ಅಂಕಣಗಳು

Subscribe


 

ಅಷ್ಟನಾಯಿಕಾ ಚಿತ್ತವೃತ್ತಿ : ವಾಸಕಸಜ್ಜಿಕಾ ನಾಯಿಕೆ

Posted On: Friday, April 15th, 2011
1 Star2 Stars3 Stars4 Stars5 Stars (No Ratings Yet)
Loading...

Author: ವಿವಿಧ ಲೇಖಕರು

(ಕಳೆದ ಸಂಚಿಕೆಯಿಂದ ಮುಂದುವರೆದುದು…)

 

ತನ್ನನ್ನು ಮತ್ತು ತನ್ನ ಕೋಣೆಯನ್ನು ಆಸ್ಥೆಯಿಂದ ಸಿಂಗರಿಸಿಕೊಂಡು ಪ್ರಿಯಕರ/ನಾಯಕನ ಬರುವಿಕೆಗಾಗಿ ನಿರೀಕ್ಷೆ ಹೊಂದಿ ಸಿದ್ಧವಾಗಿರುವವಳೇ ವಾಸಕಸಜ್ಜಿಕೆ. ನಾಯಕನೊಂದಿಗೆ ಸಂಗಸುಖದ ಕನಸು ಕಾಣುತ್ತಾ, ಭವಿಷ್ಯವನ್ನು ನೆನೆದು ಸಂತಸ ಹೊಂದುವವಳು; ಆಗಾಗ್ಗೆ ನಾಯಕನ ದಾರಿ ನೋಡುತ್ತಾ ಊಟೋಪಚಾರದ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡು ತನ್ನ ನಿರೀಕ್ಷೆಯನ್ನು ಹಲವು ಮಾದರಿಗಳಲ್ಲಿ ವ್ಯಕ್ತಪಡಿಸುತ್ತಾಳೆ. ಸಖಿಯರೊಡನೆ ಆತನ ಬರುವಿಕೆಯ ಕುರಿತಂತೆ ಕೇಳುತ್ತಾ, ಆತನ ಬಗ್ಗೆಯೇ ಪ್ರಿಯ ಮಾತನ್ನಾಡುವವಳಾದ ಈಕೆ ; ಉತ್ಸಾಹಿತಳಾಗಿರುತ್ತಾಳೆ.

ಈ ನಾಯಿಕೆಯಲ್ಲೂ ಉತ್ತಮ, ಮಧ್ಯಮ, ಅಧಮ ಅಥವಾ ಸ್ವೀಯಾ, ಪರಕೀಯ, ಸಾಮಾನ್ಯವೆಂಬ ಬೇಧಗಳಿದ್ದು ಅದು ಈಕೆಯ ಅವಸ್ಥೆಗಳನ್ನು ಅವಲಂಬಿಸಿರುತ್ತದೆ. ಸಹಜವಾಗಿ ಉತ್ತಮ ನಾಯಿಕೆಯದ್ದು ಹೆಚ್ಚೇನೂ ಅಭಿನಯಕ್ಕೆ ಅವಕಾಶ ನೀಡದ ಆದರೆ; ಉನ್ನತ ಮಟ್ಟದ, ಗಂಭೀರ, ಮೃದು ವರ್ತನೆಯುಳ್ಳ ಭಾವಪ್ರಕಾಶ. ಮಧ್ಯಮವು ಮನುಷ್ಯ ಸಹಜ ಮಿಶ್ರ ಭಾವನೆಗಳ ಪ್ರತಿರೂಪ. ಅಧಮನಾಯಿಕೆಯು ನೀಚ ಇಲ್ಲವೇ ಭಾವನೆಯನ್ನು ಹಿಡಿತವಿರಿಸದೆ ಯಥಾಸ್ಥಿತಿಯಲ್ಲಿ ಹರಿಬಿಡುವ, ಅಥವಾ ಗೌರವಯುತ ನಡವಳಿಕೆಗಳ ಬದಲಾಗಿ ಎಂದಿನಂತೆಯೇ ಇದ್ದು ; ಅನೌಚಿತ್ಯಕರವಾಗಿ ಕಾಣಿಸಿಕೊಳ್ಳುವವಳು.

ಸ್ವೀಯಾ ಅಂದರೆ ಪತಿಗೆ ನಿಷ್ಠಳಾದ ಪತ್ನಿ. ಪರಕೀಯಳು ಪತಿಯ ಹೊರತಾಗಿಯೂ ಇನ್ನೊಬ್ಬರಲ್ಲಿ ಅನುರಾಗ ಹೊಂದಿರುವವಳು, ಸಾಮಾನ್ಯೆಯು ವೇಶ್ಯೆಯೇ ಆಗಿರುತ್ತಾಳೆ. ಇಷ್ಟೇ ಅಲ್ಲದೆ ಅಷ್ಠವಿಧ ನಾಯಿಕೆಯರು ಮುಗ್ಧಾ, ಮಧ್ಯಾ ಮತ್ತು ಪ್ರಗಲ್ಭ ಸ್ಥಿತಿಯ ಪೈಕಿ ಯಾವುದಾದರೂ ಒಂದು ವರ್ಗಕ್ಕೆ ಸೇರಿರುವುದೂ ಇದೆ. ಮುಗ್ಧಾ ನಾಯಿಕೆಯು ಮುಗ್ಧೆ, ಬಾಲ್ಯ ಯೌವನಗಳ ಸಂಧಿಕಾಲದಲ್ಲಿರುವವಳು. ಲಜ್ಜೆಯ ವರ್ತನೆ, ಅನುರಾಗದ ಕುರಿತಾಗಿ ಅಷ್ಟೇನೂ ಅರಿವಿಲ್ಲದ ಮೃದು ಸ್ವಭಾವದವಳಾಗಿರುತ್ತಾಳೆ. ಆಕೆಗೆ ಎಲ್ಲವೂ ಹೊಸತು, ಮೊದಲು. ಮಧ್ಯಾ ನಾಯಿಕೆಯು ಮುಗ್ಧಾಳಿಗಿಂತ ಕೊಂಚ ಹೆಚ್ಚಾದ ಅರಿವಿರುವ ಯೌವನಾವಸ್ಥೆ ವ್ಯಾಪಿಸಿರುವವಳು. ಹೆಚ್ಚು ಲಜ್ಜೆ ಮತ್ತು ಕಾಮವಿಕಾರವುಳ್ಳ ಈಕೆಯದ್ದು ಚಾತುರ್ಯಭರಿತ ವರ್ತನೆ. ಪ್ರಗಲ್ಭೆಗೆ ಕಾಮಾಸಕ್ತಿ ಹೆಚ್ಚು, ರತಿಕ್ರೀಡೆಗಳಲ್ಲಿ ಪ್ರವೀಣಳು. ಲಜ್ಜೆ ಅತೀಕಡಿಮೆ.

