ಅಂಕಣಗಳು

Subscribe


 

ಅನ್ಯಕಲಾ ಅಸಹಿಷ್ಣುತೆಯಲ್ಲಿ ನೃತ್ಯಕಲಾವಿದರು !!

Posted On: Tuesday, June 9th, 2009
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಕ್ಷಗಾನವನ್ನು ನೋಡ್ಬೇಡಿ, ಒಂದು ವೇಳೇ ಕಲಿತರಂತೂ ನಿಮಗೆ ನೃತ್ಯ ಕಲಿಸಲಾಗುವುದಿಲ್ಲ, ಮತ್ತು ನೃತ್ಯಕ್ಕೆ ಅಹ‌ರೆನಿಸಿಕೊಳ್ಳಬೇಕಾದರೆ ಅಷ್ಟು ಸುಲಭವೂ ಆಗುವುದಿಲ್ಲ. ಯಕ್ಷಗಾನವನ್ನು ಕಲಿತರೆ ನೃತ್ಯ ಶೈಲಿ ಹಾಳಾಗುತ್ತದೆ. ಅದರ ಭಾವವೇ ಆಳವಾಗಿ ಬೇರೂರುತ್ತದೆ. ನೃತ್ಯದಲ್ಲಿರುವ ಲಾಸ್ಯದ ಅಂಶ‌ಗಳನ್ನು ಯಕ್ಷಗಾನವೆಂಬ ಗಂಡು ಕಲೆ ನುಂಗಿ ಹಾಕಿಬಿಡುತ್ತದೆ ! ‘ – ಇಂತಹದೊಂದು ಹೇಳಿಕೆ ಕಲಾವಲಯದಲ್ಲಿ ಕೇಳಿಬರುತ್ತಲಿದೆೆ. ಅದರಲ್ಲೂ ಶೈಲಿ, ಸಂಪ್ರದಾಯಗಳಿಗೆ ಬದ್ಧರಾಗಿರುವ ಮಂದಿಗಳಲ್ಲಿ ಇದರ ಪ್ರಮಾಣ ಹೆಚ್ಚು. ಕೊನೆಗೆ ಎಷ್ಟು ತೀವ್ರವೆಂದರೆ ನೃತ್ಯದಲ್ಲಿ ಮಾಡುವ ಯಾವುದೇ ರೀತಿಯ ಭಾವ ಪ್ರದರ್ಶನವೂ ಕೂಡಾ ಯಕ್ಷಗಾನದ ಛಾಯೆಯಾಗಿಯೇ ತೋರುವುದು ! ಹುಚ್ಚೋ, ಬೆಪ್ಪೋ, ಅತಿರೇಕವೋ ನಾನರಿಯೆ !
ಆಘಾತ‌ವೆಂದರೆ ಇಂತಹ ಮನೋಪ್ರವೃತ್ತಿ ಭರತನಾಟ್ಯ ಅಭ್ಯಾಸಿಗಳನ್ನೇ ಇತ್ತೀಚೆಗೆ ಹೆಚ್ಚಾಗಿ ಕಾಡುವುದು! ಇಂತಹ ಬೋಧನೆಗೆ ಅಧಾರಗಳೇನು? ಹೌದೇ? ಹೇಗೆ? ಯಾಕೆ ನೋಡಬಾರದು ಎಂಬ ಪ್ರಶ್ನೆಗಳು ಉದ್ಭವವಾಗುವ ಹೊತ್ತಿನಲ್ಲೇ ಅದನು ಸಮರ್ಥಿಸಿಕೊಳ್ಳುವ ಗುರು-ಕಲಾವಿದರು ಮತ್ತಷ್ಟು ತಮ್ಮ ವಾದಗಳಿಗೇ ಅಂಟಿಕೊಳ್ಳುತ್ತಿರುವುದು ನೃತ್ಯಕ್ಕಿಟ್ಟುಕೊಳ್ಳುತ್ತಿರುವ ಕಪ್ಪುಚುಕ್ಕಿ ಎನ್ನದೇ ಬೇರೆ ವಿಧಿಯಿಲ್ಲ.
