Author: - ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಬೆಂಗಳೂರು
ಬೆಂಗಳೂರಿನ ಹನುಮಂತನಗರದ ಕೆ.ಎಚ್.ಕಲಾಸೌಧದ ಸಭಾಂಗಣ. ಅಂದು ಅದು ನರ್ತಕಿಯೊಬ್ಬಳ ರಂಗಾರೋಹಣದ ನಾಟ್ಯಾಂಗಣ. ವಸ್ತುತಃ ನೃತ್ಯಕಲಾವಿದೆ ಸಂಗೀತಾ ಆ ದಿನ ಕಲಾಸೌಧದ ಸಾಧನಸೋಪಾನಗಳನ್ನು ಕ್ರಮಕ್ರಮವಾಗಿ ಏರಿ ‘ರಂಗಾರೋಹಣ’ವೆಂಬ ಪಾರಿಭಾಷಿಕ ಶಬ್ದಕ್ಕೆ ಅರ್ಥವನ್ನೂ, ಗೌರವವನ್ನೂ ತಂದುಕೊಟ್ಟದ್ದು ಅಪರೂಪದಲ್ಲಿ ಅಪೂರ್ವ ಸಂಗತಿ.
ಆರಂಗೇಟ್ರಂ-ರಂಗಪ್ರವೇಶ-ರಂಗಾರೋಹಣಾದಿ ಶಬ್ದಗಳ ಮೂಲಕ ಸಂಭ್ರಮದಿಂದ ಆಚರಿಸಲ್ಪಡುವ ನೃತ್ಯಾಂಗದ ಸಿದ್ಧಕಲಾಪಗಳಿಗೆ ಒಗ್ಗಿದ ಪ್ರೇಕ್ಷಕನಿಗೆ ಆದಿನ ಬೇರೆಯದೇ ಆದ ಬೆರಗು ಕಾದಿತ್ತು. ಪುಷ್ಪಾಂಜಲಿಯಿಂದ ತೊಡಗಿ ವಾರ್ಷಿಕ ಪರೀಕ್ಷೆಯ ಕಡ್ಡಾಯ ಕವಾಯತಿನಲ್ಲಿ ಏತನೀರಾವರಿ ಮಾಡುತ್ತಾ, ತಿಲ್ಲಾನದೊಂದಿಗೆ ಕಲಿತದ್ದನ್ನು ಓದೊಪ್ಪಿಸುವ ವಿಧೇಯವಿದ್ಯಾರ್ಥಿಯ ಭಾವದೂರವಾದ ದುಗುಡದಲ್ಲಿ ಮುಕ್ತಾಯ ಮಾಡುವುದು ರಂಗಪ್ರವೇಶದ ‘ಸಂಪ್ರದಾಯ’ ! (?).- ರಂಗಪ್ರವೇಶ ಅಂದರೆ ಹೀಗೆ ನಿರ್ಭಾವವೂ, ಜಡವೂ, ಲಯನಿಕಷವೂ ಆಗಿರಲೇಬೇಕೆಂಬಷ್ಟರ ಮಟ್ಟಿಗೆ ತನ್ನ ಸ್ವರೂಪವನ್ನು ಕಲಾರಂಗದಲ್ಲಿ ಪ್ರತಿಷ್ಠಾಪಿಸಿಕೊಂಡಿದೆ. ಅಂಥದೇ ಫಲಶ್ರುತಿಯ ವ್ರತನಿರೀಕ್ಷೆಯಲ್ಲಿ ಆದಿನ ಹೋದವರಿಗೆ ಸಿಕ್ಕಿದ ಕಲಾಪ್ರಸಾದದ ರುಚಿಯೇ ಬೇರೆ. ಕೇವಲ ಕಲಾರುಚಿ ಮಾತ್ರವಲ್ಲ, ಸರಿಮಿಗಿಲಾಗಿ ರುಚಿಯೂ ಮೆಯ್ವರಿದಿತ್ತು. ಒಟ್ಟಿನಲ್ಲಿ ಪುಷ್ಕಳಭೋಜನದ ರಸಭಾವಪ್ಲಾವಿತವಾದ ಸಮೃದ್ಧವಾದ ಔತಣ. ಹಸಿದವರ ಹೊಟ್ಟೆಯನ್ನು ಆರೋಗ್ಯಪೂರ್ಣವಾಗಿ ತುಂಬಿಸಿ ತೃಪ್ತೋದ್ಗಾರವನ್ನೂ (ತೇಗನ್ನೂ)ಹೊಮ್ಮಿಸಿದ ಕಲಾವಿದೆ ಸಂಗೀತ ಅವರಿಗೂ, ಅವರ ಗುರು ಡಾ.ಶೋಭಾ ಶಶಿಕುಮಾರ್ ಅವರಿಗೂ ಹಾರ್ದ ಅಭಿನಂದನೆ.