ಪ್ರಸ್ತುತ ಕಾವ್ಯ ಮತ್ತು ಭಾವಾಭಿವ್ಯಕ್ತಿಯಲ್ಲಿ ನೀಡಲಾಗಿರುವ ನಾಯಿಕೆಯು ಮಧ್ಯಮ ಗುಣವುಳ್ಳ; ಸ್ವೀಯಾ, ಮಧ್ಯಾ ಸ್ವಭಾವವುಳ್ಳವಳಾಗಿದ್ದು; ನರ್ತನದಲ್ಲಿ ಅಭಿನಯಕ್ಕೆ ಹೆಚ್ಚು ವಿಸ್ತಾರವನ್ನು ಕಲ್ಪಿಸಿಕೊಡುವ ಮತ್ತು ಮಾದರಿಯ ಜೀವನದ ಆಯಾಮವಿರುವುದರಿಂದ; ಈ ಅಷ್ಟನಾಯಿಕಾ ಚಿತ್ತವೃತ್ತಿಯ ಹಾದಿಯಲ್ಲಿ ಮಧ್ಯಮನಾಯಿಕೆಯನ್ನೇ ಪ್ರಧಾನವಾಗಿ ಎಲ್ಲಾ ನಾಯಿಕೆಯರಿಗೂ ಅಳವಡಿಸಿ ಸಾಹಿತ್ಯವನ್ನು ನೀಡಲಾಗಿದೆ. ದಿವಾಕರ ಹೆಗಡೆಯವರ ಕವಿತ್ವವು ಭೂಮಿ, ಪ್ರಕೃತಿ, ಮಳೆ, ಬಾನು ಇತ್ಯಾದಿ ಪ್ರಾಕೃತಿಕವಾಗಿ ನಿರೂಪಿಸಲ್ಪಟ್ಟ ಸೆಲೆಯನ್ನು ಹೊಂದಿದೆ.

ಬನ್ನಿ, ನಮ್ಮ ಕಲ್ಪನಾ ಸಾಮರ್ಥ್ಯ, ಅನುಭವ-ಅನುಭಾವ, ವಿಶ್ಲೇಷಣೆ, ನಾಟ್ಯದ ಆಯಾಮ, ಸವಾಲು-ಸಾಧನ, ಅಭಿವ್ಯಕ್ತಿಯ ಕ್ಷಿತಿಜ, ರಸದೃಷ್ಟಿ, ಕಾವ್ಯದೃಷ್ಟಿ ಮತ್ತು ಅರಿವಿನ ಹರಹುವಿನ ವಿಸ್ತಾರದಲ್ಲಿ ಕೈಜೋಡಿಸೋಣ. ಅಂದಹಾಗೆ ಮಂಟಪ ಉಪಾಧ್ಯರ ಕಲಾಭಿವ್ಯಕ್ತಿಯನ್ನು ಕಂಡ ಕೂಚಿಪುಡಿಯ ನಡೆದಾಡುವ ದಂತಕತೆ ವೇದಾಂತಂ ಸತ್ಯನಾರಾಯಣ ಶರ್ಮ ಅವರು ಆನಂದತುಂದಿಲರಾಗಿ ಕೂಚಿಪುಡಿ ಗ್ರಾಮದಲ್ಲಿ ೧೦೮ ಚಿನ್ನದ ಹೂಗಳ ಕನಕಾಭಿಷೇಕವನ್ನು ನೆರವೇರಿಸಿದ್ದು ಅಭಿವ್ಯಕ್ತಿಯ ಧನ್ಯತೆಗೆ ಸಾಕ್ಷಿಯಾದ ಸುದ್ದಿ. ಇಂತಹ ಕಲಾಭಿವಕ್ತಿಯ ತವರು ಕರ್ನಾಟಕ ಮತ್ತು ಅಂತಹ ಅತ್ಯಪೂರ್ವ ರಾಜ ವೈಭೋಗದ ಸಂಪ್ರದಾಯವನ್ನು ಉಳಿಸಿ ಬೆಳೆಸುತ್ತಾ ಬಂದಿರುವ ಸಂಸ್ಕೃತಿ ಮತ್ತಷ್ಟು ಎಲ್ಲೆಡೆ ಬೆಳಗಲಿ.

