ಅಂಕಣಗಳು

Subscribe


 

ಕಲಾಸತ್ರದಲ್ಲಿ ‘ನೂಪುರ’

Posted On: Tuesday, May 27th, 2014
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಕಳೆದೆರಡು ವರುಷಗಳಲ್ಲಿ ನಡೆದ ವಾರ್ಷಿಕ ಸಂಭ್ರಮಾಚಣೆಯ ಎದುರಿಗೆ ಈ ವರುಷದ ವಿಶೇಷ ಸಪ್ಪೆಯೆನಿಸುವುದು ಸಹಜವಾದರೂ ಅದರಲ್ಲೂ ಗುರುತರವಾದ ಪ್ರಗತಿಯಿದೆಯೆಂ¨ ಸತ್ಯ ಮನಸ್ಸಿನಲ್ಲಿ ಅನುರಣಿಸುತ್ತಿರುವುದರಿಂದ ಯಾವುದೇ ಪಶ್ಚಾತ್ತಾಪವಾಗಲೀ, ಪರಿತಾಪವಾಗಲೀ ಇಂದಿಗಿಲ್ಲ. ಕೈಗೊಂಡ ಕೆಲಸ ಎಷ್ಟು ದೊಡ್ಡ ಮಟ್ಟಿನದು, ಬಂಡವಾಳದ ಹೂಡಿಕೆ ಎಷ್ಟು ಹೆಚ್ಚಿನದು ಎಂಬ ‘ಪರಿಮಾಣ’ರಮಣೀಯತೆಯಿಂತ ಹೆಚ್ಚಾಗಿ ಅದರ ‘ಪರಿಣಾಮ’ರಮಣೀಯತೆಯೇ ಮುಖ್ಯ. ಆ ಮೂಲಕ ನಮ್ಮನ್ನು ನಾವು ಅರಿಯುವ, ಅರಸುವ, ಶೋಧಿಸುವ ನೆಲೆಯೂ ವಿಸ್ತಾರವಾದುದು ಎಂಬುದನ್ನು ಅರ್ಥ ಮಾಡಿಕೊಂಡಲ್ಲಿಗೆ ಹಮ್ಮಿಕೊಳ್ಳುವ, ಪ್ರಕಟಿಸುವ ಒಂದೊಂದು ಅಕ್ಷರಕ್ಕೂ ಮೌಲ್ಯವಿರಬೇಕು ಎಂಬ ಬಾಂಧವ್ಯವೇ ಮಿಗಿಲೆನಿಸುತ್ತಿದೆ.

ಹಾಗೆಂದೇ ಪುತ್ತೂರಿನಲ್ಲಿ ಈ ಸಲ ಏಪ್ರಿಲ್ 20ರಂದು ವಾರದ ಕಾಲ ಕರಾವಳಿಯ ಆಸಕ್ತ ವಿದ್ಯಾರ್ಥಿಗಳಿಗೆಂದೇ ನಾಟ್ಯಶಾಸ್ತ್ರದ ಅರಿವನ್ನು ವಿಸ್ತರಿಸುವ ಕಾರ್ಯಾಗಾರವು ‘ಕಲಾಶ್ರಯ’ದ ಸಹಯೋಗದಲ್ಲಿ ನಡೆಯಲಿದ್ದು; ಅದರ ಉದ್ಘಾಟನೆಯ ಮುಹೂರ್ತದಂದು ವಾರ್ಷಿಕ ವಿಶೇಷವು ಸಂಶೋಧನ ನಿಯತಕಾಲಿಕೆಯ ರೂಪವನ್ನೂ ಪಡೆದು ಅನಾವರಣಗೊಳ್ಳುತ್ತಿರುವುದು ಸುಯೋಗವೇ ಸರಿ. ಆ ಮೂಲಕ ಕ್ರಮವತ್ತಾದ ಅಧ್ಯಯನ, ಸಂಶೋಧನ ಸತ್ರವನ್ನು ಸೋಪಾನಗಳೋಪಾದಿಯಲ್ಲಿ ಮುಂದುವರೆಸಿಕೊಂಡು ಹೋಗಲು ನಿಜಕ್ಕೂ ಹೆಮ್ಮೆಯೆನಿಸುತ್ತಿದೆ. ನಮ್ಮನ್ನು ಸೆಳೆದ ಅಧ್ಯಯನದ ಸೇತುವಿನಲ್ಲಿ ಮತ್ತಷ್ಟು ಮಂದಿಯನ್ನು ಬೆಸೆಯುವ ಪ್ರೀತಿ ನಮ್ಮದು. ಹೀಗಾಗಿ ಮಾಘಮಾಸದ ಚಳಿಯನ್ನು ನಿಧಾನವಾಗಿ ಕೊಡಹಿಕೊಂಡು ತಡವಾಗಿ ವಾರ್ಷಿಕ ಸಂಚಿಕೆಯ ಎಲೆಗಳು ಇಣುಕಿದರೂ ಅದು ವಸಂತವಿಹಾರದಲ್ಲಿ ತನ್ನ ಚೆಲುವು ಸೊಗಸಿನ ಹೂವುಗಳನ್ನು ಅರಳಿಸುವ ಮೂಲಕ ಸಾರ್ಥಕರೂಪವನ್ನು ಪಡೆದಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಮೊದಲಿನಿಂದಲೂ ಒಂದಷ್ಟು ಸಮಯ ಗಡುವುಗಳ ಶಿಸ್ತನ್ನು ಹಾಕಿಕೊಂಡೇ ಮುನ್ನಡೆದು ಬಂದಿದೆ ನೂಪುರ ಭ್ರಮರಿ. ಆ ಗಡುವಿನಲ್ಲಿ ಗಡಿಬಿಡಿಯ ಒತ್ತಡಕ್ಕಿಂತಲೂ ಕೆಲಸ-ಕೌಶಲ್ಯದೆಡೆಗೆ ಮಮತೆ, ಆರೈಕೆ ಇದ್ದರೆ ಚೆನ್ನ. ಒಂದಷ್ಟು ಶಿಸ್ತಿನ ಹಟ ಬೇಕು ನಿಜ.

