Author: ಮನೋರಮಾ. ಬಿ.ಎನ್
ಹೀಗೆ., ಒಂದು ಅಧ್ಯಯನ ಸಾಮಗ್ರಿಗೆ ಹುಡುಕುವಾಗ ಮೊದಲು ಕಂಡಿದ್ದು ಜನಪದ. ಅದರಲ್ಲೂ ಜಾನಪದ ನೃತ್ಯಗಳು. ಶತಶತಮಾನದಿಂದ ಜನಜೀವನದಲ್ಲಿ ಹಾಸುಕೊಕ್ಕಾಗಿ, ಹಲವು ಪಲ್ಲಟಗಳಿಗೆ ಸಾಕ್ಷಿಯಾಗಿ, ಯಾವುದೇ ಆಗ್ರಹಗಳನ್ನೂ ಕಟ್ಟಿಕೊಳ್ಳದೆ, ನಿತ್ಯವಿನೂತನವಾಗಿ ತನ್ನ ಹೆಜ್ಜೆ-ಗೆಜ್ಜೆಗಳಲ್ಲಿ ಮನಸುಗಳ ಅರಳುವಿಕೆಯನ್ನೂ ಸಾಧಿಸಿಕೊಂಡವುಗಳು ಅವು. ಅಷ್ಟೇ ಅಲ್ಲ, ಇಂದಿನ ಎಲ್ಲಾ ಶಾಸ್ತ್ರೀಯವೆನಿಸುವ ನೃತ್ಯಗಳು ಒಂದಾನೊಂದು ಕಾಲದಲ್ಲಿ ಜನಪದದಿಂದ ಬಂದವುಗಳೇ ಆಗಿವೆ. ಇಂತಹ ಸಮೃದ್ಧಭರಿತ ಸಾಂಗತ್ಯದಲ್ಲಿ ಶಾಸ್ತ್ರೀಯ ನೃತ್ಯಗಳೊಂದಿಗೆ ಪರಸ್ಪರ ಪ್ರಭಾವ-ಅನುಭಾವಗಳ ಬೆಸುಗೆ ಇಂದಿಗೆ ಯಾವ ತೆರನದ್ದು ಎಂದು ಹುಡುಕಿ ಹೊರಟಾಗ ಪ್ರಸಕ್ತ ರೀತಿಗೆ ಸಂವಾದಿಯಾಗಿ ತೆರೆದುಕೊಂಡಿದ್ದೇ ಪ್ರಾದೇಶಿಕ ಮತ್ತು ಜಾನಪದ ನೃತ್ಯಗಳ ಸೃಜನಶೀಲ(?) ನಕಲು !
ಒಂದಾನೊಂದು ಕಾಲಕ್ಕೆ ಕಲಾಪ್ರವರ್ತಕರು ಕೆಲವೊಂದು ನೃತ್ಯಗಳನ್ನು ಶಾಸ್ತ್ರೀಯತೆಯ ಚೌಕಟ್ಟಿಗೆ ಒಳಪಡಿಸಿ ಸ್ಥಾನ ಕೊಟ್ಟ ಮೇಲೆ ನಾನಾ ಕಾರಣಗಳಿಂದ ಅವುಗಳ ಕುರಿತಾಗಿ ಇದ್ದ ನಿಕೃಷ್ಟ ಧೋರಣೆಗೆ ಪೂರ್ಣವಿರಾಮ ಬಿದ್ದದ್ದು ಆಗಲೇ. ಅದರಲ್ಲೂ ನೃತ್ಯ ಸುಧಾರಕರು ಕಲಾಕ್ಷೇತ್ರದ ಅನುಭವಿಗಳು ಈ ಮರ್ಮ ಅರಿತೇ ಜನಪದ ಸಂಸ್ಕೃತಿಯನ್ನು ಒಂದಷ್ಟು ಶಾಸ್ತ್ರೀಯವೆನಿಸುವ ಮಟ್ಟಿಗೆ ಒಗ್ಗಿಸಿಕೊಂಡಿದ್ದರು. ಅದು ಒಂದರ್ಥದಲ್ಲಿ ಪುನರುಜ್ಜೀವನವೂ ಹೌದು. ಜೊತೆಗೆ ಸಮಾನ ಒಲವು, ಸಂಸ್ಕಾರ, ಸಮೃದ್ಧಿ, ಕಲೆಯ ವಿಶಾಲ ಪ್ರಪಂಚದೆಡೆಗೆ ಅಭ್ಯಾಸಿಗಳ ಸಮ್ಯಕ್ ದೃಷ್ಟಿಯನ್ನು ಹರಿಸಲು ಮಾಡಿದ ಪ್ರಯತ್ನವೂ ಹೌದು. ಹಾಗಾಗಿಯೇ ಕೊರವಂಜಿಗಳೆಲ್ಲಾ ಪ್ರದರ್ಶನದ ಒಂದು ಭಾಗವೇ ಆಗಿ, ಶಾಸ್ತ್ರೀಯತೆಯ ಹೂರಣದೊಳಗೆ ಒಪ್ಪ-ಓರಣವಾಗಿ ಸ್ಥಾನ ಕಂಡುಕೊಂಡಿತು. ಕ್ರಮೇಣ ‘ಶಾಸ್ತ್ರೀಯ ಸ್ಪರ್ಶದ ಜನಪದ ಮನೋಭೂಮಿಕೆ’ಯೇ ಆಗಿಹೋಯಿತು. ಇಂದಿಗೂ ಹಲವು ನೃತ್ಯಪ್ರದರ್ಶನಗಳಲ್ಲಿ ಕೊರವಂಜಿಯ ಕರಾಮತ್ತು, ಕೈಚಳಕಗಳಿವೆ.
ಕಾಲ ಸರಿದಂತೆ ಹತ್ತು ಹಲವು ಪ್ರಯೋಗಗಳಿಗೆ, ಕಲಿಕೆಗೆ ಜಾನಪದ ರಂಗ ತನ್ನನ್ನು ಯಾವುದೇ ಬೇಡಿಕೆಗಳಿಲ್ಲದೆ ಸಮರ್ಪಿಸಿಕೊಂಡಿತು. ಒಂದರ್ಥದಲ್ಲಿ ಜಾನಪದದ ಮಹತ್ವ ತಿಳಿಯದ ಶಾಸ್ತ್ರೀಯ ನೃತ್ಯದ ಬಳಕೆದಾರರ ಅಗತ್ಯವೆನಿಸುವ ಸಾಮಗ್ರಿಯೂ ಆಗಿ ! ಕಾಲನ ಮೂಸೆಯಲ್ಲಿ ಎಲ್ಲವೂ ಅಡಗಿ ಹೋಗುವಂತೆ ಭರತನಾಟ್ಯದ ಬಾಹುಗಳಲ್ಲಿ ಉಳಿದ ದೇಸೀ ನೃತ್ಯಗಳ ಸಹಜತೆ ಮರೆಯಾಗಿ ಮಾಯವಾಗುತ್ತಿದೆ ಎಂಬಲ್ಲಿಯವರೆಗೆ ! ‘ನಮ್ಮದು ಶಾಸ್ತ್ರೀಯ, ಗೊತ್ತುಗುರಿ ಇಲ್ಲದ ಜಾನಪದವನ್ನು ಹೇಗೆ ಬಳಸಿಕೊಂಡರೂ ನಡೆಯುತ್ತದೆ’ ಎಂಬ ಉಡಾಫೆಯ ತನಕ ! ಇದರ ಫಲ ; ಖಾಸಗೀಕರಣ, ಉದಾರೀಕರಣ, ಜಾಗತೀಕರಣದಂತೆ ‘ಎಲ್ಲವೂ ಭರತನಾಟ್ಯೀಕರಣ’ !
ಕುಚೋದ್ಯವೆನಿಸೀತು. ಆದರೆ ಇದು ಇಂದಿನ ವಾಸ್ತವ.
ಹೌದು. ಎಲ್ಲಾ ನೃತ್ಯಗಳಲ್ಲೂ ಭರತನಾಟ್ಯದ ಪ್ರಭಾವ ಎದ್ದು ತೋರುತ್ತಿದೆ. ಯಕ್ಷಗಾನಾದಿಯಾಗಿ ಬಳಕೆಯಲ್ಲಿರುವ ಎಲ್ಲಾ ಜನಪದ-ಪ್ರಾದೇಶಿಕ ನೃತ್ಯಗಳನ್ನು ಭರತನಾಟ್ಯವೆಂಬ ಕಬಂಧ ಬಾಹು ಸೆಳೆದು ಅರಿವಿಲ್ಲದಂತೆಯೇ ನುಂಗಿಹಾಕುತ್ತಿದೆ. ಜನಪದ ನೃತ್ಯಗಳ ಚೀತ್ಕಾರ ಎಲ್ಲೋ ಮೂಲೆಯಿಂದೆದ್ದು ಅಲ್ಲೇ ಸುಖಾಸುಮ್ಮನೆ ಅಡಗಿಹೋಗುತ್ತಿದೆ.
