Author: ಮನೋರಮಾ. ಬಿ.ಎನ್
ಬೆಂಗಳೂರಿನ ಸಾಂಸ್ಕೃತಿಕಲೋಕಕ್ಕೂ ಮತ್ತು ಬೆಂಗಳೂರು ಹಬ್ಬಕ್ಕೂ ಒಂದು ಬಗೆಯ ಆತ್ಮೀಯ ಸಂಬಂಧ. ನಗರದ ವಿವಿಧ ಸಭಾಂಗಣಗಳಲ್ಲಿ ವಾರದುದ್ದಕ್ಕೂ ನಡೆಯುವ ನಾಟಕ, ರಂಗಭೂಮಿ, ಸಿನೆಮಾ, ನೃತ್ಯ, ಭಾರತೀಯ ಸಂಗೀತ, ಪಾಶ್ಚಾತ್ಯ ಸಂಗೀತ, ವಾದ್ಯಸಂಗೀತ, ಜನಪದ ಮುಂತಾದ ಹಲವು ಆಯಾಮದ ಸದಭಿರುಚಿಯ, ಗುಣಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳು ಕೇವಲ ಜನರಂಜನೆಗೆ ಮಾತ್ರ ಮೀಸಲಾಗದೆ ಕಲಾಜಗತ್ತಿನ ಸಂವೇದನೆಗಳನ್ನು, ಯುವ-ಹಿರಿಯ ಮನಸ್ಸುಗಳ ಕಸುಬುಗಾರಿಕೆಯನ್ನು ಕಾಣಿಸಿಕೊಡುವಲ್ಲಿ ಶ್ಲಾಘನೀಯ ಪ್ರಯತ್ನವಾಗಿ ಹೊರಹೊಮ್ಮಿದೆ. ಬೆಂಗಳೂರು ಹಬ್ಬದ ಆರಂಭಿಕ ದಿನಗಳ ವೈಭವವನ್ನು ಗಮನಿಸಿದರೆ ಇತ್ತೀಚಿನ ವರುಷಗಳಲ್ಲಿ ಅದರ ಸಾಂದ್ರತೆ ಇಳಿಯಿತೇನೋ ಎಂದು ಭಾಸವಾದರೂ ಕಾರ್ಯಕ್ರಮಗಳ ಆಯೋಜನೆಯ ಸಂಬಂಧವಾಗಿ ಗುಣಮಟ್ಟದಲ್ಲಿ ರಾಜಿಯಾದಂತೆ ಅನಿಸುವುದಿಲ್ಲ. ಈ ನಿಟ್ಟಿನಲ್ಲಿ ಈ ಬಾರಿ ಕರ್ನಾಟಕ ಸರ್ಕಾರದ ಅಂಗಸಂಸ್ಥೆಗಳೊಡಗೂಡಿ ಪದ್ಮಿನಿರವಿ ಮತ್ತು ನಂದಿನಿ ಆಳ್ವ ನೇತೃತ್ವದ ತಂಡ ಆಯೋಜಿಸಿದ ಬೆಂಗಳೂರು ಹಬ್ಬ ವಿದ್ವತ್ತು, ಪ್ರತಿಭೆಗಳ ಪ್ರತ್ಯಕ್ಷ ಅನುಭವದ ಅನಾವರಣವನ್ನೂ ಮಾಡಿದೆ.
೨೦೧೨ರ ಬೆಂಗಳೂರು ಹಬ್ಬವು ೧೩ ಜನವರಿಯಿಂದ ೨೨ವರೆಗೆ ಭಾರತೀಯ ವಿದ್ಯಾಭವನ, ಚೌಡಯ್ಯ ಸಭಾಂಗಣ, ಮಲ್ಲೇಶ್ವರ ಸೇವಾಸದನ, ಯುಬಿಸಿಟಿ ಕಟ್ಟಡ, ಕರ್ನಾಟಕ ಚಿತ್ರಕಲಾ ಪರಿಷತ್ಗಳಲ್ಲಿ ಆಯೋಜಿತವಾಗಿ ದಿನನಿತ್ಯವೂ ೬.೧೫ರಿಂದ ತಲಾ ಎರಡೆರಡು ಕಾರ್ಯಕ್ರಮಗಳಂತೆ ವೈವಿಧ್ಯಮಯ ಸಾಂಸ್ಕೃತಿಕ ಸಂಜೆಯ ಸೊಬಗನ್ನಿತ್ತಿದೆ. ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಲಾದ ಶಾಸ್ತ್ರೀಯ ನೃತ್ಯಗಳ ‘ನೃತ್ಯಸಂಭ್ರಮ’ವು ವೆಂಕಟಲಕ್ಷ್ಮಮ್ಮ ವೇದಿಕೆಯಲ್ಲಿ ಒಂದೇ ಬಾರಿಗೆ ಕಿರಿ-ಹಿರಿಯ ಕಲಾವಿದರ ಪ್ರತಿಭೆಯನ್ನು ನಿರೂಪಿಸಿದೆ.
