Author: ಮನೋರಮಾ. ಬಿ.ಎನ್
ಹಿರಿಯರೊಬ್ಬರು ಮೊನ್ನೆ ಹೀಗೆಯೇ ಭೇಟಿಯಾದಾಗ ಆವೇಶದಿಂದಲೇ ತಮ್ಮ ಅಳಲನ್ನು ತೋಡಿಕೊಂಡಿದ್ದರು. ‘ಸಂಗೀತ -ನೃತ್ಯ ವಿದುಷಿಯರು, ವಿದ್ವಾನರು ಎಂದೆನಿಸಿಕೊಂಡವರಿಗೆ ಸರಿಯಾಗಿ ರಾಗಹಾಕಿ ಹಾಡಲು ಬರುವುದಿಲ್ಲ. ಸ್ವರ ಪ್ರಸ್ಥಾರ ದೇವರಿಗೇ ಗತಿ. ಅಂಗ-ಭಾವ ಶುದ್ಧಿ ಅಫೋಶನ. ನೃತ್ಯದವರಂತೂ ಗುರುಗಳು ಹೇಳಿಕೊಟ್ಟ ನಾಲ್ಕು ವರ್ಣಗಳಲ್ಲೇ ಇಡೀ ಜೀವಿತವನ್ನೇ ರೂಪಿಸಿಕೊಳ್ಳುತ್ತಾರೆ. ಸೃಷ್ಟಿಶೀಲತೆಯೆಂಬ ಗಂಧಗಾಳಿಯೂ ಇಲ್ಲ. ಪರಸ್ಪರ ಕಲೆ, ಕಲಾವಿದರನ್ನು ಪ್ರೀತಿಯಿಟ್ಟು ಕಾಣುವ ಸಂಸ್ಕಾರವಂತೂ ಮೊದಲೇ ಇಲ್ಲ. ವೃತ್ತಿಪರತೆ ಏನೆಂದೇ ಗೊತ್ತಿಲ್ಲ. ಬೀದಿಗೊಂದರಂತೆ ಅಂಗಡಿ ತೆರೆದು ಸೀನಿಯರ್ ಹಂತದಲ್ಲೇ ಪುಟ್ಟ ಮಕ್ಕಳಿಗೆ ಪಾಠ ಹೇಳಿಕೊಡಲಾರಂಭಿಸಿ ಕಲಿಕಾ ಕ್ರಮವನ್ನೇ ಹಾಳು ಮಾಡುತ್ತಾರೆ. ಜಾತ್ರೆ, ಸ್ಕೂಲ್ ಡೇ, ಉತ್ಸವ ಎಂದೆಲ್ಲಾ ಡ್ಯಾನ್ಸ್ ಮಾಡಿಸಿ ಮಕ್ಕಳನ್ನು ವೇದಿಕೆಗೆ ಹತ್ತಿಸುವ ಗತ್ತುಗಾರಿಕೆ ತೋರಿಸುತ್ತಾರೆ. ರಂಗಪ್ರವೇಶ, ವಾರ್ಷಿಕೋತ್ಸವ ಎಂಬೆಲ್ಲಾ ನೆವದಲ್ಲಿ ಹಣ ಪೀಕುತ್ತಾರೆ. ಆಡಿದ್ದೇ ಆಟ, ಮಾಡಿದ್ದೇ ಕಾನೂನು. ಇವರದ್ದೇನಿದ್ದರೂ ಪರೀಕ್ಷೆಗಳಲ್ಲಿ ಮಾತ್ರ ಪರಾಕ್ರಮ. ಹಾಗೆ ನೋಡಿದರೆ, ಕರ್ನಾಟಕದ ಸಂಗೀತ ನೃತ್ಯ ಪರೀಕ್ಷೆಗಳಿಗೆ ಹೊರರಾಜ್ಯಗಳಲ್ಲಿಕವಡೆ ಕಾಸಿನ ಕಿಮ್ಮತ್ತೂ ಇಲ್ಲ. ಇಲ್ಲಿ ವಿದ್ವತ್ ಮಾಡಿಕೊಂಡವರು ಅಲ್ಲಿ ಕಲಿಯುತ್ತಿರುವ ಎಳೆಯರಿಗೆ ಸಮ ಎಂದು ನನಗೆ ಎಷ್ಟೋ ಬಾರಿ ಕಂಡದ್ದಿದೆ. ಪರೀಕ್ಷೆ ಮಾಡುವುದು ಎಸ್ಸೆಸ್ಸೆಲ್ಸಿ ಬೋರ್ಡು ಬೇರೆ ! ಆ ಡಿಗ್ರಿಗಳು ಇಂದಿನ ಯಾವ ಡಿಗ್ರಿಗಳಿಗೆ ಸಮ ಎಂಬುದು ಕಾನೂನಿನಾತ್ಮಕವಾಗಿಯೂ ಬಗೆಹರಿಯದ ಪ್ರಶ್ನೆ ! ಜೂನಿಯರ್ ಎಂತೂ ಹೇಗೆ ಮಾಡಿದರೂ ಪಾಸಾಗುವುದು ಇದ್ದೇ ಇದೆ. ಹೀಗಿದ್ದಾಗ ವಿದ್ವತ್, ಸೀನಿಯರ್‌ಗೆಲ್ಲಾ ಬೆಲೆ ಎಲ್ಲಿ? ಹಾಗಾಗಿ ವಿದ್ವತ್ ಪಾಸು ಮಾಡಿಕೊಂಡವರು ಎಂದಾಗ ಅನುಮಾನದಿಂದಲೇ ನೋಡುತ್ತೇನೆ. ಅಂದಹಾಗೆ ನಿಮ್ಮ ಪರೀಕ್ಷಾ ಅರ್ಹತೆ ಏನು ?’
