ಅಂಕಣಗಳು

Subscribe


 

“ಇಂದಿನ ರಂಗದ ಮೇಲೆ ಭರತ” – ’ಬೆಂಗಳೂರು ನಾಗರತ್ನಮ್ಮ’ ನಾಟಕ ವಿಮರ್ಶೆ

Posted On: Wednesday, May 10th, 2023
1 Star2 Stars3 Stars4 Stars5 Stars (No Ratings Yet)
Loading...

Author: ಡಾ. ಪ್ರತಿಭಾ ಸತ್ಯನಾರಾಯಣ, ಬೆಂಗಳೂರು.

ನೂಪುರ ಭ್ರಮರಿ (ರಿ.)  IKS Centre– ಶಾಸ್ತ್ರರಂಗ ಅಧ್ಯಯನ ತರಬೇತಿಯ (Internship/Fellowship) ಅಂಗಭಾಗವಾಗಿ  ಪ್ರಕಟವಾದ ಲೇಖನ – 23

ಎರಡು ಸಾವಿರ ವರ್ಷಗಳ  ಹಿಂದಿನಿಂದಲೂ ನಮ್ಮ ದೇಶದಲ್ಲಿ ರಂಗದ ಮೇಲೆ ಕಥೆಗಳನ್ನು ಹೇಳಿ, ಅಭಿನಯಿಸಿ, ಕುಣಿದು, ಸೌಂದರ್ಯೋಪಾಸನೆಯನ್ನು ಮಾಡಿಕೊಂಡು ಬಂದಿದ್ದಾರೆ. ಆದರೆ, ಭರತ ತಿಳಿಸುವ ದಶರೂಪಕದ ಪ್ರಕಾರ ಸಂಖ್ಯೆ ಮತ್ತು ಲಕ್ಷಣಗಳಲ್ಲಿ ನಿರ್ದಿಷ್ಟವಾಗದೇ ಹೋದರೂ, ಅನೇಕ ಉಪರೂಪಕಗಳು ಯಾವಾಗಲೂ ನಮ್ಮಲ್ಲಿ ಪ್ರಯೋಗವಾಗಿಯೇ ಇದ್ದವು. ಈ ನಿಟ್ಟಿನಲ್ಲಿ, ” ಬೆಂಗಳೂರು ನಾಗರತ್ನಮ್ಮ ” ಎಂಬ ಪ್ರದರ್ಶನದ ವಿಮರ್ಶೆಯನ್ನು ಯಥಾಮತಿ ಪ್ರಯತ್ನಿಸುತ್ತೇನೆ.

