ಅಂಕಣಗಳು

Subscribe


 

ಕಾಮದಹನ

Posted On: Monday, December 30th, 2019
1 Star2 Stars3 Stars4 Stars5 Stars (No Ratings Yet)
Loading...

Author: ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಬೆಂಗಳೂರು

ಕೊರ್ಗಿ ಉಪಾಧ್ಯಾಯರ ನಿರ್ದೇಶನದಲ್ಲಿ ನಡೆದ ಕಾಮದಹನ ರಂಗರೂಪಕದಲ್ಲಿ ಮನ್ಮಥನಾಗಿ ಡಾ.ಮನೋರಮಾ ಬಿ.ಎನ್ ( ಕೆಕ್ಕಾರು ವಿನಲ್ಲಿ ನಡೆದ ರಾಮಕಥಾ, )

ಮದನೋ ಮನ್ಮಥೋ ಮಾರಃ ಪ್ರದ್ಯುಮ್ನೋ ಮೀನಕೇತನಃ | ಕಂದರ್ಪೋ ದರ್ಪಕೋನಂಗಃ ಕಾಮಃ ಪಂಚಶರಃ ಸ್ಮರಃ ||

ಅಮರಕೋಷ ಮನ್ಮಥನಿಗೆ ಅಧಿಕೃತವಾಗಿ ಇಪ್ಪತ್ತೆರಡು ಹೆಸರುಗಳನ್ನು ಹೇಳುತ್ತದೆ. ಬಿಸಿಲಿನ್ಂತೆ, ಗಾಳಿಯಂತೆ ಇರುವ ಪಾತ್ರತ್ವ ಅದು. ಹಿಡಿದಿಡಲಾಗದ ಆದರೆ ನಿರಂತರ ಅನುಭವಕ್ಕೆ ತಾಗುವ ಗುಣಧರ್ಮ ಉಳ್ಳದ್ದು ಕಾಮತ್ವ. ಬಯಕೆಯೇ ಒಂದು ಮೂರ್ತರೂಪವಾದ ಪಾತ್ರ ಮನ್ಮಥ. ಇದ್ದೂ ಸತ್ತ, ಸತ್ತೂ ಇರುವ ವಿಲಕ್ಷಣವಾದ ಸಂಕೀರ್ಣವಾದ ಪಾತ್ರ. ಅನಂಗ ಎಂಬ ಒಂದು ಶಬ್ದವೇ ಸಾಕು ಮನ್ಮಥ ಪಾತ್ರದ ಅಸೀಮ ಕಲ್ಪನೆಗೆ. ಅವನು ಮಹಾಯೋಧ. ಆದರೆ ಕೈಯಲ್ಲಿರುವುದು ಹೂ-ಕಣೆ. ಗಾಳಿಗೆ ಹಾರುವ, ಬಿಸಿಲಿಗೆ ಬಾಡುವ ಯಂಕಂಚಿತ್ ಕುಸುಮವೊಂದು ಘಾತಾಯುಧವಾಗುವ ಕಲ್ಪನೆಯೇ ಸುರಮ್ಯ. ಅಷ್ಟಕ್ಕೂ ಮನ್ಮಥನ ಹತ್ತಿರ ಇರುವುದು ಕೇವಲ ಐದೇ ಹೂ-ಬಾಣಗಳು.

