ಅಂಕಣಗಳು

Subscribe


 

ಗಿರಿಜಾ ಕಲ್ಯಾಣ- 2

Posted On: Monday, February 15th, 2010
1 Star2 Stars3 Stars4 Stars5 Stars (No Ratings Yet)
Loading...

Author: ದಿವಾಕರ ಹೆಗಡೆ, ಕವಿಗಳು, ಆಕಾಶವಾಣಿ ಉದ್ಯೋಗಿ, ಧಾರವಾಡ

ಕಳೆದ ಸಂಚಿಕೆಯಿಂದ ಮುಂದುವರಿದ ಭಾಗ ಇಲ್ಲಿದೆ.

ರತಿ-ಪಾರ್ವತಿ : ಪತಿ ವಿರಹಿತ ರತಿ ಗತಿರಹಿತಳು ಸತಿ |

ವ್ಯಥಿತ ಮನೋಗತಿ ನತಮಸ್ತಕ ಸ್ಥಿತಿ |

ಅತಿಗೆಳೆಯದ ಮಿತಿ ಧೃತಿಗೆಟ್ಟಿತು ಮತಿ |

ಶತಸಂಕಟ ತತಿ ಸತತ ಪತಿತ ಗತಿ |

-೪-

ಸುಟು ಹೋದನೆನ್ನ ನಲ್ಲ ದಿಟ್ಟಿಸಿದರೆ ಕಾಣನಲ್ಲ |

ಬಿಟ್ಟ ಬಾಣ ನೆಟ್ಟಿತಲ್ಲ ಕಟ್ಟಿ ಕನಸ ಕೆಟ್ಟೆನಲ್ಲ ||

ರತಿ : ಮುಗುಳಂಬನ ಬೆಂಬಲಿಸಿದೆನೆನ್ನನು ನಂಬಿಸಿ ಕೈ ಬಿಟ್ಟ !

ಅಗಜೆಯ ಹಂಬಲ ಶಂಕರಗಿಲ್ಲವೆ ಅಂಗಜನನು ಸುಟ್ಟ ?

ಪಾರ್ವತಿ : ಅಂಜದಿರಬಲೆಯೆ ನಂಜುಗೊರಳನಾ ಭಸ್ಮವ ಬಳಿದಾತ |

ಅಂಗಜನಂಗವ ಭಂಗಿಸಿ ಅಂಗದಿ ಧರಿಸಿದ ಸಂಗಾತ ||

ರತಿ : ಗಿರಿಜೆ ನಿನ್ನ ಮನಸಿನಲ್ಲಿ ಎನ್ನ ಸೇವಿಸು :