ಆದರೆ ಹಟದ ಫಲವಾಗಿಯೇ ಬರುವ ಉದ್ವೇಗ, ನಿರೀಕ್ಷೆಗಳ ಮಹಾಪೂರವನ್ನು ಸರಿತೂಗಿಸಿಕೊಳ್ಳುವುದಲ್ಲಿ ಮೈಮನಸ್ಸು ಎಲ್ಲಾ ಬಗೆಯ ಸಂಕಟಗಳಿಗೊಡ್ಡಿಕೊಂಡು ಸಾಕಷ್ಟು ಕಾಠೋರ್ಯದ ಸಂದಿಗ್ಧಗಳನ್ನು ಅನುಭವಿಸುತ್ತದೆ, ಕೊರಗುತ್ತದೆ, ಮರುಗುತ್ತದೆ. ಆದರೆ ಅದರೊಳಗೂ ನೆಮ್ಮದಿಯೊಂದಿದೆ- ನೂಪುರ ಭ್ರಮರಿ ಸ್ವಇಚ್ಛೆಯ ಸಾನಂದಪಾಕ.

ನಮಗೇ ನಾವೇ ಸ್ವತಃ ಮಾಡಿಕೊಂಡು ಮತ್ತೊಂದಷ್ತು ಸಮನಮನಸ್ಕರನ್ನು ಜೊತೆಮಾಡಿಕೊಂಡ ಜೀವನಧರ್ಮ. ಯಾರದ್ದೋ ಒತ್ತಾಯಕ್ಕೆ ಬಸಿರಾಗಬೇಕೆಂದಿಲ್ಲ. ಯಾರ್ಯಾರಿಗೋ ದಾಸರಾಗುವ ಅವಲಂಬನೆ ಬೇಕಿಲ್ಲ. ಭಾವವಿಲ್ಲದ ಬಂಧನಗಳನ್ನು ಅಂಟಿಸಿಕೊಳ್ಳಬೇಕೆಂದಿಲ್ಲ. ತಳುಕುಬಳುಕಿಗೆ ಬಾಗಬೇಕಿಂದಿಲ್ಲ. ಪ್ರಚಾರದ ಮಿಥ್ಯ ಕಾಂಕ್ಷೆಗಳ ಆಸೆಯಿಲ್ಲ. ತೆತ್ತುಕೊಂಡಿಲ್ಲ; ಕಿತ್ತುಕೊಂಡಿಲ್ಲ. ಆದರೂ ಸಾವಧಾನದಿಂದ ನಮ್ಮ ಬದುಕಿನ ಸ್ವಾದವನ್ನು ಹೀರದ, ರಸೋದ್ದೀಪನಕ್ಕೆ ಹೇತುವಾಗದ ಕೆಲಸವನ್ನು ತಿಳಿದೋ ತಿಳಿಯದೆಯೋ ಅಂಟಿಸಿಕೊಂಡರೆ ಎಂದೆಂದಿಗೂ ತನ್ನ ಫಲಿತಾಂಶದಲ್ಲಿ ನೆಮ್ಮದಿಯನ್ನು ಕಾಣುವುದು ಸರ್ವಥಾ ಅಸಾಧ್ಯ ಎಂಬುದು ಮನವರಿಕೆಯಾಗಿದೆ. ಅದಕ್ಕೆ ಮೈಮನಸ್ಸಿನ ಆರೋಗ್ಯದ ಬೆಲೆ ತೆತ್ತೂ ಆಗಿದೆ. ಯಥಾಪ್ರಕಾರ ಆಪ್ತವಾದ ಅಂತೆಯೇ ಬಿಂಕ-ತೋರಿಕೆಯ ನೇಹ ನಂಟಿನ ಭಾವಬಿಡುಗಡೆಯೂ ನಡೆದಿದೆ.