ಕೇಳಿ ಪಿಚ್ಚೆನ್ನಿಸಿತಾದರೂ ಯತಾರ್ಥವನ್ನೇ ಹೇಳಿದ್ದಾರಷ್ಟೇ ! ಇನ್ನಾದರೂ ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುವುದನ್ನು ನಿಲ್ಲಿಸಬೇಕೆಂದೆನಿಸಿತು. ಅಷ್ಟಕ್ಕೂ ಈ ಆರೋಪ ಇಂದು ನಿನ್ನೆಯದಲ್ಲವಷ್ಟೇ ! ತಪ್ಪೆನಿಸಲಿಲ್ಲ. ಆದರೂ ಅರೆಕ್ಷಣ, ಉತ್ತರ ಹೇಳುವುದಕ್ಕೂ ಮುಜುಗರ. ನಾಲಿಗೆ ತಡವರಿಸಿತು. ಸುಮ್ಮನೆ ನಕ್ಕೆ.
ಇಂತಹ ಒಂದಲ್ಲ, ಪರೀಕ್ಷೆಗಳ ಕುರಿತ ಅಭಿಪ್ರಾಯ ದಶಕಗಳಿಂದಲೂ ಚಾಲ್ತಿಯಲ್ಲಿದೆಯೆಂದರೆ ಒಮ್ಮೆ ಸುಮ್ಮಗೆ ನಮ್ಮನ್ನೇ ನಾವು ಅವಲೋಕನ ಮಾಡಿಕೊಂಡರೂ ಸಾಕು ; ತಪ್ಪು ಒಬ್ಬಿಬ್ಬರದ್ದಲ್ಲ ಎಂಬುದು ಸ್ಪಷ್ಟವಾಗುತ್ತದೆ. ದುಂಬಾಲು ಬೀಳುವ ಪೋಷಕರಿಂದ ಹಿಡಿದು, ಹಣ-ಪ್ರತಿಷ್ಠೆಗಾಸೆಗಾಗಿ ಪರೀಕ್ಷೆಗೆ ಕೂರಿಸುವ ಭೂಪ ಗುರು ಶಿಕ್ಷಕವೃಂದದ ವರೆಗೆ ; ಶ್ರದ್ಧೆಯಿದ್ದೋ, ಇಲ್ಲದೆಯೋ, ಒತ್ತಾಯಕ್ಕೋ, ತೆವಲಿಗೋ ಒಟ್ಟಿನಲ್ಲಿ ಕಾಟಾಚಾರಕ್ಕೆ ಎಂಬಂತೆ ಅಭ್ಯಾಸವೂ ಇಲ್ಲದೆ ನೃತ್ಯ ಕಲಿತು ಪರೀಕ್ಷೆಗೆ ಕಟ್ಟುವ ವಿದ್ಯಾರ್ಥಿಗಳಿಂದ ಹಿಡಿದು, ಬೇರೆ ಬೇರೆ ಲೋಭ-ಒತ್ತಾಯ-ಆಮಿಷ-ಉದಾಸೀನಗಳಿಗೆ ಬಲಿಯಾಗುವ ಪರೀಕ್ಷಕರ ವರೆಗೆ ; ಬಹುವೆಡೆಗಳಲ್ಲಿ ಅಸಂಬದ್ಧವಾಗಿ ಶಿಸ್ತು, ಮುನ್ನೆಚ್ಚರಿಕೆ ಇಲ್ಲದೆ ನಡೆಯುವ ಪರೀಕ್ಷಾ ಕ್ರಮದಿಂದ ಹಿಡಿದು ಪರೀಕ್ಷಕರ ನೇಮಕಾತಿ, ಸಂಭಾವನೆ, ಅಂಕಪರಿಶೀಲನೆ, ಪರೀಕ್ಷಾ ಪುಸ್ತಕ ನಿರ್ವಹಣೆ, ತನಿಖೆ ಇತ್ಯಾದಿಗಳಲ್ಲಿ ಉಪೇಕ್ಷೆ ತೋರಿಸುತ್ತಿರುವ ಮಂಡಳಿ, ಸಂಗೀತ-ನೃತ್ಯ ಕಲಿಕೆಯ ಪದವಿ, ಸ್ನಾತಕ ಪದವಿಯೆಂಬ ಹುಳಿದ್ರಾಕ್ಷಿಯ ಅಭಾವ ವ್ಯಾಪಕ ಮಾಡುತ್ತಿರುವ ಸರ್ಕಾರದ ವರೆಗೆ ಹಲವಾರು ಲೋಪಗಳು ನಮ್ಮನ್ನೇ ಮತ್ತೆ ಮತ್ತೆ ನಿಂತು ಅಣಕಿಸುತ್ತವೆ. ಬೇರೇನಕ್ಕಲ್ಲ. ಎಲ್ಲವೂ ಎಲ್ಲರದ್ದೂ ಸ್ವಯಂಕೃತ ಅಪರಾಧವೇ ತಾನೇ ! ನಾವು, ನಮ್ಮಿಂದ, ನಮಗಾಗಿ ತೋಡಿಕೊಳ್ಳುತ್ತಿರುವ ಖೆಡ್ಡಾ !
ಹಾಗಂತ ಈ ಮಾತಿಗೆ ಅಪವಾದಗಳಿಲ್ಲವೆಂದಲ್ಲ. ಪೂರಕವೋ ಎಂಬಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಈ ಸಾಲಿನಿಂದ ಸಂಗೀತ-ನೃತ್ಯ ಪರೀಕ್ಷೆಗಳ ಕುರಿತಂತೆ ಸಮಯೋಚಿತವೆನಿಸುವ ಮಾರ್ಪಾಟು ; ಉದಾ : ನೃತ್ಯ ಸಂಸ್ಥೆಗಳು ಕಡ್ಡಾಯವಾಗಿ ನೋಂದಣಿಯಾಗಿರುವುದು, ಪರೀಕ್ಷಾ ಕ್ರಮಗಳಲ್ಲಿ ಸಮಯ ಪರಿಪಾಲನೆ, ಪರೀಕ್ಷಕರನ್ನು ಅವರಿರುವ ಸ್ಥಳಗಳನ್ನು ಹೊರತುಪಡಿಸಿ ಹೊರಪ್ರದೇಶಗಳಿಗೆ ನೇಮಕ ಮಾಡುವುದು..ಹೀಗೆ ಒಂದಷ್ಟು ಅಂಶಗಳನ್ನು ಕಡ್ಡಾಯ ಮಾಡಿರುವುದು ಶ್ಲಾಘನೀಯವೇ ಹೌದು.
