Manjuvani Monthly Oct- November
ಯಕ್ಷಗಾನ ವೀಕ್ಷಣೆಯ ಬಗ್ಗೆ ಅತೀವ ಆಸಕ್ತಿ, ಅಭಿಮಾನವುಳ್ಳ ನನಗೆ ಯಕ್ಷಗಾನವನ್ನು ವೀಕ್ಷಿಸಿ, ಪ್ರೇಕ್ಷಕನ ನೆಲೆಯಲ್ಲಿ ಒಂದೆರಡು ಮಾತನಾಡುವಷ್ಟೇ ಅರ್ಹತೆಯುಳ್ಳ ನಾನು ಯಕ್ಷಪ್ರೇಕ್ಷಕನಾಗಿ ಕೆಲವೊಂದು ಪತ್ರಿಕೆಗಳಿಗೆ ಅನಿಸಿಕೆಗಳನ್ನು ಬರೆಯುವ ಹವ್ಯಾಸ ಇಟ್ಟುಕೊಂಡಿದ್ದೇನೆ. ಅದೇ ಆಸಕ್ತಿಯಲ್ಲಿ ಡಾ.ಮನೋರಮಾ ಬಿ.ಎನ್ ಅವರ ಸಂಶೋಧನೆಯ ಫಲವಾದ “ಯಕ್ಷಮಾರ್ಗಮುಕುರ” ಕೃತಿಯನ್ನು ನೋಡಿದೆ. ಈ ಬೃಹತ್ ಗ್ರಂಥದ ಬಗ್ಗೆ ಎಂಥವರಿಗೂ ಗೌರವ ಮೂಡುವುದು ಸತ್ಯ. ಏಕೆಂದರೆ ಗ್ರಂಥದ ತಯಾರಿ, ಬರೆವಣಿಗೆಯ ಕ್ರಮ, ಎಷ್ಟೋ ಪ್ರಾಚೀನ ಗ್ರಂಥಗಳನ್ನು ಓದಿದ ಫಲವಾಗಿ ಮೂಡಿರುವ ಹೊತ್ತಗೆಯನ್ನು ಕೈಗೆತ್ತಿಕೊಂಡಾಗಲೇ ಕಣ್ಣಿಗೊತ್ತಿಕೊಳ್ಳುವಂತೆ ಮಾಡುತ್ತದೆ. ಅದಕ್ಕೆ ತಕ್ಕಂತೆ ಈ ಕೃತಿಯನ್ನು ಓದಿ ಅರಗಿಸಿಕೊಳ್ಳುವುದು ಕೊಂಚ ಸವಾಲು ಕೂಡಾ. ನೃತ್ಯ-ನಾಟ್ಯಗಳ ಬಗ್ಗೆ ಗೊತ್ತಿಲ್ಲದಿರುವವರಿಗೆ ಸ್ವಲ್ಪ ಕಷ್ಟಸಾಧ್ಯ ಕೂಡಾ. ಆದರೆ ಈ ಗ್ರಂಥ ಅದಕ್ಕೂ ಮಿಗಿಲಾಗಿ ನಮಗೆ ಆಪ್ತವಾಗುತ್ತದೆ. ನನಗನಿಸಿದ ಕಾರಣಗಳು ಇವು :
***ನೀರ್ನಳ್ಳಿ ಗಣಪತಿಯವರ ಅರ್ಥಪೂರ್ಣ ರೇಖಾಚಿತ್ರಗಳು ವಿವಿಧ ಭಂಗಿಗಳಲ್ಲಿ ಮನಸೆಳೆದಿವೆ. ಸುಮಾರು 300ಕ್ಕೂ ಮಿಗಿಲು ಚಿತ್ರಗಳ ಸಂಪತ್ತು ಇದು. ಈ ಬಗೆ ಗ್ರಂಥವನ್ನು ನಾನು ಹಿಂದೆಂದೂ ನೋಡಿದ್ದಿಲ್ಲ. ಈ ಚಿತ್ರಪರ್ಯಟನ ನಿಜಕ್ಕೂ ರೋಚಕ. ಮತ್ತು ಅವರ ಪರಿಶ್ರಮ ಸಾರ್ಥಕ. ನೀರ್ನಳ್ಳಿಯವರ ಚಿತ್ರಗಳಿಗೆ ಕುಣಿತ ಕಲಿಸಿದವರು ಕೂಡ ಮನೋರಮಾ ಅವರೇ. ‘ಕಲಿಯುವವರಿಗೂ, ಕಲಿಸುವವರಿಗೂ ಈ ಗ್ರಂಥ ಪ್ರಯೋಜನಕಾರಿ. ಈ ಮನೋಹರ ಯಜ್ಞದಲ್ಲಿ ನನ್ನ ಚಿತ್ರಗಳು ಸಮಿಧೆಗಳಂತೆ ಸಮರ್ಪಣೆಯಾಗಿವೆ ’ ಎಂದಿದ್ದಾರೆ ಅವರು. ನನ್ನ ಪ್ರಕಾರ, ಯಜ್ಞದ ಪೂರ್ಣಾಹುತಿಯಲ್ಲಿ ಸಮಿಧೆಗಳು ಹೇಗೆ ಅನಿವಾರ್ಯವೋ ಅದೇ ರೀತಿ ಈ ಅಕ್ಷರಯಜ್ಞದಲ್ಲಿ ಚಿತ್ರಗಳೆಂಬ ಸಮಿಧೆಗೂ ಅಷ್ಟೇ ಪ್ರಾಮುಖ್ಯತೆಯಿರುತ್ತದೆ.
***ಗ್ರಂಥದ ಒಟ್ಟು ಪುಟ 824, 16 ವರ್ಣಪುಟಗಳು, ಆಕರ್ಷಕ ದಪ್ಪದ ರಟ್ಟಿನ ಹಾಳೆಯ ಎಂಬೋಸಿಂಗ್ ಮಾಡಿದ ಅಕ್ಷರ ಮತ್ತು ಚಿತ್ರಗಳ ಮುಖಪುಟ, ಉತ್ತಮ ಕಾಗದದಲ್ಲಿ ಮುದ್ರಣ ಇವೆಲ್ಲಕ್ಕಿಂತ ಹೆಚ್ಚಾಗಿ ಗ್ರಂಥವು ನೀಡುವ ಮಾಹಿತಿ, ಜ್ಞಾನ ಮತ್ತು ಕಲಾಸಂಪತ್ತಿಗೆ ಹೋಲಿಸಿದರೆ ಗ್ರಂಥದ ಬೆಲೆ ಬಹಳ ಕಡಿಮೆಯಿದೆ. (1600ರೂ/-). ಬಹುಶಃ ಎಲ್ಲರಿಗೂ ತಲುಪುವಂತೆ ಈ ಸಂಶೋಧನೆ ದೊರಕಬೇಕೆಂಬ ವಿಚಾರ ಪ್ರಕಾಶಕರಿಗಿರಬಹುದು. ಬೇಕೆಂದರೂ ಇಷ್ಟು ಕಡಿಮೆ ಕ್ರಯಕ್ಕೆ ಬಹು ವೆಚ್ಚದ ಪುಸ್ತಕ ಪ್ರಪಂಚದಲ್ಲಿ ಇಂಥ ಉತ್ಕೃಷ್ಟ ಸಂಶೋಧನೆಗಳು ಇಂದಿಗೆ ದೊರಕುವುದು ಕಷ್ಟ. ಇಷ್ಟೇ ಅಲ್ಲ, ಪುಟವಿನ್ಯಾಸವೂ ಒಂದಕ್ಕಿಂತ ಒಂದು ವೈಶಿಷ್ಟ್ಯಪೂರ್ಣವೆನಿಸುತ್ತದೆ. ಒಂದರಂತೆ ಮತ್ತೊಂದು ಪುಟವಿಲ್ಲ. ಕೆಲವೆಡೆಗಳಲ್ಲಿ ಅರ್ಧಪುಟ, ಇನ್ನು ಕೆಲೆವೆಡೆ ಪೂರ್ಣಪುಟ ಆವರಿಸಿದ್ದು ಕೃತಿಯ ಮೌಲ್ಯ ಹೆಚ್ಚಿಸಿದ್ದು ಸತ್ಯ. ಇದನ್ನು ಸಾಮಾನ್ಯ ಓದುಗನೂ ನೋಡಿ ಮೆಚ್ಚಿಕೊಂಡು, ತಲೆತೂಗುವಂತಿದೆ. ನಿಜಕ್ಕೂ ಸಂಗ್ರಹಯೋಗ್ಯ.