ಆದರೆ ಕಳೆದುಕೊಂಡದ್ದಷ್ಟೂ ನಮ್ಮದಲ್ಲ ಅಥವಾ ನಮ್ಮತನವನ್ನು ಅರಿಯುವಲ್ಲಿ ಒದಗಿದ ಪುಟ್ಟತ್ಯಾಗವೆಂದು ತಿಳಿವಿಗೆ ತಂದುಕೊಂಡು ಆತ್ಮಾನುಸಂಧಾನಕ್ಕೆ ಏನು ಬೇಕು, ಏನು ಬೇಡ ಎಂಬ ಸ್ಪಷ್ಟ ನಿಲುವಿಗೆ ಬಂದಾಗಿದೆ. ಈ ಹಿನ್ನೆಲೆಯಲ್ಲಿ ಕೈಗೊಂಡ ಕಾರ್ಯ ಚಿಕ್ಕದ್ದೇ ಇರಲಿ, ಅವುಗಳ ವಿವರ ವರ್ಣನೆಗಳನ್ನು ಆಸ್ವಾದಿಸುತ್ತಾ ಬೋಧದೊಂದಿಗೆ ಮೋದವನ್ನು ಬೆರೆಸುತ್ತಾ ಅವಸರದ ಹಟವನ್ನು ಬದಿಗಿಟ್ಟು ಆನಂದಾಮೃತದರ್ಶನವನ್ನೇ ಅರಸಿ ಸಂಚಿಕೆಗಳನ್ನು ರೂಪಿಸುವುದು, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ನಮ್ಮ ಗುರಿಗಳಲ್ಲೊಂದು.

ನೂಪುರವು ಎಂಟರ ತುಂಟಿಯಾಗುವ ಹಂತದ ಈ ಪಯಣದುದ್ದಕ್ಕೂ ಲಾಭ-ನಷ್ಟಗಳ ಉದ್ದೇಶವನ್ನೇ ಬದಿಗಿಟ್ಟು ನಮಗೆ ನಾವೇ ಹಾಕಿಕೊಂಡ ಬದ್ಧತೆಯ ಬಿಸುಪು, ಬೆರಗುಗಳೇ ಜಾಸ್ತಿ ಎಂಬುದು ನಿಮಗೆಲ್ಲರಿಗೂ ತಿಳಿದೇ ಇದೆ. ಇದರೊಂದಿಗೆ ಪತ್ರಿಕೆ ರೂಪಿಸುವಲ್ಲಿ ಆಗುವ ಜೀವನಾನುಭವವೂ ಪ್ರತೀ ಮೆಟಿಲಿಗೂ ಹೊಸಹೊಸ ಪಾಠಗಳ ದಶರ್ನವೀಯುತ್ತಿವೆ. ಈ ಕರ್ಮಮರ್ಮದ ಧ್ಯೇಯದೊಂದಿಗೆ ಏಳನೇ ವರುಷದ ಹೊಸಿಲನ್ನು ದಾಟಿ ಎಂಟನೇ ವರ್ಷದ ವಸಂತವನ್ನು ಕಾಣುತ್ತಿರುವುದಕ್ಕೆ ನಂಬಿದ ನಡೆಯಲ್ಲಿ ಸೊಂಪು ಕಾಣುವುದೇ ಕಾರಣ.