ಈ ಸಂಗೀತ ರೂಪಕವನ್ನು ಶ್ರೀ ಮಲೆಯೂರು ಗುರುಸ್ವಾಮಿಯವರ ” ಕಪಿಲೆ ಹರಿದಳು ಕಡಲಿಗೆ ” ಮತ್ತು ಶ್ರೀ ವಿ. ಶ್ರೀರಾಮ್ ಅವರ “The Devadasi and the Saint – The life and times of Bengalooru Nagaratnamma” ಎಂಬ ಕೃತಿಗಳನ್ನಾಧರಿಸಿ  ಶ್ರೀ ಹೂಲಿ ಶೇಖರ್ ಮತ್ತು ಪ್ರತಿಭಾ ನಂದಕುಮಾರ್ ಅವರ ರಂಗ ನಿರ್ದೇಶನದಲ್ಲಿ ತಂದಿದ್ದಾರೆ.  ಕರ್ನಾಟಕ ಕಲಾಶ್ರೀ ಡಾ ||ಪುಸ್ತಕಮ್  ರಮಾ ಅವರ ನಿರ್ಮಾಣ ಮತ್ತು ಸಂಗೀತ ನಿರ್ದೇಶನದಲ್ಲಿ,  ಶ್ರೀ ನಾಗಾಭರಣ ಅವರ ನಿರ್ದೇಶನ, ವಿನ್ಯಾಸ ಮತ್ತು ಪರಿಕಲ್ಪನೆಯಲ್ಲಿ ಸಂಗೀತ ಸಂಭ್ರಮ ಟ್ರಸ್ಟ್ ಮತ್ತು ಬೆನಕ  ನಾಟಕ ತಂಡದ ವತಿಯಿಂದ ಪ್ರದರ್ಶಿಸಲ್ಪಟ್ಟಿದೆ. ಎರಡು ಘಂಟೆ ಹತ್ತು ನಿಮಿಷಗಳ ಈ ಪ್ರದರ್ಶನದಲ್ಲಿ ನವಲತ್ತು ಕಲಾವಿದರು ರಂಗದ ಮೇಲೆ ಬಂದು, ಅದರಲ್ಲಿ 20 ಶಾಸ್ತ್ರೀಯ ಗಾಯಕರು ಭಾಗವಹಿಸಿ, ಜಾವಳಿ, ಅಷ್ಟಪದಿ, ತ್ಯಾಗರಾಜರ ಕೃತಿಗಳು ಸೇರಿದಂತೆ ಇಪ್ಪತೈದು ಶಾಸ್ತ್ರೀಯ ಸಂಗೀತದ ಹಾಡುಗಳನ್ನು ಸಮರ್ಪಿಸುತ್ತಾರೆ. ಈ ಪ್ರಸ್ತುತಿಯಲ್ಲಿ ಪುಲಕೇಶಿ ಕಸ್ತೂರಿ ಅವರು ನೃತ್ಯ ನಿರ್ದೇಶನವನ್ನು ಮಾಡಿದ್ದು; ಇದರ ಮೊದಲನೇ ಪ್ರದರ್ಶನವು, 2019ರ ಡಿಸೆಂಬರ್ ಇಪ್ಪತ್ತೇಳನೇ ತಾರೀಖು, ಚೌಡಯ್ಯ ಸಭಾಂಗಣದಲ್ಲಿ ಜರುಗಿತು. ಈಗಾಗಲೇ ನಾಟಕವು ಇಪ್ಪತ್ತೈದು ಯಶಸ್ವೀ ಪ್ರದರ್ಶನಗಳನ್ನು ನಡೆಸಿದ್ದು,18ನೇ ಏಪ್ರಿಲ್  ನಂದು ಆದ  ರಂಗ ಶಂಕರದ ಪ್ರದರ್ಶನವು ಅದರ 26 ನೇ ಪ್ರದರ್ಶನವಾಗಿತ್ತು.

“ವಿದ್ಯಾ ಸುಂದರಿ”,” ಭೋಗರತ್ನ “ಎಂದು  ಮೊದಲು ಕರೆಯಲ್ಪಟ್ಟು, ಕೊನೆಯಲ್ಲಿ ತನ್ನ ಸರ್ವಸ್ವವನ್ನು ತ್ಯಾಗರಾಜರ ಸಮಾಧಿಯ ಜೀರ್ಣೋದ್ಧಾರಕ್ಕಾಗಿ ಸಮರ್ಪಿಸಿದ “ತ್ಯಾಗರತ್ನ “, ಶ್ರೀಮತಿ ನಾಗರತ್ನಮ್ಮ ಅವರ ಕಥೆಯಿದು.