ಅವುಗಳ ಪೈಕಿ ಜನವರಿ ೧೬ ರಂದು ಜರುಗಿದ ಪ್ರತೀಕ್ಷಾ ಕಾಶಿ ಅವರ ಕೂಚಿಪುಡಿ ಸೌಂದರ್ಯಾತ್ಮಕವಾಗಿ ನೃತ್ಯಪ್ರಸ್ತುತಿಯನ್ನು ತೆರೆದಿಟ್ಟಿತು. ಪ್ರತೀಕ್ಷಾ ಕಾಶಿ ನೃತ್ಯದ ಆಂಗಿಕಾಭಿನಯಗಳ ಕಸುವನ್ನು ಅರಗಿಸಿಕೊಳ್ಳುತ್ತಿರುವ ಅಭಿನಯ ಸಂಪತ್ತುಳ್ಳ ರಸದ ಪದರವನ್ನು ಮುಟ್ಟಿ ಬರುವ ಅಪಾರ ಸಾಧ್ಯತೆಯುಳ್ಳ ಪ್ರತಿಭೆ. ರಾಗಭಾವದ ಆಯ್ಕೆಯಲ್ಲಿ ವೈವಿಧ್ಯತೆ, ಆಗಮನ-ನಿರ್ಗಮನದ ಔಚಿತ್ಯ, ಹಿನ್ನೆಲೆ ಗಾಯನದ ಒನಪು ಮತ್ತಷ್ಟು ಹೆಚ್ಚು ಪ್ರಕಾಶಿತವಾಗುತ್ತಿದ್ದರೆ; ಮತ್ತು ಕೂಚಿಪುಡಿಯ ರೇಚಕ, ವೃಶ್ಚಿಕಗಳ ಬಳಕೆಯ ವಿಫುಲತೆಯಿದ್ದಿದ್ದರೆ ನಾಟ್ಯದೊಂದಿಗೆ ಆಕೆಯ ಪ್ರತಿಭೆಯೂ ಮತ್ತಷ್ಟು ಇಮ್ಮಡಿಗೊಳ್ಳುತ್ತಿತ್ತು.
ನಂತರ ಪ್ರಸ್ತುತಿಗೊಂಡ ಪದ್ಮಾ ಸುಬ್ರಹ್ಮಣ್ಯಂ ಅವರ ಭರತನೃತ್ಯ ವಿಮರ್ಶೆಗೆ ನಿಲುಕದ ಅನುಭವಕ್ಕಷ್ಟೇ ದಕ್ಕುವ; ಭಾರತೀಯ ಪರಂಪರೆ ಮತ್ತು ಆಧ್ಯಾತ್ಮದ ಸೂಕ್ಷ್ಮ ವಿವರಗಳನ್ನೂ ಸಂವಹನ ಮಾಡುವ; ರಸಾನಂದದ ಮೂಲಕ ಭರತದರ್ಶನ ಮಾಡಿಸುವ; ದೈವತ್ವದ ಆವಿರ್ಭಾವ ಸೆಲೆ. ಬಹುಷಃ ಮೂಕವಿಸ್ಮಿತ, ಶರೀರದಲ್ಲಿ ವಿದ್ಯುತ್ ಸಂಚಾರ, ಕಲೆಯ ಮೂಲಕ ದೈವ ಸಾಕ್ಷಾತ್ಕಾರ ಎಂಬ ಪದಗಳಿಗೆ ಅರ್ಥವಿದ್ದಲ್ಲಿ ಅದಕ್ಕೆ ಅನುರೂಪವೆನಿಸುವ ಕಾರ್ಯಕ್ರಮ. ಪದ್ಮಾ ಅವರು ಆರಿಸಿಕೊಂಡ ರಾಗಭಾವಗಳು, ಸಾಹಿತ್ಯದ ಗಾಢತೆ, ಅದಕ್ಕೆ ಹೆಣೆದ ಅಭಿನಯ, ಸಂಚಾರಗಳು, ಔಚಿತ್ಯ ಪ್ರಜ್ಞೆಯ ಹೊಳಹುಗಳನ್ನು ವಿಸ್ತರಿಸಿ ಹೇಳುವುದಾದರೆ ಪುಟಗಳೇ ಸಾಲದೇನೋ ಎಂಬ ಮಟ್ಟಿನ ಅಭಿವ್ಯಕ್ತಿ.
