ಅಂಕಣಗಳು

Subscribe


 

‘ಧಾತು’ ನವರಾತ್ರಿ ಮಹೋತ್ಸವ

Posted On: Saturday, October 15th, 2011
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

(ಸೆಪ್ಟೆಂಬರ್ ೨೮- ಅಕ್ಟೋಬರ್ ೬) ಸ್ಥಳ : ಬನಶಂಕರಿ, ೨ನೇ ಹಂತ.

ಕಲಾವಿದರು ನೃತ್ಯದೊಳಗೊಂದಾಗಿ ಆನಂದದಿಂದ, ರಸಾನುಭವದಿಂದ ಮಿಂದೆದ್ದರೆ ಮಾತ್ರ ಪ್ರೇಕ್ಷಕರಿಗೆ ಆನಂದವನ್ನು ನೀಡಬಲ್ಲರು, ರಸಾನುಭೂತಿಯಲ್ಲಿ ಕರಗಿಸಬಲ್ಲರು ಎಂಬುದಕ್ಕೆ ಸಾಕ್ಷಿ ಹೇಳಿದ್ದು ಸೆಪ್ಟೆಂಬರ್ ೨೮ರಂದು ಅನುಪಮಾ ಹೊಸಕೆರೆ ನೇತೃತ್ವದ ಧಾತು ಉತ್ಸವದ ಉದ್ಘಾಟನಾರೂಪವಾಗಿ ಮೂಡಿಬಂದ ನಿರುಪಮಾ(ರಾಜೇಂದ್ರ) ಅವರ ಭರತನಾಟ್ಯ(ನೃತ್ಯ). ಒಂದರ್ಥದಲ್ಲಿ ನಿರುಪಮಾರ ಭರತನೃತ್ಯ ಗುರುಗಳ ಸಂಪೂರ್ಣ ಆವಾಹನೆ ಅವರಲ್ಲಾಗಿತ್ತು ಎಂದರೂ ಅತಿಶಯವಲ್ಲ.