 

 

ಭಾಮಿನೀ

ಶತಾವಧಾನಿ ಡಾ. ಆರ್. ಗಣೇಶ್

ರಾಗ : ಅಭೇರಿ ; ಭೋಗಷಟ್ಪದಿ

ದಿನದ ಬೇಗೆ ತಗ್ಗುತಿರಲು ಮನದ ಮಥನವಿಳಿಯುತಿರಲು

ಅನುಪಮಶುಭಶಕುನದಿಂದ ಭರವಸೆಗೊಳುತೆ

ಮನೆಯನೆಲ್ಲ ನೇರ್ಪಗೊಳಿಸಿ ತನುವನೆಲ್ಲ ತಣಿಸಿ ಕುಣಿಸಿ

ಇನನು ಬರುವನೆಂದೆಣಿಪಳು ವಾಸಕಸಜ್ಜೆ

(ಶುಭ ಶಕುನಗಳಿಂದ ಅಂದೇ ಆತನು ಬರುವನೆಂದು ಊಹಿಸಿ ಸಂಭ್ರಮದಿಂದ ಮನೆಯನು ಓರಣಗೈದು ಸಿಂಗರಿಸಿಕೊಂಡು ಅಣಿಯಾಗಿ ನಲ್ಲನ ಹಾದಿನೋಡುವಳು.)

 

ರಾಗ : ಯಮುನಾ ಕಲ್ಯಾಣಿ- ಏಕ ತಾಳ, ತ್ರಿಪುಟತಾಳ, ಅಷ್ಟತಾಳ

ಬರಲಿಹೆ ನೀನೆನುವಾಸೆಯಿಂದಲೆ

ನ್ನುರದೊಳು ನಂದನವಿಂದು ಸಂದಿದೆ

ಎಂತಸಾರ ಮದೀಯಜೀವನ

ಕಾಂತ ! ನೀ ಬರದಿರಲು ಮೋಹನ ಪ

ಸಿಂಗರಕೆಂದಣಿಯಾಗಲು ನಾ ಸ್ಮರ

ಸಂಗರ ! ನೀ ಬಂದವೊಲೆನಗಾದುದು

ಮಂಗಳಾಂಗಿ ಸಖಿ ಸುಳಿದಿರಲೀ ಕಡೆ

ಕಂಗಳ ತೋರಣ ಕದದೆಡೆ ಕೋದುದು

ಸಜ್ಜೆಯ ಸವರಿಸಿ ಸಜಾಗಿಸುತಿರೆ

ಲಜ್ಜೆಯದನು ಸುಳಿಸುತ್ತುವುದು

ಹಜ್ಜೆ ನಿನ್ನದೆಂಬಂತೀ ಪ್ರಕೃತಿಯೇ

ಬಿಜ್ಜೆಯ ತೋರಿದೆ ಕೈತವದಾ

ದಯಿತ! ನೀಣುದಯಮಾಡಿಸೀಗಲೇ

ನಯವಿದ! ನಯವಿದನರಿಯಲಾರೆಯಾ ?

ಜಯವನು ಕರುಣಿಸೆ ಬಿಜಯಮಾಡೆಯಾ ?

ಸ್ಮಯವ ಸಡಲಿಸಿ ಸುಖಿಯಾಗಿಸೆಯಾ?

—————————-

ಭಾಮಿನಿಯ ಭಾವಾಭಿವ್ಯಕ್ತಿ

-ಮಂಟಪ ಪ್ರಭಾಕರ ಉಪಾಧ್ಯ

ಪ್ರಕೃತಿಯ ಸಹಜಲಯಕ್ಕೆ ಹೊಂದಿಕೊಳ್ಳಲಾರದೆ, ಕೆಲಸ ಮಾಡಲು ಇಷ್ಟವಿಲ್ಲದೆ ನಿರುತ್ಸಾಹದಿಂದ ಉಯ್ಯಾಲೆಯಲ್ಲಿ ಕುಳಿತೆ. ಕಾಲನ್ನು ನೆಲದಿಂದ ಚಿಮ್ಮಿಸಿ ಹಾಗೆಯೇ ತೂಗಾಡುತ್ತಲೇ ಇದ್ದೆ. ನಿಧಾನವಾಗಿ ಉಯ್ಯಾಲೆಯ ಗತಿಗೆ ನನ್ನ ಮನದ ಉದ್ವೇಗಗಳೆಲ್ಲಾ ಕಡಿಮೆ ಆಗುತ್ತಾ ಹೊಂದಿಕೊಂಡೆ. ಒಮ್ಮೆಲೇ ರಭಸದ ಮಳೆ ನಿಂತು ಹನಿಹನಿಯಾಗಿ ತೊಟ್ಟಿಕ್ಕುವಂತೆ ನನ್ನ ಯೋಚನೆಗಳ ಪ್ರವಾಹ ನಿಂತು ಉಯ್ಯಾಲೆಯ ಚರ್ರ್ ಚರ್ರ್ ಎಂಬ ಶಬ್ದದಲ್ಲಿ ಕೇಂದ್ರವಾಯ್ತು. ಉಯ್ಯಾಲೆಯ ಹಗ್ಗ ಹಿಡಿದು ಕೈಯ ಮೇಲೆ ತಲೆ ಇಟ್ಟು ಒರಗಿ ಶೂನ್ಯದತ್ತ ನೋಡುತ್ತಾ ಅದೆಷ್ಟೂ ಹೊತ್ತು ಇದ್ದೆನೋ ತಿಳಿಯದು. ಇದ್ದಕ್ಕಿದ್ದಂತೆ ಎಡಗಣ್ಣು ಅದುರಿತು. ಎಡಗೈತೋಳು ಅದುರಿತು. ಒಮ್ಮೆಲೇ ಎಚ್ಚರಗೊಂಡೆ. ನನಗಾದ ಅನುಭವದ ಸತ್ಯತೆಗೆ ಕಾದೆ. ಹೌದು; ಪುನಃ ಹಾಗೆಯೇ ಆಯ್ತು. ಯಾಕೆ ಹೀಗೆ? ಮೇಲಿಂದ ಮೇಲೆ ಹೀಗೆ? ಹೋ ! ಅಮ್ಮ ಹೇಳುತ್ತಿರುವ ಮಾತು ನೆನಪಾಯ್ತು. ಹೆಣ್ಣಿ‌ಎಗೆ ಎಡಬದಿಯ ಶಕುನಗಳು ಶುಭದಾಯಕ ಎಂದು. ನನಗ್ಯಾವ ಕರ್ಮದ ಶುಭ ? ನೀರಸಳಾಗಿ ಕುಳಿತೆ.