ಅವರು ನೃತ್ಯ ಪ್ರಸ್ತುತಿಯ ‘ಎನಗೂ ಆಣೆ ರಂಗ’ ಎಂಬ ಪುರಂದರದಾಸರ ಸ್ತುತಿಯಿಂದ ಮೊದಲ್ಗೊಂಡು, ‘ಕುಯಲ್ ಪಾಟ್’ ಎಂಬ ವಿನೂತನ ನಾಯಿಕ-ನಾಯಕಾ ಪರಿಕಲ್ಪನೆಯ ಮೂಲಕ ಭರತನಾಟ್ಯದ ವರ್ಣಬಂಧಕ್ಕೆ ಭರತಸ್ಪರ್ಶ ನೀಡಿದ ಮಾದರಿ ನಿಜಕ್ಕೂ ಅನುಪಮ. ಭರತನಾಟ್ಯ ಉಪೇಕ್ಷಿಸಿರುವ ಶೃಂಗಾರದ ವೈವಿಧ್ಯಮಯ ಚಹರೆಗಳನ್ನು ಕಲಾಸೌಂದರ್ಯಕ್ಕೆ ಲೋಪ ಬಾರದಂತೆ ಮತ್ತು ರಸಿಕಪ್ರೇಕ್ಷಕನ ಮೈಯ್ಯೂ ಜುಮ್ಮೆನ್ನುವಂತೆ ಆಪ್ಯಾಯಮಾನವಾಗಿ ಚಿತ್ರಿಸಿದ್ದನ್ನು ನೋಡಿದರೆ ನಮ್ಮ ನಡುವಿನ ಅದೆಷ್ಟೋ ಹಿರಿ-ಕಿರಿಯ ಕಲಾವಿದರು ಕಲಿತು ಮೈಗೂಡಿಸಿಕೊಳ್ಳಬೇಕಾದರೆ ಜನ್ಮವೊಂದು ಸಾಲದೇನೋ ಎಂಬಂತಿತ್ತು.
ಶಂಕರಾಚಾರ್ಯರ ರಚನೆಗೆ ಹೆಣೆದ ಅಭಿನಯದಲ್ಲಿ ಬೇಡರಕಣ್ಣಪ್ಪನ ಭಕ್ತಿಗೆ ರಸಿಕರ ಕಣ್ಣಿನಿಂದ ರಸಾನಂದಭಾಷ್ಪವನ್ನು ಚಿಮ್ಮಿಸಿದ್ದು ಪದ್ಮಾ ಅವರೊಳಗಿನ ಸತ್ತ್ವಕ್ಕೆ ಸಾಕ್ಷಿ. ಶಿವನ ರೌದ್ರ ಗಾಂಭೀರ್ಯದ ಕಾಲಭೈರವನಂತೂ ವೇದಿಕೆಯಲ್ಲಿ ಆವಿರ್ಭವಿಸಿದ ಪರಿಯಂತೂ ವರ್ಣಿಸಲಸದಳ. ಒಟ್ಟಿನಲ್ಲಿ ಪದಗಳ ಮಿತಿಯಲ್ಲಿ ಅವರ ಯಾವ ಭಾವಾಭಿನಯವನ್ನು ಹಿಡಿದಿಡುವುದು; ಪ್ರತೀ ಹಂತಕ್ಕೂ ಮಜಲಿನಾಕೃತಿಯಲ್ಲಿ ತೋರಿದ ಸೊಗಸನ್ನೂ ಬಿಚ್ಚಿಡುವುದು ಮೂರ್ಖತನವಷ್ಟೇ ಅಲ್ಲ; ಭಾಷೆಗೆ ಮೀರಿದ್ದು ಕೂಡಾ. ಒಟ್ಟಿನಲ್ಲಿ ನಾಟ್ಯ ಮುಗಿದ ಮೇಲೂ ಹರಡಿದ ಅದರ ಪರಿಮಳ, ‘ಹ್ಯಾಂಗೋವರ್’ನ ಸಮೃದ್ಧ ಅನುಭವ ರಸಿಕರ ಪಾಲಿಗೆ ಸದಾ ನೆನಪಿನಾಳದಲ್ಲಿ ಮೆಲುಕು ಹಾಕುತ್ತಲೇ ಇರುವ ಅನುಭೂತಿ.