ಬಹುತೇಕ ಈಗೀಗ ‘ರಂಗಪ್ರವೇಶ’ ಎಂಬ ಕಲಾಪ, ‘ಅದನ್ನು ಒಬ್ಬ ವಿದ್ಯಾರ್ಥಿ ಮಾಡಲೇಬೇಕು. ಮಾಡದಿದ್ದರೆ ನರ್ತಕತ್ವ ಅಪೂರ್ಣ’ ಎಂಬ ನಿಷ್ಠುರಮತವೃತ್ತಿಯಾಗಿಬಿಟ್ಟಿದೆ. – ಶತಾಯಗತಾಯ SSLC certificate ಪಡೆಯುವಂತೆ ಎಲ್ಲೂ ರಂಗಾರೋಹಣ ಮಾಡದೇ, ಗುರುಪ್ರಣೀತವಾದ ಕಲಾಧ್ಯಯನದ ಫಸಲನ್ನು ಸಹೃದಯರ ಸಮ್ಮುಖದಲ್ಲಿ ಪ್ರಸ್ತುತಿಗೊಳಿಸುವುದರ ಮೂಲಕ ಪ್ರದರ್ಶನಕ್ಕೆ ಬೇಕಾದ ಆತ್ಮವಿಶ್ವಾಸವನ್ನು, ದಾಢ್ರ್ಯವನ್ನು, ಸತ್ತ್ವವನ್ನು ಗಳಿಸುವುದು ‘ರಂಗಪ್ರವೇಶ’ದ ಮೂಲೋದ್ದೇಶ. ಈಗ ಅದೊಂದು ವ್ಯವಹಾರ. ಈಗಾಗಲೇ ಅಂತರ್ರಾಷ್ಟ್ರೀಯ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ, ರಿಯಾಲಿಟಿ ಶೋಗಳಲ್ಲಿ ಬಹುಮಾನ ಗಳಿಸಿದ ತಲೆಗರಿಗಳೆಲ್ಲಾ ಆಹ್ವಾನಪತ್ರಿಕೆಯಲ್ಲಿ ಹೆಮ್ಮೆಯಿಂದ ಪ್ರಕಟಗೊಂಡಿರುತ್ತವೆ. ಅಂದಮೇಲೆ ಇದು ಯಾವ ರಂಗದ ಎಂಥ ಪ್ರವೇಶ? ಊಟದ ಸ್ಪರ್ಧೆಯಲ್ಲಿ ಮೊದಲಿಗನಾಗಿ ಬಂದವನಿಗೆ ಅನ್ನಪ್ರಾಶನದ ಕರ್ಮವಿಧಿ ಮಾಡಿದಂತೆಯೇ ರಂಗಪ್ರವೇಶಾದಿ ಸಂಪ್ರದಾಯಾಚರಣೆ ಚಾಲ್ತಿಯಲ್ಲಿದೆ. ಇರಲಿ, ಪ್ರೇಕ್ಷಕರಿಗೇನೂ ನಷ್ಟವಿಲ್ಲ.
