ಅಂಕಣಗಳು

Subscribe


 

ಜತಿ, ನೃತ್ಯಸಾಹಿತ್ಯವೆಂಬ ಅರ್ಥವಾಗದ ಅಳಲಿನಲ್ಲಿ ಅಭಿನಯಪಂಚಾಂಗದ ಆರ್ತಾಲಾಪ

Posted On: Saturday, February 11th, 2017
1 Star2 Stars3 Stars4 Stars5 Stars (No Ratings Yet)
Loading...

Author: - ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಬೆಂಗಳೂರು.

ಸಂಪೂರ್ಣ ನೃತ್ಯಕಲಾವ್ಯಾಪಾರದ ಮೂಲಪಂಚಾಂಗ-ಅಭಿನಯ ಎಂಬುದು ನಿರ್ವಿವಾದ ವಿಷಯ. ಯಾಕೆಂದರೆ ಇದು ದೃಶ್ಯ-ಶುದ್ಧಾಂಗ ಚಾಕ್ಷುಷಯಜ್ಞ. ನೇತ್ರಾರಾಧನೆ ಅಥವಾ ಕಣ್‌ತಣಿವು ಈ ಕಲಾಯಜ್ಞ ಪರಮಪ್ರಯೋಜನ. ರೇಡಿಯೋ ಸಂಗೀತ ಇದೆ; ರೇಡಿಯೋ ನಾಟಕ ಇದೆ; ರೇಡಿಯೋ ನರ್ತನ..? ಆದ್ದರಿಂದಲೇ ಇದನ್ನು ಚಾಕ್ಷುಷಯಜ್ಞ ಎಂದು ಗುರುತಿಸಿದ್ದಾರೆ.

ಬಣ್ಣ, ಬೆಳಕು, ಭಿತ್ತಿ, ಪರದೆ ಇತ್ಯಾದಿ ಬೆರಗುಗಳಿಲ್ಲದೇ ಭಾವಾಭಿನಯದ ಮೂಲಕ ರಸೋತ್ಕರ್ಷವನ್ನು ಸಹೃದಯನಲ್ಲಿ ಉಂಟುಮಾಡುವ ಮೂಲಸಾಮರ್ಥ್ಯ ಇರುವ ಏಕೈಕ ಶಿಷ್ಟಕಲೆ ಎಂದರೆ ನಾಟ್ಯ. ಬಾಹ್ಯ ಪರಿಕರಗಳ ಚಮತ್ಕೃತಿಯ ಸಹಾಯದಿಂದ ನೋಡುಗನನ್ನು ಮೋಡಿ ಮಾಡುವ ದೃಶ್ಯಕಲೆಗಳು ಹಲವಿದ್ದಾವೆ. ಆದರೆ ಮಾತಿನ ಸಹಾಯವೂ ಇಲ್ಲದೇ, ಮಾತು ಹೇಳಲೂ ಸೋಲುವ ಇನ್ನೊಂದೇ ಭಾವವನ್ನು ತನ್ನ ಹೃದಯದಲ್ಲಿ ಹುಟ್ಟಿಸಿಕೊಂಡು ಕಣ್ಣಲ್ಲಿ ಬೆಳಗಿ ಪ್ರೇಕ್ಷಕನಲ್ಲಿ ಸಂವಹಿಸುವ ಅಸಾಧಾರಣ ಅಭಿನಯ ಪ್ರಕ್ರಿಯೆಯ ಮಹತ್ತನ್ನು ಮನಗಂಡರೆ ಈಗ ನನ್ನ ಅಳಲು ಅರ್ಥವಾದೀತು !

ಜತಿಯ ಪಂಚಾಂಗಕ್ಕೆ ಅಭಿನಯದ ಆಧಾರಷಡ್ಜ ಬೇಡವೇನು?