ಆದರೆ ನಂಬಿಕೆಗಳೆಲ್ಲಾ ಹುಸಿಯಾದಾಗ ನನ್ನ ಪಾಲಿಗೆ ಶಕುನವೂ ಅನಿವಾರ್ಯ ಎಂದೆನಿಸಿತು. ಬೆಳಗಿನಿಂದ ನಿರೀಕ್ಷೆಯಲ್ಲಿರುವ ನನ್ನ ಪತಿಯ ಬರವೇ ಶಕುನದಂತೆ ಕಂಡಿತು. ಹತ್ತಾರು ಬಾರಿ ಯೋಚಿಸಿದೆ. ನಂಬಿಕೆ ಜಾಗೃತವಾಗಿ ಪ್ರೀತಿಯು ಮತ್ತೊಮ್ಮೆ ನನ್ನವನಲ್ಲಿ ನೆಟ್ಟಿತು, ಚಿಗುರಿತು, ಅರಳಿತು, ಮನವು ಮತ್ತೆ ಓಲಾಡಿತು. ಸಂಭ್ರಮದ ಆವೇಶದಿಂದ ಉಯ್ಯಾಲೆಯಿಂದ ಜಿಗಿದೆ. ಕುಣಿದೆ. ಹಾರಿದೆ; ಪ್ರಪಂಚ ನನಗಾಗಿ ಕಾದಿದೆ ಎನಿಸಿತು. ಅತ್ತ ಇತ್ತ ಅರ್ಥವಿಲ್ಲದೆ, ಕಾರಣ ಇಲ್ಲದೆ ನಲಿದೆ. ನನಗೊಬ್ಬಳಿಗೇ ಜೀವ ಇದೆ ಎನಿಸಿತು. ಪ್ರಪಂಚದ ಎಲ್ಲ ಆಗುಹೋಗುಗಳು ಜಡವಾಗಿ ಕಂಡವು. ಎಲ್ಲವೂ ಮಂದಲಯದಲ್ಲಿದ್ದಂತೆ ಕಂಡಿತು.

ಎಲ್ಲಕ್ಕಿಂತ ನನ್ನ ಮನೆಯೇ ಸತ್ತಿದೆ ಎನ್ನಿಸಿತು. ಅಂಗಳದಲ್ಲಿ ತರಗೆಲೆಗಳ ರಾಶಿ. ಅವಸರ ಅವಸರವಾಗಿ ಗುಡಿಸಿದೆ. ಬಿಂದಿಗೆಯ ನೀರಿನಿಂದ ಅಂಗಳವನ್ನು ಸೆಗಣಿಸಾರಿಸಿ ಒಪ್ಪ ಮಾಡಿದೆ. ಯಾವತ್ತೂ ಇಲ್ಲದ ಲವಲವಿಕೆ. ಹತ್ತಾರು ದಿನದ ಎಲ್ಲಾ ಕೆಲಸಗಳನ್ನು ಹತ್ತಾರು ಕ್ಷಣಗಳಲ್ಲೇ ಮಾಡಿ ಮುಗಿಸಿದೆ. ಎಲ್ಲಾ ಕೆಲಸಗಳಲ್ಲೂ ಆತನ ಮಂದಹಾಸ ಪ್ರೇರಣೆ ನೀಡುತ್ತಿತ್ತು. ಆತನನ್ನು ಅದ್ಧೂರಿಯಾಗಿ ಸ್ವಾಗತಿಸಬೇಕೆಂದು ಆತ ಗಾಡಿ ಇಳಿಯುವ ಸ್ಥಳಕ್ಕೆ ಬಂದು ಮನೆಯ ಅಲಂಕಾರ ನೋಡಿದೆ. ಮಲ್ಲಿಗೆಯ ಹೂಗಳು ನನ್ನ ತಲೆಯ ಮೇಲೆ ಉದುರಿದಾಗ ನನಗೆ ಹೀಗನ್ನಿಸಿತು : ನಾವೂ ನಿನಗೆ ಸಹಾಯ ಮಾಡುವೆವು ಎಂದು ತಿಳಿಸಲು ಅರಳಿ ತಮ್ಮ ಸಂತೋಷ ತಿಳಿಸುತ್ತಿದ್ದವು. ಹೂಗಳನ್ನೆಲ್ಲಾ ಕುಯ್ದು ಮಾಲೆ ಮಾಡಿದೆ. ಒತ್ತೊತ್ತಾಗಿ ಮಾಡಿದ ಮಾಲೆಯ ಕಂಪಿನಿಂದ ಇನ್ನಷ್ಟು ಉನ್ಮತ್ತೆಯಾದೆ.

