Author: ಮನೋರಮಾ. ಬಿ.ಎನ್
ಮೂರನೇ ವರ್ಷದ ಮೆಟ್ಟಿಲು ಏರುವ ಹಂತಕ್ಕೆ ಮುನ್ನುಡಿ ಶುಭಾಶಯಗಳ ಬೆಂಬಲ ದೊರೆತಿದೆ. ಗುರಿ ತಲುಪುವ ಹಂತದ ಪ್ರಯಾಣದ ಸುಖ-ದುಃಖಗಳು ಅನುಭವ ಹಾಗೂಅರಿವಿನ ಸಮೃದ್ಧ ಪಾಕಕ್ಕೆ ಹದವಾಗಿ ರಸ ತುಂಬುತ್ತಿದೆ. ಜೊತೆಗೆ ವರುಷ ಮುಗಿಯುವದರೊಳಗೆ ಪತ್ರಿಕೆ ರಿಜಿಸ್ಟರ್ಡ್ ಆಗಲಿದೆ ಎಂಬ ವಿಶ್ವಾಸ. ಈ ಹಂತದಲ್ಲೆಲ್ಲಾ ನೂಪುರದಂತೆಯೇ ಲಾಭದ ಉದ್ದೇಶವಿಲ್ಲದೆ ತಾವಾಗಿಯೇ ಬಂದು ಕೈಜೋಡಿಸಿ ದುಡಿಯುತ್ತಿರುವವ ಮಿತ್ರರು ಒಬ್ಬಿಬ್ಬರಲ್ಲ. ಹಾಗಾಗಿಯೇ ದಿನದಿಂದ ದಿನಕ್ಕೆ ನಮ್ಮದು ಹೊಸ ಸದಸ್ಯರನ್ನು ಹೊಂದಿಕೊಳ್ಳುತ್ತಿರುವ ಒಂದು ಕುಟುಂಬ. ನೋವು-ನಲಿವುಗಳ ನಡುವೆಯೂ ಪ್ರತಿಜ್ಞೆಯ ಹಾದಿಯೋ ಎಂಬ ಹಾಗೆ ನಸುನಕ್ಕು ಮುಂದೆ ಸಾಗುವ ಮಂದಿಯ ಬಳಗ. ಬಂಡಿಯಂತಿರುವ ಬದುಕಿನ ಚಲನೆ, ಕೂಡಿ ಬಾಳುವಲ್ಲಿ ಸಿಗುವ ಸುಖದ ಜೇನು ಪರಿಶ್ರಮವನ್ನಷ್ಟೇ ಹಿಂಬಾಲಿಸುತ್ತದೆ ಎಂಬುದು ತಿಳಿಯುವುದು ಹೀಗಿದ್ದಾಗಲೇ ನೋಡಿ !
ಒಂದು ಕಾಲದಲ್ಲಿ ಸಾಮಾನ್ಯ ಜನರ ಅಭಿವ್ಯಕ್ತಿಯ ಸಾಧನವಾಗಿದ್ದದ್ದು ಜನಪದ ಮತ್ತು ಜಾನಪದ ನೃತ್ಯಗಳು. ಕಾಲಕ್ರಮೇಣ ಹಲವು ಬದಲಾವಣೆಗಳಿಗೆ ಒಗ್ಗಿಸಿಕೊಂಡು ಒಂದು ಸಿದ್ಧ ಪರಂಪರೆಯ ರೂಪಕ್ಕೆ ಬಂದವು. ಲೋಕಧರ್ಮಿಯ ವಿಶಾಲತೆಯಿಂದ ನಾಟ್ಯಧರ್ಮಿಯ ಚೌಕಟ್ಟಿಗೆ ಒಳಪಟ್ಟವು.