ಪದ್ಮಾಸುಬ್ರಹ್ಮಣ್ಯಂ ಅವರ ಮೊಮ್ಮಗಳು ಮಹತಿ ಕಣ್ಣನ್ ಪದ್ಮಾ ಅವರ ಪ್ರತೀ ನೃತ್ಯಪ್ರಸ್ತುತಿಯ ಮಧ್ಯದ ವಿರಾಮಪದದಂತೆ ಕಂಡರೂ ಎಳೆಯ ಪ್ರಾಯಕ್ಕೇ ಕರಣ-ಚಾರಿಗಳ ಮೈಗೂಡಿಸಿಕೊಳ್ಳುವಿಕೆಯ ಮೂಲಕ ಬಾಲೆಯಲ್ಲಡಗಿದ ಲೀಲಾಜಾಲ ಪ್ರತಿಭೆ ಹೊರಬಂದಿತ್ತು ; ಭವಿಷ್ಯದ ಅದ್ಬುತ ಪ್ರತಿಭೆಯಾಗಿ ಬೆಳೆಯುವ ಸೂಕ್ಷ್ಮಕ್ಕೂ ಪ್ರವರ ಹೇಳಿದಂತಿತ್ತು. ಶಾರದಾಸ್ತುತಿಯಲ್ಲಿ ಪುಟ್ಟ ಶಾರದೆಯೇ ಆದ ಮಹತಿ ನೃತ್ಯಸೌಂದರ್ಯಕ್ಕೆ ತಕ್ಕುದಾದ ಸುಗುಣಶೀಲೆಯೆಂಬಂತೆಯೇ ತೋರಿದ್ದು ಆಕೆಯ ಸಾಂಸ್ಕೃತಿಕ ಮನೆತನದ ಸಮೃದ್ಧ ಹರಿವಿಗೆ ಸಾಕ್ಷಿಯೂ ಹೌದು. ಮುಂದಿನ ದಿನಗಳಲ್ಲಿ ನೆನಪಿನಲ್ಲಿಟ್ಟುಕೊಳ್ಳುವ ಸಾಕಷ್ಟು ಅಭಿವ್ಯಕ್ತಿಗಳು ಆಕೆಯ ಅನುಭವದ ಮೂಸೆಯಲ್ಲಿ ಫಲವನ್ನು ಪಡೆಯಬೇಕಾಗಿದೆ. ಹಿನ್ನೆಲೆಯಲ್ಲಿ ಗಾಯತ್ರಿ, ಕಣ್ಣನ್ರಿಂದೊಡಗೂಡಿದ ಮೇಳದ ಮೃದು ಮಧುರ ಸಂಗೀತ ನಾಟ್ಯಕ್ಕೆ ಪೂರಕ, ಪ್ರೇರಕ, ಪೋಷಕ,. ಮತ್ತು ಸಂಗೀತಕ್ಕೆ ನೃತ್ಯವೋ, ನೃತ್ಯದೊಳಗೆ ಸಂಗೀತವೋ ಎಂದೂ ಪ್ರತ್ಯೇಕಿಸಿ ಹೇಳಲಾಗದ ಮಟ್ಟಿನ ಅನ್ಯೋನ್ಯ ಭಾವದ ಕಲಾಕುಸುರಿ.
