ನೃತ್ಯಾಭ್ಯಾಸಕ್ಕೆ ನೆರವಾಗುವ ‘ಭರತ ನಾಟ್ಯಬೋಧಿನಿ’

Posted On: Wednesday, February 20th, 2019
1 Star2 Stars3 Stars4 Stars5 Stars (No Ratings Yet)
Loading...

Author: ಡಾ.ಎಚ್.ಎಸ್.ಗೋಪಾಲ ರಾವ್, ಹಿರಿಯ ಇತಿಹಾಸ ಸಂಶೋಧಕರು ಬೆಂಗಳೂರು ಗ್ರಾಮಾಂತರ

ನೃತ್ಯವನ್ನು ನೋಡುವವರಿಗೆ ಅದನ್ನು ಕಲಿಸಲಾಗುತ್ತದೆಯೆಂದೇನೋ ತಿಳಿದಿರುತ್ತದೆ. ಆದರೆ ಅದು ಹೇಗೆ ಎಂಬ ಬಗೆಗೆ ಖಚಿತವಾದ ತಿಳಿವಳಿಕೆಯೇನೂ ಇರುವುದಿಲ್ಲ. ನೃತ್ಯ ನೋಡುವವರ ಕಣ್ಣಿಗೆ ಹಬ್ಬ; ನರ್ತಕ ಅಥವಾ ನರ್ತಕಿಯ ನರ್ತನದ ಭಂಗಿ, ಹಾವ-ಭಾವಗಳು ಎಂತಹ ಅರಸಿಕನನ್ನೂ ಖುಷಿ ಪಡಿಸುತ್ತವೆ. ನೃತ್ಯದ ಗುಟ್ಟನ್ನು ತಿಳಿದ ಯಾರಿಗಾದರೂ, ತಾವು ಅದನ್ನು ಕಲಿಯಬೇಕೆನಿಸಿದರೆ ಆಶ್ಚರ್ಯವಾಗದು. ಅದನ್ನು ಕಲಿಯುತ್ತಾ, ಕಲಿಯುತ್ತಾ, ಅದು ಕಾಟಾಪೋಟಿ ಕಲಿಯುವಂತಹ ವಿದ್ಯೆಯಲ್ಲ; ಅದಕ್ಕೂ ಒಂದಷ್ಟು ಪ್ರತಿಭೆ ಇರಬೇಕು. ಜೊತೆಗೆ ಶ್ರಮ ಬೇಕೇಬೇಕು ಎಂದು ಸ್ಪಷ್ಟವಾಗುತ್ತಾ, ನೃತ್ಯದಂತಹ ವಿದ್ಯೆಯನ್ನು ಕಲಿತದ್ದು ಸಾರ್ಥಕವೆನಿಸುವ ಧನ್ಯತಾಭಾವ ಮೂಡುತ್ತದೆ.

ಲೌಕಿಕ ವಿದ್ಯೆಯನ್ನು ಕಲಿಯುವಂತೆಯೇ ಸಂಗೀತ, ನೃತ್ಯ ಮತ್ತಿತರ ಲಲಿತಕಲೆಗಳನ್ನು ಅಭ್ಯಾಸಮಾಡಲೂ ಒಂದು ಕ್ರಮವಿರಬೇಕು; ಅದಕ್ಕೆ ತನ್ನದೇ ಆದ ಒಂದು ಪ್ರತ್ಯೇಕ ಶಿಸ್ತು ಅಗತ್ಯವೆಂದು ಕಲಿಕೆಯ ಒಂದಲ್ಲ ಒಂದು ಹಂತದಲ್ಲಿ ವಿದ್ಯಾರ್ಥಿಗೆ ತಿಳಿಯುವಂತೆಯೇ, ರಂಗದ ಮೇಲೆ ಪ್ರದರ್ಶಿತವಾಗುವ ಯಾವುದೇ ಕಲೆಯನ್ನು ನೋಡಿ, ಕೇಳಿ ಸಂತೋಷಪಡುವ ರಸಿಕನಿಗೂ ತಿಳಿದಿದ್ದರೆ, ಆಗ ಆ ಲಲಿತಕಲೆಗೆ ಸಲ್ಲಬೇಕಾದ ಗೌರವ ಸಲ್ಲುತ್ತದೆ.

ಸಂಗೀತ ಮತ್ತು ನೃತ್ಯ ಕ್ಷೇತ್ರದಲ್ಲಿ ಶಿಷ್ಯರು ನೇರವಾಗಿ ಗುರುವಿನ ಮಾರ್ಗದರ್ಶನದಲ್ಲಿ ಕಲಿಯುತ್ತಾರೆ. ಪ್ರತಿಯೊಬ್ಬ ಗುರುವಿಗೂ ತನ್ನದೇ ಆದ ಒಂದು ಕಲಿಸುವ ಕ್ರಮ ಇರುತ್ತದೆ. ಇಲ್ಲಿ ಸಾಧನೆ ವೈಯಕ್ತಿಕವಾದ್ದರಿಂದ ಗುರುವಿನ ಮೂಲಕವೇ ಕಲಿಯಬೇಕು. ಅದಕ್ಕೊಂದು ಕ್ರಮವಿರಬೇಕು. ಪ್ರತಿಯೊಬ್ಬ ಗುರುವೂ ತನ್ನದೇ ಆದ ಒಂದು ವಿಶಿಷ್ಟ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಸಹಜ.

