ಅಂಕಣಗಳು

Subscribe


 

ಕರ್ನಾಟಕದ ಏಕೈಕ ‘ಕರಣ’ ಸರದಾರ : ಚೇತನ್ ವರ್ಣ

Posted On: Sunday, September 16th, 2012
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ನಾಟ್ಯಶಾಸ್ತ್ರ ಪ್ರಸ್ತಾಪಿಸುವ ಚಾರಿ, ಕರಣಾದಿಗಳನ್ನು ಶಾಸ್ತ್ರೋಕ್ತವಾಗಿ ಕಲಿತು, ಲೀಲಾಜಾಲವಾಗಿ ನಾಟ್ಯದಲ್ಲಿ ಹೊಮ್ಮಿಸಬಲ್ಲ ಛಾತಿಯಿರುವ, ಚಾಲ್ತಿಯಲ್ಲಿರುವ ಕಲಾವಿದೆಯರು ಡಾ.ಶೋಭಾ ಶಶಿಕುಮಾರ್, ನಿರುಪಮಾ ರಾಜೇಂದ್ರ ನಮ್ಮ್ಲಲ್ಲಿದ್ದಾರೆ. ಆದರೆ ಕರಣಗಳನ್ನು ಕಲಿತ ಪುರುಷ ಕಲಾವಿದರು ಬೆರಳೆಣಿಕೆಯಷ್ಟು. ಕಲಿತರೂ ಪ್ರಯೋಗದಲ್ಲಿ, ಪಾಠ ಮಾಡುವುದರಲ್ಲಿ ಕಲಿತ ವಿದ್ಯೆಯನ್ನು ಚಾಲ್ತಿಯಲ್ಲಿಟ್ಟುಕೊಂಡಿರುವವರು ವಿರಳ. ಅಂತಹ ವಿರಳಾತಿ ವಿರಳರಲ್ಲಿ ಒಬ್ಬರು ಕರ್ನಾಟಕದ ಏಕೈಕ ನಾಟ್ಯಕಲಾವಿದ ಚೇತನ್ ವರ್ಣ.

Mr. Chetan Varna

ದಿ|| ಶ್ರೀಮತಿ ಸುಂದರೀ ಸಂತಾನಂ ಚೇತನ್ ಅವರ ಈ ಹೆಗ್ಗಳಿಕೆಯ ಹಿಂದಿನ ಸಾರಥಿ, ಗುರು. ೧೯೯೯ರಲ್ಲಿ ವಿಜಯಲಕ್ಷ್ಮಿ ಎಂಬವರು ಬೆಂಗಳೂರಿನ ಗಾಂಧಿಬಜಾರ್ ನಲ್ಲಿ ಆಯೋಜಿಸಿದ್ದ ಸುಂದರೀ ಸಂತಾನಂ ಅವರ ಕಾರ್ಯಗಾರದಲ್ಲಿ ಪಾಲ್ಗೊಂಡ ಚೇತನ್ ಅವರಿಗೆ ತಮ್ಮ ಓದಿನ ಪರಿಣಾಮವಾಗಿ ಸಹಜವಾಗಿಯೇ ನಾಟ್ಯಶಾಸ್ತ್ರದ ಕರಣಗಳತ್ತ ಆಸಕ್ತಿ ಅರಳಿತ್ತು. ಅದಕ್ಕೆ ಪೂರಕವಾಗಿ ಶತಾವಧಾನಿ ಆರ್. ಗಣೇಶರ ನಾಟ್ಯಶಾಸ್ತ್ರದ ತರಗತಿಗಳು ಹೆಚ್ಚಿನ ಇಂಬನ್ನಿತ್ತವು. ಸುಂದರೀ ಸಂತಾನಂ ಅವರ ನಿಧನದ ಬಳಿಕ ಅವರ ಮಗಳು ಹರಿಣಿ ಉಳಿದ ಅಂಶಗಳನ್ನು ಕಲಿಸಿಕೊಡುವಲ್ಲಿ ಕಾರಣರಾದರು. ಇತ್ತೀಚೆಗೆ ನೃತ್ಯ ಸಂಶೋಧಕರ ಒಕ್ಕೂಟದಂತಹ ವೇದಿಕೆಗಳಲ್ಲಿ ಆಗುವ ಚರ್ಚೆ, ಸಂವಾದಗಳಿಂದ ಹೆಚ್ಚು ಆಯಾಮಗಳು ತನಗೆ ಒದಗುತ್ತಿವೆ ಎಂಬುದು ಅವರ ಸಂತಸ.