***ಪ್ರಾಚೀನಗ್ರಂಥಗಳ ಶ್ಲೋಕಗಳು ಸಾಮಾನ್ಯರಿಗೆ ದೊರಕುವುದು ಕಷ್ಟ. ದೊರಕಿದರೂ ಅದನ್ನು ಅರಿತು ಬಳಸಿಕೊಳ್ಳಲು ಕಲಾವಿದರಿಗೇ ಎಷ್ಟೋ ಸಲ ಆಗುವುದಿಲ್ಲ. ಹೀಗಿರುವಾಗ ಪ್ರಾಚೀನ ಗ್ರಂಥದ ಅದೆಷ್ಟೋ ಕ್ಲಿಷ್ಟ ವಿಷಯಗಳನ್ನು ಸಾಧ್ಯವಾದಷ್ಟೂ ಸರಳ ಮಾಡಿ ಅವುಗಳ ಅರ್ಥ, ವಿಶ್ಲೇಷಣೆಯನ್ನು ಆಧಾರಸಹಿತ ಮಂಡಿಸಿದ್ದಾರೆ. ಎಷ್ಟೋ ಚಲನವಲನಗಳ ಕರಣದ ಹೆಸರು, ಕ್ರಮಸಂಖ್ಯೆ ಸಹಿತ ದಾಖಲಿಸಿದ್ದಾರೆ. ಹೆಜ್ಜೆಗಾರಿಕೆಯ ಬಗೆಬಗೆಯ ವೈವಿಧ್ಯತೆಗಳನ್ನು ವಿವರಿಸಿದ್ದಾರೆ. ಒಟ್ಟಿನಲ್ಲಿ ನಾಟ್ಯಲಕ್ಷಣವನ್ನು ಸುಲಭ ಮಾಡಿದ್ದಾರೆ. ಎಲ್ಲ ಕಲೆಗಳಿಗೂ ಅನ್ವಯಿಸುವಂತೆ ಮಾಡಿದ್ದಾರೆ. ಎಷ್ಟೋ ಪ್ರಾಚೀನ ಗ್ರಂಥಗಳ ಹೆಸರು, ಬರೆದವರು, ಅವರ ಕಾಲ, ಮಹತ್ತ್ವ ಎಲ್ಲವನ್ನೂ ಅಚ್ಚರಿಯಿಂದ ನೋಡುವಂತೆ ಮಾಡಿದ್ದಾರೆ. ಅದರಲ್ಲೂ ಮಹಾಮುನಿ ಭರತನ ಹೇಳಿಕೆಯನ್ನು ಲೇಖಿಕಾಭಾವದ ಆರಂಭದಲ್ಲಿಯೇ ನಾಟ್ಯಶಾಸ್ತ್ರಗಳ ಸಂಸ್ಕೃತ ಶ್ಲೋಕಗಳನ್ನು ಉಲ್ಲೇಖಿಸಿ ಪ್ರಸ್ತುತಪಡಿಸಿದ ರೀತಿ ತುಂಬಾ ಖುಷಿ ನೀಡಿದೆ.