ನಿರುಪಮಾ -ಭರತನೃತ್ಯ


ವಲಚಿ ರಾಗಕ್ಕೆ ಹೆಣೆದ ಪುಷ್ಪಾಂಜಲಿಗೆ ತಲಪುಷ್ಪಪುಟ ಕರಣದಿಂದಲೇ ಅಡಿಯಿಟ್ಟ ನಿರುಪಮಾ ದಿಕ್ ಸ್ವಸ್ತಿಕ, ಕಟಿಚ್ಛಿನ್ನ, ಕರಿಹಸ್ತ, ಊರೂದ್ವೃತ್ತ, ಬದ್ಧ ಮುಂತಾದ ಕರಣ, ಚಾರಿಗಳನ್ನು ನೃತ್ತಹಸ್ತ- ಅಡವಿನ ಸಮಯೋಚಿತ ಬಳಕೆಯೊಂದಿಗೆ ವಿನ್ಯಾಸಗೊಳಿಸಿದರು. ಈ ಹಂತಕ್ದಲ್ಲೇ ಪ್ರೇಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡ ನಿರುಪಮಾರಲ್ಲಿ ನೃತ್ಯಕ್ಕೆ ಬೇಕಾದ ನಯ, ಒನಪಿನ ಹರಿವು, ರೇಖಾಸೌಂದರ್ಯ ಸ್ಪಷ್ಟವಾಗಿ ಪ್ರಕಾಶಿತವಾಯಿತು. ನಂತರ ಶಂಕರ ಭಗವತ್ಪಾದರ ಮುದಾಕರಾತ್ತಮೋದಕಂ ಸ್ತೋತ್ರಕ್ಕೆ ಕನ್ನಡ ಸಾಹಿತ್ಯವನ್ನು ಹದವಾಗಿ ಬೆರೆಸಿದ ವಿನಾಯಕನ ರೂಪ ವರ್ಣನೆಯು ಶಾಸ್ತ್ರೀಯ ನೃತ್ಯವೊಂದು ಹೇಗೆ ಸಮಾಜಮುಖಿಯಾಗಬಲ್ಲುದು ಎಂಬುದಕ್ಕೆ ಸ್ಪಷ್ಟ ಉದಾಹರಣೆಯನ್ನಿತ್ತಿತು. ಹಾಸ್ಯದ ಅಧಿದೇವತೆಯಾದ ಗಣಪನ ಗುಣವಿಶೇಷಗಳು ಸಹಜವಾಗಿ ಒಡಮೂಡುವುದರೊಂದಿಗೆ ಪಟ್ಟಣ, ನಗರ ಸಂಸ್ಕೃತಿಗಳಲ್ಲಿ ಗಣೇಶನನ್ನು ಕಾಣುವ ಬಗೆ, ಸಾರ್ವಜನಿಕ ಗಣೇಶೋತ್ಸವದ ವಿವಿಧ ಮಾದರಿಗಳು, ಆಚರಣೆಗಳು, ಅಪಾರ್ಟ್‌ಮೆಂಟ್ ಸಂಸ್ಕೃತಿ, ಚಂದಾಸಂಗ್ರಹ, ಸಿಡಿಮದ್ದುಗಳ ಭರಾಟೆ, ಮೆರವಣಿಗೆ, ಗಣಪನಿಗೆ ಗಣಪನೇ ಅಣಕವಾಗುವ ಪಡಿಪಾಟಲು..ಹೀಗೆ ಸಮಾಜದ ಸಂಸ್ಕೃತಿಯು ವ್ಯಂಗ್ಯ, ವಿಡಂಬನೆಯ ಅಭಿನಯದಲ್ಲಿ ವಿಕಸಿತಗೊಂಡವು. ಈ ಹಿನ್ನಲೆಯಲ್ಲಿ ಲೋಕಧರ್ಮಿಯ ಸೂಕ್ತ ಅಳವಡಿಕೆ ಹೇಗೆ ರಸಸೃಷ್ಟಿಗೆ, ಸಂವಹನಕ್ಕೆ, ಪ್ರೇಕ್ಷಕರೂ ನರ್ತನಲೋಕದೊಳಗೆ ಒಂದಾಗಿ ಆನಂದಿಸುವಲ್ಲಿ ನೆರವಾಗುತ್ತದೆ ಎಂಬುದನ್ನು ನಿರುಪಮಾ ಸ್ಪಷ್ಟವಾಗಿ ತೋರಿಸಿಕೊಟ್ಟರು.