ಸಂಗೀತದಲ್ಲಿ ಕಂಠವನ್ನು ಹದಮಾಡಿಕೊಂಡರೆ ಸಾಲದು; ಪಕ್ಕವಾದ್ಯದವರ ಜೊತೆಗೆ ತಾಳಮೇಳವನ್ನು ಸಾಧಿಸುವುದೂ ಅವಶ್ಯಕ. ಅದಕ್ಕೆ ಅವಶ್ಯಕವಾದ ಶಿಸ್ತನ್ನು ರೂಢಿಸಿಕೊಳ್ಳಲೇಬೇಕಾಗುತ್ತದೆ. ನೃತ್ಯದಲ್ಲಿ ಸಂಗೀತ, ವಾದ್ಯಗಳ ಜೊತೆಗಿನ ಹೊಂದಾಣಿಕೆಯ ಜೊತೆಗೇ ಅಭಿನಯ, ವಾಚಿಕ ಮತ್ತು ಆಹಾರ್ಯಗಳ ತಿಳಿವಳಿಕೆಯೂ ಇದ್ದರೆ ನೃತ್ಯಕ್ಕೆ ಸೊಗಸು.

ನೃತ್ಯವು ನೇರವಾಗಿ ಗುರು ಮತ್ತು ಶಿಷ್ಯ ಪರಂಪರೆಯಲ್ಲಿನ ಕಲಿಕೆಯಾದರೂ, ವಾಸ್ತವದಲ್ಲಿ ಸಂಗೀತ ಮತ್ತು ನೃತ್ಯ ಪರಿಣತಿಯ ಪರೀಕ್ಷೆ ಮಾಡುವುದು ಸರ್ಕಾರದ ಒಂದು ಅಂಗಸಂಸ್ಥೆ. ಅದು ತನ್ನದೇ ಆದ ಒಂದು ಪಠ್ಯ ಮತ್ತು ಬೋಧನ ಕ್ರಮವನ್ನು ಅಳವಡಿಸಿಕೊಂಡಿರುತ್ತದೆ. ಆ ಪ್ರಕಾರವೇ ಪರೀಕ್ಷೆಗಳು ಆಗುತ್ತವೆ. ಇದು ಪರಿಣತಿಯ ಪರೀಕ್ಷೆಯೇನೂ ಆಗಲಾರದು. ಕಲಿಕೆಯ ಮೂಲಕ ಗಳಿಸಿಕೊಂಡಿರುವ ತಿಳಿವಳಿಕೆಯ ಪರೀಕ್ಷೆಯಷ್ಟೇ ಎನ್ನುವುದು ಸ್ಪಷ್ಟ.

ಭರತ ನಾಟ್ಯಬೋಧಿನಿಯನ್ನು ಪ್ರಸ್ತುತಪಡಿಸಿರುವ ಮೂವರು ವಿದ್ವಾಂಸರು ಮತ್ತು ಅವರಿಗೆ ಮಾರ್ಗದರ್ಶನ ನೀಡಿರುವ ಇಬ್ಬರು ಹಿರಿಯರ ಉದ್ದೇಶವು ಪ್ರಾಥಮಿಕಪೂರ್ವದಿಂದ ವಿವಿಧ ಪರೀಕ್ಷೆಗಳಿಗೆ ಸಂಬಂಧಿಸಿದ ಪಠ್ಯಕ್ಕೆ ಸಂಬಂಧಿಸಿದ ಬೋಧನಾಕ್ರಮಕ್ಕೆ ಉಪಯುಕ್ತವಾಗಬೇಕೆಂದಿರುವಂತೆ ಕಂಡರೂ, ಇದನ್ನು ಓದಿಯಾದ ಮೇಲೆ, ಇದು ಕೇವಲ ಪರೀಕ್ಷೆಗಳ ಗುರಿಯಿಟ್ಟುಕೊಂಡು ಸಿದ್ಧಪಡಿಸಲಾದ ಬೋಧಿನಿಯಲ್ಲವೆಂದು ಮನವರಿಕೆಯಾಗುತ್ತದೆ. ನೃತ್ಯದ ಕಲಿಕೆಯ ಆರಂಭದಲ್ಲಿ ಮಾರ್ಗದರ್ಶನಕ್ಕೆಂದಾದರೂ, ಕ್ರಮೇಣ ಹಿರಿಯ ಗುರಿಯ ಸಾಧಕರಿಗೂ ಮಾರ್ಗದರ್ಶಕವಾಗಬಲ್ಲ ಶಕ್ತಿ ಈ ಬೋಧಿನಿಗಿದೆ.