ಚೇತನ್ ಬೆಂಗಳೂರಿನ ಶಾರದಾಂಬ ಮತ್ತು ನರಸಿಂಹಮೂರ್ತಿಯವರ ಪುತ್ರ. ಕಿರಿಯ ಸಹೋದರ ಸಂತೋಷ್ ವರ್ಣ ಕಿರುತೆರೆ ಕಲಾವಿದ. ರಾ. ಸತ್ಯನಾರಾಯಣ ಅವರ ತಂಗಿ ಆರ್. ಸುಬ್ಬುಲಕ್ಷ್ಮಿ ಅವರ ಬಳಿ ಸಂಗೀತ ಪಾಠ ಹೇಳಿಸಿಕೊಳ್ಳುವಾಗ ದಿ.ವೆಂಕಟಲಕ್ಷ್ಮಮ್ಮ ಅವರ ಶಿಷ್ಯೆ ಬೀನಾ ಜೋಸೆಫ್ ಬಳಿ ನೃತ್ಯವನ್ನೂ ಕಲಿತವರು. ಭಾನುಮತಿ ಅವರ ಬಳಿ ಭರತನಾಟ್ಯ ನೃತ್ಯಾಭ್ಯಾಸ ಮಾಡಿದ್ದು; ಕಲಾಮಂಡಲಂ ಉಷಾದಾತಾರ್ ಬಳಿ ಮೋಹಿನಿ‌ಆಟ್ಟಂ ನೃತ್ಯಪ್ರಕಾರವನ್ನೂ ಅಭ್ಯಾಸಮಾಡಿ, ಅವರ ಬಳಿಯೇ ಭರತನಾಟ್ಯದಲ್ಲಿ ವಿದ್ವತ್ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದಾರೆ. ಕಳೆದ ೨ ವರ್ಷಗಳಿಂದ ಹೆಸರಾಂತ ನೃತ್ಯ ಕಲಾವಿದೆ ನಿರುಪಮಾ ರಾಜೇಂದ್ರರ ಬಳಿ ಕಥಕ್ ನೃತ್ಯಶಿಕ್ಷಣ ಪಡೆಯುತ್ತಿದ್ದು; ಅವರ ಅಭಿನವ ನೃತ್ಯತಂಡದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಜೊತೆಗೆ ಬೆಂಗಳೂರಿನಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ೨-೩ ಶಾಖೆಗಳಲ್ಲಿ ನೃತ್ಯಗುರುವಾಗಿ ಮಾರ್ಗದರ್ಶನವೀಯುತ್ತಿದ್ದಾರೆ. 

