Author: ಮನೋರಮಾ. ಬಿ.ಎನ್
ಈ ವರೆಗೆ…
(ಅವನತಿಯ ಹಾದಿ ಹಿಡಿದಿದ್ದ, ಕೀಳು ಅಭಿರುಚಿಗಳಿಗೆ ತುತ್ತಾಗಿದ್ದ ಸಾದಿರ್ ನೃತ್ಯಪ್ರಕಾರಕ್ಕೆ ತಮ್ಮ ಪ್ರಥಮ ಪ್ರದರ್ಶನದಲ್ಲೇ ಗುಣಮಟ್ಟದ ಸಹೃದಯರನ್ನು ಕರೆತಂದು ಮೂಗು ಮುರಿಯುತ್ತಿದ್ದವರು ಮೂಗಿನ ಮೇಲೆ ಬೆರಳಿಟ್ಟುಕೊಂಡು ನೋಡುವಂತೆ ಮಾಡಿದ್ದು ರುಕ್ಮಿಣಿ ಅರುಂಡೇಲ್ ಅವರ ಪ್ರಥಮ ಯಶಸ್ವೀ ಹೆಜ್ಜೆ ! ಮುಂದೆ ಕೃಷ್ಣ ಅಯ್ಯರ್ ಮತ್ತು ರುಕ್ಮಿಣೀ ಅರುಂಡೇಲ್ ಮುಂತಾದ ಮಹನೀಯರ ಪ್ರಯತ್ನಗಳಿಂದಾಗಿ ದೇವದಾಸಿ ಪದ್ಧತಿಗೆ ಜೋತು ಬಿದ್ದಿದ್ದ ಸಾದಿರ್ ಭರತನಾಟ್ಯವಾಗಿತ್ತು. ಅವರು ಸ್ಥಾಪಿಸಿದ ಕಲಾಕ್ಷೇತ್ರ ಹಲವು ಕ್ರ್ರಾಂತಿಕಾರಿ ಬದಲಾವಣೆಗಳಿಗೆ ಮುಕ್ತವಾಗಿ ತೆರೆದುಕೊಳ್ಳುತ್ತಾ ಸಾಗಿತ್ತು.)
ನೃತ್ಯಕ್ಕೆ ಸಂಬಂಧಿಸಿದಂತೆ ರುಕ್ಮಿಣೀ ಮಾಡಿದ ಮೊದಲ ಕೆಲಸ ಸಾದಿರ್ಗೆ ಭರತನಾಟ್ಯವೆಂಬ ನಾಮಕರಣ ಮಾಡಿದ್ದು. ನಾಮಕರಣ ಮಾಡಿದರೆ ಸಾಕೇ? ಮುಂದಿನ ಸಂಸ್ಕಾರ ಕ್ರಮಗಳು ಬೇಡವೇ? ಹಾಗಾಗಿಯೇ ಹೆಸರಿಗೆ ಅನ್ವರ್ಥವಾಗುವಂತೆ ಅದರಲ್ಲಿನ ವಿವಿಧ ಅಂಶಗಳ ಪರಿಷ್ಕರಣೆಗೆ ಶುರುವಿಟ್ಟುಕೊಂಡರು. ಅದರ ಪ್ರಥಮ ಪ್ರಯತ್ನ ; ಬಳಕೆಯಲ್ಲಿದ್ದ ಪಂದನಲ್ಲೂರು ಶೈಲಿಯ ಭರತನಾಟ್ಯದ ಸುಧಾರಣೆ. ಪರಿಣಾಮವಾಗಿ ನೃತ್ಯದ ನವರಸಗಳಲ್ಲೇ ಪ್ರಧಾನವೆನಿಸುವ ಶೃಂಗಾರ ರಸದ ಅತೀ ಎನಿಸುವ ಅಂಶಗಳನ್ನು ತೆಗೆದು ಹಾಕಿದ್ದು !