ಮಾರ್ಚ್ 2, 2014ರಂದು ‘ರಂಗಪ್ರವೇಶ’ ಎಂಬ ಶಿರೋನಾಮೆಯಲ್ಲಿ ಕೆ.ಎಚ್.ಕಲಾಸೌಧದಲ್ಲಿ ಕುಮಾರಿ ಸಂಗೀತಾ ಅವರಿಂದ ಸಂಪನ್ನವಾದ ನೃತ್ಯಕಲಾಪ ಅತ್ಯಂತ ಪ್ರಬುದ್ಧವಾಗಿತ್ತು, ಪ್ರಸನ್ನವಾಗಿತ್ತು, ಶುದ್ಧವಾಗಿತ್ತು, ಭಾವ-ಭಂಗಿ-ಬಾಗು-ಬಳುಕುಗಳಿಂದ ರಸೋತ್ಸವವಾಗಿತ್ತು. ಆದರೆ ಅದನ್ನು ರಂಗಪ್ರವೇಶವೆಂದೇ ಟಂಕಿಸಿರುವುದರಿಂದ ಯಥಾಪ್ರಕಾರ ಪುಷ್ಪಾಂಜಲಿಯಿಂದ ತಿಲ್ಲಾನದ ವರೆಗಿನ syllabus ಕ್ರಮಾಗತವಾಗಿ ಒಡ್ಡೋಲಗ ಕೊಡುತ್ತಿತ್ತು. ರಂಗವನ್ನು ಪ್ರವೇಶಿಸದೇ ಯಾವ ಪ್ರದರ್ಶನವೂ ಸಾಧ್ಯವಿಲ್ಲವಷ್ಟೇ ! ಆ ನೆಲೆಯಲ್ಲಿ ಅಂದಿನ ಕಲಾವಿದೆಯ ಪ್ರೌಢ ನಾಟ್ಯನಿರ್ವಹಣೆ ‘ಅಹುದಹುದೆನ್ನಬೇಕು’ ಎಂಬಂತೆ ಪ್ರೇಕ್ಷಕರ ಹೃದಯವನ್ನು ತೂಗಿಸಿತು, ಬೀಗಿಸಿತು. ವಿರಾಮವಿಲ್ಲದೆ ಅಜಸ್ರವಾಗಿ ನಾಟ್ಯಸೌಂದರ್ಯದ ರಸಧಾರೆಯನ್ನು ಚಿಮ್ಮಿಸಿದ ಕಲಾವಿದೆಯ ಶ್ರದ್ಧೆ, ಸಾಧನೆ, ಊರ್ಜೆ (ಸಾತ್ತ್ವಿಕ, ಅಭಿನಯ ಹೊರತುಪಡಿಸಿ)ಸರ್ವಥಾ ಪ್ರಶಂಸಾರ್ಹವಾಗಿತ್ತು.
ಆದ್ಯಂತವಾಗಿ ಕಂಡುಬಂದದ್ದು ಕಲಾವಿದೆಯ ಗತಿನಿಬದ್ಧವಾದ ದೇಹಶಿಲ್ಪದ ಸೂತ್ರೀಕರಣ. ಬೇಕೆಂದೇ ಒಂದು ರೇಚಿತವನ್ನೋ, ಚಾರಿಯನ್ನೋ, ಕಷ್ಟಸಾಧ್ಯವಾದ ಕರಣವನ್ನೋ ತುರುಕಿ ತನ್ನ ಶ್ರಮವನ್ನು ತೋರ್ಪಡಿಸುವ ತೆವಲು ಎಲ್ಲೆಲ್ಲೂ ಇಲ್ಲ. ಎಲ್ಲವೂ ಮಲ್ಲಿಗೆ ದಂಡೆಯ ನೇಯ್ಗೆಯಷ್ಟು ನಾಜೂಕು. ಅಲ್ಲಷ್ಟು ವರು, ಇಲ್ಲಷ್ಟು ತಗ್ಗು, ಮತ್ತಷ್ಟು ಅರೆ, ಇನ್ನಷ್ಟು ಕೊರೆ- ಎಂಬ ವಿಷಮ ವೃತ್ತಿಗಳು ಇಲ್ಲವೇ ಇಲ್ಲ. ಇಡೀ ನಾಟ್ಯನಿರ್ವಹಣೆಯಲ್ಲಿ ಲಾಸ್ಯವು ಪ್ರಾಣವಾಯುವಿನಂತೆ ಸದಾಸರ್ವದಾ ಸನ್ನಿಹಿತವಾಗಿತ್ತು. ನರ್ತನದ ಮೂಲಧಾತುವೇ ಲಾಸ್ಯವಷ್ಟೆ ! ಆದರೆ ಲಾಸ್ಯವನ್ನು ಸ್ಥಿತಿಯಲ್ಲೂ, ಗತಿಯಲ್ಲೂ ಹೊಮ್ಮಿಸುವುದು ಹೇಗೆಂಬುದರ ಕೀಲಿಕೈ ಕಳೆದುಕೊಂಡವರ ಕೋಲಾಹಲ ಕಲಾಜಗತ್ತಿನಲ್ಲಿ ಅನುಕರಣಿಸುವುದು ಕಲಾವೈಕಲ್ಯ.