ಮೊದಲನೆಯ ಅಧ್ಯಾಯವೇ ಬೋಧಿನಿಯ ಉದ್ದೇಶದ ಪರಿಚಯವನ್ನು ಸ್ಪಷ್ಟವಾಗಿಸುತ್ತದೆ. ನೃತ್ಯಸಂಸ್ಕೃತಿಯ ಸ್ಥೂಲ ವ್ಯಾಖ್ಯಾನದಿಂದ ಆರಂಭಿಸಿ, ನೃತ್ಯ ಕಲೆಯ ಮಹತ್ವ, ಪ್ರಯೋಜನ, ನಾಟ್ಯಲಕ್ಷಣಗಳು, ಶಾಸ್ತ್ರಗಳಲ್ಲಿ ನರ್ತನ ಲಕ್ಷಣಗಳು ಇತ್ಯಾದಿ ವಿಷಯಗಳ ನಿರೂಪಣೆಯೊಂದಿಗೆ ನಾಟ್ಯಕ್ಕಿರುವ ಶಾಸ್ತ್ರೀಯ ಹಿನ್ನೆಲೆಯನ್ನು ಪರಿಚಯಿಸಲಾಗಿದೆ. ಭೂಮಿಯ ಮೇಲೆ ನಾಟ್ಯವು ಬೆಳೆದು, ಬೆಳಕಿಗೆ ಬಂದ ಪರಿಯ ವಿವರಣೆಯೊಂದಿಗೆ, ನೃತ್ಯ ಸಂಸ್ಕೃತಿಗೂ ದೇವಾಲಯಗಳಿಗೂ ಇರುವ ಸಹಸಂಬಂಧವನ್ನು ಸ್ಪಷ್ಟಪಡಿಸಲಾಗಿದೆ. ನೃತ್ಯದಲ್ಲಿರುವ ಶೈಲಿಭೇದಗಳನ್ನು ಪರಿಚಯಿಸುತ್ತಲೇ, ಕರ್ನಾಟಕದ ಕೆಲವು ಮೇರು ಕಲಾವಿದರ ಪರಿಚಯ ಮಾಡಿಕೊಡಲಾಗಿದೆ. ನೃತ್ಯಕ್ಕೆ ಸಂಬಂಧಿಸಿರುವ ಪ್ರಾಚೀನ ಗ್ರಂಥಗಳ ಸ್ಥೂಲ ಪರಿಚಯದ ಜೊತೆಗೆ ಭಾರತದ ಬೇರೆಬೇರೆ ಭಾಗಗಳಲ್ಲಿ ಪ್ರಚಲಿತದಲ್ಲಿರುವ ವಿವಿಧ ನೃತ್ಯ ಪ್ರಕಾರಗಳ ಬಗೆಗೂ ತಿಳಿವಳಿಕೆ ನೀಡಲಾಗಿದೆ. ನಾಟ್ಯದ ಕಲಿಕೆಗೆ ಅತ್ಯಗತ್ಯವಾದ ಹಿನ್ನೆಲೆಯೊಂದಿಗೆ ಅಂಗಸಾಧನೆ, ಆಂಗಿಕ ಮತ್ತು ವಾಚಿಕಾಭಿನಯಗಳು, ಆಹಾರ್ಯದ ಪ್ರಾಮುಖ್ಯ ಮತ್ತು ಸಾತ್ವಿಕಾಭಿನಯದ ಮಹತ್ವವನ್ನು ನೃತ್ಯವನ್ನು ಕಲಿಯಲು ಆಸಕ್ತಿ ಇರುವವರಿಗೆ ಪರಿಚಯಿಸಲಾಗಿದೆ.

ಅಭಿನಯಕ್ಕೆ ಸಂಬಂಧಿಸಿದ ಪಾಠದ ಆರಂಭದಲ್ಲೇ ನೃತ್ಯ ಕಲಿಕೆಯ ಆರಂಭದಲ್ಲಿ ಆಚರಿಸಬೇಕಾದ ವಿಧಿಗಳು, ಕಲಿಯುವ ವಿದ್ಯಾರ್ಥಿಯಲ್ಲಿರಬೇಕಾದ ಲಕ್ಷಣಗಳು, ನಟ ಮತ್ತು ಸಭಾಲಕ್ಷಣಗಳ ಪ್ರಾಮುಖ್ಯ ಇತ್ಯಾದಿಗಳನ್ನು ವಿದ್ಯಾರ್ಥಿಗೆ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಕಲಿಸಲು ಬೇಕಾದ ಅವಧಿ, ಕಲಿತ ನಂತರ ಅಲ್ಲಿನ ಪ್ರಶ್ನೆಗಳು ಮಾತ್ರವಲ್ಲದೆ, ಪ್ರಶ್ನೆಗಳಿಗೆ ಸಂಬಂಧಿಸಿದ ಉತ್ತರಗಳಿಗೆ ಗೊತ್ತುಪಡಿಸಲಾಗುವ ಆಂಕೆಗಳು ಇತ್ಯಾದಿಗಳನ್ನೂ ತಿಳಿಸುವುದರಿಂದ ಕಲಿಸುವವರಿಗೆ ಮತ್ತು ಕಲಿಯುವವರಿಗೆ ತಿಳಿಸಬೇಕಾದ ಮತ್ತು ತಿಳಿಯಬೇಕಾದ ವಿಚಾರಗಳ ಸ್ಪಷ್ಟ‌ಅರಿವು ದೊರೆಯುತ್ತದೆ. ಇಲ್ಲಿ ಯಾವುದೂ ವೃಥಾ ಎಂದಾಗಬಾರದೆಂಬ ಎಚ್ಚರವಿದೆ.