ಅಂದ ಮಾತ್ರಕ್ಕೆ ರುಕ್ಮಿಣೀಗೆ ಶೃಂಗಾರ ರಸದಲ್ಲಿ ಒಲವಿರಲಿಲ್ಲವೆಂದಲ್ಲ. ಆಗಿನ ಕಾಲದ ದೇವದಾಸಿಯ ಸಾದಿರ್ನಲ್ಲಿ ಶೃಂಗಾರ ಎಂದರೆ ‘ನುಲಿಯುವ’, ಕಾಮುಕವಾಗಿ ಅಭಿನಯಿಸುವ ಪದ್ಧತಿಯಿತ್ತು. ಆದ್ದರಿಂದಲೇ ಜನಸಾಮಾನ್ಯರು ನಿಂದಿಸುವಂತಾದ್ದು ! ಈ ನಿಟ್ಟಿನಲ್ಲಿ ಪರಿಣಾತ್ಮಕವಾಗಿ ಜನರು ನೋಡುವಂತಹ ಅಂಶಗಳನ್ನು ವಿವಿಧ ಒಳಪಡಿಸುವುದು ಉದ್ದೇಶವಾಗಿತ್ತು. ಉತ್ಕೃಷ್ಟ ಕಲಾವಂತಿಕೆಗೆ ನೃತ್ಯದಲ್ಲಿ ದೈವೀಕ ಮತ್ತು ಆದರಣೀಯ ಭಾವಗಳನ್ನು ಬೆಳೆಸಲು ಇಂತಹ ಶೈಲಿ ಕಳಂಕ ತರುತ್ತದೆ ಎಂಬುದನ್ನು ಕಂಡುಕೊಂಡದ್ದೇ ರುಕ್ಮಿಣೀ ಅವರ ಕಾರ್ಯ, ಬಳಕೆಯಲ್ಲಿದ್ದ ನೃತ್ಯಬಂಧಗಳಿಗೆ ಗೌರವಪೂರ್ವಕವಾದ ಸಂಯೋಜನೆಗಳನ್ನು ಮಾಡಿದರು. ಭಕ್ತಿಶೃಂಗಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟರು.
ಜೊತೆಗೆ ಸಾಂಪ್ರದಾಯಿಕ ಜನಪದ ನೃತ್ಯಗಳನ್ನು, ಭಕ್ತಿಪ್ರಧಾನ ಕಥೆಗಳನ್ನು ನೃತ್ಯಗಳಲ್ಲಿ ಹೇರಳವಾಗಿ ಬಳಸಲು ಆರಂಭಿಸಿದರು. ಹೀಗಾಗಿಯೇ ಅವರು ಸಂಯೋಜನೆ ಮಾಡಿದ ಕುಟ್ರಾಲ್ ಕೊರವಂಜಿ, ಅಳಗರ್ ಕೊರವಂಜಿ ಮುಂತಾದ ಸಾಂಪ್ರದಾಯಿಕ ಜನಪದ ನೃತ್ಯಗಳು ಇಂದಿನವರೆಗೂ ಜನಪ್ರಿಯವಾಗಿ ನೃತ್ಯಪ್ರದರ್ಶನದ ಅವಿಭಾಜ್ಯ ಅಂಗಗಳೆನಿಸುವ ಮಟ್ಟಿಗೆ ನೃತ್ಯಜೀವನವನ್ನು ಮತ್ತು ರಸಿಕರನ್ನು ಆವರಿಸಿದೆ, ಆಕರ್ಷಿಸಿದೆ.
ಆಗಿನ ಕಾಲಕ್ಕೆ ಮುದ್ರೆಗಳ ಬಳಕೆ ವ್ಯಾಪಕವಾಗಿರಲಿಲ್ಲ. ಪರಿಣಾಮವಾಗಿ ಮನಸ್ಸಿಗೆ ತೋಚಿದಂತೆ ಅಂಗಾಗಗಳನ್ನು ಬಳುಕಿಸಿ, ಹಸ್ತ ಚಲನೆಗಳನ್ನು ಮಾಡುತ್ತಾ ದ್ವಂದ್ವಾರ್ಥಗಳನ್ನು ಸಂವಹಿಸುವಂತಾಗಿತ್ತು. ಮಾತ್ರವಲ್ಲ, ಪ್ರಾಥಮಿಕ ಪಾಠವಾದ ಅಡವು ಕ್ರಮವೂ ಸರಿಯಿಲ್ಲದೆ ಅವ್ಯವಸ್ಥೆಯ ಆಗರವೆನಿಸಿತ್ತು. ಇದನ್ನರಿತ ರುಕ್ಮಿಣಿ ನೃತ್ಯ ಗ್ರಂಥಗಳಲ್ಲಿ ಉಪಲಬ್ಧವಿರುವ ಹಸ್ತ-ಮುದ್ರೆಗಳ ವಿನ್ಯಾಸಗಳನ್ನು ಕ್ರಮವತ್ತಾಗಿ ಜಾರಿಗೆ ತಂದರು. ಅಡವುಗಳನ್ನು ಪರಿಷ್ಕರಿಸಿ ಚೌಕಟ್ಟು ಹಾಕಿಕೊಟ್ಟರು. ನೃತ್ಯದಲ್ಲಿ ನಿರ್ದಿಷ್ಟವಾಗಿ ಹೇರಳವಾಗಿ ಮುದ್ರೆಗಳನ್ನು ಬಳಸುವಂತೆ ಮಾಡಿದರು. ತಾಳ-ಲಯಗಳಿಗೆ ತಕ್ಕುದಾಗಿ ಚೊಕ್ಕವಾಗಿ ನರ್ತಿಸಲು ಆಯಾi ಹಾಕಿಕೊಟ್ಟರು. ಹಾಗಾಗಿ ಅವರು ಸಂಯೋಜನೆಗೆ ಮಾಡುವ ಅಭಿನಯಗಳು, ಮಾಡುವ ಕ್ರಮ ಮೆಟ್ಟಿಲುಗಳ ಮಾದರಿ ಕ್ರಮವತ್ತತೆಯನ್ನು ಅನುಸರಿಸುತ್ತ್ತದೆ. ಇಂತಹ ಒಂದೊಂದೇ ಸುಧಾರಣೆ ಕ್ರಮೇಣ ಭರತನಾಟ್ಯದ ಶಾಖೆಯಾಗಿ ಕಲಾಕ್ಷೇತ್ರ ಶೈಲಿಯೆಂದು ಕರೆಸಿಕೊಂಡದ್ದು !
