Author: Viprabha,Puttur
ನೃತ್ಯಕ್ಷೇತ್ರದ ಪಾಲಿಗೆ ಅಪರೂಪವೆನಿಸಿರುವ ಸಂಶೋಧನೆಗೆ ಪೂರಕವಾದ ನೆಲೆಯಲ್ಲಿ ದುಡಿಯುತ್ತಿರುವ ಸಂಸ್ಥೆಯೇ ನೂಪುರ ಭ್ರಮರಿ. ನೃತ್ಯಸಂಶೋಧನೆ, ಅಧ್ಯಯನ ತರಗತಿ, ಮಾರ್ಗದರ್ಶನ, ಪ್ರದರ್ಶನ, ಸಂವಾದ, ಪ್ರಕಟಣೆಗಳಿಗೆ ಮೀಸಲಾದ ಪ್ರತಿಷ್ಠಾನವಾಗಿ ಗುರುತಿಸಿಕೊಂಡಿರುವ ನೂಪುರ ಭ್ರಮರಿಯ ಮತ್ತ್ತೊಂದು ಪ್ರಯತ್ನವಾಗಿ ಮೂಡಿಬಂದಿದ್ದು ಜುಲೈ ೨೭, ೨೦೧೩ರಂದು ಬೆಂಗಳೂರಿನ ಜೆ.ಸಿ. ರಸ್ತೆಯ ಕನ್ನಡ ಭವನದಲ್ಲಿರುವ ನಯನ ಸಭಾಂಗಣದಲ್ಲಿ ಮತ್ತು ಆಗಸ್ಟ್ ೧೮ರಂದು ಪುತ್ತೂರಿನ ನಟರಾಜ ವೇದಿಕೆಯಲ್ಲಿ ನಡೆದ ನೃತ್ಯಪ್ರದರ್ಶನ, ಸಂವಾದ ಮತ್ತು ಸಮೀಕ್ಷೆಯ ಕಾರ್ಯಕ್ರಮ.
ಈಗಾಗಲೇ ಕಳೆದ ಫೆಬ್ರವರಿಯಲ್ಲಿ ನೃತ್ಯಕ್ಷೇತ್ರಕ್ಕೇ ಮೀಸಲಾದ ಅಪೂರ್ವವೆನಿಸುವ ರಾಷ್ಟ್ರಮಟ್ಟದ ಸಂಶೋಧನ ಸಮ್ಮೇಳನವನ್ನು ಭಾರತೀಯ ವಿದ್ಯಾಭವನದ ಸಹಯೋಗದಲ್ಲಿ ನಡೆಸಿದ ಸಂಸ್ಥೆಯ ನೃತ್ಯ ಸಂಶೋಧಕರ ಚಾವಡಿ ಎಂಬ ಮತ್ತೊಂದು ಅಂಗವು ಜನಮೆಚ್ಚುಗೆಗೆ ಪಾತ್ರವಾಗಿತ್ತು. ಜೊತೆಗೆ ನೂಪುರ ಭ್ರಮರಿ ನೃತ್ಯ ಸಂಶೋಧಕರ ಚಾವಡಿಯು; ಭಾರತದಲ್ಲೇ ಪ್ರಪ್ರಥಮವಾದ ನೃತ್ಯ ಸಂಶೋಧನ ನಿಯತಕಾಲಿಕೆ-ನೂಪುರಾಗಮವನ್ನು ಹೊರತಂದಿತ್ತು. ಈ ನಿಟ್ಟಿನಲ್ಲಿ ಸಂಸ್ಥೆಯ ಆಶ್ರಯದಲ್ಲಿ ನೂಪುರ ಭ್ರಮರಿ ಪತ್ರಿಕೆಯ ಸಂಪಾದಕಿ, ಅಧ್ಯಕ್ಷೆ ಮತ್ತು ಸ್ವತಃ ಸಂಶೋಧಕಿಯಾಗಿರುವ ಮನೋರಮಾ ಅವರ ಅಧ್ಯಯನ ಶಿಸ್ತಿಗೆ ಅನುರೂಪವಾಗಿ ಅಣಿಗೊಂಡದ್ದು ಈ ಸಂಶೋಧನೆಗೆ ಪೂರಕವಾದ ಈ ಕಾರ್ಯಕ್ರಮ.