ಹರನ ಸಂಗ ಬಯಸಿ ಬೇಗ ಅತ್ತ ಧಾವಿಸು ||

ಮರಣವಲ್ಲ ಮದನನಿಹನು ಶಿವಶರೀರದಿ |

ಕರಣತ್ರಯದಿ ಧರಿಸಿ ಉದ್ಧರಿಸು ಬೇಗದಿ ||

ಪಾರ್ವತಿ : ರತಿಯನುರೆ ಧರಿಸಿದಳು ಪಾರ್ವತಿಯು ಗಮಿಸಿದಳು|

– ಖತಿವಿಡಿದ ಈಶನನು ಒಲಿಸೆ ಸಂಭ್ರಮಿಸಿದಳು |

ಪತಿಯ ಪಡೆಯುವೆನೆನುತ ತಪಕೆ ಮನ ಮಣಿಸಿದಳು |

ಮತಿಯನನುಗೊಳಿಸಿದಳು ಪಶುಪತಿಯ ನುತಿಸಿದಳು ||

ಪರಿವಾರದವರು : ಬಾಲೆಬಾಡುವಳೆನುವ ನೋವಲಿ

ಶೀಲೆಯನು ಒಡಬಡಿಸಲೋಸುಗ

ಓಲಗಿಸಿದರು ತಪವ ನೀ ಬಿಡು | ತಾಳೆಯೆನುತ ||

ಮೃದು ಮನೋಹರೆ ಮಾರನರಗಿಣಿ |

ಮಧುವಿಲಾಸಿನಿ ವಿಶ್ವ ಮೋಹಿನಿ |

ವಿದುವದನೆ ವಾತ್ಸಲ್ಯ ಮೋದಿನಿ | ಹದವಿದೇನೆ ||

ಜಪ ತಪ ಉಪವಾಸಗಳಿಗೆ ಯತಿಗಳು ಉಪಜೀವಿಸುವರಲ |

ಹಪಹಪಿಸುವುದ್ಯಾತಕೆ ಶಂಕರನಿಗೆ ಕುಪಿತನು ವಿಷಗೊರಳ |

ಅಪರೂಪದ ಸೌಂದರ್ಯವ ಪಡೆದಿಹೆ ದಂಡಿಸಲೊಳಿತಲ್ಲ |

ತಪತಾಪದಿ ಕೋಮಲಕಾಯವ ನೀನುರಿಸುವೆ ಸರಿಯಲ್ಲ ||

ಪಾರ್ವತಿ : ಯಾರ ಮಾತಿಗು ಬದಲೆನ್ನದ ಜಾಣೆ

ಘೋರತಪದಿ ಮೀರುವರನು ಕಾಣೆ

ಮಾರಹರನ ಮನ ಗೆಲ್ಲುವ ಆಣೆ

ಸಾರಸಮುಖಿ ತಾಪಸಿಯು ಅಪರ್ಣೆ

-೫-

ಬಿಸಿಲ ಬೇಗೆಯು ಶಿವನೆ ಶಿಶಿರ ಶೀತವು ಶಿವನೆ |

ವರ್ಷಧಾರೆಯು ಶಿವನೆ ಬಸಿವ ಬೆವರಿನ

ಹನಿ ಹನಿಯು ಶಿವ ಶಿವನೆ |

ಎಸೆವ ರೂಪದಿ ಶಿವನೆ ದಶದಿಕ್ಕಿನಲಿ ಶಿವನೆ |

ಹಸಿರೆಲೆಯ ರುಚಿ ಶಿವನೆ ಹಸಿವು ತೃಷೆ ನಿದ್ದೆಯಾಹಾರ ಶಿವ ಶಿವನೆ ||

ಸುರರು : ಸುರರಿಗೆ ಭಯ ತಾರಕನಬ್ಬರವಿದೆ |

ಗಿರಿಜೆತಪಕೆ ಹರನೊಲಿಯದ ಸಂಕಟ |

ಸರುವರು ಕೈಲಾಸಕೆ ಬಂದಿಳಿದರು |

ಮಾರಹರಗೆ ತಮ್ಮಳಲನು ಪೇಳ್ಡರು ||

ಅನ್ನಪೂರ್ಣೆ ತಪದಿ ತಾನೆ ಬನ್ನಬಡುವಳು |

ನಿನ್ನ ಮನದಿ ಧ್ಯಾನಿಸುತ್ತ ತನ್ನ ಮರೆತಳು |

ಚಿನ್ನದಂಥ ಚೆಲುವೆ ತಪದಿ ಬೆಂದು ನಿಂದಳು |

ಇನ್ನು ನೀನು ಕಾಡಲೇಕೆ ಮುನ್ನ ಒಲಿವುದು ||

ಪರಮೇಶ್ವರ : ಸುರರಿಗಭಯವನಿತ್ತು ಪರಿಕಿಸುವೆ ತಾನೆನುತ |

ವರಗಿರಿಯನಿಳಿದಿಳಿದು ಬಂದ ಪರಮೇಶ ||

ವರಬ್ರಹ್ಮಚಾರಿ ವೇಷದೊಳಂದು ನಡೆತಂದು |

ಹರನ ಜರೆಯುತ ಗಿರಿಜೆಗೊರೆದನಾಗ ||

ಗಿರಿಜೆ ನಿನಗೆ ಹರನ ಕೂಡ ಸರಸವೇತಕೆ |

ಕರಿಯ ಚರ್ಮ ಹೊದೆದ ಶಿವನ ಸಂಗವೇತಕೆ |

ಬಾಲೆ ಕೇಳು ಮಸಣಕೀಶ ಮೈಯೆ ಬೂದಿಯು |

ಕಾಳಸರ್ಪ ಕೊರಳಿನಲ್ಲಿ ಕೈಯ ಶೂಲಿಯು ||

ಕುಣಿದು ಕಳೆವ ಕಾಲವನ್ನು ಆ ದಿಗಂಬರ |