ಸಾಮಾನ್ಯವಾಗಿ ಸಂಶೋಧನ ಲೇಖನಗಳನ್ನು ಪ್ರಕಟಪಡಿಸುವುದಾದರೆ ಐಎಸ್‍ಎಸ್‍ಎನ್ ಸಂಖ್ಯೆಯ ಮನ್ನಣೆ ಪಡೆದ ನಿಯತಕಾಲಿಕೆಯಲ್ಲೇ ನಡೆದರೆ ಅದಕ್ಕೊಂದು ವಿಶೇಷ ಗರಿ ಮೂಡುತ್ತದೆ. ಒಂದುವೇಳೆ ಅದರ ಅನುಕೂಲತೆ ಸಂಶೋಧನಾರ್ಥಿಗಳಿಗೆ ಇಲ್ಲವೆಂದಾದರೆ ಅದರ ಪಾಡು ಹೇಳತೀರದು. ಇದು ಸ್ವಾನುಭವದ ಸಂಕಟವೂ ಹೌದು. ಇಂತಹ ಅನೇಕ ತಳಮಳಗಳಿಗೆ ಉತ್ತರ ಕಂಡುಕೊಳ್ಳುವ ಹಾದಿ ನೂಪುರಕ್ಕೆ ಮೊದಲಿನಿಂದಲೂ ಇದ್ದದ್ದೇ.

ಹಾಗಾಗಿ ಪತ್ರಿಕೆ ಕೇವಲ ಪತ್ರಿಕೆಯಾಗಿದ್ದರೆ ಸಾಲದು, ಸಂಶೋಧನ ನಿಯತಕಾಲಿಕೆಯಗಿಯೂ ಪ್ರಕಾಶಿಸಲಿ ಎಂಬ ಸೋದ್ದೇಶದಿಂದ ಹೆಜ್ಜೆ ಮೊದಲಿಟ್ಟೆವು. ವರುಷಕ್ಕೊಂದಾವರ್ತಿ ಬರುವ ‘ನೂಪುರಾಗಮ’ದ ಒತ್ತಡ, ವಿಕ್ರಯಿಸುವ ಒದ್ದಾಟಕ್ಕಿಂತ ಎಲ್ಲಾ ಓದುಗರಿಗೂ ತಲುಪಬಲ್ಲ ಪತ್ರಿಕೆಯೇ ಸಂಶೋಧನಾಸಕ್ತಿಗಳಿಗೆ ವೇದಿಕೆಯಾದರೆ? ಎಂದು ಕಂಡಿದ್ದು ನಿಜ. ಜೊತೆಗೆ ವರುಷದ ದೀರ್ಘ ಪಯಣಕ್ಕೆ ಇದಿರು ನೋಡುವುದ್ಯಾಕ್É? ಎರಡೆರಡೂ ತಿಂಗಳಿಗೂ ಬರೆವಣಿಗೆಗಳ ಬೆಳಕು ಕಾಣಿಸಬಹುದಲ್ಲಾ !

ಈ ಯೋಚನೆ ಬರುವ ಸಾಕಷ್ಟು ವರುಷಗಳ ಮೊದಲಿಗೇ ಸಂಶೋಧನಸಂಗತಿಗಳ ನಿತ್ಯಪ್ರವಾಹ ನೂಪುರ ಭ್ರಮರಿಯಲ್ಲಿತ್ತಾದರೂ ಅದಕ್ಕೊಂದು ಉಚಿತಾಸನ ನೀಡುವ ಕಾರ್ಯ ಕಳೆದ ವರುಷದ ಆರಂಭಕ್ಕೆ ಉಪಕ್ರಮಿಸಿತ್ತು. ಆದರೆ ಐಎಸ್‍ಎಸ್‍ಎನ್ ಎಂಬ ಎಂಟಕಿಯ ಸಂಖ್ಯೆಯ ನೋಂದಣೆಯಾಗಿ ವರುಷವೊಂದು ಕಳೆಯಿತಾದರೂ ಅದರ ಬಗ್ಗೆ ಸ್ಪಷ್ಟ ವಿವರ ದೊರೆತಿದ್ದು ಈ ಎಂಟನೇ ಸಂಪುಟದ ಸಂಚಿಕೆಗೇ ! ಕಾಲ ಕೂಡಿಬರಬೇಕು ಎಂದು ಸುಮ್ಮಗೇ ಹೇಳುತ್ತಾರೇನು? ಹಾಗಾಗಿ ಮಾಹಿತಿಯ ಕೊರತೆಯಿಂದಾಗಿ ವರುಷವೊಂದರ ಹಿಂದೆಯೇ ಪಡೆದ ಗರಿಮೆಯ ಭಾಗ್ಯ ಪ್ರಕಟಣೆಯ ಸೊಬಗಿಗೆ ಇಂಬಾದದ್ದು ಈ ಸಲವೇ.