ಮನೋರಮಾ ನೃತ್ಯ, ಯಕ್ಷಗಾನಾದಿಯಾಗಿ ಸಾಂಸ್ಕೃತಿಕ ಸಂದರ್ಭಗಳತ್ತ ಶೋಧನೆಯ ದೃಷ್ಟಿಯನ್ನು ಹೊಂದಿದ ಕಲಾವಿದೆ, ಅಧ್ಯಾಪಿಕೆ, ಉಪನ್ಯಾಸಕಿ, ಪತ್ರಿಕೋದ್ಯಮಿ, ಬರೆಹಗಾರ್ತಿ, ಸಂಪನ್ಮೂಲ ವ್ಯಕ್ತಿ. ನೂಪುರ ಭ್ರಮರಿ ಪತ್ರಿಕೆಯ ಸಂಪಾದಕಿ. ಪತ್ರಿಕೋದ್ಯಮ ಮತ್ತು ಭರತನಾಟ್ಯವೆರಡರಲ್ಲೂ ಸ್ನಾತಕೋತ್ತರ ಪದವಿ ಪಡೆದು ಪ್ರಸ್ತುತ ಭರತನಾಟ್ಯದ ಸಾಮಾಜಿಕ ಸಂವಹನದ ಸಾಧ್ಯತೆಗಳ ಕುರಿತಾಗಿ ಅಧ್ಯಯನ ನಡೆಸುತ್ತಿರುವ ಸಂಶೋಧಕಿ. ಈಗಾಗಲೇ ಇವರ ಅಧ್ಯಯನಕೃತಿಗಳು ಮುದ್ರಾರ್ಣವ, ನೃತ್ಯಮಾರ್ಗಮುಕುರವೆಂಬ ಹೆಸರಿನಲ್ಲಿ ಲೋಕಾರ್ಪಣೆಗೊಂಡಿದ್ದು; ಹಲವು ಸಂಶೋಧನ ಪ್ರಬಂಧಗಳು ರಾಷ್ಟ್ರಮಟ್ಟದ ವೇದಿಕೆಗಳಲ್ಲಿ ಜನಮೆಚ್ಚುಗೆ ಗಳಿಸಿವೆ. ಅಕ್ಕ ಕನ್ನಡ ಕೂಟದ ಜಾಗತಿಕ ಪ್ರಶಸ್ತಿ, ಕರ್ನಾಟಕ ಸರ್ಕಾರದ ಫೆಲೋಶಿಪ್, ಕನ್ನಡದ ಮೊದಲ ಶತಾವಧಾನದಲ್ಲಿ ಪೃಚ್ಛಕತ್ವದಿಂದ ಮೊದಲ್ಗೊಂಡು ಹತ್ತು ಹಲವು ವಿಶೇಷಗಳಿಗೆ ಭಾಜನರಾದ ಮನೋರಮಾ ; ಅಖಿಲ ಹವ್ಯಕ ಮಹಾಸಭಾದ ವಿದ್ವತ್ ಸಮ್ಮಾನವನ್ನೂ ಶಿವಮೊಗ್ಗದಲ್ಲಿ ಯತಿವರೇಣ್ಯರಿಂದ ಸ್ವೀಕರಿಸಿದ್ದಾರೆ. ಸದ್ಯ ಪುತ್ತೂರಿನಲ್ಲಿ ನಡೆಸುವ ನಾಟ್ಯಶಾಸ್ತ್ರದ ಕುರಿತ ಉಚಿತ ಉಪನ್ಯಾಸ ತರಗತಿಗಳಿಂದ ಸಾರ್ವಜನಿಕರ, ವಿದ್ವಾಂಸರ, ವಿದ್ಯಾರ್ಥಿಗಳ ಆದರಕ್ಕೆ ಮನೋರಮಾ ಪಾತ್ರವಾಗಿದ್ದಾರೆ. ಶತಾವಧಾನಿ ಡಾ. ಆರ್. ಗಣೇಶರಂತಹ ಅದೆಷ್ಟೋ ವಿದ್ವನ್ಮಣಿಗಳು, ಕಲಾರಸಿಕರು ಮನೋರಮಾ ಅವರ ಕಲಾ ಕೈಂಕರ್ಯಕ್ಕೆ ಶ್ಲಾಘನೆ, ಸಹಕಾರವನ್ನೀಯುತ್ತಿರುವುದು ಮನೋರಮಾ ಅವರ ಹೆಗ್ಗಳಿಕೆ. ಇವೆಲ್ಲದರೊಂದಿಗೆ ಇತ್ತೀಚೆಗೆ ಬೆಂಗಳೂರು ಮತ್ತು ಪುತ್ತೂರಿನಲ್ಲಿ ನಡೆದ ನೃತ್ಯಪ್ರದರ್ಶನ, ಸಂವಾದ ಮತ್ತು ಸಮೀಕ್ಷೆಯ ಕಾರ್ಯಕ್ರಮ ಅತ್ಯಪೂರ್ವ ಅಭಿನಂದನೆಗಳಿಗೆ ಸಾಕ್ಷಿಯಾಗಿದೆ. ರಾಜಕೀಯ, ಸಾಂಸ್ಕೃತಿಕ, ಚಲನಚಿತ್ರ ರಂಗಗಳ ಕಲಾವಿದರು ಅಭ್ಯಾಗತರಾಗಿ ಬಂದು ಕಾರ್ಯಕ್ರಮವನ್ನು ಸವಿದು ಕರ್ನಾಟಕದಲ್ಲೇ ಮೊತ್ತ ಮೊದಲೆಂಬಂತ ಈ ಪ್ರಯೋಗಕ್ಕೆ ಹಾರ್ದಿಕವಾಗಿ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ. ಒಂದು ನಿಟ್ಟಿನಲ್ಲಿ ಬದಲಾವಣೆಯ ದ್ಯೋತಕವಾಗಿ, ಕ್ರಾಂತಿಕಾರಿಕ ವಿಚಾರಗಳನ್ನು ಅಳವಡಿಸಿಕೊಳ್ಳಲು ಅಡಿಪಾಯವೆಂಬಂತೆ ನೃತ್ಯಪ್ರದರ್ಶನ ಮತ್ತು ಅದರ ನಂತರದ ಸಂವಾದಗಳು ತೋರಿಬಂದಿವೆ.
