ಅಂಕಣಗಳು

Subscribe


 

ಬೆರಕೆಯೋ ಕಲಬೆರಕೆಯೋ?

Posted On: Saturday, February 25th, 2012
1 Star2 Stars3 Stars4 Stars5 Stars (No Ratings Yet)
Loading...

Author: ನಿವೇದಿತಾ ಶ್ರೀನಿವಾಸ್, ಸಂಶೋಧಕರು, ನೃತ್ಯ ಕಲಾವಿದರು, ’ಸ್ತುತಿ ನಾಟ್ಯಶಾಲೆ’, ಬೆಂಗಳೂರು

“ಅರೆ! ಏನೇ ಇದು? ಇದು ಭರತನಾಟ್ಯ ಪ್ರದರ್ಶನ ಅಲ್ವಾ? ಅಲ್ನೋಡು! ಕೂಚಿಪುಡಿ, ಮೋಹಿನಿ‌ಆಟ್ಟಂ ಎಲ್ಲದರ ಅಂಶಗಳನ್ನೂ ಸೇರಿಸಿಬಿಟ್ಟಿದ್ದಾರೆ!”.. “ಹೌದಲ್ವಾ?ಅಲ್ದೇ, ಅವರು ಮಾಡ್ತಿರೋ ಭರತನಾಟ್ಯದಲ್ಲೂ ಎಷ್ಟೊಂದು ವ್ಯತ್ಯಾಸ ನೋಡು! ನಾವು ಮಾಡೋ ಥರ ತತ್ತೈತಾಹ, ತೈಯುಂದತ್ತ ಇಲ್ವೇ ಇಲ್ಲ!” … ಈ ಸಂಭಾಷಣೆ ಯಾವ ಪ್ರದರ್ಶನದಲ್ಲಾದರೂ ಕೇಳಿ ಬರಬಹುದು. ಇಲ್ಲಿ ಇದು ಭರತನಾಟ್ಯದ ಕುರಿತಾಗಿದೆ. ಕಥಕ್, ಒಡಿಸ್ಸಿ ಮುಂತಾದ ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲದೆ, ನಮ್ಮ ಯಕ್ಷಗಾನದಲ್ಲೂ ಈ ರೀತಿಯ ವ್ಯತ್ಯಾಸಗಳು ಸಾಮಾನ್ಯ. ಅಷ್ಟೇ ಏಕೆ, ಅಕ್ಕ ಪಕ್ಕದ ಹಳ್ಳಿಗಳ ಜಾನಪದ ನೃತ್ಯಗಳಲ್ಲೇ ವೈವಿಧ್ಯತೆ ಕಂಡುಬರುತ್ತದೆ. ಒಟ್ಟಾರೆ, ಎಲ್ಲಾ ಕಲೆಗಳಲ್ಲೂ ತಮ್ಮದೇ ಆದ ವಿಶಿಷ್ಟ ಶೈಲಿಗಳಿವೆ. ಅವನ್ನು ಅನುಸರಿಸುವವರಿಗೆ ಅವರ ಶೈಲಿಗಳೇ ಹೆಚ್ಚು ಮತ್ತು ಮುಖ್ಯ ಏಕೆಂದರೆ ಅವರ ತಾಲೀಮು ಸಹ ಕೇವಲ ಆ ಶೈಲಿಯಲ್ಲಿ ಮಾತ್ರ ಆಗಿರುತ್ತದೆ, ಹಾಗಾಗಿ ಬೇರೆ ಶೈಲಿಯ ಪ್ರದರ್ಶನ ಕಂಡಾಗ ಇಂತಹ ಉದ್ಗಾರಗಳು ನಿರೀಕ್ಷಿತ. ಇವರಿಗೆ ಬೇರೆ ಶೈಲಿಗಳ ಅರಿವಿರದಿರಬಹುದು ಅಥವಾ ತಿಳಿದಿದ್ದರೂ ಏನೋ ಅಸಡ್ಡೆ!