ಅದೂ ಆಕಸ್ಮಿಕವಾದ ಮತ್ತೊಂದು ಶೋಧದ ಉತ್ಪನ್ನವಾಗಿ! ಏನೇ ಇರಲಿ, ಇಡೀ ಕರ್ನಾಟಕದಲ್ಲಿ ಅಷ್ಟೇಕೆ, ಭಾರತದಲ್ಲೇ ಐಎಸ್‍ಎಸ್‍ಎನ್ ಸಂಖ್ಯೆಯನ್ನು ಪಡೆದು ದ್ವಿಭಾಷೆಯಲ್ಲಿ ಹೊರಬರುವ ನೃತ್ಯಸಂಶೋಧನ ನಿಯತಕಾಲಿಕೆಯಾಗಿಯೂ, ಜನಪ್ರಿಯ ಕಲಾದ್ವೈಮಾಸಿಕವಾಗಿಯೂ ಮನ್ನಣೆ ಪಡೆದಿರುವುದು ಇಂದಿಗೆ ಬಹುಷಃ ನೂಪುರ ಭ್ರಮರಿ ಮಾತ್ರ. ಇಂತಹ ಪ್ರಥಮಗಳ ಸಾಲಿನ ಇತಿಹಾಸದಲ್ಲಿ ನೂಪುರದ ಹೆಜ್ಜೆ ಅಚ್ಚೊತ್ತಿರುವುದು ನಿಜಕ್ಕೂ ಸಂಭ್ರಮವೇ ಸೈ.

ವರುಷದಿಂದ ವರುಷಕ್ಕೆ ಸಂಶೋಧನೆ-ಅಧ್ಯಯನ-ವಿಮರ್ಶೆ ಮತ್ತು ಗುಣಮಟ್ಟದ ಕೌಶಲ್ಯಗಳಿಗೆ ಒತ್ತಾಸೆಯಾಗುವಂತೆ ಮತ್ತೊಂದಷ್ಟು ಗಟ್ಟಿಯಾದ ನಿಲುಗಂಬಗಳನ್ನು ಹೊಂದಿದ ಸೂಕ್ತ ವೇದಿಕೆಯಾಗುತ್ತಿರುವುದನ್ನು ಗಮನಿಸಿದರೆ ಜನಪ್ರೀತಿ ಮತ್ತು ಪತ್ರಿಕೆಯೊಂದು ಪಡೆಯಬೇಕಾದ ನೆಲೆ-ಬೆಲೆಗಳಿಗೆ ಮಾರ್ಗದರ್ಶನವೂ ಆಗಿದೆ ಎಂಬ ಹಿರಿಯರ ಮಾತು ಸತ್ಯವೆನಿಸದಿರದು. ಇದಕ್ಕೆ ಅನುರೂಪವಾಗಿ ಕಳೆದ ವರುಷ ನೂಪುರ ಭ್ರಮರಿಯ ನೃತ್ಯಸಂಶೋಧನವಿಭಾಗದ ಸಾರಥ್ಯದಲ್ಲಿ ನಡೆದ ನೃತ್ಯಸಂಶೋಧನ ಸಮ್ಮೇಳನದ ಸೌಗಂಧವನ್ನು ಉಣಬಡಿಸುವ ಕಾರ್ಯ ಇಲ್ಲಿ ಸಂಕ್ಷಿಪ್ತವಾಗಿ ಜರುಗಿದೆ.

ಈ ವರುಷದ ಅಂತ್ಯವೇಳೆಯೊಳಗೆ ಮತ್ತೊಂದು ದಿವ್ಯವಾದ ಕಾವ್ಯಗುಂಫನದ ಕಾಣಿಕೆಯನ್ನು ನೀಡುವ ಕರ್ತವ್ಯ ಸಂಭ್ರಮದಿಂದ ವೇಗವನ್ನು ಪಡೆದುಕೊಳ್ಳುತ್ತಿದೆ. ಇವೆಲ್ಲದರ ಜೊತೆಗೆ ಹತ್ತು ಹಲವು ಹೊಸ ಜವಾಬ್ದಾರಿಗಳು ಕಲಾಭಿಮುಖವಾಗಿ ಬೆನ್ನಟ್ಟುತ್ತಿವೆ. ಅವುಗಳ ನೆರಳು ಬೆಳಕಿನಲ್ಲಿ ನೂಪುರದ ಜೈತಯಾತ್ರೆಗೆ ನೀವೂ ಕೈಜೋಡಿಸುವಿರೆಂಬ ನಂಬುಗೆ ನಮ್ಮದು.

Leave a Reply

*

code