ಸಾಮಾಜಿಕವಾಗಿ ಪ್ರಸ್ತುತವಾಗಿರುವ ವಿಷಂiiಗಳನ್ನು ಭರತನಾಟ್ಯದಲ್ಲಿ ಅಳವಡಿಸಿಕೊಳ್ಳುವುದರ ಸಂಬಂಧ ಇರುವ ಸಂಶೋಧನಾ ವಸ್ತುವಿಗೆ ಅಗತ್ಯ ನೆಲೆಯಲ್ಲಿ ಕಾರ್ಯಕ್ರiವನ್ನು ಚೊಕ್ಕಟವಾಗಿ ಆಯೋಜಿಸಲಾಗಿತ್ತು. ಶಾಸ್ತ್ರೀಯ ನೃತ್ಯವೆನ್ನುವುದು ಹೇಗೆ ಸಾಮಾಜಿಕ ಅಗತ್ಯದ ವಿಷಯಗಳಿಗೆ ಸ್ಪಂದಿಸಬಲ್ಲುದು? ಸ್ಪಂದಿಸುವುದಾದರೆ ಇರಬೇಕಾದ ಮಾನದಂಡಗಳೇನು? ನೃತ್ಯದ ಚೌಕಟ್ಟು ಎಷ್ಟರಮಟ್ಟಿಗೆ ಸೂಕ್ತ ಎಂಬಿತ್ಯಾದಿ ಮೂಲಭೂತ ಪ್ರಶ್ನೆಗಳನ್ನು ಆಧರಿಸಿ ಕಾರ್ಯಕ್ರಮವನ್ನು ನಿರ್ದೇಶಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಯಾವುದೇ ನೃತ್ಯಪ್ರದರ್ಶನದಲ್ಲಿ ಪ್ರೇಕ್ಷಕರ ಆಯ್ಕೆ, ಒತ್ತಾಸೆಗಳೇನು? ಅವರ ನಿರೀಕ್ಷೆಗಳೇನು ಎಂಬುದನ್ನೂ ಅರಿಯುವ ವಿನೂತನ ಪ್ರಯತ್ನವೂ ಕಂಡಿತು.
ಪುತ್ತೂರಿನಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಕವಿ, ವಿಮರ್ಶಕ, ‘ರಾಮಕಥಾ’ ರಂಗನಿರ್ದೇಶಕ ವಿಮರ್ಶಾ ವಾಙ್ಮಯಿ ಬಿರುದಾಂಕಿತ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರು ಮಾತನಾಡಿದರು.
ನೃತ್ಯಕ್ಷೇತ್ರದಲ್ಲಿ ಸಂಶೋಧನೆ ಎನ್ನುವುದೇ ಮರುಭೂಮಿಯಲ್ಲಿ ಮಳೆ ಬಂದ ಹಾಗೆ. ಸಾಮನ್ಯವಾಗಿ ನೃತ್ಯದಲ್ಲಿ ಸಂಶೋಧನೆ ಮಾಡಲಿಕ್ಕೇನಿದೆ ಎನ್ನುವವರೇ ಹೆಚ್ಚು ಮಂದಿ. ಅದರಲ್ಲೂ ನೃತ್ಯದ ಮೂಲಕ ಪ್ರಯೋಜನ ಏನು ಸಿಗುತ್ತದೆ ಎಂದು ಯೋಚನೆ ಮಾಡಿ ಅದರತ್ತಲೇ ಹೊರಳಿಕೊಳ್ಳುವವರ ಸಂಖ್ಯೆ ಇಂದಿನ ಕಾಲಕ್ಕೆ ಹೆಚ್ಚಿಗಿದೆ. ಒಂದರ್ಥದಲ್ಲಿ ಗಾಳಿಗೆ ಗುದ್ದಿ ಮೈನೋಯಿಸಿಕೊಳ್ಳುವ ಕೆಲಸವೇ ಹೌದು. ಜೊತೆಗೆ ನೃತ್ಯದ ಸಂಶೋಧನೆ ವೇದಿಕೆಯಲ್ಲಿ ಕಂಡುಬರುವುದು ಕಡಿಮೆಯೆಂದು ಅನಿಸಬಹುದು. ಆದರೆ ಸಂಶೋಧನೆಯ ಅಂಶವಿರುವುದು ತೆರೆಯ ಮರೆಯಲಿ. ನಿದ್ದೆ, ಆಹಾರ, ಸುಖ ಸಂತೊಷಗಳ ತ್ಯಾಗಕೋಟಿಗೆ ಸಂಶೋಧಕರು ತಮ್ಮನ್ನು ತಾವು ದೂಡಿಕೊಂಡಿರುತ್ತಾರೆ. ಹೀಗಿರುವಾಗ ಮನೋರಮಾ ಅವರ ಸಂಶೋಧನಾತ್ಮಕ ಕೆಲಸ ಆಪ್ತವಾದದ್ದು. ಅವರ ಈ ಹೆಜ್ಜೆ ಹಲವು ಜನರಿಗೆ ಚೋದಕವಾಗಿ ಭವಿಷ್ಯದಲ್ಲಿ ತೋರಿಬರುವಂತದ್ದು. ನೃತ್ಯದ ಬಗ್ಗೆ ಪ್ರತೀಕ್ಷೆ, ನಿರೀಕ್ಷೆ ಇರುವವರು ಇಂತಹ ಸಂಶೋಧಕರನ್ನು ಹುರಿದುಂಬಿಸಬೇಕು. ಮೈಚಳಿ ಬಿಟ್ಟು ಪ್ರತಿಕ್ರಿಯೆ ನೀಡಿದರೆ ಕಲೆ, ಕಲಾವಿದರ, ಸಂಶೋಧನೆಯ ಬೆಳವಣಿಗೆಗೆ ಕಾರಣವಾಗುತ್ತದೆ ಎಂದರು.