ಇತಿವೃತ್ತದಲ್ಲಿ, ದೇವದಾಸಿ ತಾಯಿಯಾದ ಪುಟ್ಟಲಕ್ಷಮ್ಮ ಮತ್ತು ವಕೀಲ್ ಸುಬ್ಬರಾಯರ ಮಗಳಾಗಿ 1878 ಇಸವಿಯಲ್ಲಿ ಜನಿಸಿದ ನಾಗರತ್ನಮ್ಮ, ತಂದೆಯಿಂದ ತೊರೆಯಲ್ಪಟ್ಟಳು. ತಾಯಿಯೂ ಬೇಗ ತೀರಿಕೊಂಡ ಕಾರಣ ದಿಕ್ಕುಕಾಣದ ಹುಡುಗಿಯ ಬಾಳಲ್ಲಿ ಬೆಳಕಾದವರು ಶಾಸ್ತ್ರಿಗಳು. ಅವರು ಇವಳಿಗೆ ಸಂಸ್ಕೃತ, ತೆಲುಗು  ಮತ್ತು ಸಂಗೀತವನ್ನು ಕಲಿಸುತ್ತಾರೆ. 1910ರ ಹೊತ್ತಿಗೆ ಭಾರತದಾದ್ಯoತ ಪ್ರಸಿದ್ಧಳಾದ ಅವಳ ಜೀವನದಲ್ಲಿ ಜಸ್ಟಿಸ್ ನರಹರಿರಾಯರು ಪ್ರವೇಶಿಸಿ, ಅವಳಿಗೆ ಪ್ರತ್ಯೇಕವಾದ ಆವಾಸವನ್ನು “ಮೌಂಟ್ ಜಾಯ್ ” ಅಲ್ಲಿ ಕಲ್ಪಿಸುತ್ತಾರೆ. ತಮ್ಮ ಪತ್ನಿಯ ಅನುಮೋದನೆಯೊಂದಿಗೆ ಇವಳೊಂದಿಗೆ  ವಿಲಸಿಸುತ್ತಾರೆ. ಕೊನೆಯಲ್ಲಿ ಅವರ ಆರೋಗ್ಯದ ಸಮಸ್ಯೆಯ ಕಾರಣ, ನಾಗರತ್ನಮ್ಮರನ್ನು ಮದ್ರಾಸಿಗೆ ಕಳುಹಿಸಿ, ಅಲ್ಲಿ ನೆಲೆನಿಲ್ಲುವಂತೆ ಮಾಡಿ, ಕಲೆಯಲ್ಲಿ ಖ್ಯಾತಿಯನ್ನು ಸಂಪಾದಿಸಲು ಅನುವಾಗುತ್ತಾರೆ. ಅನಂತರ ಬನ್ನಿಬಾಯಿ ಎಂಬ ಒಬ್ಬ ಹೆಣ್ಣು ಮಗಳನ್ನು ದತ್ತುಪುತ್ರಿಯಾಗಿ ಸ್ವೀಕರಿಸುತ್ತಾರೆ ನಾಗರತ್ನಮ್ಮ. Mansion house ಎಂಬ ಅದ್ಭುತ ಬಂಗಲೆಯಲ್ಲಿ  ವೈಭವೋಪೇತವಾಗಿ ಬಾಳಿದ ನಾಗರತ್ನಮ್ಮ, ತಮ್ಮ ಗುರುಗಳಾದ ಬಿಡಾರಂ ಕೃಷ್ಣಪ್ಪ ಅವರ ಸೂಚನೆಯಂತೆ, ಶ್ರೀ ತ್ಯಾಗರಾಜರ ಸಮಾಧಿಯ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಳ್ಳುತ್ತಾರೆ. ತಮ್ಮ ಮನೆ, ಆಭರಣ ಎಲ್ಲವನ್ನೂ ಮಾರಿ, ತಿರುವಯ್ಯುರಿನಲ್ಲಿ ಭವ್ಯವಾದ ದೇವಾಲಯ, ವಸತಿ ಛತ್ರಗಳನ್ನು ಕಟ್ಟಿಸಿ, ಕೊನೆಯಲ್ಲಿ ಯಾರಿಗೂ ತಿಳಿಯದ ಹಾಗೆ ಅಂತ್ಯವನ್ನು 1952ರಲ್ಲಿ ಕಾಣುತ್ತಾರೆ.