ಭರತನಾಟ್ಯವನ್ನು ಕಲಿತವರು ಯಕ್ಷಗಾನವನ್ನು ನೋಡಬಾರದು, ಮಾಡಬಾರದೆಂದರೆ ಹೇಗೆ ? ಅಂತಹ ಕಡ್ಡಾಯದ ಕ್ರಮಗಳಿದ್ದದ್ದೇ ಆದಲ್ಲಿ ಯಾವ ಶಾಸ್ತ್ರ ಗ್ರಂಥಗಳಲ್ಲಿದೆ? ಹಾಗೊಂದು ವೇಳೆ ಇದ್ದರೂ ಅದು ಕಲೆಯೆಂದು ಹೇಗೆ ಕರೆಸಿಕೊಂಡೀತು ? ತುಲನಾತ್ಮಕ ದೃಷ್ಠಿಯಿಲ್ಲದೆ ಕಲಾಪ್ರಕಾರಗಳ ಒಳಹೊರಗನ್ನು ತಿಳಿಯುವ ಸಾಧ್ಯತೆ ಹೇಗೆ?- ಎಂಬಿತ್ಯಾದಿ ಸವಾಲುಗಳನ್ನೆಸೆದರೆ ಬಹುಷಃ ವಾದಿಗಳಲ್ಲಿ ಉತ್ತರವಿರಲಿಕ್ಕಿಲ್ಲ; ವಿತಂಡ ವಾದಗಳ ಹೊರತು ! ‘ನಮಗಿಂತ ಹಿರಿಯರಿಲ್ಲ’ ಎಂಬ ಧೋರಣೆ, ‘ಮತ್ತೊಂದು ಕಲೆ ನಮ್ಮ ಸೌಂದರ್ಯವನ್ನು ಭ್ರಷ್ಟಗೊಳಿಸುತ್ತದೆ’ ಎಂಬ ಕೊಂಕು ಮಾತು, ‘ನಮ್ಮಲ್ಲಿಲ್ಲದ್ದದ್ದು ಅದರಲ್ಲೇನಿದೆ’ ಎಂಬ ಅಸಡ್ಡೆಯೇ ನಮ್ಮ ಸಂಸ್ಕೃತಿಯನ್ನು ಧಿಕ್ಕರಿಸುತ್ತಿದೆ ಎಂದೀಗ ಹೇಳದೆ ವಿಧಿಯಿಲ್ಲ.
ಕಲೆಯೇ ಸೌಂದರ್ಯ. ಅದೀಗ ಮತ್ತೊಂದು ಕಲೆಯನ್ನು ಭ್ರಷ್ಟಗೊಳಿಸುತ್ತದೆ ಎಂದರೆ ಅದು ಕಲೆಯೆಂದು ಕರೆಸಿಕೊಳ್ಳಲು ಅಹ‌ವಾಗಿದ್ದಾದರೂ ಹೇಗೆ? ನಗಬೇಕೋ..? ಅಳಬೇಕೋ..?
ಹಾಗೆ ನೋಡಿದರೆ ಇಂತಹ ಧೋರಣೆ ಇತರ ಸೋದರ ಕಲೆಗಳನ್ನು ಅಷ್ಟಾಗಿ ಆವರಿಸಿಲ್ಲ ! ಬದಲಾಗಿ ಒಟ್ಟಿಗೇ ಹಲವು ಶಾಸ್ತ್ರೀಯ ನೃತ್ಯ ಪ್ರಕಾರಗಳನ್ನು ಕಲಿಯುವುದು, ಪದವಿಗಳನ್ನು ಪಡೆಯುವುದು, ಒಂದೇ ರಂಗಮಂಚದಲ್ಲಿ ಶಾಸ್ತ್ರೀಯ ನೃತ್ಯ ರಂಗಪ್ರವೇಶವೆಂಬ ಹೊಸ ಕ್ರಮಕ್ಕೆ ಸಾಕ್ಷಿಯಾಗುವುದು ಇಂದಿನ ಸಾಂಸ್ಕೃತಿಕ ರಂಗದಲ್ಲಿ ಪ್ರತಿಷ್ಠೆಯ, ಪ್ರತಿಭೆಯ ವಿಷಯ. ಏನೇ ಇರಲಿ, ಕಥಕ್ಕಳಿ ಒಮ್ಮೊಮ್ಮೆ ಮಣಿಪುರಿಯನ್ನುಳಿದು ಉಳಿದೆಲ್ಲಾ ನೃತ್ಯಪ್ರಕಾರಗಳೂ ಒಟ್ಟಿಗೇ ‘ತುಣುಕು ವೈಭವ’ಗಳನ್ನು ಕಾಣುತ್ತವೆ.