ಚೇತನ್ ನೃತ್ಯದ ಹೊರತಾಗಿಯೂ ತಮ್ಮ ಬದುಕಿನ ಭಾಗವನ್ನು ಉಳಿದ ವಿಷಯಗಳಲ್ಲಿ ಗುರುತಿಸಿಕೊಂಡಿದ್ದಾರೆ. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ನೃತ್ಯ ವಿಭಾಗದಲ್ಲಿ ಎಂ.ಎ. ಸ್ನಾತಕೋತ್ತರ ಪದವಿ, ಪ್ರಾಣಿಶಾಸ್ತ್ರದಲ್ಲಿ ಎಂ.ಎಸ್.ಸಿ ಸ್ನಾತಕೋತ್ತರ ಪದವಿಯನ್ನು ಪಡೆದವರು.ಇವರು ಬೆಂಗಳೂರಿನ ಜೈನ್ ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಣಿಶಾಸ್ತ್ರದ ವಿಷಯಕ್ಕೆ ಉಪನ್ಯಾಸಕರಾಗಿದ್ದವರು. ಪ್ರಸ್ತುತ ಬೆಂಗಳೂರಿನ ದೀಕ್ಷಾ ಸಂಸ್ಥೆಯಲ್ಲಿ ಪಿಯುಸಿ ವಿಭಾಗಕ್ಕೆ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಚೇತನ್ ಬೆಂಗಳೂರು ದೂರದರ್ಶನದ  ಗ್ರೇಡ್ ಕಲಾವಿದರು ಕೂಡ ಹೌದು. ಹೆಸರಾಂತ ಕಲಾವಿದ ಶ್ರೀಧರ್ ಇವರಿಗೆ ಸ್ಫೂರ್ತಿ. ಪರಮಗುರು ಡಾ. ಪದ್ಮಾ ಸುಬ್ರಹ್ಮಣ್ಯಂ ಅವರಿಂದ ಜರುಗಿದ ಕಾರ್ಯಾಗಾರವೊಂದರಲ್ಲಿ ತಮ್ಮ ಕರಣವಿನ್ಯಾಸವಿಸ್ತಾರಕ್ಕೆ ಪ್ರಶಂಸೆಯ ಮಾತುಗಳನ್ನು ಪಡೆದವರು. ಪುಣೆಯ ಸ್ವರಸಾಗರ ಉತ್ಸವ, ಕದಂಬೋತ್ಸವ, ಹಂಪಿ‌ಉತ್ಸವ, ಮೈಸೂರು ದಸರಾ ಉತ್ಸವ, ನಿಶಾಗಂಧಿ ಉತ್ಸವ, ಮೌಂಟ್‌ಅಬು ಉತ್ಸವ, ೯೦ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನೋತ್ಸವ ಮುಂತಾದವು ಇವರ ಪ್ರದರ್ಶನಕ್ಕೆ ಸಾಕ್ಷಿಯಾದ ವೇದಿಕೆಗಳು. ಗುರುದಕ್ಷಿಣಾಮೂರ್ತಿ, ನವರಸ ಕರ್ನಾಟಕ ಇತ್ಯಾದಿ ಹಲವಾರು ನೃತ್ಯ ನಾಟಕಗಳನ್ನು ಸಂಯೋಜಿಸಿದ್ದಾರೆ. ಇತ್ತೀಚೆಗಷ್ಟೇ ನಡೆದ ನಾಟ್ಯದೇಗುಲ ಸಂಸ್ಥೆಯ ನೃತ್ಯೋತ್ಸವದಲ್ಲಿ ನೃತ್ಯಲಾಂಚನ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಚಾರಿ, ಕರಣಾದಿಗಳನ್ನು ನೃತ್ಯದಲ್ಲಿ ಹೊಂದಿಸಿಕೊಳ್ಳುತ್ತಾ, ನೃತ್ಯದ ಸುಕುಮಾರ, ಉದ್ಧತ ಪ್ರಯೋಗವೆರಡರಲ್ಲೂ ಮಿಂಚುತ್ತಾ, ಪುರುಷ ನರ್ತಕರ ಸಮಸ್ಯೆಗಳೆಡೆಗೆ ಚಿಂತಿಸುತ್ತಾ ಹೊಸನೋಟವನ್ನೀಯುತ್ತಿರುವ ಚೇತನ್ ಇದೀಗ ನಮ್ಮ ಅಭಿಜ್ಞಾನ ಅಂಕಣದ ಅತಿಥಿ.

Chethan Varna

Chetna Varna in performing ‘Karana’

ನೃತ್ಯದ ಬಗ್ಗೆ ಆಸಕ್ತಿ ಹೇಗೆ ಬಂತೋ ಗೊತ್ತಿಲ್ಲ. ಸಣ್ಣದರಲ್ಲಿ ಏನಾದರೂ ವಿವರಿಸುವಾಗ ಅಭಿನಯ ಮಾಡಲು ಹೇಳಿದರೆ ಮಾಡುತ್ತಿದ್ದೆ. ಜೊತೆಗೆ ತಾಯಿ ಹಾಡುವವರು. ಸಿನೆಮಾಕ್ಕೆ ಕರೆದುಕೊಂಡು ಹೋಗುತ್ತಿದ್ದ ಕಾಲಕ್ಕೆ ಸ್ಕ್ರೀನ್ ತೆಗೆಯುವಾಗ ಬರುತ್ತಿದ್ದ ಹಾಡು ನಮೋ ವೆಂಕಟೇಶ ಬರುತ್ತದಲ್ಲಾ ಅದು ನನಗೆ ಸ್ಫೂರ್ತಿ. ಅದಕ್ಕೆ ಡ್ಯಾನ್ಸ್ ಮಾಡುತ್ತಿದ್ದೆ. ಯಾರು ಹೇಳಿಕೊಟ್ಟರು ಅಂತ ಕೇಳಿದರೆ ಅದಕ್ಕೆ ನನ್ನ ಬಳಿ ಉತ್ತರವಿರುತ್ತಿರಲಿಲ್ಲ. ತೋಚಿದ್ದನ್ನು ಮಾಡುತ್ತಿದ್ದೆ, ಅಷ್ಟೇ.