ನಾಯಿಕಾಪ್ರಧಾನವಾದ ಈ ರೂಪಕದಲ್ಲಿ ನಾಗರತ್ನಮ್ಮಳೇ ನಾಯಿಕೆ. ದೇವದಾಸಿ ಕುಲದಲ್ಲಿ ಹುಟ್ಟಿ, ವೇಶ್ಯೆ ಎಂದು ಜನರ ಬಾಯಲ್ಲಿ ತೆಗೆಳಿಸಿಕೊಂಡು, ಸಂಗೀತ ಕ್ಷೇತ್ರದಲ್ಲಿ ಹತ್ತುಹಲವು ಮೊದಲುಗಳಿಗೆ ಕಾರಣೀಭೂತರಾದ ಇವರು,   ಕನ್ನಡಿಗರಿಗೆ ಪರಿಚಿತರಾಗಿದ್ದು ಬಹಳ ಕಡಿಮೆ. ಐದನೇ ವಯಸ್ಸಿನಲ್ಲಿ ಮೊದಲನೇ ಕಛೇರಿಯನ್ನು ಕೊಟ್ಟ ನಾಗರತ್ನಮ್ಮ, ತಮ್ಮ ಜೀವನದಲ್ಲಿ 1200 ಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮಗಳನ್ನು ನೀಡಿದರು. ಗ್ರಾಮಫೋನ್ ಎಂಬ ತಂತ್ರದಲ್ಲಿ ಮುದ್ರಿತವಾದ ಧ್ವನಿಯುಳ್ಳ ಮೊದಲನೇ ಮಹಿಳೆ. ಹರಿಕಥೆಗಳನ್ನು ಸುಲಲಿತವಾಗಿ ಪಸರಿಸಿದ ಖ್ಯಾತಿ ಇವರದ್ದು. ಸರ್ಕಾರಕ್ಕೆ ತೆರಿಗೆ ಕಟ್ಟಿದ ಮೊದಲನೇ ಕಲಾವಿದೆ, ವಿದೇಶದಲ್ಲಿ ಪ್ರದರ್ಶನ ಕೊಟ್ಟ ಮೊದಲನೇ ಮಹಿಳೆ, ದೇವದಾಸಿ ಪದ್ಧತಿಯನ್ನು ರದ್ದುಗೊಳಿಸುವ ಕಾಲದಲ್ಲಿ ಬದುಕಿದ ಕೊನೆಯ ದೇವದಾಸಿಯರಲ್ಲಿ ಒಬ್ಬಳು. ದೇವದಾಸಿಯರು ವೇಶ್ಯಯರಲ್ಲ ಎಂದು  ಧೈರ್ಯವಾಗಿ ಸಾರಿದ ವೀರ ವನಿತೆ. “ರಾಧಿಕಾ ಸಾಂತ್ವನಮು” ಎಂಬ ದೇವದಾಸಿಯಿಂದ ರಚಿತವಾದ ಶೃಂಗಾರಕಾವ್ಯವನ್ನು ಮೊದಲ ಬಾರಿಗೆ ಪುರುಷಸಮಾಜವನ್ನು ಧಿಕ್ಕರಿಸಿ ಪ್ರಕಟಿಸಿದರು. ಮಹಿಳೆಯರು ತ್ಯಾಗರಾಜರ ಆರಾಧನೆಯಲ್ಲಿ ಹಾಡಬಾರದು ಎಂಬ ದುರಾಗ್ರಹವನ್ನು ಪ್ರತಿಭಟಿಸಿ, ಕೇವಲ ಮಹಿಳೆಯರದ್ದೇ ತಂಡದೊಂದಿಗೆ ಅಲ್ಲಿ ಹಾಡಿ ಸಾಧಿಸಿದವರು. ಕೊನೆಗೆ ತನ್ನನ್ನೇ ತಾನು “ರೋಗರತ್ನ ” ಎಂದು ಕರೆದುಕೊಳ್ಳಲು,ಡಿ. ವಿ. ಜಿ. ಯಂಥಹ ಅಸಾಮಾನ್ಯರಿಂದ “ತ್ಯಾಗರತ್ನ ” ಎಂಬ ಬಿರುದನ್ನು ಪಡೆದ  ಧೀರ ನಾರಿ ಇವರು. ಅವರ ಪಾರ್ಥಿವ ಶರೀರವನ್ನು ತ್ಯಾಗರಾಜರ ಪಲ್ಲಕ್ಕಿಯಲ್ಲೇ ತೆಗೆದುಕೊಂಡು ಹೋಗಲಾಗಿತ್ತು. ಇದು ಅವರ ಭಕ್ತಿಗೆ ಸಂದ ಗೌರವ.

ನಾಯಕನೆಂದು ಪರಿಗಣಿಸಬಹುದಾದರೆ, ಜಸ್ಟಿಸ್ ನರಹರಿರಾಯರೇ ಇಲ್ಲಿ ಉದಾತ್ತ, ಲಲಿತ ನಾಯಕ. ನಾಟಕದಲ್ಲಿ ಬರುವ ಬಹುಮಟ್ಟಿನ ಪಾತ್ರಗಳು ದೇವದಾಸಿ ಪರಂಪರೆಗೆ ಸೇರಿದವರು, ಸಂಗೀತ ಕಲಾವಿದರು ಮತ್ತು  ಕಲಾಪೋಷಕರು.

ರಸಭಾವಗಳನ್ನು ಪರಾಮರ್ಶಿಸಿದರೆ ಶೃಂಗಾರಕ್ಕೆ ಪೂರಕವಾಗಿ ಹಾಸ್ಯ, ಅದ್ಭುತ, ಸ್ವಲ್ಪ ಬೀಭತ್ಸ ರಸ.. ಭಕ್ತಿ ಭಾವದ ಆವೇಶ, ಕಾರುಣ್ಯದ ಪರಾಕಾಷ್ಠತೆ ಇಲ್ಲಿದೆ !

