ಅಂಕಣಗಳು

Subscribe


 

ನೃತ್ಯ ಸಂಯೋಜನೆ ಹೇಗಿರಬೇಕು?- ಒಂದಷ್ಟು ಜಿಜ್ಞಾಸೆ

Posted On: Thursday, December 15th, 2011
1 Star2 Stars3 Stars4 Stars5 Stars (No Ratings Yet)
Loading...

Author: ನಿವೇದಿತಾ ಶ್ರೀನಿವಾಸ್, ಸಂಶೋಧಕರು, ನೃತ್ಯ ಕಲಾವಿದರು, ’ಸ್ತುತಿ ನಾಟ್ಯಶಾಲೆ’, ಬೆಂಗಳೂರು

ಇತ್ತೀಚೆಗಷ್ಟೆ ಭೇಟಿಯಾದ ಹಳೆ ಸ್ನೇಹಿತೆ(ನೃತ್ಯಗಾರ್ತಿ)ಯೊಬ್ಬಳು ಹೀಗೇ ಮಾತಾಡುತ್ತಾ, ನಮ್ಮ ಅಭಿನಯ ಬಂಧಗಳಾದ ಪದ, ಜಾವಳಿಗಳ ಕಡೆಗೆ ಗಮನ ಸೆಳೆದಳು. ಸಾಹಿತ್ಯದ ಒಂದು ಸಾಲಿಗೆ ಎಷ್ಟು ಕೈಗಳು(ಹಸ್ತಾಭಿನಯ) ಎಂದು ನಿಗದಿ ಪಡಿಸುವುದು, ಪ್ರತಿ ಬಾರಿ ಒಂದೇ ಸಾಲು ಹಾಡುವಾಗ, ಅದೇ ಅರ್ಥ ಬರುವಂತೆ ಬೇರೆ ಬೇರೆ ಹಸ್ತಗಳನ್ನು ಜೋಡಿಸುವುದು ಮುಂತಾದ ಕೆಲವರ ಪರಿಪಾಠ. ಹಾಗಾಗಿ ಅವಳು ಕೇಳಿದ್ದು ಇಂದಿನ ಈ ಜನಪ್ರಿಯ ರೂಢಿಯ ಬಗ್ಗೆ; ಪ್ರತಿ ಹಸ್ತ ನೆನಪಿಟ್ಟುಕೊಳ್ಳುವುದರಲ್ಲಿ, ಸಾಹಿತ್ಯದ ಭಾವಾರ್ಥವೇ ಮರೆತು ಹೋಗುತ್ತದಲ್ಲವೇ? ನೋಡುವವರಿಗೂ ಭಾಷೆ ಗೊತ್ತಿಲ್ಲದಿದ್ದರೆ, ಏನು ಹೇಳಲು ಬಯಸುತ್ತಿದ್ದೇವೆ ಎಂಬುದು ಹೇಗೆ ತಿಳಿಯುತ್ತದೆ? ಎಂದು. ಹೌದು. ಸಮಂಜಸ ಪ್ರಶ್ನೆ ಮತ್ತು ಸಮಂಜಸ ಉತ್ತರದ ಅವಶ್ಯಕತೆಯಿದೆ. ಅದಕ್ಕಾಗಿ ಈ ಪ್ರಯತ್ನ.