ಉಗಮವಾದಾಗಿನಿಂದಲೂ ಶತಶತಮಾನಗಳಿಗೂ ನೃತ್ಯವು ಸಾಕ ಷ್ಟು ಚಲನೆಗಳಿಗೆ ಸಾಕ್ಷಿಯಾಗಿದೆ. ನಿತ್ಯನೈಮಿತ್ತಿಕ ಚಟುವಟಿಕೆಗಳ ಭಾಗವೋ ಎಂಬಂತಿದ್ದ ನೃತ್ಯಗಳು ಕ್ರಮೇಣ ಪೂಜಾ ಮಂದಿರ, ರಾಜರ ಆಶ್ರಯಗಳಲ್ಲಿ ಪ್ರವರ್ಧಮಾನಕ್ಕೆ ಬಂದು ವಿವಿಧ ಪದವಿಗಳನ್ನು, ಜೊತೆಗೆ ಸಾಕಷ್ಟು ಏಳು ಬೀಳುಗಳನ್ನು ಕಂಡಿತ್ತು. ಕ್ರಮೇಣ ಸ್ವಹಿತಾಸಕ್ತಿ, ಕಾಮ-ಮದ-ಮಾತ್ಸರ್ಯಗಳೇ ಆವರಿಸಿಕೊಂಡರೂ ಹಲಕೆಲವು ಮಹಾನುಭಾವರ ಸುಧಾರಣೆಯ ಫಲವಾಗಿ ಆಗಾಗ್ಗೆ ಅಂಟಿದ್ದ ಕಳಂಕವನ್ನು ತೊಡೆದುಕೊಳ್ಳುತ್ತಿತ್ತು.
ಆದರೆ ಈ ಕಾಲಕ್ಕೆ ಇವ್ಯಾವುದರ ಸಂಗತಿಯ ಕಲಿಕೆಯೂ ಬೇಡ..,ಬೇಕಿದ್ದರೂ ಪರೀಕ್ಷೆ ಸಮಯಗಳಿಗೆ ಮಾತ್ರ ! ಅರಿವಿನ ಕಿಚ್ಚು ಹಚ್ಚುವುದೇನಿದ್ದರೂ ಕೆಲ ಸಮಯಕ್ಕೆ ! ಉದ್ಯೊಗಕೇಂದ್ರಿತಗೊಳ್ಳುವ ಶಿಕ್ಷಣ ನೀಡುವ ಫಲಶ್ರುತಿಯೇ ಇದು ! ಇದಕ್ಕೀಗ ಕಲೆಯೂ ಹೊರತಾಗಿಲ್ಲ.
ಉದಾಸೀನತೆಯಾಗಿದ್ದರೆ ಒಂದಷ್ಟು ಹರಕೆ ಸಂದಾಯ ಮಾಡಿಯೋ; ನೃತ್ಯವೆಂಬುದು ಪ್ರದರ್ಶಕ ಕಲೆಯಾದ್ದರಿಂದ ಪ್ರದರ್ಶನಕ್ಕೆ ಪ್ರಥಮ ಅವಕಾಶ ಎಂದೋ ; ಘನಸ್ತಿಕೆಯನ್ನು ತೋರಿಸಿಕೊಳ್ಳುವ ನೆವದಲ್ಲಿ ನಿರ್ಲಕ್ಷ್ಯ ತೋರಿಯೋ.., ಒಟ್ಟಿನಲ್ಲಿ ನಮ್ಮಲ್ಲಡಗಿದ ಕೊರತೆಯನ್ನು ಮರೆಮಾಚಲು ಕಲೆಯ ವಿರುದ್ಧ ಅರಿವಿದ್ದೋ, ಇಲ್ಲದೆಯೋ ಹ್ಮಾಸ್ತ್ರವನ್ನಂತೂ ಬಳಸಿರುತ್ತೇವೆ. ಕಾರಣ, ನಮ್ಮ ದಟ್ಟ ಇತಿಹಾಸದ ಕಲ್ಪನೆಯನ್ನು ತಮ್ಮದಾಗಿಸಿಕೊಳ್ಳುವ ಕನಿಷ್ಠ ಪ್ರಯತ್ನವೂ ನಮ್ಮಿಂದಾಗುತ್ತಿಲ್ಲ. ಹಾಗಾಗಿ ಅಪೂರ್ವ ಸಂಪತ್ತಿನ ಕುರಿತಾದ ಮೌಲಿಕ ಸಂಶೋಧನೆಗಳೂ, ಅಧ್ಯಯನಗಳೂ ಬರಬರುತ್ತಾ ಅಪರೂಪವಾಗುತ್ತಿವೆ. ಸಾಕಷ್ಟು ಪಠ್ಯಗಳು ತಿರುಚಲ್ಪಡುತ್ತಿವೆ.