ಅಭಿವ್ಯಕ್ತಿ ಸಮಸ್ಯೆ ಪುರುಷರಿಗೆ ಹೆಚ್ಚು…

..ಪುರುಷ ನರ್ತಕರಿಗೆ ಅಭಿವ್ಯಕ್ತಿಯಲ್ಲಿ ಬಹಳ ಸಮಸ್ಯೆಗಳಿವೆ. ಪ್ರಾಥಮಿಕ ಹಂತದಲ್ಲಿ ಗುರುಗಳು ಹೇಳಿಕೊಟ್ಟದ್ದನ್ನಷ್ಟೇ ಮಾಡುತ್ತೇವೆ. ಆದರೆ ನಾವು ನಾವೇ ಕೊರಿಯೋಗ್ರಫಿ ಮಾಡಿಕೊಂಡು ಪ್ರದರ್ಶನ ಕೊಡುವ ಹಂತಕ್ಕೆ ಬಂದಾಗ ನಾವು ಮಾಡೋದು ನಮಗೆ ಕಾಣದಿರುವಾಗ ಯಾವ ರೀತಿಯಲ್ಲಿ ಅಭಿವ್ಯಕ್ತಿ ಮಾಡಬೇಕು, ಹೇಗಿರಬೇಕು ಎಂಬಿತ್ಯಾದಿ ನೆಲೆಯ ಮಾರ್ಗದರ್ಶನದ ಕೊರತೆ ಕಾಡುತ್ತದೆ. ಇಂತಹ ಒಂದು ಸಮಸ್ಯೆ ಮೀಸೆಯಿಂದಲೇ ಮೊದಲು ಪ್ರಾರಂಭವಾಗುತ್ತದೆಯೆಂದರೆ ಅದು ತಪ್ಪಲ್ಲ. ಮೀಸೆಯಿಡುವುದೋ? ಬೇಡವೋ? ಪ್ರದರ್ಶನದ ಸಮಯದಲ್ಲಿ ನಿಲುವಂಗಿ ಹಾಕಬೇಕೋ? ಬೇಡವೋ..ಇತ್ಯಾದಿ. ಜೊತೆಗೆ ಲಾಸ್ಯಭರಿತವಾಗಿರುವುದನ್ನು ಮಾಡಿದರೆ ಅದು ಎಷ್ಟು ನರ್ತಕರಿಗೆ ಒಪ್ಪುತ್ತದೆಯೆಂಬುದು ಒಂದಾದರೆ ಉದ್ಧತದಲ್ಲಿ ಆರ್ಭಟ ಹೆಚ್ಚು ಮತ್ತು ಅದು ಪುರುಷರಿಗೆ ಹೊಂದುತ್ತದೆ ಎಂಬ ಅಭಿಪ್ರಾಯಗಳಿಂದಾಗಿ ಬರಬರುತ್ತಾ ಉದ್ಧತವಾದ ನೃತ್ಯಗಳನ್ನು ಮಾಡಹೊರಟರೆ ವೈವಿಧ್ಯತೆಯೇ ಇಲ್ಲವೆಂಬಂತಾಗಿರುವುದು ಮತ್ತೊಂದು ಸಮಸ್ಯೆ. ಒಟ್ಟಿನಲ್ಲಿ ನರ್ತಕರಿಗೆ ಚಲನೆಗಳ ಕೊರತೆಯಿದೆ; ಸ್ತ್ರೀಯರಷ್ಟು ಚಲನೆಗಳಲ್ಲಿ ಸ್ವಾತಂತ್ರ್ಯ ಇಲ್ಲ ಎನ್ನುತ್ತಾರೆ.

ಜೊತೆಗೆ ಸೂಕ್ತವೆನಿಸುವ ಸಾಹಿತ್ಯ ಕೊರತೆಯೂ ನರ್ತಕರನ್ನು ಕಾಡುತ್ತದೆ. ಭರತನಾಟ್ಯದಂತಹ ನೃತ್ಯದಲ್ಲಿ ಬಹಳಷ್ಟು ಸಾಹಿತ್ಯಗಳು ನಾಯಿಕಾಪ್ರಧಾನವಾಗಿಯೇ ಇರುತ್ತವೆ. ಇದರೊಂದಿಗೆ ಮತ್ತೊಂದು ಕೊರತೆಯೆಂದರೆ ಪುರುಷ ಕಲಾವಿದರ ಆಹಾರ್ಯಾಭಿನಯ ಸೊರಗಿರುವುದು. ನನಗಂತೂ ಸ್ತ್ರೀಯರ ವೇಷಭೂಷಣಗಳಷ್ಟು ಪುರುಷರ ಆಹಾರ್ಯ ಶ್ರೀಮಂತವಾಗಿಲ್ಲ ಎನಿಸುತ್ತದೆ. ನಾನು ಕಂಡ ಪ್ರಕಾರ ಬೆಂಗಾಲಿ ನರ್ತಕರು ಹೆಚ್ಚಿನ ಆಹಾರ್ಯ ಸೌಂದರ್ಯ ಹೊಂದಿದ್ದಾರೆ.