ಅಭಿನಯಪಾಟವವೇ ಕಲಾವಿದನ ಶಾಸ್ತ್ರಾನುಭವ ಹಾಗೂ ಲೋಕಾನುಭವದ ಸಂಗ್ರಹಕ್ಕೆ ಮಾನದಂಡ. ಪದಘಾತ ಅಥವಾ ಹೆಜ್ಜೆಗಾರಿಕೆಯೆಂಬುದು ನಾಟ್ಯಕ್ಕಿಂತ ಹೊರತಾದ್ದಲ್ಲವಲ್ಲ ! ಲಯವಿನ್ಯಾಸದ ಪಾರಮ್ಯವನ್ನು ತೋರಿಸುವುದೇ ಕಲಾವಿದರ ತಾಕತ್ತಿನ ತೋರುಗಂಬವಲ್ಲ ಅಥವಾ ಲಯವಿನ್ಯಾಸ ಅಭಿನಯವಿನ್ಯಾಸದ ಅಡಿಯಾಳೂ ಅಲ್ಲ. ಬರೀ ಹೆಜ್ಜೆಗಾರಿಕೆಯ ಒಳಸುಳಿಯ ನಿಭಾವಣೆ, ಮುದ್ರಾಸಹಿತವಾದ ಭಂಗೀಕೃತ ಚಲನೆಯೇ ಹೆಚ್ಚಿನ ಪ್ರದರ್ಶನಾವಧಿಯನ್ನು ಆವರಿಸಿದರೆ ಅದು ಕೇವಲ ಪದಪ್ರಾತ್ಯಕ್ಷಿಕೆಯಾದೀತೇ ಹೊರತು ನಾಟ್ಯವೆನಿಸಲಾರದು. ಎಂಥಾ ಜಟಿಲ ವಿನ್ಯಾಸದ ಲಯಪ್ರಸ್ತುತಿಯೇ ಇರಲಿ, ಶ್ರಮಸಾಧ್ಯವಾದ ಆಂಗಿಕ ನಮನೀಯತೆಯೇ ಇರಲಿ, ಆ ಪ್ರಯತ್ನವನ್ನು ಅಭಿನಯದ ಒಂದು ಭಾವಾಭಿವ್ಯಕ್ತಿ ನೂರ್ಮಡಿಸುತ್ತದೆಯಲ್ಲವೇ? ರಸ ಎಂಬ ಹೆದ್ದೇರನ್ನು ಎಳೆಯಲು ಒದಗಿಬರುವ ಹೇರುಹಗ್ಗಗಳು ಈ ಚಲದ್ವಿನಿಯೋಗ ಅಂತ ನನ್ನ ಅನಿಸಿಕೆ.

ಆದರೆ ಭರತನಾಟ್ಯಪ್ರದರ್ಶನದಲ್ಲಿ ಬಹುತೇಕ ನೃತ್ಯಪರಿಶ್ರಮಿಗಳು ಅಭಿನಯವನ್ನು ಆನುಷಂಗಿಕವಾಗಿ ಅಂದರೆ ಗೌಣವಾಗಿ ಗಣಿಸುತ್ತಾರೆಯೇ ಎನ್ನುವ ಅನುಮಾನ ನನ್ನನ್ನು ಹೆಚ್ಚಿನ ಬಾರಿ ಕಾಡಿದೆ, ಕಾಡುತ್ತಿದೆ. ಅಭಿನಯದ ಬಗ್ಗೆ ಅದು ಅಸಡ್ಡೆಯೋ, ಅಲಕ್ಷ್ಯವೋ, ಅನಗತ್ಯ ಎಂಬ ಆಗ್ರಹವೋ ! –ಇಡೀ ನಾಟ್ಯಮಂಟಪದ ಬೇರುಗಲ್ಲಾದ ಅಭಿನಯವು ಎರಡನೇ ಜಾಗಕ್ಕೆ ಹಾರಿ, ನೃತ್ತವು ಪ್ರದರ್ಶನದ ತೋರಣಗಲ್ಲಾಗಿ ತೋರ್ಪಡಿಸಿಕೊಳ್ಳುತ್ತದಲ್ಲಾ… ಯಾಕೆ ಎಂಬುದು ನನಗೆ ಬಗೆಯರಿಯದ್ದು. ವಿಶೇಷತಃ ಜತಿಯ ನಿರ್ವಹಣೆಯಲ್ಲಿ ಅಭಿನಯ-ಸ್ರೋತ ಇದ್ದಕ್ಕಿದ್ದಂತೆ ಸರಸ್ವತೀನದಿಯ ಹಾಗೆ ಇಂಗಿಹೋದಾಗ ನನಗೆ ಕನಸಲ್ಲಿ ಕಾಲುಜಾರಿದ ಅನುಭವ ಆಗುತ್ತದೆ. ಸಾಕಷ್ಟು ದೇಹದಂಡಿಸಿ ಜತಿಯ ಅಭ್ಯಾಸ ಮಾಡಿದ ಕಲಾವಿದನ ಶ್ರದ್ಧೆಯನ್ನ, ಹಟವನ್ನ ಪೂರ್ಣಗೌರವಿಸಿ ನಾನು ಇದನ್ನು ಹೇಳುತ್ತಿದ್ದೇನೆ.