 

ರಂಗದ ಪರಿಕರಗಳು ಮತ್ತು ತಂತ್ರಾಂಶ :

ರೂಪಕಗಳಲ್ಲಿ ಕಥಾವಿಸ್ತೀರ್ಣಕ್ಕೆ ಬೇಕಾದ ಅರ್ಥಪ್ರಕೃತಿಗಳಾದ ಬೀಜ ( ಕಥೆಯ ಮೂಲಭೂತ ಘಟನೆಯ ಸೂಚನೆ ), ಬಿಂದು ( ಬೀಜ ರೂಪವಾದ ಘಟನೆಯ ವಿಸ್ತಾರ  ಪತಾಕ ( ಉಪಕಥೆ ) ಪ್ರಕರಿ ( ಪ್ರಾಸಂಗಿಕ ವೃತ್ತಾಂತ ) ಮತ್ತು ಕಾರ್ಯ (ಫಲ )ಇಲ್ಲಿವೆ. ನಾಯಿಕೆಯ ಕಾರ್ಯದೃಷ್ಟಿಯಿಂದ ಐದು ಸ್ಥಿತಿಗಳಿರುತ್ತವೆ.  ಆರಂಭ ( ಮುಖ್ಯ  ಕಾರ್ಯದಲ್ಲಿ ನಾಯಕಿಯ ಔತ್ಸುಕ್ಯ) ಯತ್ನ ( ಅಡ್ಡಿ ಬರಲು, ಅದರ ನಿವಾರಣೆಗೆ ಕಾರ್ಯ ) ಪ್ರಾಪ್ತ್ಯಾಶೆ ( ಪ್ರಾಪ್ತಿಫಲದ ಸಂಭವ ) ನಿಯತಾಪ್ತಿ ( ಪ್ರಾಪ್ತಿಫಲದ ನಿಶ್ಚಿತತೆ) ಮತ್ತು ಫಲಾಗಮ ( ಕಾರ್ಯ ಕೈಗೂಡುವಿಕೆ ) ಎಂಬ ಅವಸ್ಥೆಗಳು, ಐದು ಅರ್ಥಪ್ರಕೃತಿಗಳು ಮತ್ತು ಐದು ಅವಸ್ಥೆಗಳು ಕ್ರಮವಾಗಿ ಸೇರಿ ಐದು ಸಂಧಿಗಳಾಗುತ್ತವೆ- ಮುಖ ( ಕಥೆಯ ಆರಂಭ, ನಾಯಕನ ಕಾರ್ಯಾರಂಭ ) ಪ್ರತಿಮುಖ ( ಕಥೆಯ ಮುಂದುವರಿಕೆ, ನಾಯಕನ ಯತ್ನ ) ಗರ್ಭ ( ಕಾರ್ಯಫಲ ಕೈಗೂಡುವ ಸೂಚನೆ ) ಅವಮರ್ಶ ( ನಾಯಕನ ದೃಢತೆ, ಫಲಪ್ರಾಪ್ತಿಯ ನಿಶ್ಚಯ ) ಮತ್ತು ನಿರ್ವಹಣ (ಕಾರ್ಯಫಲ ಪ್ರಾಪ್ತಿ ) ಎಂಬ ಐದು ಸಂಧಿಗಳು ಕೂಡಿದ್ದು, ಕಥೆಯ ಉತ್ತಮ ಪ್ರಗತಿಯನ್ನು ತೋರಿಸುತ್ತದೆ. ನಾಯಿಕೆಯು ಸಫಲವಾಗಿ ಎಲ್ಲವನ್ನೂ ಸಾಧಿಸುತ್ತಾಳೆ.

ರೂಪಕದ ಆರಂಭದಲ್ಲಿ ತ್ಯಾಗರಾಜರ ವಿಗ್ರಹದ ದರ್ಶನ, ನಾಂದಿ ಪದ್ಯವಾಗಿ “ಜಗದಾನಂದಕಾರಕ ” ಎಂಬ ಕೃತಿಯ ಗಾಯನ ಮತ್ತು ಅದಕ್ಕೆ ನೃತ್ಯ. ಅನಂತರ, ನಾಟಕ ತಂಡದ ಪರಿಚಯ, ಅದರ ಕಾರಣೀಭೂತರ ನಾಮೋಲ್ಲೇಖ, ನಾಟಕದ ಶೀರ್ಷಿಕೆಯ ಮತ್ತು ನಾಯಿಕೆಯ ಪರಿಚಯ..ನಾಂದಿಯ ಕೊನೆಯಲ್ಲಿ ಪ್ರೇಕ್ಷಕರಿಗೆ ಸ್ವಾಗತ. ಇದನ್ನೇ ಆಮುಖ ಅಥವಾ ಪ್ರಸ್ತಾವನಾ ಎಂದು  ನಾಟ್ಯಶಾಸ್ತ್ರದ ಪರಿಭಾಷೆಯಲ್ಲಿ ತಿಳಿಸುತ್ತಾರೆ.