ಆದರೆ ಕುಮಾರಿ ಸಂಗೀತಾ ನೀರಿನ ಹರಿವಿನ ಸಹಜತೆಯಲ್ಲಿ, ವಲನಶೀಲತೆಯನ್ನು ಸಾಕ್ಷಾತ್ಕರಿಸುತ್ತಿದ್ದರು. ಮೋಹಕವಾದ ಆಂಗಿಕಗಳಲ್ಲಿ ರಂಗವನ್ನು ಆವರಿಸುವಲ್ಲಿ ತೋರುತ್ತಿದ್ದ ರಂಗಲೇಖ ಹುಬ್ಬೇರಿಸುತ್ತಿತ್ತು. ಭಲೇಭಲೇ ಎಂಬ ಮೆಚ್ಚುಗೆಯ ಮಿರುಮಾತು ಮೂಡುವಂತೆ ಮಾಡುತ್ತಿದ್ದುದು ಅವರ ಖಚಿತವಾದ-ಉಚಿತವಾದ-ಆತ್ಮಪ್ರತ್ಯಯಬದ್ಧವಾದ-ನಿಶ್ಚಿತವಾದ ರಂಗಗತಿ. ಗೊಂದಲವಿಲ್ಲ, ದಂದುಗವಿಲ್ಲ, ಯಾವ ನಿಲುವಿನಲ್ಲೂ, ನಡೆಯಲ್ಲೂ ಜಾರುವಿಕೆ (slippery) ಇಲ್ಲವೇ ಇಲ್ಲ. ಸಾಹಿತ್ಯ-ಪಾತ್ರಭಾವಗಳಿಂದ ದೂರವಾಗುವ ತಾಳಗತಿಯ ಶುಷ್ಕವಾದ ಕುಟ್ಟಣೆ ಇಲ್ಲ. ತಾಳದ ಚಮತ್ಕಾರವನ್ನೂ, ಬಿಕ್ಕಟ್ಟನ್ನೂ, ಲಾಸ್ಯದ ಗತಿಯ ಸೌಂದರ್ಯಸೀಮೆಯೊಳಗೆ ಇಡುಕಿಸಿ, ಜತಿಗಳನ್ನೂ ಆಪ್ಯಾಯನಗೊಳಿಸಿದ್ದು ಅವರ ಹೆಚ್ಚುಗಾರಿಕೆ.
