ಅಂಕಣಗಳು

Subscribe


 

ಭಾಮಿನಿ- ಅಷ್ಟ ನಾಯಕಿಯರ ಚಿತ್ತವೃತ್ತಿಗಳ ಸಮರ್ಥ ಅಭಿವ್ಯಕ್ತಿ

Posted On: Saturday, August 15th, 2009
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಯಾವುದೇ ಬಗೆಯ ನೃತ್ಯದಲ್ಲಿ ಭಾವಪ್ರಕಾಶನಕ್ಕೆ ಸಹಕಾರಿಯಾಗಬಲ್ಲ ಅವಸ್ಥೆಗಳೇ ನಾಯಿಕೆ ನಾಯಕ ಭಾವಗಳು. ಇವೊಂದು ರೀತಿಯಲ್ಲಿ ನಾಟ್ಯಕ್ರಮವನ್ನೂ ಒಳಗೊಂಡಂತೆ ಸಾಮಾನ್ಯ ಜನಜೀವನದಲ್ಲೂ ಕಂಡು ಬರುವ ಭಾವಾವಸ್ಥೆಗಳು. ಇವುಗಳ ಆಧಾರದಲ್ಲಿ ಮತ್ತಷ್ಟು ಅವಸ್ಥೆಗಳು ಅಂದರೆ ೩೮೪ಕ್ಕಿಂತಲೂ ಹೆಚ್ಚು ವಿಭಾಗಗಳಿವೆ. ಮಾತ್ರವಲ್ಲ ಪ್ರತೀ ಅವಸ್ಥೆಗಳಿಗೂ ವಿಭಿನ್ನ ರೀತಿಯ ಭಾವೋತ್ಪತ್ತಿಗೆ ಕಾರಣವಾಗುವ ವಿಭಾವಗಳೂ, ಅದರಿಂದುಟಾಗುವ ಪರಿಣಾಮಗಳೆಂಬ ಅನುಭಾವಗಳೂ ಇವೆ.

ಇಂತಹ ನಾಯಿಕೆಯರಲ್ಲಿ ಎಲ್ಲ ಗ್ರಂಥಗಳಿಂದಲೂ, ಪಂಡಿತರಿಂದಲೂ ಅಂಗೀಕರಿಸಲ್ಪಟ್ಟಂತಹ ನಾಯಿಕೆಯರು ಒಟ್ಟು ಎಂಟು :

೧. ಪ್ರೋಷಿತ ಪತಿಕಾ : ನಾಯಕನು ದೂರ ದೇಶಕ್ಕೆ ಹೋಗಿರುವಾಗ ಖೇದ ಪಡುತ್ತಾ ಅನ್ಯಮನಸ್ಕಳಾಗುವವಳು.

೨. ವಾಸಕಸಜ್ಜಿಕಾ : ಪ್ರಿಯಕರನ ಬರುವಿಕೆಗೆ ಆಲಂಕೃತಗೊಂಡು ಸಿದ್ಧವಾಗಿ ಎದುರು ನೋಡುತ್ತಿರುವಾಕೆ.

೩. ಅಭಿಸಾರಿಕಾ : ಸರ್ವಾಂಗಭೂಷಿತೆಯಾಗಿ ಲಜ್ಜೆಯಿಂದ ನಿರ್ದಿಷ್ಟ ಪ್ರದೇಶಕ್ಕೆ ತಾನಾಗಿಯೇ ನಾಯಕನನ್ನು ಹುಡುಕಿಕೊಂಡು ಹೋಗುವವಳು.

೪. ವಿರಹೋತ್ಕಂಠಿತಾ : ತಡಮಾಡುವಂತಹ ತನ್ನ ನಾಯಕನಿಗಾಗಿ ವಿರಹ ವೇದನೆಯಲ್ಲಿ ಬೇಯುವವಳು.

೫. ವಿಪ್ರಲಬ್ಧಾ : ವಾಗ್ದಾನ ನೀಡಿದಂತೆ ಬಾರದ ನಾಯಕನಿಗಾಗಿ ಕ್ರೋಧದಿಂದ ಕೂಡಿ ಮೋಸ ಹೋದೆನೆಂದು ಪರಿತಪಿಸುವವಳು.