’ಹಿಡಕೋ ಬಿಡಬ್ಯಾಡ’ ಕನ್ನಡ ವರ್ಣದಲ್ಲಿ ನಿರುಪಮಾ

ಹಿಡಕೋ ಬಿಡಬ್ಯಾಡ– ಪುರಂದರದಾಸ ವಿರಚಿತ, ಡಾ. ಪದ್ಮಾ ಸುಬ್ರಹ್ಮಣ್ಯಂ ಸಂಯೋಜನೆಯ ಕಲ್ಯಾಣಿ ರಾಗದ ವರ್ಣಕ್ಕೆ ತಮ್ಮ ಕಲ್ಪನೆ, ಪ್ರತಿಭೆಯನ್ನೂ ಬೆರೆಸಿ ಸುಮಾರು ಒಂದು ಗಂಟೆಗಳ ಕಾಲ ಆಯಾಸವಿಲ್ಲದಂತೆ ನರ್ತಿಸಿದ್ದು ನಿರುಪಮಾರ ನೃತ್ಯಪ್ರಸ್ತುತಿಯ ಕೇಂದ್ರ ಭಾಗ. ಕೃಷ್ಣನಿಂದ ಗಂಧರ್ವರ ಶಾಪಮೋಕ್ಷ, ಕುಚೇಲ ಅನುಗ್ರಹ, ನರಕಾಸುರ ವಧೆ, ಅಹಲ್ಯಾ ಶಾಪಮುಕ್ತಿ, ಕಾಳಿಂಗಮರ್ದನ, ಯಮುನಾ ತೀರದ ಕೃಷ್ಣ, ಪಂಡರಾಪುರದ ಕೃಷ್ಣ, ದಾಸರ ಭಕ್ತಿಯೊಳಗಿನ ಕೃಷ್ಣ ಹೀಗೆ ಹತ್ತು ಹಲವು ವಿಷಯಗಳಲ್ಲಿ ಕೃಷ್ಣನ ಲೀಲೆಯನ್ನು ಸಾಕ್ಷೀಕರಿಸಿದರು. ಅಭಿನಯವನ್ನು ವರ್ಣದ ಜತಿ, ನಡೆ, ಅರುದಿಯ ವಿಸ್ತಾರದೊಳಗೂ ಒಂದಾಗಿಸಿ ಸ್ಥಾಯಿಭಾವವನ್ನು ಕಾಯ್ದಿಟ್ಟುಕೊಳ್ಳುವಲ್ಲಿ ನಿರುಪಮಾ ಯಶಸ್ವಿಯಾದರು. ಆಯಾಯ ಸಂದರ್ಭಕ್ಕೆ ತಕ್ಕ ವ್ಯಭಿಚಾರಿ ಭಾವಗಳನ್ನು ಅಭಿನಯಿಸುತ್ತಾ (ಉದಾ: ಅಹಲ್ಯಾ ಶಾಪವಿಮುಕ್ತಿಯ ವೇಳೆಯಲ್ಲಿನ ಆಕೆಯ ರೋಮಾಂಚನ, ಕುಚೇಲನ ಆಶ್ಚರ್ಯ, ತಾಯಿ ಯಶೋದೆ ಬಿಗಿದ ಹಗ್ಗದಿಂದ ಬಿಡಿಸಿಕೊಳ್ಳುವ ಕೃಷ್ಣನ ತುಂಟಾಟ, ಕಾಳಿಂಗನ ಹೆಡೆಯಲ್ಲಿ ಕೃಷ್ಣನು ನರ್ತಿಸುವಾಗ ಹಾವಿನ ಚರ್ಮದ ನುಣುಪಿಗೆ ಕಾಲನ್ನು ಸರಿಯಾಗಿಟ್ಟುಕೊಳ್ಳುವ ಪ್ರಯತ್ನ) ಸರ್ಪಿತ, ಭುಜಂಗಾತ್ರಾಸಿತ, ರೇಚಿತ, ವರ್ತಿತ, ಅಪವಿದ್ಧ, ನಿಕುಟ್ಟಕ, ಸ್ವಸ್ತಿಕರೇಚಿತ, ಅರ್ಧರೇಚಿತ, ಅರ್ಧಸ್ವಸ್ತಿಕ, ಮತ್ತಲ್ಲಿ, ಛಿನ್ನ, ಗಜಕ್ರೀಡಿತ ಇತ್ಯಾದಿ ಕರಣಗಳನ್ನು, ಚಾರಿಗಳನ್ನು ಅಳವಡಿಸುತ್ತಾ ವಾಕ್ಯಾಥಾಭಿನಯದ ಸೊಗಸನ್ನು, ನೃತ್ತ ಮತ್ತು ಅಭಿನಯದ ಅವಿನಾಭಾವ ಬೆಸುಗೆಯನ್ನೂ ತೋರಿಸಿ ಪ್ರೇಕ್ಷಕರನ್ನೂ ನರ್ತನದೊಳಗೆ ಒಂದಾಗಿಸಿದರು. ಚಿಟ್ಟೆಸ್ವರದ ಲಾಲಿತ್ಯ ಸಂಗೀತ ಮತ್ತು ನರ್ತನದಲ್ಲೂ ತೋರಿಬಂದು ; ವರ್ಣದ ಅಭಿನಯ ಭಾಗ ನಿರ್ಗಮಿತ ಹೆಜ್ಜೆಗಳಲ್ಲಿಯೂ ಸ್ಥಾಯಿಭಾವವನ್ನು ಕಾಯ್ದಿಟ್ಟುಕೊಳ್ಳುವ ನಿಲುವು ನಿಜಕ್ಕೂ ಶ್ಲಾಘನೀಯ.

”ನಗುಮೊಮು’ ಕೃತಿಯಲ್ಲಿ ರಾಮಧ್ಯಾನದಲ್ಲಿ ತನ್ಮಯಳಾದ ಸೀತೆ..