‘ವರ್ಣ’ ವಿಭಾಗದಲ್ಲಿ ರಾಧೆಯ ಪರಿತಾಪದ ವಸ್ತುನಿರ್ವಹಣದಲ್ಲಿ, ಪ್ರಕಟವಾಗಿ ತೋರದ ಕೃಷ್ಣನನ್ನು ಜತಿಯ ನಡೆಯ ಮೂಲಕ ಕಲ್ಪಿಸಿದ್ದು ಅದ್ಭುತ ಕಲ್ಪನೆ-ಸಂಯೋಜನೆ. ದೀರ್ಘವಾದ ‘ವರ್ಣ’ದಲ್ಲಿ ಹಲವು ಬಾರಿ ಬರುವ ಸಂಕೀರ್ಣಲಯಾನ್ವಿತವಾದ ಜತಿಯು, ಅನುಭಾವ ಭೂಮಿಕೆಯ ಕೃಷ್ಣನ ಪ್ರತ್ಯಕ್ಷೀಕರಣಕ್ಕೆ ಬಳಕೆಯಾಗುತ್ತಿತ್ತು. ತನ್ಮೂಲಕ ಶುಷ್ಕಾಕ್ಷರ ಭಣಿತಿಯ ಗರಿಮುರಿಗೊಳ್ಳುವ ಲಯದ ತಿಪ್ಪಾಟದ ಬೆವರನ್ನು ತಂಪಾಗಿಸಲಾಗುತ್ತಿತ್ತು.
ಜತಿಯನ್ನು ಎಷ್ಟು ಆಕರ್ಷಕವಾಗಿ ಕಥಾಕ್ರಮದ ಅವಿನಾಭಾವವೇ ಆಗಿ, ಆಸ್ವಾದ್ಯವಾಗಿ ಹೃದ್ಯವಾಗಿ ನಿರ್ವಹಿಸಬಹುದೆಂಬುದಕ್ಕೆ ಅಂದಿನ ವರ್ಣಜತಿ ಪರಮೋದಾರÀಣವಾಯಿತು. ಇನ್ನೂ ಅಚ್ಚರಿಯ ವಿಷಯವೆಂದರೆ, ವರ್ಣದಲ್ಲಿ ಕಣ್ಣುಕೀಳಿಸುವಂತಹ ‘ಜತಿಸಂವಾದ’ವನ್ನು ಜೋಡಿಸಿದ್ದು. ಕೃಷ್ಣನ ಕಾಪಟ್ಯ, ಚಟುಲತೆ, ಚಾಂಚಲ್ಯ, ಉತ್ಸಾಹಗಳನ್ನೆಲ್ಲಾ ಒಳಗೊಂಡ ಜತಿ ಮುಗಿಯುತ್ತಿದ್ದಂತೆ ವಿರಹದೀನಳಾದ ರಾಧೆಗೂ ಜತಿಯ ಮೂಲಕ ಕೂಡಲೇ ನೃತ್ಯವನ್ನು ಅಳವಡಿಸಿದ್ದು ಕೌಶಲದ ಉತ್ತುಂಗ.
ಕೃಷ್ಣಪಾತ್ರದ ಜತಿಯ ಭಾವಪ್ರಸರವೂ, ರಾಧಾಪಾತ್ರದ ಜತಿಯ ಭಾವಪ್ರಸರವೂ ಆಯಾ ಪಾತ್ರದ ಆಂಗಿಕಗಳಲ್ಲೇ ಮೂರ್ತಗೊಳ್ಳುತ್ತಾ, ಭಾವಸಂವಾದವಾಗಿ ರೂಪೊಡೆದು ಮೂಡಿದ್ದು- ಮೆಚ್ಚುಗೆಗೆ ಮಾತಿಲ್ಲ. ಒಟ್ಟಿನಲ್ಲಿ ಸುಮಾರು ಮೂರುಗಂಟೆಕಾಲ, ದಣಿವರಿಯದೆ ಸಲೀಲವಾಗಿ ನಾಟ್ಯದ ಅಂತಸ್ಥಸೌಂದರ್ಯವನ್ನು ಸಹೃದಯರಿಗೆ ಲವಕಾಲವೂ ಕೊರೆಗಾಣಿಸದೆ ತೋರಿಸಿದ ಕುಮಾರಿ ಸಂಗೀತಾ ಅವರ ರಂಗನಿವೇಶ, ನಾಟ್ಯಲೋಕಕ್ಕೆ ತೋರಣದ್ವಾರ.