ಜತಿ ಎಂಬುದು ಬೇರೆಯೇ ಕ್ರಿಯಾಕಲಾಪ ಅಂತ ಬೇರ್ಪಡಿಸದೇ, ಅಭಿನೇಯವಸ್ತುವಿನ ಇತಿವೃತ್ತದೊಳಗೆ ಸಹಜವಾಗಿ ಮೂಡುವಂತೆ ಮಾಡಲು ಸಾಧ್ಯವಾಗುವುದಿಲ್ಲವೇ? ಅದಕ್ಕೂ ಅಭಿನಯದ ಆಧಾರಷಡ್ಜವನ್ನು ಜೋಡಿಸಿ ರಸಭಾವಯಾತ್ರೆಯಲ್ಲಿ ಪ್ರೇಕ್ಷಕನನ್ನು ಒಯ್ಯಬಹುದಲ್ಲವೇ? ಅಥವಾ ಆರಿಸಿಕೊಂಡ ನಾಟ್ಯವಸ್ತುವಿನಲ್ಲಿ ಯಾವ ಸಂದರ್ಭಕ್ಕೆ ಸಾಭಿನಯಜತಿ ಹೊಂದಿಕೆಯಾಗುತ್ತದೆಂದು ನೋಡಿ ಅಳವಡಿಸಿದರೆ ಬಂಗಾರಕ್ಕೆ ಪರಿಮಳ ಬಂದಂತಾಗುವುದಿಲ್ಲವೇ?

ವಿರಾಮಶೀಲವಾದ ನನ್ನ ಈ ಅಭಿಪ್ರಾಯವನ್ನು ಹಲವು ಪರಂಪರಾಪ್ರಿಯರು ಒಪ್ಪಲಿಕ್ಕಿಲ್ಲ. ಮಾತ್ರವಲ್ಲ, ಶಾಸ್ತ್ರವಿರೋಧಿ ಎಂತಲೂ ಹೇಳಿಯಾರು. ಅದರಲ್ಲೂ ನಾನು ನೃತ್ಯಾಭ್ಯಾಸಿ ಅಲ್ಲದ ಕಾರಣ ನಾಟ್ಯದ ಕುರಿತು ಅಧಿಕೃತವಾಗಿ ಮಾತನಾಡುವ ಪ್ರಾಥಮಿಕ ಅರ್ಹತೆ ನನಗಿಲ್ಲ ಎಂದು ಭಾವಿಸಿದರೆ ಸರಿಯೇ; ಆದರೆ ನಾನೊಬ್ಬ ನಾಟ್ಯಪ್ರೇಕ್ಷಕನಾಗಿ, ಸಂಗೀತ ಸ್ರೋತಸನಾಗಿ, ಯಕ್ಷಗಾನ-ರಂಗಭೂಮಿ ಕಲೆಗಳ ಆದ್ಯ ಕಲಾಕಲಾಪಗಳ ನೆಂಟಸ್ತನಾಗಿ ಮೊದಲ ಸುತ್ತಿನ ಅರ್ಹತೆಯಂತೂ ಖಂಡಿತಾ ಇದ್ದೇ ಇದೆ.

ಶಾಸ್ತ್ರ ಪರಂಪರೆ- ಪ್ರಯೋಗದ ತಾಕಲಾಟದೊಳಗೆ…ಅರ್ಥವ್ಯಾಪಾರ

ಕಲಾಸಂವಿಧಾನದ ವಿಶ್ಲೇಷಣೆ ಮಾಡೋದು ಶಾಸ್ತ್ರ. ಶಾಸ್ತ್ರ ರೂಪೊಡೆಯುವುದೇ ಪ್ರಯೋಗವನ್ನು ಆಧರಿಸಿ. ಕಲೆಗೊಂದು ಚೌಕಟ್ಟು ಕೊಡುವುದು ಶಾಸ್ತ್ರದ ಕೆಲಸ. ಅದು ಪರಂಪರೆಯನ್ನು ದಿಗ್ಧರ್ಶಿಸುತ್ತದೆ. ಹಾಗೆ ಪ್ರಯೋಗಸಾಧ್ಯತೆಗಳತ್ತಲೂ ಕುತೂಹಲಿಯನ್ನು ಕೈಹಿಡಿದು ಕರೆದೊಯ್ಯುತ್ತದೆ. ಅದು ಕಟ್ಟುನಿಟ್ಟಾಗಿ ಕಣ್ಗಾಪಾಗಿ ಕಾಯುವುದು ನಿರೀಕ್ಷಿಸುವುದು ಪರಿಣಾಮರಮಣೀಯತೆಯನ್ನು ಔಚಿತ್ಯವನ್ನು. ಔಚಿತ್ಯಕ್ಕೆ ನಮ್ಮ ಸಂಸ್ಕಾರವೇ ಪ್ರಮಾಣ. ಆದರೆ ಈಗೀಗ ಪರಂಪರೆ ಮತ್ತು ಪ್ರಯೋಗ- ಎಲ್ಲಾ ಕ್ಷೇತ್ರದಲ್ಲೂ ಗುಲ್ಲೆಬ್ಬಿಸುವ ಐಟಂ. ಶಾಸ್ತ್ರವನ್ನು ಅಧ್ಯಯನ ಮಾಡಿದವರಿಗೆ ಇಂತಹ ಗೊಂದಲ ಇರುವುದಿಲ್ಲ. ಕೇವಲ ಮೌಖಿಕ ಪರಂಪರೆಯೊಂದಿಗೆ ಬೆಳೆದ ಶ್ರದ್ಧಾವಂತ ಮನಸ್ಸಿನಲ್ಲಿ ತಾಕಲಾಟ ತಾಂಡವಿಸುತ್ತದೆ.