ಭರತನಾಟ್ಯದಂತಹ ಶಾಸ್ತ್ರೀಯ ನೃತ್ಯಕ್ಕೂ ಸಾಮಾಜಿಕ ಪ್ರಸ್ತುತತೆಯ ವಸ್ತುಗಳನ್ನು ಸಂವಹನ ಮಾಡಿಸಲು ಸಾಧ್ಯವಿದೆ ಎಂಬುದು ನನ್ನ ಆತ್ಮಿಕವಾದ ನಿರೀಕ್ಷೆ. ನಾಟಕ, ಯಕ್ಷಗಾನದಂತಹ ಕ್ಷೇತ್ರಗಳಲ್ಲಿ ಸಾಮಾಜಿಕ ಪ್ರಸ್ತುತತೆಯನ್ನು ಕಾಣುವುದು ಅದರ ಸಾಧ್ಯತೆಗಳ ವಿಶಾಲ ಆಯಾಮದಲ್ಲಿ ಸುಲಭ. ಆದರೆ ನೃತ್ಯವೆಂದ ತಕ್ಷಣ ಶಾಸ್ತ್ರೀಯ ಭಾರ ಹೆಚ್ಚಿಗಿರುವುದನ್ನು ಕಾಣಬಹುದು. ಹೀಗಿರುವಾಗ ಸಾಮಾಜಿಕ ಪ್ರಸ್ತುತತೆಯ ವಿಚಾರವನ್ನು ಅಳವಡಿಸಿಕೊಳ್ಳುವುದು ಸವಾಲಿನ ಕೆಲಸ. ಏಯ್ಡ್ಸ್ ಜಾಗೃತಿ, ಸಾಕ್ಷರತೆಯಂತಹ ಸಾಮಾಜಿಕ ವಸ್ತುಗಳನ್ನು ಅಳವಡಿಸಿಕೊಳ್ಳುವುದಾದರೆ ಸಾಕಷ್ಟು ತಾಂತ್ರಿಕ ಎಡರುತೊಡರುಗಳು ನೃತ್ಯಕ್ಕೆ ಇದೆ. ಆದರೆ ರಾಮಾಯಣದಂತಹ ಪುರಾಣಾದಿ ಕಥೆಗಳೂ ಕೂಡಾ ಸಮಕಾಲೀನತೆಗೆ ಹೆಚ್ಚು ಪ್ರಸ್ತುತವಾಗಿಯೂ ಇರುತ್ತದೆ. ಹೀಗಿರುವಾಗ ಸಮಕಾಲೀನ ಸಮಸ್ಯೆಯನ್ನು ಕಲೆಯ ಮೂಲಕ ಕಾಣಿಸುವುದು ಎಂಬ ಪರಿಕಲ್ಪನೆಯೇ ಅಪ್ರಸ್ತುತಗೊಳ್ಳುವುದೂ ಇದೆ. ಆದ್ದರಿಂದ ಅಭಿವ್ಯಕ್ತಿಯನ್ನು ಹೇಗೆ ಮಾಡಿಕೊಳ್ಳುತ್ತೇವೆ ಎಂಬುದರ ಆಧಾರದಲ್ಲೇ ಕಲೆಯನ್ನು ಪ್ರಸ್ತುತಗೊಳಿಸಿಕೊಳ್ಳಬೇಕು ಅದರಲ್ಲೂ ಕಲೆಯ ಪರಮೋಚ್ಛ ಉದ್ದೇಶ ‘ಅರ್ಥವಾಗುವುದು’. ಸಂವಹನ ಸಮರ್ಪಕವಾದರೆ ಕಲೆ ಆಪ್ತವಾಗುತ್ತದೆ. ಇದರ ಹಲವು ಆಯಾಮಗಳನ್ನು ದರ್ಶಿಸುವ ಕೆಲಸವನ್ನು ಮನೋರಮಾ ಅವರ ಸಂಶೋಧನೆ ಸಮರ್ಥವಾಗಿ ನಿರ್ವಹಿಸುತ್ತಿದೆ ಎಂದರು.
