Author: ಮನೋರಮಾ. ಬಿ.ಎನ್
ಬೆಂಗಲ್ಲು ಸ್ಫಟಿಕವೆರಡೂ ಕಲ್ಲು | ಆದೊಡೇಂ?
ರವಿರಶ್ಮಿಯನು ಪಡೆದು ಪ್ರತಿಫಲಿಪ ಗುಣವೊಡೆದು
ಕಾಂಬುದದು ಸ್ಫಟಿಕಾಶ್ಮದೊಳೆ ಹೊರತು
ಬೆಂಗಲ್ಲಿಗಾಗುಣವು ಬರಲೊಲ್ಲದಂತೆಯೇ
ಭಾವುಕ ಕಲಾವಿದನ ಭಾವನೆಯ ಸಾಮ್ರಾಜ್ಯ-
ದಾವರಣ ಸಾಮಾನ್ಯತೆಗೆ ಭಿನ್ನವಾದುದು
ಅಲ್ಲಿ ಆ ಆವರಣದಲ್ಲಿ ಉರಿಯುತಲಿಹುದು
ದಿವ್ಯ ಚೈತನ್ಯದೊಲವಿನ ನಂದಾದೀಪ
ಭವ್ಯಪ್ರತಿಭಾ ರೂಪ ನವ್ಯಭಾವ ಕಲಾಪ
ಜೀವನಾನುಭವ ವಿಶ್ವವಿಚಾರ ಆಲಾಪ
ಸಾಮಾನ್ಯವೂ ಅಸಾಮಾನ್ಯವೆನಿಸುತಲಿಹವು ಪ್ರತಿಭೆ ಪ್ರಭೆಗೆ ಪ್ರತಿಫಲನವಾಗಿ
ಶುಕ್ತಿಯೊಳು ಮಳೆಹನಿಯು ಮುತ್ತಾಗಿ ಮೆರೆವಂತೆ ಹೃತ್‍ಚೈತನ್ಯ ಅದಕೆ ಧ್ವನಿಯಾಗಿ
ಲೋಕಚೈತನ್ಯಕೆ ಮಾರ್ದನಿಗೊಟ್ಟರೆ ಸಾಕು
ಕಲೆಯ ಕಳೆ ಕಾಣಿಪುದು, ಬಲ್ಲವರಿದನು
ವ್ಯಥೆಯು ಕಥೆಯೆನಿಸುವುದು ಪಾಡು ಹಾಡಾಗುವುದು
ವಿಶ್ವಾತ್ಮ ಚೈತನ್ಯಸಾಗರವ ಹರಿದು ಸೇರುವುದು
ರಸಶೃಂಗಮಾಲೆಯಲಿ ಹರಿವ ಕಾವ್ಯದ ಗಂಗೆ
ಕೆತ್ತನೆಯ ಸಂಗೀತದಲಿ ನಿತ್ಯ ಭಾಗೀರಥಿಯು
ಮತ್ತೆ ಸಾಹಿತ್ಯದಲಿ ಸ್ತುತ್ಯ ಸನ್ಮಾರ್ಗದಲಿ
ಉತ್ಸಾಹದಿಂ ಸಾಗೆ ಕಲೆಯೆ ಜೀವನಧರ್ಮ
**************