ಎಣಿಸು ನಿನ್ನ ನಲ್ಲಗಿಲ್ಲ ಪೀತದಂಬರ ||

ಡಮರು ನುಡಿಸಿ ತಾಂಡವದಲಿ ಭೂತನಾಥನು |

ವಿಮಲೆ ನಿನಗೆ ಆತನಲ್ಲ ಪ್ರೇತಪ್ರೀತನು ||

ಗಿರಿಜೆ : ಶಿವನನ್ಯಾತಕೆ ದೂರುವೆ | ಶಂಕರ ದೇವ | ಭವನ್ಯಾತಕೆ ಬೈಯ್ಯುವೆ ||

ಕವಿದ ಕತ್ತಲೆಯ ತಾನುಳಿದು ಬೆಳಕಾಗಿರ್ಪ |

ಭುವನ ಮೋಹನ ಶೂಲಿ ಅಮಲ ಭಸ್ಮಾಂಗನು ||

ಈಶ್ವರ : ಮಸಣದಿ ಮನೆತಾಪಿಸುಣನು ಕಾರ್ಯದಿ |

ಕಸಿವನು ಜೀವವನು |

ಹೊಸದೇನಿದೆ ಪರಮೇಶನು ಕೊರಳಲಿ |

ರುಂಡವ ಧರಿಸುವನು ||

-೬-

ಪಾರ್ವತಿ : ಹರನ ನಿಂದೆಯ ಕೇಳಲಾರದೆ |

ಸರಸಿಜಾನನೆ ಭರದಿ ಪೊರಡಲು |

ವರಿಪ ಮನಮಾಡಿದನು ಪಿಡಿದನು | ಕರವನಾಗ ||

ಕರವಪಿಡಿದಾತನನು ತಿರುಗಿ ನೋಡಿದಳು ಸ್ಮರ |

ಹರನಿರವನರಿತು ಪಾರ್ವತಿಯು ನಾಚಿದಳು ||

ಶಿವಪಾರ್ವತಿ : ಗಿರಿಜಾ ಶಂಕರ ಸಮ್ಮಿಲನ | ಶೃಂಗಾರದಿ ಘನ |

ಗಿರಿಜಾ ಶಂಕರ ಸಮ್ಮಿಲನ ||

ಸರಸ ಸಾನಂದದಿ ಮೆರೆವ ವಿಲಾಸ |

ಧರಿಸಿ ಮಾರನಭವ ಶಿವೆಯ ಸಂಗಾತ|

ವರಿಸಿ ಕಾತರಿಸಿ ಮನವಿರಿಸಿ ಮೈಬಾನಿಸಿ

ನಟಿಸಿ ನಲಿವ ನವಯೌವ್ವನದಾಶಯ ||

ನಲಿವ ನವಿಲಜೋಡಿ | ಕಲೆತರೆ ಲಯಲಾಸ್ಯದ ಮೋಡಿ ||

ಲಲಿತೆ ಲಾವಣ್ಯದಿ ಸಂಭ್ರಮಿತೆ |

ಶಿವನು ಶೃಂಗಾರದಿ ಸುಂದರನು ||

ಸುಲಲಿತ ಭಾವ ಸುಮೋಹನ ನಾಟ್ಯದಿ

ಒಲಿಸಿ ಒಲಿದು ಪಾರಮ್ಯವ ಮೆರೆಯುವ ||

ಮಾರಹರನೆ ಸ್ಮರ ಪಾರ್ವತಿಯೇ ರತಿ ಶೃಂಗಾರದ ಪ್ರೀತಿ |

ತಾರೆಯು ಚಂದ್ರಮ ಮೇಳೈಸಿದ ಮುದ ತಮವಿಲ್ಲದ ರಾತ್ರಿ ||

ಈಶನ ತಾಂಡವಕೊದಗಿದೆ ಮೋದವು ಲಲಿತೆಯ ಲಾಲಿತ್ಯ |

ತೋಷದಿ ನಲಿಯುವ ಪ್ರಕೃತಿ ಪುರುಷ ಪಾರಮ್ಯದ ದಾಂಪತ್ಯ ||

ಮದುವೆಯ ಸಂಭ್ರಮ : ದಿಬ್ಬಣನೆರಹಿದ ಪರ್ವತರಾಜನು ಹಬ್ಬದ ಸಡಗರದಿ |

ಅಬ್ಬರದಲಿ ಮಂಗಳವಾದ್ಯದ ರವ ಕೈಲಾಸದ ಸರದಿ ||

ಉಬ್ಬಿದ ತೋಷಕೆ ವರಬೀಗರ ಪಡೆ ಆದಿತ್ಯರು ಮುದದಿ |

ಒಬ್ಬರನೊಬ್ಬರು ಉಪಚರಿಸುವ ಪರಿ ಸುಮನಸ ಸಂಭ್ರಮದಿ ||

ಮೂರುಕಣ್ಣವನಿಗೆ ಪರ್ವತ ಕುವರಿಗೆ |

ಮಾರಹರಗೆ ಪಾರ್ವತಿವರ ಗಿರಿಜೆಗೆ |

ನೂರು ತೆರದಿ ಬೆಳಗಿದರಾರತಿಯ ||

ನಿರೂಪಕ : ಕೇಳಿದಿರೆ, ಪಾರ್ವತಿಯ ಉದರದಲಿ ಜನಿಸಿದನು |

ಲೀಲೆಯಲಿ ಆರ್ಮೊಗನು ಹರಕುಮಾರಕನು |

ಕೇಳಿಯಲಿ ಕಲಿತು ಸುರ ಸೈನ್ಯವನು ಮುನ್ನಡೆಸಿ

ದಾಳಿಯಲಿ ತಾ ಕೊಂದ ತಾರಕನ ಸ್ಕಂದ ||

Leave a Reply

*

code