ಅದರಲ್ಲೂ ಇಂದಿಗೆ ನೃತ್ಯಕ್ಷೇತ್ರದಲ್ಲಿ ಸಂಶೋಧನೆ ಎನ್ನುವುದು ಸಮಕಾಲೀನತೆಯ ಪ್ರಸ್ತುತತೆಯ ಆವರಣದೊಳಗೆ ಹೊರಳಿಕೊಂಡು ಸಾಕಷ್ಟು ಎಡವಟ್ಟು ಮಾಡಿಕೊಂಡಿದೆ. ಬಹಳಷ್ಟು ಘೋಷಣೆಗಳಲ್ಲೇ ಪ್ರದರ್ಶನಗಳು ಅಂತ್ಯ ಕಾಣುತ್ತವೆ. ನಾವೇ ಕಟ್ಟಿಕೊಂಡ ಪರಂಪರೆಯಲ್ಲಿ ನಮ್ಮನ್ನು ನಾವು ಕಟ್ಟಿಹಾಕಿಕೊಳ್ಳುತ್ತಿದ್ದೇವೆ. ಆದರೂ ಆ ಪರಿಮಿತಿಯಲ್ಲಿ ಸಮಕಾಲೀನ ಚಿತ್ರಣವನ್ನು ನೀಡುವ ಸಾಧ್ಯತೆಗಳನ್ನು ನೀಡುವುದರ ಮೂಲಕ ನಮಗೆ ನಾವೇ ‘ನಾವು ಜೀವಂತವಾಗಿದ್ದೇವೆ’ ಎಂಬುದನ್ನು ಕಂಡುಕೊಳ್ಳುವುದು ನಡೆಯುತ್ತದೆ. ನಿಷ್ಠೆಯಿಂದ, ಆಸ್ಥೆಯಿಂದ, ತಪಸ್ಸೋ ಎಂಬಂತೆ ನೂಪುರ ಭ್ರಮರಿಯ ಈ ಉಪಕ್ರಮ ಆರಂಭವಾಗಿದೆ. ನೂಪುರ ಭ್ರಮರಿಯಿಂದ ಈ ಮೂಲಕ ಪ್ರೇರಣೆ, ಮಾರ್ಗದರ್ಶನ ಅಲ್ಲಲ್ಲಿ ಆಗಾಗ ನಡೆಯಲಿ ಎಂದು ಆಶಿಸಿದರು.
ಭರತನಾಟ್ಯದಲ್ಲಿ ಪುರುಷ ಪಾತ್ರಗಳಿಗೆ ಇರುವ ವೇಷಭೂಷಣದ ಬಗ್ಗೆ ಖೇದ ವ್ಯಕ್ತಪಡಿಸಿದ ಉಪಾಧ್ಯಾಯರು ಇಂದಿನ ಭರತನಾಟ್ಯಾದಿ ನೃತ್ಯಗಳಲ್ಲಿ ಪುರುಷರಿಗೆ ತಕ್ಕ ವೇಷಭೂಷಣಗಳಿಲ್ಲ. ಪುರಾಣಾದಿ ಸಂದರ್ಭಗಳನ್ನು ತೆಗೆದುಕೊಂಡರೆ ಯಾವುದೇ ರಂಗ ಪ್ರದರ್ಶನಗಳಲ್ಲಿ ಸರಿಯಾದ ಶಿರೋಭೂಷಣವಿಲ್ಲದಿದ್ದರೆ ಒಪ್ಪಿಕೊಳ್ಳಲು ಮನಸ್ಸು ಕಷ್ಟಪಡುವುದು ಸಹಜ. ಆದರೆ ಭರತನಾಟ್ಯಾದಿ ನೃತ್ಯಗಳಲ್ಲಿ ನರ್ತಕರಿಗೆ ಶಿರೋಭೂಷಣದ ಕಲ್ಪನೆಯೇ ಇಲ್ಲ. ಆದಾಗ್ಯೂ ಕಳೆದ ಹಲವು ದಶಕಗಳಿಂದ ಹಲವು ಚಿತ್ರ, ನೃತ್ಯ,ಗಳು ಶಿರೋಭೂಷಣ ರಹಿತ ಕಲ್ಪನೆಯನ್ನೇ ನಮಗೆ ಕೊಡುತ್ತಾ ಬಂದಿದ್ದು; ರೂಢಿಯಾಗಿ ಹೋಗಿರುವುದರಿಂದ ಅದು ಕೊರತೆಯಾಗಿ ಕಾಣುತ್ತಿಲ್ಲ. ಎಂದು ವಿಶ್ಲೇಷಿಸಿದರು.
ಭರತನಾಟ್ಯ ಪರಂಪರೆಯಲ್ಲೇ ಹೆಚ್ಚಿನ ಸಾಂಪ್ರ್ರದಾಯಿಕ ನೆಲೆಯನ್ನು ಹೊಂದಿರುವ ವರ್ಣವನ್ನು ಈ ಪ್ರಯೋಗಕ್ಕೆ ಬಳಸಿಕೊಂಡಿದ್ದು ನೃತ್ಯದ ಇತಿಹಾಸದಲ್ಲೇ ಪ್ರಪ್ರಥಮ. ‘ಬಾಲಾಲಾಪ’ ವೆಂಬ ಹೆಸರಿನೊಂದಿಗೆ ಗುರುತಿಸಿಕೊಂಡಿದ್ದ ಈ ವರ್ಣದ ವಿನ್ಯಾಸಮಕ್ಕಳ ಶಿಕ್ಷಣ, ಶಿಕ್ಷೆ ಮತ್ತು ಬಾಲ್ಯದ ಒತ್ತಡದ ಹಿನ್ನೆಲೆಯ ವಸ್ತುವನ್ನು ಹೊಂದಿತ್ತು. ಈ ವರ್ಣವನ್ನು ಬೆಂಗಳೂರಿನ ಹೆಸರಾಂತ ನಟುವನ್ನಾರ್ ಕಲಾವಿದ ಪ್ರಸನ್ನಕುಮಾರ್ ರಚಿಸಿದ್ದು; ಹಿನ್ನೆಲೆ ಗಾಯಕ ಬಾಲಸುಬ್ರಹ್ಮಣ್ಯ ಶರ್ಮ ಸಂಗೀತ ಸಂಯೋಜಿಸಿದ್ದಾರೆ.