ನೃತ್ಯ ಮಾಡುವವರು ತಮ್ಮ ಅಂಗಸೌಷ್ಟವವನ್ನು ಕಾಪಾಡಿಕೊಳ್ಳಬೇಕಾದ್ದು ಅವಶ್ಯಕ. ಮನಸ್ಸು ಹೇಳಿದಂತೆ ದೇಹ ಕೇಳಬೇಕು. ಅದಕ್ಕೆ ಬುದ್ಧಿಪೂರ್ವಕವಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಮಾಧ್ಯಮಿಕ ಶಾಲೆಗಳಿಂದ ಪ್ರೌಢಶಾಲೆಯ ಕೊನೆಯ ಹಂತದವರೆಗೂ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣದ ಅಗತ್ಯತೆಯನ್ನು ಶಿಕ್ಷಣತಜ್ಞರು ಮನಗಂಡಿದ್ದಾರೆ. ಆ ವಯೋಮಿತಿಯಲ್ಲಿ ದೇಹದ ಬೆಳವಣಿಗೆ ಆಗುತ್ತಿರುತ್ತದೆ. ಆಗ ಆ ಬೆಳವಣಿಗೆಗೊಂದು ಶಿಸ್ತನ್ನು ಅಳವಡಿಸಿದರೆ, ಮುಂದೆ ಸಹಜವಾಗಿಯೇ ಅನುಕೂಲಗಳನ್ನು ಕಾಣಬಹುದು. ದೈಹಿಕ ಆಲಸ್ಯವನ್ನು ನಿವಾರಿಸಲಾದರೂ ವ್ಯಾಯಾಮ ಅವಶ್ಯಕ. ನೃತ್ಯಾಭ್ಯಾಸಿಗಳಿಗೆ ದೈಹಿಕವಾದ ಶಿಸ್ತು ಅತ್ಯವಶ್ಯಕವಾದ್ದರಿಂದ ನೃತ್ಯದ ಕಲಿಕೆಯ ಜೊತೆಗೇ ಅಂಗಸಾಧನೆಗೂ ಅವಕಾಶವಿರಬೇಕು. ಈ ನಿಟ್ಟಿನಲ್ಲಿ ವ್ಯಾಯಾಮದ ಉಪಯೋಗಗಳು, ಅವುಗಳ ಸಹಜ ಕಲಿಕೆಯ ತಿಳಿವಳಿಕೆಯನ್ನು ನೃತ್ಯಾಭ್ಯಾಸಿಗಳು ಮತ್ತು ಕಲಿಸುವವರಿಬ್ಬರೂ ಮನಗಂಡರೆ, ನೃತ್ಯದ ಪ್ರಯೋಗಗಳಿಗೆ ಅನುಕೂಲ. ಉಸಿರಾಟ, ಕಣ್ಣಿನ ಚಲನೆ, ದೇಹದ ಬಾಗು, ಬಳುಕು, ನಿಲುವು, ಚಲನೆ ಇತ್ಯಾದಿಗಳೆಲ್ಲವೂ ಹದಗೊಳ್ಳಲು ಮತ್ತು ನೃತ್ಯ ಪ್ರದರ್ಶನದ ಸಂದರ್ಭ ಶ್ರಮವನ್ನು ಸಹಸಿಕೊಳ್ಳಲು ಹಾಗೂ ದೇಹದ ಎಲ್ಲ ಭಾಗಗಳೂ ಬುದ್ಧಿ ಮತ್ತು ಮನಸ್ಸುಗಳ ನಿರೀಕ್ಷೆಗೆ ತಕ್ಕಂತೆ ಸ್ಪಂದಿಸಲು ವ್ಯಾಯಾಮ ಮತ್ತು ಯೋಗ ನೆರವಾಗುತ್ತವೆ. ನೃತ್ಯ ಕಲಿಯುವವರ ಆರೋಗ್ಯವನ್ನು ಅನುಲಕ್ಷಿಸಿ, ವಯೋಮಾನಕ್ಕೆ ಸಹಜವಾದ ವ್ಯಾಯಾಮ ಮತ್ತು ಯೋಗಗಳ ಕಲಿಕೆ ಮತ್ತು ಅಭ್ಯಾಸದ ಬಗೆಗೂ ತಿಳಿಸುವಾಗ, ಆಸನಗಳ ಉಪಯುಕ್ತತೆಯನ್ನು ಕುರಿತೂ ತಿಳಿಸಲಾಗಿದೆ. ಇದರಿಂದ ನೃತ್ಯಕ್ಕೆ ಕಲಿಕೆ ಮತ್ತು ಪ್ರಯೋಗಗಳಿಗೆ ಅತ್ಯವಶ್ಯಕವಾದ ಇತರ ಶಿಸ್ತುಗಳ ಖಚಿತ ತಿಳಿವಳಿಕೆ ಲಭಿಸುತ್ತದೆ. ಈ ಕೃತಿಯ ಲೇಖಕರು ಈ ವಿಚಾರಕ್ಕೂ ಮಹತ್ವ ನೀಡಿರುವುದು ಅಂತರಶಿಸ್ತೀಯ ಅಧ್ಯಯನದ ಅವಶ್ಯಕತೆಯನ್ನು ಮನಗಾಣಿಸಿದೆ.