ಪ್ರವೇಶದ್ವಾರದಿಂದ ನಾದಸ್ವರದ ತಂಡದ ಪ್ರವೇಶವಾಗುತ್ತದೆ, ನಾಯಿಕೆಯ ಕಥೆಯನ್ನು ಸಂಪೂರ್ಣವಾಗಿ flashback ( ಸಿಂಹಾವಲೋಕನ) ಎಂಬ ತಂತ್ರಾಂಶದಿಂದ ಜ್ಞಾಪಿಸಿ ತಿಳಿಸುವುದು ಇಲ್ಲಿದೆ. ಬೆಂಕಿ ಮತ್ತು ಅದರ ಪರಿಣಾಮವಾಗಿ ಪಲಾಯನದ ಚಿತ್ರಣವಾದ ಬಳಿಕ, ಆರರಿಂದ ಎಂಟು ನರ್ತಕಿಯರು ಹಾಡುತ್ತಾ, ನರ್ತಿಸುತ್ತಾ ಇತಿವೃತ್ತದ ಮುಂದುವರೆಯುವಿಕೆಯನ್ನು ತೋರಿಸುತ್ತಾರೆ. ಪಾತ್ರವು ರಂಗದ ಮೇಲಿದ್ದಾಗ ದೇಶಾಂತರವನ್ನು ತೋರಿಸುವ ಆಹಾರ್ಯದ ಪರಿವರ್ತನೆಯನ್ನು ಕಾಣಬಹುದು. ಆಹಾರ್ಯದ ವಿಶೇಷ ಸಿದ್ಧತೆಯಿಂದ ರಂಗದ ಮಧ್ಯದಲ್ಲೇ ಮನೆಯ ಪ್ರವೇಶ ದ್ವಾರ, ಪರದೆ ಇಲ್ಲದೆ ಭಿನ್ನ ದೃಶ್ಯಗಳ ತೋರುವಿಕೆ, ಕೊನೆಗೆ ಸಮುದ್ರದ ದೃಶ್ಯವೂ ಕಾಣುತ್ತದೆ.ಹೀಗೆ ಒಂದೇ ಅಂಕದ ರೂಪಕದಲ್ಲಿ ಕಥೆಯು ಮುಂದುವರೆಯುತ್ತದೆ. ರಂಗದಿಂದ ಎಲ್ಲರ ನಿರ್ಗಮನ ಎಂಬುದಿಲ್ಲ. ಹೀಗೆ ದೇಶಾಂತರ ಮತ್ತು ಕಾಲಾಂತರವನ್ನು ತೋರಿಸುತ್ತಾರೆ. ಬೇರೆ ಬೇರೆ ಮಹಿಳೆಯರು ಒಬ್ಬಳೇ ನಾಯಿಕೆಯ ಪಾತ್ರವನ್ನು ಅವಳ ವಯೋಧರ್ಮಕ್ಕನುಸಾರವಾಗಿ ತೋರಿಸುವರು. ಇದಕ್ಕೆ ಇಬ್ಬರು ಅಭಿಮುಖವಾಗಿ ನಿಂತು, ಪರಿವರ್ತಿಸಿ, ನೂತನವಾಗಿ ಪ್ರವೇಶಿಸಿದ ಮಹಿಳೆಯು ಮುಂದುವರಿಯಲು ಅನುಕೂಲ ಮಾಡುತ್ತಾಳೆ. ಆಹಾರ್ಯದ ವೈಶಿಷ್ಟ್ಯದಲ್ಲಿ,ವಿದೇಶಿಯನು ತನ್ನ ಉಡುಪಿನಲ್ಲಿ ಪಾದರಕ್ಷೆಯೊಂದಿಗೆ ಪ್ರವೇಶಿಸುತ್ತಾನೆ. ಭಜನೆ ಮಾಡುತ್ತಲೇ ನಾಗರತ್ನಮ್ಮ ಹರಿಕಥೆದಾಸರಂತೆ ವೇಷವನ್ನು ಧರಿಸುತ್ತಾಳೆ. ದೀಪಕ್ಷೇಪದ ಕೌಶಲದಿಂದ ಎರಡು ಪ್ರದೇಶಗಳ ನಿರ್ದೇಶನವು ಆಧುನಿಕ ತಂತ್ರಜ್ಞಾನದ ಪ್ರಭಾವಕಾರಿ ಪರಿಣಾಮವನ್ನು ತೋರುತ್ತದೆ.  ಅಂತೆಯೇ ಶಾಸ್ತ್ರಕ್ಕೆ ಅಷ್ಟಾಗಿ ಸಮ್ಮತವಾಗದ ಶವದ ದೃಶ್ಯವೂ ಇದೆ.