ನಂತರ ತ್ಯಾಗರಾಜರ ನಗುಮೊಮು ಕೃತಿಯನ್ನು ಸೀತೆಯು ಅಶೋಕವನದಲ್ಲಿ ರಾಮನಿಗಾಗಿ ಕಾಯುವ ಕಲ್ಪನೆಯನ್ನು ಬೆರೆಸಿ ಆಶುನರ್ತನವೆಂಬಂತೆಯೇ ನಿರೂಪಿಸಿದ್ದು, ರಾಮಾಯಣದ ಪ್ರತೀ ಘಟನೆಗಳನ್ನು ನೆನಪಿಸಿಕೊಳ್ಳುವ ಸೀತೆ ರಾಮನ ನಗುಮೊಗ ಕಾಣದೆ ತಾನು ಸಾಯಲು ಸಿದ್ಧಳಿಲ್ಲವೆಂಬಂತೆ ಆತನನ್ನೆ ನೆನಪಿಸಿಕೊಳ್ಳುತ್ತಾ ತನ್ಮಯಳಾಗುವ ಅಭಿವ್ಯಕ್ತಿ ಮನೋಹರವಾಗಿ ಮೂಡಿಬಂತು. ಮೋಹನಕಲ್ಯಾಣಿ ರಾಗಕ್ಕೆ ಹೆಣೆದ ಲಾಲ್ಗುಡಿ ಜಯರಾಮನ್ ಅವರ ತಿಲ್ಲಾನಕ್ಕೆ ತಲಸಂಘಟ್ಟಿತ ಕರಣದ ಮೂಲಕ ತ್ರಿಕಾಲಕ್ಕೆ ನರ್ತಿಸಿದ ನಿರುಪಮಾ ಅರುದಿಯಲ್ಲಿ ಚಾರಿ-ಅಂಗಭೇಧಗಳನ್ನು ಲಯಾನುವರ್ತಿಯಾಗಿ ಹೊಂದಿಸಿದರು. ಉತ್ತರಾರ್ಧದ ಸಾಹಿತ್ಯಕ್ಕೆ ಸುಬ್ರಹ್ಮಣ್ಯನ ಕಾವಡಿಯ ಕುರಿತ ಭಾವವು ಏಡಕಾಕ್ರೀಡಿತ ಮುಂತಾದ ದೇಸೀನೃತ್ಯ ನಡೆಗೆ ಹೊಂದುವ ಕೆಲವು ಕರಣಗಳ ಅಭಿನಯದಿಂದ ಮನಗೆದ್ದಿತು.

ಮುದ್ರೆಯಲ್ಲಿ ರಾಮನನ್ನು ಕಾಣುವ ಸೀತೆ

ಒಟ್ಟಿನಲ್ಲಿ ಸಂಗೀತದ ನಡೆಗೆ ತಕ್ಕ ಲಲಿತ ಮತ್ತು ಉದ್ಧತ ಅಭಿನಯ, ರಾಜೇಂದ್ರ ಅವರ ಸೂಕ್ತವಾದ ಬೆಳಕಿನ ಸಂಯೋಜನೆ, ಬಾಲಸುಬ್ರಹ್ಮಣ್ಯ ಶರ್ಮರ ಚೇತೋಹಾರಿ ಗಾಯನ, ಗುರುಮೂರ್ತಿ(ಮೃದಂಗ), ಮೀರಾ (ಸಿತಾರ್), ವೇಣುಗೋಪಾಲ್ (ಕೊಳಲು) ಅವರ ಅಭಿವ್ಯಕ್ತಿ ಅತ್ಯಪೂರ್ವ ಕಾರ್ಯಕ್ರಮವನ್ನಾಗಿಸುವಲ್ಲಿ ಒಟ್ಟಾಗಿ ದುಡಿದಿದೆ. ಒಂದೆಡೆ ಕಥಕ್ ನೃತ್ಯದಲ್ಲಿ ಸಾಕಷ್ಟು ಹೆಸರುವಾಸಿಯಾದ ನಿರುಪಮಾ ಭರತನಾಟ್ಯವನ್ನು ಪ್ರೇಕ್ಷಕರು ಕಣ್ಣು ಕೀಲಿಸದಂತೆ ಅಮೋಘವಾಗಿ ನರ್ತಿಸಬಲ್ಲರು, ಕಾರ್ಯಕ್ರಮ ಮುಗಿದ ನಂತರವೂ ಅದರ ಪರಿಮಳವನ್ನು ಉಳಿಸಬಲ್ಲರು ಎಂಬುದು ನಿರೂಪಿತವಾದರೆ; ಇನ್ನೊಂದೆಡೆ ಶಾಸ್ತ್ರೀಯತೆಯ ಹೆಸರಿನಲ್ಲಿ ಇಂದು ಮರೆಯಾಗುತ್ತಿರುವ ರಸಾನಂದವು ಅವರಿಂದ ಮರುಸೃಷ್ಟಿ ಪಡೆದೀತು ಎಂಬ ಆಶಯ ನಮ್ಮದು.


