Author: ಮನೋರಮಾ. ಬಿ.ಎನ್
ನೂತನವಾಗಿ ರಚನೆಗೊಂಡಿರುವ ಕರ್ನಾಟಕ ಯಕ್ಷಗಾನ ಅಕಾಡೆಮಿ ಇದೀಗ ತನ್ನ ಕಾರ್ಯ ಚಟುವಟಿಕೆಗಳನ್ನು ಆರಂಭಿಸುತ್ತಿದೆ. ಅಕಾಡೆಮಿಯ ವತಿಯಿಂದ ಮೊದಲ ಕಾರ್ಯಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೆ.ವಿ.ಜಿ.ಪುರಭವನದಲ್ಲಿ ಶಿಕ್ಷಕರ ಯಕ್ಷಗಾನ ಒಕ್ಕೂಟದ ಸಹಭಾಗಿತ್ವ ದಲ್ಲಿ ಎರಡು ದಿನಗಳ ಯಕ್ಷ ನಡಿಗೆ ಚಾಲನೆ ಮತ್ತು ಯಕ್ಷಶಿಕ್ಷಣ ಕಾರ್ಯಾಗಾರ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿತ್ತು. ಜನವರಿ ೩೧ ಮತ್ತು ಫೆಬ್ರವರಿ ೦೧ರಂದು ಜರುಗಿದ ಅದ್ಧೂರಿ ಕಾರ್ಯಕ್ರಮದ ಮುಖ್ಯವಸ್ತುವೇ ರಾಜ್ಯದ ಆಯ್ದ ಸುಮಾರು ೬೦ ಯಕ್ಷಶಿಕ್ಷಣ ತಜ್ಞರಿಂದ ‘ಶಿಕ್ಷಣದಲ್ಲಿ ಯಕ್ಷಗಾನ ಮತ್ತು ಯಕ್ಷಗಾನ ಶಿಕ್ಷಣ’ ಎಂಬ ಎರಡು ವಿಷಯಗಳಲ್ಲಿ ಚಿಂತನ-ಮಂಥನ.
ಪತ್ರಿಕೆಯ ಪುಟಗಳಿಗೋ, ಫಂಡ್ ಚೆಲ್ಲಾಟಕ್ಕೋ,ವೇದಿಕೆಯ ಭಾಷಣಗಳಿಗೋ-ರಗಳೆ-ಹಿತಾಸಕ್ತಿಗಷ್ಟೇ ಉಳಿದುಹೋಗಬಹುದಾಗಿದ್ದ ಕಾರ್ಯಕ್ರಮವನ್ನು ಬೆಂಗಳೂರಿನಿಂದ ದೂರವಾಗಿ, ಸಿಟಿಯ ಗದ್ದಲದಿಂದ ಹೊರಗುಳಿದು ಯಕ್ಷಗಾನದ ತವರೂರಾದ ಕನ್ನಡ ಜಿಲ್ಲೆಗಳಿಗೆ ಮಹತ್ವ ನೀಡುವಂತೆ ಅಚ್ಚುಕಟ್ಟಾಗಿ ಸಂಘಟನೆ ಮಾಡಿದ್ದು ಪ್ರಶಂಸನೀಯ. ಅದರಲ್ಲೂ ಇಂತಹ ಒಂದು ವಿಷಯಧಾರಿತವಾದ ಕಾರ್ಯಕ್ರಮ ನಡೆಸಿದ್ದು ಬಹು ಪ್ರಸ್ತುತವೆನಿಸಿದ್ದು, ಈಗಾಗಲೇ ಹಲವು ಕಲಾವಿದ-ಪ್ರೇಕ್ಷಕ-ವಿದ್ವಾಂಸರ ಬಾಯಲ್ಲಿ ಚರ್ಚೆಯ ವಿಷಯಕ್ಕೆ ಒಂದು ರೂಪ ಕೊಡುವಲ್ಲಿ ಕೆಲಸ ಮಾಡಿದ್ದೂ ಕೂಡ ಒಳ್ಳೆಯ ವಿಷಯ. ಈ ಪ್ರಯತ್ನದಲ್ಲಿ ಶಿಕ್ಷಕರ ಯಕ್ಷಗಾನ ಒಕ್ಕೂಟದ್ದು ಪ್ರಧಾನ ಪಾತ್ರ. ಅದರಲ್ಲೂ ಕಲಾವಿದ ಪ್ರಕಾಶ್ ಮೂಡಿತ್ತಾಯ ಅವರದ್ದು ಒಳ್ಳೆಯ ಹೋಂ ವರ್ಕ್ ಮಾಡಿಕೊಂಡು ಬಂದ ಸಂಯೋಜನೆ ಮತ್ತು ನಿರೂಪಣೆ.