ಸಂಗೀತದಿಂದಲೇ ಹಿಂದಿನ ಕಥೆ, ಶೃಂಗಾರದ ತೋರುವಿಕೆ ಇದೆ . ಹಾಗೆಂದು  ಅದನ್ನು ವರ್ಣಿಸಲು ಪ್ರತ್ಯೇಕ ಶ್ಲೋಕಗಳೋ  ಹಾಡುಗಳೋ ಇಲ್ಲ . ಇದನ್ನೇ ಶಾಸ್ತ್ರದಲ್ಲಿ ವಿಷ್ಕಂಭಕ ಅಥವಾ ಪ್ರವೇಶಕಗಳಿಗೆ ಹೋಲಿಸಬಹುದು. ಇತಿವೃತ್ತದ ಮುಂದುವರಿಕೆಯನ್ನು ಶ್ಲೋಕಗಳ, ಸಂಭಾಷಣೆಗಳ ಮೂಲಕ ತೋರಿಸಲಾಗಿತ್ತು.

ವಾಚಿಕಾಭಿನಯದಲ್ಲಿ,ಸಂಸ್ಕೃತದ ಮಂಗಳದೊಂದಿಗೆ ಆರಂಭವಾಗಿ, ಕನ್ನಡದಲ್ಲಿ ಮಾತುಗಳನ್ನಾಡಿ, ಅರ್ಥೋಪಕ್ಷೇಪಕಗಳಾದ ( ಕಥೆಯ ಮುಂದುವರೆಯುವಿಕೆಗೆ ಮಧ್ಯಮ ಅಥವಾ  ನೀಚ ಪಾತ್ರಗಳು ಮಾಡುವ ಸಂಭಾಷಣೆ)  ವಿಷ್ಕಂಭಕ- ಪ್ರವೇಶಕಗಳಲ್ಲಿ ತೆಲುಗು, ತಮಿಳು ಮತ್ತು ಆಂಗ್ಲ ಭಾಷೆಗಳಲ್ಲಿಯೂ ಸಂಭಾಷಣೆ ಮಾಡುತ್ತಾರೆ . ಪ್ರಕಾಶ, ಸ್ವಗತ, ಜನಾಂತಿಕ, ಅಪವಾರಿತ, ಆಕಾಶಭಾಷಿತ ಎಂಬ ಶ್ರವ್ಯಾಶ್ರಾವ್ಯ (ಕೇಳಬೇಕಾದ / ತಮಗೆ ತಾವೇ ಹೇಳಿಕೊಳ್ಳುವುದು / ಎಲ್ಲರಿಗೂ ಕೇಳಬಾರದ ಮಾತುಗಳು ಇತ್ಯಾದಿ ) ತಂತ್ರದ ಬಳಕೆ ಕಾಣುತ್ತದೆ.