***ಗ್ರಂಥದ ಶೈಲಿ ಆಪ್ತವಾಗಿದೆ. ಹಾಗಂತ ಕ್ಲಿಷ್ಟವಾಗಿಲ್ಲ ಎನ್ನುವುದಿಲ್ಲ. ಆದರೆ ಬಹುಶಃ ಇಂಥ ಗ್ರಂಥಗಳು ಸ್ವಲ್ಪ ಮಟ್ಟಿಗೆ ಪ್ರೌಢ ಭಾಷೆಯನ್ನೇ ಅಪೇಕ್ಷಿಸುತ್ತದೇನೋ. ಆದರೆ ಎಷ್ಟೋ ಕಡೆ ಸರಳವೂ ಇದೆ. ‘ಮುಕುರ ತೋರುವ ಮುನ್ನ..’- ಎಂಬ ಶೀರ್ಷಿಕೆಯಲ್ಲಿ ಲೇಖಕಿಯು ಬರೆದ ನುಡಿಮುತ್ತುಗಳು ರೋಮಾಂಚನಗೊಳಿಸುತ್ತದೆ. ‘ಭಾರತದಲ್ಲಿ ಜನಿಸಿದರೆ ಸಾಲದು. ಈ ದೇಶವನ್ನು ಪೂರ್ಣವಾಗಿ ನೋಡಬೇಕೆಂದರೆ ಜನ್ಮಾಂತರದ ಸುಕೃತವಿರಬೇಕು. ಭಾರತ ಪರ್ಯಟನೆ ನನ್ನ ಜೀವನದೃಷ್ಟಿ. ಅದು ಈ ಜನ್ಮಕ್ಕೆ ಎಂದು, ಎಷ್ಟು ಒದಗೀತೋ ತಿಳಿಯದು. ಆದರೆ ಒಂದೊಂದೇ ಹೆಜ್ಜೆಯನ್ನು ಮುಂದಿಡುತ್ತಾ ಭಾರತವನ್ನಿಡೀ ಸುತ್ತಿ ಬಂದ ಧನ್ಯತೆಯನ್ನು ಈ ಕೃತಿಗೆಂದು ಮಾಡಿದ ಗ್ರಂಥಾಧ್ಯಯನವಿತ್ತಿದೆ. ಕುಳಿತಲ್ಲಿಂದಲೇ ಇಡಿಯ ಭಾರತದರ್ಶನ ಆದೀತೇ? ಎಂದು ಪ್ರಶ್ನೆಯಿದ್ದರೆ ಖಂಡಿತ ಸಾಧ್ಯವೆನ್ನುತ್ತೇನೆ. ಇದು ಮಾನಸಿಕ ಪರ್ಯಟನ’ – ಎಂತಹ ಸುಂದರ ಹೇಳಿಕೆ ನೋಡಿ!
ಹಾಗೆಯೇ ‘ಶಾಸ್ತ್ರವು ಪರಿಹಾರದ ಶಸ್ತ್ರವಲ್ಲ, ಪಳಗಿಸುವ ನಿರ್ದೇಶಕ. ಜಾನಪದವಲ್ಲದ ಯಾವುದೇ ಕಲಾ ಪ್ರಕಾರವೂ ಈ ಭೂಮಿಯಲ್ಲಿಲ್ಲ. ಎಲ್ಲದಕ್ಕೂ ಆಶ್ರಯವೇ ಲೋಕ – ಅಂದರೆ ಬದುಕು. ಲೋಕ ವೀಕ್ಷಣೆಯಿಂದಲೇ ಮಗು ಮನುಷ್ಯನಾಗುವುದು ’ ಎಂಬ ಮಾತು ಬಹಳ ಮೆಚ್ಚುಗೆಯಾಯಿತು.
ಲೇಖಿಕೆಯ ದಶವರ್ಷಗಳ ಅಧ್ಯಯನ ತಪಸ್ಸಿನ ಸಿದ್ಧಿಯೇ ಈ ಕೃತಿ ಉತ್ಪತ್ತಿ. ಅವರ ಅಧ್ಯಯನದ ಮೊದಲ ಫಲವಾಗಿ ‘ಮುದ್ರಾರ್ಣವ’ ಎಂಬ ಕೃತಿಯ ಹೆರಿಗೆಯಾಗಿದೆ. ತದನಂತರ ನೃತ್ಯಮಾರ್ಗಮುಕುರ, ಮಹಾಮುನಿಭರತ, ನಂದಿಕೇಶ್ವರ, ಭರತನಾಟ್ಯಬೋಧಿನಿ, ಯಕ್ಷನೂಪುರ.., ಹೀಗೆ ಒಂದಾದಮೇಲೊಂದು ಕೃತಿಗಳು. ಓರ್ವ ತಾಯಿ ತನ್ನ ಗರ್ಭದಲ್ಲಿ ಶಿಶುವಿನ್ನು ಹೊತ್ತ ನವಮಾಸಗಳ ಪ್ರಯಾಸವೆಲ್ಲವೂ ಪ್ರಸವಸುಖದಲ್ಲಿ ಮರೆಮಾಚುವುದಂತೆ. ಅದೇರೀತಿ ಲೇಖಿಕೆಯ ದಶವರ್ಷಗಳ ಅಧ್ಯಯನವು ಈ ಬೃಹತ್ ಗ್ರಂಥದ ಹೆರಿಗೆಯ ಮೂಲಕ ಸಾರ್ಥಕ್ಯವನ್ನು ಕಂಡಂತಾಗಿದೆ.