ಇದು ಕಲಾವಿದರ ಮಾತಾದರೆ, ಪ್ರೇಕ್ಷಕರ ವರ್ತನೆಯೇನೂ ಇದಕ್ಕಿಂತ ಭಿನ್ನವಿಲ್ಲ. ಕಾರಣ, ಅವರ ಕಂಗಳೂ, ಮನಸ್ಸೂ ಒಂದು ಪ್ರಕಾರದ ನೃತ್ಯಕ್ಕೆ ಒಗ್ಗಿಕೊಂಡು ಬಿಟ್ಟಿರುತ್ತವೆ. ಬೇರೆಯದು, ಹೊಸತು ಕಂಡಾಗ, ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತವೆ. ಇದು ಲೋಕನೀತಿ. ಆದರೆ ಇಲ್ಲಿನ ಪ್ರಮುಖ ಪ್ರಶ್ನೆ, ಹೀಗೆ ಶೈಲಿಗಳನ್ನು ಬೆರೆಸುವುದು ಸರಿಯೋ ತಪ್ಪೋ ಎಂದು. ಈ ಶೈಲಿಗಳು ಯಾಕಾದವು, ಆಗುವ ಮುಂಚೆ ಹೇಗಿದ್ದವು ಎಂಬ ಕಡೆ ಕೊಂಚ ಗಮನ ಹರಿಸಿದರೆ, ಬಹುಶಃ ಉತ್ತರ ಸಿಗಬಹುದು.

ಆದಿಮಾನವನ ಕುಣಿತದಿಂದ ಹಿಡಿದು, ನಾಗರೀಕತೆಯ ಕಾಲದ ನರ್ತನ, ವೇದಗಳ ಕಾಲದಲ್ಲಿನ ಬೆಳವಣಿಗೆ, ಆಗಮಗಳ ಪ್ರಭಾವದಿಂದ ದೇವಾಲಯಗಳಿಗೆ ಬಂದು ಮುಂದೆ ಸ್ವಾತಂತ್ರ್ಯಾ ನಂತರ ಶಾಸ್ತ್ರೀಯ ಶೈಲಿಗಳಾಗಿ ವಿಂಗಡಣೆಯಾಗುವವರೆಗಿನ ಬೆಳವಣಿಗೆ ಗಮನಿಸಬಹುದು. ಆಲಯ, ಆಸ್ಥಾನ ನೃತ್ಯಗಳಲ್ಲದೆ, ಆಯಾ ಸಂದರ್ಭಗಳಿಗೆ ತಕ್ಕುದಾದ ಜಾನಪದ ಕುಣಿತಗಳೂ ಪ್ರಚಲಿತದಲ್ಲಿದ್ದವು. ಈಗಲೂ ಬೇರೆ ಬೇರೆ ನೃತ್ಯ ಪ್ರಕಾರಗಳು ತಮ್ಮ ಅಸ್ಥಿತ್ವವನ್ನು ಹೊಂದೇ ಇವೆ. ಈ ಬೆಳವಣಿಗೆ ಆಗುವಾಗ, ತಂತಮ್ಮ ನರ್ತನಕ್ಕೆ ಒಂದು ಚೌಕಟ್ಟನ್ನು ಅವರೇ ನಿರ್ಮಿಸಿಕೊಳ್ಳುತ್ತಾ ಹೋದರು. ತಮ್ಮತನವನ್ನು ಪ್ರದರ್ಶಿಸಲು ಕೆಲವೊಂದು ಅಂಶಗಳಿಗೆ ಹೆಚ್ಚು ಆದ್ಯತೆ ಕೊಟ್ಟರು. ಆ ಅಂಶಗಳ ಬಲದಿಂದ ಅವರನ್ನು ಗುರುತಿಸುವುದು ಸುಲಭವಾಯಿತು. ಹಲವು ತಲೆಮಾರುಗಳು ಅದನ್ನೇ ಅನುಸರಿಸುತ್ತಿದ್ದು, ನಂತರ ಹೊಸದೇನನ್ನಾದರೂ ಸೃಷ್ಟಿಸುವ ಹಂಬಲದಿಂದ, ತಮ್ಮ ಸೃಜನಶೀಲತೆಯಿಂದಲೋ ಅಥವಾ ಬೇರೆಲ್ಲೋ ಕಂಡದ್ದನ್ನೋ ತಮ್ಮ ನರ್ತನದಲ್ಲಿ ಅಳವಡಿಸಿಕೊಂಡಿರಬಹುದು. ಅದನ್ನು ಒಪ್ಪಿದವರೂ, ಒಪ್ಪದಿದ್ದವರೂ ಇದ್ದಿರಬಹುದು. ಕಾಲನ ನಿರ್ಣಯಕ್ಕೆ ಸಿಲುಕಿದ್ದು ಉಳಿದವು, ಉಳಿದದ್ದು ಅಳಿದವು. ಹೀಗೆ ಹೊಸದನ್ನು ಸೃಷ್ಟಿಸುವ, ಪ್ರಯೋಗಿಸುವ ಗುಣ ಮನುಷ್ಯನಿಗೆ ಮೊದಲಿನಿಂದಲೂ ಇದ್ದದ್ದೇ..