ಸಮಸ್ಯೆಗೆ ಪರಿಹಾರವಿದೆ…

ಸಾಕಷ್ಟು ಅಧ್ಯಯನ ಮಾಡಿ, ಸಾಹಿತ್ಯ ಪತ್ತೆ ಹಚ್ಚಿ ಹಿರಿಯರೊಂದಿಗೆ ಸಂವಾದ ನಡೆಸಿ, ನಾಲ್ಕೈದು ಜನರ ಮುಂದೆ ರಿಹರ್ಸಲ್ ಮಾಡಿದಾಗ ಖಂಡಿತಾ ಪುರುಷಪ್ರಧಾನವಾಗಿರುವಂತಹ ನೃತ್ಯಬಂಧಗಳನ್ನು ಹುಟ್ಟುಹಾಕಿ ಪ್ರದರ್ಶನಕ್ಕೆ ತರಬಹುದು.

ವೈವಿಧ್ಯಮಯವಾದ ಕಿರೀಟಗಳು, ಕೇಶಾಲಂಕಾರ, ಒಡವೆ ಇತ್ಯಾದಿಯಾಗಿ ಆಹಾರ್ಯ ಪದ್ಧತಿಗಳು ನರ್ತಕರಿಗೆಂದೇ ಹೊರಬಂದರೆ ನರ್ತಕರ ಆಹಾರ್ಯಾಭಿನಯ ಮತ್ತಷ್ಟು ಚೆನ್ನಾಗಿರುತ್ತದೆ.

ಹೌದು, ಭರತನಾಟ್ಯದಂತಹ ನೃತ್ಯದಲ್ಲಿ ಪುರುಷರು ಪದ ಜಾವಳಿಗಳ ಬದಲಾಗಿ ದೇವರನಾಮಗಳನ್ನು ಆರಿಸುವುದು ಸುಲಭದ ಕೆಲಸ. ಆದರೆ ಗಂಡಸಿನ ಬೇರೆ ಬೇರೆ ಮನಸ್ಥಿತಿ, ಭಾವಗಳನ್ನು ತೋರಿಸುವ ರಚನೆಗಳು ಬಂದರೆ ಅಭಿವ್ಯಕ್ತಿಯೂ ಹೆಚ್ಚಾಗುತ್ತದೆ. ಉದಾಹರಣೆಗೆ ಹೇಳುವುದಿದ್ದಲ್ಲಿ ಜಿಪುಣ ಗಂಡನ ಜಗಳ, ಅವನ ನಡೆನುಡಿ, ಅದಕ್ಕೆ ಹೆಂಡತಿಯ ಪ್ರತಿಕ್ರಿಯೆ ಇತ್ಯಾದಿ.. ಯೋಚಿಸಿ, ಚರ್ಚಿಸಿದರೆ ಇನ್ನಷ್ಟು ಹೊಸತೆನಿಸುವ ವಸ್ತುಗಳು ಹೊರಬರುತ್ತವೆ.

ಪುರುಷರು ಉದ್ಧತ ಚಲನೆಗಳನ್ನೇ ಮಾಡಬೇಕೆಂಬ ನಿಯಮವೇನೂ ಇಲ್ಲ. ನರ್ತಕರು ಉದ್ಧತದಷ್ಟೇ ಆರಾಮವಾಗಿ ಸುಕುಮಾರ ಅಭಿನಯವನ್ನೂ ಮಾಡಬಹುದು ಮತ್ತು ಎರಡನ್ನೂ ಹದವಾಗಿ ತೂಗಿಸಿಕೊಂಡು ಹೋಗಲೂಬಹುದು. ಆದರೆ ಮಾಡುವವರ ಮತ್ತು ನೋಡುವವರ ದೃಷ್ಟಿ, ತಿಳಿವಳಿಕೆ, ಅಭಿನಯಾಂಶಗಳಿಂದ ಸೌಂದರ್ಯ ನಿರ್ಧರಿತವಾಗುತ್ತದೆ. ಪ್ರೇಕ್ಷಕರಲ್ಲಿ ಈಗಾಗಲೇ ಇಂಥದ್ದೇ ಮಾದರಿಯಲ್ಲಿ ಪುರುಷ ನರ್ತಕರು ನರ್ತಿಸಬೇಕು  ಎಂಬ ಇರಾದೆ ಇದ್ದರೆ ಅವರನ್ನು ಶಿಕ್ಷಿತರಾಗುವಂತೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗುತ್ತದೆ.