ಭರತನಾಟ್ಯದ ಕಛೇರಿಮಾರ್ಗ ಪರಂಪರೆಯ ಬಳಕೆಯನ್ನು ಕೊಂಚ ಬದಲಾವಣೆಯ ಸಹಿತ ವರ್ಣಕ್ಕೆ ಹೊಂದಿಸಿಕೊಳ್ಳಲಾಗಿತ್ತು. ಅದರಲ್ಲೂ ಬಹುಪಾಲು ಸಂದರ್ಭಗಳಲ್ಲಿ ಏಕವ್ಯಕ್ತಿಯಾಗಿ ಪ್ರದರ್ಶಿತಗೊಳ್ಳುವ ಸಾಕಷ್ಟು ಕಟ್ಟುಪಾಡುಗಳಿರುವ ವರ್ಣವನ್ನು ಸಮೂಹನೃತ್ಯವಾಗಿ, ಸಾಮಾಜಿಕ ವಸ್ತುವಿನ ನಿರೂಪಣೆಗೆ ಒಗ್ಗಿಸಿರುವ ಪರಿ ಶ್ಲಾಘನೀಯ. ಸಾಮಾನ್ಯವಾಗಿ ನಾಯಿಕಾ ನಾಯಕಾ, ಭಕ್ತಿಭಾವಕೇಂದ್ರವಾದ ವರ್ಣವನ್ನು ಆಯ್ದುಕೊಂಡು ಸಾಮಾಜಿಕ ಸಂದೇಶದ ವಸ್ತುವನ್ನು ಅದಕ್ಕೆ ಸಂಯೋಜಿಸಿ ಜನಸಾಮಾನ್ಯರಿಗೆ ಯಶಸ್ವಿಯಾಗಿ ಮುಟ್ಟಿಸಬಹುದೆಂದು ಪುತ್ತೂರಿನ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ವಿದ್ವಾನ್ ಬಿ. ದೀಪಕ್ ಕುಮಾರ್ ಮತ್ತು ಬಳಗ ಸಾಧಿಸಿ ತೋರಿದರು. ವರ್ಣಕ್ಕೆ ಅಳವಡಿಸಲಾದ ಕನ್ನಡದ್ದೇ ಆದ ಸಾಹಿತ್ಯ ಮತ್ತು ಕರ್ಣಾನಂದಕರವಾದ ಸಂಗೀತ ಸಂಯೋಜನೆ, ಅದಕ್ಕೊಪ್ಪುವ ಸಂಚಾರಿ ಭಾವಗಳು, ಭಾವಗಳಿಗೆ ಅನುರೂಪವಾದ ಜತಿವಿನ್ಯಾಸ- ಹೀಗೆ ಎಲ್ಲವೂ ಪ್ರೇಕ್ಷಕರನ್ನು ರಸದೃಷ್ಟಿಯಲ್ಲಿ ಹಿಡಿದಿರಿಸುವಲ್ಲಿ ಯಶಸ್ವಿಯಾದವು. ಸಾಮಾನ್ಯವಾಗಿ ಪುರಾಣ ಸ್ಪರ್ಶ ಕೊಡಬೇಕಾದ ಅಗತ್ಯವಿದ್ದರೂ ಅದನ್ನು ಹೆಚ್ಚಾಗಿ ಕೊಡದೆ ಸಮಕಾಲೀನ ಸಮಸ್ಯೆಯನ್ನೇ ಎತ್ತಿ ತೋರಿಸುವ ವಸ್ತುವು ಗೆಲ್ಲಲು ಅದರ ಒಟ್ಟು ನಿರ್ಮಾಣದ ಹಿಂದಿನ ನಿರ್ದೇಶಕರಿಗೆ ಮತ್ತು ಸಂಯೋಜಕರಿಗೆ ಅಭಿನಂದನೆ ಸಲ್ಲಲೇಬೇಕು. ಇಂದಿನ ಮಕ್ಕಳಲ್ಲಿ ಕಂಡುಬರುತ್ತಿರುವ ಶಿಕ್ಷಣದ ಹೊರೆ, ಗುರುಕುಲಕ್ರಮದ ಒಳಿತುಗಳು, ಅಂಕವೇ ಕೇಂದ್ರಿತವಾಗುತ್ತಿರುವ ವ್ಯವಸ್ಥೆ ಇತ್ಯಾದಿಯಾಗಿ ಹಲವು ಆಯಮಗಳಲ್ಲಿ ಪ್ರದರ್ಶಿತವಾದ ವರ್ಣವನ್ನು ಆರು ನೃತ್ಯ ಕಲಾವಿದರು ಪ್ರಸ್ತುತಿಪಡಿಸಿದ ರೀತಿ ಅಭಿನಂದನೀಯ.