ಈ ಕಲೆ ಉಳಿಯುವ ಪ್ರಕ್ರಿಯೆಯಲ್ಲಿ ಪ್ರೇಕ್ಷಕನ ಪಾತ್ರ ಹಿರಿದಾದದ್ದು. ಸಹೃದಯ ಪ್ರೇಕ್ಷಕ ಅಥವಾ ರಸಿಕ ಬಯಸಿದ್ದನ್ನು ಕೊಡುವುದು ಎಲ್ಲ ಕಲಾವಿದರ ಧರ್ಮ. ಇಲ್ಲಿ ಕೇವಲ ರಂಜನೆಯಲ್ಲ, ರಸಾನುಭವವನ್ನು ಗುರಿಯಾಗಿಸಿಕೊಂಡು ಹೇಳಲಾಗಿದೆ. ಇಷ್ಟ ಪಡಲಿ ಬಿಡಲಿ, ನಾನು ಮಾಡುವುದು ಇದನ್ನೇ, ಈ ಚೌಕಟ್ಟೇ ನನ್ನ ಸೀಮೆ ಎಂದು ಕಲಾವಿದ ತೀರ್ಮಾನಿಸಿದರೆ, ಕಲೆಯ ಕೊಲೆ ಮಾಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಗುರುಗಳೂ ಸಹ, ತಮ್ಮ ಶಿಷ್ಯಂದಿರಿಗೆ, ಇತರ ಪ್ರಕಾರಗಳ ಅರಿವು ಮೂಡಿಸಬೇಕು. ಕೆಲವು ಕಡೆಯಂತೂ ಹೇಳಿಕೊಟ್ಟಷ್ಟನ್ನೇ ಕಲಿತು ಅದನ್ನೇ ಮುಂದಿನವರಿಗೂ ಕಲಿಸುವಂತೆ ನಿರ್ದೇಸಿರುತ್ತಾರೆ. ಅವರ ಸೃಜನಶೀಲತೆಯನ್ನು ಶಾಶ್ವತವಾಗಿ ಹುದುಗಿಸಿಬಿಡಬೇಕೆ? ಅದದೇ ಪ್ರದರ್ಶನಗಳನ್ನು ಎಷ್ಟು ಅಂತ ನೋಡುವುದು? ಹೊಸತೇನೂ ಸೃಷ್ಟಿಸುವುದೇ ಬೇಡವೆ? ನೋಡುಗ ಅದೇ ಹಳೇ, ಹಳಸಿದ್ದನ್ನು ಕಂಡು ತೃಪ್ತಿ ಪಡಬೇಕೆ? ಅಲ್ಲ ಸ್ವಾಮೀ.., ಬದಲಾವಣೆ ಎನ್ನುವುದು ಪ್ರಕೃತಿಯಲ್ಲೇ ಸಹಜವಾಗಿರುವಾಗ ನಾವೇಕೆ ನಮ್ಮ ಪ್ರದರ್ಶನಗಳಲ್ಲಿ ಬದಲಾವಣೆ ತರಬಾರದು? ಹಿಂದೆ, ಅನಿವಾರ್ಯತೆ ಇದ್ದ ಕಾಲದಲ್ಲಿ, ಗುರುಗಳು, ನಮ್ಮ ನೃತ್ಯ ಸಂಪ್ರದಾಯಗಳು ಉಳಿಯಲು, ಮುಂದಿನ ಪೀಳಿಗೆಗೆ ತಲುಪಿಸಲು ಕೊಂಡಿಯಂತೆ ಕೆಲಸ ಮಾಡಿರುವುದನ್ನು ಅಭಿನಂದಿಸಲೇಬೇಕು. ಆದರೆ, ಇಂದು ಅದರ ಅವಶ್ಯಕತೆಯಾದರೂ ಏನು?

ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ಬೇರೆ ಬೇರೆ ಗುರುಗಳಲ್ಲಿ ಕಲಿತರಂತೂ ಅವರ ಶೈಲಿ ಕಲುಷಿತವಾದದ್ದು ಎಂಬ ನಂಬಿಕೆ. ಹಾಗೆ ನೋಡಿದರೆ, ಹಿಂದಿನ ಕಾಲದಲ್ಲಿ ನರ್ತಕರು ಹಲವಾರು ಗುರುಗಳಲ್ಲಿ ಕಲಿತು, ಪರಿಣತಿ ಪಡೆದು, ಪ್ರದರ್ಶನ ನೀಡುತ್ತಿರಲಿಲ್ಲವೆ? ಯಾರು ಯಾವ ಅಂಶದಲ್ಲಿ ಪಾಂಡಿತ್ಯ ಹೊಂದಿದ್ದರೋ ಅದಕ್ಕಾಗಿ ಅವರನ್ನು ಆಶ್ರಯಿಸುವುದು ಸಾಮಾನ್ಯವಾಗಿತ್ತು. ಅಲ್ಲದೆ, ರಾಜರ ಆಸ್ಥಾನಗಳಿಗೆ ಬೇರೆ ಬೇರೆ ಸ್ಠಳಗಳಿಂದ ನರ್ತಕರು ಬಂದು ತಮ್ಮ ಕುಶಲತೆ ಪ್ರದರ್ಶಿಸುತ್ತಿದ್ದರು. ಅವುಗಳಿಗೆ ಇಂಬು ಸಿಕ್ಕರೆ, ಸ್ಠಳೀಯ ನರ್ತಕರೂ ಚೆನ್ನಾಗಿ ಕಂಡುಬಂದ ಅಂಶಗಳನ್ನು ತಮ್ಮ ನರ್ತನದಲ್ಲಿ ಅಳವಡಿಸಿಕೊಳ್ಳುತ್ತಿದ್ದರು. ಆ ಪ್ರಯೋಗ ಯಶಸ್ಸು ಕಂಡರೆ, ಅದನ್ನು ಮುಂದುವರೆಸುತ್ತಿದ್ದರು, ಇಲ್ಲದಿದ್ದರೆ ಬಿಟ್ಟುಬಿಡುತ್ತಿದ್ದರು. ಈ ಶೈಲಿ ಹೀಗೇ ಇರಬೇಕು ಎಂದು ನಿರ್ಧರಿಸಿದವರು ಯಾರು? ಔಚಿತ್ಯವೆನಿಸಿದ ಕೆಲವೊಂದು ಅಂಶಗಳನ್ನು ಎರವಲಾಗಿ ಪಡೆದರೆ, ಅದು ತಪ್ಪೇ? ಈ ಬೆರಕೆ ಕಲಬೆರಕೆ ಎನಿಸುವುದೇ?