ಭರತನಾಟ್ಯದ ಪರವಾಗಿ ವಾದಿಸುವವರಿಗೆ ‘ಅದು ಆ ನೃತ್ಯಪ್ರಕಾರದ ಶಕ್ತಿ ಮತ್ತು ಸೌಂದರ್ಯಾನುಭೂತಿ’. ಆದರೆ ಯಾವುದೇ ಕಲೆ ಇನ್ನೊಂದು ಕಲೆಯನ್ನು ಬಲಿ ತೆಗೆದುಕೊಳ್ಳಲಾರದು ಎಂಬುದೂ ಒಂದು ವಾಸ್ತವ ಸತ್ಯ. ಒಂದೊಮ್ಮೆ ಕಾಲಾಂತರಗಳಲ್ಲಿ ಬಲಿ ತೆಗೆದುಕೊಂಡರೂ ಅದು ಮತ್ತೊಂದು ಕಲೆಯ ಅಸ್ತಿತ್ವದ ಗಟ್ಟಿತನದ ಪ್ರಶ್ನೆಯೂ ಅದರಲ್ಲಡಗಿರುತ್ತದೆ. ಆದರೆ, ಇದನ್ನೂ ಹಾಗೆಂದುಕೊಂಡು ತೆಪ್ಪಗಾದಿರೋ, ಎಚ್ಚರಿಕೆಯ ಕರೆಗಂಟೆ ಮತ್ತೊಮ್ಮೆ ಮೊಳಗದಿರುವಷ್ಟು ಕಾಲಗರ್ಭದೊಳಗೆ ಸೇರಿಹೋಗುತ್ತದೆ. ಅದು ನಿರಂಕುಶ ಪ್ರಭುತ್ವದೆಡೆಗೆ ತಲೆತಗ್ಗಿಸಬೇಕಾದ ಸಲಾಮು. ಒಂದರ್ಥದಲ್ಲಿ ಗುಲಾಮತನವೂ !
ಹಾಗಾದರೆ ಸೌಂದರ್ಯಾನುಭೂತಿ ಇರುವುದು ಹೌದೇ ? ಅಥವಾ ಅದೂ ಕೂಡಾ ಮಾಯಾಪೂತನಿಯೇ?
ಎಲ್ಲವೂ ನಾವಂದುಕೊಂಡಂತಿಲ್ಲ ಎಂದು ಅರಿವಾಗುವುದು ಆಗಲೇ !
ಇಲ್ಲಿ ಸಮಸ್ಯೆಯಿರುವುದು ಜಾನಪದದ್ದಲ್ಲ, ಭರತನಾಟ್ಯವೂ ಅಲ್ಲ. ಅದರ ಅಂತಃಸತ್ವವನ್ನು ಅರಿಯದೆ ಅನುಕರಿಸುವ ಕಲಾವಿದರಲ್ಲಿ, ಶಿಕ್ಷಕರಲ್ಲಿ, ವಿದ್ಯಾರ್ಥಿಗಳಲ್ಲಿ ಮತ್ತು ವಿಭಿನ್ನ ನೆಲೆಗಟ್ಟಿನಲ್ಲಿ ಅನುಸರಿಸುವ ಮಾಧ್ಯಮಗಳಲ್ಲಿ. ಅವರಿಗೆ ಭರತನಾಟ್ಯವೆಂಬುದು ಪ್ರಚಾರದ ತಂತ್ರ. ಜೊತೆಗೆ ವೀಕ್ಷಕರಿಗೊಂದು ಬಲೆ ಬೀಸುವ ಮಂತ್ರ. ಜೊತೆಗೆ ಜಾನಪದವು ಕಾಲಕಳೆಯುವ ಒಂದು ಪ್ರತಿಷ್ಟೆಯ ವಸ್ತು. ಅದಕ್ಕೊಂದು ಸುಂದರವಾದ ಹೆಸರು ‘ಫ್ಯೂಷನ್’ !