ಅಷ್ಟಕ್ಕೂ ಭರತನಾಟ್ಯಕ್ಕೆ ಸಮಕಾಲೀನವಾಗಿ ತೆರೆದುಕೊಂಡ ಅದೆಷ್ಟೋ ಪ್ರದರ್ಶಕ ಕಲೆಗಳು ನಮ್ಮ ಭಾರತೀಯ ಸಂಸ್ಕೃತಿಯ ಮೂಲಸ್ರೋತವಾಗಿದೆ. ಆದರೆ ಯಕ್ಷಗಾನದಂತಹ ಶಾಸ್ತ್ರೀಯ ಮಾನದಂಡ ಪಡೆದುಕೊಳ್ಳುತ್ತಿರುವ ಮೇಲ್ಮಟ್ಟದ ಅಭಿವ್ಯಕ್ತಿಯೆಂದು ಕರೆಸಿಕೊಂಡ ವಿದ್ವತ್ ಪೂರ್ಣ ಕಲೆಗೆ ಇಂದಿಗೂ ಅಂಟಿದ ಕಳಂಕ ನಿವಾರಣೆಯಾಗಿಲ್ಲ. ಒಂದು ನಿಟ್ಟಿನಲ್ಲಿ ಅದರಲ್ಲಿನ ಅಭಿವ್ಯಕ್ತಿಗಳ ಸಮಗ್ರತೆಯ ಕೊರತೆಯೂ ಒಂದು ಕಾರಣ.
ಒಂದು ಕಲೆಯಿಂದ ಮತ್ತೊಂದು ಕಲಾಪ್ರಕಾರ ವಿಭಿನ್ನ. ಹೌದು. ಮತ್ತು ಆದರೆ ಒಂದನ್ನು ಅರಿಯುವಲ್ಲಿ ಹೆಜ್ಜೆಯಿಟ್ಟ ಮನಸ್ಸಿಗೆ ಮತ್ತೊಂದನ್ನು ಅರಿಯುವುದು ಕಷ್ಟದ ಕೆಲಸವೇನಲ್ಲ. ಒಂದುರೀತಿಯಲ್ಲಿ ಅಂತಹ ಅರಿಯುವಿಕೆಗಳೇ ಕಲೆಯ ಕುರಿತಾದ ಆಳ ಅಧ್ಯಯನಕ್ಕೆ ನಾಂದಿ ಹಾಡುತ್ತವೆ. ಉತ್ತಮವೆನಿಸಿದ್ದು ಯಾವಾಗಲೂ ಮತ್ತೊಂದು ಒಳ್ಳೆಯದನ್ನೂ ಕಣ್ಬಿಟ್ಟು ನೋಡುತ್ತದೆ. ತನ್ನಲ್ಲಿಲ್ಲದ ಎಷ್ಟೋ ಅಂಶಗಳನ್ನು ಅಳವಡಿಸಿಕೊಳ್ಳುತ್ತದೆ. ಜೀವನಾನುಭವಕ್ಕೆ ಮಾದರಿ ಪ್ರತಿಮೆಗಳನ್ನು ಒದಗಿಸಿಕೊಡುತ್ತಿವೆ. ಇಂತಹ ಕೊಡು-ಕೊಳ್ಳುವಿಕೆಯ ಬಂಧಗಳು ಇರುವುದರಿಂದಲೇ ಇಂದಿಗೂ ಭಾರತದ ಅದೆಷ್ಟೋ ಕಲಾಪ್ರಕಾರಗಳು ಇಂದಿಗೂ ಅರಳಿ ನಿಂತದ್ದು. ಸೋದರ ಕಲೆಗಳನ್ನು ಕಲಿಯುವುದರಿಂದ ಮತ್ತು ಪರಸ್ಪರ ವಿಶಿಷ್ಟ ಅಂಶಗಳನ್ನು ಅಳವಡಿಸಿಕೊಳ್ಳುವುದರಿಂದ ಸೃಜನಶೀಲ ಪ್ರಕ್ರಿಯೆ ನಿರಂತರ ಚಾಲನೆಯಲ್ಲಿರುತ್ತದೆ. ಒಳಿತಿನ ಅನುಕರಣೆ, ಅನುಸರಣೆಯೇ ಒಂದು ಅನನ್ಯ ಅನುಭವ.
‘ಆನೋ ಭದ್ರಾಃ ಕೃತವೋ ಯಂತು ವಿಶ‌‌್ವತಃ’