ಈ ಗ್ರಂಥದ ಮುನ್ನುಡಿಯಾಗಿ ಕೆಲವು ಹಿರಿಯ ವಿದ್ವಾಂಸರು ತಿಳಿಸಿರುವ ವಿಚಾರಗಳಲ್ಲಿ ನನ್ನ ಮನಸೆಳೆದ ಕೆಲವನ್ನು ಇಲ್ಲಿ ಉಲ್ಲೇಖಿಸಬಯಸುತ್ತೇನೆ.
ಧರ್ಮಸ್ಥಳ ಕೇತ್ರದ ಪೂಜ್ಯ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ‘ಇದು ಕಲಾಮಾತೆಯು ನಿರೀಕ್ಷಿಸುತ್ತಿದ್ದ ಶಾಸ್ತ್ರ ಮತ್ತು ಪ್ರಯೋಗ ಪರಂಪರೆಯ ಸಮಗ್ರ ಪರಿಚಯವುಳ್ಳ ಪ್ರತಿಭೆ-ವ್ಯುತ್ಪತ್ತಿ ಬೆರೆತ ಶ್ರಮಿಕರಿಂದಷ್ಟೇ ಸಾಧ್ಯವಾದ ಕಾರ್ಯ. ಈ ಬಗೆಯ ಆದರ್ಶಪ್ರಾಯವೆನಿಸುವ ಪ್ರಯತ್ನ ಕಲಾ ಸಂಶೋಧನಾ ಜಗತ್ತಿನಲ್ಲೇ ಮೇಲ್ಪಂಕ್ತಿಯುಳ್ಳದ್ದು ’ ಎಂಬ ನುಡಿಯು ಗ್ರಂಥಕ್ಕೆ ಒಪ್ಪುವಂತಿದೆ.
‘ಈ ಗ್ರಂಥದ ಸಮಗ್ರತೆಯನ್ನು ಆಧರಿಸಿ ಪ್ರಯೋಗ, ಕಮ್ಮಟ, ಕಾರ್ಯಾಗಾರಗಳು ಆಗಬೇಕಾಗಿದೆ, ಹೀಗಾದರೆ ಯಕ್ಷಗಾನಕ್ಕೆ ಕಾಯಕಲ್ಪವದೀತು, ಈ ಗ್ರಂಥ ಯಕ್ಷಕಲೆಗೊಂದು ‘ದರ್ಪಣಾದರ್ಶ’ – ಎಂಬ ಮಾತೃಶ್ರೀ ಹೇಮಾವತೀ ವೀ. ಹೆಗ್ಗಡೆಯವರ ನುಡಿ ಸಮಂಜಸವೆನಿಸಿತು.
ಬಹುಶ್ರುತ ವಿದ್ವಾಂಸರಾದ ಶತಾವಧಾನಿ ಡಾ. ರಾ.ಗಣೇಶರು ಹೇಳುವಂತೆ ‘ಯಕ್ಷಗಾನದ ಕುರಿತಾಗಿ ಅಲ್ಲೊಂದು ಇಲ್ಲೊಂದು ಸಣ್ಣ ಪುಟ್ಟ ಪುಸ್ತಕಗಳು ಬಂದಿವೆಯಾದರೂ ಅದರ ಆಳ-ಅಗಲಗಳನ್ನು ಕಾಣಿಸುವ ಹಂತಕ್ಕೆ ಹೋಗಿಲ್ಲ. ಕೆಲವೆಡೆ ಕೇವಲ ಪ್ರಾಯೋಗಿಕವಾಗಿ ಶಿಬಿರ-ಕಮ್ಮಟ-ಕಾರ್ಯಾಗಾರ-ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸುವ ಕೆಲಸಗಳು ನಡೆದಿವೆಯಾದರೂ ಸಮಗ್ರ, ಪ್ರಬುದ್ಧ ಗ್ರಂಥ ನಿರ್ಮಾಣದಲ್ಲಿ ಪರ್ಯವಸಿಸಿಲ್ಲ. ಯಕ್ಷಗಾನದ ಆಂಗಿಕದ ಮಟ್ಟಿಗೆ (ತೆಂಕುತಿಟ್ಟು ಒಳಗೊಂಡಂತೆ) ಸಮಗ್ರ ತಲಸ್ಪರ್ಶಿ ಅಧ್ಯಯನದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಡಾ.ಮನೋರಮಾ ಅವರು ಗುಣಗಾತ್ರಗಳಲ್ಲಿ ವಿಸ್ಮಯಾವಹವೆನಿಸುವ ಮಹಾಗ್ರಂಥವನ್ನೇ ರಚಿಸಿದ್ದಾರೆ. ಇದನ್ನು ಭಾರತದೇಶದ ನೃತ್ತ-ನೃತ್ಯ-ನಾಟ್ಯಗಳ ಆಂಗಿಕ ವಿಶ್ವಕೋಶ ಎನ್ನಬಹುದು’ ಎಂದು ಕೊಂಡಾಡಿರುವುದು ಅತಿಶಯವೆನಿಸಲಿಲ್ಲ; ಬದಲಾಗಿ ಸೂಕ್ತವೆನಿಸಿತು.