ಜನವರಿ ೧೮ ರಂದು ಇದೇ ವೇದಿಕೆಯಲ್ಲಿ ಜರುಗಿದ ಮತ್ತೆರಡು ನರ್ತನಪ್ರಸ್ತುತಿಗಳು ನೃತ್ಯ ಮತ್ತು ನಾಟ್ಯದ ಅಂದಚೆಂದವನ್ನು ಮತ್ತೊಮ್ಮೆ ತುಲನಾತ್ಮಕವಾಗಿ ತೆರೆದಿಟ್ಟವು. ಮೊದಲಿಗೆ ಐಶ್ವರ್ಯಾ ನಿತ್ಯಾನಂದ ಅವರು ಪ್ರಸ್ತುತಪಡಿಸಿದ ಪುಷ್ಪಾಂಜಲಿ, ಕನ್ನಡ ವರ್ಣ ‘ಭುವನಸುಂದರನ’, ಖಂಡಿತಾ ನಾಯಿಕೆಯ ಪದ, ಸೂರದಾಸರ ಭಜನ್ ಮುಂತಾದ ನೃತ್ಯಬಂಧಗಳು ಕಲಾವಿದೆಯ ಹಸ್ತಮುದ್ರೆಗಳಾದಿಯಾಗಿ ಆಂಗಿಕದ ರೇಖೆಗಳ ಸ್ಪಷ್ಟತೆ, ವಿಸ್ತಾರಗೊಳ್ಳುತ್ತಿರುವ ಅಭಿನಯಕ್ಕೆ ಕನ್ನಡಿ ಹಿಡಿದವು.
ವರ್ಣದ ಉತ್ತರಾರ್ಧ ಮತ್ತು ಪದ ಚೇತೋಹಾರಿಯಾಗಿ ಕಂಡಿತು. ಭರತನಾಟ್ಯದ ಸಿದ್ಧಮಾದರಿಯೊಳಗೂ ಚೊಕ್ಕವಾಗಿ ಮಿತಿಗಳನ್ನು ವಿಸ್ತರಿಸುತ್ತಾ ಸಾಗಿದ ಆಕೆಯ ನರ್ತನಕ್ಕೆ ಸ್ಥಾಯಿಭಾವದ ನಿರಂತರ ಸ್ಪರ್ಶ ಸಿಕ್ಕರೆ ಮತ್ತಷ್ಟು ಅವಳೊಳಗಿನ ಪ್ರತಿಭೆ ಬೆಳಗುತ್ತದೆ. ಹಿಮ್ಮೇಳದಲ್ಲಿ ರಮೇಶ ಚಡಗರದ ಹಾಡುಗಾರಿಕೆಯೊಂದನ್ನು ಹೊರತುಪಡಿಸಿ ಉಳಿದೆಲ್ಲಾ ಅಂಶಗಳು (ಪುಲಿಕೇಶಿ ಕಸ್ತೂರಿ ನಟುವಾಂಗ, ಚಂದ್ರಶೇಖರ್ ಮೃದಂಗ, ಜಯರಾಮ್ ಕೊಳಲು) ಆಕೆಯ ನರ್ತನದ ಸೌಂದರ್ಯಕ್ಕೆ ಹೊಂದಿಕೊಂಡವು.
ನಂತರ ನರ್ತಿಸಿದ ನಿರುಪಮಾ(ರಾಜೇಂದ್ರ) ಸಾರಂಗ ರಾಗಕ್ಕೆ ಹೆಣೆದ ಭರತಕ್ರಮದ ನೃತ್ತಪ್ರಧಾನವಾದ ಸಂಯೋಜನೆಯನ್ನು ನಾಂದಿಯೆಂಬಂತೆ ನಿರೂಪಿಸುತ್ತಲೇ ಲೀಲಾಶುಕ ಕವಿಯ ಕೃಷ್ಣ ಕರ್ಣಾಮೃತ ಶ್ಲೋಕದಿಂದಾಯ್ದ ‘ಕಸ್ತೂರಿ ತಿಲಕಂ’ನ್ನು ಹೊಸದೆನಿಸುವ ವಸ್ತುವೊಂದಿಗೆ ಪ್ರಸ್ತುತಪಡಿಸಿದರು. ಕೃಷ್ಣನಂತೆ ವೇಷ ಮಾಡಿಕೊಳ್ಳುವ ರಾಧೆಯ ಮೂಲಕ ಕೃಷ್ಣನ ವರ್ಣನೆಗಳು ಸಾಕಾರಗೊಳ್ಳುತ್ತಾ ರಾಧಾ-ಕೃಷ್ಣರ ಸ್ವಚ್ಛ, ನಿರ್ಮಲ ಅಂತರಂಗಪ್ರೇಮಕ್ಕೆ ಕಣ್ಣು ಕನ್ನಡಿಯಾಗುವಲ್ಲಿಗೆ ನಾಟ್ಯಪ್ರಧಾನವೂ ಆಯಿತು.