ಸಹೃದಯ ಸಮಾರಾಧನೆಯೇ ಕಲೆಯ ಚರಮೋದ್ದೇಶ ಎಂಬುದಕ್ಕೆ ಬಹುಷಃ ಯಾರದ್ದೂ ವಿರೋಧವಿರಲಾರದು ಎಂದುಕೊಂಡಿದ್ದೇನೆ. ‘ಆಪರಿತೋಷಾತ್ ವಿದುಷಾಂ ನ ಸಾಧು ಮನ್ಯೇ ಪ್ರಯೋಗವಿಜ್ಞಾನಂ; ಎಂಬ ಕಾಳಿದಾಸನ ಮಾತೇ ನಮಗೆ ಇಂಥಲ್ಲಿ ದಾರಿದೀಪ. ತಿಳಿದವರ ಸಂತೋಷದ ಹೊರತು ಪ್ರಯೋಗ ಸಾಧುವಲ್ಲ ಅಂತ ಆತನ ಕಟ್ಟುನುಡಿ-ವಿನಯೋಕ್ತಿ. ಸಹೃದಯನಲ್ಲಿ ಚಿತ್ತವಿಶ್ರಾಂತಿ ಅಥವಾ ಆನಂದ ಉಂಟುಮಾಡೋದು ಕಲೆ. ಹೀಗೆ ನೃತ್ಯಪ್ರದರ್ಶನ ಪ್ರೇಕ್ಷಕನನ್ನು ಮುಟ್ಟಬೇಕು, ಮನಸ್ಸನ್ನು ತಟ್ಟಬೇಕು, ದೊಡ್ಡಭಾಷೆಯಲ್ಲಿ ಹೇಳುವುದಾದರೆ ರಸಸ್ಥಿತಿಗೊಯ್ಯಬೇಕು ಎಂದಾದರೆ, ಪ್ರದರ್ಶಿಸುವ ಕಲೆ ಅಥವಾ ಕಲಾವಿದನ ದುಡಿತ, ಪ್ರೇಕ್ಷಕನ ಒಳಬಗೆಯ ತುಡಿತವಾಗಿ ಮಾರ್ಪಡಬೇಕು. ಹಾಗಾಗಬೇಕಾದರೆ ರಂಗದ ಕಲಾವ್ಯಾಪಾರವು ನನ್ನಂಥ ಪ್ರೇಕ್ಷಕನಿಗೆ ಸಾಧ್ಯವಾದಷ್ಟೂ ಅರ್ಥವಾಗಬೇಕು.

ಸಾಹಿತ್ಯ-ಸಂಗೀತ ಸಮೀಕರಣದ ಗೋಜಲಿನಲ್ಲಿ ಪ್ರೇಕ್ಷಕ

ನಾಟ್ಯದಲ್ಲಿ ಪ್ರೇಕ್ಷಕನ ಕಣ್ಣು, ಕಿವಿ ಎರಡೂ ನಿರಂತರ ಕೊಡುಕೊಳ್ಳುವ ಪ್ರಕ್ರಿಯೆಯಲ್ಲಿ ನಿರತವಾಗಿರುತ್ತವೆ. ನಾಟ್ಯಾಭಿನಯಕ್ಕೆ ವಸ್ತುವನ್ನು ಒದಗಿಸುವ ಸಾಹಿತ್ಯವನ್ನು ಅಭಿನಯದೊಂದಿಗೆ ಅಲ್ಲಲ್ಲೇ ಅನ್ವಯಿಸಿಕೊಳ್ಳುತ್ತಾ, ಶಬ್ದಾರ್ಥಜ್ಞಾನದಿಂದಾದ ಬೋಧದ ಜೊತೆ ಅಭಿನಯದ ಮೂಲಕ ಪ್ರತೀತವಾಗುವ ರಸಾನುಭವವನ್ನು ಮೇಳವಿಸಿ ಆನಂದವನ್ನು ಅನುಭವಿಸುತ್ತಾನೆ. ಇದು ನೋಡುವ ಪ್ರತಿಯೊಬ್ಬನ ನಿತ್ಯಾನುಭವ. ನೃತ್ಯದ ವಸ್ತು ಏನು, ಯಾವ ಸನ್ನಿವೇಶ, ಮಾತುಧಾತುಗಳ ಬಗೆ ಹೇಗೆ, ಸಾಹಿತ್ಯ ಶಬ್ದದ ಸಹಜಾರ್ಥವೇನು, ಧ್ವನ್ಯರ್ಥವೇನು, ಅದನ್ನು ಕಲಾವಿದ ಬಳಸಿಕೊಂಡ ರೀತಿ ಂತಹದ್ದು-ಇದೆಲ್ಲ ಸಮೀಕರಣ ನೋಡುಗನಲ್ಲಿ ನಡೆಯುತ್ತಲೇ ಇರುತ್ತದೆ. ಆದ್ದರಿಂದಲೇ ಗೇಯ ಸಾಹಿತ್ಯ ಅವನಿಗೆ ಅರ್ಥವಾಗುವ ಭಾಷೆಯದ್ದಾಗಿರಬೇಕಾಗುತ್ತದೆ. ಇಲ್ಲೇ ಸಂಗೀತಕ್ಕೂ, ನೃತ್ಯಕ್ಕೂ ಇರುವ ಮೂಲಭೂತ ಲಕ್ಷಣದ ವ್ಯತ್ಯಾಸ ಕಾಣುವುದು.