ಅಂತೆಯೇ ಹಿರಿಯ ಯಕ್ಷಗಾನ ವಿದ್ವಾಂಸರಾದ ಡಾ. ಪ್ರಭಾಕರ ಜೋಶಿಯವರು ‘ಈ ಬೃಹತ್ ಗ್ರಂಥದಲ್ಲಿ ಯಕ್ಷಗಾನದಲ್ಲಿ ಅನುಪಮ ಸೇವೆಗೈದ ಆಚಾರ್ಯ ಪರಂಪರೆಗೆ ಶ್ರೇಷ್ಠ ಸ್ಥಾನವಿದೆ. ತನ್ನೂರಿನ ಕಲಾ ಸಂಪತ್ತನ್ನು ಮರೆಯದೆ ಅನುಶೀಲನಗೈದ ಋಣ ಸಂದಾಯದ ಕೃತಿ ಇದು. ಸತತ ಅಧ್ಯಯನ, ಪ್ರಯೋಗ, ವಿವೇಚನೆಗಳನ್ನು ಬಸಿದು ರೂಪಿಸಿದ ಈ ಕೃತಿಯು ಇಂತಹ ಕೆಲಸ ಇದ್ದರೆ ಹೀಗಿರಬೇಕು. ಮಾರ್ಗ-ದೇಶ, ಅಂಗೋಪಾಂಗ ಅಭಿನಯ, ಸ್ಥಾನಕ, ಕರಣ, ಚಾರೀ, ಹೆಚ್ಜೆ, ನೃತ್ಯ, ನೃತ್ತ, ಅನ್ವಯ, ತಾತ್ಪರ್ಯ ಎಂಬ ಅಧ್ಯಾಯಗಳಿಂದ ರೂಪಿತವಾದ ಈ ಗ್ರಂಥವು ಭಾರತೀಯ ನಾಟ್ಯ ಪರಂಪರೆಗೆ ಮಾರ್ಗದರ್ಶಿ. ಕಲೆ-ಶಾಸ್ತ್ರೀಯತೆಯ ಚರ್ಚೆಯು, ಬೇರೆ ಬೇರೆ ದಿಕ್ಕುಗಳಲ್ಲಿ ಸಾಗುತ್ತಿರುವ, ಕಲೆಯ ಕವಲುಗಳು, ಮಾನ್ಯತೆಗಳು ವಿಸ್ತರಿಸುತ್ತಿರುವ ಈ ಕಾಲದಲ್ಲಿ ಅವಶ್ಯವಾಗಿ ಆಗಬೇಕಿದ್ದ ದೊಡ್ಡ ಕೆಲಸವನ್ನು ಡಾ. ಮನೋರಮಾ ಮಾಡಿದ್ದಾರೆ’ ಎಂದು ಪ್ರಶಂಸಿಸಿರುವುದು ನಮ್ಮ ಮನಸ್ಸಿನ ಕೆಲವು ಮಾತುಗಳನ್ನೇ ಪ್ರೌಢವಾದ ಶಬ್ದ, ವಾಕ್ಯಗಳಲ್ಲಿ ಹೇಳಿದ್ದಾರೆ ಎನಿಸಿತು. ಅಲ್ಲದೆ ‘ಲೇಖಿಕೆಯು ಈ ಕೃತಿಯನ್ನು ‘ಯಜ್ಞಫಲ’ ಎಂದು ಕರೆದಿರುವುದರಲ್ಲಿ ಅತಿಶಯೋಕ್ತಿಯಿಲ್ಲ’ ಎಂದು ಸಹಮತದ ಮದ್ರೆಯನ್ನು ಒತ್ತಿದ್ದಾರೆ.