ಯಕ್ಷಗಾನ ಹೊಸ ಪೀಳಿಗೆಗೆ ಇನ್ನೂ ಆಕರ್ಷಣೀಯವಾಗಲು ಶಿಕ್ಷಣದಂತಹ ಪರಿಣಾಮಕಾರಿ ಮಾಧ್ಯಮದ ಅಗತ್ಯವಿದೆ ಎನ್ನುವ ಕಾರಣಕ್ಕೆ ಅನುಷ್ಠಾನ ಯೋಗ್ಯವಾದ ಯೋಜನೆಗಳ ಕರಡು ಪ್ರತಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಯಿತು. ಹಾಗೆ ನೋಡಿದರೆ, ಮುಂದಿನ ಪೀಳಿಗೆಗೆ ಯಕ್ಷಗಾನದ ಅರಿವನ್ನು ಕೊಡುವಲ್ಲಿ ಉಡುಪಿಯಲ್ಲಿ ಈಗಾಗಲೇ ಯಶಸ್ವಿಯಾಗುತ್ತಿರುವ, ಶಾಲಾ-ಕಾಲೇಜು ಗಳಲ್ಲಿ ಕಡ್ಡಾಯ ಯಕ್ಷಗಾನ ಕಲಿಕೆ ಕಾರ್ಯಕ್ರಮ, ಸರ್ಕಾರದ ವತಿಯಿಂದ ನಡೆಯುತ್ತಿರುವ ಒಳ್ಳೆಯ ಬೆಳವಣಿಗೆ.
ಶಿಕ್ಷಣ ಕ್ರಮದ ವಿನೂತನ ಕಾರ್ಯ ಕ್ರಮಗಳಾದ ಪ್ರತಿಭಾ ಕಾರಂಜಿ, ಚಿಣ್ಣರ ಮೇಳ, ಚೈತ್ರದ ಚಿಗುರು, ಜೀವನ ವಿಜ್ಞಾನ, ಕ್ರಿಯೇಟಿವ್ ಕಾರ್ನರ್, ಚಿಣ್ಣರ ಅಂಗಳ, ಚೈತ್ರದ ಚಿಗುರು, ಚಿಣ್ಣರ ಕರ್ನಾಟಕ ದರ್ಶನ ದಲ್ಲಿ ವ್ಯವಸ್ಥಿತವಾಗಿ ಅಳವಡಿಸಿಕೊಳ್ಳಲು ಬೇಕಾದ ಅಗತ್ಯ ಕಾರ್ಯಕ್ರಮ, ಯೋಜನೆಗಳನ್ನು ನಿರ್ದೇಶಿಸುವುದರ ಕುರಿತಾಗಿ ಚರ್ಚೆಗಳಿದ್ದವು. ಮಗುವಿನ ಕಲಿಕೆ ಮತ್ತು ಸರ್ವಾಂಗೀಣ ಬೆಳವಣಿಗೆಗಾಗಿ ಯಕ್ಷಗಾನವನ್ನು ಎಷ್ಟರಮಟ್ಟಿಗೆ ಬಳಸಿಕೊಳ್ಳಬಹುದು? ಯಾವಾಗ? ಎಲ್ಲಿ? ಹೇಗೆ? ಎಂಬುದರ ಕುರಿತಾಗಿ ಚಿಂತನೆಗಳು ನಡೆದವು. ಈ ಸಂಬಂಧ ತರಬೇತಿಗಳು, ಯಕ್ಷಗಾನ ತಂಡಗಳು, ಪ್ರದರ್ಶನ ಚಟುವಟಿಕೆ, ತಾಳಮದ್ದಳೆ-ಬಯಲಾಟಗಳನ್ನು ಸಂಯೋಜಿಸುವುದು, ಆಧುನಿಕ ತಂತ್ರಜ್ಞಾನಗಳ ಮೂಲಕ ಯಕ್ಷಗಾನ ಪಠ್ಯಬೋಧನೆ ಮತ್ತು ಅವುಗಳ ಸಮಯ, ವ್ಯವಸ್ಥೆ ಮುಂತಾದವುಗಳ ಕುರಿತಂತೆ ಚರ್ಚೆಗಳು ನಡೆದವು.
ಆಗಮಿಸಿದ ೬೦ ಯಕ್ಷ ಶಿಕ್ಷಣ ತಜ್ಞ ಸಂಪನ್ಮೂಲ ವ್ಯಕ್ತಿಗಳನ್ನು ೫ ತಂಡಗಳನ್ನಾಗಿ ವಿಭಜಿಸಿ ಪ್ರತಿಯೊಂದು ತಂಡವೂ ಕೆಳಕಂಡ ವಿಷಯಗಳ ಕುರಿತಂತೆ ವಿಷಯ ನಿಷ್ಕರ್ಷಿಸಿ, ಪರಸ್ಪರ ಸಂವಾದಗಳ ಮೂಲಕ ಅನುಮಾನಗಳನ್ನು ಬಗೆಹರಿಸಿಕೊಂಡು ಸಮಗ್ರ ಪದ್ಧತಿಯತ್ತ ಮುನ್ನಡೆಯಲು ಕ್ರಮಗಳ ನಕ್ಷೆಯನ್ನು ತಯಾರಿಸಿತ್ತು. ಅದೂ ಕೇವಲ ಎರಡು ದಿನಗಳ ಅತ್ಯಲ್ಪ ಸಮಯದಲ್ಲೇ ಯಕ್ಷಗಾನದ ಸಮಗ್ರ, ಸಂಕ್ಷಿಪ್ತ ನೋಟ ಲಭ್ಯವಾದದ್ದು ಪ್ರಸಂಸನೀಯ.
* ಯಕ್ಷಗಾನದ ಚರಿತ್ರೆ-ಸ್ವರೂಪ
* ಯಕ್ಷಗಾನ ಬೋಧನೆ-ಕಲಿಕೆ
* ಪ್ರಸಂಗ-ವೇಷಭೂಷಣ
* ಮೌಲ್ಯಮಾಪನ
* ಶಿಕ್ಷಣದಲ್ಲಿ ಯಕ್ಷಗಾನ
ಇವೇ ಆ ಐದು ತಂಡಗಳಾಗಿದ್ದು ತೆಂಕುತಿಟ್ಟು, ಬಡಗು ತಿಟ್ಟು, ಬಡಾಬಡಗು, ಪಾರಿಜಾತ, ದೊಡ್ಡಾಟ, ಸಣ್ಣಾಟ, ರಾಧನಾಟ ಮುಂತಾಗಿ ಯಕ್ಷಗಾನದ ವಿವಿಧ ಬಗೆಯ, ಮಜಲುಗಳ ನುರಿತ ವಿದ್ವಾಂಸರು, ಯಕ್ಷ ದಿಗ್ಗಜರು, ಲೇಖಕರು, ವಿವಿಧ ಕ್ಷೇತ್ರಗಳ ತಜ್ಞರು, ಕಲಾವಿದರು, ಪ್ರಾಥಮಿಕ-ಪ್ರೌಢ ಶಿಕ್ಷಕರು ಮುಂತಾಗಿ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಕಾರ್ಯಾಗಾರವನ್ನು ಅರ್ಥಪೂರ್ಣವಾಗಿಸಿದರು. ಮಾತ್ರವಲ್ಲದೆ, ಯಕ್ಷಗಾನವನ್ನು ಕಾಡುತ್ತಿರುವ ಹತ್ತು ಹಲವು ಸಮಸ್ಯೆಗಳ, ಭಿನ್ನಾಭಿಪ್ರಾಯಗಳ, ವಿವಾದಗಳ ಸಂಕ್ಷಿಪ್ತ ಅವಲೋಕನ ಮತ್ತು ಸಮಸ್ಯೆಗಳ ಪರಿಹಾರದತ್ತ ಸಮಗ್ರ ನೋಟವೂ ಕಂಡುಬಂದಿತ್ತು. ಇನ್ನೇನಿದ್ದರೂ ಮಂಡನೆಯಾದ, ಮನ್ನಣೆ ಪಡೆದ ವಿಷಯಗಳು ಕಾರ್ಯರೂಪಕ್ಕೆ ಬರುವುದಷ್ಟೇ ಬಾಕಿ !
(ಈ ಕುರಿತಂತೆ ಓದುಗರ ಅಭಿಪ್ರಾಯ, ಚರ್ಚೆಗಳಿಗೆ ಅವಕಾಶವಿದ್ದು ಮತ್ತಷ್ಟು ವಿವರಗಳನ್ನು ಮುಂದಿನ ಸಂಚಿಕೆಯಲ್ಲಿ ಕಾಣೋಣ)