ನಾದಗುಣದ ಸಂಗೀತಕ್ಕೂ, ಲಯಲಕ್ಷಣದ ನೃತ್ಯಕ್ಕೂ ‘ಸಾಮ್ಯ’ ಇಲ್ಲ ಎಂಬಷ್ಟು ತೆಳು. ನೃತ್ಯದಲ್ಲಿ ಇರುವ ತೆರತೆರನ ಭಾವಕಲ್ಲೋಲದ ಸಾತ್ತ್ವಿಕ ಸಂಗೀತದಲ್ಲಿಲ್ಲ. ನೃತ್ಯದಲ್ಲಿರುವ ಧ್ವನಿ-ವಕ್ರೋಕ್ತಿಶಕ್ತಿ ಸಂಗೀತಕ್ಕೆ ಬೇಕಿಲ್ಲ. ಭಾವವನ್ನು ಪ್ರೇರಿಸುವ ಒಂದು ಶಬ್ದವಾದರೂ ಸರಿಯೇ, ಸಾಹಿತ್ಯದಲ್ಲಿ ಸಿಕ್ಕರೆ ಅದನ್ನು ಒಂದು ನೋಟದಲ್ಲಿ ರಸವಾಗಿ ಅನುವಾದಿಸಿ ಪ್ರೇಕ್ಷಕನನ್ನು ಆ ಕ್ಷಣದಲ್ಲಿ ಮೈಮರೆಸುವ ಸಾಧ್ಯತೆ ನಾಟ್ಯಕ್ಕಿದೆ. ಇದೆಲ್ಲಾ ಘಟಿಸಬೇಕಿದ್ದರೆ ಪ್ರೇಕ್ಷಕರು ಅರ್ಥಮಾಡಿಕೊಳ್ಳುವ ಪಾಠ್ಯವೇ ಬೇಕಾಗುತ್ತದೆ. ಅರ್ಥಾತ್ ಯಾವ ಭಾಷೆಯ ಪ್ರೇಕ್ಷಕರು ಎಂಬುದನ್ನು ಕಲಾವಿದರು ಮೊದಲೇ ಗುರುತಿಸಿ ಅವರ ಬೋಧೆಗೆ ಒಗ್ಗುವ ಪದ್ಯಗಳನ್ನು ಬಳಸಿಕೊಂಡರೆ ಕಲಾವಿದನು ರಂಗದಲ್ಲಿ ಬೆವರಳಿಸಿದ್ದಕ್ಕೆ ಬೆಲೆ ಬರುತ್ತದೆ. ಕಲಾವಿದ ಏನೇನು ಮಾಡಿದ ಎಂಬುದು ಅರ್ಥವಾದರೆ ಸಂವಹನ ರಸಸ್ಥಿತಿಗೆ ತಲುಪುವುದಕ್ಕೆ ಹೆಚ್ಚಿನ ಸಮಯ ಬೇಕಾಗಲಾರದು.