ಆದರೆ ಇವಿಷ್ಟು ಮಾತ್ರ ಪರೀಕ್ಷೆಗಳಲ್ಲಿ ಸುಧಾರಣೆ ತರಬಲ್ಲದೇ ? ದಿವಾಳಿಯಾಗುತ್ತಿರುವ ಸಂಗೀತ ನೃತ್ಯ ಪರೀಕ್ಷೆಗಳನ್ನು ಪೋಷಿಸಬಲ್ಲುದೇ? ಕಡಿವಾಣ ಹಾಕಿ ಕಟಿಬದ್ಧವನ್ನಾಗಿಸೀತೇ? ಸುಧಾರಣೆಗಳ ನಿಟ್ಟಿನಲ್ಲಿ ಈ ಹೆಜ್ಜೆ ಪ್ರಶಂಸನೀಯವಾದರೂ ಅವುಗಳ ಕಾರ್ಯಕ್ಷಮತೆ, ನಿರ್ವಹಣೆ, ಪರಿಪಾಲನೆ, ಎಲ್ಲರ ಕರ್ತವ್ಯಗಳು ಸವಾಲೂ ಹೌದು ! ಒಂದೆರಡು ದಿನಗಳಲ್ಲಿ ದಶಕಗಳಾದಿಯಾಗಿ ರೂಢಿಗೊಂಡು ಬಂದ ಅಭ್ಯಾಸಗಳನ್ನು, ಮನೋವೃತ್ತಿಗಳನ್ನು ಬದಲಾಯಿಸುವುದು ಅಷ್ಟು ಸುಲಭಸಾಧ್ಯವಲ್ಲ. ವರುಷಗಳ ಕಾಲ ನಿರಂತರ ಶ್ರಮ, ಸಮಯೋಚಿತ ಶಿಸ್ತು, ಅಚಲ ಶ್ರದ್ಧೆ ಎಲ್ಲಾ ಹರಹಿನೆಡೆಯಿಂದಲೂ ಒಗ್ಗೂಡಿದಾಗಲಷ್ಟೇ ನಿಂತ ನೀರಾಗಿರುವ, ಅಬ್ಬೇಪಾರಿಯಂತಾದ ನೃತ್ಯ ಪರೀಕ್ಷೆಗಳಿಗೆ ಮೇಘರಾಜನ ವರ್ಷಧಾರೆಯಾದೀತು. ಹಾಗಾದಾಗಲಷ್ಟೇ ನೆರೆಯ ನಾಡಿನ ಕಲಾ ಪರೀಕ್ಷೆಗಳ ಶ್ರೇಷ್ಠತೆಯಲ್ಲಿ ನಮ್ಮದೂ ‘ಸೈ’ ಎನಿಸಿಕೊಂಡೀತು ; ಬಲಾಬಲ ಸ್ಪರ್ಧೆ ಕೊಟ್ಟೀತು.
ಭಾರತೀಯ ಶಿಕ್ಷಣದ ಸ್ವರೂಪ ವಿಭಿನ್ನಮುಖವಾಗಿ ಹೊರಳುವಾಗ ಜತನದಿಂದ ತನ್ನತನವನ್ನು ಉಳಿಸಿಕೊಂಡದ್ದು ಇವೇ ಸಂಗೀತ ನೃತ್ಯ ಕಲೆಗಳು ; ಸಂಸ್ಕೃತಿಯ ಶ್ರೇಷ್ಠ ವಾರೀಸುದಾರರು, ಸಂವಹನಕಾರರು. ಹಾಗಾಗಿ ವಿಶೇಷ ಆಸ್ಥೆ ನಿರತವಾಗಿ ಇವುಗಳೆಡೆಗೆ ಪ್ರವಹಿಸುತ್ತಿರಲೆಬೇಕು. ಅದು ನಮ್ಮ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಮಾಡಿಕೊಳ್ಳಲೇಬೇಕಾದ ಅತ್ಯಗತ್ಯ ಜಲಮರುಪೂರಣ.
ಅಂದಹಾಗೆ, ನೂಪುರ ಭ್ರಮರಿಯ ತೃತೀಯ ವಾರ್ಷಿಕ ಸಂಭ್ರಮದ ವಿಶೇಷ ಸಂಚಿಕೆಯ ಅನಾವರಣ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಸುದಿನ ಸರಳವಾಗಿ ನೆರವೇರುವುದರ ಮೂಲಕ ಮತ್ತ್ತೊಂದು ಮಜಲಿಗೆ ಏರಿದುದರ ಸಂತಸ ಮನೆ ಮಾಡಿದೆ. ನರ್ತನ ಜಗತ್ತಿನ ಪರಿಭ್ರಮಣದ ಕೈಂಕರ್ಯಕ್ಕೆ ದಿನದಿಂದ ದಿನಕ್ಕೆ ಒಗ್ಗೂಡುತ್ತಿರುವವರ ಸಂಖ್ಯೆ ಮನೋಬಲಕ್ಕೆ ಮತ್ತಷ್ಟು ಇಂಬು ನೀಡುತ್ತಿದೆ.
ಬೆಳಕಿಂಡಿ ಇದೆ. ಬೆಳಕಿನೆಡಿಗೆ ಪಯಣ ಸಾಗಬೇಕಿದೆ. ಪಯಣ, ಪರಿಭ್ರಮಣ ನಿರಂತರವಾಗಲಿ.
ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ
ಪ್ರೀತಿಯಿಂದ
ಸಂಪಾದಕರು