ನೃತ್ಯದಲ್ಲಿ ಆಂಗಿಕಾಭಿನಯ ಮುಖ್ಯ ಪಾತ್ರ ವಹಿಸುತ್ತದೆ. ಉದ್ಘಟಿತ, ಸಮ, ಅಗ್ರತಲಸಂಚರ, ಅಂಚಿತ ಮತ್ತು ಕುಂಚಿತ ಎಂಬ ಪಾದಭೇದಗಳ ಬಗೆಗೆ ನೃತ್ಯಪಟುವಿಗೆ ಸ್ಪಷ್ಟವಾದ ಮತ್ತು ಖಚಿತವಾದ ತಿಳಿವಳಿಕೆ ಇರುವುದು ಅಗತ್ಯ. ಶಿರೋಭೇದ, ದೃಷ್ಟಿಭೇದ, ಗ್ರೀವಭೇದ, ಭ್ರೂಭೇದ ಅಂದರೆ ತಲೆ, ಕಣ್ಣು, ಕುತ್ತಿಗೆ ಮತ್ತು ಹುಬ್ಬಿನ ಚಲನೆಗಳು ಸಂವಹನ ಮಾಡುವ ಭಾವಗಳ ವಿವರವು ತಿಳಿದಿದ್ದಷ್ಟೂ ನೃತ್ಯವನ್ನು ಅರ್ಥವತ್ತಾಗಿ ಮತ್ತು ಭಾವಪೂರಿತವಾಗಿ ಅಭಿವ್ಯಕ್ತಿಸಲು ಸಾಧ್ಯ. ಇದನ್ನು ನೃತ್ಯಪಟುವು ಚೆನ್ನಾಗಿಯೇ ತಿಳಿದಿರಬೇಕು. ನಂತರ ಭಂಗಿ, ಎಂದರೆ ಸ್ಥಾನಕಗಳ ವಿಚಾರದ ಕಲಿಕೆಯೂ ಮುಖ್ಯ, ಮಂಡಲ, ಆಲೀಢ, ಪ್ರತ್ಯಾಲೀಢ ಇತ್ಯಾದಿ ಸ್ಥಾನಕಭೇದಗಳ ಬಗೆಗೆ ತಿಳಿಯದಿದ್ದರೆ, ಅಭಿನಯ ದಾರಿ ತಪ್ಪುವ ಸಂದರ್ಭಗಳಿರುತ್ತವೆ. ಸ್ಥಾನಕಭೇದಗಳ ಹೆಸರುಗಳು ಒಂದೊಂದು ಶಾಸ್ತ್ರಗ್ರಂಥಗಳಲ್ಲೂ ಬೇರೆಬೇರೆ ಇರುತ್ತವೆ. ಇವುಗಳ ಅರಿವಿಲ್ಲದಿದ್ದರೆ ಗೊಂದಲಗಳುಂಟಾಗುತ್ತವೆ. ನೃತ್ಯಪಟುವು ಗುರುವಿನ ಮೂಲಕ ಈ ವೈವಿಧ್ಯಗಳ ಪರಿಚಯ ಪಡೆಯುವುದು ಅವಶ್ಯಕ.