ಈ ನಿಟ್ಟಿನಲ್ಲಿ ನನ್ನ ತಂದೆ ತಾಯಿ ತಮ್ಮನ ಸಹಕಾರ ಮತ್ತು ಅವರ ನೋಟದಿಂದಾಗಿ ಹೇಗೆ ಪುರುಷಪ್ರಧಾನವಾಗಿ ನರ್ತಿಸುವಾಗ ಬದಲಾವಣೆ ಮಾಡಬೇಕು ಎಂದು ಕಂಡುಕೊಂಡಿದ್ದೇನೆ; ಮತ್ತು ಅವರ ಸಲಹೆಗಳಿಂದ ನನ್ನ ನೃತ್ಯ ಸೊಗಸಾಗಿಯೂ ಕಾಣಿಸಿದೆ. ಎಷ್ಟೋ ಸಹೃದಯರು ನಿಮ್ಮ ನೃತ್ಯ ತುಂಬಾ ವಿಭಿನ್ನವಾಗಿದೆ, ಕ್ಯಾಚೀ ಆಗಿದೆ  ಎಂಬ ಪ್ರಶಂಸೆಗಳನ್ನೂ ಕೊಟ್ಟಿದ್ದಾರೆ.

ನರ್ತಕರ ನಿಜಜೀವನದ ಬಾಡಿಲ್ಯಾಂಗ್ವೇಜ್ ಪುರುಷಸಹಜವಾಗಿರಬೇಕು..

..ನರ್ತನದ ಥರವೇ ಹಾವಭಾವಗಳನ್ನು ನಿಜಜೀವನದಲ್ಲಿಯೂ ಪುರುಷರು ಮಾಡಿದಲ್ಲಿ ಜನರು ಲಾಲಿತ್ಯ, ಸುಕುಮಾರ ಜಾಸ್ತಿ ಅಂತೆಲ್ಲಾ ಒಂದು ಬಗೆಯ ಜನರಲೈಸ್ಡ್ ಒಪೀನಿಯನ್ ಕೊಡ್ತಾರೆ. ಮಾಮೂಲಿಯಾಗಿ ನಡೆದುಕೊಂಡು ಹೋಗುವಾಗಲೂ ನಾನು ಡ್ಯಾನ್ಸರ್ ಅಂತ ತೋರಿಸಿಕೊಳ್ಳುವುದು ತಪ್ಪಾಗುತ್ತದೆ. ನೃತ್ಯದ ವೇಳೆಯಲ್ಲಿ ಬಳಸುವ ಬಾಡೀ ಲಾಂಗ್ವೇಜ್‌ನ್ನೆ ನಿಜಜೀವನದಲ್ಲಿ ಬಳಸಿದರೆ ಅತಿಯಾಗಿ ಕಾಣುತ್ತದೆ. ಹಾಗಂತ ನೃತ್ಯ ಕಲಾವಿದರಿಗೆ ಸುಕುಮಾರ, ಲಾಲಿತ್ಯಭಾವ ಇರುವುದಿಲ್ಲವೆಂತಲ್ಲ. ಆದರೆ ಅದು ನಮ್ಮ ಹಿಡಿತದಲ್ಲಿರಬೇಕು. ನಮ್ಮನ್ನು ನಾವು ಮೌಲ್ಡ್ ಮಾಡಿಕೊಳ್ಳುವುದು ಗೊತ್ತಿರಬೇಕು. ನಾರ್ಮಲ್ ಆಗಿ ಪ್ರತಿಕ್ರಿಯೆ ಕೊಡಬೇಕೇ ವಿನಾ ರಂಗದ ಮೇಲಿರುವಂತೆ ಅಲ್ಲ. ನಡಿಗೆಯಲ್ಲಿ ಮಾತನಾಡುವಾಗ ಗಂಡಸರ ಸ್ವಭಾವತಃ ಗುಣಗಳನ್ನು ಅಂದರೆ ಜೋರು, ದಾರ್ಢ್ಯತೆ, ಒರಟುತನಗಳನ್ನು ತಂದುಕೊಳ್ಳಬೇಕು. ರಂಗದ ಮೇಲೆಯೇ ಪಾತ್ರಗಳನ್ನು ತತ್‌ಕ್ಷಣ ಮಾತ್ರದಲ್ಲಿ ಬದಲಾಯಿಸಿಕೊಳ್ಳುವ ಸಾಮರ್ಥ್ಯವಿರುವ ಕಲಾವಿದನಿಗೆ ರಂಗದಿಂದ ಹೊರಬಂದ ನಂತರವೂ ಅದು ಸಾಧ್ಯವಾಗಲಾರದೇ? ಆದ್ದರಿಂದ ಯಾವುದೇ ನೈಜಪ್ರತಿಕ್ರಿಯೆ ನೀಡುವ ಮೊದಲು ನರ್ತಕರು ಯೋಚಿಸಬೇಕು.