ನಮ್ಮ ಶಾಸ್ತ್ರೀಯ ನೃತ್ಯಗಳಲ್ಲಿ, ಸಾಹಿತ್ಯ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಸಾಹಿತ್ಯವಿಲ್ಲದೆಯೂ ಸಮರ್ಪಕ ಅಭಿನಯದ ಮೂಲಕ ಪ್ರೇಕ್ಷಕನಿಗೆ ಸಂದೇಶ ಕಳಿಸಬಹುದು. ಇದರಲ್ಲಿ ಎರಡು ಮಾತಿಲ್ಲ. ಈ ನಿಟ್ಟಿನಲ್ಲಿ ಅನೇಕ ಪ್ರಯೋಗಗಳು ನಡೆದು ಯಶಸ್ಸನ್ನೂ ಕಂಡಿವೆ. ಆದರೆ ಪದ, ಜಾವಳಿಗಳು ಅಥವಾ ಅಭಿನಯ ಯೋಗ್ಯ ಯಾವುದೇ ಸಾಹಿತ್ಯ ಆಯ್ಕೆ ಮಾಡಿಕೊಂಡ ಮೇಲೆ ಅದರ ಒಳ ಹೊರಗನ್ನು ಸಂಪೂರ್ಣ ಅರ್ಥ ಮಾಡಿಕೊಳ್ಳದಿದ್ದರೆ, ಕವಿಗೂ, ಸಾಹಿತ್ಯಕ್ಕೂ ಮತ್ತು ಪ್ರೇಕ್ಷಕನಿಗೂ ನ್ಯಾಯ ಒದಗಿಸಿದಂತಾಗುವುದಿಲ್ಲ. ರಸದ ಹಾದಿಯಲ್ಲಿ ನೀರಸವೆನಿಸುತ್ತದೆ. ಹಾಗಾಗಿ, ಯಾವುದೇ ಒಂದು ಸಾಹಿತ್ಯದ ಆಯ್ಕೆ ಮಾಡಿದಾಗ, ಅದು, ಗದ್ಯವಿರಬಹುದು ಅಥವಾ ಪದ್ಯವೋ, ಕಾವ್ಯವೋ ಅಗಿರಬಹುದು, ಮೊದಲು ಸಾಹಿತಿಕಾರನ ಹಿನ್ನೆಲೆ ಅರಿಯುವುದು ಉತ್ತಮ. ಯಾವ ಕಾಲವನ್ನು ಚಿತ್ರಿಸುತ್ತಿದ್ದಾನೆ ಎಂಬುದು ಮುಖ್ಯ. ಹಾಗೇ, ಪ್ರಸ್ತುತ ತುಣುಕು ಬರೆಯುವ ಸಂದರ್ಭ ಹೇಗಿತ್ತು, ಯಾತಕ್ಕಾಗಿ ಬರೆದರು ಎಂಬುದೂ ಅರಿಯಬೇಕಾಗುತ್ತದೆ. ಆಗ, ರಚನೆಯ ಸ್ಥಾಯೀ ಭಾವ ತಿಳಿಯುತ್ತದೆ. ಅದರಲ್ಲಿರುವ ಧ್ವನಿಯ ಅರಿವಾಗುತ್ತದೆ. ಈ ಹಿನ್ನೆಲೆಯಲ್ಲಿ ಸಮಂಜಸ, ಔಚಿತ್ಯಪೂರ್ಣ ಅಭಿನಯದ ಮೂಲಕ ನರ್ತಿಸಿದರೆ, ಪ್ರೇಕ್ಷಕನ ಮನ ಮುಟ್ಟುವುದರಲ್ಲಿ ಸಂಶಯವೇ ಇಲ್ಲ.

ಇಲ್ಲಿ ಅಭಿನಯ ಎಂದಾಗ, ಮತ್ತೊಂದು ಪ್ರಮುಖ ಅಂಶ ನೆನಪಿಟ್ಟುಕೊಳ್ಳಲೇಬೇಕು. ಎಂತಹ ಪ್ರೇಕ್ಷಕ ವರ್ಗಕ್ಕೆ ಪ್ರದರ್ಶಿಸಲಾಗುತ್ತಿದೆ ಮತ್ತು ಯಾವ ಸಂದರ್ಭ ಎಂಬುದು. ಪ್ರೇಕ್ಷಕ ವರ್ಗದಲ್ಲಿ, ಮಕ್ಕಳೇ ಹೆಚ್ಚೋ ಅಥವಾ ವಯೋವೃದ್ಧರೋ, ನೃತ್ಯದ ಬಗ್ಗೆ ತಿಳಿದವರೋ, ಕೇವಲ ಆಸಕ್ತಿ ಉಳ್ಳವರೋ, ಅಥವಾ ನೃತ್ಯದ ಬಗ್ಗೆ ಏನೂ ಅರಿಯದವರೋ, ಪಂಡಿತರ ಸಮೂಹವೋ, ದೇವಾಲಯದಲ್ಲೋ, ರಂಗಮಂದಿರದಲ್ಲೋ, ಅಥವಾ ಮನೆಯ ಅಂಗಳದಲ್ಲೋ.. ಅಲ್ಲದೆ, ಬೆಳಗಿನ ಸಂದರ್ಭವೋ, ಸಂಜೆಯೋ ಎಂಬುದೂ ಮುಖ್ಯವಾಗುತ್ತದೆ. ಆಯೋಜಿಸಿರುವ ಕಾರ್ಯಕ್ರಮದ ಹಿನ್ನೆಲೆಯೂ ತಿಳಿದಿರಬೇಕಾಗುತ್ತದೆ. ಹೀಗೆ ಸಮಯ – ಸಂದರ್ಭ ಅರಿತು ಸಂಯೋಜಿಸಿದರೆ ಒಳಿತು.