ಇದರ ತರುವಾಯ ಬೇರೆ ಬೇರೆ ವಾದ್ಯಸಂಗೀತವನ್ನು ಆಯ್ದುಕೊಂಡು ಆಡಿಯೋ ರೆಕಾರ್ಡೆಡ್ ವ್ಯವಸ್ಥೆಯಲ್ಲಿ ಪ್ರದರ್ಶಿಸಿದ ನೃತ್ಯನಾಟಕ ‘ಪಾವನಗಂಗಾ ಪತಿತ ತರಂಗ ’– ಗಂಗೆಯನ್ನೂ ಒಳಗೊಂಡಂತೆ ನೀರಿನ ಮಾಲಿನ್ಯ, ಪಾವಿತ್ರ್ಯದ ಕುರಿತಾಗಿ ಸೊಗಸಾಗಿ ಮೂಡಿಬಂತು. ಇತ್ತೀಚೆಗೆ ನಡೆದ ಉತ್ತರಾಖಂಡ ದುರಂತದ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ ಈ ನೃತ್ಯನಾಟಕವು ದೀಪಕ್ ಕುಮಾರ್ ಅವರ ನೃತ್ಯನಿರ್ದೇಶನದಲ್ಲಿ ಸಮೂಹದಲ್ಲಿ ಮೂಡಿಬಂದಿತ್ತು. ಸಾಹಿತ್ಯದ ಬಳಕೆಯನ್ನೇ ಮಾಡದೆ ಇದ್ದರೂ ಅಲ್ಲಲ್ಲಿ ಸಂಭಾಷಣೆಸಹಿತವಾಗಿ ಹೊಂದಿಸಿ ಸಂಗೀತದ ಮಟ್ಟುಗಳೇ ಪ್ರಧಾನವಾಗಿದ್ದ ಈ ಫ್ಯೂಷನ್ ನೇರವಾಗಿ ಮನಮುಟ್ಟುವಂತಿತ್ತು. ಹೊಂದಿಸಿಕೊಂಡ ಸಂಗೀತದ ಪ್ರತಿಯೊಂದು ನುಡಿತಕ್ಕೂ ಸರಿಯಾಗಿ ಆಂಗಿಕ ಮತ್ತು ಭಾವವಿನ್ಯಾಸಗಳು ಪ್ರಕಟವಾದವು. ಭರತನಾಟ್ಯದ ಚಲನೆಗಳನ್ನು ನಾಟಕೀಯ ಚಲನೆಗಳೊಂದಿಗೆ ಹೊಂದಿಸಿದ ಈ ಫ್ಯೂಷನ್ನ ವೇಷಭೂಷಣಗಳು (ಸಜೆಸ್ಟಿವ್ ಆಗಿದ್ದು) ಸರಳ ಸುಂದರವಾಗಿ ಕಣ್ಮನ ಸೆಳೆದವು. ನಂತರ ನಡೆದ ಸಂವಾದ ಮತ್ತು ಪ್ರಶ್ನೋತ್ತರ ಸಮೀಕ್ಷೆಯಲ್ಲಿ ಮುಕ್ತ ವಿಮರ್ಶೆಗಳು ನೆರೆದ ಕಲಾಸಕ್ತರು ಮತ್ತು ನೃತ್ಯಗುರುಗಳಿಂದ ಬಂದು ನೃತ್ಯದ ಆಯಾಮವನ್ನು ಕಂಡುಕೊಳ್ಳಲು ಅನುವಾದವು. ಇವೆರಡೂ ಪ್ರಯೋಗಗಳು ಸಣ್ಣ ಮಕ್ಕಳಿಂದ ಮೊದಲ್ಗೊಂಡು ಭರತನಾಟ್ಯದ ಪರಿಚಯವೇ ಅಷ್ಟಾಗಿ ಇರದಿದ್ದವರಿಗೂ ಈ ಪ್ರಯೋಗಗಳು ಸ್ಪಷ್ಟವಾಗಿ ಅರ್ಥವಾಗುವಮ್ತಾಗಿ ಕಣ್ಮನ ಸೆಳೆದದ್ದು ಇಲ್ಲಿನ ಹೈಲೈಟ್.