ಇನ್ನೇನು ಆತ ಗಾಡಿ ಇಳಿಯುವ ದೃಶ್ಯವನ್ನು ಎಣಿಸಿಕೊಂಡೇ ಮುಖವನ್ನು ಏರಿಸಲಾರದೆ ತಲೆತಗ್ಗಿಸಿ ಕಾಲನ್ನು ಗೀರುತ್ತಿದ್ದೆ. ಏನೋ ಶೂನ್ಯತೆ ನನ್ನನ್ನು ಎಚ್ಚರಿಸಿತು. ಆತ ಇಳಿಯುವಲ್ಲಿಂದ ರಂಗವಲಿಯ ಚಿತ್ತಾರಗಳನ್ನು ಮೂಡಿಸಿದೆ. ರಂಗವಲ್ಲಿಯನ್ನಿಡುವಾಗ ನನ್ನ ಲೋಕವೇ ಬೇರೆ. ಒಂದೊಂದೇ ಬಿಂದುಗಳನ್ನು ಇಡುವಾಗ ಆತನದ್ದೇ ಯೋಚನೆ. ಎಷ್ಟೆಂದರೆ ಒಂದೇ ಸ್ಥಳದಲ್ಲಿ ಬಿಂದುಗಳ ರಾಶಿ. ರಂಗವಲ್ಲಿಯ ಬಿಂದುಗಳು ನನ್ನ ತಲೆಯಂತೆಯೇ ಅಳತೆ ತಪ್ಪಿ ಬಿದ್ದಿದ್ದುವು. ಯಾರಾದರೂ ನನ್ನನ್ನು ನೋಡಿದರೆ… ಎಂದು ಆಚೆ ಈಚೆ ನೋಡಿದೆ. ಸದ್ಯ ಯಾರೂ ಗಮನಿಸಲಿಲ್ಲ. ಜಾಗೃತಳಾಗಿ ರಂಗವಲ್ಲಿಯ ಬಿಂದುಗಳನ್ನು ಸೇರಿಸಲು ಮುಂದಾದೆ. ಒಂದೊಂದು ಬಿಂದುವನ್ನು ಸೇರಿಸುವಾಗಲೂ ಆತನ ಸಮಾಗಮದ ನೆನಪುಗಳಾಗಿ ರಂಗವಲ್ಲಿಯ ಶೋಭೆಗೆ ನನ್ನಿಂದ ಜೀವ ನೀಡಲಾಗುತ್ತಿಲ್ಲವಾಗಿತ್ತು. ಅಂತೂ ಆತ ಎಲ್ಲಿಂದ ನಡೆದು ಬಂದರೂ ನಾನು ಬರೆದ ರಂಗವಲ್ಲಿಯನ್ನು ಮೆಟ್ಟಿಯೇ ಬರುವಂತೆ ಚಿತ್ರಿಸಿದೆ. ಮಾಡಿದ ಮಲ್ಲಿಗೆಯ ಮಾಲೆಯನ್ನು ಅಳತೆಸರಿಪಡಿಸಿಕೊಂಡು ಹಾರವಾಗಿ ಮಾಡಿ ಸಿದ್ಧವಾಗಿಟ್ಟೆ. ಹಾಗೆಯೇ ಹೂಮಲೆಯನ್ನು ಸ್ಪರ್ಶಿಸುವಾಗ ಆತ ಹೇಳಿದ ಮಾತು ನೆನಪಾಯ್ತು. ಮುತ್ತಿನ ಮಾಲೆ ! ಮುತ್ತಿನಮಾಲೆಯನ್ನು ತರುವೆ ಎಂದು ಮುತ್ತುಗಳನ್ನೇ ನೀಡಿದ ಆ ಅನುಭವ ! ಛೇ ! ಹೇಳಲಾರೆ ! ಕರಗಿ ನೀರಾದ ನಾನು ಅಲ್ಲಿ ನಿಲ್ಲಲಾರದೆ ಮನೆಯೊಳಗೆ ಓಡಿಬಂದೆ.

ಮನೆಯನ್ನೆಲ್ಲಾ ಓರಣವಾಗಿಟ್ಟೆ. ಎಲ್ಲಾ ಸರಿ, ಶೃಂಗಾರ ದೇಗುಲವಾಗಿರಿಸಿದ ನನ್ನ ಮನೆಯನ್ನೇ ನಾನು ಕಸವಾಗಿ ಕಂಡಿದ್ದೆ. ಅದಕ್ಕೂ ತಡಮಾಡಲಿಲ್ಲ. ಕೆದರಿದ ತಲೆಗೂದಲನ್ನು ಬಾಚಿ ಹೆಣೆದು ಜಡೆಯನ್ನು ಹಾಕಿಕೊಂಡೆ. ಮುಖ ತೊಳೆದು ಶುಭ್ರಳಾದೆ. ಕಣ್ಣಿಗೆ ಕಪ್ಪಿಟ್ಟು ಹಣೆಗೆ ಘಮಘಮಿಸುವ ತಿಲಕವನ್ನಿಟ್ಟುಕೊಮ್ಡೆ. ಕೈಗಳಿಗೆ ಹೆಚ್ಚಾಗಿಯೇ ಬಳೆಗಳನ್ನು ಸುರಿದುಕೊಂಡೆ. ಇದುವರೆಗೆ ಕಿರಿಕಿರಿ ಎನಿಸಿ ತೆಗೆದಿರಿಸಿದ ಕಾಲ್ಗೆಜ್ಜೆಗಳನ್ನು ತೊಟ್ಟು ಜಿಗಿಯುವಂತಾದೆ. ಇನ್ನು ಆಭರಣಗಳೇ ಸ್ವಲ್ಪ ಗೊಂದಲವಾಯ್ತು. ಯಾವುದನ್ನು ಉಪಯೋಗಿಸಬೇಕೆಂಬುದನ್ನೇ ಯೋಚಿಸಲಾರದೆ, ನಿರ್ಧರಿಸಲಾರದೆ ಕೈಗೆ ಸಿಕ್ಕಿದ್ದನ್ನು ಧರಿಸಿದೆ. ಆವಾಗಲೇ ನಾನು ಸುಂದರಿಯೂ ಇದ್ದೇನೆ ಎಂಬ ಖಾತ್ರಿ ಆಗಿತ್ತು.