ಆಗಿನ ನೃತ್ಯ ಪದ್ಧತಿಯಲ್ಲಿ ಹಿಮ್ಮೇಳ ಕ್ರಮ ಇಂದಿನಂತಿರಲಿಲ್ಲ. ವಾಲಗ, ಹಾರ್ಮೋನಿಯಂನಂತಹ ವಾದ್ಯಗಳನ್ನು ಬಳಸುವುದು ರೂಢಿ. ಅದನ್ನು ಬದಲಾಯಿಸಿ ಸುಧಾರಿತ ರೀತಿಯೆಂಬಂತೆ ವಯೋಲಿನ್ನ್ನು ಬಳಕೆಗೆ ತಂದದ್ದು ಈಗ ಇತಿಹಾಸ. ಪಾಶ್ಚಾತ್ಯ ವಾದ್ಯವೊಂದನ್ನು ಭಾರತೀಯ ಶೈಲಿಗೆ ಒಗ್ಗಿಸಿಕೊಂಡ ಯಶೋಗಾಥೆಗಳಲ್ಲಿ ಪಿಟೀಲಿಗೆ ಮೊದಲ ಸ್ಥಾನ ಸಲ್ಲುವುದು ಇಂತಹುದೇ ಶ್ರಮಗಳಿಂದ! ಅಷ್ಟೇ ಅಲ್ಲ, ಹಿಮ್ಮೇಳದಲ್ಲಿನ ನಟ್ಟುವನ್ನಾರುಗಳು, ಗಾಯಕರು, ವಾದ್ಯ ನುಡಿಸುವವರೆಲ್ಲರೂ ನರ್ತಕಿಯರನ್ನು ಅನುಸರಿಸಬೇಕಿತ್ತು. ಅಂದರೆ ನರ್ತಕಿಯರ ಹಿಂದೆ ನಿಂತು ಅವಳು ಕುಣಿದಲ್ಲಿಗೆ ಇವರೂ ಹೋಗುತ್ತಾ, ನಡೆಯುತ್ತಾ ಬೆನ್ನು ಬಿಡದಂತೆ ಹಿಂಬಾಲಿಸುವುದು ! ಇಂತಹ ಪದ್ಧತಿಗೆ ಫೂರ್ಣ ವಿರಾಮವನ್ನಿಟ್ಟು ನರ್ತಕಿಯ ಬಲಬದಿಗೆ ಹಿಮ್ಮೇಳದವರನ್ನು ಕುಳ್ಳಿರಿಸಿ ಸ್ಥಾನ ಕಲ್ಪಿಸಿ ಗೌರವಿಸಿದ್ದು ರುಕ್ಮಿಣೀ ! ಇದಕ್ಕ್ಕೆ ಅವರಿಗೆ ಪ್ರೇರಣೆಯಾದದ್ದು ಪುರಾತನ ಶಿಲ್ಪಕಲೆಗಳ ಕುರಿತ ಜ್ಞಾನ !
ನೃತ್ಯದ ಸುಧಾರಣೆಯಲ್ಲಿ ಅನರ್ಹವೆನಿಸಿದ, ಪ್ರಸ್ತುತವೆನಿಸದ ಭಾಗಗಳನ್ನು ತೆಗೆದದ್ದೇನೋ ಸರಿ ! ಆದರೆ ಈ ನಿರ್ಧಾರಕ್ಕೆ ಬೆಂಬಲ ದೊರೆತಿತೇ? ಜನರು ಪ್ರದರ್ಶನಗೃಹಗಳಿಗೆ, ಕಲಿಕಾ ಸಂಸ್ಥೆಗೆ ಕಾಲಿರಿಸಿದರೇ ?
( ಸಶೇಷ)