ಅದರಲ್ಲೂ, ಕ್ರಮಿಸಬೇಕಾದ ಹಾದಿ ಇನ್ನೂ ಬಹುದೂರವಿರುವಾಗಲೇ ಎಲ್ಲವನ್ನೂ ಸಾಧಿಸಿಕೊಂಡವರಂತೆ ಬೀಗುವ ಗುರುಗಳು, ಕಲಾವಿದರು, ವಿದ್ಯಾರ್ಥಿಗಳು ಕ್ರಮೇಣ ಆಧಾರಸ್ತಂಭವಾದ ಜನಪದವನ್ನು ತಮ್ಮ ಫ್ಯೂಷನ್ನಿಗೋ, ಫ್ಯಾಶನ್ನಿಗೋ ವಸ್ತುವನಾಗಿಸಿಕೊಳ್ಳುತ್ತಿದ್ದಾರೆಯೇ ವಿನಃ, ಅದರ ಅಂತಃಕರಣವನ್ನು ಅರಿಯುವ ದಿಸೆಯಲ್ಲಿ ಪ್ರಯತ್ನಗಳಾಗುತ್ತಿರುವುದು ತೀರಾ ಬೆರಳೆಣಿಕೆಯಷ್ಟು ಎಂಬಂತೆ !
ಪರಿಣಾಮ, ! ಕಲೆ ನಲುಗುತ್ತದೆ; ಇತಿಹಾಸದ ಕೊಂಡಿಗಳು ಕಳಚಿಕೊಳ್ಳುತ್ತವೆ, ಕೊನೆಗೊಂದು ದಿನ ಉದ್ದೇಶಪೂರ್ವಕವಾಗಿ ಮರೆಯಾಗಿ ತಿರುಚಿಗೊಳ್ಳುತ್ತವೆ. ಈಗಾಗಲೇ ಜನಪದವನ್ನೂ ಒಳಗೊಂಡಂತೆ ಕಲೆ-ಕಲೆಗಳ ನಡುವೆ ಸಂಧಿಸಲಾಗದ ಕಂದಕವೊಂದು ಬೆಳೆಯುತ್ತಿದೆ. ಒಂದು ಕಾಲಕ್ಕೆ ಗೆಜ್ಜೆ ಕಟ್ಟುವುದೇ ಅಪರಾಧ ! ಅದೇ ಈಗ ನೃತ್ಯವೆಂಬುದು ಮಾರುಕಟ್ಟೆಯಲ್ಲಿ ಬಿಕರಿಗಾಗಿ ಇಟ್ಟಿರುವ ವಸ್ತು ! ಎಂಥ ಗಮನಾರ್ಹ ಬದಲಾವಣೆಯಲ್ಲವೇ ?
ಇವೆಲ್ಲವೂ ನಮ್ಮ ಸ್ವಯಂಕೃತ ಅಪರಾಧಕ್ಕೆ ಸಿಗುವ ಪ್ರತಿಫಲ.
ಕನಿಷ್ಠಪಕ್ಷ ಅದಕ್ಕಾದರೂ ಒಂದಷ್ಟು ಅಪರಾಧೀಪ್ರಜ್ಞೆ ಉಳಿಯಬಹುದೇ?