ಕೈಗಳಿಗೆ ಚಿತ್ತಾರಗಳನ್ನು ಹಾಕಿಕೊಳ್ಳುವಷ್ಟು ಪುರುಸೊತ್ತು, ತಾಳ್ಮೆ ಎರಡೂ ಇಲ್ಲವಾಗಿತ್ತು. ಮಲ್ಲಿಗೆಯ ಮಾಲೆ ತಲೆ ಸೇರಿತು. ಎಲ್ಲವನ್ನೂ ಮುಗಿಸಿದಾಗ ನನ್ನ ಹೊಳಪಿನ ಮುಖವನ್ನೊಮ್ಮೆ ಅವಲೋಕಿಸಿದೆ. ನನ್ನ ಕ್ರಾಂತಿಯ ಪ್ರತಿಫಲನ ಕನ್ನಡಿಯಲ್ಲಿ ಅಷ್ಟಾಗಿ ಕಾಣಿಸಲಿಲ್ಲ. ಯಾಕೆ? ಹೌದು. ನಾಲ್ಕಾರು ದಿನಗಳಿಂದ ಅಲಂಕರಿಸಿಕೊಳ್ಳದೆ ಕನ್ನಡಿ ತನ್ನ ಕರ್ತವ್ಯದಿಂದ ಮರೆಯಾಗಿತ್ತು. ಅಲ್ಲ, ನಾನೇ ಅದಕ್ಕೆ ರಜೆ ನೀಡಿ ಧೂಳುಗಳಿಗೆ ವಿಶ್ರಾಂತಿಯ ನೆಲೆಯಾಗಿಸಿದ್ದೆ. ತತ್‌ಕ್ಷಣ ನನ್ನ ತಪ್ಪಿಗೆ ನಾನೇ ನನ್ನ ಸೆರಗಿನಿಂದ ಒರೆಸಿದೆ. ಸೆರಗೆಲ್ಲಾ ಧೂಳು. ಅಲ್ಲ, ಸೀರೆಯನ್ನೇ ಬದಲಿಸುಎಂದು ದರ್ಪಣಸುಂದರಿಗೆ ಜ್ಞಾನೋದಯ ಆಯ್ತು. ಕವಾಟಿನಲ್ಲಿನ ಸೀರೆಯ ಅಟ್ಟಿಗೆಯನ್ನು ಅವಲೋಕಿಸಿದೆ. ಯಾವುದನ್ನು ಧರಿಸಲಿ? ಎಂದು ಯೋಚಿಸಿದೆ. ಹೊಸದಾಗಿ ತಂದಿರುವ ರೇಶ್ಮೆ ಸೀರೆ ಸೆಳೆದೆ; ಸುತ್ತಿಕೊಂಡು ನೊಡಿದೆ. ದಪ್ಪವಾಗಿ ಕಂಡೆ; ಅಲ್ಲೇ ಬಿಟ್ಟೆ. ತೆಳ್ಳಗಾದ ಪಾರದರ್ಶಕ ಸೀರೆಯನ್ನು ನಯವಾಗಿ ಧರಿಸಿದೆ. ಧರಿಸುತ್ತಲೇ ಪೀಚಾಗಿ ಕಂಡೆ. ಸೊರಗಿದ ನನ್ನ ಮುಖ ಎದ್ದು ಕಾಣುತ್ತಿತ್ತು. ಯಾವ ಸೀರೆಯೂ ನನ್ನನ್ನು ತೃಪ್ತಿಪಡಿಸಲಿಲ್ಲ. ಇಲ್ಲ, ನನಗಾಗಿ ಸೀರೆಗಿಂತಲೂ ನನ್ನವರಿಗಾಗಿ ಸೀರೆ ಉಡಬೇಕೆಂದು ಯೋಚಿಸಿದೆ.

ಹಾಂ ! ಅಂದು ಮದುವೆಯ ದಿನ ಮದುವಣಗಿತ್ತಿಯಾಗಿ ತಲೆತಗ್ಗಿಸಿ ನಿಂತಾಗ ಓರೆನೋಟದಿಂದ ನನ್ನ ಸೀರೆಯನ್ನು ಮೆಚ್ಚುವಂತೆ ನಟಿಸಿ ಒಳದೃಷ್ಟಿಯಲ್ಲಿ ನನ್ನನ್ನು ಮೆಚ್ಚಿದ್ದರು. ಇಂದೂ ನನ್ನನ್ನು ಮೆಚ್ಚಲು, ಮೆಚ್ಚಿಸಲು ಅದೇ ಧಾರೆಸೀರೆಯನ್ನೇ ಉಡುತ್ತೇನೆ ಎಂದು ತೆಗೆದೆ. ಅದರ ಮೆಲೆ ಕೈಯಾಡಿಸಿದಾಗ ನನ್ನ ಚಿತ್ತದಲ್ಲಿ ಹೊಸ ಹೊಸ ಸಂಭ್ರಮಗಳು. ಹಳೆಯ ಶೃಂಗಾರದ ಬೆಸುಗೆಯೊಂದಿಗೆ ನವವಧುವಿನಂತೆ ಅಲಂಕೃತಳಾಗಿ, ಮೌನಿಯಾಗಿ, ಭಾವನಾಪ್ರಪಂಚದಲ್ಲಿ ಮೋಹಪರವಶಳಾಗಿ, ತ್ರಿಭಂಗಿಯಲ್ಲಿ, ಮುಖದ ಮೇಲೆ ಕಚಗುಳಿ ಇಡುತ್ತಿರುವ ಮುಂಗುರಳನ್ನು ಸವರುತ್ತಾ ನಲಿಯುತ್ತಿದ್ದೆ.