ರಂಗಕರ್ಮಿ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ‘ಯಕ್ಷಗಾನದಲ್ಲಿ ಭರತನ ನಾಟ್ಯಶಾಸ್ತ್ರದಿಂದ ಮೊದಲ್ಗೊಂಡು ಇತರ ಶಾಸ್ತ್ರಗಳಲ್ಲಿ ಉಕ್ತವಾಗಿರುವ, ನಿರ್ದಿಷ್ಟವಾಗಿರುವ ವಿಧಿನಿಷೇಧಗಳು ಹೇಗೆ ಸಮಗ್ರವಾಗಿ ಹಾಸುಹೊಕ್ಕಿವೆ ಎಂಬುದನ್ನು ಇದರಲ್ಲಿ ಪ್ರತಿಪಾದಿಸಲಾಗಿದೆ. ಅಧ್ಯಯನಾಸಕ್ತರಿಗೆ, ಶೋಧಶೀಲರಿಗೆ, ಶಾಸ್ತ್ರ ಕುತೂಹಲಿಗಳಿಗೆ ಈ ಕೃತಿಯು ಅಮೂಲ್ಯ ನಿಧಿ. ಯಕ್ಷಗಾನ ಕಲಾಕ್ಷೇತ್ರಕ್ಕೆ ಸಾರ್ವಕಾಲಿಕವಾದ ಉಲ್ಲೇಖ್ಯ ಗ್ರಂಥವಿದು. ಯಕ್ಷಕಲೆಯ ಮಾರ್ಗ- ದೇಶೀತ್ವದ ತಲಸ್ಪರ್ಶಿಯಾದ ಅಧ್ಯಯನಪೂರ್ವಕವಾದ ಸಂಶೋಧನವನ್ನು ಡಾ. ಮನೋರಮಾ ಪ್ರಾಮಾಣಿಕವಾಗಿ ಮಾಡಿದ್ದಾರೆ’ ಎಂದು ಅಭಿನಂದಿಸಿರುವುದು ಕಲೆಯ ಸಂಶೋಧನೆಯ ದಿಕ್ಕಿನಲ್ಲಿ ಈ ಗ್ರಂಥದ ಉಪಕಾರವನ್ನು ತಿಳಿಸಿದೆಯೆನ್ನಿಸಿತು.
ರಾಷ್ಟ್ರಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷ ಕಲಾವಿದ ಕೆ.ಗೋವಿಂದ ಭಟ್ಟರು, ‘ಭರತನ ನಾಟ್ಯಶಾಸ್ತ್ರದಲ್ಲಿ ಹೇಳಿದ ಅಷ್ಟೂ ಅಂಶಗಳು ಇಂದಿಗೂ ಯಕ್ಷಗಾನದಲ್ಲಿ ಪುಷ್ಕಳವಾಗಿ ಇವೆ. ನಾಟ್ಯಶಾಸ್ತ್ರವನ್ನೇ ಆಧರಿಸಿದ ಯಕ್ಷಕಲೆಯ ವಿಚಾರವಾಗಿ ಸಂಶೋಧನ ಮುಖದಿಂದ ಅಧ್ಯಯನ ನಡೆಸಿ, ಆಂಗಿಕಾಭಿನಯವೆಂಬ ಒಂದು ಕ್ಷೇತ್ರದಲ್ಲೇ ಯಕ್ಷಗಾನದ ಗಟ್ಟಿತನ ಎಷ್ಟಿದೆ, ಶಾಸ್ತ್ರ ಲಕ್ಷಣವೇನು ಎನ್ನುವುದನ್ನು ಸಮರ್ಥವಾಗಿ ಪ್ರತಿಪಾದಿಸಿದ ಡಾ.