ಬೆಂಗಳೂರಿನಲ್ಲಿ ನಡೆದ ಪ್ರಥಮ ಪ್ರಯೋಗದಲ್ಲಿ ಡಾ.ಪದ್ಮಾ ಸುಬ್ರಹ್ಮಣ್ಯಂ ಶಿಷ್ಯಪರಂಪರೆಯ ಡಾ. ಶೋಭಾ ಶಶಿಕುಮಾರ್ ಅವರ ಪ್ರಸ್ತುತಿಯಲ್ಲಿ ಮತ್ತೊಂದು ಪ್ರಯೋಗವನ್ನು ಏರ್ಪಾಡು ಮಾಡಲಾಗಿತ್ತು. ಸ್ತ್ರೀ ನಿಜಜೀವನದಲ್ಲಿ ಅಂದುಕೊಳ್ಳುವ ಶಕ್ತಿ ಮತ್ತು ದೌರ್ಬಲ್ಯಗಳ ಸಂಕೇತವಾಗಿ ‘ಸ್ತ್ರೀಶಕ್ತಿ’ ಎಂಬ ಏಕವ್ಯಕ್ತಿ ನೃತ್ಯರೂಪಕವನ್ನು ಪ್ರದರ್ಸಿಸಿದವರು ಡಾ. ಶೋಭಾ. ಸ್ತ್ರೀ ಹಾಗೂ ಸ್ತ್ರೀತ್ವದ ಅಂತರಗಳ ಕುರಿತ ಈ ವಸ್ತುವು ಮನೋಜ್ಞವಾಗಿ ಹೊರಹೊಮ್ಮಿ ಸ್ತ್ರೀ ಸಬಲೀಕರಣದ ದಾರಿಯನ್ನು ಸಮರ್ಥವಾಗಿ ಗ್ರಹಿಸಿ ಪ್ರದರ್ಶಿಸಿದ ಪ್ರಯೋಗವಾಗಿ ಕಂಡುಬಂತು. ಸ್ತ್ರೀಯರು ಅವನತಿಯ ದಾರಿಯಿಂದ ಹೊರಬಂದು ಅಭಿವೃದ್ಧಿ ಪಥದತ್ತ ನಡೆಯಲು ಅವಳ ಸ್ತ್ರೀತ್ವ ಜಾಗೃತಿಯಾದರೆ ಸಾಧ್ಯ ಎಂಬ ಸಂದೇಶದೊಂದಿಗೆ ಸಮರ್ಥವಾಗಿ ಮೂಡಿಬಂತು. ಅದರಲ್ಲೂ ಮಹಿಳೆಯ ವಿಭಿನ್ನ ಮುಖಗಳನ್ನು ಪರಿಚಯಿಸಿ ಸಂಗೀತ ಮತ್ತು ಸಾಹಿತ್ಯದ ಕ್ರಮಬದ್ಧವಾದ ಯೋಜನೆಯಲ್ಲಿ ಈ ನೃತ್ಯಪ್ರದರ್ಶನ ಸಿಂಹಪಾಲು ಪಡೆಯಿತು. ಸಾಮಾನ್ಯವಾಗಿ ಸಮೂಹಪ್ರದರ್ಶನಕ್ಕೊಪ್ಪುವ ಅಭಿವ್ಯಕ್ತಿಯನ್ನೂ ಏಕವ್ಯಕ್ತಿ ಪ್ರಯೋಗವನ್ನಾಗಿ ಮಾಡಿಕೊಂಡ ಜಾಣ್ಮೆ, ನಾಟ್ಯಶಾಸ್ತ್ರದ ಮಾರ್ಗಪರಂಪರೆಗೆ ನಿಷ್ಠವಾದ ಆಂಗಿಕ ವಿನ್ಯಾಸ ಹಿಮ್ಮೇಳ ಸಹಿತವಾಗಿ ಮೂಡಿದ್ದು ಸ್ತುತ್ಯರ್ಹ. ಪುರಾಣ ಕಥೆಗಳೊಂದಿಗೆ ಅಲ್ಲಲ್ಲಿ ಹೊಂದಿಕೊಂಡು ಅದಕ್ಕೆ ಇಂದಿನ ಸಾಮಾಜಿಕ ವಸ್ತುವನ್ನೂ ಹೊಂದಿಸಿದ ಪ್ರಯೋಗವಾಗಿ ಸ್ತ್ರೀಶಕ್ತಿಯು ವಿಶಿಷ್ಟವಾದ ಸಂವೇದನೆಯನ್ನೇ ನೀಡಿತ್ತು. ಇಂದಿನ ಕಾಲಕ್ಕೆ ಒಪ್ಪುವ ಅಭಿನಯಗಳು ಇಲ್ಲಿ ವಿಶಿಷ್ಟವಾಗಿ ಕಂಡುಬಂದವು.
ಒಟ್ಟಿನಲ್ಲಿ ನೃತ್ಯಪ್ರಯೋಗದ ದಿಕ್ಕು ಹೇಗಿರಬೇಕು? ನೃತ್ಯವೊಂದು ಯಾವ್ಯಾವ ನೆಲೆಯಲ್ಲಿ ಬೆಳೆಯಬೇಕು ? ಯಾವ ಮಾದರಿಯ ಅಂಶಗಳನ್ನು ನೃತ್ಯಸಂಶೋಧನೆಯ ಪ್ರದರ್ಶನದಲ್ಲಿ ಆಯ್ದುಕೊಂಡು ಪ್ರಸ್ತುತಿಗೊಳಿಸಬೇಕು ಎಂಬ ಪ್ರಶ್ನೆಗಳಿಗೆ ಸೂಕ್ತ ಉತ್ತರ ಕಂಡುಕೊಳ್ಳುವಂತಿತ್ತು ಈ ಕಾರ್ಯಕ್ರಮ. ಅಸಂಖ್ಯಾತ ಸಂಖ್ಯೆಯಲ್ಲಿ ನೆರೆದಿದ್ದ ಜನತೆ ಕಾರ್ಯಕ್ರಮವನ್ನು ಕಂಡು ಪುಳಕಗೊಂಡರು. ಅದರಲ್ಲೂ ಪ್ರೇಕ್ಷಕರ ಅಭಿಪ್ರಾಯಕ್ಕೆ ಪ್ರಾಶಸ್ತ್ಯವಿತ್ತು ಸಾಮಾಜಿಕ ಸಂವಹನ ಉದ್ದೇಶದಿಂದ ಪಡಿಮೂಡಿದ ಸಮಾರಂಭವು ನೂಪುರ ಭ್ರಮರಿ ಸಂಸ್ಥೆ ಮತ್ತು ಸಂಶೋಧಕಿಯ ನೃತ್ಯಪ್ರೇಮಕ್ಕೆ ಮತ್ತು ಅದರ ವಿಸ್ತಾರಕ್ಕೆ ಉದಾಹರಣೆ