೬. ಖಂಡಿತಾ : ನಾಯಕನ ಕುರಿತಾದ ಶಂಕೆಯಿಂದ ಆಘಾತಗೊಂಡು ಅವನನ್ನು ಹತ್ತಿರ ಸೇರಿಸದೆ ಖಂಡಿಸಿ, ಜಗಳವಾಡಿ ದೂರೀಕರಿಸುವವಳು.

೭. ಕಲಹಾಂತರಿತಾ : ನಾಯಕನೊಂದಿಗೆ ಜಗಳವಾಡಿ ಹೊರದೂಡಿದ ನಂತರ ಪೂರ್ಣ ಪಶ್ಚಾತ್ತಾಪದಿಂದ ಅವನಿಗಾಗಿ ಕೊರಗುವವಳು.

೮. ಸ್ವಾಧೀನಪತಿಕಾ : ನಾಯಕನಿಗೆ ಅರ್ಪಿಸಲ್ಪಟ್ಟು, ಅವನು ತನ್ನವನು ಮಾತ್ರನೆಂದು ತಿಳಿದು ಸಂತೋಷದಿಂದ ಉಲ್ಲಾಸಭರಿತಳಾದವಳು.

ಆದರೆ ಇವೆಲ್ಲವೂ ಒಂದೇ ವೇದಿಕೆಯಲ್ಲಿ, ಒಟ್ಟಿಗೆ, ಒಂದೇ ಸೂತ್ರದಲ್ಲಿ, ಸಮಯ ಪರಿಮಿತಿಯೊಳಗಡೆ, ಅದೂ ಎಲ್ಲರಿಗೂ ಅರ್ಥವಾಗುವಂತೆ ಸರಳವಾಗಿ, ಸಮಗ್ರ ಸುಂದರವಾಗಿ ಬಿಂಬಿಸಿದ ನೃತ್ಯ ಪ್ರದರ್ಶನಗಳ ಉದಾಹರಣೆ, ಇಲ್ಲವೇನೋ ಎಂಬಷ್ಟರ ಮಟ್ಟಿಗೆ ವಿರಳ. ಬದಲಾಗಿ ಒಂದೇ ಅವಸ್ಥೆಯನ್ನು ಪ್ರಧಾನವಾಗಿಟ್ಟುಕೊಂಡು ಮಾಡುವ ನೃತ್ಯಗಳೇ ಹೆಚ್ಚು. ಉದಾ : ವರ್ಣ, ಪದಂ, ಜಾವಳಿಗಳಲ್ಲಿ.

ಆದರೆ ಇಂತಹ ಕೊರತೆಯನ್ನು ಹೋಗಲಾಡಿಸಿದ್ದು, ಒಂದೇ ವೇದಿಕೆಯಲ್ಲಿ ಇವೆಲ್ಲವಕ್ಕೂ ಸಾರ್ಥಕತೆ ಕೊಡುವ ಕೆಲಸವಾದದ್ದು ಏಕವ್ಯಕ್ತಿ ಯಕ್ಷಗಾನದಲ್ಲಿ. ಅದೇ ‘ಭಾಮಿನಿ’. ಭಾಮಿನಿ ಎಂದರೆ ನಸು ಮುನಿಸಿನ, ಅಸಹನಶೀಲ ವ್ಯಕ್ತಿತ್ವದ ಹೆಣ್ಣು ಎಂಬರ್ಥ. ಆದರೆ ಇಲ್ಲಿನ ಸ್ತ್ರೀತ್ವದಲ್ಲಿ ಗಂಡು ಹೆಣ್ಣೆಂಬ ಭ್ರಮೆಯಿಲ್ಲದ ವ್ಯಾಪಕಾವಕಾಶವಿದೆ. ಹಾಗಾಗಿಯೇ ಎಲ್ಲರೂ ಭಾಮಿನಿಗಳಾಗುವುದೇ ಇಲ್ಲಿನ ವಿಲಾಸ ವೈಶಿಷ್ಟ್ಯ. ಒಲವು ಅನುಕೂಲವಾದಾಗ ಶೃಂಗಾರ, ಹಾಸ್ಯ, ಅದ್ಭುತ. ಪ್ರತಿಕೂಲವಾದಾಗ ಕರುಣ, ವೀರ, ರೌದ್ರ, ಭಯಾನಕ, ಬೀಭತ್ಸ. ಇವೆಲ್ಲದರ ನಡುವಿನ ಶಾಂತಭಾವ; ಹೀಗೆ ಎಲ್ಲ ರಸಗಳನ್ನೂ ಬಂಧಿಸಿಡಬಲ್ಲಂತಹ ಶೃಂಗಾರಧರ್ಮೋಪನಿಷತ್ !Mantapa