Chethan Varna performing Karana’s

ಮಾಧ್ಯಮಗಳಿಗೆ ಕರ್ತವ್ಯ ಇದೆ…

ಇತ್ತೀಚಿನ ಸಿನೆಮಾಗಳಲ್ಲಿ ನಟರು ನರ್ತಕರನ್ನು ತುಂಬಾ ಕೆಟ್ಟದಾಗಿ ಬಿಂಬಿಸುತ್ತಾರೆ. ಗಾಢ್‌ಫಾದರ್, ರಾಮ್‌ನಂತಹ ಚಿತ್ರಗಳಲ್ಲಿ ಉಪೇಂದ್ರ, ಅರುಣ್‌ಸಾಗರ್ ಹಾಸ್ಯಕ್ಕೆ ವಸ್ತು ಅನ್ನುವ ರೀತಿಯಲ್ಲಿ ನರ್ತಕರನ್ನು ಬಿಂಬಿಸಿದ್ದಾರೆ. ಅಂತಹ ಗುಣಗಳುಳ್ಳ ನರ್ತಕರು ಒಬ್ಬರಿಬ್ಬರು ನೃತ್ಯಲೋಕದಲ್ಲಿ ಇರಬಹುದೇನೋ! ಆದರೆ ಎಲ್ಲರಿಗೂ ಇದು ಅನ್ವಯವಾಗುವುದಿಲ್ಲ ಅಲ್ಲವೇ? ಇಂತಹ ಸಿನೆಮಾಗಳು ಜನರ ಮನಸ್ಸನ್ನು ತುಂಬಾ ಪ್ರಭಾವಿಸುತ್ತದೆ. ಮಾತ್ರವಲ್ಲ ನರ್ತಕರ ಜೀವನಕ್ಕೆ ತೊಂದರೆಯಾಗುತ್ತದೆ. ಈ ನಿಟ್ಟಿನಲ್ಲಿ ಮಾಧ್ಯಮಗಳಿಗೆ ಜವಾಬ್ದಾರಿ ಇದೆಯೆಂಬುದನ್ನು ಮರೆಯಬಾರದು.