ಇಂತಹ ಶಿಷ್ಯೆಯನ್ನು ತಮ್ಮೆಲ್ಲ ಪ್ರತಿಭೆ-ಅಧ್ಯಯನ-ಸಂಶೋಧನ-ಅಭ್ಯಾಸ-ಚಿಂತನ-ಸಂಧ್ಯಾನಗಳನ್ನು ನಿರ್ಮಮವಾಗಿ ಧಾರೆಯೆರೆದು ಕಟೆದು ರೂಪಣಗೊಳಿಸಿ ರಂಗವೇರಿಸಿದ ಗುರು ಡಾ.ಶೋಭಾ ಶಶಿಕುಮಾರ್ ಅವರ ಕಲಾತಪಸ್ಸಿಗೆ ನಮೋ ವಾಕಂ ಬ್ರೂಮಃ. ಇಂತಹ ಗುರುಗಳ ಶಿಷ್ಯರ ಸಂತತಿ ಸಾವಿರವಾಗಲಿ ಎಂಬುದು ಎದೆಯಾಳದ ಹರಕೆ ಹಾರೈಕೆ. ಗಾನದಲ್ಲಿ ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ಮ, ಮೃದಂಗದಲ್ಲಿ ಶ್ರೀಹರಿ, ಕೊಳಲಿನಲ್ಲಿ ಜಯರಾಂ, ವೀಣೆಯಲಿ ಶಂಕರರಾಮನ್, ಖಂಜಿರದಲ್ಲಿ ಪ್ರಸನ್ನಕುಮಾರ್…ಭಾಗವಹಿಸಿ ರಂಗಾರೋಹಣದ ಚಪ್ಪರಕ್ಕೆ ನಿಲುಗಂಬಗಳಾಗಿ ಇಂಬಾದರು.
ಅಂದಿನ ರಂಗಕೃತಿಗಳಲ್ಲಿ ಬೇಡವೆಂದರೂ ಕಾಡಿದ ಸಾಹಿತ್ಯಭಾಗವನ್ನು ಉಲ್ಲೇಖಿಸಬೇಕಾಗಿದೆ. ‘ಅನಿವಾರ್ಯ’ ಯಾಕೆಂದರೆ, ಯಾವ ಕೃತಿಕಾರನಿಗೇ ಆಗಲಿ, ‘ಹೀಗೆ ಬರೆಯಬೇಕು’ ಎಂದು ಯಾರೂ ಫರ್ಮಾನು ಹೊರಡಿಸಬಾರದು. ಆದರೆ ಒಂದು ಕೃತಿ ತನ್ನ ಕಾವ್ಯಶರೀರದ ಮೂಲಕ, ಲಯವನ್ನು, ಭಾವವನ್ನು, ಆವರಣವನ್ನು ಕಡೆಯದಾಗಿ ರಸವನ್ನು ಸೃಷ್ಟಿಸುವ ಮೂಲದ್ರವ್ಯವನ್ನು ಗರ್ಭೀಕರಿಸಿಕೊಂಡಿರಲೇಬೇಕಾಗುತ್ತದೆ. ಇಲ್ಲದಿದ್ದರೆ ನರ್ತಕರ ರಂಗಕ್ರಿಯೆಗೂ ಸಾಹಿತ್ಯದ ಶಬ್ದಕ್ರಿಯೆಗೂ ತಾಳಮೇಳವಿಲ್ಲದೇ ಅವೆರಡೂ ಅವೆರಡೂ ಸಮಾನಾಂತರವಾದ ಹಳಿಗಳಲ್ಲಿ ಮಡಿಮಡಿಯಾಗಿ ದೂರವೇ ಉಳಿದು ಆಭಾಸರಂಗವನ್ನು ಕಟ್ಟಿ ನಿಲ್ಲಿಸುತ್ತಾವೆ.