ಕೂಚಿಪುಡಿಯ ಹರಿವಾಣ-ಚೆಂಬಿನ ಸಾಂಪ್ರದಾಯಿಕ ನೃತ್ಯ ಭರತನಾಟ್ಯದಲ್ಲಿ ನೃತ್ತ-ನೃತ್ಯ-ಅಭಿನಯವಿಲ್ಲದ ಕ್ಯಾಂಡಲ್ ದೀಪಗಳ ಸಾಹಸದ ನಡುವೆ ಕಸರತ್ತು, ವ್ಯಾಯಮಗಳ ಚಪ್ಪಾಳೆ ಗಿಟ್ಟಿಸುವ ಮಹೋನ್ನತ(?) ಸಾಂಪ್ರದಾಯಿಕ ಫ್ಯೂಷನ್ ಆಗಿದ್ದು ಹೀಗೆಯೇ ! ಎಷ್ಟರಮಟ್ಟಿಗೆ ಪರಿಣಾಮಕಾರಿ ಎಂದರೆ ನಕಲು ಎಂದು ತಿಳಿಯದ ಮಟ್ಟಿಗೆ ! ಈಗಲೂ ಶ್ರೀಸಾಮಾನ್ಯರು ಅಚ್ಚರಿಯಿಂದ ಎಳೆಯರನ್ನು, ಯುವ ನೃತ್ಯಪಟುಗಳನ್ನು ಪ್ರಶ್ನಿಸುವುದನ್ನು ಕೇಳಿದ್ದೇನೆ ; ‘ದೂಪಾರತಿ ಕಲಿತಿಲ್ಲವಾ?’.
ಹಾಗಂತ ಫ್ಯೂಷನ್ ಎಂದಾಕ್ಷಣ ಅಸಡ್ಡೆಯ ಓರೆನೋಟ ಬೇಕಿಲ್ಲ. ಆ ಪ್ರಪಂಚದಲ್ಲಿಯೂ ಅರ್ಥಗರ್ಭಿತ ನಿರೂಪಣೆಗಳಿವೆ, ಅದರದ್ದೇ ಆದ ಸಾಧ್ಯತೆ, ಆನಂದ, ವಿಸ್ತಾರ, ಮಿತಿ, ಒಳಿತು ಮತ್ತು ಅಪಾಯಗಳಿವೆ. ಅದರ ಕುರಿತು ಮತ್ತೊಮ್ಮೆ ಚರ್ಚಿಸಿಯೇನು.
ಇದರ ಜೊತೆಗೆ, ಸಾಂಪ್ರದಾಯಿಕ ಶಾಸ್ತ್ರೀಯ ನೃತ್ಯಪ್ರದರ್ಶನಗಳಲ್ಲೂ ಸಹಜವೆಂಬಂತೆ ಜಾನಪದ ನೃತ್ಯಗಳ ಬಳಕೆ ಸಾಮಾನ್ಯವಾಗಿದೆ. ಆ ಮಟ್ಟಿಗೆ ನಮ್ಮ ಶಾಸ್ತ್ರೀಯ ಕಲಾವಂತರೂ(?) ಒಂದು ಕಾಲಕ್ಕೆ ಜಾನಪದವೆಂದರೆ ಮೂಗುಮುರಿಯುತ್ತಿದ್ದವರು ಈಗ ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ, ಕೋಲಾಟ, ಕರಗ, ಬೆಸ್ತರ ನೃತ್ಯ, ಸುಗ್ಗಿ ನೃತ್ಯ, ಹಳ್ಳಿಯ ಕುಣಿತಗಳನ್ನು ಆರಾಮವಾಗಿಯೇ ಬಳಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಮಹಾರಾಷ್ಟ್ರ, ಅಸ್ಸಾಂ, ಬಿಹಾರ, ಪಂಜಾಬ್ ಮುಂತಾದ ಸಾಂಪ್ರದಾಯಿಕ ಮತ್ತು ಬುಡಕಟ್ಟು ಜನಾಂಗದ ನೃತ್ಯಗಳು ‘ಕಾಪಿರೈಟ್’ನ್ನು ಯಾವಾಗಲೋ ಬಿಟ್ಟುಕೊಟ್ಟಂತಾಗಿದೆ. ಜೊತೆಗೆ ಅದಕ್ಕೊಂದು ‘ಪ್ರೊಪೆಷನಲ್ ಟಚ್’ ಎಂಬ ಸೀಮೋಲ್ಲಂಘನ ಮಾಡುವ ಗರ್ವ !