ಮನೋರಮಾ ಅವರ ಸಾಧನೆಯನ್ನು ಶಾಘಿಸಿದ್ದಾರೆ. ಕಲೆಯ ಬಗೆಗೆ ಕಲಾವಿದನಿಗೆ, ಸಂಶೋಧಕನಿಗೆ ಇರಬೇಕಾದ ಬದ್ಧತೆ, ತಿಳಿಯುವ ಹಾದಿ, ಸಾಧ್ಯತೆ-ಬಾಧ್ಯತೆ, ಅನುಸರಿಸಬೇಕಾದ ಕ್ರಮ, ಕರ್ತವ್ಯದೊಂದಿಗೆ ಆಧ್ಯಾತ್ಮವನ್ನೂ ಕಾಣಿಸಿಕೊಟ್ಟಿದ್ದಾರೆ. ಕಿರಿಯ ವಯಸ್ಸಿನಲ್ಲಿ ಮಾಡಿದ ಹಿರಿಯ ಸಾಧನೆ’ ಎಂದು ಬಣ್ಣಿಸಿರುವುದು ಯಕ್ಷಗಾನ ರಂಗಭೂಮಿಯ ಅನುಭವಿ ಕಲಾವಿದರ ಅಧಿಕೃತ ಮುದ್ರೆಯಾಗಿ ಈ ಗ್ರಂಥಕ್ಕೆ ಒದಗಿದೆಯೆಂದೇ ನನಗನಿಸಿತು.
ನನ್ನಂತಹ ಪಾಮರರಿಗೆ ಇದು ಎಷ್ಟು ಅರ್ಥವಾಗುವುದೋ ತಿಳಿಯದು. ಆದರೆ ಅರ್ಥೈಸಿಕೊಳ್ಳುವ ಹಂಬಲವಿದ್ದವರಿಗೆ ಇದೊಂದು ಅರ್ಥಪೂರ್ಣ ಸಾರ್ಥಕ್ಯದ ಕೃತಿ ಎಂಬುದು ಸತ್ಯ. ದಶವರ್ಷಗಳಲ್ಲಿ ದಶದಿಕ್ಕನ್ನೂ ನೋಡುವಂತೆ ದಶವಿಧ ಆಯಾಮಗಳಲ್ಲಿ ಸಾಗಿದ ಈ ಕಲಾಪರಿಭ್ರಮಣ ಯಕ್ಷಕಲಾವಿದರು ಮಾತ್ರವಲ್ಲ ಎಲ್ಲ ಬಗೆಯ ಕಲಾಪ್ರಿಯರಿಗೆಲ್ಲ ಆಪ್ತವೆನಿಸಬಹುದಾದ ಮೌಲಿಕ, ಉತ್ಕೃಷ್ಟ ಆಕರಗ್ರಂಥ. ಇಂತಹ ಕೃತಿಯ ಓದುಗರ ಸಂಖ್ಯೆ ವಿರಳವಿರಬಹುದು. ‘ಸಾವಿರ ಓದುಗರಲ್ಲಿ ಒಬ್ಬ ಓದಿದರೆ ಅದೇ ಶಾಸ್ತ್ರಕಾರನ ಪುಣ್ಯ ’ ಎಂದು ಲೇಖಕಿಯು ಹೇಳಿರುವುದು ಮನಮುಟ್ಟುವ ಮಾತು. ಕೇವಲ ಓದುವುದು ಮುಖ್ಯವಲ್ಲ. ಅದರ ಮನನವೂ ಅಷ್ಟೇ ಮುಖ್ಯ. ಕೃತಿಯನ್ನು ಓದಿ ಅರಗಿಸಿಕೊಳ್ಳಲು ದೀರ್ಘ ಸಮಯವೇ ಬೇಕು. ಹೀಗಿರುವಾಗ ಕೃತಿ ರಚನೆಯ ಪರಿಶ್ರಮವಂತೂ ಊಹೆಗೂ ನಿಲುಕದ್ದು. ಡಾ. ಮನೋರಮಾ ಅವರ ಪ್ರಯತ್ನಕ್ಕೆ ಹೃದಯಾಂತರಾಳದ ಕೃತಜ್ಞತೆಗಳು ಸಲ್ಲುತ್ತವೆ. ಪ್ರಕಾಶಕರಾದ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನಕ್ಕೂ ಅನಂತ ವಂದನೆಗಳು.