ಸಂಗೀತಾ ಅವರ ರಂಗಪ್ರವೇಶದಲ್ಲಿ ಅಮೃತವರ್ಷಿಣಿ ರಾಗದ ಒಂದು ಕೃತಿ (ಪೂರ್ತಿ ಕನ್ನಡವಾದ್ದರಿಂದ ಅರ್ಥವಾದ್ದೇ ಅವಾಂತರವಾಯ್ತೇ?) ಯಾರ ಕುರಿತಾದದ್ದೆಂಬುದೇ ಗೊಂದಲದ ಗೂಡು. ಯಾವ ಪದಗುಚ್ಛವೂ ಸಹಜಲಯಸ್ಫೋರಕವಲ್ಲ. ಯಾವ ಪೂರ್ಣಾರ್ಥ ಪ್ರತಿಪಾದಕ ವಾಕ್ಯವೂ ಅರ್ಥದುಷ್ಟತೆಯಿಂದ ದೂರವಾದದ್ದಲ್ಲ. ಒಂದಷ್ಟು ಶಬ್ದಗಳಿದ್ದಾವೆ; ಪದಶಯ್ಯೆಯಾಗಲೀ, ಶ್ರುತಿಹಿತವಾದ ಪದಗತಿಯಾಗಲೀ, ಕನಿಷ್ಠವಾಗಿ ಶಬ್ದಾಲಂಕಾರವಾಗಲೀ ಇಲ್ಲದೇ ಪರಸ್ಪರ ಅರ್ಥಸಂಬದ್ಧತೆಯೇ ಇಲ್ಲದ ಶಬ್ದದ ಪೇರಿಸುವಿಕೆ ಸಹನೆಗೆ ಸವಾಲೆಸೆಯುತ್ತಿತ್ತು.
‘ಆನಂದರೂಪಿಣೀ ನಾರಾಯಣಿ ಅಮೃತವರ್ಷಿಣಿ ಧುಂದುರ್ಗೆ | ಚಕ್ರಧಾರಿ ಸೋದರಿಯೇ ಶ್ರೀಚಕ್ರವಾಸ್ನಿ ನಂಬಿಹೆ ನಿನ್ನ || ಸಿಂಗದ ಮೇಲ್ಮೆರವ ಸುಕುಮಾರಿಯೇ ಅಂಗೆ ಅಗ್ನಿಯ ಶಂಭುಮೋಹಿನಿಯೇ| ಮಂಗಳ ಓಂ-ಮೊಳಗೆ ಮೈದೋರಿ ಸರ್ವಾಂಗವ ತಣಿಪ ಭುವನಮೋಹಿನಿಯೆ…’ಹೀಗೆ ಹಾಜರಿಪುಸ್ತಕ ಹೆಸರು ಕರೆದ ಹಾಗೆ ಸಾಲಾಗಿ ನಾಮಪಂಕ್ತಿ ಜೋಡಿಸಿದ್ದರಲ್ಲಿ ಯಾವ ತರ್ಕವಿದೆ? ತಥ್ಯವಿದೆ? ನಾರಾಯಣಿ ಯಾರು? ದುರ್ಗೆ ಯಾರು? ಶ್ರೀಚಕ್ರವಾಸಿನಿ ಯಾರು? ಮಂತ್ರಕಲ್ಪದಲ್ಲಿ ಇದು ಒಂದೊಂದೂ ಬೇರೆ ಬೇರೆ ಶಕ್ತಿಸ್ವರೂಪ. ‘ಸುಕುಮಾರಿ’ ಶಂಭುಮೋಹಿನಿ ಆದದ್ದು ಹೇಗೆ? ‘ಮಂಗಳ ಓಂ ‘ಎಂಬುದು ಯಾವ ಸಮಾಸ? ‘ಸರ್ವಾಂಗ ತಣಿಪ’ ಎಂಬುದರ ಲಕ್ಷ್ಯಾರ್ಥ ಎಲ್ಲಿ ತನಕ ಮುಟ್ಟುತ್ತದೆ? (ಇದೇ ಎಡವಟ್ಟು ಜಾವಳಿಯ ಸಾಹಿತ್ಯದಲ್ಲೂ ಇಣುಕಿದ್ದು ನಿಜ.)