ಪುರುಷ ನರ್ತಕರಿಗೆ ಮಾನ್ಯತೆ ಕಡಿಮೆ…

ಸ್ತ್ರ್ರೀಯರಿಗೆ ಹೋಲಿಸಿದರೆ ಕರ್ನಾಟಕದಲ್ಲಿ ನರ್ತಕರಿಗೆ ಮಾನ್ಯತೆ ಇರುವುದು ಪ್ರತಿಶತಃ ೨ ಮಾತ್ರ. ಒಂದೆಡೆ ವೇದಿಕೆ, ಅವಕಾಶಗಳ ಸಮಸ್ಯೆಯಾದರೆ ಮತ್ತೊಂದೆಡೆ ಶಿಷ್ಯಂದಿರ ಕೊರತೆ. ಮಹಿಳಾ ಶಿಕ್ಷಕರ ಬಳಿ ಬರುವಷ್ಟು ಪುರುಷ ನರ್ತಕರ ಬಳಿ ವಿದ್ಯಾರ್ಥಿಗಳು ಇರುವುದಿಲ್ಲ. ನಮ್ಮ ಬಯೊಡೇಟಾ ತೆಗೊಳ್ಳುವ ಮಟ್ಟಿಗೆ ಪ್ರಸ್ತುತಿಯ ಅವಕಾಶಗಳು ಸಿಗುವುದಿಲ್ಲ. ಅವಕಾಶಗಳು ಬಂದರೂ ನಿರ್ದಿಷ್ಟ ರೀತಿಯಲ್ಲಿಯೇ ಇರಬೇಕೆಂಬ ಶಿಸ್ತು, ಒತ್ತಡ ಹೆಚ್ಚು. ಜೊತೆಗೆ ಸಮಯದ ಅಭಾವವೂ, ಬಂಡವಾಳದ ಸಮಸ್ಯೆಯೂ ನನ್ನನ್ನು ಕಾಡುತ್ತಿದೆ. ಹೀಗಾದಾಗ ಅಸ್ತಿತ್ತ್ವಕ್ಕಾಗಿ ಕಲೆಯ ಮಾರುಕಟ್ಟೆ ಅನಿವಾರ್ಯವಾಗುತ್ತದೆ.

ಕರಣಗಳನ್ನು ಕಲಿತುಕೊಳ್ಳಿ…

ಸ್ತ್ರೀಯರೇ ಆಗಿರಲಿ ಅಥವಾ ಪುರುಷರೇ ಆಗಲಿ..ಕರಣಗಳನ್ನು ಉದ್ಧತವಾಗಿಯೂ ಮಾಡಬಹುದು; ಸುಕುಮಾರವಾಗಿಯೂ ಮಾಡಬಹುದು. ಆದ್ದರಿಂದ ನಾಟ್ಯಶಾಸ್ತ್ರೀಯ ಅಂಶಗಳನ್ನು ಅರಿತು ಅಳವಡಿಸಿಕೊಂಡರೆ ಪುರುಷ ನರ್ತಕರಿಗೆ ಖಂಡಿತವಾಗಿಯೂ ಚಲನೆಗಳ ವಿಷಯದಲ್ಲಿ ಬರ ಇಲ್ಲ ಎಂಬುದು ನಾನು ಕಲಿತು ಅರಿತ ಅಂಶ. ಕರಣಗಳನ್ನು ಕಲಿತುಕೊಳ್ಳುವುದು ಒಳ್ಳೆಯದು. ಇದರಿಂದ ದೇಹ ದೃಢವಾಗುತ್ತದೆ ಮತ್ತು ಹರಹು, ಅದರೊಳಗಿನ ರಹಸ್ಯ, ವೈವಿಧ್ಯತೆಗಳ ಪರಿಚಯವಾಗುತ್ತದೆ. ಕರಣಗಳನ್ನು ಕಲಿತರೆ ಭರತನಾಟ್ಯ ಮಾತ್ರವಲ್ಲ, ಬೇರಾವ ನೃತ್ಯಪದ್ಧತಿಗಳಿಗೂ ಅದನ್ನು ಅನುಕೂಲಕರವಾಗಿ ಬಳಸಬಹುದು. ನನ್ನ ವಿಷಯವನ್ನೆ ತೆಗೆದುಕೊಂಡರೆ ಮೊದಮೊದಲು ಕರಣಗಳನ್ನು ಕಲಿಯುವಾಗ ಆಸಕ್ತಿ ಇತ್ತು. ಕಲಿತು ಹೊರಬಂದ ನಂತರ ಅದರ ಬಳಕೆ ಹೇಗೆ ಎಂಬುದೇ ಚಿಂತೆಯಾಯಿತು. ಆದರೆ ಕ್ರಮೇಣ ಅಭ್ಯಾಸ ಮತ್ತು ನಿರಂತರ ನೋಟವೇ ಅದರ ಬಳಕೆಗೆ ದಾರಿ ಹಾಕಿಕೊಟ್ಟಿತು. ಸದ್ಯಕ್ಕೆ ಸಂಗೀತ ಸ್ವರಗಳನ್ನು ಬೇರೆ ಬೇರೆರಾಗದಲ್ಲಿ ಇಟ್ಟುಕೊಂಡು ಆ ರಾಗಗಳ ಭಾವ, ಮೂಡ್, ಟೆಂಪ್ಲೆಟ್ಸ್ ಇಟ್ಟುಕೊಂಡು ಕರಣಗಳನ್ನು ಕಂಪೋಸ್ ಮಾಡಬೇಕೆಂದಿದ್ದೇನೆ.

Leave a Reply

*

code