ನೃತ್ಯದಲ್ಲಿ ಅಡವು ವಿಶೇಷವಾಗಿ ಗಮನ ಸೆಳೆಯುತ್ತದೆ. ಕಾಲಿನ ಚಲನೆಗೆ ಸಂಬಂಧಿಸಿದ ಅಡವು ಹಲವು ನೃತ್ತಪದ್ಧತಿಗಳ ಅಂಶವನ್ನು ಅಳವಡಿಸಿಕೊಂಡಿರುತ್ತದೆಯಾದ ಕಾರಣ ಇದು ದೇಶೀಯ ಪದ್ಧತಿಗೆ ತಕ್ಕಂತೆ ಬದಲಾಗುವುದು ಸಹಜ. ಇದನ್ನು ಅನುಸರಿಸಿಯೇ ಶಾಸ್ತ್ರಗ್ರಂಥಗಳ ರಚನೆಯಾಗಿರುತ್ತದೆ. ಇದು ಕಾಲದಿಂದ ಕಾಲಕ್ಕೆ ಮತ್ತು ಶೈಲಿಯಿಂದ ಶೈಲಿಗೆ ಬದಲಾವಣೆಗಳಿಗೆ ಒಳಗಾಗಿರುತ್ತದೆ. ದಶವಿಧ ಅಡವುಗಳನ್ನು ಎಷ್ಟು ಅವಧಿಯಲ್ಲಿ ಕಲಿಯಲು ಸಾಧ್ಯ ಎಂಬುದನ್ನೂ ಲೇಖಕರು ಮನಗಾಣಿಸುವ ಪ್ರಯತ್ನ ಮಾಡಿದ್ದಾರೆ. ಪಾದಗಳ ಚಲನೆಗೆ ಸಂಬಂಧಿಸಿದ ತಿಳಿವಳಿಕೆಯ ಜೊತೆಗೇ ಹಸ್ತಸ್ಥಾನಕಗಳ ಬಗೆಗೂ ನೃತ್ಯಪಟುವಿಗೆ ಸ್ಪಷ್ಟವಾದ ತಿಳಿವಳಿಕೆಯಿರಬೇಕು. ಸಂಸ್ಕೃತ ಶ್ಲೋಕಗಳ ಸಹಿತ ಹಸ್ತಸ್ಥಾನಕಗಳು ಮತ್ತು ಅವುಗಳ ಸಂಕೇತಗಳನ್ನು ಲೇಖಕರು ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ನಿರೂಪಿಸಿದ್ದಾರೆ. ಆಂಗಿಕಾಭಿನಯದಲ್ಲಿ ಅಂಗಗಳ ಚಲನೆಯಿಂದಲೇ ಭಾವಗಳನ್ನು ಅಭಿವ್ಯಕ್ತಿಸಬೇಕಾದ ಕಾರಣ ಅಭಿವ್ಯಕ್ತಿಸುವವರು ಮತ್ತು ಅರ್ಥ ಮಾಡಿಕೊಳ್ಳಬೇಕಾದವರ ನಡುವೆ ಯಾವುದೇ ಸಂದೇಹ ಉಳಿಯಬಾರದು.

ಆಂಗಿಕ ನಿರೂಪಣೆಗಿಂತ ವಾಚಿಕನಿರೂಪಣೆಯು ಭಾವವನ್ನು ಸ್ಪಷ್ಟಗೊಳಿಸುವುದು ಸಹಜ; ವಾಚಿಕದ ಪ್ರಧಾನಾಂಶವೇ ಸಂಗೀತ. ನೃತ್ಯಕ್ಕೆ ಸಂಗೀತ ಅವಿಭಾಜ್ಯ ಅಂಗ. ಕಿವಿಗೆ ಇಂಪಾಗಿ ಕೇಳುವ ಸಂಗೀತದ ಜೊತೆಗೆ ಕಣ್ಣಿಗೆ ಕಾಣುವ ನೃತ್ಯವು ಮನಸ್ಸಿಗೆ ಮುದ ನೀಡುವುದು ಸಹಜ. ಶ್ರುತಿ, ಲಯ ಮತ್ತು ತಾಳಜ್ಞಾನವಿಲ್ಲದೆ ಸಂಗೀತವಿಲ್ಲ; ಅದಿಲ್ಲದೆ ನೃತ್ಯವಿಲ್ಲ. ಆದ್ದರಿಂದ ನೃತ್ಯಕ್ಕೆ ಸಂಗೀತ ಪೂರಕವಷ್ಟೇ ಅಲ್ಲ ಮಹತ್ವದ ಒಡನಾಡಿ. ನೃತ್ಯಕ್ಕೆ ನೆರವಾಗುವಂತೆ ಬಳಸಬೇಕಾದ ವಾದ್ಯಗಳ ಅರಿವೂ ನೃತ್ಯ ಕಲಿಯುವವರಿಗೆ ಇರಲೇಬೇಕು. ಇದನ್ನು ಕಲಿಯಬೇಕಾದ ಅವಧಿ ಮತ್ತು ಕ್ರಮಗಳ ಬಗ್ಗೆ ಲೇಖಕರು ವಿವರವಾಗಿಯೇ ಪ್ರಸ್ತಾಪಿಸಿದ್ದಾರೆ. ಪರೀಕ್ಷೆಯ ದೃಷ್ಟಿಯಿಂದ ಎದುರಿಸಬಹುದಾದ ಪ್ರಶ್ನೆಗಳು ಮತ್ತು ಸರಿಯುತ್ತರಕ್ಕೆ ದೊರಕುವ ಅಂಕಗಳನ್ನೂ ನಮೂದಿಸಿರುವುದು ಪಠ್ಯಕ್ರಮವನ್ನು ಲಕ್ಷ್ಯದಲ್ಲಿರಿಸಿಕೊಂಡಿರುವುದರ ಗುರುತಾಗಿದೆ.