ಉತ್ಸಾಹದಿಂದ ಮಾಡಿಕೊಂಡ ಶೃಂಗಾರಕ್ಕೆ ಎಣೆ ಇಲ್ಲದಾಯ್ತು. ಮುಖದ ಅಲಂಕಾರಕ್ಕಂತೂ ಸ್ಥಳವೇ ಇಲ್ಲದಾಯ್ತು. ಕನ್ನಡಿಯನ್ನು ಒಮ್ಮೆ ನೋಡಿದೆ. ನನ್ನನ್ನು ರಮಿಸುವಾಗಲೆಲ್ಲಾ ನನ್ನ ಪತಿ ನನ್ನನ್ನು ರತಿ ಎನ್ನುತ್ತಿದ್ದ. ಆಗ ನಾನು ನನಗಾದ ಆನಂದವನ್ನು ಪ್ರಕಟಿಸದೆ ಮನದೊಳಗೇ ಅದರ ಆನಂದ ಪಡೆಯುತ್ತಿದ್ದೆ. ನಿಜ ಹೇಳಬೇಕಿದ್ದರೆ ಅಂದು ಅಪೂರ್ಣತೆಯು ನನ್ನನ್ನು ಕಾಡುತ್ತಿತ್ತು. ನನ್ನ ರತಿತನ ನನ್ನಲ್ಲಿ ಪ್ರಕಟವಾಗುವುದರ ಒಳಗೇ ನನ್ನವನು ನನ್ನನ್ನು ತಿನ್ನುತ್ತಿದ್ದ. ಆದರೆ ಇಂದು ಆತ ಹೇಳಿದ ರತಿಯೂ ನನ್ನ ಪಾಲಿಗೆ ಚಿಕ್ಕದು ಎಂದೆನಿಸಿತು. ನನ್ನ ರೂಪ ನನ್ನನ್ನೇ ಮೋಹಿಸುತ್ತಿತ್ತು. ನಿಧಾನವಾಗಿ ಅದರ ಅಂದದ ವೈವಿಧ್ಯಕ್ಕಾಗಿ ಹಲವಾರು ಭಂಗಿಗಳಲ್ಲಿ ನಿಂತೆ. ಕೈಗಳ ವಿನ್ಯಾಸವನ್ನು ಬದಬದಲಿಸಿ ಕಂಡೆ. ಹತ್ತು ಹಲವು ಕ್ರಮಗಳಲ್ಲಿ ನಕ್ಕು ನೋಡಿದೆ. ಕಣ್ಣು ಮಿಟುಕಿಸಿದೆ. ಓರೆ ನೋಟದ ಸೌಂದರ್ಯವನ್ನು ಹೀರತೊಡಗಿದೆ. ಅದೆಷ್ಟು ಹೊತ್ತು ಕನ್ನಡಿಯ ಎದುರು ನಿಂತೆನೋ ತಿಳಿಯದು. ನಾಚಿಕೆ ಬಿಟ್ಟು ಹೇಳಬೇಕೆಂದರೆ ಕನ್ನಡಿಯಲ್ಲಿಯ ರೂಪವನ್ನು ಗಂಡಾಗಿಸಿಕೊಂಡು ನಾನು ಹೆಣ್ಣಾಗುತ್ತಲೇ ಕರಗಿದೆ. ವಾಸ್ತವಕ್ಕೆ ಮರಳಿದಾಗ ಉತ್ಸಾಹದಲ್ಲೂ ಕರಗುತ್ತಲಿದ್ದೆ. ನಲ್ಲನಿಲ್ಲದ ಶೂನ್ಯತೆಯನ್ನು ಅನುಭವಿಸಲಾರದೆ ಹಾಸಿಗೆಯಲ್ಲಿ ಬೋರಲಾಗಿ ಕನ್ನಡಿಯನ್ನೇ ನಿಟ್ಟಿಸುತ್ತಲೇ ಇದ್ದೆ. ಕನ್ನಡಿಯಿಂದ ದೂರ ಸರಿಯುವ ಮನಸ್ಸಿನಿಂದ ನಲ್ಲನ ನೆನಪಿನಲ್ಲಿ ಬಂಧಿತಳಾದೆ.

ಹಾಸಿಗೆಗೆ ಸಿಂಪಡಿಸಿದ ಪನ್ನೀರು, ಅಲಂಕಾರಕ್ಕೆ ಬಳಸಿದ ಪರಿಮಳ ಹೂಗಳು ನನಗೆ ಅಮಲೇರಿಸಿ ಸ್ವಲ್ಪ ಹೊತ್ತು ನಲ್ಲನೊಂದಿಗೆ ಕಳೆದ ಕನಸನ್ನು ಕಂಡೆ. ಆತನಲ್ಲಿ ನನ್ನ ನಿವೇದನೆಗಳನ್ನೆಲ್ಲಾ ತೋಡಿಕೊಂಡೆ. ಹೆಚ್ಚೇಕೆ, ನಿನಗಾಗಿ ಪಟ್ಟ ಅವಸ್ಥೆಗಳನ್ನೆಲ್ಲಾ ಕಂಡು ಈ ಹಾಸಿಗೆ ಆದಿಯಾಗಿ ನಾಚಿದೆ ಎಂದೆ. ಇನ್ನೂ ಏನೇನೋ ನಾನು ನನ್ನೊಳಗೇ ಮಾತನಾಡುತ್ತಲೇ ಇದ್ದೆ.