ಇಷ್ಟಕ್ಕೂ ಡಾ.ಶೋಭಾ ಈ ಕೃತಿಯ ಶಾಬ್ದಿಕಾಭಿನಯಕ್ಕೆ ಸಾಹಸ (?) ಮಾಡದೇ ಇರುವುದರಿಂದ ವಿಪರ್ಯಾಸದ ಪ್ರಮಾಣ ಕಡಿತಗೊಂಡಿತು. ಆದರೂ ಪಾಪ ! ಅವರು ‘ಶ್ರೀಚಕ್ರವಾಸಿನಿ’ ಎಂಬ ಒಂದೇ ಒಂದು ಶಬ್ದದಿಂದ ಪೆಗ್ಗಿ ಬಿದ್ದುಬಿಟ್ಟರೆನಿಸುತ್ತದೆ. ಲಲಿತೆಯ ಅಥವಾ ಷೋಡಶಿಯ ಷಟ್ಚಕ್ರವನ್ನು ನಾಟ್ಯದ ಮೂಲಕ ರೇಖಿಸುವ ಕ್ಲಿಷ್ಟವೂ ಕಷ್ಟವೂ ಆದ ಕಲ್ಪನೆಯನ್ನು, ಅಮೂರ್ತವಾದರೂ ಸಾಕ್ಷಾತ್ಕರಣಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ, ಒಂದೊಂದು ಚಕ್ರಕ್ಕೆ (ಮೂಲಾಧಾರಾದಿ ಸಹಸ್ರಾರ ಪರ್ಯಂತ) ಒಂದೊಂದು ಕರಣಗಳ ನೇಯ್ಗೆ ಹೆಣೆದು ಚಕ್ರಭ್ರಮಣದ ಪ್ರದಕ್ಷಿಣಗತಿಯಲ್ಲಿ ನಿರೂಪಿಸಿದ್ದಾರೆ.
ಕಲಾವಿದೆ ಬಸಿದ ಬೆವರಿಗೆ ಅನುಕೂಲಿಸುವ ಸಾಹಿತ್ಯದ ನೆರಳೂ ಇಲ್ಲದೇ ಭಣಗುಟ್ಟಿತಲ್ಲ ನೃತ್ಯ ! -ಎಂಬುದೇ ಖೇದಾವಹÀ ವಿಷಯ. ಕಲ್ಪನೆಯನ್ನು ವಿಸ್ತರಿಸಬಹುದಾದ ಸಾಹಿತ್ಯವನ್ನು, ಭಾವವನ್ನು ಸ್ಫುರಿಸಬಹುದಾದ ಶಬ್ದಸಂಪತ್ತನ್ನು, ಭಾಷೆಯ ಬಳಕೆಯ ಕನಿಷ್ಠ ನಿಯಮದ ಅನುಸರಣೆಯನ್ನು ಯಾವುದೇ (ರಂಗ) ಕೃತಿಕಾರರು ಗಂಭೀರವಾಗಿ ಪರಿಗಣಿಸಿದಷ್ಟೂ ನಮ್ಮ ಕಲಾಪರಂಪರೆ ಪುಷ್ಟವಾಗುತ್ತದೆ, ಪುರಸ್ಕಾರ್ಯವಾಗುತ್ತದೆ. ಸಾಹಿತ್ಯವೂ ಕಲೆಯೂ ಕಲಾಶಾರದೆಯ ಎದೆಯೊರತೆ ಎಂದ ಲಾಕ್ಷಣಿಕರ ಮಾತನ್ನು ಮನ್ನಿಸೋಣ.
(ಲೇಖಕರು ಭಾರತೀಯ ಸಂಗೀತ-ನೃತ್ಯ-ರಂಗಕಲೆಗಳ ಆಯಾಮಗಳ ಹೃದಯವನ್ನು ಬಲ್ಲ ಕಲಾವಿದ, ಸಹೃದಯಿ, ತಜ್ಞ, ಕವಿ, ‘ವಿಮರ್ಶಾ ವಾಙ್ಮಯಿ’, ರಂಗನಟ-ರಾಮಕಥಾ ‘ರೂಪಕ’ ನಿರ್ದೇಶಕ, ಯಕ್ಷಗಾನ ರಚನೆಕಾರ, ಅವಧಾನ ಪೃಚ್ಛಕರು)