ನಂತರದಲ್ಲಿ ಪ್ರಸನ್ನ ಕುಮಾರ್ ರಚನೆಯ ವಿನಾಯಕ ಸ್ತುತಿಯೊಂದಿಗೆ ಹೊಂದಿಸಿದ ವಿನಾಯಕ ಪಂಚರತ್ನ ಕೃತಿಯು ಗಣಪತಿಯ ವರ್ಣನೆಯೊಂದಿಗೆ ಪ್ರಸ್ತುತ ಕಾಲಮಾನದ ವಿನಾಯಕ ಚೌತಿಯ ಆಡಂಬರದ ಆಚರಣೆಗೆ ‘ಪಂಚ್’ನ್ನೀಯುತ್ತಾ, ವ್ಯಂಗ್ಯವನ್ನೂ ತಿಳಿಹಾಸ್ಯದೊಂದಿಗೆ ಪ್ರಸ್ತುತಪಡಿಸಿತು. ಲೋಕಧರ್ಮಿಯ ಔಚಿತ್ಯಪೂರ್ಣ ಹೊಂದಾಣಿಕೆ ನಾಟ್ಯಧರ್ಮೀ ನಡವಳಿಕೆಗಳನ್ನು ಎಷ್ಟು ಸುಂದರವಾಗಿ ಮತ್ತು ಸಂವಹನಾನುಕೂಲಿಯಾಗಿ ತೆರೆದಿಡಬಹುದು ಎಂಬುದಕ್ಕೆ ಇದು ನಿಜಕ್ಕೂ ಒಳ್ಳೆಯ ಉದಾಹರಣೆ. ಪುರಂದರದಾಸರ ‘ಹಿಡಕೋ ಬಿಡಬ್ಯಾಡ’ ಸ್ತುತಿಗೆ ಹೆಣೆದ ವರ್ಣವು ಕಲಾವಿದೆಯ ಅಂತರಂಗ ದೃಢತೆಯನ್ನು, ಆಂಗಿಕದ ಕಸುವನ್ನು, ಸಾತ್ತ್ವಿಕದ ಪ್ರೀತಿಯನ್ನು ಮತ್ತೊಮ್ಮೆ ನಿರೂಪಿಸಿದ್ದು ಶ್ಲಾಘನೀಯ.
‘ಶೃಂಗಾರಂ’-ಮುಗ್ಧಾ ಜ್ಞಾತ ಯೌವನದ ನಾಯಿಕೆಯು ಪ್ರೋಷಿತಪತಿಕೆಯಾಗುವ ಪದಕ್ಕೆ (ಪದ್ಮಾ ಸುಬ್ರಹ್ಮಣ್ಯಂ ಅವರ ಕೊರಿಯೋಗ್ರಫಿ) ನಿರುಪಮಾ ಹದವಾದ ನೃತ್ತವನ್ನು ಮಾಡುತ್ತಾ ಸುಲಲಿತವೆಂಬಂತೆ ನರ್ತಿಸಿದರು. ಅಂತೆಯೇ ಮೀನಾಕ್ಷಿ ಸುಬ್ರಹ್ಮಣ್ಯಂ ಅವರ ರಚನೆಯ ಭಜನ್ ಮೂಲಕವಾಗಿ ಭಕ್ತಿಪೂರ್ವಕವಾದ ಮಂಗಳವನ್ನು ಕಾರ್ಯಕ್ರಮಕ್ಕಿತ್ತರು. ಮಾನಸಿ ಪ್ರಸಾದ್ ಹಾಡುಗಾರಿಕೆ, ನಟುವಾಂಗದಲ್ಲಿ ಪ್ರವೀಣ್, ಲಿಂಗರಾಜು ಅವರ ಮೃದಂಗ, ವೀಣೆಯಲ್ಲಿ ಶುಭಾ, ಮಹೇಶಸ್ವಾಮಿಯವರ ಕೊಳಲು, ಪ್ರಸನ್ನ ಕುಮಾರ್ರ ಖಂಜೀರದ ಸಹಕಾರ ಅಭಿನಂದನೀಯವಾದ ಅಭಿವ್ಯಕ್ತಿ.