ಇದ್ದಕ್ಕಿದ್ದಂತೆ ಹೊರಗಡೆಯ ಸದ್ದು. ತತ್‌ಕ್ಷಣ ನನ್ನ ಕಣ್ಣು ಮುಚ್ಚಿದ ಎರಡು ಕೈಗಳು; ಊಹೆ ಮಾಡಿದೆ. ಮುಟ್ಟಿದರೆ ಮುನಿ ಎಂಬ ಮುಳ್ಳುಗಿಡದಂತೆ ಮುದುಡಿ ಮಿಸುಕಾಡಿದೆ. ಪ್ರತಿಕ್ರಿಯೆ ಇರಲಿಲ್ಲ. ಕೈ ಮುಟ್ಟಿದೆ. ಗಡುಸಾಗಿಯೇ ಇದೆ. ಆದರೂ ಸ್ಪರ್ಶದ ರೋಮಾಂಚನ ಇಲ್ಲ. ಯಾಕೋ ಅನುಮಾನಿಸಿದೆ. ನಿಧಾನವಾಗಿ ಮೀಸೆಯನ್ನು ತಿಮರಿಬಿಡುವೆ ಎಂದು ಮುಖದ ಮೇಲೆ ಕೈಯಾಡಿಸಿದೆ. ಮೀಸೆ ಇಲ್ಲ. ರಪ್ಪನೆ ದೂರಸರಿದು ನೋಡಿದರೆ ನನ್ನ ಆತ್ಮೀಯ ಗೆಳತಿ. ಪಕ್ಕದಲ್ಲಿಯ ಆಕೆ ನನ್ನ ಸಡಗರದ ಸೂಕ್ಷ್ಮ ಅರಿತು ನನ್ನನ್ನು ರೇಗಿಸಲು ಬಂದವಳು. ನನಗೋ ಕೋಪ-ತಾಪ-ಬೇಸರ-ಕೃತಕನಗು ಎಲ್ಲಾ ಭಾವಗಳು ನನ್ನನ್ನು ತಿನ್ನುತ್ತಿತ್ತು. ಅಂತೂ ಆಕೆಯನ್ನು ಸಾಗಹಾಕಿದೆ. ನನ್ನ ಶೃಂಗಾರದ ಸಿದ್ಧತೆಯಲ್ಲಿ ನನ್ನವನಿಗಾಗಿ ಮುಡಿಪಾಗಿಟ್ಟ ನನ್ನ ಭಾವನೆಯ ತೀವ್ರತೆಗೆ ಭಂಗ ಆಯ್ತು. ಏನೋ ಮೈಲಿಗೆ ಆದವರಂತೆ ಮುಖ ಬಿಳಿಚಿತು. ನನ್ನ ಗೆಳತಿಗೆ ಇದೆಲ್ಲಾ ಹೇಗೆ ಅರ್ಥವಾದೀತು? ಹಂತಹಂತವಾಗಿ ನನ್ನ ತೀವ್ರತೆಯೂ ಕಡಿಮೆ ಆಗಿ ದೇವರ ಮುಡಿ ಸೇರುವ ಹೂವು ಪೂಜಾರಿ ಬರದೆ ಪೂಜೆಯೂ ಇಲ್ಲದೆ ಹಾಗೆಯೇ ಒಣಗಿ ಹೋಗುವಂತೆ ಒಣಗಲಾರಂಭಿಸಿದೆ…

 

———————

ಮೇಘಮೇದಿನಿ

ದಿವಾಕರ ಹೆಗಡೆ, ಧಾರವಾಡ

 

ಹೇಮಂತನ ಶ್ರೀಮಂತಿಕೆ ಕಾಂತೆಯ ಮನ ಕಾಡಿದೆ |

ಕಾಮರೂಪ ಮೇಘಮಾರ ಬರುವಾಸೆಯು ಮೂಡಿದೆ |

ತೆನೆ ವಕ್ಷಕೆ ತೊನೆದಾಡುವ ಮುಂಭಾರದ ಬೆಡಗೆ |

ಗೊನೆಬಾಳೆಯ ನಿಡುಜಘನದ ಹಿಂಭಾರದ ಹೊರಳೆ ||

ಹನಿ ಮಂಜಿನ ಶೀತ ಸೋನೆ ತಂಗಾಳಿಯ ಉಡುಗೆ |

ಕನಸಾಯಿತು ಕಾಯದಿಚ್ಛೆ ಬೆಳುದಿಂಗಳ ತೊಡುಗೆ ||

ಶಿಶಿರೋದಯದಲಿ ಹೊಸಕನಸಿನ ಹದ

ವಸುಮತಿ ತಾನೆಸೆದಳು ಮುದದಿ |

ವಸನಾಪ್ಯಾಯನ ಕುಸುರಿನ ರೇಶಿಮೆ

ರಸೆ ರಾಣಿಯು ತಾ ಸಮ್ಮುದದಿ ||

ಬೆಸೆವಳು ಮಲ್ಲಿಗೆಯನು ಹೊಂದಿಸುವಳು ಜಾಜಿಯ |

ಸಸಿವಳು ಜಡೆಜಡಕನು ನೊಸಲೆಡೆಯಲಿ ಕುಂಕುಮ |

ತೊಡುವಳು ಆಭರಣವ ವೈಯ್ಯಾರದಿ ನಡೆವಳು |

ತಡೆವಳು, ದರ್ಪಣವನು ಹಿಡಿದಲೆವಳು, ನಗುವಳು |

ಸುಡುವಳು ವಿರಹದುರಿಗೆ, ತಾನಿಟ್ಟುಸಿರಿಡುವಳು |

ಬಿಡುವಳು ಅನ್ನವ, ಪಿರಿದಾತನ ನೆನಪಿಸುವಳು |

 

Leave a Reply

*

code