 

ನೃತ್ಯದಲ್ಲಿ ಆಹಾರ್ಯಾಭಿನಯವೂ ಮುಖ್ಯ. ನೃತ್ಯಪಟುವು ಧರಿಸುವ ಉಡುಪು, ಬಳಸುವ ಒಡವೆಗಳು, ಪ್ರಸಾಧನ ಇತ್ಯಾದಿಗಳು ನೃತ್ಯದ ಸೊಬಗನ್ನು ಹೆಚ್ಚಿಸುತ್ತವೆ. ನೃತ್ಯದ ಪ್ರಾದೇಶಿಕ ಲಕ್ಷಣಗಳಿಗೆ ತಕ್ಕಂತೆ ಆಹಾರ್ಯಗಳ ಬಳಕೆಯಾಗುವುದು ನಿರೀಕ್ಷಿತ. ಇವುಗಳೇ ನೃತ್ಯಶೈಲಿಯನ್ನು ಸೂಚಿಸುತ್ತವೆ. ಭರತನಾಟ್ಯದ ವೇಷಭೂಷಣಗಳ ಪರಿಚಯ ಮತ್ತು ಬಳಕೆಯ ಕ್ರಮದ ಅರಿವು ವಿದ್ಯಾರ್ಥಿ ಮತ್ತು ಗುರು ಇಬ್ಬರಿಗೂ ಇರಬೇಕು. ಇದರಿಂದ ಪ್ರೇಕ್ಷಕನಿಗೆ ಸಂತೋಷವಾಗುತ್ತದೆ. ಜೊತೆಗೆ ನೃತ್ಯ ಅರ್ಥ ಪಡೆದುಕೊಳ್ಳುತ್ತದೆ.

ಭಾವ ಪ್ರದರ್ಶನವೇ ಸಾತ್ವಿಕಾಭಿನಯವೆನಿಸಿಕೊಳ್ಳುವುದರಿಂದ, ನವರಸಗಳನ್ನೂ ಸಮರ್ಥವಾಗಿ ಅಭಿವ್ಯಕ್ತಿಸುವ ಕಲೆಯನ್ನು ನೃತ್ಯಪಟುವು ರೂಢಿಸಿಕೊಂಡಿರಬೇಕಾದ್ದು ಅವಶ್ಯಕ. ಇದಕ್ಕೆ ಸಾಹಿತ್ಯವು ಪೂರಕವಾಗುತ್ತದೆ. ನೃತ್ಯಪಟುವಿನ ಪರಿಣತಿಯು ಪ್ರಕಟಗೊಳ್ಳುವುದಷ್ಟೇ ಅಲ್ಲದೆ, ನೃತ್ಯದ ಗುರಿ ಸಾಧನೆಯಾಗುವುದೂ ಸಾತ್ವಿಕಾಭಿನಯದಿಂದ ಎಂದು ಗುರುಗಳು ಮತ್ತು ಸಾಧಕರು ತಿಳಿದಿರುತ್ತಾರೆ.

ಭರತನಾಟ್ಯ ಪ್ರದರ್ಶನವಾಗಲೀ ಅಥವಾ ಬೇರಾವುದೇ ನೃತ್ಯ ಶೈಲಿಯ ಪ್ರದರ್ಶನವಾಗಲೀ ಅದಕ್ಕೊಂದು ಕ್ರಮವಿರುತ್ತದೆ. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನೂ ಗುರು ಮತ್ತು ಶಿಷ್ಯರು ಮಾಡಿಕೊಳ್ಳುವುದು ಸಹಜ. ವೇದಿಕೆ, ವಾದ್ಯವೃಂದ ಮತ್ತು ಗಾಯಕರು ಕುಳಿತುಕೊಳ್ಳಬೇಕಾದ ಸ್ಥಳ, ಧ್ವನಿ ಮತ್ತು ಬೆಳಕಿನ ವ್ಯವಸ್ಥೆಗಳೆಲ್ಲವೂ ಸಮರ್ಪಕವಾಗಿದ್ದಾಗ ಮಾತ್ರ ನೃತ್ಯಕ್ಕೆ ಕಳೆ ಮಾತ್ರವಲ್ಲದೆ ಅರ್ಥ ಲಭಿಸುವುದು. ಪುಷ್ಪಾಂಜಲಿ, ಕೌತ್ವ, ದೇವರನಾಮ, ಅಲರಿಪು, ಜತಿಸ್ವರ, ತಿಲ್ಲಾನ ಇತ್ಯಾದಿಗಳ ಬಗ್ಗೆ ಸರಿಯಾದ ತಿಳಿವಳಿಕೆ ಅತ್ಯಗತ್ಯ. ಪುಷ್ಪಾಂಜಲಿಯಿಂದ ಆರಂಭಿಸಿ ತಿಲ್ಲಾನದವರೆಗೆ ನಾಟ್ಯಪ್ರದರ್ಶನದ ಎಲ್ಲ ಹಂತಗಳೂ ಕ್ರಮಬದ್ಧವಾಗಿದ್ದರೆ ನೃತ್ಯಪ್ರದರ್ಶನವು ಯಶಸ್ವಿಯಾಯಿತೆಂದು ತಿಳಿಯಬಹುದು.

ಪಾದಭೇದ, ಶಿರೋಭೇದ, ದೃಷ್ಟಿಭೇದ, ಗ್ರೀವಾಭೇದ, ಭ್ರೂಭೇದ, ಹಸ್ತಭೇದ, ಸ್ಥಾನಕ ಇತ್ಯಾದಿಗಳ ವಿಚಾರವಾಗಿ ವಿವರಣೆಯ ಜೊತೆಗೆ ರೇಖಾಚಿತ್ರಗಳ ಮೂಲಕ ಸ್ಪಷ್ಟನೆ ನೀಡಿರುವುದು ಕೃತಿಯ ಸಾರ್ಥಕತೆಯನ್ನು ಹೆಚ್ಚಿಸಿದೆ.