ಆದರೆ ಪ್ರೇಕ್ಷಕರು ಒಂದು ಭಾಷೆಯವರು, ರಂಗದ ನಿರ್ವಹಣ ಸಾಹಿತ್ಯ ಅವರಿಗೇನೂ ಅರ್ಥವಾಗದ ಬೇರೊಂದು ಭಾಷೆಯದಾದಾಗ ಭಾಷೆಗೂ ಭಾವಕ್ಕೂ ಸಾಂಗತ್ಯ ಸಾಧ್ಯವಾಗದೇ ಹೋಗುತ್ತದೆ. ಅಭಿನಯದ ಕೆಲವಂಶವನ್ನು ಲೋಕಾನುಭವದಿಂದ ಗ್ರಹಿಸಬಹುದಾದರೂ ಯಾಕೆ/ಹೇಗೆ/ಏನು/ಎಲ್ಲಿ ಇತ್ಯಾದಿ ಪ್ರಶ್ನೆಗಳು ಉತ್ತರವಿಲ್ಲದೇ ಪ್ರೇಕ್ಷಕನನ್ನು ಗೇಲಿಮಾಡುತ್ತಿರುತ್ತವೆ. ಕನಿಷ್ಟಪಕ್ಷ ಗೇಯಸಾಹಿತ್ಯದ ಕ್ರಿಯಾಪದವೂ ತಿಳಿಯದೇ ಹೋದಾಗ ಅವನದು ನಾಯಿಪಾಡು. ‘ಇಲ್ಲ, ಸಾಂದರ್ಭಿಕವಾಗಿ ನಾವು ಕೊಡುವ ವಿವರಣೆಯಿಂದ ಪ್ರೇಕ್ಷಕರು ಊಹಿಸಬಲ್ಲರು’ ಎಂಬುದೂ ಒಂದು ಪೂರ್ವಪಕ್ಷ. ಕೊಟ್ಟ ವಿವರಣೆಯಷ್ಟೇ ಆತನ ಹಿಡಿಬುತ್ತಿ. ಹಾಡುವ ಯಾವ ಶಬ್ದವೂ ವಾಕ್ಯಾರ್ಥಜ್ಞಾನವನ್ನು ಉಂಟುಮಾಡುವುದಿಲ್ಲ. ಹಾಗಿದ್ದರೆ ‘ವಿವರಣೆಯೇ ಸಾಕು ಸ್ವಾಮಿ, ಹಾಡಿನ ಹಂಗೇಕೆ, ನೀವು ನಾಟ್ಯಮಾಡಿ ’ ಅಂತ ಪ್ರತಿವಾದ ಮಾಡಬಹುದು. ಆದರೆ ಹಲವೆಡೆಗಳಲ್ಲಿ ವಾಕ್ಯಾಭಿನಯದ ಮೇಲೆ ಅಗತ್ಯಕ್ಕಿಂತ ಹೆಚ್ಚು ಒತ್ತು ಹಾಕುವ ಕಲಾವಿದರು, ನೆಪಕ್ಕೊಂದು ಸಾಲು- ಸಾಹಿತ್ಯದ ದೀರ್ಘಾತಿದೀರ್ಘದ ಪುನರುಕ್ತಿಯಲ್ಲೇ ಇಡೀ ಕಥೆಯನ್ನೇ ಕಟ್ಟಿಕೊಡುತ್ತಾರೆ. ಆಗ ಹಿಮ್ಮೇಳದ ಸಂಗೀತವೇ ಮೇಲುಗೈ ಸಾಧಿಸುವ/ಕಚೇರಿಯೇ ಆಗುವ ಆಭಾಸವೂ ಸಾಕಷ್ಟು ನಡೆಯುತ್ತದೆ.

ಅದರಲ್ಲೂ ತನಗೆ ತಿಳಿಯದ ಭಾಷೆಯ ನಾಟ್ಯಪಾಠ್ಯವನ್ನು/ಹಾಡನ್ನು ಕಲಾವಿದ ಕೈಗೆತ್ತಿಕೊಂಡಾಗ ಆ ಸಾಹಿತ್ಯದ ಶಬ್ದ-ಶಬ್ದ ಅರ್ಥವನ್ನು ಬಲ್ಲವರಿಂದ ಕೇಳಿ ತಿಳಿದುಕೊಳ್ಳುವ ಕಲಾವಿದರು, ಹೇಗೆ ತಮ್ಮ ಅರಿವಿನ ಮೇಲಿರುವ ಅನುಕಂಪವನ್ನು ಪ್ರೇಕ್ಷಕನ ಮೇಲೆ ತೋರುವುದಿಲ್ಲ? ಪ್ರೇಕ್ಷಕರಿಗಾದರೂ ಪರಿಚಯವಿಲ್ಲದ ಭಾಷೆಯ ಪದ-ಪದರ ಅರ್ಥವಾಗುವುದು ಹೇಗೆ? ಉದಾಹರಣೆಗೆ ಕರ್ನಟಕದಲ್ಲಿ ಮಾಡುವ ಪ್ರದರ್ಶನಕ್ಕೆ ಮೂಲ ಬೇರೆ ಭಾಷೆಕೃತಿಯಾಗಿದ್ದಲ್ಲಿ ಅದರ ಕನ್ನಡಾನುವಾದ ಮಾಡಿಟ್ಟುಕೊಳ್ಳಬಾರದೇ? ಹಾಗೆ ಬೇರೆಡೆಯಲ್ಲೂ ಕೂಡಾ ! ಕಲಾವಿದನ ಸಾಧನೆ ಸ್ವಲ್ಪಮಟ್ಟಿಗಾದರೂ ಪ್ರೇಕ್ಷಕನಿಗೆ ಮನದಟ್ಟಾದರಲ್ಲವೇ ಸಾರ್ಥಕ ಪ್ರದರ್ಶನ ಸಾಧ್ಯ !?