“ಬೆಂಗಳೂರು ನಾಗರತ್ನಮ್ಮ” ಎಂಬುದು ಯಾವ ಪ್ರಕಾರದ ರೂಪಕ ಎಂಬ ಪ್ರಶ್ನೆಗೆ,

ನಾಟ್ಯಶಾಸ್ತ್ರದ ಒಂದು ಪ್ರಕ್ಷಿಪ್ತ ಶ್ಲೋಕವನ್ನು ಉದಾಹರಿಸಬಹುದು. ” ಪಂಚಾವರಾ ದಶಪರಾ ಹ್ಯಂಕಾ: ಸ್ಯು: ನಾಟಕೆ ಪ್ರಕರಣೆ ಚ “( ನಾ. ಶಾ. 18 ಅಧ್ಯಾಯ, ಶ್ಲೋಕ 19). ಎಂದರೆ, ನಾಟಕ ಮತ್ತು ಪ್ರಕರಣದಲ್ಲಿ ಕನಿಷ್ಠವೆಂದರೆ ಐದು ಅಂಕಗಳಿರಬೇಕು, ಗರಿಷ್ಠವೆಂದರೆ ಹತ್ತು ಅಂಕಗಳಿರಬೇಕು. ಪ್ರಕ್ಷಿಪ್ತವೆಂಬ ಕಾರಣದಿಂದ ಈ ಶ್ಲೋಕವನ್ನು ಪರಿಗಣಿಸದಿದ್ದರೆ, ಬೆಂಗಳೂರು ನಾಗರತ್ನಮ್ಮ, ಪ್ರಕರಣ ಎಂಬ ರೂಪಕದ ಪ್ರಕಾರಕ್ಕೆ ಹೆಚ್ಚು ಒಪ್ಪುತ್ತದೆ ಎನ್ನಬಹುದು. ಇಲ್ಲವಾದರೆ ಉಪರೂಪಕಭೇದಗಳಾಗಿ ಕಾಣುವುದಾದರೆ;

1. ಕಾವ್ಯ ( ಒಂದೇ ಅಂಕದ, ಉದಾತ್ತ ನಾಯಕ ನಾಯಿಕೆಯರು, ಅನೇಕ ಗೀತಿಗಳು, ಶುದ್ಧಳಾದ ಗಣಿಕೆ, ಶೃಂಗಾರ ರಸ ) ಅಥವಾ

2. ಹಲ್ಲೀಸ (ಒಂದು ಅಂಕ, ಮಾತು ಉದಾತ್ತ,7-10 ಹೆಂಗಸರು, ಕೈಶಿಕಿ ವೃತ್ತಿ, ತಾಳ ಲಯಗಳು ಹೆಚ್ಚು )(ಸಂಸ್ಕೃತ ನಾಟಕ – ಎ. ಆರ್. ಕೃಷ್ಣಶಾಸ್ತ್ರಿ ) ಎಂಬ ಉಪರೂಪಕಪ್ರಕಾರಗಳಲ್ಲಿ ಅಂತರ್ಭಾವವಾಗುತ್ತದೆ ಎಂದು ಅನಿಸುತ್ತದೆ.

ಏಕೆಂದರೆ ನಾಟಕಾದಿ ಹತ್ತು ರೂಪಕಗಳು ರಸವನ್ನೂ ವಾಕ್ಯಾರ್ಥವನ್ನೂ ಅಭಿನಯಿಸುವುದೆಂದೂ; ಉಪರೂಪಕಗಳು ಭಾವವನ್ನೂ ಪದಾರ್ಥಗಳನ್ನೂ ಅಭಿನಯಿಸುವವು ಎಂದು ಕೆಲವರ ಅಭಿಪ್ರಾಯ. ” ಅವಾಂತರಭಿದಾ: ಕಶ್ಚಿತ್ ಪದಾರ್ಥಾಭಿನಯತ್ಮಿಕಾ ” ಎಂಬ ವಾಕ್ಯದಂತೆ, ಪದಾರ್ಥಾಭಿನಯಗಳನ್ನು ಹೇಳುವ ಉಪರೂಪಕಗಳು ಹತ್ತರಿಂದ ಇಪ್ಪತ್ತು ಪ್ರಕಾರದ್ದಾಗಿವೆ. ಇವುಗಳ ಪ್ರಕಾರಗಳ ಎಲ್ಲಾ ಲಕ್ಷಣಗಳೂ ಇಲ್ಲಿ ಕಾಣುವುದಿಲ್ಲ ಮತ್ತು ಲಕ್ಷಣಾಧಾರಿತವಾಗಿ ಈಗ ನಾಟಕವನ್ನು ಬರೆಯುವುದೂ ಇಲ್ಲ. ವಿದ್ವಜ್ಜನರೇ ಇಲ್ಲಿ ಪ್ರಮಾಣ. ಸಹೃದಯನಿಗಾದರೋ ಕರುಣ ರಸಭರಿತವಾದ, ಸುಂದರವಾದ ನಾಲ್ಕು ಅಭಿನಯಗಳುಳ್ಳ, ಕೈಶಿಕೀ ಮತ್ತು ಭಾರತೀ ವೃತ್ತಿಗಳು ಪ್ರಧಾನವಾಗಿರುವ, ಕೊನೆಗೆ ಶಾಂತರಸದಲ್ಲಿ ಪರ್ಯವಸಾನವಾಗುವ ರಸಾಯನವೇ ಭಾಗ್ಯ!

Leave a Reply

*

code