ಸಾಹಿತ್ಯಕ್ಕೆ ಅಭಿನಯಿಸುವಾಗ, ಅದರ ಪ್ರತಿ ಪದದ ಅರ್ಥಕ್ಕೆ ಕೈ-ಮೈ ಕೂಡಿಸುವಾಗ ಎಡವಟ್ಟಾಗಬಹುದು. ಕಾರಣ, ಕಾವ್ಯಗಳಲ್ಲಿ ಛಂದಸ್ಸಿಗೆ ಪ್ರಾಮುಖ್ಯತೆ ಇರುವ ಕಾರಣ ಮತ್ತು ರಸಾಭಿನಯದ ದೃಷ್ಟಿಯಿಂದ, ಪದಗಳ ಜೋಡಣೆ ಹಿಂದು ಮುಂದಾಗಿರುವ ಸಾಧ್ಯತೆಗಳಿರುತ್ತವೆ. ಇಂತಹ ಸಮಯದಲ್ಲಿ, ಪ್ರತಿ ಪದದ ಅರ್ಥ ಅಭಿನಯಿಸುವಾಗ ಚಿತ್ರವೇ ಬುಡಮೇಲಾಗಬಹುದು. ಸಾಹಿತ್ಯವನ್ನು ಪದಾರ್ಥ, ವಾಕ್ಯಾರ್ಥ ಮತ್ತು ಭಾವಾರ್ಥಗಳಾಗಿ ವಿಂಗಡಿಸಿ ನಂತರ ಜೋಡಿಸಿದರೆ ಉತ್ತಮ. ಒಂದು ಎಳೆಯಲ್ಲಿ ಆರಂಭಿಸಿ, ಹಂತ ಹಂತವಾಗಿ ಮೇಲೇರಬೇಕು. ಅಂದರೆ, ಸಾಹಿತ್ಯದ ಒಂದೊಂದೇ ಸಾಲು ಮುಂದುವರೆಯುತ್ತಿದ್ದಂತೆ, ಸ್ಥಾಯೀ ಭಾವದ ಆಧಾರದ ಮೇಲೆ ವಿಭಾವ, ಅನುಭಾವ, ವ್ಯಭಿಚಾರಿ ಭಾವಗಳನ್ನು ಹೊಂದಿಸಿ ಕಥೆ ಹೆಣೆಯಲಾರಂಭಿಸಬೇಕು. ಇಲ್ಲಿ ಕಲಾವಿದರಿಗೂ, ಪ್ರಪಂಚದ ಆಗು ಹೋಗುಗಳ ಅರಿವಿರಬೇಕಾಗುತ್ತದೆ. ಸಾಮಾನ್ಯವಾಗಿ ಸುತ್ತಮುತ್ತಲೂ ಕಂಡುಬರುವ ಕ್ರಿಯೆ-ಪ್ರತಿಕ್ರಿಯೆಗಳನ್ನು ಗಮನಿಸಿ, ಸಂದರ್ಭೋಚಿತವಾಗಿ ಪ್ರಯೋಗಿಸಬಹುದು. ಅಲ್ಲಿಗೆ ಸಾಹಿತ್ಯದ ಸಂಪೂರ್ಣ ಚಿತ್ರಣ ಸಿಗುತ್ತದೆ. ಪ್ರೇಕ್ಷಕನೂ ಅದನ್ನು ಆಸ್ವಾದಿಸುತ್ತಾನೆ. ಕವಿಯ ಉದ್ದೇಶವೂ ಪೂರೈಸುತ್ತದೆ. ರಸದ ಹಾದಿ ಸುಗಮವಾಗುತ್ತದೆ.