ಎಂಟು ಬಗೆಯ ನಾಯಿಕೆಯರನ್ನು ಒಬ್ಬಳೇ ನವ ವಿವಾಹಿತೆ ಸಾಮಾನ್ಯ ಗ್ರಾಮೀಣ ಗೃಹಿಣಿಯ ಮೂಲಕ ಚಿತ್ರಿಸುತ್ತಾ, ಸಂಸಾರಸ್ಥರ ಸಿಹಿ-ಕಹಿಗಳನ್ನು ಹೇಳುತ್ತಾ ಹೋಗುವಂತಹ ಮನೋಸ್ಥಿತಿ ಕೇವಲ ಕಲಾವಿದ ಮತ್ತು ನಾಯಿಕೆಯ ಪರಿಧಿಯೊಳಗಷ್ಟೇ ಉಳಿಯದೇ ಪ್ರೇಕ್ಷಕರ ಚಿತ್ತವೃತ್ತಿಯನ್ನು ಮುಟ್ಟಿ, ತಟ್ಟಿ ಹೋಗುವುದು ನಿಜಕ್ಕೂ ಅಚ್ಚರಿಯ ಮತ್ತು ಸಂತೋಷದ ಸಂಗತಿ. ಹಾಗಾಗಿ ಭಾಮಿನಿ ನಮ್ಮ ಆಶೋತ್ತರಗಳ ಗಾಥೆ, ಬದುಕಿನ ಏಳುಬೀಳುಗಳ ಸಂಗೀತ, ಹಮ್ಮುಬಿಮ್ಮಿನ ಪ್ರತಿಬಿಂಬ.

ಶತಾವಧಾನಿ ಡಾ. ಆರ್. ಗಣೇಶ್ ಅವರ ನಿರ್ದೇಶನ ಮತ್ತು ಮಂಟಪ ಪ್ರಭಾಕರ ಉಪಾಧ್ಯಾಯ ಅವರ ಯಶಸ್ವೀ ನಾಟ್ಯ ನಿರೂಪಣೆ ಎಂತಹ ಅರಸಿಕರನ್ನೂ ಕಣ್ಣರಳಿಸಿ ನೋಡಿಸುವಂತದ್ದು. ಸುಮಾರು ೨ ಗಂಟೆಗಳ ಕಾಲ ಪರಿಮಿತಿಯಲ್ಲಿ; ಅದೂ, ಎಲ್ಲಿಯೂ ಅನುಚಿತವಾಗದಂತೆ ಸರಳ ಸುಂದರ ಸಾಹಿತ್ಯ, ಭಾವಾಭಿನಯ, ಕಾಲಗಳಿಗೆ, ಸನ್ನಿವೇಶಗಳಿಗೆ, ಕೈಶಿಕೀ ಲಾಸ್ಯ ತಕ್ಕಂತೆ ೨೪ ರಾಗಗಳ ಬಳಕೆ, ಭಾವವನ್ನನುಸರಿಸುವ ಹಿಮ್ಮೇಳದ ಸಾತ್ವಿಕ ನುಡಿಯುವಿಕೆಯನ್ನು ಹೊಂದಿಕೊಂಡಿರುವ ಈ ಯಶಸ್ವೀ ಸಂಯೋಜನೆ ನಿಜಕ್ಕೂ ನೃತ್ಯ ಸಂಸ್ಕೃತಿಗಿತ್ತ ಕೊಡುಗೆ.