ಸೆಪ್ಟೆಂಬರ್ ೨೯ರಂದು ಹರಿಣಿ ಸಂತಾನಂ ಮತ್ತು ಬಳಗ ಪ್ರಸ್ತುತಪಡಿಸಿದ ಭರತನೃತ್ಯ ಕಾರ್ಯಕ್ರಮ ದಿವಂಗತ ಸುಂದರೀ ಸಂತಾನಂ ಅವರ ಶ್ರಮವನ್ನು ನೆನಪಿಗೆ ತಂದಿತು. ಕರಣಾಂಗಹಾರ-ಚಾರಿ-ನೃತ್ತಹಸ್ತಾದಿಗಳನ್ನು ಸೂಕ್ತವಾಗಿ ಹೊಂದಿಸಿಕೊಂಡು ಪುಷ್ಪಾಂಜಲಿ, ಜತಿಸ್ವರ, ನಟರಾಜನ ವರ್ಣನೆಯ ಆನಂದಮೇಕೃತಿ ಕಲಾವಿದರಿಂದ ಯಥೋಚಿತವಾಗಿ ಪ್ರದರ್ಶಿತಗೊಂಡಿತು. ನಂತರ ದ್ವಾರ್ಕಿ ಕೃಷ್ಣಸ್ವಾಮಿ ರಚನೆಯ ದೇಶಭಕ್ತಿಗೀತೆಯೊಂದಕ್ಕೆ ಉಪಗ್ರಹ ಉಡ್ಡಯನದಂತಹ ಸಾಮಾಜಿಕವಸ್ತುವಿಗೆ ಹೆಣೆದ ನೃತ್ಯ ಪ್ರಸ್ತುತಗೊಂಡಿತು.

’ಚಂದಭಾಮ’- ಹರಿಣಿ ಮತ್ತು ನಯನಾ

ನಂತರ ಯಕ್ಷನೃತ್ಯ ಚಂದಭಾಮಾಕ್ಕೆ ಹರಿಣಿ ಮತ್ತು ನಯನ ಸೊಗಸಾದ ಅಭಿನಯ ತೋರಿದರು. ಕಲಾವಿದೆ ನಯನಾ ತಮ್ಮ ಲಾಲಿತ್ಯ, ಚೈತನ್ಯ, ಸಹಜ ಅಭಿನಯ ಪ್ರತಿಭೆಯಿಂದ ಹೆಚ್ಚು ಬೆಳಗಿದರು. ದೀಕ್ಷಾ, ನಮಿತ ಅವರು ನರ್ತಿಸಿದ ಮೀನಾಕ್ಷಿ ಸುಬ್ರಹ್ಮಣ್ಯಂ ರಚನೆಯ ಜಯ ಶ್ರೀ ವೈಕುಂಠ ಮುಕುಂದ ಭಜನ್‌ನಲ್ಲಿ ಕಾರ್ಯಕ್ರಮ ಅಂತ್ಯ ಕಂಡಿತು. ಭರತನಾಟ್ಯದ ರಸದೃಷ್ಟಿ ಪುನರುಜ್ಜೀವನಗೋಳ್ಳುವಲ್ಲಿ ಈ ಕಲಾವಿದರಿಗೆ ಗುರುತರವಾದ ಹೊಣೆಗಾರಿಕೆಯಿದೆ. ಕಲಾವಿದರಲ್ಲಿ ಒಂದಷ್ಟು ನೃತ್ಯೋತ್ಸಾಹ, ಕಲಾಪೋಷಕರ ಒತ್ತಾಸೆ ಅಗತ್ಯ ಬೇಕಿದೆ.