ಇನ್ನು ಭಾಷೆಯ ಗೊಂದಲ-ಗೋಜಲೇ ಬೇಡವೆಂದು ಕೇವಲ ವಾದ್ಯದ ಉಪಕರಣಗಳ ಕಲರವದಲ್ಲಿ, ಝಂಜಾರವದಲ್ಲಿ ಒಂದು ಸಾಲಿನ ಕತೆಯೂ ಇಲ್ಲದೆ, ನಿರ್ದಿಷ್ಟ ಸನ್ನಿವೇಶವಿಲ್ಲದೆ, ‘ಹೀಗೆ ಸುಮ್ಮನೆ’ ಸಮೂಹನೃತ್ಯರೂಪಕ ಮಾಡಿ ‘ವಿಶ್ವಸಂದೇಶ’ ನೀಡುವ ರಸವಿದೂರವಾದ ಪ್ರಯೋಗಪಂಥದವರೂ ಇದ್ದಾರೆ. ಅವರೂ ಇದನ್ನು ನಾಟ್ಯ ಅಂತಲೇ ಕರೆದುಕೊಳ್ಳುತ್ತಾರೆಂಬುದಷ್ಟೇ ವಿಪರ್ಯಾಸ.

ನೃತ್ಯಕ್ಷೇತ್ರೀಯರಲ್ಲಿ ನನ್ನದೊಂದು ವಿನಮ್ರ ವಿನಂತಿ-ಸಾಧ್ಯವಾದಷ್ಟೂ ನಾಟ್ಯಕ್ಕಾಗಿಯೇ ರಚಿತವಾದ ಸಾಹಿತ್ಯವನ್ನು ಬಳಸಿಕೊಳ್ಳಿ/ಬರೆಸಿಕೊಳ್ಳಿರಿ. ಭಕ್ತಿಸಾಹಿತ್ಯ, ಶರಣಸಾಹಿತ್ಯ, ಧರ್ಮಸಾಹಿತ್ಯ, ಸ್ತೋತ್ರ ಸಾಹಿತ್ಯ, ಕೀರ್ತನೆ/ಕೃತಿ ಅಂತ ಬೇರೆ ಬೇರೆ ಉದ್ದೇಶಕ್ಕಾಗಿ ರಚಿಸಲ್ಪಟ್ಟ ಕೃತಿಗಳನ್ನು ಜುಲುಮೆಗೆ ಬಿದ್ದು ಬಲವಂತವಾಗಿ ನೃತ್ಯಕ್ಕೆ ಅಳವಡಿಸುವ ಗಾಂಧಾರೀವ್ರತಿಗಳಾಗಬೇಡಿ. ಯಾಕೆಂದರೆ, ರಂಗದ ಚಲನೆಗೆ, ಅಭಿನಯದ ಅನುಕೂಲಕ್ಕೆ, ಭಾವಪೋಷಣೆಗೆ, ಆಂಗಿಕಕ್ಕೆ ಒಗ್ಗುವ ಸೂಕ್ತ ಪದಪ್ರಯೋಗ, ಪೂರ್ಣಾರ್ಥ ಕೊಡುವ ಸಂಕ್ಷಿಪ್ತ ವಾಕ್ಯಘಟಕ, ತಾಳಘಾತಗಳಿಗೆ ಗಚ್ಚಾಗಿ ಸೇರುವ ಶಕ್ತಶಬ್ದ-ಇವೆಲ್ಲ ಇದ್ದಾಗ ಗೇಯಪಾಠ್ಯ ಕಲಾವಿದನನ್ನೂ, ಪ್ರೇಕ್ಷಕನನ್ನೂ ಅನಾಯಾಸವಾಗಿ ರಸಾನಂದದ ಉತ್ತುಂಗಕ್ಕೆ ಸೆಳೆದೊಯ್ಯುತ್ತದೆ. ನನಗೆ ಇದಕ್ಕೆ ಸಿಗುವ ಉತ್ತಮೋತ್ತಮ ಉದಾಹರಣೆ ಯಕ್ಷಗಾನ ಪ್ರಸಂಗಸಾಹಿತ್ಯ.