ಅಲ್ಲದೆ, ಈಗ ಚಾಲ್ತಿಯಲ್ಲಿರುವಂತೆ, ನೃತ್ಯಬಂಧ ಪ್ರದರ್ಶನಕ್ಕೆ ಮುನ್ನ ಒಂದು ಪೀಠಿಕೆ ನೀಡುವುದು ಉತ್ತಮ. ಮುಂದಿನ ನೃತ್ಯದಲ್ಲಿ ಏನನ್ನು ನಿರೀಕ್ಷಿಸಬಹುದು ಎಂಬುದನ್ನು ಈ ಪೀಠಿಕೆ ತಿಳಿಸುತ್ತದೆ. ಪ್ರೇಕ್ಷಕನೂ ಅದರಂತೆ ತಯಾರಾಗಿರುತ್ತಾನೆ.

ಇಲ್ಲಿ ಮತ್ತೊಂದು ಅಂಶ ಒಟ್ಟಾರೆ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ. ಅದು, ಸಾಹಿತ್ಯದ ಸಂಗೀತ. ಈ ಸಾಹಿತ್ಯ, ಸಂಗೀತಕ್ಕಾಗಿ ಬರೆದದ್ದೋ ಅಥವಾ ನರ್ತನಕ್ಕೋ ಅಥವಾ ಸಾಹಿತ್ಯ ಕ್ಷೇತ್ರಕ್ಕಾಗಿಯೇ ಬರೆದದ್ದೋ ಎಂಬುದು. ಕೆಲವು ವಾಗ್ಗೇಯಕಾರರ ಸಾಹಿತ್ಯ ಆರಿಸಿದಾಗ, ನರ್ತಕರಿಗೆ ಹೆಚ್ಚು ಸ್ವಾತಂತ್ರ್ಯವಿರುವುದಿಲ್ಲ. ಯಾವುದು ಎಷ್ಟು ಸಲ ಹೇಗೆ ಹಾಡಬೇಕು ಎಂಬುದನ್ನು ಅವರೇ ನಿರ್ಧರಿಸಿಬಿಟ್ಟಿರುತ್ತಾರೆ. ನೃತ್ಯಕ್ಕೆಂದೇ ಬರೆದ ಸಾಹಿತ್ಯಗಳನ್ನು ಆರಿಸಿದಾಗ, ಅವಶ್ಯಕತೆಗೆ ತಕ್ಕಂತೆ ಸಂಗೀತ ಅಳವಡಿಸಿಕೊಳ್ಳಬಹುದು. ಅಭಿನಯವೇ ಪ್ರಧಾನವಾದ ಬಂಧಗಳಲ್ಲಿ, ನೃತ್ಯವನ್ನು ಅನುಸರಿಸುವಂತೆ, ಸಂಗೀತಗಾರರಿಗೆ ಹೇಳಬಹುದು. ಮಹಾಕಾವ್ಯಗಳನ್ನು ಆರಿಸಿದಾಗಲೂ ನಮ್ಮ ಅವಶ್ಯಕತೆ ಅನುಕೂಲತೆಗಳಿಗೆ ಆದ್ಯತೆ ಇರುತ್ತದೆ.

ಹೀಗೆ ರಸ-ಧ್ವನಿ-ಔಚಿತ್ಯಗಳ ತಿಳುವಳಿಕೆಯಿಂದ ಕೂಡಿದ ಅಭಿನಯದ ಮೂಲಕ ಹೊರಹೊಮ್ಮಿದ ಸಾಹಿತ್ಯ, ಜೀವ ಪಡೆದು, ಗರಿಗೆದರಿ, ಪ್ರೇಕ್ಷಕನನ್ನೂ ತನ್ನೊಂದಿಗೆ ಆಹ್ಲಾದಕರ, ಆನಂದದ ಅನುಭೂತಿಯೆಡೆಗೆ ಒಯ್ಯುತ್ತದೆ.

( ಲೇಖಿಕೆ ಬೆಂಗಳೂರಿನಲ್ಲಿ ನೃತ್ಯ ಶಿಕ್ಷಕಿ, ಸಂಶೋಧಕಿ.)

Leave a Reply

*

code