ಇಷ್ಟೆಲ್ಲಾ ಪ್ರಶ್ನೆಗಳಿಗೆ ಹಿರಿಯರೊಬ್ಬರು ತರ್ಕಬದ್ಧವಾಗಿ, ಉದಾಹರಣೆ ಸಮೇತ ಕೊಟ್ಟ ಉತ್ತರ ಹೀಗಿದೆ. ನಮ್ಮ ಅಡುಗೆಯಲ್ಲಿ ಬಳಸುವ ಸಾರಿನ ಪುಡಿಯ ರುಚಿ ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ತರಹ ಇರುತ್ತದೆ. ಅಲ್ಲಲ್ಲಿ ಸಿಗುವ ಕಚ್ಚಾ ವಸ್ತುಗಳಿಂದ ಪುಡಿ ತಯಾರಾಗುತ್ತದೆ. ಆದರೆ, ಈ ಪುಡಿಗಳಲ್ಲಿ ಒಣಮೆಣಸಿನಕಾಯಿ, ಕೊತ್ತಂಬರಿ ಬೀಜದಂಥ ಕೆಲವು ಪದಾರ್ಥಗಳು ಸಾಮಾನ್ಯವಾಗಿ ಇರಲೇಬೇಕು. ಅದಾಗಲೇ ಅದನ್ನು ಸಾರಿನ ಪುಡಿ ಎನ್ನುತ್ತೇವೆ. ಹಾಕುವ ಅಳತೆ, ಪ್ರಮಾಣಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಒಮ್ಮೊಮ್ಮೆ ಕೆಲ ವಿಶೇಷ ವಸ್ತುಗಳ ಸೇರ್ಪಡೆಯಿಂದ ವಿಶಿಷ್ಟ ರುಚಿ ಸಹ ಬರುತ್ತದೆ. ಇಲ್ಲಿ ಪುನಃ ಔಚಿತ್ಯದ ಚಿತ್ರಣ ಬರುತ್ತದೆ. ಆ ವಿಶೇಷ ವಸ್ತು, ಉಳಿದ ಪದಾರ್ಥಗಳೊಂದಿಗೆ ಹೊಂದುತ್ತದೋ ಇಲ್ಲವೋ ಎಂಬುದು ಮುಖ್ಯವಾಗುತ್ತದೆ. ಹೊಂದಿಕೆಯಾದರೆ, ಉಂಡವನು ಸವಿಯುತ್ತಾನೆ. ಹಾಗೆಯೇ, ನರ್ತನದಲ್ಲೂ ಹೊಸ ಪ್ರಯೋಗಗಳು ಸಹೃದಯರ ಸಮ್ಮುಖದಲ್ಲಿ ನಡೆದಾಗ, ಔಚಿತ್ಯದಿಂದ ಕೂಡಿದ್ದಲ್ಲಿ, ನಿಸ್ಸಂದೇಹವಾಗಿ ಯಶಸ್ಸುಗಳಿಸುತ್ತವೆ.

ಇಂತಹ ಪ್ರಯೋಗಗಳಿಗೆ ಕಣ್ಣು, ಮನಸ್ಸನ್ನು ತೆರೆದಿಡೋಣ ಮತ್ತು ಸಹೃದಯರಾಗಲು ಪ್ರಯತ್ನಿಸೋಣವೇ? ಕಲೆಗೆ ಸಹೃದಯರು ಬೇಕು; ಸಹೃದಯರಾಗುವುದೂ ಒಂದು ಕಲೆ..

 


(ಲೇಖಿಕೆ ನೃತ್ಯದ ಕುರಿತಾಗಿ ಸಂಶೋಧನೆಯ ಹಾದಿಯಲ್ಲಿರುವ ಪ್ರಗತಿಪರ ಚಿಂತಕರು)

Leave a Reply

*

code