ಮಂಟಪರೇ ಹೇಳುವಂತೆ ಅವರ ಏಕವ್ಯಕ್ತಿ ಪ್ರದರ್ಶನಗಳಲ್ಲಿ ‘ಭಾಮಿನಿ’ಗೇ ಫಸ್ಟ್ ರ್‍ಯಾಂಕ್ ! ಸಾಂಪ್ರದಾಯಿಕವಾದ ಪರಿಕಲ್ಪನೆಯನ್ನು ಜನರಂಜನೀಯವಾಗಿಯೂ ವಿಸ್ತೃತವಾಗಿಯೂ ದುಡಿಸಿಕೊಂಡದ್ದೇ ಭಾಮಿನಿಯಂತೆ ! ಆ ಮೂಲಕ ಬದುಕಿನ ವಿವಿಧ ಭಾವಗಳನ್ನು ಜನಮಾನಸಕ್ಕೆ ಮುಟ್ಟಿಸುವ ಕೆಲಸ ನಾಟ್ಯದ ಅಂಶಗಳೊಂದಿಗೆ ನೆರವೇರಿದೆ.mantapa-1

ಮಾತ್ರವಲ್ಲ, ಆಯಾಯ ನಾಯಕಿಯ ಅವಸ್ಥೆಗಳಿಗನುಗುಣವಾಗಿ ಹಿಮ್ಮೇಳ ಸಂಗೀತ ಮತ್ತು ಕೇವಲ ೩೦ ಸೆಕೆಂಡುಗಳಲ್ಲಿ ವೇಷಭೂಷಣವನ್ನು ಬದಲು ಮಾಡುತ್ತಾ ಸ್ಪಂದಿಸುವ ಮಂಟಪರ ವ್ಯಕ್ತಿತ್ವ ನೋಡುವವರಿಗೆ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುತ್ತದೆ. ವಾಸಕಸಜ್ಜಿಕೆಯ ಉಲ್ಲಾಸಕ್ಕೆ ಹಸುರು, ಅಭಿಸಾರಿಕೆಯ ಅನುರಾಗ ತೀವ್ರತೆಗೆ ಕೆಂಪು, ವಿರಹೋತ್ಕಂಠಿತೆಯ ವಿಷಾದಕ್ಕೆ ಕಪ್ಪು, ಖಂಡಿತೆಯ ಸಂಕೀರ್ಣ ಭಾವ ತುಮುಲಗಳಿಗೆ ಕೆಂಪು-ಹಳದಿ ಚೌಕುಳಿ, ಕಲಹಾಂತರಿತೆಯ ಶಾಂತಿ ಪ್ರೀತಿಗೆ ಬಿಳಿ..ಹೀಗೆ ಆಯಾಯ ನಾಯಿಕೆಯ ಮನೋಧರ್ಮಕ್ಕೆ ತಕ್ಕಂತ ವೇಷಭೂಷಣ. ನೋಡುವವರಲ್ಲಿ ರಸೋತ್ಪತ್ತಿ ಮಾಡುವ, ಶೃಂಗಾರದ ಪರಮ ತಾತ್ಪರ್ಯವನ್ನು ದರ್ಶಿಸಿಕೊಡುವ ಈ ಪ್ರದರ್ಶನ ನಿಜಕ್ಕೂ ಸವಾಲೇ ಸರಿ. ಇಂತಹ ದೇಶ-ಕಾಲಗಳ ಹಂಗಿಲ್ಲದ, ಗಂಡು-ಹೆಣ್ಣೆಂಬ ಬೇಧವಿಲ್ಲದ, ಸಂಚಾರಿಗಳ ಸಮೃದ್ಧ ಸಾಧ್ಯತೆಯನ್ನು ಹಿಡಿದಿಟ್ಟಿರುವ ಅಪೂರ್ವವೆನಿಸುವ ಸಂಯೋಜನೆಗಳ ಪ್ರಮಾಣ ನಾಟ್ಯ ಕ್ಷೇತ್ರದಲ್ಲಿ ಹೆಚ್ಚಾಗಲಿ.

Leave a Reply

*

code