ಅರವಿಂದಮಶೋಕಂ ಚ ಚೂತಂ ಚ ನವಮಲ್ಲಿಕಾ ನೀಲೋತ್ಪಲಂ ಚ ಪಂಚೈತೇ ಪಂಚಬಾಣಸ್ಯ ಸಾಯಕಾಃ ||

ಒಂದೊಂದು ಅರಳಸರಳು‌ಒಂದೊಂದು ಕಾಮಾವಸ್ಥೆಯನ್ನು ಉದ್ದೀಪಿಸಲಿಕ್ಕೆ ಮೀಸಲು. ಇಡೀ ವಿಶ್ವದ ಸಂತಾನಚಕ್ರಸಂಕ್ರಮಣದ ಕೀಲೆಣ್ಣೆಯೇ ಕಾಮದೇವ. ಸಾಂಗನಾಗಿದ್ದ ಮನಸಿಜನನ್ನು ನಿರಂಗನನ್ನಾಗಿಸಿ ಶಾಶ್ವತವಾಗಿ ಅದರ್ಶನನ್ನಾಗಿ ಮಾಡಿದ ಹೃದ್ಯಕಥೆಯೇ ಕಾಮದಹನ. ಲೋಕಹಿಂಸಕರಾದ ರಾಕ್ಷಸರ ಸಂಹಾರಕ್ಕಾಗಿ ಬಲಿಗೊಂಡ ಸುಕುಮಾರನಾಯಕ ಮನ್ಮಥ. ಅದರ ಸಂಕ್ಷಿಪ್ತ-ಆದರೆ ಕ್ಷಿಪ್ರತ್ವ ಉಳ್ಳ-ರಂಗಾಕ್ಷರವೇ ‘ಕಾಮದಹನ

(ರಂಗದಲ್ಲಿ ಋಷಿಗಳು ಹೋಮಿಸುವ, ತಪಸ್ಸನ್ನು ಮಾಡುವ, ಅಧ್ಯಾಪನ ಮಾಡುವ ದೃಶ್ಯಗಳನ್ನು ಕಲ್ಪಿಸಬಹುದು. ಭೀಕರರೂಪಿ ತಾರಕಾಸುರನ ಆಕ್ರಮಣ. ಋಷಿಗಳ ಆಕ್ರಂದನ, ಓಟ, ಪತನ, ಬೀಭತ್ಸ ದೃಶ್ಯವನ್ನು ನಿರ್ಮಾಣ ಮಾಡಬಹುದು. ಋಷಿಗಳ ಮೇಲಿನ ದೌರ್ಜನ್ಯದ ಅಭಿನಯಕ್ಕೆ ಪೋಷಕವಾದ ಪದ್ಯ.) ಏಕತಾಳ

ಲೋಕಗಳೆಲ್ಲವ ಥರಥರಗುಟ್ಟಿಸಿ

ವರಬಲದುಬ್ಬಲಿ ಹೂಂಹೂಂಕರಿಸುತ

ಘೋರ ತಾರಕಾಸುರ ಜಗಮಾರಕ

ನರರನು ಕೊಚ್ಚುತ ಸುರರನು ಚಚ್ಚುತ

ಋಷಿಮುನಿಗಳ ಆಶ್ರಮಕಪ್ಪಳಿಸುತ

ಹೋಮಕುಂಡಗಳ ಹುಡಿಪುಡಿಗಟ್ಟುತ

ಬರ್ಬರ ಬೊಬ್ಬಿರಿದಬ್ಬಬ್ಬರಿಸುತ

ಮೆರೆದ ನಿರಂಕುಶ ನಿರ್ಘೃಣನು

(ಇಡೀ ರಂಗವನ್ನು ಥರಗುಟ್ಟಿಸಿ ತಾರಕನ ನಿರ್ಗಮನ) (ಬ್ರಹ್ಮನ ಬಳಿಗೆ ದೇವತೆಗಳು ಬರುವುದು)

ತಾರಕ ಭಯದೊಳಮರರ್ ಮರಗಟ್ಟುತ | ಸಂಪ್ರಾರ್ಥಿಸಿದರು ಬ್ರಹ್ಮನನು |

ತಾರಕನಳಿಸೆ ತ್ರಿಲೋಖವನುಳಿಸೆ ವಿರಿಂಚಿಯೆ ತೋರು ಉಪಾಯವನು ||

(ಬ್ರಹ್ಮನ ಮಾತು- ಝಂಫೆತಾಳ)

ತಾರಕನ ಸಂಹಾರಕಿರುವುದುದೊಂದೇ ದಾರಿ

ಘೋರ ತಪಸನು ಗೈಯುತಿಹ ತ್ರ್ಯಂಬಕ

ಪಾರ್ವತಿಯನೊಮ್ಮೆ ಕಾಣುವ ತಂತ್ರವೆಸಗಿದರೆ

ಸಾಕು, ಯೋಜಿಸಿ ಪೂರಕದ ರೂಪಕ (ನಿರ್ಗಮನ)

(ಪರ್ವತಾಗ್ರದಲ್ಲಿ ತಪೋಮಗ್ನ ಶಿವ.ಮೌನದಲ್ಲಿ ಉಮೆಯ ಸೇವಾವ್ರತ- ತ್ರಿಪುಟತಾಳ)