ಜಾನಪದ ನೃತ್ಯಗಳಿಗೆ ಇದು ಒಳ್ಳೆಯ ವೇದಿಕೆಯೂ ಹೌದು ಎಂದುಕೊಂಡಿರೋ ಒಮ್ಮೆ ಇಣುಕಿ ; ಮನದಾಳದ ಹುಳುಕುಗಳು ಒಂದೊಂದಾಗಿ ಹೊರಬೀಳುತ್ತವೆ- ‘ಶ್ರೀಸಾಮಾನ್ಯನಿಗೆ ಚೇಂಜ್ ಸಿಗುತ್ತದೆ ! ಭರತನಾಟ್ಯದಲ್ಲಿ ಬೋರು ಹೊಡೆಯುವಾಗ(?) ಫ್ರೆಶ್ ಆಗುತ್ತದೆ. ಒಮ್ಮೊಮ್ಮೆ ಮಕ್ಕಳನ್ನು ವೇದಿಕೆಗೆ ಹತ್ತಿಸಲು ಇದೊಂದು ಕಾರಣ’. ಕಾರಣ ಇಷ್ಟೇ ! ಪ್ರದರ್ಶನದ ನಡುವೆ ಪ್ರೇಕ್ಷಕರು ಕಣ್ಬಿಟ್ಟು ನೋಡುವ ಸಲುವಾಗಿಯೋ, ‘ಢಿಪರೆಂಟ್’ ಅನ್ನಿಸಿಕೊಳ್ಳಲಿಕ್ಕೋ, ಆಕರ್ಷಣೆಗೋ, ವಿನೋದಕ್ಕೋ, ಸಮಯ ಹರಣಕ್ಕೋ ! ; ಅಚ್ಚರಿಯಾದರೂ ಸತ್ಯ.
ತಮ್ಮ ಕೊರತೆಗಳನ್ನು ಮುಚ್ಚಿ ಹಾಕಲು ಬೇರೆಯವರ ಎರವಲು ಪಡೆಯುತ್ತಿದ್ದೇವೆ. ಕುಣಿಯಲು ಬಾರದ ನರ್ತಕಿ ನೆಲ ಡೊಂಕು ಎಂದಿದ್ದು ಮಾತ್ರವಲ್ಲ, ತನ್ನಷ್ಟೇ ಸಂಪದ್ಭರಿತ ಮತ್ತೊಂದು ಕಲೆಯನ್ನು ಅನಾಮತ್ತಾಗಿ ಎತ್ತಿ ತನ್ನ ಮಾತೃ ನೆಲೆಗೂ, ಅನುಕರಿಸಿದ ಕಲೆಗೂ ಯೋಗ್ಯತೆಯೇ ಇಲ್ಲವೆಂದು ಮಾಡುವ ಕುತ್ಸಿತ ಹುನ್ನಾರ !
ಹಾಗಾದರೆ ಇದರಿಂದ ಹಾನಿ ಯಾರಿಗೆ? ನೃತ್ಯಪ್ರದರ್ಶನದಲ್ಲಿ ನಷ್ಟ ಯಾರಿಗೆ? ಮೌಲ್ಯ ಕಡಿಮೆಯಾಗುವುದು ಭರತನಾಟ್ಯದ್ದೋ, ಜಾನಪದ ನೃತ್ಯಗಳದ್ದೋ? ಆಲೋಚಿಸಿ.
ನಂಬುತ್ತೀರಾ! ವಿಷಾದವೋ, ಸಂಭ್ರಮವೋ ಒಟ್ಟಿನಲ್ಲಿ ಇಂತಹ ಪ್ರದರ್ಶನಗಳು ಹೆಚ್ಚಾಗಿ ಜರುಗುತ್ತಿರುವುದು ಕರ್ನಾಟಕದ ಕಲಾವಿದರಲ್ಲೇ !