ರಂಗಾಭಿನಯಕ್ಕಾಗಿಯೇ ರಚಿತವಾದ ಯಕ್ಷಗಾನದ ಪದ್ಯಗಳು ನಟನಿಗೆ ಸ್ವಯಂ ಮಾರ್ಗದರ್ಶಿ ಆಗುವ ತಾಕತ್ತುವುಳ್ಳವಾಗಿರುತ್ತವೆ. ಯಕ್ಷಗಾನದಲ್ಲಿ ಹೆಚ್ಚಾಗಿ ಕುಮಾರವ್ಯಾಸನ ಕೃತಿಯನ್ನೇ ಆಧರಿಸಿ ಪ್ರಸಂಗ ಬರೆದರೂ, ಕುಮಾರವ್ಯಾಸನ ಪದ್ಯಭಾವವನ್ನೇ ಪಾತ್ರದ ನಾಟ್ಯಗತಿಗೆ ಹೊಂದುವ ತಾಳದಲ್ಲಿ ಪುನಾರಚಿಸಿದ್ದಾರೆ ಯಕ್ಷಗಾನಕವಿಗಳು. ಅಂದರೆ ಯಕ್ಷಗಾನಕ್ಕೆಂದು ಪದ್ಯ ಬರೆವಾಗ ಮಾನಸಿಕವಾಗಿ ಆಯಾಪಾತ್ರವಾಗಿ ನಾಟ್ಯಾಭಿನಯವನ್ನು ಕವಿ ಆವಾಹಿಸಿಕೊಂಡಿರುತ್ತಾನೆ. ಹಾಗಾಗಿ ಪದ್ಯರಚನೆಯಲ್ಲಿ ನಿರ್ದಿಷ್ಟಶಬ್ದವು ಪ್ರಯೋಗಕ್ಕೆ ಸಹಜವಾಗಿ ಒದಗಿಬರುತ್ತದೆ. ಉದಾಹರಣೆಗೆ- ನರಸಿಂಹನು ಹಿರಣ್ಯಕಶಿಪುವನ್ನು ಕೊಂದ, ಹೊಡೆದ, ಬಗೆದ, ಸಾಯಬಡಿದ, ತೀರಿಸಿದ, ವಧಿಸಿದ, ಇರಿದ, ಕರುಳು ಹುರಿದ, ಹೊಟ್ಟೆ ಬಗೆದು ತರಿದ- ಇದೆಲ್ಲವೂ ಕೊಲ್ಲುವುದನ್ನು ಸಂಕೇತಿಸುವ ಶಬ್ದಗಳೇ ಹೌದು. ಆದರೆ ಆ ಸನ್ನಿವೇಶಕ್ಕೆ ಭಾವಾವೇಗದ ರಭಸಕ್ಕೆ ಮೈಯಾಗಿಸಿ ಬರುವ ಶಬ್ದ ಬಹುಷ- ಕರುಳು ಹರಿದ ಎಂದೇ ! ಇದೇ ಮಾದರಿಯ ಸಾಹಿತ್ಯಾಭಿವ್ಯಕ್ತಿಯು ನೃತ್ಯಕ್ಕೂ ಒದಗಿದರೆ ಎಷ್ಟೊಂದು ಅರ್ಥಪೂರ್ಣವಾದೀತಲ್ಲವೇ ಪ್ರದರ್ಶನ?

ಗಾಯಕರಲ್ಲೂ ನನ್ನ ಮೆಲುದನಿಯ ಮನವಿ – ಭಾವಚೋದಕವಾದ ಶಬ್ದವು ಸಾಹಿತ್ಯಪಂಕ್ತಿಯಲ್ಲಿದ್ದರೆ ಆ ಶಬ್ದದ ಧ್ವನಿಶಕ್ತಿಗೆ ಜೀವದಾನ ಮಾಡಬೇಕು. ಹಾಗೆಂದು ರಾಗದ ಸಂಗತಿಗಳ ಜಲಪಾತದಲ್ಲಿ ಶಬ್ದಧ್ವನಿ ಕಿರುತೊರೆಯಾಗಿ ತೊರೆದುಹೋಗದಿರಲಿ. ಯಾಕೆಂದರೆ ನಾಟ್ಯಭೂಮಿ, ಸಮೂಹಪರಂಪರತೆಯ (ಟೀಮ್ ವರ್ಕ್) ಪಾಕಪರಿಶ್ರಮದಿಂದ ಸಿದ್ಧವಾಗುವ ಪಕ್ವಾನ್ನ. ಅದಕ್ಕಾಗಿ ಪರಸ್ಪರ ವಿಚಾರವಿನಿಮಯ, ಪ್ರಸ್ತುತಿಯ ಸಮನ್ವಯ, ಕಲೆಯ ಕುರಿತು ಅನುನಯ ಇರಲೇಬೇಕಾಗುತ್ತದೆ.

ಒಟ್ಟಿನಲ್ಲಿ ಪ್ರೇಕ್ಷಕನೊಳಗಿರುವ ಸಹೃದಯನಿಗಿಂತ ಮೊದಲು ಕಲಾವಿದನಲ್ಲಿರುವ ಸಹೃದಯ ಜಾಗೃತನಾದರೆ ಶಾಸ್ತ್ರಪರಂಪರೆ, ಪ್ರಯೋಗ, ಶುದ್ಧತೆ, ಬದ್ಧತೆ ಎಲ್ಲವೂ ತಾನಾಗಿ ಸ್ಥಾಯೀಭಾವವಾದ ಶಾಂತದಲ್ಲಿ ಸತ್ಯವೂ, ಶಿವವೂ, ಸುಂದರವೂ ಆಗಿ ನೆಲೆಸುತ್ತದೆ.

Leave a Reply

*

code