ಕಲೆ ಬೆಳೆದು ಬಂದದ್ದೇ ಲೋಕೋಭಿನ್ನರುಚಿಗಾಗಿ. ವೈವಿಧ್ಯತೆಗಳೇ ಸಾಂಸ್ಕೃತಿಕ ಸಂದರ್ಭದ ಜೀವಾಳ. ವೈವಿಧ್ಯತೆಗಳೇ ಜೀವನದ ಬಂಡವಾಳ. ಮತ್ತು ಆ ವೈವಿಧ್ಯತೆಯೊಳಗೊಂದು ಏಕತೆಯ ದೃಷ್ಠಿಯಿದ್ದರಲ್ಲವೇ ಸಮಷ್ಠಿಯು ಸ್ವರ್ಗ ! ಏಕತಾನತೆಯ ಸ್ವರೂಪ ಚೆಂದವೆನಿಸಿದರೂ ಅದರ ಆಯುಷ್ಯ, ಅನುಭೂತಿ ಕೆಲವೇ ಕ್ಷಣ ಅಥವಾ ದಿನ. ಆದ್ದರಿಂದ ಇಂತಹ ವೈವಿಧ್ಯತೆೆಯನ್ನೇ ನಿರಾಕರಿಸಿದರೆ ಸಾಂಸ್ಕೃತಿಕ ರಂಗಕ್ಕ್ಕೆ ನಮ್ಮನ್ನು ನಿಕಟರನ್ನಾಗಿಸುವುದಾದರೂ ಹೇಗೆ? ಪ್ರಸ್ತುತವಾಗುವುದಾದರೂ ಎಂತು?
ಹಾಗಾದರೆ ಕಲೆಯ ವಿಭಾಗೀಕೀರಣ ಬೇಡವೇ? ಬೇಕು. ನಮ್ಮ ಅರಿವಿನ ಹೊಂದಾಣಿಕೆಗಾಗಿಯಷ್ಟೇ ಇಂತಹ ಪ್ರತ್ಯೇಕಿಸಿಕೊಂಡು ನೋಡುವ ದೃಷ್ಠಿಯಿರಬೇಕೇ ವಿನಃ ಅವುಗಳಲ್ಲೇ ಮೇಲು-ಕೀಳು ಎಂಬಿತ್ಯಾದಿ ಕಲಿಯುವುದಕ್ಕಲ್ಲ. ಹಾಗೆ ನೋಡಿದರೆ, ಮೂಲದಲ್ಲಿ ಎಲ್ಲವೂ ಒಂದೇ ಆಗಿದ್ದ ಪ್ರದರ್ಶಕ ಕಲೆಗಳು ಕಾಲಾಂತರದಲ್ಲಿ ದೇಶ, ಭಾಷೆ, ಸಂಸ್ಕೃತಿಗಳಿಂದ ಪ್ರಭಾವಿಸಲ್ಪಟ್ಟು ವಿವಿಧ ಚೌಕಟ್ಟುಗಳನ್ನು, ರೂಪುರೇಷೆಯನ್ನು ಪಡೆಯಿತು. ವಿಭಿನ್ನ ಕಾಲಘಟ್ಟಗಳಲ್ಲಿ, ವಿವಿಧ ವಸ್ತುಸ್ಥಿತಿಗಳಲ್ಲಿ ಪ್ರತಿಯೊಂದು ಕಲೆಯೂ ಮತ್ತೊಂದರಿಂದ ಪ್ರಭಾವಿಸಲ್ಪಟ್ಟವೇ ಆಗಿದೆ. ಅದು ರಚನೆಂಲ್ಲಾಗಲೀ, ಪುನರುತ್ಥಾನದಲ್ಲಾಗಲೀ, ಬೆಳವಣಿಗೆಯಲ್ಲಾಗಲೀ ಇರಬಹುದು. ಹಾಗಿದ್ದಾಗ ಮೂಲದಲ್ಲಿ ಎಲ್ಲವೂ ಒಂದೇ ಆಗಿದ್ದ ವಿವಿಧ ಶೈಲಿಗಳು, ಪ್ರಕಾರಗಳನ್ನು ಕೇಳ-ಮೇಲ್ಮಟ್ಟ ಎಂಬ ಅಂತರದಲ್ಲಿ ನೊಡುವ ಕ್ರಮ ಹಿತವೇ? ಎಲ್ಲವೂ ನಾಟ್ಯಶಾಸ್ತ್ರದ ಆಧಾರದಲ್ಲೇ ರಚನೆಗೊಂಡಿದೆಯೆಂದಾದ ಮೇಲೆ ಅರಿವಿನ ವಿಸ್ತರಣೆಯಲ್ಲಿ ಈ ಬೇಧ ಏತಕ್ಕೆ?