ತದನಂತರದ ನೃತ್ಯಪ್ರಸ್ತುತಿ ಎಸ್.ಎಸ್.ಮೀರಾ ಅವರಿಂದ ಜರುಗಿತು. ಹಿರಿಯ ಗುರು ದಿವಂಗತ ಕೇಶವಮೂರ್ತಿ ಅವರ ಪುತ್ರ ಬಿ.ಕೆ.ಶ್ಯಾಮಪ್ರಕಾಶ್ ಅವರ ಶಿಷ್ಯೆ. ಕಲಾವಿದೆಯಾಗಿ ಬೆಳಗುವ ಸಹಜ ಅನುಭೂತಿ, sಸಾಹಿತ್ಯಾರ್ಥ ಅರಿಯುವ ಭಾವಪ್ರಕಾಶ, ದೇಹ ಕಸುವು, ಹೆಜ್ಜೆಯಲ್ಲಿ ಗಟ್ಟಿತನ ಮೀರಾಳಿಗೆ ಇದೆ. ಆದರೆ ರಸಸಿದ್ಧಿಗೆ ಪರಿಶ್ರಮ ಬೇಕಿದೆ. ಮೀರಾ ಆರಂಭಿಕವಾಗಿ ನರ್ತಿಸಿದ ತೋಡಯಂನಲ್ಲಿ (ರೆಕಾರ್ಡೆಡ್ ಸಂಗೀತ) ನಟುವಾಂಗಕ್ಕೆ ಅನುಸರಣಾರ್ಹವಾದ ಹೆಜ್ಜೆಗಳ ಸಂಯೋಜನೆಯ ಕೊರತೆ ಕಂಡುಬಂತು. ಬಿಲಹರಿ ರಾಗದ ಸ್ವರಜತಿ ರಾರಾ ವೇಣುಗೋಪಾಬಾಲಾದಲ್ಲಿ ಸ್ವರ ಮತ್ತು ಸಾಹಿತ್ಯದ ನಡುವೆ ತಂತು ಕಂಡುಬರಲಿಲ್ಲವಾದ್ದರಿಂದ ನೃತ್ತ ಮತ್ತು ಅಭಿನಯ ತದ್ವಿರುದ್ಧವಾಗಿ ಹರಿದು ಸ್ಥಾಯಿ ಭಾವ ಮರೆಯಾದಂತೆ ಭಾಸವಾಯಿತು.

ಮೀರಾ ಅವರಿಂದ ’ರಾರಾ ವೇಣು’ನರ್ತನ

ನಂತರ ಆನಂದ ತಾಂಡವ, ರಾಗಮಾಲಿಕೆಯಲ್ಲಿ ಹೆಣೆದ ಶ್ರೀರಾಮನ ಕುರಿತ ಭಾವಗಳ ನವರಸ ರಾಮಾಯಣ ಮತ್ತು ದಶಾವತಾರ ಸಹಿತ ಮಂಗಳಂನ್ನು ನರ್ತಿಸಲಾಯಿತು. ಆದರೆ ಭಯಕಾರಕ ಶ್ರೀರಾಮ ಎಂಬ ಸಂಗತಿಯಲ್ಲಿ ರಾಮನು ಭಯಪೀಡಿತನಾದ ಎಂಬ ಅರ್ಥ ಹೊರಹೊಮ್ಮಿದ್ದಲ್ಲದೆ; ಭೀಭತ್ಸ ರಸಕ್ಕೆ ರಾಮನ ಗುಣವನ್ನು ಆರೋಪಿಸಿದ ಪ್ರಸಂಗ ಸೀತಾ ಅಗ್ನಿಪ್ರವೇಶ ಏಕೋ ಇರಿಸುಮುರಿಸಿಗೆ ಕಾರಣವಾಯಿತು. ಪದದ ಅರ್ಥಕ್ಕಷ್ಟೇ ನೀಡುವ ಅಭಿನಯದಲ್ಲುಳಿಯದೆ ವಾಕ್ಯಾರ್ಥಾಭಿನಯದ ಮಟ್ಟಕ್ಕೆ ಜಿಗಿದರೆ ಕಲಾರಂಗ ಒಳ್ಳೆಯ ಕಲಾವಿದೆಯನ್ನು ಪಡೆಯುತ್ತದೆ.

Leave a Reply

*

code