ನಿರ್ವಿಕಲ್ಪ ಸಮಾಧಿಯಲಿ ಸಂಮಗ್ನನಾಗಿರೆ ಪಶುಪತಿ

ಸೇವೆಯನು ನಿಷ್ಕಾಮದಿಂದಲಿ ಮಾಡುತಿರ್ದಳು ಪಾರ್ವತಿ

ಹಿಮಗಿರಿಯ ಹೂವುಗಳ ಪೋಣಿಸಿ ಮಾಡಿ ಮಾಲೆಯನರ್ಪಿಸಿ

ತನಿತನಿಯ ಹಣ್ಣುಗಳ ಸಲ್ಲಿಸಿ ತೆರಳುತಿರ್ದಳು ವಂದಿಸಿ

(ಪಾರ್ವತಿ ರಂಗದಾಚೆ ಹೋದಾಗ ಸ್ಮರ-ವಸಂತರ ಪ್ರವೇಶ) ಏಕತಾಳ

ಕಾವೇರಿ ಕಾಮ ಅರಸುತ್ತ ಧಾಮ ಕಾಮಿಗಳು ಚರಿಸುವಂಥ

ಶೃಂಗಾರ ಚೈತ್ರ‌ಋತು ಅಲ್ಲವಾದರೂ ಬಂದನಾ ವಸಂತ

ಸುಮಬಾಣ ತೂಗಿ ಸ್ಮರ ಬಂದ ಬೀಗಿ ಜೊತೆಗೊಂಡ ಮಂದಮರುತ

ಮನ್ಮಥನ ಕಣೆಗೆ ಬಗೆ ಜಾರೆ ಕಣಿಗೆ ನಿಲಬಲ್ಲನಾವ ಸಂತ

(ನಿಶ್ಚಲ ನಿರ್ವಿಕಾರ ರುದ್ರನನ್ನು ದಿಟ್ಟಿಸಿ, ಮನ್ಮಥನಿಂದ ಒಂದೊಂದೇ ಬಾಣಪ್ರಯೋಗ- ಮದನ ಕದನಕುತೂಹಲ ತಿಲ್ಲಾನ ಬಳಸಬಹುದು) ಏಕತಾಳ

ಮಲರಿನ ಮಾರ್ಗಣ ಮೀಂಟಿದ ಮನ್ಮಥ- ಅರವಿಂದ

ಹೂವಿನ ಕಣೆ ಹೂಡಿದ ಮೀನಾಂಕ-ಅಶೋಕ

ಕುಸುಮದ ಕೋಲೆಸೆದನು ಕಂದರ್ಪ-ಚೂತ

ಪುಷ್ಪೇಷುವ ಪ್ರೇಷಿಸಿದ ಪ್ರದ್ಯುಮ್ನ- ನವಮಲ್ಲಿಕಾ

ಐಗೋಲನ ನಾಲ್ಕನೆ ಶರ ಹರನನು ವಿಚಲಿತವಾಗಿಸಲು

ನೋಡಿದ ಉಮೆಯಧರವ ಅವಿಕಾರದಿ ಧೀರಸದಾಶಿವನು

ತಪಸಿನ ತೊಡಕಿಗೆ ಕಾರಣರಾರೆಂದೆತ್ತಿದ ಮೊಗವನ್ನು

ಕಂಡ ಮಾರ ಭುಗಿಲೆದ್ದು ಕೋಪಶಿಖಿ ತೆರೆದನು ಹಣೆಗಣ್ಣು

ಹರಕೋಪಾನಲಭಸ್ಮವಾದ ರತಿಪತಿ ಅರೆಚಣದಲ್ಲಿ

ಕಾಮದ ಹನನಕೆ ಕಾಮಧನವಾಯ್ತನಂಗ ದೇವ ಬಲಿ

(ರೌದ್ರಾಂತದಲ್ಲಿ ಶೃಂಗಾರಸೂಚಕವಾದ ನಾದತರಂಗದಲ್ಲಿ ಪಾರ್ವತಿಯನ್ನರಸುತ್ತ ಸಾಕಾಂಕ್ಷಲೋಚನನಾದ ತ್ರಿಲೋಚನ ಅಲೆದು ನಿರ್ಗಮಿಸಬಹುದು. )

Leave a Reply

*

code