ಕಲೆಯಿಂದ ಸಾಕಷ್ಟು ಪಡೆಯುತ್ತೇವೆ. ಜೀವನ ಹಸನು ಮಾಡಿಕೊಳ್ಳುತ್ತೇವೆ. ವರ್ತಮಾನ, ಭವಿಷ್ಯವನ್ನೆಲ್ಲಾ ಉದ್ಧಾರ ಮಾಡಿಕೊಂಡು ಪ್ರತಿಷ್ಠಿತರಾಗುತ್ತೇವೆ. ಬದಲಾಗಿ ಕಲೆಗಾಗಿ ನಾವು ಸಲ್ಲಿಸಿದ ಕಾಣಿಕೆಯೇನು ? ಮುಂದಿನ ಪೀಳಿಗೆಗೆ ನಾವು ಕೊಡುವ ಕೊಡುಗೆಯೇನು ? ಒಟ್ಟಿನಲ್ಲಿ ಪ್ರತಿಷ್ಠೆ, ಸಂಪಾದನೆಗಾಗಿ ನಾವು ಕೊಡುವ ಸಮಾಯಸಮಯ, ಸಂದರ್ಭಾನುಸಾರ ಪ್ರಜ್ಞೆಯಿಲ್ಲದ ಪ್ರಯೋಗಗಳು, ಪ್ರದರ್ಶನಗಳು, ಕಾರ್ಯಕ್ರಮಗಳು ಕಲೆಯ ಮೂಲಸೆಲೆಯನ್ನು ಬತ್ತದಂತೆ ಮಾಡದಿದ್ದರೆ ಸಾಕು !
ಚಲನಶೀಲತೆ ಕಲೆಗಳ ಹುಟ್ಟಾ ಪ್ರವೃತ್ತಿ. ಆದರೆ ಅದರ ಮೂಲ ಪರಿಚಯವಿಲ್ಲದೆ ಮಾಡುವ ಚಲನೆಗಳು ಮಾತ್ರ ಪೂರ್ಣ ನಿಷ್ಕ್ರಿಯರನ್ನಾಗಿಸುತ್ತವೆ.
ಈಗಾಗಲೇ ಭಾರತದ ಇತ್ತೀಚಿನ ಇತಿಹಾಸದುದ್ದಕ್ಕೂ ಇತಿಹಾಸವನ್ನೇ ತಿರುಚಲ್ಪಡುವ ಸಾಕಷ್ಟು ಸಂಗತಿಗಳನ್ನು ಅನುಭವಿಸಿದ್ದೇವೆ. ಈ ಸಂದರ್ಭ ಕಲೆಗಳಲ್ಲೂ ವ್ಯಾಪಕವಾಯಿತೆಂದರೆ ಕೊಡಲಿಯೇಟು ಬೀಳುತ್ತಿರುವ ಅರಿವಿಲ್ಲದ ಈಗಿನ ಪೀಳಿಗೆಯು ಮುಂದೊಂದು ದಿನ ಅಸ್ತಿತ್ವವನ್ನೇ ಮಾರಿ ಕೊಂಡೀತು ! ಕೊನೆಗೆ ಬೇರೊಂಡೆಡೆ ಹುಡುಕಬೇಕಾದರೂ ಅದರ ಅವಕಾಶವೇ ಇಲ್ಲದಿದ್ದರೇ !!!?
ನಮ್ಮ ಬುಡಕ್ಕೆ ನಾವಿಟ್ಟುಕೊಳ್ಳುತ್ತಿರುವ ಬೆಂಕಿ ಕೊಳ್ಳಿ !
‘ದೇಶ ನಿಮಗೆ ಏನು ನೀಡಿದೆ ಎಂಬುದಕ್ಕಿಂತ ನೀವು ದೇಶಕ್ಕೆ ಏನು ನೀಡಿದ್ದೀರಿ ಎಂಬುದು ಮುಖ್ಯ. ಏಕೆಂದರೆ ನೀವು ಬದುಕುತ್ತಿರುವುದೇ ನಿಮ್ಮ ಮಣ್ಣಿನಿಂದ.’ ಅಂತೆಯೇ ಕಲೆಯೂ ಕೂಡಾ!
ಕೈಯಲ್ಲಿರುವ ಬೆಣ್ಣೆಯನ್ನು ಮಣ್ಣುಪಾಲು ಮಾಡಿ ತುಪ್ಪ ಬೇಕೆಂದರೆ ಬೆಪ್ಪರಾಗಬೇಕಾದೀತು ! ಎಚ್ಚರವಿರಲಿ !
ಪ್ರೀತಿಯಿಂದ,
ಸಂಪಾದಕರು