ಅವರವರ ಅಭಿರುಚಿಗೆ ತಕ್ಕಂತೆ ಅವರವರ ದೃಷ್ಠಿ ; ನಿಜ. ಆದರೆ ಅಂತಹ ವೈಯಕ್ತಿಕ ದೃಷ್ಠಿಕೋನಗಳನ್ನು ಸಾರ್ವತ್ರೀಕರಿಸುವ ಮನಸ್ಸೇ ಸಾಂಸ್ಕೃತಿಕ ರಂಗದ ದೊಡ್ಡ ಅಪಾಯ ! ನಮ್ಮದೆನಿಸಿಕೊಂಡ ಕಲೆಯೆಡೆಗೆ ಪ್ರೀತಿ, ಇತರ ವಿಷಯಗಳಲ್ಲಿ ಗೌರವ ಅಪೇಕ್ಷಣೀಯವಲ್ಲವೇ?
ಈ ನಿಟ್ಟಿನಲ್ಲಿ ನೂಪುರ ಭ್ರಮರಿ ಕೇವಲ ಭರತನಾಟ್ಯಕ್ಕಾಗಿ ಮಾತ್ರ ಮೀಸಲಾದ ಪತ್ರಿಕೆಯಲ್ಲ ಎಂಬುದು ನಮ್ಮ ಪರಿಚಯದಿಂದಲೇ ನಿಮಗೆ ವೇದ್ಯವಾದದ್ದು ನಮ್ಮ ಪುಣ್ಯ
ಯಾವುದೇ ಒಂದು ಕಲೆ ಇನ್ನೊಂದು ಕಲೆಯ ಅಂಶಗಳನ್ನು ನುಂಗಿ ಹಾಕಬಲ್ಲುದು ಅಂತಾದರೆ ಅದು ಆ ಕಲಾಪ್ರಕಾರದ ಸತ್ವಕ್ಕೆ ಸಂಬಂಧಿಸಿದ ಸವಾಲು ಮತ್ತು ಅಸ್ತಿತ್ವದ ಪ್ರಶ್ನೆ. ಅಷ್ಟಕ್ಕೂ ಭರತನಾಟ್ಯದಂತಹ ಕಲೆ ಅಂತಹ ಅನಪೇಕ್ಷಿತ ಬೆಳವಣಿಗೆಯನ್ನು ಬಯಸದೇ ಇದ್ದರೂ ಗುರು-ಕಲಾವಿದರ ಈ ಪೂರ್ವಾಗ್ರಹಗಳು ಪರಸ್ಪರ ಕಲೆಗಳಲ್ಲಿ ಬೆಳೆಯಬಹುದಾದ ಆದರಣೀಯ ಅಂಶಗಳನ್ನು ನುಂಗಿ ಹಾಕುತ್ತದೆ. ಕ್ರಮೇಣ ಇಂತಹ ಆಘಾತಗಳೇ ದಶಕಗಳುದ್ದಕ್ಕೂ ಮುಂದುವರಿದರೆ ಮತ್ತೊಂದು ಕಲೆಯೆಡೆಗೆ ನೊಡುವ ಭವಿಷ್ಯದ ಮನಸ್ಸುಗಳೂ ಕಳಂಕಗೊಳ್ಳುತ್ತವೆ. ಮುಂದೊಮ್ಮೆ ಕಲೆಗೆ ಜನರ ಮನಸ್ಸುಗಳೇ ಕಳಂಕದ ಹಣೆಪಟ್ಟಿ ಅಂಟಿಸಿದರೂ ಆಶ್ಚರ್ಯವಿಲ್ಲ. ಇದು ಕೇವಲ ಕಲೆಗಳಿಗೆ ಮಾತ್ರವಲ್ಲದೆ ಶಿಕ್ಷಣದಲ್ಲೂ ನಾವಿಂದು ಮಾಡುವ ಒಂದೊಂದು ತಪ್ಪು ಮುಂದೊಂದು ದಿನ ಹೂಳಲೂ ಆಗದ ಅನಾಥ ಪ್ರೇತಗಳಾಗಿ ತೆವಳುತ್ತವೆ..ಎಚ್ಚರ !
ಪ್ರೀತಿಯಿಂದ,
ಸಂಪಾದಕರು

1 Response to ಅನ್ಯಕಲಾ ಅಸಹಿಷ್ಣುತೆಯಲ್ಲಿ ನೃತ್ಯಕಲಾವಿದರು !!

  1. P.Ganesh Bhat

    manu akka.ningala ella samputangala odi aagi enage anisida coment haakutte.

Leave a Reply

*

code