ಸಾಕಷ್ಟು ಬಾರಿ ನೃತ್ಯ ಶಾಲೆಗಳು, ಅಕಾಡೆಮಿಗಳು, ಕೇಂದ್ರಗಳು ಅಲ್ಲಲ್ಲಿ ಜಾನಪದ ನೃತ್ಯದ ಕುರಿತ ಕಾರ್ಯಾಗಾರಗಳ ಮೂಲಕ ಕಲಾವಂತರಿಗೆ ಶಿಕ್ಷಣ ಕೊಡುವುದನ್ನು ನೋಡುತ್ತೇವೆ. ಆಯಾಯ ವಿಭಾಗದಲ್ಲಿನ ಪರಿಣತರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳುವುದೂ ಇದೆ. ಅಲ್ಲಿಯವರೆವಿಗೂ ಎಲ್ಲವೂ ಚೆಂದ. ಆದರೆ ಅದರಾಚೆಗೆ ತಮಗನಿಸಿದಂತೆ ಕಲೆಯ ಹರಹುಗಳಲ್ಲಿ ಕೈಯ್ಯಾಡಿಸಿ ‘ಮತ್ತಷ್ಟು ಆಕರ್ಷಕ ಮಾಡುತ್ತೇನೆ’ ಎಂಬ ಕೈಚಳಕವಿದೆಯಲ್ಲಾ, ಅದೇ ರೇಜಿಗೆ ಹುಟ್ಟಿಸುವುದು.
ಇದ್ದದ್ದನ್ನು ಇದ್ದ ಹಾಗೇ ಒಪ್ಪಿಕೊಳ್ಳುವುದರಲ್ಲೇನಿದೆ ತಪ್ಪು? ಅದೇ ಅಲ್ಲವೇ ಕಲೆಯೆಡೆಗಿನ ಪ್ರೀತಿ ಎಂದರೆ ? ತಮಗನಿಸಿದಂತೆ ಬದಲಾವಣೆಗಳನ್ನು ಮಾಡಿಕೊಂಡರೆ ಅಧಿಕಾರವೆನಿಸಿಕೊಂಡೀತೆ ಹೊರತು ಪ್ರೀತಿಯೆಂದಾದೀತೇ? ಶಾಸ್ತ್ರೀಯ ನೃತ್ಯ ಕಲಾವಿದರು ಜಾನಪದ ನೃತ್ಯಗಳಿಗೂ ಶಾಸ್ತ್ರೀಯ ನೃತ್ಯದ ಹೆಜ್ಜೆಗಳು, ಬಾಗುವಿಕೆ-ಬಳುವಿಕೆಗಳನ್ನು ಹೇರಿ ವೈವಿಧ್ಯಮಯತೆ ಪ್ರದರ್ಶಿಸಲು ಹೊರಟರೆ ಜಾನಪದದ ಸಹಜತೆಯನ್ನೇ, ಸಾಂಪ್ರದಾಯಿಕತೆಯನ್ನೇ ಧಿಕ್ಕರಿಸುವುದು ಎಂದರ್ಥವಲ್ಲವೇ? ಎಲ್ಲಿದೆ ಸಹಜತೆಗೆ ಗೌರವ?
ಇತರ ಸಂಸ್ಕೃತಿಯೆಡೆಗೆ ಸೌಹಾರ್ದಯುತ ದೃಷ್ಟಿ, ಅದರ ಅಭ್ಯಾಸ, ಪ್ರದರ್ಶನ ಒಳ್ಳೆಯದೇ. ಆದರೆ ಯಾವ ಮಟ್ಟದಲ್ಲಿ ಮಾಡುತ್ತಿದ್ದೇವೆ, ಕಲೆಯೊಂದಕ್ಕೆ ನ್ಯಾಯ ಒದಗಿಸಲು ಶಕ್ತರೇ ಎಂದು ಯೋಚನೆ ಮಾಡಲು ಎಷ್ಟು ಮಂದಿ ಸಿದ್ಧರಿದ್ದಾರೆ? ಕಲೆಯೊಂದರ ಆಳ-ಅಗಲಗಳನ್ನು ಸ್ವಲ್ಪವಾದರೂ ಅರಿಯದೇ ಮೇಲ್ಕಂಡ ಅಂಶಗಳನ್ನಷ್ಟೇ ಬಾಚಿಕೊಂಡು ಕೊಲ್ಲುವುದು ಯಾವ ಬಗೆಯ ಪುರುಷಾರ್ಥಕ್ಕೆ?