ಈ ಕೃತಿಯು ಸ್ಪರ್ಧಾತ್ಮಕ ಪರೀಕ್ಷೆಗಳ ಹಿನ್ನೆಲೆಯಲ್ಲಿ ಎಂದೇ ಸಿದ್ಧವಾಗಿದ್ದರೂ, ಎಲ್ಲ ಹಂತದ ಕಲಿಕೆಗೂ ಇದು ಉಪಯುಕ್ತವಾಗುತ್ತದೆ ಎಂಬುದರಲ್ಲಿ ಅನುಮಾನಪಡುವ ಅವಶ್ಯಕತೆ ಇಲ್ಲ. ಕೃತಿಯ ಕನ್ನಡ ಪಠ್ಯವು ಡಾ.ಮನೋರಮಾ ಅವರದು ಮತ್ತು ಅದರ ಇಂಗ್ಲಿಷ್ ಭಾಷಾಂತರ ಶ್ರೀಮತಿ ಶಾಲಿನಿ ಪಿ.ವಿಠ್ಠಲ್ ಅವರದಾದರೂ, ಡಾ.ಶೋಭಾ ಶಶಿಕುಮಾರ್ ಸೇರಿದಂತೆ ಮೂವರೂ ಒಟ್ಟಾಗಿ ಈ ಕೃತಿಯನ್ನು ಸಿದ್ಧಪಡಿಸಿದ್ದಾರೆ ಎನ್ನುವುದು ಸುಲಭವಾಗಿ ಅರ್ಥವಾಗುತ್ತದೆ. ಇಂಗ್ಲಿಷ್ ಭಾಷಾಂತರದಲ್ಲಿ ಜೊತೆಯಾಗಿರುವ ಡಾ.ದ್ವರಿತಾ ವಿಶ್ವನಾಥ್ ಮತ್ತು ಇಂಗ್ಲಿಷ್ ಪಠ್ಯದ ಸಂಪಾದನೆಯ ಜವಾಬ್ದಾರಿ ನಿರ್ವಹಿಸಿರುವ ಶ್ರೀಮತಿ ಮೀರಾ ಶ್ರೀಕಾಂತ್ ಅವರೆಲ್ಲರ ಒಟ್ಟು ಸಾಧನೆಯ ಫಲ ‘ಭರತ ನಾಟ್ಯಬೋಧಿನಿ’ ಎನ್ನುವುದು ಎಲ್ಲರಿಗೂ ವೇದ್ಯವಾಗುತ್ತದೆ. ಈ ಎಲ್ಲರಿಗೆ ಮಾರ್ಗದರ್ಶಕರಾಗಿರುವವರು ಈ ರಂಗದಲ್ಲಿ ನಿಷ್ಣಾತರಾದ ಶತಾವಧಾನಿ ಡಾ.ಆರ್.ಗಣೇಶ್ ಮತ್ತು ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ.

ಅಧ್ಯಯನ, ಅಧ್ಯಾಪನ ಮತ್ತು ಪ್ರಯೋಗ ಮಾತ್ರವಲ್ಲದೆ ಸಂಶೋಧನೆಗೂ ಇಂಬು ಕೊಟ್ಟಿರುವ ಈ ಎಲ್ಲ ವಿದ್ವಾಂಸರ ಈ ಕೃತಿ ಕಲಿಯುವವರಿಗೆ, ಕಲಿಸುವವರಿಗೆ ಮಾತ್ರವಲ್ಲದೆ ಪರಿಣತಿಯ ಗುರಿ ಇಟ್ಟುಕೊಂಡಿರುವವರಿಗೂ ನೆರವಾಗುತ್ತದೆ ಎಂದು ನಿರೀಕ್ಷಿಸಬಹುದು. ಕನ್ನಡ ಬಲ್ಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ಕನ್ನಡೇತರರಿಗೂ ಕೃತಿಯ ಲಾಭವಾಗುತ್ತದೆ ಎನ್ನುವುದು ಗಮನಾರ್ಹ.

ಕೃತಿಯ ಹೆಸರು: ಭರತ ನಾಟ್ಯಬೋಧಿನಿ

ಕೃತಿಕಾರರು: ಡಾ.ಮನೋರಮಾ ಬಿ.ಎನ್. (ಕನ್ನಡ)

ಶ್ರೀಮತಿ ಶಾಲಿನಿ ಪಿ. ವಿಠ್ಠಲ್ (ಇಂಗ್ಲಿಷ್)

ಅನುವಾದದ ಪರಿಷ್ಕರಣೆ: ಡಾ.ದ್ವರಿತಾ ವಿಶ್ವನಾಥ್

ಪ್ರಕಾಶಕರು: ನೂಪುರ ಭ್ರಮರಿ(ರಿ) ಮತ್ತು ಕಲಾಗೌರಿ

ಪುಟಗಳು: xvi+೨೮೩

ಬೆಲೆ: ರೂ.೪೦೦/-

ಮೊದಲ ಪ್ರಕಟಣೆ: ೨೦೧೮

 

Leave a Reply

*

code