲು ಬಳಸುತ್ತಾರೆ.ಕರ್ಕಟಹಸ್ತದಲ್ಲಿ ಮಧ್ಯದ ಬೆರಳುಗಳನ್ನು ಹೊರ ಚಾಚಿದರೆ ಅದು ವೃಶ್ಚಿಕರಾಶಿಯನ್ನು ಸೂಚಿಸುತ್ತದೆ.
ಯಕ್ಷಗಾನದಲ್ಲಿ ಲಜ್ಜೆ, ಮದನವಿಕಾರ, ಶಂಖ ಊದುವುದಕ್ಕೆ ಬಳಸುತ್ತಾರೆ.
ನಿತ್ಯಜೀವನದಲ್ಲಿ ಮಲಗಿ ಎದ್ದು ಆಕಳಿಕೆಯಿಂದ ಮೈಮುರಿಯುವಾಗ, ಸಂಯೋಗ, ಜಗಳ ಎನ್ನಲು ಮತ್ತು ಯೋಚನೆಯ ಸಂದರ್ಭ ಗದ್ದಕ್ಕೆ ಕೈಕೊಡುವಲ್ಲಿ ಕರ್ಕಟದ ಬಳಕೆ ಅವಲೋಕನಕ್ಕೆ ಬಂದಿದೆ.